[ನೂರ ಹತ್ತನೆಯ ಸರ್ಗ]
ಭಾಗಸೂಚನಾ
ಶ್ರೀರಾಮನು ಅನುಜರೊಡನೆ ತನ್ನ ಸ್ವರೂಪನಾದ ಮಹಾವಿಷ್ಣುವಿನಲ್ಲಿ ಐಕ್ಯ ಹೊಂದುವುದು, ಜೊತೆಗೆ ಬಂದಿರುವ ಸಮಸ್ತರಿಗೂ ಸಂತಾನಕ ಲೋಕದ ಪ್ರಾಪ್ತಿ
ಮೂಲಮ್ - 1
ಅಧ್ಯರ್ಧಯೋಜನಂ ಗತ್ವಾ ನದೀಂ ಪಶ್ಚಾನ್ಮುಖಾಶ್ರಿತಾಮ್ ।
ಸರಯೂಂ ಪುಣ್ಯ ಸಲಿಲಾಂ ದದರ್ಶ ರಘುನಂದನಃ ॥
ಅನುವಾದ
ಅಯೋಧ್ಯೆಯಿಂದ ಒಂದೂವರೆ ಯೋಜನ ದೂರ ಹೋದ ಬಳಿಕ ಶ್ರೀರಾಮನು ಪಶ್ಚಿಮ ದಿಕ್ಕಿನಲ್ಲಿರುವ ಪುಣ್ಯೋದಕದಿಂದ ಕೂಡಿದ ಸರಯೂ ನದಿಯನ್ನು ದರ್ಶಿಸಿದನು.॥1॥
ಮೂಲಮ್ - 2
ತಾಂ ನದೀಮಾಕುಲಾವರ್ತಾಂಸರ್ವತ್ರಾನುಸರನ್ನೃಪಃ ।
ಆಗತಃ ಸಪ್ರಜೋ ರಾಮಸ್ತಂ ದೇಶಂ ರಘುನಂದನಃ ॥
ಅನುವಾದ
ಸರಯೂ ನದಿಯಲ್ಲಿ ಎಲ್ಲೆಡೆ ಸುಳಿಗಳಿದ್ದವು. ಅಲ್ಲಿ ಎಲ್ಲೆಡೆ ತಿರುಗಾಡಿ ರಘುನಂದನ ಶ್ರೀರಾಮನು ಪ್ರಜಾಜನರೊಂದಿಗೆ ಒಂದು ಉತ್ತಮ ಸ್ಥಾನಕ್ಕೆ ತಲುಪಿದನು.॥2॥
ಮೂಲಮ್ - 3
ಅಥ ತಸ್ಮಿನ್ಮುಹೂರ್ತೇ ತು ಬ್ರಹ್ಮಾ ಲೋಕಪಿತಾಮಹಃ ।
ಸರ್ವೈಃಪರಿವೃತೋ ದೇವೈರ್ಋಷಿಭಿಶ್ಚ ಮಹಾತ್ಮಭಿಃ ॥
ಮೂಲಮ್ - 4
ಆಯಯೌ ಯತ್ರ ಕಾಕುತ್ಸ್ಥಃ ಸ್ವರ್ಗಾಯ ಸಮುಪಸ್ಥಿತಃ ।
ವಿಮಾನಶತಕೋಟೀಭಿರ್ದಿವ್ಯಾಭಿರಭಿಸಂವೃತಃ ॥
ಅನುವಾದ
ಆಗಲೇ ಲೋಕಪಿತಾಮಹ ಬ್ರಹ್ಮದೇವರು ಸಮಸ್ತ ದೇವತೆಗಳಿಂದ ಹಾಗೂ ಋಷಿಗಳಿಂದ ಸಂವೃತನಾಗಿ ಶ್ರೀರಘುನಾಥನು ಪರಮಧಾಮಕ್ಕೆ ತೆರಳಲು ನಿಂತಿದ್ದ ಸ್ಥಲಕ್ಕೆ ಬಂದು ತಲುಪಿದರು. ಅವರೊಂದಿಗೆ ಕೋಟಿ-ಕೋಟಿ ದಿವ್ಯ ವಿಮಾನಗಳು ಶೋಭಿಸುತ್ತಿದ್ದವು.॥3-4॥
