೦೨ ಎರಡನೆಯ ಅಧ್ಯಾಯ

ಭಾಗಸೂಚನಾ

ನಾರದ ಸನತ್ಕುಮಾರ ಸಂವಾದ, ಸುದಾಸ ಅಥವಾ ಸೋಮದತ್ತ ಬ್ರಾಹ್ಮಣನಿಗೆ ರಾಕ್ಷಸತ್ವ ಪ್ರಾಪ್ತಿ ಹಾಗೂ ರಾಮಾಯಣ ಕಥಾ ಶ್ರವಣದಿಂದ ಅವನ ಉದ್ಧಾರ

1
ಮೂಲಮ್ (ವಾಚನಮ್)

ಋಷಯ ಊಚುಃ

ಮೂಲಮ್

ಕಥಂ ಸನತ್ಕುಮಾರಾಯ ದೇವರ್ಷಿರ್ನಾರದೋ ಮುನಿಃ ।
ಪ್ರೋಕ್ತವಾನ್ ಸಕಲಾನ್ ಧರ್ಮಾನ್ ಕಥಂ ತೌ ಮಿಲಿತಾವುಭೌ ॥

2
ಮೂಲಮ್

ಕಸ್ಮಿನ್ ಕ್ಷೇತ್ರೇ ಸ್ಥಿತೌ ತಾತ ತಾವುಭೌ ಬ್ರಹ್ಮವಾದಿನೌ ।
ಯದುಕ್ತಂ ನಾರದೇನಾಸ್ಮೈ ತತ್ ತ್ವಂ ಬ್ರೂಹಿ ಮಹಾಮುನೇ ॥

ಅನುವಾದ

ಋಷಿಗಳು ಕೇಳಿದರು - ಮಹಾಮುನಿಗಳೇ! ದೇವರ್ಷಿ ನಾರದ ಮುನಿಗಳು ಸನತ್ಕುಮಾರರಿಗೆ ರಾಮಾಯಣ ಸಂಬಂಧವಾದ ಎಲ್ಲ ಧರ್ಮಗಳನ್ನು ಹೇಗೆ ವರ್ಣಿಸಿದ್ದರು? ಅವರಿಬ್ಬರೂ ಯಾವ ಕ್ಷೇತ್ರದಲ್ಲಿ ಭೆಟ್ಟಿಯಾಗಿದ್ದರು ನಾರದರು ಅವರಲ್ಲಿ ಹೇಳಿದುದೆಲ್ಲವನ್ನು ನೀವು ನಮಗೆ ತಿಳಿಸಿರಿ.॥1-2॥

3
ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಸನಕಾದ್ಯಾ ಮಹಾತ್ಮಾನೋ ಬ್ರಹ್ಮಣಸ್ತನಯಾಃ ಸ್ಮೃತಾಃ ।
ನಿರ್ಮಮಾ ನಿರಹಂಕಾರಾಃ ಸರ್ವೇ ತೇ ಹ್ಯೂರ್ಧ್ವರೇತಸಃ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ - ಮುನಿವರರೇ! ಸನಕಾದಿ ಮಹಾತ್ಮರು ಭಗವಾನ್ ಬ್ರಹ್ಮದೇವರ ಪುತ್ರರೆಂದು ತಿಳಿಯಲಾಗಿದೆ. ಅವರಲ್ಲಿ ಮಮತೆ, ಅಹಂಕಾರವಾದರೋ ಕೊಂಚವೂ ಇರಲಿಲ್ಲ. ಅವರೆಲ್ಲರೂ ಊರ್ಧ್ವರೇತಾ (ನೈಷ್ಠಿಕ ಬ್ರಹ್ಮಚಾರಿ) ಆಗಿದ್ದರು.॥3॥

4
ಮೂಲಮ್

ತೇಷಾಂ ನಾಮಾನಿ ವಕ್ಷ್ಯಮಿ ಸನಕಶ್ಚ ಸನಂದನಃ ।
ಸನತ್ಕುಮಾರಶ್ಚ ತಥಾ ಸನಾತನ ಇತಿ ಸ್ಮೃತಃ ॥

ಅನುವಾದ

ನಾನು ಅವರ ಹೆಸರನ್ನು ಹೇಳುವೆನು. ಸನಕ, ಸನಂದನ, ಸನತ್ಕುಮಾರ ಮತ್ತು ಸನಾತನ- ಇವರನ್ನು ಸನತ್ಕುಮಾರರೆಂದು ತಿಳಿಯಲಾಗಿದೆ.॥4॥

5
ಮೂಲಮ್

ವಿಷ್ಣುಭಕ್ತಾ ಮಹಾತ್ಮಾನೋ ಬ್ರಹ್ಮಧ್ಯಾನಪರಾಯಣಾಃ ।
ಸಹಸ್ರಸೂರ್ಯಸಂಕಾಶಾಃ ಸತ್ಯವಂತೋ ಮುಮುಕ್ಷವಃ ॥

ಅನುವಾದ

ಅವರು ಭಗವಾನ್ ವಿಷ್ಣುವಿನ ಭಕ್ತರೂ, ಮಹಾತ್ಮರೂ ಆಗಿದ್ದಾರೆ. ಸದಾ ಬ್ರಹ್ಮ ಚಿಂತನೆಯಲ್ಲೇ ತೊಡಗಿರುತ್ತಾರೆ. ಸತ್ಯವಾದಿಗಳಾಗಿದ್ದು, ಸಾವಿರಾರು ಸೂರ್ಯರಂತೆ ತೇಜಸ್ವಿಗಳೂ, ಮೋಕ್ಷಾಭಿಲಾಷಿಗಳೂ ಆಗಿರುವರು.॥5॥

6
ಮೂಲಮ್

ಏಕದಾ ಬ್ರಹ್ಮಣಃ ಪುತ್ರಾಃ ಸನಕಾದ್ಯಾ ಮಹೌಜಸಃ ।
ಮೇರುಶೃಂಗೇ ಸಮಾಜಗ್ಮುರ್ವೀಕ್ಷಿತುಂ ಬ್ರಹ್ಮಣಃ ಸಭಾಮ್ ॥

ಅನುವಾದ

ಒಮ್ಮೆ ಆ ಮಹಾತೇಜಸ್ವಿ ಬ್ರಹ್ಮಪುತ್ರರಾದ ಸನಕಾದಿಗಳು ಬ್ರಹ್ಮದೇವರ ಸಭೆಯನ್ನು ನೋಡಲು ಮೇರು ಪರ್ವತ ಶಿಖರಕ್ಕೆ ಹೋದರು.॥6॥

7
ಮೂಲಮ್

ತತ್ರ ಗಂಗಾಂ ಮಹಾಪುಣ್ಯಾಂ ವಿಷ್ಣುಪಾದೋದ್ಭವಾಂ ನದೀಮ್ ।
ನಿರೀಕ್ಷ್ಯ ಸ್ನಾತುಮುದ್ಯುಕ್ತಾಃ ಸೀತಾಖ್ಯಾಂ ಪ್ರಥಿತೌಜಸಃ ॥

ಅನುವಾದ

ಅಲ್ಲಿ ಭಗವಾನ್ ವಿಷ್ಣುವಿನ ಚರಣಗಳಿಂದ ಪ್ರಕಟಗೊಂಡ ಪರಮ ಪುಣ್ಯಮಯ ಗಂಗೆಯು ನದಿಯಾಗಿ ಹರಿಯುತ್ತಿದ್ದಳು. ಆಕೆಯನ್ನು ಸೀತಾ ಎಂದೂ ಹೇಳುತ್ತಾರೆ. ಅದನ್ನು ದರ್ಶಿಸಿ ಆ ತೇಜಸ್ವೀ ಮಹಾತ್ಮರು ಅದರಲ್ಲಿ ಸ್ನಾನ ಮಾಡಲು ತೊಡಗಿದರು.॥7॥

8
ಮೂಲಮ್

ಏತಸ್ಮಿನ್ನಂತರೇ ವಿಪ್ರಾ ದೇವರ್ಷಿರ್ನಾರದೋ ಮುನಿಃ ।
ಆಜಗಾಮೋಚ್ಚರನ್ ನಾಮ ಹರೇರ್ನಾರಾಯಣಾದಿಕಮ್ ॥

ಅನುವಾದ

ಬ್ರಾಹ್ಮಣರೇ! ಅಷ್ಟರಲ್ಲಿ ದೇವರ್ಷಿ ನಾರದಮುನಿಗಳು ಭಗವಂತನ ನಾರಾಯಣಾದಿ ನಾಮಗಳನ್ನು ಹಾಡುತ್ತಾ ಅಲ್ಲಿಗೆ ಬಂದು ತಲುಪಿದರು.॥8॥

9
ಮೂಲಮ್

ನಾರಾಯಣಾಚ್ಯುತಾನಂತ ವಾಸುದೇವ ಜನಾರ್ದನ ।
ಯಜ್ಞೇಶ ಯಜ್ಞಪುರುಷ ರಾಮ ವಿಷ್ಣೋ ನಮೋಽಸ್ತು ತೇ ॥

10
ಮೂಲಮ್

ಇತ್ಯುಚ್ಚರನ್ ಹರೇರ್ನಾಮ ಪಾವಯನ್ನಖಿಲಂ ಜಗತ್ ।
ಆಜಗಾಮ ಸ್ತುವನ್ ಗಂಗಾಂ ಮುನಿರ್ಲೋಕೈಕಪಾವನೀಮ್ ॥

ಅನುವಾದ

ಅವರು ನಾರಾಯಣಾ! ಅಚ್ಯುತಾ! ಅನಂತಾ! ವಾಸುದೇವ! ಜನಾರ್ದನ! ಯಜ್ಞೇಶ! ಯಜ್ಞ ಪುರುಷ! ರಾಮ! ವಿಷ್ಣೋ! ನಿನಗೆ ನಮಸ್ಕಾರಗಳು. ಹೀಗೆ ಭಗವನ್ನಾಮಗಳನ್ನು ಉಚ್ಚರಿಸುತ್ತಾ, ಸಮಸ್ತ ಜಗತ್ತನ್ನು ಪವಿತ್ರಗೊಳಿಸುವ, ಏಕಮಾತ್ರ ಲೋಕಪಾವನೀ ಗಂಗೆಯನ್ನು ಸ್ತುತಿಸುತ್ತಾ ಅಲ್ಲಿಗೆ ಬಂದರು.॥9-10॥

