[ನೂರ ಎಂಟನೆಯ ಸರ್ಗ]
ಭಾಗಸೂಚನಾ
ಶ್ರೀರಾಮನ ಜೊತೆಯಲ್ಲಿ ಅವರ ಅನುಜರೂ ಸುಗ್ರೀವನೇ ಆದಿ ಋಕ್ಷವಾನರರೂ ಪರಂಧಾಮಕ್ಕೆ ಹೋಗಲು ನಿಶ್ಚಯಿಸಿದುದು, ವಿಭೀಷಣ, ಹನುಮಂತ, ಜಾಂಬವಂತ ಮತ್ತು ಮೈಂದ-ದ್ವಿವಿದರಿಗೆ ಭೂಲೋಕದಲ್ಲಿಯೇ ಇರಲು ಆದೇಶ
ಮೂಲಮ್ - 1
ತೇ ದೂತಾ ರಾಮವಾಕ್ಯೇನ ಚೋದಿತಾಲಘುವಿಕ್ರಮಾಃ ।
ಪ್ರಜಗ್ಮುರ್ಮಧುರಾಂ ಶೀಘ್ರಂ ಚಕ್ರುರ್ವಾಸಂ ನಚಾಧ್ವನಿ ॥
ಅನುವಾದ
ಶ್ರೀರಾಮಚಂದ್ರನ ಆಜ್ಞೆ ಪಡೆದು ಶೀಘ್ರಗಾಮಿ ದೂತರು, ದಾರಿಯಲ್ಲಿ ಎಲ್ಲಿಯೂ ತಂಗದೇ ಶೀಘ್ರವಾಗಿ ಮಧುರಾಪಟ್ಟಣಕ್ಕೆ ಹೋದರು.॥1॥
ಮೂಲಮ್ - 2
ತತಸ್ತ್ರಿಭಿರಹೋರಾತ್ರೈಃ ಸಂಪ್ರಾಪ್ಯ ಮಧುರಾಮಥ ।
ಶತ್ರುಘ್ನಾಯ ಯಥಾತತ್ತ್ವಮಾಚಖ್ಯುಃ ಸರ್ವಮೇವ ತತ್ ॥
ಅನುವಾದ
ಒಂದೇ ಸಮನೇ ಮೂರು ಹಗಲೂ, ಮೂರು ರಾತ್ರಿ ಪ್ರಯಾಣ ಮಾಡಿ, ಮಧುರಾಪುರಿಗೆ ಹೋಗಿ, ಅಯೋಧ್ಯೆಯ ಎಲ್ಲ ಸಮಾಚಾರವನ್ನು ಶತ್ರುಘ್ನನಿಗೆ ಯಥಾವತ್ತಾಗಿ ತಿಳಿಸಿದರು.॥2॥
ಮೂಲಮ್ - 3
ಲಕ್ಷ್ಮಣಸ್ಯ ಪರಿತ್ಯಾಗಂ ಪ್ರತಿಜ್ಞಾಂ ರಾಘವಸ್ಯ ಚ ।
ಪುತ್ರಯೋರಭಿಷೇಕಂ ಚ ಪೌರಾನುಗಮನಂ ತಥಾ ॥
ಮೂಲಮ್ - 4
ಕುಶಸ್ಯ ನಗರೀ ರಮ್ಯಾ ವಿಂದ್ಯಪರ್ವತರೋಧಸಿ ।
ಕುಶಾವತೀತಿ ನಾಮ್ನಾ ಸಾ ಕೃತಾ ರಾಮೇಣ ಧೀಮತಾ ॥
ಅನುವಾದ