ಮೂಲಮ್ - 5
ದಿವ್ಯತೇಜೋವೃತಂವ್ಯೋಮ ಜ್ಯೋತಿರ್ಭೂತಮನುತ್ತಮಮ್ ।
ಸ್ವಯಂಪ್ರಭೈಃ ಸ್ವತೇಜೋಭಿಃ ಸ್ವರ್ಗಿಭಿಃ ಪುಣ್ಯಕರ್ಮಭಿಃ ॥
ಅನುವಾದ
ಆಕಾಶ ಮಂಡಲವೆಲ್ಲ ದಿವ್ಯತೇಜದಿಂದ ವ್ಯಾಪ್ತವಾಗಿ ಅತ್ಯಂತ ಜ್ಯೋತಿರ್ಮಯವಾಗುತ್ತಿತ್ತು. ಪುಣ್ಯಕರ್ಮಮಾಡುವ ಸ್ವರ್ಗವಾಸೀಗಳು ಸ್ವಯಂ ಪ್ರಕಾಶಿತರಾಗಿ ತಮ್ಮ ತೇಜದಿಂದ ಆ ಸ್ಥಾನವನ್ನು ಬೆಳಗಿಸುತ್ತಿದ್ದರು.॥5॥
ಮೂಲಮ್ - 6
ಪುಣ್ಯಾ ವಾತಾ ವವುಶ್ಚೈವ ಗಂಧವಂತಃ ಸುಖಪ್ರದಾಃ ।
ಪಪಾತ ಪುಷ್ಪವೃಷ್ಟಿಶ್ಚ ದೇವೈರ್ಮುಕ್ತಾ ಮಹೌಘವತ್ ॥
ಅನುವಾದ
ಪರಮ ಪವಿತ್ರ, ಸುಗಂಧಿತ, ಸುಖದಾಯಕ ಮಂದಾನಿಲ ಬೀಸತೊಡಗಿತು. ದೇವತೆಗಳು ಸುರಿಸುವ ರಾಶಿ-ರಾಶಿ ದಿವ್ಯಪುಷ್ಪಗಳ ಭಾರೀ ವರ್ಷಾ ಆಗತೊಡಗಿತು.॥6॥
ಮೂಲಮ್ - 7
ತಸ್ಮಿಂಸ್ತೂರ್ಯಶತೈಃ ಕೀರ್ಣೇಗಂಧರ್ವಾಪ್ಸರಸಂಕುಲೇ ।
ಸರಯೂಸಲಿಲಂ ರಾಮಃ ಪದ್ಭ್ಯಾಂ ಸಮುಪಚಕ್ರಮೇ ॥
ಅನುವಾದ
ಆಗ ನೂರಾರು ವಾದ್ಯಗಳು ಮೊಳಗಿದವು, ಗಂಧರ್ವರು ಮತ್ತು ಅಪ್ಸರೆಯರಿಂದ ಅಲ್ಲಿಯ ಜಾಗ ತುಂಬಿ ಹೋಯಿತು. ಅಷ್ಟರಲ್ಲಿ ಶ್ರೀರಾಮಚಂದ್ರನು ಸರಯೂ ಜಲವನ್ನು ಪ್ರವೇಶಿಸಲು ಮುಂದಡಿಯಿಟ್ಟನು.॥7॥
ಮೂಲಮ್ - 8
ತತಃ ಪಿತಾಮಹೋ ವಾಣೀಂ ತ್ವಂತರಿಕ್ಷಾದಭಾಷತ ।
ಆಗಚ್ಛ ವಿಷ್ಣೋ ಭದ್ರಂ ತೇ ದಿಷ್ಟ್ಯಾ ಪ್ರಾಪ್ತೋಽಸಿ ರಾಘವ ॥