11
ಮೂಲಮ್

ಅಥಾಯಾಂತಂ ಸಮುದ್ವೀಕ್ಷ್ಯ ಸನಕಾದ್ಯಾ ಮಹೌಜಸಃ ।
ಯಥಾರ್ಹಮರ್ಹಣಂ ಚಕ್ರುರ್ವವಂದೇ ಸೋಽಪಿ ತಾನ್ ಮುನೀನ್ ॥

ಅನುವಾದ

ಬಂದಿರುವ ಅವರನ್ನು ನೋಡಿ ಮಹಾತೇಜಸ್ವೀ ಸನಕಾದಿ ಮುನಿಗಳು ಅವರನ್ನು ಯಥೋಚಿತವಾಗಿ ಪೂಜಿಸಿದರು ಹಾಗೂ ನಾರದರೂ ಕೂಡ ಆ ಮುನಿಗಳಿಗೆ ತಲೆಬಾಗಿದರು.॥11॥

12
ಮೂಲಮ್

ಅಥ ತತ್ರ ಸಭಾಮಧ್ಯೇ ನಾರಾಯಣಪರಾಯಣಮ್ ।
ಸನತ್ಕುಮಾರಃ ಪ್ರೋವಾಚ ನಾರದಂ ಮುನಿಪುಂಗವಮ್ ॥

ಅನುವಾದ

ಅನಂತರ ಅಲ್ಲಿ ಮುನಿಗಳ ಸಭೆಯಲ್ಲಿ ಸನತ್ಕುಮಾರರು ಭಗವಾನ್ ನಾರಾಯಣನ ಪರಮಭಕ್ತ ಮುನಿವರ ನಾರದರಲ್ಲಿ ಈ ಪ್ರಕಾರ ಕೇಳಿದರು. ॥12॥

13
ಮೂಲಮ್ (ವಾಚನಮ್)

ಸನತ್ಕುಮಾರ ಉವಾಚ

ಮೂಲಮ್

ಸರ್ವಜ್ಞೋಽಸಿ ಮಹಾಪ್ರಾಜ್ಞ ಮುನೀಶಾನಾಂ ಚ ನಾರದ ।
ಹರಿಭಕ್ತಿಪರೋ ಯಸ್ಮಾತ್ತ್ವತ್ತೋ ನಾಸ್ತ್ಯಪರೋಽಧಿಕಃ ॥

ಅನುವಾದ

ಸನತ್ಕುಮಾರರು ಹೇಳಿದರು - ಮಹಾಪ್ರಾಜ್ಞ ನಾರದರೇ! ತಾವು ಸಮಸ್ತ ಮುನೀವರರಲ್ಲಿ ಸರ್ವಜ್ಞರಾಗಿರುವಿರಿ. ಸದಾ ಶ್ರೀಹರಿಯ ಭಕ್ತಿಯಲ್ಲಿ ತತ್ಪರರಾಗಿರುವಿರಿ. ಆದ್ದರಿಂದ ನಿಮ್ಮಿಂದ ಮಿಗಿಲಾದವರು ಯಾರೂ ಇಲ್ಲ.॥13॥

(ಶ್ಲೋಕ - 14½)

ಮೂಲಮ್

ಯೇನೇದಮಖಿಲಂ ಜಾತಂ ಜಗತ್ ಸ್ಥಾವರಜಂಗಮಮ್ ।
ಗಂಗಾ ಪಾದೋದ್ಭವಾ ಯಸ್ಯ ಕಥಂ ಸ ಜ್ಞಾಯತೇ ಹರಿಃ ॥
ಅನುಗ್ರಾಹ್ಯೋಽಸ್ಮಿ ಯದಿ ತೇ ತತ್ತ್ವತೋ ವಕ್ತುಮರ್ಹಸಿ ।

ಅನುವಾದ

ಯಾರಿಂದ ಸಮಸ್ತ ಚರಾಚರ ಜಗತ್ತಿನ ಉತ್ಪತ್ತಿ ಆಗಿದೆಯೋ, ಈ ಗಂಗೆಯು ಯಾರ ಚರಣಗಳಿಂದ ಪ್ರಕಟಗೊಂಡಿರುವಳೋ, ಆ ಹರಿಯ ಸ್ವರೂಪದ ಜ್ಞಾನ ಹೇಗಾಗುತ್ತದೆ? ಎಂದು ನಾವು ಕೇಳುತ್ತಿದ್ದೇವೆ. ನಮ್ಮ ಮೇಲೆ ನಿಮಗೆ ಕೃಪೆ ಇದ್ದರೆ ನಮ್ಮ ಪ್ರಶ್ನೆಯನ್ನು ಯಥಾರ್ಥವಾಗಿ ವಿವೇಚಿಸಿರಿ.॥14½॥

(ಶ್ಲೋಕ - 15½)

ಮೂಲಮ್ (ವಾಚನಮ್)

ನಾರದ ಉವಾಚ

ಮೂಲಮ್

ನಮಃ ಪರಾಯ ದೇವಾಯ ಪರಾತ್ಪರತರಾಯ ಚ ॥
ಪರಾತ್ಪರನಿವಾಸಾಯ ಸಗುಣಾಯಾಗುಣಾಯ ಚ ।

ಅನುವಾದ

ನಾರದರು ಹೇಳಿದರು - ಪರಾತ್ಪರ ಪರಮದೇವ ಶ್ರೀರಾಮನಿಗೆ ನಮಸ್ಕಾರವು. ಯಾರ ನಿವಾಸ ಸ್ಥಾನವು (ಪರಮ ಧಾಮ) ಅತಿ ಉತ್ಕೃಷ್ಟವಾಗಿದೆಯೋ ಹಾಗೂ ಸಗುಣ ನಿರ್ಗುಣರೂಪನೋ ಆ ರಾಮನಿಗೆ ನನ್ನ ನಮಸ್ಕಾರವು.॥15½॥

(ಶ್ಲೋಕ - 16½)

ಮೂಲಮ್

ಜ್ಞಾನಾಜ್ಞಾನಸ್ವರೂಪಾಯ ಧರ್ಮಾಧರ್ಮಸ್ವರೂಪಿಣೇ ॥
ವಿದ್ಯಾವಿದ್ಯಾಸ್ವರೂಪಾಯ ಸ್ವಸ್ವರೂಪಾಯ ತೇ ನಮಃ ।

ಅನುವಾದ

ಜ್ಞಾನ-ಅಜ್ಞಾನ, ಧರ್ಮ-ಅಧರ್ಮ, ವಿದ್ಯೆ ಮತ್ತು ಅವಿದ್ಯೆ ಇವೆಲ್ಲವೂ ತನ್ನ ಸ್ವರೂಪವಾಗಿದೆಯೋ ಹಾಗೂ ಎಲ್ಲರ ಆತ್ಮರೂಪನಾಗಿರುವನೋ, ಆ ಪರಮೇಶ್ವರನಾದ ನಿನಗೆ ನಮಸ್ಕಾರವು.॥16½॥

(ಶ್ಲೋಕ - 17½)

ಮೂಲಮ್

ಯೋ ದೈತ್ಯಹಂತಾ ನರಕಾಂತಕಶ್ಚ ಭುಜಾಗ್ರಮಾತ್ರೇಣ ಚ ಧರ್ಮಗೋಪ್ತಾ ॥
ಭೂಭಾರಸಂಘಾತವಿನೋದಕಾಮಂನಮಾಮಿ ದೇವಂ ರಘುವಂಶದೀಪಮ್ ।

ಅನುವಾದ

ಯಾರು ದೈತ್ಯರ ವಿನಾಶ ಮತ್ತು ನರಕದ ಅಂತ್ಯಗೊಳಿಸುವನೋ, ತನ್ನ ಕೈಸಂಕೇತ ಮಾತ್ರದಿಂದ ಅಥವಾ ತನ್ನ ಭುಜಗಳ ಬಲದಿಂದ ಧರ್ಮವನ್ನು ರಕ್ಷಿಸುವನೋ, ಪೃಥ್ವಿಯ ಭಾರವನ್ನು ವಿನಾಶಗೊಳಿಸುವುದು ಮನೋರಂಜನೆ ಮಾತ್ರವಾಗಿದೆಯೋ, ಆ ಮನೋರಂಜನೆಯ ಅಭಿಲಾಷೆ ಸದಾ ಇರಿಸುತ್ತಾನೋ, ಆ ರಘುಕುಲದೀಪ ಶ್ರೀರಾಮನಿಗೆ ನಾನು ನಮಸ್ಕರಿಸುತ್ತೇನೆ.॥17½॥

(ಶ್ಲೋಕ - 18½)