ಶ್ರೀರಾಮನ ಪ್ರತಿಜ್ಞೆ, ಲಕ್ಷ್ಮಣನ ಪರಿತ್ಯಾಗ, ಶ್ರೀರಾಮನ ಇಬ್ಬರೂ ಮಕ್ಕಳ ರಾಜ್ಯಾಭಿಷೇಕ, ಪುರವಾಸಿಗಳು ಶ್ರೀರಾಮ ನೊಂದಿಗೆ ಹೋಗುವ ನಿಶ್ಚಯ, ಮೊದಲಾದ ಎಲ್ಲ ಸಂಗತಿಗಳನ್ನು ತಿಳಿಸಿದರು. ಪರಮ ಬುದ್ಧಿವಂತ ಭಗವಾನ್ ಶ್ರೀರಾಮನು ಕುಶನಿಗಾಗಿ ವಿಂಧ್ಯಪರ್ವತದ ತಪ್ಪಲಲ್ಲಿ ಕುಶಾವತೀ ಎಂಬ ರಮಣೀಯ ನಗರವನ್ನು ನಿರ್ಮಿಸಿದನು.॥3-4॥
ಮೂಲಮ್ - 5
ಶ್ರಾವಸ್ತೀತಿ ಪುರೀ ರಮ್ಯಾ ಶ್ರಾವಿತಾ ಚ ಲವಸ್ಯ ಹ ।
ಅಯೋಧ್ಯಾಂ ವಿಜನಾಂ ಕೃತ್ವಾ ರಾಘವೋ ಭರತಸ್ತಥಾ ॥
ಮೂಲಮ್ - 6½
ಸ್ವರ್ಗಸ್ಯ ಗಮನೋದ್ಯೋಗಂ ಕೃತವಂತೌ ಮಹಾರಥೌ ।
ಏವಂ ಸರ್ವಂ ನಿವೇದ್ಯಾಶು ಶತ್ರುಘ್ನಾಯ ಮಹಾತ್ಮನೇ ॥
ವಿರೇಮುಸ್ತೇ ತತೋ ದೂತಾಸ್ತ್ವರ ರಾಜೇತಿ ಚಾಬ್ರುವನ್ ।
ಅನುವಾದ
ಇದೇ ರೀತಿ ಲವನಿಗಾಗಿ ಶ್ರಾವಸ್ತೀ ಎಂಬ ಪ್ರಸಿದ್ಧ ಸುಂದರಪುರಿಯನ್ನು ಸ್ಥಾಪಿಸಿದನು. ಶ್ರೀರಘುನಾಥ ಮತ್ತು ಭರತ ಇಬ್ಬರೂ ಮಹಾರಥಿ ವೀರರು ಅಯೋಧ್ಯೆಯನ್ನು ಬರಿದಾಗಿಸಿ ಸಾಕೇತಧಾಮಕ್ಕೆ ಹೋಗಲು ಹೊರಟಿರುವರು. ಹೀಗೆ ಶತ್ರುಘ್ನನಿಗೆ ಅವಸರವಾಗಿ ಎಲ್ಲ ಮಾತುಗಳನ್ನು ತಿಳಿಸಿ ದೂತರು ಹೇಳಿದರು - ರಾಜನೇ! ತ್ವರೆಮಾಡಿ ಎಂದು ಹೇಳಿ ಅವರು ಸುಮ್ಮನಾದರು.॥5-6½॥
ಮೂಲಮ್ - 7
ತಚ್ಛ್ರುತ್ವಾ ಘೋರಸಂಕಾಶಂ ಕುಲಕ್ಷಯಮುಪಸ್ಥಿತಮ್ ॥
ಮೂಲಮ್ - 8
ಪ್ರಕೃತೀಸ್ತು ಸಮಾನೀಯ ಕಾಂಚನಂ ಚ ಪುರೋಧಸಮ್ ।
ತೇಷಾಂಸರ್ವಂ ಯಥಾವೃತ್ತಮಬ್ರವೀದ್ರಘುನಂದನಃ ॥
ಅನುವಾದ
ತನ್ನ ಕುಲದ ಭಯಂಕರ ಸಂಹಾರ ಉಪಸ್ಥಿತವಾದುದನ್ನು ಕೇಳಿ ರಘುನಂದನ ಶತ್ರುಘ್ನನು ಸಮಸ್ತ ಪ್ರಜೆಗಳನ್ನು ಹಾಗೂ ಕಾಂಚನನೆಂಬ ಪುರೋಹಿತರನ್ನು ಕರೆಸಿ, ಅವರಲ್ಲಿ ಎಲ್ಲ ಸಂಗತಿಗಳನ್ನು ಯಥಾವತ್ತಾಗಿ ತಿಳಿಸಿದನು.॥7-8॥