ಅನುವಾದ
ಆಗ ಬ್ರಹ್ಮದೇವರು ಆಕಾಶದಿಂದ ನುಡಿದರು - ಶ್ರೀವಿಷ್ಣುಸ್ವರೂಪ ರಘುನಂದನ! ಬಾ ಬಾ! ನಿನಗೆ ಮಂಗಳವಾಗಲಿ. ನೀನು ಪರಮಧಾಮಕ್ಕೆ ಆಗಮಿಸುವುದು ನಮ್ಮ ಸೌಭಾಗ್ಯವಾಗಿದೆ.॥8॥
ಮೂಲಮ್ - 9
ಭ್ರಾತೃಭಿಃ ಸಹ ದೇವಾಭೈಃ ಪ್ರವಿಶಸ್ವ ಸ್ವಿಕಾಂ ತನುಮ್ ।
ಯಾಮಿಚ್ಛಸಿ ಮಹಾಬಾಹೋ ತಾಂ ತನುಂ ಪ್ರವಿಶ ಸ್ವಕಾಮ್ ॥
ಅನುವಾದ
ಮಹಾಬಾಹೋ! ದೇವತುಲ್ಯ ತೇಜಸ್ವೀ ಸಹೋದರರೊಂದಿಗೆ ನಿನ್ನ ಸ್ವರೂಪಭೂತ ಲೋಕ ವನ್ನು ಪ್ರವೇಶಿಸು. ನೀನು ಬಯಸಿದ ಸ್ವರೂಪದಿಂದಲೇ ಪ್ರವೇಶಮಾಡು.॥9॥
ಮೂಲಮ್ - 10
ವೈಷ್ಣವೀಂ ತಾಂ ಮಹಾತೇಜೋ ಯದ್ವಾಽಽಕಾಶಂ ಸನಾತನಮ್ ।
ತ್ವಂ ಹಿ ಲೋಕಗತಿರ್ದೇವ ನ ತ್ವಾಂ ಕೇಚಿತ್ಪ್ರಜಾನತೇ ॥
ಮೂಲಮ್ - 11
ಋತೇ ಮಾಯಾಂ ವಿಶಾಲಾಕ್ಷೀಂ ತವಪೂರ್ವಪರಿಗ್ರಹಾಮ್ ।
ತ್ವಾಮಚಿಂತ್ಯಂ ಮಹದ್ಭೂತಮಕ್ಷಯಂ ಚಾಜರಂ ತಥಾ ।
ಯಾಮಿಚ್ಛಸಿ ಮಹಾತೇಜಸ್ತಾಂ ತನುಂ ಪ್ರವಿಶ ಸ್ವಯಮ್ ॥
ಅನುವಾದ
ಮಹಾತೇಜಸ್ವೀ ಪರಮೇಶ್ವರ! ನೀನು ಇಚ್ಛಿಸುವೆಯಾದರೆ ಚತುರ್ಭುಜ ವಿಷ್ಣುರೂಪದಲ್ಲೇ ಪ್ರವೇಶಿಸು, ಅಥವಾ ತನ್ನ ಸನಾತನ ಆಕಾಶಮಯ ಅವ್ಯಕ್ತ ಬ್ರಹ್ಮರೂಪದಲ್ಲಿ ವಿರಾಜಮಾನನಾಗು. ದೇವ! ನೀನೇ ಸಮಸ್ತ ಲೋಕಗಳ ಆಶ್ರಯವಾಗಿರುವೆ. ನಿನ್ನ ಪುರಾತನ ಪತ್ನೀ ಯೋಗಮಾಯಾ ಸ್ವರೂಪಳಾದ, ವಿಶಾಲಾಕ್ಷಿಯಾದ ಸೀತಾದೇವಿಯ ಹೊರತು ಬೇರೆ ಯಾರಿಗೂ ನಿನ್ನ ನಿಜ ಸ್ವರೂಪ ತಿಳಿಯದು; ಏಕೆಂದರೆ ನೀನು ಅಚಿಂತ್ಯನು, ಮಹಾಸತ್ತ್ವನು, ಅವಿನಾಶಿಯು, ಆದಿಮಧ್ಯಾಂತರಹಿತನು, ಜರಾಮರಣರಹಿತನು. ಈಗ ನೀನು ಯಾವು ಸ್ವರೂಪದಲ್ಲಿ ಪ್ರವೇಶಿಸಲು ಬಯಸುವೆಯೋ ಆ ಸ್ವರೂಪದಲ್ಲಿ ಸೇರಿಕೋ.॥10-11॥
ಮೂಲಮ್ - 12
ಪಿತಾಮಹವಚಃ ಶ್ರುತ್ವಾ ವಿನಿಶ್ಚಿತ್ಯ ಮಹಾಮತಿಃ ।
ವಿವೇಶ ವೈಷ್ಣವಂ ತೇಜಃ ಸಶರೀರಃ ಸಹಾನುಜಃ ॥
ಅನುವಾದ
ಪಿತಾಮಹ ಬ್ರಹ್ಮದೇವರ ಮಾತನ್ನು ಕೇಳಿ ಪರಮ ಬುದ್ಧಿವಂತ ಶ್ರೀರಾಮನು ಏನೋ ನಿಶ್ಚಯಿಸಿ ಸಹೋದರರೊಂದಿಗೆ ಶರೀರಸಹಿತ ತನ್ನ ವೈಷ್ಣವ ತೇಜಸ್ಸಿನಲ್ಲಿ ಪ್ರವೇಶಿಸಿದನು.॥12॥
ಮೂಲಮ್ - 13
ತತೋ ವಿಷ್ಣುಮಯಂ ದೇವಂಪೂಜಯಂತಿ ಸ್ಮ ದೇವತಾಃ ।
ಸಾಧ್ಯಾ ಮರುದ್ಗಣಾಶ್ಚೈವ ಸೇಂದ್ರಾಃ ಸಾಗ್ನಿ ಪುರೋಗಮಾಃ ॥
ಅನುವಾದ
ಮತ್ತೆ ಇಂದ್ರಾಗ್ನಿ ಆದಿ ಎಲ್ಲ ದೇವತೆಗಳು, ಸಾಧ್ಯರು, ಮರುದ್ಗಣರು, ವಿಷ್ಣುಸ್ವರೂಪದಲ್ಲಿ ಸ್ಥಿತನಾದ ಭಗವಾನ್ ಶ್ರೀರಾಮನನ್ನು ಸ್ತುತಿಸಿ ಪೂಜಿಸ ತೊಡಗಿದರು.॥13॥
ಮೂಲಮ್ - 14
ಯೇ ಚ ದಿವ್ಯಾ ಋಷಿಗಣಾ ಗಂಧರ್ವಾಪ್ಸರಸಶ್ಚ ಯಾಃ ।
ಸುಪರ್ಣನಾಗಯಕ್ಷಾಶ್ಚ ದೈತ್ಯ ದಾನವರಾಕ್ಷಸಾಃ ॥
ಅನುವಾದ
ಅನಂತರ ದಿವ್ಯಋಷಿ, ಗಂಧರ್ವರು, ಅಪ್ಸರೆಯರು, ಗರುಡ, ನಾಗ, ದೈತ್ಯ, ದಾನವ, ರಾಕ್ಷಸ ಇವರೆಲ್ಲರೂ ಭಗವಂತನ ಗುಣಗಾನ ಮಾಡತೊಡಗಿದರು.॥14॥
ಮೂಲಮ್ - 15
ಸರ್ವಂ ಪುಷ್ಟಂ ಪ್ರಮುದಿತಂ ಸುಸಂಪೂರ್ಣಮನೋರಥಮ್ ।