ಮೂಲಮ್

ಆವಿರ್ಭೂತಶ್ಚತುರ್ದ್ಧಾ ಯಃ ಕಪಿಭಿಃ ಪರಿವಾರಿತಃ ॥
ಹತವಾನ್ ರಾಕ್ಷಸಾನೀಕಂ ರಾಮಂ ದಾಶರಥಿಂ ಭಜೇ ।

ಅನುವಾದ

ಒಬ್ಬನೇ ಆಗಿದ್ದರೂ ನಾಲ್ಕು ಸ್ವರೂಪಗಳಲ್ಲಿ ಅವತರಿಸಿರುವನೋ, ವಾನರರೊಂದಿಗೆ ರಾಕ್ಷಸ ಸೇನೆಯನ್ನು ಸಂಹಾರ ಮಾಡಿರುವನೋ, ಆ ದಶರಥನಂದನ ಶ್ರೀರಾಮಚಂದ್ರನನ್ನು ನಾನು ಭಜಿಸುತ್ತೇನೆ. ॥18½॥

(ಶ್ಲೋಕ - 19½)

ಮೂಲಮ್

ಏವಮಾದೀನ್ಯನೇಕಾನಿ ಚರಿತಾನಿ ಮಹಾತ್ಮನಃ ॥
ತೇಷಾಂ ನಾಮಾನಿ ಸಂಖ್ಯಾತುಂ ಶಕ್ಯಂತೇ ನಾಬ್ದಕೋಟಿಭಿಃ ।

ಅನುವಾದ

ಭಗವಾನ್ ಶ್ರೀರಾಮನ ಇಂತಹ ಅನೇಕ ಚರಿತ್ರೆಗಳಿವೆ. ಅವುಗಳನ್ನು ಕೋಟ್ಯಾವಧಿ ವರ್ಷಗಳಿಂದಲೂ ಎಣಿಸಲಾಗಲಿಲ್ಲ.॥19½॥

(ಶ್ಲೋಕ - 20½)

ಮೂಲಮ್

ಮಹಿಮಾನಂ ತು ಯನ್ನಾಮ್ನಃ ಪಾರಂ ಗಂತುಂ ನ ಶಕ್ಯತೇ ॥
ಮನುಭಿಶ್ಚ ಮುನೀಂದ್ರೈಶ್ಚ ಕಥಂ ತಂ ಕ್ಷುಲ್ಲಕೋ ಭಜೇತ್ ।

ಅನುವಾದ

ಶ್ರೀರಾಮನ ನಾಮದ ಮಹಿಮೆಯನ್ನು ಮನು - ಮುನೀಶ್ವರರೂ ತಿಳಿಯದೆ ಹೋದರು. ಅಲ್ಲಿ ನನ್ನಂತಹ ಕ್ಷುದ್ರಜೀವಿಯು ಹೇಗೆ ತಿಳಿಯಬಲ್ಲದು?॥20½॥

(ಶ್ಲೋಕ - 21½)

ಮೂಲಮ್

ಯನ್ನಾಮ್ನಃ ಸ್ಮರಣೇನಾಪಿ ಮಹಾಪಾತಕಿನೋಽಪಿ ಯೇ ॥
ಪಾವನತ್ವಂ ಪ್ರಪದ್ಯಂತೇ ಕಥಂ ಸ್ತೋಷ್ಯಾಮಿ ಕ್ಷುಲ್ಲೀಃ ।

ಅನುವಾದ

ಅವನ ನಾಮಸ್ಮರಣ ಮಾತ್ರದಿಂದ ದೊಡ್ಡ - ದೊಡ್ಡ ಪಾಪಿಗಳೂ ಕೂಡ ಪಾವನರಾಗುತ್ತಾರೆ. ಆ ಪರಮಾತ್ಮನನ್ನು ನನ್ನಂತಹ ತುಚ್ಛಬುದ್ಧಿಯುಳ್ಳ ಜೀವಿ ಹೇಗೆ ಸ್ತುತಿಸಬಲ್ಲನು?॥21½॥

(ಶ್ಲೋಕ - 22½)

ಮೂಲಮ್

ರಾಮಾಯಣಪರಾ ಯೇ ತು ಘೋರೇ ಕಲಿಯುಗೇ ದ್ವಿಜಾಃ ॥
ತ ಏವ ಕೃತಕೃತ್ಯಾಶ್ಚ ತೇಷಾಂ ನಿತ್ಯಂ ನಮೋಽಸ್ತು ತೇ ।

ಅನುವಾದ

ಘೋರ ಕಲಿಯುಗದಲ್ಲಿ ರಾಮಾಯಣ ಕಥೆಯನ್ನು ಆಶ್ರಯಿಸುವ ದ್ವಿಜರೇ ಕೃತಕೃತ್ಯರಾಗಿದ್ದಾರೆ. ಅಂತಹವರಿಗೆ ನೀವು ಸದಾ ನಮಸ್ಕಾರಮಾಡಬೇಕು.॥22½॥

(ಶ್ಲೋಕ - 23½)

ಮೂಲಮ್

ಊರ್ಜೇ ಮಾಸಿ ಸಿತೇ ಪಕ್ಷೇ ಚೈತ್ರೇ ಮಾಘೇ ತಥೈವ ಚ ॥
ನವಾಹ್ನಾ ಕಿಲ ಶ್ರೇತವ್ಯಂ ರಾಮಾಯಣಕಥಾಮೃತಮ್ ।

ಅನುವಾದ

ಸನತ್ಕುಮಾರರೇ! ಭಗವಂತನ ಮಹಿಮೆಯನ್ನು ತಿಳಿಯಲಿಕ್ಕಾಗಿ ಕಾರ್ತಿಕ, ಮಾಘ ಮತ್ತು ಚೈತ್ರ ಶುಕ್ಲಪಕ್ಷದಲ್ಲಿ ರಾಮಾಯಣದ ಅಮೃತಮಯ ಕಥೆಯನ್ನು ಒಂಭತ್ತು ದಿನ ಶ್ರವಣಿಸಬೇಕು.॥23½॥

(ಶ್ಲೋಕ - 24½)

ಮೂಲಮ್

ಗೌತಮಶಾಪತಃ ಪ್ರಾಪ್ತಃ ಸುದಾಸೋ ರಾಕ್ಷಸೀಂ ತನುಮ್ ॥
ರಾಮಾಯಣಪ್ರಭಾವೇಣ ವಿಮುಕ್ತಿಂ ಪ್ರಾಪ್ತವಾನಸೌ ।

ಅನುವಾದ

ಸುದಾಸ ಬ್ರಾಹ್ಮಣನು ಗೌತಮರ ಶಾಪದಿಂದ ರಾಕ್ಷಸ ಶರೀರವನ್ನು ಪಡೆದಿದ್ದನು. ಆದರೆ ರಾಮಾಯಣದ ಪ್ರಭಾವದಿಂದಲೇ ಅವನು ಆ ರೂಪದಿಂದ ಮುಕ್ತನಾಗಿದ್ದನು.॥24½॥

25
ಮೂಲಮ್ (ವಾಚನಮ್)

ಸನತ್ಕುಮಾರ ಉವಾಚ

ಮೂಲಮ್

ರಾಮಾಯಣಂ ಕೇನ ಪ್ರೋಕ್ತಂ ಸರ್ವಧರ್ಮಲಪ್ರದಮ್ ॥

26
ಮೂಲಮ್

ಪ್ರಾಪ್ತಃ ಕಥಂ ಗೌತಮೇನ ಸೌದಾಸೋ ಮುನಿಸತ್ತಮ ।
ರಾಮಾಯಣಪ್ರಭಾವೇಣ ಕಥಂ ಭೂಯೋ ವಿಮೋಕ್ಷಿತಃ ॥

ಅನುವಾದ

ಸನತ್ಕುಮಾರರು ಕೇಳಿದರು - ಮುನಿಶ್ರೇಷ್ಠರೇ! ಸಮಸ್ತ ಧರ್ಮಗಳ ಫಲವನ್ನು ಕೊಡುವ ರಾಮಾಯಣ ಕಥೆಯನ್ನು ಯಾರು ವರ್ಣಿಸಿದರು? ಸೌದಾಸನಿಗೆ ಗೌತಮರಿಂದ ಹೇಗೆ ಶಾಪ ಉಂಟಾಯಿತು? ಮತ್ತೆ ಅವನು ರಾಮಾಯಣದ ಪ್ರಭಾವದಿಂದ ಹೇಗೆ ಶಾಪಮುಕ್ತನಾದನು?॥25-26॥

(ಶ್ಲೋಕ - 27½)

ಮೂಲಮ್

ಅನುಗ್ರಾಹ್ಯೋಽಸ್ಮಿ ಯದಿ ತೇ ತತ್ತ್ವತೋ ವಕ್ತುಮರ್ಹಸಿ ।
ಸರ್ವಮೇತದಶೇಷೇಣ ಮುನೇ ನೋ ವಕ್ತುಮರ್ಹಸಿ ॥
ಶಣ್ವತಾಂ ವದತಾಂ ಚೈವ ಕಥಾ ಪಾಪವಿನಾಶಿನೀ ।

ಅನುವಾದ

ಮುನಿಯೇ! ನಿಮಗೆ ನಮ್ಮ ಮೇಲೆ ಅನುಗ್ರಹವಿದ್ದರೆ ಎಲ್ಲವನ್ನೂ ಸರಿಯಾಗಿ ತಿಳಿಸಿರಿ. ಇವೆಲ್ಲ ಮಾತುಗಳನ್ನು ನಮಗೆ ತಿಳಿಸಿ ಹೇಳಿ, ಏಕೆಂದರೆ ಭಗವಂತನ ಕಥೆಯು ಹೇಳುವವ ಮತ್ತು ಕೇಳುವವರಿಬ್ಬರ ಪಾಪಗಳನ್ನು ನಾಶಮಾಡುವಂತಹುದಾಗಿದೆ.॥27½॥