ಮೂಲಮ್ - 9
ಆತ್ಮನಶ್ಚ ವಿಪರ್ಯಾಸಂ ಭವಿಷ್ಯಂ ಭ್ರಾತೃಭಿಃ ಸಹ ।
ತತಃ ಪುತ್ರದ್ವಯಂ ವೀರಃ ಸೋಽಭ್ಯಷಿಂಚನ್ನರಾಧಿಪಃ ॥
ಅನುವಾದ
ಅಣ್ಣಂದಿರ ಜೊತೆಗೆ ನನ್ನ ಶರೀರವಿಯೋಗವೂ ಆಗುವುದು ಎಂದೂ ತಿಳಿಸಿದನು. ಬಳಿಕ ವೀರ ರಾಜಾ ಶತ್ರುಘ್ನನು ತನ್ನ ಇಬ್ಬರು ಪುತ್ರರಿಗೆ ಪಟ್ಟಾಭಿಷೇಕ ಮಾಡಿದನು.॥9॥
ಮೂಲಮ್ - 10
ಸುಬಾಹುರ್ಮಧುರಾಂ ಲೇಭೇ ಶತ್ರುಘಾತೀ ಚ ವೈದಿಶಮ್ ।
ದ್ವಿಧಾ ಕೃತ್ವಾ ತು ತಾಂ ಸೇನಾಂ ಮಾಧುರೀಂ ಪುತ್ರಯೋರ್ದ್ವಯೋಃ ।
ಧನಂ ಚ ಯುಕ್ತಂ ಕೃತ್ವಾ ವೈ ಸ್ಥಾಪಯಾಮಾಸ ಪಾರ್ಥಿವಃ ॥
ಅನುವಾದ
ಸುಬಾಹು ಮಧುರಾಜನನ್ನು ಪಡೆದನು ಮತ್ತು ಶತ್ರುಘಾತಿಯು ವಿದಿಶಾ ಪಡೆದುಕೊಂಡನು. ಮಧುರೆಯ ಸೈನ್ಯವನ್ನು ಎರಡು ಭಾಗ ಮಾಡಿ ಶತ್ರುಘ್ನನು ಇಬ್ಬರೂ ಪುತ್ರರಿಗೆ ಹಂಚಿದನು ಹಾಗೂ ಪಾಲು ಮಾಡಲು ಯೋಗ್ಯವಾದ ಧನವನ್ನು ವಿಭಾಜಿಸಿ ಇಬ್ಬರಿಗೂ ಕೊಟ್ಟನು ಮತ್ತು ಅವರನ್ನು ತಮ್ಮ- ತಮ್ಮ ರಾಜಧಾನಿಗಳಲ್ಲಿ ಸ್ಥಾಪಿಸಿದನು.॥10॥
ಮೂಲಮ್ - 11
ಸುಬಾಹುಂ ಮಧುರಾಯಾಂ ಚ ವೈದಿಶೇ ಶತ್ರುಘಾತಿನಮ್ ।
ಯಯೌ ಸ್ಥಾಪ್ಯ ತದಾಯೋಧ್ಯಾಂ ರಥೇನೈಕೇನ ರಾಘವಃ ॥
ಅನುವಾದ
ಹೀಗೆ ಸುಬಾಹುವನ್ನು ಮಧುರಾದಲ್ಲಿ ಹಾಗೂ ಶತ್ರುಘಾತಿಯನ್ನು ವಿದಿಶಾದಲ್ಲಿ ಸ್ಥಾಪಿಸಿ, ಶತ್ರುಘ್ನನು ಏಕಮಾತ್ರ ರಥದ ಮೂಲಕ ಅಯೋಧ್ಯೆಗೆ ಪ್ರಯಾಣಿಸಿದನು.॥11॥
ಮೂಲಮ್ - 12
ಸ ದದರ್ಶ ಮಹಾತ್ಮಾನಂ ಜ್ವಲಂತವಿಮ ಪಾವಕಮ್ ।
ಸೂಕ್ಷ್ಮ ಕ್ಷೌಮಾಂಬರಧರಂ ಮುನಿಭಿಃ ಸಾರ್ಧಮಕ್ಷಯೈಃ ॥
ಅನುವಾದ
ಅಲ್ಲಿಗೆ ಹೋಗಿ ಮಹಾತ್ಮಾ ಶ್ರೀರಾಮನು ತನ್ನ ತೇಜದಿಂದ ಪ್ರಜ್ವಲಿತ ಅಗ್ನಿಯಂತೆ ಬೆಳಗುತ್ತಿರುವುದನ್ನು ಶತ್ರುಘ್ನನು ನೋಡಿದನು. ಅವನ ಶರೀರದಲ್ಲಿ ನಯವಾದ ರೇಶ್ಮೆವಸ್ತ್ರ ಶೋಭಿಸುತ್ತಿತ್ತು ಹಾಗೂ ಅವನು ಅವಿನಾಶೀ ಮಹರ್ಷಿಗಳೊಂದಿಗೆ ವಿರಾಜಿಸುತ್ತಿದ್ದನು.॥12॥
ಮೂಲಮ್ - 13
ಸೋಭಿವಾದ್ಯ ತತೋ ರಾಮಂ ಪ್ರಾಂಜಲಿಃ ಪ್ರಯತೇಂದ್ರಿಯಃ ।
ಉವಾಚ ವಾಕ್ಯಂ ಧರ್ಮಜ್ಞಂ ಧರ್ಮಮೇವಾನುಚಿಂತಯನ್ ॥
ಅನುವಾದ
ಬಳಿಗೆ ಹೋಗಿ ಕೈಮುಗಿದು ಶ್ರೀರಾಮನಿಗೆ ಪ್ರಣಾಮ ಮಾಡಿ, ಧರ್ಮವನ್ನು ಚಿಂತಿಸುತ್ತಾ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು ಅವನು ಧರ್ಮಜ್ಞನಾದ ಶ್ರೀರಘುನಾಥನಲ್ಲಿ ಹೇಳಿದನು.॥13॥
ಮೂಲಮ್ - 14
ಕೃತ್ವಾಭಿಷೇಕಂ ಸುತಯೋರ್ದ್ವಯೋ ರಾಘವನಂದನ ।
ತವಾನುಗಮನೇ ರಾಜನ್ವಿದ್ಧಿ ಮಾಂ ಕೃತನಿಶ್ಚಯಮ್ ॥
ಅನುವಾದ
ರಘುಕುಲನಂದನ! ನಾನು ನನ್ನ ಎರಡೂ ಪುತ್ರರ ಪಟ್ಟಾಭಿಷೇಕ ಮಾಡಿ ಬಂದಿರುವೆನು. ನೀನು ನನ್ನನ್ನು ನಿನ್ನ ಜೊತೆಗೆ ಕರೆದುಕೊಂಡು ಹೋಗಲು ನಿಶ್ಚಯಿಸು.॥14॥
ಮೂಲಮ್ - 15
ನ ಚಾನ್ಯದದ್ಯವಕ್ತವ್ಯಮತೋ ವೀರ ನ ಶಾಸನಮ್ ।
ವಿಹನ್ಯಮಾನಮಿಚ್ಛಾಮಿ ಮದ್ವಿಧೇನ ವಿಶೇಷತಃ ॥
ಅನುವಾದ