ಸಾಧುಸಾಧ್ವಿತಿ ತೈರ್ದೇವೈಸಿದಿವಂ ಗತಕಲ್ಮಷಮ್ ॥
ಅನುವಾದ
ಅವರು ಸ್ತುತಿಸುತ್ತಾರೆ- ಪ್ರಭೋ ! ನೀನು ಇಲ್ಲಿಗೆ ಪದಾರ್ಪಣ ಮಾಡಿದ್ದರಿಂದ ದೇವಲೋಕ ವಾಸಿಗಳ ಸಮುದಾಯ ಸಲ ಮನೋರಥವಾದ್ದರಿಂದ ಹೃಷ್ಟ-ಪುಷ್ಟ ಹಾಗೂ ಆನಂದ ಮಗ್ನವಾಯಿತು. ಎಲ್ಲರ ಪಾಪ-ತಾಪ ನಾಶವಾಗಿ ಹೋದುವು. ಸ್ವಾಮಿ! ನೀನು ಮಾಡಿದ ಕಾರ್ಯವು ಅತ್ಯಂತ ಸಾಧುವಾಗಿದೆ.॥15॥
ಮೂಲಮ್ - 16
ಅಥ ವಿಷ್ಣುರ್ಮಹಾತೇಜಾಃ ಪಿತಾಮಹಮುವಾಚಹ ।
ಏಷಾಂ ಲೋಕಂ ಜನೌಘಾನಾಂ ದಾತುಮರ್ಹಸಿಸುವ್ರತ ॥
ಅನುವಾದ
ಅನಂತರ ವಿಷ್ಣು ರೂಪದಲ್ಲಿ ವಿರಾಜಿಸುತ್ತಿದ್ದ ಮಹಾತೇಜಸ್ವೀ ಶ್ರೀರಾಮನು ಬ್ರಹ್ಮ ದೇವರಲ್ಲಿ ಹೇಳಿದನು - ಸುವ್ರತ ಪಿತಾಮಹನೇ! ಈ ಸಮಸ್ತ ಜನಸಮುದಾಯಕ್ಕೂ ನೀನು ಉತ್ತಮ ಲೋಕವನ್ನು ಅನುಗ್ರಹಿಸು.॥16॥
ಮೂಲಮ್ - 17
ಇಮೇ ಹಿ ಸರ್ವೇ ಸ್ನೇಹಾನ್ಮಾಮನುಯಾತಾ ಮನಸ್ವಿನಃ ।
ಭಕ್ತಾ ಹಿ ಭಜಿತವ್ಯಾಶ್ಚ ತ್ಯಕ್ತಾತ್ಮಾನಶ್ಚ ಮತ್ಕೃತೇ ॥
ಅನುವಾದ
ಇವರೆಲ್ಲರೂ ಸ್ನೇಹಪರ ವಶರಾಗಿ ನನ್ನ ಹಿಂದೆ ಬಂದಿರುವರು. ಇವರೆಲ್ಲರೂ ಯಶಸ್ವೀ ನನ್ನ ಭಕ್ತರಾಗಿದ್ದಾರೆ. ಇವರು ನನಗಾಗಿ ತಮ್ಮ ಲೌಕಿಕ ಸುಖಗಳನ್ನು ತ್ಯಜಿಸಿರುವರು; ಆದ್ದರಿಂದ ಇವರು ನನ್ನ ಅನುಗ್ರಹಕ್ಕೆ ಸರ್ವಥಾ ಪಾತ್ರರಾಗಿದ್ದಾರೆ.॥17॥
ಮೂಲಮ್ - 18
ತಚ್ಛ್ರುತ್ವಾ ವಿಷ್ಣುವಚನಂ ಬ್ರಹ್ಮಾ ಲೋಕಗುರುಃ ಪ್ರಭುಃ ।