(ಶ್ಲೋಕ - 28½)

ಮೂಲಮ್ (ವಾಚನಮ್)

ನಾರದ ಉವಾಚ

ಮೂಲಮ್

ಶೃಣು ರಾಮಾಯಣಂ ವಿಪ್ರ ಯದ್ ವಾಲ್ಮೀಕಿಮುಖೋದ್ಗತಮ್ ॥
ನವಾಹ್ನಾ ಖಲು ಶ್ರೋತವ್ಯಂ ರಾಮಾಯಣಕಥಾಮೃತಮ್ ।

ಅನುವಾದ

ನಾರದರು ಹೇಳಿದರು - ಬ್ರಹ್ಮವಿತ್ತಮರೇ! ರಾಮಾಯಣದ ಪ್ರಾದುರ್ಭಾವ ಮಹರ್ಷಿ ವಾಲ್ಮೀಕಿಯವರ ಮುಖದಿಂದ ಆಯಿತು. ನೀವು ಅದನ್ನೇ ಶ್ರವಣಿಸಿರಿ. ರಾಮಾಯಣದ ಅಮೃತಮಯ ಕಥೆಯನ್ನು ಒಂಭತ್ತು ದಿನಗಳಲ್ಲಿ ಶ್ರವಣಿಸಬೇಕು.॥28½॥

(ಶ್ಲೋಕ - 29½)

ಮೂಲಮ್

ಆಸ್ತೇ ಕೃತಯುಗೇ ವಿಪ್ರೋ ಧರ್ಮಕರ್ಮವಿಶಾರದಃ ॥
ಸೋಮದತ್ತ ಇತಿ ಖ್ಯಾತೋ ನಾಮ್ನಾ ಧರ್ಮಪರಾಯಣಃ ।

ಅನುವಾದ

ಕೃತಯುಗದಲ್ಲಿ ಸೋಮದತ್ತನೆಂಬ ಒಬ್ಬ ಬ್ರಾಹ್ಮಣನಿದ್ದನು. ಅವನಿಗೆ ಧರ್ಮ-ಕರ್ಮದ ವಿಶೇಷ ಜ್ಞಾನವಿತ್ತು. ಅವನು ಸದಾಕಾಲ ಧರ್ಮಪಾಲನೆಯಲ್ಲಿ ತತ್ಪರನಾಗಿದ್ದನು.॥29½॥

30
ಮೂಲಮ್

ವಿಪ್ರಸ್ತು ಗೌತಮಾಖ್ಯೇನ ಮುನಿನಾ ಬ್ರಹ್ಮವಾದಿನಾ ॥
ಶ್ರಾವಿತಃ ಸರ್ವಧರ್ಮಾಂಶ್ಚ ಗಂಗಾತೀರೇ ಮನೋರಮೇ ।

(ಶ್ಲೋಕ - 31½)

ಮೂಲಮ್

ಪುರಾಣಶಾಸ್ತ್ರಕಥನೈಸ್ತೇನಾಸೌ ಬೋಧಿತೋಽಪಿ ಚ ॥
ಶ್ರುತವಾನ್ ಸರ್ವಧರ್ಮಾನ್ ವೈ ತೇನೋಕ್ತಾನಖಿಲಾನಪಿ ।

ಅನುವಾದ

(ಆ ಬ್ರಾಹ್ಮಣನು ಸೌದಾಸ ಎಂದೂ ಪ್ರಸಿದ್ಧನಾಗಿದ್ದನು) ಆ ಬ್ರಾಹ್ಮಣನು ಬ್ರಹ್ಮವಾದೀ ಗೌತಮ ಮುನಿಗಳಿಂದ ಮನೋಹರ ಗಂಗಾತೀರದಲ್ಲಿ ಸಮಸ್ತ ಧರ್ಮಗಳ ಉಪದೇಶ ಕೇಳಿದ್ದನು. ಗೌತಮರು ಅವನಿಗೆ ಪುರಾಣಗಳ, ಶಾಸ್ತ್ರಗಳ ಮೂಲಕ ತತ್ವದ ಜ್ಞಾನ ಮಾಡಿಸಿದ್ದರು. ಸೌದಾಸನು ಗೌತಮರು ಹೇಳಿದ ಎಲ್ಲ ಧರ್ಮಗಳನ್ನು ಶ್ರವಣಿಸಿದ್ದನು.॥30-31½॥

(ಶ್ಲೋಕ - 32½)

ಮೂಲಮ್

ಕದಾಚಿತ್ ಪರಮೇಶಸ್ಯ ಪರಿಚರ್ಯಾಪರೋಽಭವತ್ ॥
ಉಪಸ್ಥಿತಾಯಾಪಿತಸ್ಮೈ ಪ್ರಣಾಮಂ ನ ಚಕಾರ ಸಃ ।

ಅನುವಾದ

ಒಮ್ಮೆ ಸೌದಾಸನು ಪರಮೇಶ್ವರ ಶಿವನ ಆರಾಧನೆಯಲ್ಲಿ ತೊಡಗಿದ್ದನು. ಆಗಲೇ ಅಲ್ಲಿಗೆ ಅವನ ಗುರುಗಳಾದ ಗೌತಮರು ಬಂದರು. ಆದರೆ ಸೌದಾಸನು ಬಳಿಗೆ ಬಂದ ಗುರುಗಳಿಗೆ ಎದ್ದು ನಮಸ್ಕರಿಸಲಿಲ್ಲ.॥32½॥

(ಶ್ಲೋಕ - 33½)

ಮೂಲಮ್

ಸ ತು ಶಾಂತೋ ಮಹಾಬುದ್ಧಿರ್ಗೌತಮಸ್ತೇಜಸಾಂ ನಿಃ ॥
ಶಾಸ್ತ್ರೋದಿತಾನಿ ಕರ್ಮಾಣಿ ಕರೋತಿ ಸ ಮುದಂ ಯಯೌ ।

ಅನುವಾದ

ಆದರೆ ಬುದ್ಧಿವಂತರಾದ ಗೌತಮರು ತೇಜದ ನಿಧಿಗಳಾಗಿದ್ದರು. ಅವರು ಶಿಷ್ಯನ ವರ್ತನೆಯಿಂದ ಸಿಟ್ಟಾಗದೆ ಶಾಂತವಾಗಿಯೇ ಇದ್ದರು. ನನ್ನ ಶಿಷ್ಯ ಸೌದಾಸನು ಶಾಸ್ತ್ರೋಕ್ತ-ಕರ್ಮಗಳ ಅನುಷ್ಠಾನ ಮಾಡುತ್ತಿದ್ದಾನೆ ಎಂದು ತಿಳಿದು ಬಹಳ ಸಂತೋಷಗೊಂಡರು.॥33½॥

34
ಮೂಲಮ್

ಯಸ್ತ್ವರ್ಚಿತೋ ಮಹಾದೇವಃ ಶಿವಃ ಸರ್ವಜಗದ್ಗುರುಃ ॥
ಗುರ್ವವಜ್ಞಾಕೃತಂ ಪಾಪಂ ರಾಕ್ಷಸತ್ವೇ ನಿಯುಕ್ತವಾನ್ ।

35
ಮೂಲಮ್

ಉವಾಚ ಪ್ರಾಂಜಲಿರ್ಭೂತ್ವಾ ವಿನಯೇಷು ಚ ಕೋವಿದಃ ॥

ಅನುವಾದ

ಆದರೆ ಸೌದಾಸನು ಯಾರನ್ನು ಆರಾಧಿಸುತ್ತಿದ್ದನೋ ಆ ಸಂಪೂರ್ಣ ಜಗತ್ತಿನ ಗುರು ಮಹಾದೇವನು ಗುರುಗಳ ಅವಹೇಳನದಿಂದ ಆದ ಪಾಪವನ್ನು ಸಹಿಸಲಿಲ್ಲ. ಅವನು ಸೌದಾಸನಿಗೆ ರಾಕ್ಷಸನಾಗೆಂದು ಶಪಿಸಿದನು. ಆಗ ವಿನಯಕಲಾಕೋವಿದ ಬ್ರಾಹ್ಮಣನು ಕೈಮುಗಿದು ಗೌತಮರಲ್ಲಿ ಹೇಳಿದನು.॥34-35॥

(ಶ್ಲೋಕ-36)

ಮೂಲಮ್ (ವಾಚನಮ್)

ವಿಪ್ರ ಉವಾಚ

ಮೂಲಮ್

ಭಗಾವನ್ ಸರ್ವಧರ್ಮಜ್ಞ ಸರ್ವದರ್ಶೀನ್ ಸುರೇಶ್ವರ ।
ಕ್ಷಮಸ್ವ ಭಗವನ್ ಸರ್ವಮಪರಾಧಃ ಕೃತೋ ಮಯಾ ॥

ಅನುವಾದ

ಬ್ರಾಹ್ಮಣನು ಹೇಳಿದನು - ಸಮಸ್ತ ಧರ್ಮಗಳ ಜ್ಞಾನಿಗಳೇ! ಸರ್ವದರ್ಶಿ! ಸುರೇಶ್ವರ! ಪೂಜ್ಯರೇ! ನಾನು ಮಾಡಿದ ಅಪರಾಧವೆಲ್ಲವನ್ನು ಕ್ಷಮಿಸಿಬಿಡಿ.॥36॥

(ಶ್ಲೋಕ - 37½)

ಮೂಲಮ್ (ವಾಚನಮ್)