ವೀರನೇ! ಇಂದು ಇದಕ್ಕೆ ವಿಪರೀತವಾಗಿ ಏನೂ ಹೇಳಬೇಡ; ಏಕೆಂದರೆ ಇದಕ್ಕಿಂತ ಮಿಗಿಲಾಗಿ ನನಗೆ ದಂಡನೆ ಬೇರೆನಿಲ್ಲ. ವಿಶೇಷವಾಗಿ ನನ್ನಂತಹ ಸೇವಕನಿಂದ ನಿನ್ನ ಆಜ್ಞೆಯ ಉಲ್ಲಂಘನೆ ಆಗದಿರಲಿ.॥15॥
ಮೂಲಮ್ - 16
ತಸ್ಯ ತಾಂ ಬುದ್ಧಿಮಕ್ಲೀಬಾಂವಿಜ್ಞಾಯ ರಘುನಂದನಃ ।
ಬಾಢಮಿತ್ಯೇವ ಶತ್ರುಘ್ನಂ ರಾಮೋ ವಾಕ್ಯಮುವಾಚ ಹ ॥
ಅನುವಾದ
ಶತ್ರುಘ್ನನ ಈ ದೃಢ ವಿಚಾರ ತಿಳಿದು ರಘುನಂದನನು ಅವನಲ್ಲಿ ಸರಿ, ಹಾಗೆಯೇ ಆಗಲಿ ಎಂದು ಹೇಳಿದನು.॥16॥
ಮೂಲಮ್ - 17
ತಸ್ಯ ವಾಕ್ಯಸ್ಯ ವಾಕ್ಯಾಂತೇವಾನರಾಃ ಕಾಮರೂಪಿಣಃ ।
ಋಕ್ಷರಾಕ್ಷಸಸಂಘಾಶ್ಚ ಸಮಾಪೇತುರನೇಕಶಃ ॥
ಅನುವಾದ
ಅವನ ಮಾತು ಮುಗಿಯುವಷ್ಟರಲ್ಲಿ ಕಾಮರೂಪಿಗಳಾದ ವಾನರರು, ಕರಡಿಗಳು, ರಾಕ್ಷಸ ಸಮುದಾಯ ಬಹಳ ಸಂಖ್ಯೆಯಲ್ಲಿ ಅಲ್ಲಿಗೆ ಆಗಮಿಸಿದರು.॥17॥
ಮೂಲಮ್ - 18
ಸುಗ್ರೀವಂ ತೇ ಪುರಸ್ಕೃತ್ಯ ಸರ್ವ ಏವ ಸಮಾಗತಾಃ ।
ತಂ ರಾಮಂ ದ್ರಷ್ಟುಮನಸಃ ಸ್ವರ್ಗಾಯಾಭಿಮುಖಂ ಸ್ಥಿತಮ್ ॥
ಅನುವಾದ
ಸಾಕೇತ ಧಾಮಕ್ಕೆ ಹೋಗಲು ಉದ್ಯುಕ್ತರಾದ ಶ್ರೀರಾಮನ ದರ್ಶನದ ಇಚ್ಛೆಯಿಂದ ಎಲ್ಲ ವಾನರರು ಸುಗ್ರೀವನನ್ನು ಮುಂದಾಳಾಗಿಸಿ ಅಲ್ಲಿಗೆ ಬಂದಿದ್ದರು.॥18॥
ಮೂಲಮ್ - 19½
ದೇವಪುತ್ರಾ ಋಷಿಸುತಾ ಗಂಧರ್ವಾಣಾಂ ಸುತಾಸ್ತಥಾ ।
ರಾಮಕ್ಷಯಂ ವಿದಿತ್ವಾ ತೇ ಸರ್ವ ಏವ ಸಮಾಗತಾಃ ॥
ತೇ ರಾಮಮಭಿವಾದ್ಯೋಚುಃ ಸರ್ವೇ ವಾನರರಾಕ್ಷಸಾಃ ।
ಅನುವಾದ