ಲೋಕಾನ್ಸಂತಾನಕಾನ್ನಾಮ ಯಾಸ್ಯಂತೀಮೇಸಮಾಗತಾಃ ॥
ಅನುವಾದ
ಭಗವಾನ್ ವಿಷ್ಣುವಿನ ಮಾತನ್ನು ಕೇಳಿ ಲೋಕಗುರು ಭಗವಾನ್ ಬ್ರಹ್ಮದೇವರು ಹೇಳಿದರು - ಭಗವಂತಾ! ಇಲ್ಲಿಗೆ ಬಂದಿರುವ ಇವರೆಲ್ಲರೂ ‘ಸಾಂತಾನಿಕ’ ಎಂಬ ಲೋಕಕ್ಕೆ ಹೋಗುವರು.॥18॥
ಮೂಲಮ್ - 19½
ಯಚ್ಚ ತಿರ್ಯಗ್ಗತಂ ಕಿಂಚಿತ್ತ್ವಾಮೇವಮನುಚಿಂತಯತ್ ।
ಪ್ರಾಣಾಂಸ್ತ್ಯಕ್ಷತಿಭಕ್ತ್ಯಾ ತತ್ಸಂತಾನೇಷು ನಿವತ್ಸ್ಯತಿ ॥
ಸರ್ವೈರ್ಬ್ರಹ್ಮಗುಣೈರ್ಯುಕ್ತೇ ಬ್ರಹ್ಮಲೋಕಾದನಂತರೇ ।
ಅನುವಾದ
ಪಶು-ಪಕ್ಷಿ ಯೋನಿಯಲ್ಲಿ ಬಿದ್ದಿರುವ ಜೀವಿಗಳಲ್ಲಿ ಯಾರೇ ನಿನ್ನನ್ನು ಭಕ್ತಿಭಾವದಿಂದ ಚಿಂತಿಸುತ್ತಾ ತಮ್ಮ ಪ್ರಾಣಗಳನ್ನು ಪರಿತ್ಯಜಿಸುವರೋ ಅವರೂ ಕೂಡ ಸಂತಾನಕ ಲೋಕದಲ್ಲೇ ವಾಸಿಸುವರು. ಈ ಸಂತಾನಕ ಲೋಕವು ಬ್ರಹ್ಮಲೋಕದ ನಿಕಟವಾಗಿದೆ. (ಸಾಕೇತಧಾಮದ್ದೇ ಅಂಗವಾಗಿದೆ) ಅದು ಬ್ರಹ್ಮನ ಸತ್ಯ-ಸಂಕಲ್ಪತ್ವ ಮೊದಲಾದ ಎಲ್ಲ ಉತ್ತಮ ಗುಣಗಳಿಂದ ಕೂಡಿದೆ. ಅದರಲ್ಲೇ ಈ ನಿನ್ನ ಭಕ್ತ ಜನರು ವಾಸಿಸುವರು.॥19½॥
ಮೂಲಮ್ - 20
ವಾನರಾಶ್ಚ ಸ್ವಿಕಾಂ ಯೋನಿಮೃಕ್ಷಾಶ್ಚೈವ ತಥಾ ಯಯುಃ ॥
ಮೂಲಮ್ - 21½
ಯೇಭ್ಯೋ ವಿನಿಃಸೃತಾಃ ಸರ್ವೇ ಸುರೇಭ್ಯಃಸುರಸಂಭವಾಃ ।
ತೇಷು ಪ್ರವಿವಿಶೇ ಚೈವ ಸುಗ್ರೀವಃ ಸೂರ್ಯಮಂಡಲಮ್ ॥
ಪಶ್ಯತಾಂ ಸರ್ವದೇವಾನಾಂ ಸ್ವಾನ್ ಪಿತೃನ್ ಪ್ರತಿಪೇದಿರೇ ।
ಅನುವಾದ