ಗೌತಮ ಉವಾಚ

ಮೂಲಮ್

ಊರ್ಜೇ ಮಾಸೇ ಸಿತೇ ಪಕ್ಷೇ ರಾಮಾಯಣಕಥಾಮೃತಮ್ ।
ನವಾಹ್ನಾ ಚೈವ ಶ್ರೋತವ್ಯಂ ಭಕ್ತಿಭಾವೇನ ಸಾದರಮ್ ॥
ನಾತ್ಯಂತಿಕಂ ಭವೇದೇತದ್ ದ್ವಾದಶಾಬ್ದಂ ಭವಿಷ್ಯತಿ ।

ಅನುವಾದ

ಗೌತಮರು ಹೇಳಿದರು - ಮಗು! ಕಾರ್ತಿಕ ಶುಕ್ಲ ಪಕ್ಷದಲ್ಲಿ ನೀನು ರಾಮಾಯಣದ ಅಮೃತಮಯ ಕಥೆಯನ್ನು ಭಕ್ತಿಭಾವದಿಂದ ಶ್ರವಣಿಸು. ಈ ಕಥೆಯನ್ನು ಒಂಭತ್ತು ದಿನ ಕೇಳಬೇಕು. ಹೀಗೆ ಮಾಡುವುದರಿಂದ ಈ ಶಾಪವು ಹೆಚ್ಚು ದಿನ ಉಳಿಯಲಾರದು. ಕೇವಲ ಹನ್ನೆರಡು ವರ್ಷಗಳವರೆಗೆ ಇರಬಲ್ಲದು.॥37½॥

38
ಮೂಲಮ್ (ವಾಚನಮ್)

ವಿಪ್ರ ಉವಾಚ

ಮೂಲಮ್

ಕೇನ ರಾಮಾಯಣಂ ಪ್ರೋಕ್ತಂ ಚರಿತಾನಿ ತು ಕಸ್ಯ ವೈ ॥

39
ಮೂಲಮ್

ಏತತ್ ಸರ್ವಂ ಮಹಾಪ್ರಾಜ್ಯ ಸಂಕ್ಷೇಪಾದ್ ವಕ್ತುಮರ್ಹಸಿ ।
ಮನಸಾ ಪ್ರೀತಿಮಾಪನ್ನೋ ವವಂದೇ ಚರಣೌ ಗುರೋಃ ॥

ಅನುವಾದ

ಬ್ರಾಹ್ಮಣನು ಕೇಳಿದನು - ರಾಮಾಯಣ ಕಥೆಯನ್ನು ಯಾರು ಹೇಳಿರುವರು? ಅದರಲ್ಲಿ ಯಾರ ಚರಿತ್ರೆಯನ್ನು ವರ್ಣಿಸಲಾಗಿದೆ. ಮಹಾಪ್ರಾಜ್ಞರೇ! ಇವೆಲ್ಲವನ್ನೂ ಸಂಕ್ಷೇಪವಾಗಿ ತಿಳಿಸುವ ಕೃಪೆ ಮಾಡಿರಿ. ಹೀಗೆ ಹೇಳಿ ಮನಸ್ಸಿನಲ್ಲಿ ಭಕ್ತಿಯುಕ್ತನಾಗಿ ಸೌದಾಸನು ಗುರುಗಳ ಚರಣಗಳಲ್ಲಿ ವಂದಿಸಿಕೊಂಡನು.॥38-39॥

40
ಮೂಲಮ್ (ವಾಚನಮ್)

ಗೌತಮ ಉವಾಚ

ಮೂಲಮ್

ಶೃಣು ರಾಮಾಯಣಂ ವಿಪ್ರ ವಾಲ್ಮೀಕಿಮುನಿನಾ ಕೃತಮ್ ।
ಯೇನ ರಾಮಾವತಾರೇಣ ರಾಕ್ಷಸಾ ರಾವಣಾದಯಃ ॥

(ಶ್ಲೋಕ - 41½)

ಮೂಲಮ್

ಹತಾಸ್ತು ದೇವಕಾರ್ಯಂ ಹಿ ಚರಿತಂ ತಸ್ಯ ತಚ್ಛ ಣು ।
ಕಾರ್ತಿಕೇ ಚ ಸಿತೇ ಪಕ್ಷೇ ಕಥಾ ರಾಮಾಯಣಸ್ಯ ತು ॥
ನಾವಮೇಹನಿ ಶ್ರೋತವ್ಯಾ ಸರ್ವಪಾಪಪ್ರಣಾಶಿನೀ ।

ಅನುವಾದ

ಗೌತಮರು ಹೇಳಿದರು - ಬ್ರಾಹ್ಮಣನೇ! ಕೇಳು. ರಾಮಾಯಣ ಕಾವ್ಯದ ನಿರ್ಮಾಣ ವಾಲ್ಮೀಕಿ ಮುನಿಗಳು ಮಾಡಿರುವರು. ಯಾವ ಭಗಾವಾನ್ ಶ್ರೀರಾಮನು ಅವತರಿಸಿ ರಾವಣಾದಿ ರಾಕ್ಷಸರನ್ನು ಸಂಹಸಿರಿದನೋ ಹಾಗೂ ದೇವತೆಗಳ ಕಾರ್ಯವನ್ನು ನೆರವೇರಿಸಿರುವನೋ ಅವನ ಚರಿತ್ರೆ ರಾಮಾಯಣ ಕಾವ್ಯದಲ್ಲಿ ವರ್ಣಿತವಾಗಿದೆ, ನೀನು ಅದನ್ನೇ ಶ್ರವಣಿಸು. ಕಾರ್ತಿಕ ಮಾಸದ ಶುಕ್ಲಪಕ್ಷದ ಪಾಡ್ಯದಿಂದ ನವಮಿಯವರೆಗೆ ರಾಮಾಯಣದ ಕಥೆಯನ್ನು ಕೇಳಬೇಕು. ಅದು ಸಮಸ್ತ ಪಾಪಗಳನ್ನು ನಾಶಮಾಡುವಂತಹುದಾಗಿದೆ.॥40-41½॥

(ಶ್ಲೋಕ - 42½)

ಮೂಲಮ್

ಇತ್ಯುಕ್ತ್ವಾ ಚಾರ್ಥಸಂಪನ್ನೋ ಗೌತಮಃ ಸ್ವಾಶ್ರಮಂ ಯಯೌ ॥
ವಿಪ್ರೋಽಪಿ ದುಃಖಮಾಪನ್ನೋ ರಾಕ್ಷಸೀಂ ತನುಮಾಶ್ರಿತಃ ।

ಅನುವಾದ

ಹೀಗೆ ಹೇಳಿ ಪೂರ್ಣಕಾಮರಾದ ಗೌತಮರು ತನ್ನ ಆಶ್ರಮಕ್ಕೆ ತೆರಳಿದರು. ಇತ್ತ ಸೋಮದತ್ತ ಅಥವಾ ಸುದಾಸ ಎಂಬ ಬ್ರಾಹ್ಮಣನು ದುಃಖಮಗ್ನನಾಗಿ ರಾಕ್ಷಸ ಶರೀರವನ್ನು ಪಡೆದನು.॥42½॥

(ಶ್ಲೋಕ - 43½)

ಮೂಲಮ್

ಕ್ಷುತ್ಪೀಡಿತಃ ಪಿಪಾಸಾರ್ತೋ ನಿತ್ಯಂ ಕ್ರೋಧಪರಾಯಣಃ ॥
ಕೃಷ್ಣಕ್ಷಪಾದ್ಯುತಿರ್ಭೀಮೋ ಬಭ್ರಾಮ ವಿಜನೇ ವನೇ ।

ಅನುವಾದ

ಅವನು ಸದಾ ಹಸಿವು - ಬಾಯಾರಿಕೆಯಿಂದ ಪೀಡಿತನಾಗಿ, ಕ್ರೋಧಕ್ಕೆ ವಶೀಭೂತನಾಗಿರುತ್ತಿದ್ದನು. ಅವನ ಶರೀರವು ಕಪ್ಪಾಗಿತ್ತು. ಅವನು ಭಯಾನಕ ರಾಕ್ಷಸನಾಗಿ ನಿರ್ಜನ ಕಾಡಿನಲ್ಲಿ ತಿರುಗಾಡುತ್ತಿದ್ದನು.॥43½॥

(ಶ್ಲೋಕ - 44½)

ಮೂಲಮ್

ಮೃಗಾಂಶ್ಚ ವಿವಿಧಾಂಸ್ತತ್ರ ಮನುಷ್ಯಾಂಶ್ಚ ಸರೀಸೃಪಾನ್ ॥
ವಿಹಗಾನ್ ಪ್ಲವಗಾಂಶ್ಚೈವ ಪ್ರಸಭಾತ್ತಾನಭಕ್ಷಯತ್ ।

ಅನುವಾದ

ಅಲ್ಲಿ ಅವನು ನಾನಾ ರೀತಿಯ ಪಶುಗಳನ್ನು, ಮನುಷ್ಯರನ್ನು, ಹಾವು-ಚೇಳು ಮುಂತಾದ ಜಂತುಗಳನ್ನು, ಪಕ್ಷಿಗಳನ್ನು, ವಾನರರನ್ನು ಬಲವಂತವಾಗಿ ಹಿಡಿದು ತಿನ್ನುತ್ತಿದ್ದನು.॥44½॥

(ಶ್ಲೋಕ - 45½)