ಅವರಲ್ಲಿ ಎಷ್ಟೋ ಮಂದಿ ದೇವತೆಗಳ ಪುತ್ರರಾಗಿದ್ದರು, ಕೆಲವರು ಋಷಿಗಳ ಬಾಲಕರಾಗಿದ್ದರು, ಕೆಲವರು ಗಂಧರ್ವರಿಂದ ಉತ್ಪನ್ನರಾಗಿದ್ದರು. ಶ್ರೀರಘುನಾಥನ ಲೀಲಾ ಸಂವರಣದ ಸಮಯವನ್ನು ಅರಿತು ಅವರೆಲ್ಲರೂ ಅಲ್ಲಿಗೆ ಬಂದಿದ್ದರು. ಎಲ್ಲ ವಾನರರು, ರಾಕ್ಷಸರು ಶ್ರೀರಾಮನನ್ನು ವಂದಿಸಿ ಹೇಳಿದರು .॥19½॥
ಮೂಲಮ್ - 20
ತವಾನುಗಮನೇ ರಾಜನ್ ಸಂಪ್ರಾಪ್ತಾಃ ಸ್ಮ ಸಮಾಗತಾಃ ॥
ಮೂಲಮ್ - 21
ಯದಿ ರಾಮ ವಿನಾಸ್ಮಾಭಿರ್ಗಚ್ಛೇಸ್ತ್ವಂ ಪುರುಷೋತ್ತಮ ।
ಯಮದಂಡಮಿವೋದ್ಯಮ್ಯ ತ್ವಯಾ ಸ್ಮ ವಿನಿಪಾತಿತಾಃ ॥
ಅನುವಾದ
ರಾಜಾ! ನಾವೂ ನಿಮ್ಮೊಂದಿಗೆ ಹೋಗಲು ನಿಶ್ಚಯ ಮಾಡಿಯೇ ಇಲ್ಲಿಗೆ ಬಂದಿರುವೆವು. ಪುರುಷೋತ್ತಮನು ಶ್ರೀರಾಮಾ! ನೀವು ನಮ್ಮನ್ನು ಜೊತೆಗೆ ಕರೆದುಕೊಂಡು ಹೋಗದಿದ್ದರೆ, ನೀವು ಯಮದಂಡವನ್ನೆತ್ತಿ ನಮ್ಮನ್ನು ಹೊಡೆದುರುಳಿಸಿದೆ ಎಂದೇ ನಾವು ತಿಳಿಯುವೆವು.॥20-21॥
ಮೂಲಮ್ - 22
ಏತಸ್ಮಿನ್ನಂತರೇ ರಾಮಂ ಸುಗ್ರೀವೋಽಪಿ ಮಹಾಬಲಃ ।
ಪ್ರಣಮ್ಯ ವಿಧಿವದ್ವೀರಂ ವಿಜ್ಞಾಪಯಿತುಮುದ್ಯತಃ ॥
ಅನುವಾದ
ಅಷ್ಟರಲ್ಲಿ ಮಹಾಬಲೀ ಸುಗ್ರೀವನೂ ವೀರ ಶ್ರೀರಾಮನಿಗೆ ವಿಧಿವತ್ತಾಗಿ ನಮಸ್ಕರಿಸಿ, ತನ್ನ ಅಭಿಪ್ರಾಯವನ್ನು ನಿವೇದಿಸಲು ತೊಡಗಿದನು.॥22॥
ಮೂಲಮ್ - 23
ಅಭಿಷಿಚ್ಯಾಂಗದಂ ವೀರಮಾಗತೋಽಸ್ಮಿ ನರೇಶ್ವರ ।
ತವಾನುಗಮನೇ ರಾಜನ್ವಿದ್ಧಿ ಮಾಂ ಕೃತನಿಶ್ಚಯಮ್ ॥
ಅನುವಾದ
ನರೇಶ್ವರ! ನಾನು ವೀರ ಅಂಗದನಿಗೆ ಪಟ್ಟಾಭಿಷೇಕ ಮಾಡಿ ಬಂದಿರುವೆನು. ನಿಮ್ಮೊಂದಿಗೆ ಬರಲು ನನ್ನ ದೃಢನಿಶ್ಚಯವೆಂದು ತಿಳಿಯಿರಿ.॥23॥
ಮೂಲಮ್ - 24