ವಾನರರು, ಕರಡಿಗಳು ಯಾವ ದೇವತೆಗಳಿಂದ ಉತ್ಪನ್ನರಾಗಿದ್ದರೋ, ಆಯಾ ದೇವತೆಗಳಲ್ಲಿಯೇ ಸೇರಿಕೊಳ್ಳುವರು. ಸುಗ್ರೀವನು ಸೂರ್ಯಮಂಡಲವನ್ನು ಸೇರಿಕೊಳ್ಳುವನು. ಸಮಸ್ತ ದೇವತೆಗಳು ನೋಡು-ನೋಡುತ್ತಿರುವಂತೆಯೇ ಋಕ್ಷ-ವಾನರರೆಲ್ಲರೂ ತಮ್ಮ-ತಮ್ಮ ಪಿತೃಗಳಲ್ಲಿ ಸೇರಿಕೊಂಡವು.॥20-21½॥
ಮೂಲಮ್ - 22½
ತಥಾ ಬ್ರುವತಿದೇವೇಶೇ ಗೋಪ್ರತಾರಮುಪಾಗತಾಃ ॥
ಭೇಜಿರೇ ಸರಯೂಂ ಸರ್ವೇಹರ್ಷಪೂರ್ಣಾಶ್ರುವಿಕ್ಲವಾಃ ।
ಅನುವಾದ
ದೇವೇಶ್ವರ ಬ್ರಹ್ಮದೇವರು ಸಂತಾನಕ ಲೋಕದ ಘೋಷಣೆ ಮಾಡಿದಾಗ ಸರಯೂವಿನ ಗೋಪ್ರತಾರಘಾಟಿನಲ್ಲಿ ಬಂದಿರುವ ಎಲ್ಲ ಜನರು ಆನಂದಾಶ್ರು ಹರಿಸುತ್ತಾ ಸರಯೂ ನೀರಿನಲ್ಲಿ ಮುಳುಗು ಹಾಕಿದರು.॥22½॥
ಮೂಲಮ್ - 23½
ಅವಗಾಹ್ಯಾಪ್ಸು ಯೋ ಯೋ ವೈ ಪ್ರಾಣಾಂಸ್ತ್ಯಕ್ತ್ವಾ ಪ್ರಹೃಷ್ಟವತ್ ॥
ಮಾನುಷಂ ದೇಹಮುತ್ಸೃಜ್ಯ ವಿಮಾನಂಸೋಧ್ಯರೋಹತ ।
ಅನುವಾದ
ನೀರಿನಲ್ಲಿ ಮುಳುಗುತ್ತಿರುವಂತೆ ಅಲ್ಲಲ್ಲೇ ಬಹಳ ಹರ್ಷದೊಂದಿಗೆ ಪ್ರಾಣಗಳನ್ನು, ಮನುಷ್ಯ ಶರೀರವನ್ನು ತ್ಯಜಿಸಿ ವಿಮಾನವನ್ನು ಅಡರಿದರು.॥23½॥
ಮೂಲಮ್ - 24
ತಿರ್ಯಗ್ಯೋನಿಗತಾನಾಂ ಚ ಶತಾನಿ ಸರಯೂಜಲಮ್ ॥
ಮೂಲಮ್ - 25
ಸಂಪ್ರಾಪ್ಯ ತ್ರಿದಿವಂ ಜಗ್ಮುಃ ಪ್ರಭಾಸುರವಪೂಂಷಿ ತು ।
ದಿವ್ಯಾ ದಿವ್ಯೇನ ವಪುಷಾ ದೇವಾ ದೀಪ್ತಾ ಇವಾಭವನ್ ॥
ಅನುವಾದ