ಮೂಲಮ್

ಅಸ್ಥಿಭಿರ್ಬಹುಭಿರ್ವಿಪ್ರಾಃ ಪೀತರಕ್ತಕಲೇವರೈಃ ॥
ರಕ್ತಾದಪ್ರೇತಕೈಶ್ಚೈವ ತೇನಸೀದ್ ಭೂರ್ಭಯಂಕರೀ ।

ಅನುವಾದ

ಬ್ರಹ್ಮರ್ಷಿಗಳೇ! ಆ ರಾಕ್ಷಸನಿಂದ ಈ ಪೃಥ್ವಿಯು ರಾಶಿ-ರಾಶಿ ಎಲುಬುಗಳಿಂದ, ಕೆಂಪು, ಹಳದಿ ಶರೀವುಳ್ಳ ರಕ್ತಪಾಯಿ ಪ್ರೇತಗಳಿಂದ ತುಂಬಿಹೋಗಿ ಭಯಂಕರವಾಗಿ ಕಾಣತೊಡಗಿತು.॥45½॥

(ಶ್ಲೋಕ - 46½)

ಮೂಲಮ್

ಋತುತ್ರಯೇ ಸ ಪೃಥಿವೀಂ ಶತಯೋಜನವಿಸ್ತರಾಮ್ ॥
ಕೃತ್ವಾತಿದುಃಖಿತಾಂ ಪಶ್ಚಾದ್ವನಾಂತರಮಗಾತ್ ಪುನಃ ।

ಅನುವಾದ

ಆರು ತಿಂಗಳಲ್ಲೇ ನೂರು ಯೋಜನ ವಿಸ್ತಾರವಾದ ಪ್ರದೇಶವನ್ನು ಅತ್ಯಂತ ದುಃಖಿತಗೊಳಿಸಿ ಆ ರಾಕ್ಷಸನು ಮತ್ತೆ ಇನ್ನೊಂದು ಕಾಡಿಗೆ ಹೊರಟುಹೋದನು.॥46½॥

(ಶ್ಲೋಕ - 47½)

ಮೂಲಮ್

ತತ್ರಾಪಿ ಕೃತವಾನ್ ನಿತ್ಯಂ ನರಮಾಂಸಾಶನಂ ತದಾ ॥
ಜಗಾಮ ನರ್ಮದಾತೀರೇ ಸರ್ವಲೋಕಭಯಂಕರಃ ।

ಅನುವಾದ

ಅಲ್ಲಿಯೂ ಅವನು ಪ್ರತಿದಿನ ನರಮಾಂಸವನ್ನು ತಿನ್ನುತ್ತಿದ್ದನು. ಎಲ್ಲ ಜನರ ಮನಸ್ಸಿನಲ್ಲಿ ಭಯವನ್ನುಂಟುಮಾಡುವ ಆ ರಾಕ್ಷಸನು ಅಲೆಯುತ್ತಾ ಅಲೆಯುತ್ತಾ ನರ್ಮದೆಯ ತೀರಕ್ಕೆ ಬಂದು ತಲುಪಿದನು.॥47½॥

(ಶ್ಲೋಕ - 48½)

ಮೂಲಮ್

ಏತಸ್ಮಿನ್ನಂತರೇ ಪ್ರಾಪ್ತಃ ಕಶ್ಚಿದ್ ವಿಪ್ರೋಽತಿಧಾರ್ಮಿಕಃ ॥
ಕಲಿಂಗದೇಶಸಂಭೂತೋ ನಾಮ್ನಾ ಗರ್ಗ ಇತಿ ಸ್ಮೃತಃ ।

ಅನುವಾದ

ಆಗಲೇ ಅತ್ಯಂತ ಧರ್ಮಾತ್ಮನಾದ ಬ್ರಾಹ್ಮಣನು ಅತ್ತ ಹೋಗುತ್ತಿದ್ದನು. ಕಳಿಂಗ ದೇಶದಲ್ಲಿ ಹುಟ್ಟಿದ ಅವನು ಗರ್ಗ ಎಂಬ ಹೆಸರಿನಿಂದ ವಿಖ್ಯಾತನಾಗಿದ್ದನು.॥48½॥

(ಶ್ಲೋಕ - 49½)

ಮೂಲಮ್

ವಹನ್ ಗಂಗಾಜಲಂ ಸ್ಕಂಧೇ ಸ್ತುವನ್ ವಿಶ್ವೇಶ್ವರಂ ಪ್ರಭುಮ್ ॥
ಗಾಯನ್ ನಾಮಾನಿ ರಾಮಸ್ಯ ಸಮಾಯಾತೋಽತಿಹರ್ಷಿತಃ ।

ಅನುವಾದ

ಹಗಲಲ್ಲಿ ಗಂಗಾಜಲವನ್ನು ಹೊತ್ತುಕೊಂಡು ಭಗವಾನ್ ವಿಶ್ವನಾಥನನ್ನು ಸ್ತುತಿಸುತ್ತಾ, ಶ್ರೀರಾಮನಾಮಗಳನ್ನು ಹಾಡುತ್ತಾ ಆ ಬ್ರಾಹ್ಮಣನು ಉತ್ಸಾಹ ತುಂಬಿ ಆ ಪುಣ್ಯ ಪ್ರದೇಶಕ್ಕೆ ಬಂದಿದ್ದನು.॥49½॥

50
ಮೂಲಮ್

ತಮಾಯಾಂತಂ ಮುನಿಂ ದೃಷ್ಟ್ವಾ ಸುದಾಸೋ ನಾಮ ರಾಕ್ಷಸಃ ॥
ಪ್ರಾಪ್ತೋ ನಃ ಪಾರಣೇತ್ಯುಕ್ತ್ವಾ ಭುಜಾವುದ್ಯಮ್ಯ ತಂ ಯಯೌ ।

(ಶ್ಲೋಕ - 51½)

ಮೂಲಮ್

ತೇನ ಕೀರ್ತಿತನಾಮಾನಿ ಶ್ರುತ್ವಾ ದೂರೇ ವ್ಯವಸ್ಥಿತಃ ॥
ಅಶಕ್ತಸ್ತಂ ದ್ವಿಜಂ ಹಂತುಮಿದಮೂಚೇ ಸ ರಾಕ್ಷಸಃ ।

ಅನುವಾದ

ಗರ್ಗಮುನಿಯನ್ನು ನೋಡಿ ರಾಕ್ಷಸ ಸುದಾಸನು ‘‘ನನಗೆ ಊಟ ಸಿಕ್ಕಿತು’’ ಎಂದು ಹೇಳುತ್ತಾ ತನ್ನ ಎರಡೂ ಭುಜಗಳನ್ನೆತ್ತಿಕೊಂಡು ಮುನಿಯ ಕಡೆಗೆ ಧಾವಿಸಿದನು. ಆದರೆ ಅವರು ಉಚ್ಚರಿಸುತ್ತಿದ್ದ ಭಗವನ್ನಾಮಗಳನ್ನು ಕೇಳಿ ದೂರವೇ ನಿಂತುಕೊಂಡನು. ಆ ಬ್ರಹ್ಮರ್ಷಿಯನ್ನು ಕೊಲ್ಲಲು ಅಸಮರ್ಥನಾದ ರಾಕ್ಷಸನು ಅವರಲ್ಲಿ ಇಂತು ನುಡಿದನು.॥50-51½॥

52
ಮೂಲಮ್ (ವಾಚನಮ್)

ರಾಕ್ಷಸ ಉವಾಚ

ಮೂಲಮ್

ಅಹೋ ಭದ್ರ ಮಹಾಭಾಗ ನಮಸ್ತುಭ್ಯಂ ಮಹಾತ್ಮನೇ ॥

53
ಮೂಲಮ್

ನಾಮಸ್ಮರಣಮಾತ್ರೇಣ ರಾಕ್ಷಸಾ ಅಪಿ ದೂರಗಾಃ ।
ಮಯಾ ಪ್ರಭಕ್ಷಿತಾಃ ಪೂರ್ವಂ ವಿಪ್ರಾಃ ಕೋಟಿಸಹಸ್ರಶಃ ॥

ಅನುವಾದ

ರಾಕ್ಷಸನು ಹೇಳಿದನು - ಮಹಾಭಾಗನೇ! ಮಂಗಳ ಸ್ವರೂಪನೇ! ಮಹಾತ್ಮನಾದ ನಿನಗೆ ನಮಸ್ಕಾರ. ನೀವು ಜಪಿಸುತ್ತಿರುವ ಭಗವನ್ನಾಮದಿಂದ ರಾಕ್ಷಸರೂ ದೂರ ಓಡಿಹೋಗುತ್ತಿದ್ದಾರಲ್ಲ! ಇದೆಂತಹ ಆಶ್ಚರ್ಯ! ನಾನು ಮೊದಲು ಸಾವಿರ ಕೋಟಿ ಬ್ರಾಹ್ಮಣರನ್ನು ತಿಂದು ಹಾಕಿರುವೆನು.॥52-53॥

(ಶ್ಲೋಕ - 54½)

ಮೂಲಮ್

ನಾಮಪ್ರಾವರಣಂ ವಿಪ್ರ ರಕ್ಷತಿ ತ್ವಾಂ ಮಹಾಭಯಾತ್ ।
ನಾಮಸ್ಮರಣಮಾತ್ರೇಣ ರಾಕ್ಷಸಾ ಅಪಿ ಭೋ ವಯಮ್ ॥
ಪರಾಂ ಶಾಂತಿಂ ಸಮಾಪನ್ನಾ ಮಹಿಮಾ ಕೋಽಚ್ಯುತಸ್ಯ ಹಿ ।

ಅನುವಾದ

ಬ್ರಾಹ್ಮಣನೇ! ನಿಮ್ಮ ಬಳಿ ಇರುವ ರಾಮರೂಪೀ ಕವಚವೇ ರಾಕ್ಷಸರ ಮಹಾಭಯದಿಂದ ನಿಮ್ಮನ್ನು ರಕ್ಷಿಸುತ್ತಿದೆ. ನೀವು ಮಾಡುವ ನಾಮಸ್ಮರಣೆಯಿಂದ ರಾಕ್ಷಸರಾದ ನಮಗೂ ಶಾಂತಿ ದೊರೆಯಿತು. ಇದು ಭಗವಾನ್ ಅಚ್ಯುತನ ಎಂತಹ ಮಹಿಮೆಯಾಗಿದೆ?॥54½॥