ಪಶು-ಪಕ್ಷಿ ಯೋನಿಯಲ್ಲಿದ್ದ ನೂರಾರು ಪ್ರಾಣಿಗಳು ಸರಯೂ ನದಿಯಲ್ಲಿ ಮುಳುಗಿ ತೇಜಸ್ವೀ ಶರೀರ ಧರಿಸಿ ದಿವ್ಯಲೋಕಕ್ಕೆ ತೆರಳಿದವು. ಅವುಗಳು ದಿವ್ಯಶರೀರ ಧರಿಸಿ ದಿವ್ಯ ಅವಸ್ಥೆಯಲ್ಲಿ ಸ್ಥಿತರಾಗಿ ದೇವತೆಗಳಂತೇ ಪ್ರಕಾಶಮಾನವಾದವು.॥24-25॥
ಮೂಲಮ್ - 26
ಗತ್ವಾ ತು ಸರಯೂತೋಯಂ ಸ್ಥಾವರಾಣಿ ಚರಾಣಿ ಚ ।
ಪ್ರಾಪ್ಯ ತತ್ತೋಯವಿಕ್ಲೇದಂ ದೇವಲೋಕಮುಪಾಗಮನ್ ॥
ಅನುವಾದ
ಸ್ಥಾವರ - ಜಂಗಮ ಎಲ್ಲ ರೀತಿಯ ಪ್ರಾಣಿಗಳು ಸರಯೂ ಜಲದಲ್ಲಿ ಪ್ರವೇಶಿಸಿ ಆ ನೀರಿನಿಂದ ತಮ್ಮ ಶರೀರವನ್ನು ನೆನೆಸಿ ದಿವ್ಯಲೋಕಕ್ಕೆ ನಡೆದವು.॥26॥
ಮೂಲಮ್ - 27
ತಸ್ಮಿನ್ಯೇಽಪಿ ಸಮಾಪನ್ನಾ ಋಕ್ಷವಾನರರಾಕ್ಷಸಾಃ ।
ತೇಽಪಿ ಸ್ವರ್ಗಂ ಪ್ರವಿವಿಶುರ್ದೇಹಾನ್ನಿಕ್ಷಿಪ್ಯ ಚಾಂಭಸಿ ॥
ಅನುವಾದ
ಆಗ ಅಲ್ಲಿಗೆ ಬಂದಿರುವ ಋಕ್ಷ-ವಾನರ ರಾಕ್ಷಸರು ಎಲ್ಲರೂ ತಮ್ಮ ಶರೀರವನ್ನು ಸರಯೂ ನೀರಿನಲ್ಲಿ ಮುಳುಗಿಸಿ ಭಗವಂತನ ಪರಮಧಾವನ್ನೈದಿದರು.॥27॥
ಮೂಲಮ್ - 28
ತತಃ ಸಮಾಗತಾನ್ಸರ್ವಾನ್ ಸ್ಥಾಪ್ಯ ಲೋಕಗುರುರ್ದಿವಿ ।
ಹೃಷ್ಟೈಃ ಪ್ರಮುದಿತೈರ್ದೇವೈರ್ಜಗಾಮ ತ್ರಿದಿವಂ ಮಹತ್ ॥
ಅನುವಾದ
ಹೀಗೆ ಅಲ್ಲಿಗೆ ಬಂದ ಎಲ್ಲ ಪ್ರಾಣಿಗಳಿಗೆ ಸಂತಾನಿಕ ಲೋಕದಲ್ಲಿ ಸ್ಥಾನವನ್ನು ಕೊಟ್ಟು ಲೋಕಗುರು ಬ್ರಹ್ಮದೇವರು ಹರ್ಷಾ ನಂದದಿಂದ ದೇವತೆಗಳೊಂದಿಗೆ ತಮ್ಮ ಧಾಮಕ್ಕೆ ತೆರಳಿದರು.॥28॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ನೂರಹತ್ತನೆಯ ಸರ್ಗಪೂರ್ಣವಾಯಿತು. ॥110॥