(ಶ್ಲೋಕ - 55½)

ಮೂಲಮ್

ಸರ್ವಥಾ ತ್ವಂ ಮಹಾಭಾಗ ರಾಗಾದಿರಹಿತೋ ದ್ವಿಜ ॥
ರಾಮಕಥಾಪ್ರಭಾವೇಣ ಪಾಹ್ಯಸ್ಮಾತ್ ಪಾತಕಾಧಮಾತ್ ।

ಅನುವಾದ

ಮಹಾಭಾಗ ಬ್ರಾಹ್ಮಣನೇ! ನೀವು ಶ್ರೀರಾಮ ಕಥೆಯ ಪ್ರಭಾವದಿಂದ ಸರ್ವಥಾ ರಾಗಾದಿ ದೋಷಗಳಿಂದ ರಹಿತನಾಗಿರುವಿರಿ. ಆದ್ದರಿಂದ ನೀವು ನನ್ನನ್ನು ಈ ಅಧಮ ಪಾಪದಿಂದ ಕಾಪಾಡಿರಿ.॥55½॥

(ಶ್ಲೋಕ - 56½)

ಮೂಲಮ್

ಗುರ್ವವಜ್ಞಾ ಮಯಾ ಪೂರ್ವಂ ಕೃತಾ ಚ ಮುನಿಸತ್ತಮ ॥
ಕೃತಶ್ಚಾನುಗ್ರಹಃ ಪಶ್ಚಾದ್ ಗುರುಣೋಕ್ತಮಿದಂ ವಚಃ ।

ಅನುವಾದ

ಮುನಿಶ್ರೇಷ್ಠನೇ! ನಾನು ಹಿಂದೆ ನನ್ನ ಗುರುವಿನ ಅವಹೇಳನೆ ಮಾಡಿದ್ದೆ ಮತ್ತೆ ಗುರುಗಳು ನನ್ನ ಮೇಲೆ ಅನುಗ್ರಹ ಮಾಡಿ, ಈ ಮಾತನ್ನು ಹೇಳಿದ್ದರು.॥56½॥

(ಶ್ಲೋಕ - 57½)

ಮೂಲಮ್

ವಾಲ್ಮೀಕಿಮುನಿನಾ ಪೂರ್ವಂ ಕಥಾ ರಾಮಾಯಣಸ್ಯ ಚ ॥
ಊರ್ಜೇ ಮಾಸೇ ಸಿತೇ ಪಕ್ಷೇ ಶ್ರೋತವ್ಯಾ ಚ ಪ್ರಯತ್ನತಃ ।

ಅನುವಾದ

ಹಿಂದಿನ ಕಾಲದಲ್ಲಿ ವಾಲ್ಮೀಕಿ ಮುನಿಗಳು ಹೇಳಿದ ರಾಮಾಯಣ ಕಥೆಯನ್ನು ಕಾರ್ತಿಕಮಾಸದ ಶುಕ್ಲಪಕ್ಷದಲ್ಲಿ ಪ್ರಯತ್ನಪೂರ್ವಕ ಶ್ರವಣಿಸಬೇಕು.॥57½॥

(ಶ್ಲೋಕ - 58½)

ಮೂಲಮ್

ಗುರುಣಾಪಿ ಪುನಃ ಪ್ರೋಕ್ತಂ ರಮ್ಯಾಂ ತು ಶುಭದಂ ವಚಃ ॥
ನವಾಹ್ನಾ ಖಲು ಶ್ರೋತವ್ಯಂ ರಾಮಾಯಣಕಥಾಮೃತಮ್ ।

ಅನುವಾದ

ಇಷ್ಟು ಹೇಳಿ ಗುರುಗಳು ಪುನಃ- ‘ರಾಮಾಯಣದ ಅಮೃತಮಯ ಕಥೆಯನ್ನು ಒಂಭತ್ತು ದಿನಗಳಲ್ಲಿ ಕೇಳಬೇಕು’ ಎಂಬ ಶುಭದಾಯಕ ಮಾತನ್ನು ಹೇಳಿದ್ದರು.॥58½॥

(ಶ್ಲೋಕ - 59½)

ಮೂಲಮ್

ತಸ್ಮಾದ್ ಬ್ರಹ್ಮನ್ ಮಹಾಭಾಗ ಸರ್ವಶಾಸ್ತ್ರಾರ್ಥಕೋವಿದ ॥
ಕಥಾಶ್ರವಣಮಾತ್ರೇಣ ಪಾಹ್ಯಸ್ಮಾತ್ ಪಾಪಕರ್ಮಣಃ ।

ಅನುವಾದ

ಆದ್ದರಿಂದ ಸಮಸ್ತ ಶಾಸ್ತ್ರಗಳ ತತ್ವವನ್ನು ತಿಳಿದ ಮಹಾನುಭಾವರಾದ ಬ್ರಾಹ್ಮಣರೇ! ನೀವು ನನಗೆ ರಾಮಾಯಣ ಕಥೆಯನ್ನು ಹೇಳಿ, ಈ ಪಾಪಕರ್ಮದಿಂದ ನನ್ನನ್ನು ರಕ್ಷಿಸಿರಿ.॥59½॥

60
ಮೂಲಮ್ (ವಾಚನಮ್)

ನಾರದ ಉವಾಚ

ಮೂಲಮ್

ತತೋ ರಾಮಾಯಣಂ ಖ್ಯಾತಂ ರಾಮಮಾಹಾತ್ಮ್ಯಮುತ್ತಮಮ್ ॥

(ಶ್ಲೋಕ - 61½)

ಮೂಲಮ್

ನಿಶಮ್ಯ ವಿಸ್ಮಯಾವಿಷ್ಟೋ ಬಭೂವ ದ್ವಿಜಸತ್ತಮಃ ।
ತತೋ ವಿಪ್ರಃ ಕೃಪಾವಿಷ್ಟೋ ರಾಮನಾಮಪರಾಯಣಃ ॥
ಸುದಾಸರಾಕ್ಷಸಂ ನಾಮ ಚೇದಂ ವಾಕ್ಯಮಥಾಬ್ರವೀತ್ ।

ಅನುವಾದ

ನಾರದರು ಹೇಳುತ್ತಾರೆ-ಆಗ ರಾಕ್ಷಸ ಮುಖದಿಂದ ರಾಮಾಯಣದ ಪರಿಚಯ ಹಾಗೂ ಶ್ರೀರಾಮನ ಉತ್ತಮ ಮಾಹಾತ್ಮ್ಯೆಯ ವರ್ಣನೆಯನ್ನು ಕೇಳಿ ದ್ವಿಜಶ್ರೇಷ್ಠ ಗರ್ಗರು ಆಶ್ಚರ್ಯಚಕಿತರಾದರು. ಶ್ರೀರಾಮನ ನಾಮವೇ ಅವರ ಜೀವನ ಅವಲಂಬನೆ ಆಗಿತ್ತು. ಆ ಬ್ರಾಹ್ಮಣರು ರಾಕ್ಷಸನ ಕುರಿತು ದಯೆಯಿಂದ ದ್ರವಿತರಾಗಿ ಸುದಾಸನಲ್ಲಿ ಇಂತು ನುಡಿದರು.॥60-61½॥

62
ಮೂಲಮ್ (ವಾಚನಮ್)

ವಿಪ್ರ ಉವಾಚ

ಮೂಲಮ್

ರಾಕ್ಷಸೇಂದ್ರ ಮಹಾಭಾಗ ಮತಿಸ್ತೇ ವಿಮಲಾಭವತ್ ॥

63
ಮೂಲಮ್

ಅಸ್ಮಿನ್ನೂರ್ಜೇ ಸಿತೇ ಪಕ್ಷೇ ರಾಮಾಯಣಕಥಾಂ ಶೃಣು ।
ಶೃಣು ತ್ವಂ ರಾಮಮಾಹಾತ್ಮ್ಯಂ ರಾಮಭಕ್ತಿಪರಾಯಣ ॥

ಅನುವಾದ

ಬ್ರಾಹ್ಮಣನು ಹೇಳಿದನು - ರಾಕ್ಷಸ ಮಹಾನುಭಾವ! ನಿನ್ನ ಬುದ್ಧಿ ನಿರ್ಮಲವಾಗಿ ಹೋಗಿದೆ. ಈಗ ಕಾರ್ತಿಕ ಮಾಸದ ಶುಕ್ಲಪಕ್ಷ ನಡೆಯುತ್ತಿದೆ. ಇದರಲ್ಲಿ ರಾಮಾಯಣ ಕಥೆ ಕೇಳು. ರಾಮಭಕ್ತಿಪರಾಯಣ ರಾಕ್ಷಸನೇ! ನೀನು ಶ್ರೀ ರಾಮಚಂದ್ರನ ಮಾಹಾತ್ಮ್ಯೆಯನ್ನು ಶ್ರವಣಿಸು.॥62-63॥

(ಶ್ಲೋಕ - 64½)

ಮೂಲಮ್

ರಾಮಧ್ಯಾನಪರಾಣಾಂ ಚ ಕಃ ಸಮರ್ಥಃ ಪ್ರಬಾಧಿತುಮ್ ।
ರಾಮಭಕ್ತಿಪರೋ ಯತ್ರ ತತ್ರ ಬ್ರಹ್ಮಾ ಹರಿಃ ಶಿವಃ ॥
ತತ್ರ ದೇವಾಶ್ಚ ಸಿದ್ಧಾಶ್ಚ ರಾಮಾಯಣಪರಾ ನರಾಃ ।

ಅನುವಾದ

ಶ್ರೀ ರಾಮಚಂದ್ರನ ಧ್ಯಾನದಲ್ಲಿ ತತ್ಪರನಾದ ಮನುಷ್ಯನಿಗೆ ಯಾರು ತಾನೆ ಕಷ್ಟ ಕೊಡಲು ಸಮರ್ಥರಾಗಿದ್ದಾರೆ? ಎಲ್ಲಿ ಶ್ರೀರಾಮನ ಭಕ್ತನಿರುವನೋ ಅಲ್ಲಿ ಬ್ರಹ್ಮ, ವಿಷ್ಣು, ಶಿವ ವಿರಾಜಮಾನರಾಗಿರುತ್ತಾರೆ. ಅಲ್ಲೇ ದೇವತೆಗಳು, ಸಿದ್ಧರು ಹಾಗೂ ರಾಮಾಯಣವನ್ನು ಆಶ್ರಯಿಸಿದ ಮನುಷ್ಯರು ಇರುತ್ತಾರೆ.॥64½॥

(ಶ್ಲೋಕ - 65½)

ಮೂಲಮ್

ತಸ್ಮಾದೂರ್ಜೇ ಸಿತೇ ಪಕ್ಷೇ ರಾಮಾಯಣಕಥಾಂ ಶೃಣು ॥
ನವಾಹ್ನಾ ಖಲು ಶ್ರೋತವ್ಯಂ ಸಾವಧಾನಃ ಸದಾ ಭವ ।

ಅನುವಾದ

ಆದ್ದರಿಂದ ಈ ಕಾರ್ತಿಕ - ಶುಕ್ಲಪಕ್ಷದಲ್ಲಿ ನೀನು ರಾಮಾಯಣದ ಕಥೆ ಕೇಳು. ಒಂಭತ್ತು ದಿನ ಈ ಕಥೆಯನ್ನು ಕೇಳುವ ವಿಧಾನವಿದೆ. ಅದಕ್ಕಾಗಿ ನೀನು ಸದಾ ಎಚ್ಚರವಾಗಿರು.॥65½॥

66
ಮೂಲಮ್

ಇತ್ಯುಕ್ತ್ವಾ ಕಥಯಾಮಾಸ ರಾಮಾಯಣಕಥಾಂ ಮುನಿಃ ॥
ಕಥಾಶ್ರವಣಮಾತ್ರೇಣ ರಾಕ್ಷಸತ್ವಮಪಾಕೃತಮ್ ।

67
ಮೂಲಮ್

ವಿಸೃಜ್ಯ ರಾಕ್ಷಸಂ ಭಾವಮಭವದ್ ದೇವತೋಪಮಃ ॥
ಕೋಟಿಸೂರ್ಯಪ್ರತೀಕಾಶೋ ನಾರಾಯಣಸಮಪ್ರಭಃ ।

68
ಮೂಲಮ್

ಶಂಖ ಚಕ್ರಗದಾಪಾಣಿರ್ಹರೇಃ ಸದ್ಮ ಜಗಾಮ ಸಃ ॥

69
ಮೂಲಮ್

ಸ್ತುವನ್ ತಂ ಬ್ರಾಹ್ಮಣಂ ಸಮ್ಯಗ್ ಜಗಾಮ ಹರಿಮಂದಿರಮ್ ॥

ಅನುವಾದ

ಹೀಗೆ ಹೇಳಿ ಗರ್ಗ ಮುನಿಗಳು ಅವನಿಗೆ ರಾಮಾಯಣದ ಕಥೆ ಹೇಳಿದರು. ಕಥೆ ಕೇಳುತ್ತಲೇ ಅವನ ರಾಕ್ಷಸತ್ವ ದೂರವಾಯಿತು. ರಾಕ್ಷಸ ಭಾವವನ್ನು ತ್ಯಜಿಸಿ ಅವನು ದೇವತೆಯಂತೆ ಸುಂದರನೂ, ಕೋಟಿ ಸೂರ್ಯರಂತೆ ತೇಜಸ್ವಿಯೂ, ಭಗವಾನ್ ನಾರಾಯಣನಂತೆ ಕಾಂತಿಯುಕ್ತನೂ ಆದನು. ತನ್ನ ನಾಲ್ಕು ಭುಜಗಳಲ್ಲಿ ಶಂಖ, ಚಕ್ರ, ಗದಾ, ಪದ್ಮಗಳನ್ನು ಧರಿಸಿ ಅವನು ಶ್ರೀಹರಿಯ ವೈಕುಂಠಧಾಮಕ್ಕೆ ತೆರಳಿದನು. ಬ್ರಾಹ್ಮಣ ಗರ್ಗಮುನಿಯನ್ನು ಭೂರಿ-ಭೂರಿ ಪ್ರಶಂಸಿಸುತ್ತಾ ಅವನು ಭಗವಂತನ ಉತ್ತಮಧಾಮಕ್ಕೆ ನಡೆದನು.॥66-69॥

70
ಮೂಲಮ್ (ವಾಚನಮ್)

ನಾರದ ಉವಾಚ

ಮೂಲಮ್

ತಸ್ಮಾಚ್ಛೃಣುಧ್ವಂ ವಿಪ್ರೇಂದ್ರಾ ರಾಮಾಯಣ ಕಥಾಮೃತಮ್ ।
ಸ ತಸ್ಯ ಮಹಿಮಾ ತತ್ರ ಊರ್ಜೇ ಮಾಸಿ ಚ ಕೀರ್ತ್ಯತೇ ॥

ಅನುವಾದ

ನಾರದರು ಹೇಳಿದರು - ವಿಪ್ರೋತ್ತಮರೇ! ಆದ್ದರಿಂದ ನೀವೂ ಕೂಡ ರಾಮಾಯಣದ ಅಮೃತಮಯ ಕಥೆಯನ್ನು ಕೇಳಿರಿ. ಇದರ ಶ್ರವಣದ ಮಹಿಮೆ ಯಾವಾಗಲೂ ಇದೆ, ಆದರೆ ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ಹೇಳಲಾಗಿದೆ.॥70॥

71
ಮೂಲಮ್

ಯನ್ನಾಮಸ್ಮರಣಾದೇವ ಮಹಾಪಾತಕಕೋಟಿಭಿಃ ।
ವಿಮುಕ್ತಃ ಸರ್ವಪಾಪೇಭ್ಯೋ ನರೋ ಯತಿ ಪರಾಂ ಗತಿಮ್ ॥

ಅನುವಾದ

ರಾಮಾಯಣದ ನಾಮವನ್ನು ಸ್ಮರಿಸುವುದರಿಂದಲೇ ಮನುಷ್ಯನು ಕೋಟಿ ಪಾಪಗಳಿಂದ ಹಾಗೂ ಸಮಸ್ತ ಪಾಪಗಳಿಂದ ಮುಕ್ತನಾಗಿ ಪರಮಗತಿಯನ್ನು ಪಡೆದುಕೊಳ್ಳುವುದು.॥71॥

72
ಮೂಲಮ್

ರಾಮಾಯಣೇತಿ ಯನ್ನಾಮ ಸಕೃದಪ್ಯುಚ್ಯತೇ ಯದಾ ।
ತದೈವ ಪಾಪನಿರ್ಮುಕ್ತೋ ವಿಷ್ಣುಲೋಕಂ ಸ ಗಚ್ಛತಿ ॥

ಅನುವಾದ

ಮನುಷ್ಯನು ‘ರಾಮಾಯಣ’ ಈ ನಾಮವನ್ನು ಒಮ್ಮೆಯಾದರೂ ಜಪಿಸಿದರೆ ಅವನು ಸಮಸ್ತ ಪಾಪಗಳಿಂದ ಮುಕ್ತನಾಗಿ, ಅಂತ್ಯದಲ್ಲಿ ಭಗವಾನ್ ವಿಷ್ಣುವಿನ ಲೋಕಕ್ಕೆ ತೆರಳುವನು.॥72॥

73
ಮೂಲಮ್

ಯೇ ಪಠಂತಿ ಸದಾಽಽಖ್ಯಾನಂ ಭಕ್ತ್ಯಾ ಶೃಣ್ವಂತಿ ಯೇ ನರಾಃ ।
ಗಂಗಾಸ್ನಾನಾಚ್ಛತಗುಣಂ ತೇಷಾಂ ಸಂಜಯತೇ ಫಲಮ್ ॥

ಅನುವಾದ

ಭಕ್ತಿಭಾವದಿಂದ ರಾಮಾಯಣ ಕಥೆಯನ್ನು ಓದುವವನಿಗೆ, ಕೇಳುವವನಿಗೆ ಗಂಗಾಸ್ನಾನಕ್ಕಿಂತ ನೂರು ಪಟ್ಟು ಪುಣ್ಯಫಲ ದೊರೆಯುತ್ತದೆ.॥73॥

ಅನುವಾದ (ಸಮಾಪ್ತಿಃ)

ಶ್ರೀಸ್ಕಂದ ಪುರಾಣದ ಉತ್ತರ ಖಂಡದಲ್ಲಿನ ನಾರದ ಸನತ್ಕುಮಾರ ಸಂವಾದದಲ್ಲಿ ರಾಮಾಯಣ ಮಾಹಾತ್ಮ್ಯದ ಪ್ರಸಂಗದಲ್ಲಿ ರಾಕ್ಷಸನ ಉದ್ಧಾರ ಎಂಬ ಎರಡನೆಯ ಅಧ್ಯಾಯ ಪೂರ್ಣವಾಯಿತು.॥2॥