ತಸ್ಯ ತದ್ವಚನಂ ಶ್ರುತ್ವಾ ರಾಮೋ ರಮಯತಾಂ ವರಃ ।
ವಾನರೇಂದ್ರಮಥೋವಾಚ ಮೈತ್ರಂ ತಸ್ಯಾನುಚಿಂತಯನ್ ॥
ಅನುವಾದ
ಅವನ ಮಾತನ್ನು ಕೇಳಿ ಮನಸ್ಸನ್ನು ರಮಿಸುವ ಪುರುಷಶ್ರೇಷ್ಠ ಶ್ರೀರಾಮನು ವಾನರರಾಜ ಸುಗ್ರೀವನ ಮಿತ್ರತೆಯ ಬಗ್ಗೆ ವಿಚಾರಮಾಡಿ ಅವನಲ್ಲಿ ಹೇಳಿದನು .॥24॥
ಮೂಲಮ್ - 25
ಸಖೇಶೃಣುಷ್ವ ಸುಗ್ರೀವ ನ ತ್ವಯಾಹಂ ವಿನಾಕೃತಃ ।
ಗಚ್ಛೇಯಂ ದೇವಲೋಕಂ ವಾ ಪರಮಂ ವಾ ಪದಂ ಮಹತ್ ॥
ಅನುವಾದ
ಸಖನಾದ ಸುಗ್ರೀವನೇ! ನನ್ನ ಮಾತನ್ನು ಕೇಳಿರಿ. ನಾನು ನಿನ್ನನ್ನು ಬಿಟ್ಟು ದೇವಲೋಕಕ್ಕೆ, ಮಹಾನ್ ಪರಮ ಪದಕ್ಕೆ ಅಥವಾ ಪರಮಧಾಮಕ್ಕೆ ಹೋಗಲಾರೆನು.॥25॥
ಮೂಲಮ್ - 26
ತೈರೇವಮುಕ್ತಃ ಕಾಕುತ್ಸ್ಥೋ ಬಾಢಮಿತ್ಯಬ್ರವೀತ್ ಸ್ಮಯನ್ ।
ವಿಭೀಷಣಮಥೋವಾಚ ರಾಕ್ಷಸೇಂದ್ರಂಮಹಾಯಶಾಃ ॥
ಅನುವಾದ
ವಾನರರ ಮತ್ತು ರಾಕ್ಷಸರ ಮಾತನ್ನು ಕೇಳಿ ಮಹಾ ಯಶಸ್ವೀ ಶ್ರೀರಘುನಾಥನು ‘ಹಾಗೆಯೇ ಆಗಲಿ’ ಎಂದು ಹೇಳಿ ಮುಗುಳ್ನಕ್ಕು ರಾಕ್ಷಸರಾಜಾ ವಿಭೀಷಣನಲ್ಲಿ ಹೇಳಿದನು.॥26॥
ಮೂಲಮ್ - 27
ಯಾವತ್ಪ್ರಜಾ ಧರಿಷ್ಯಂತಿ ತಾವತ್ತ್ವಂ ವೈ ವಿಭೀಷಣ ।
ರಾಕ್ಷಸೇಂದ್ರ ಮಹಾವೀರ್ಯ ಲಂಕಾಸ್ಥಃಸ್ವಂ ಧರಿಷ್ಯಸಿ ॥
ಅನುವಾದ
ಮಹಾಪರಾಕ್ರಮಿ ರಾಕ್ಷಸರಾಜ ವಿಭೀಷಣನೇ! ಜಗತ್ತಿನ ಪ್ರಜೆ ಜೀವಿಸಿ ಇರುವವರೆಗೆ, ನೀನೂ ಲಂಕೆಯಲ್ಲಿ ಇದ್ದು ತನ್ನ ಶರೀರವನ್ನು ಧರಿಸಿ ಇರು.॥27॥
ಮೂಲಮ್ - 28
ಯಾವಚ್ಚಂದ್ರಶ್ಚ ಸೂರ್ಯಶ್ಚಯಾವತ್ತಿಷ್ಠತಿ ಮೇದಿನೀ ।
ಯಾವಚ್ಚ ಮತ್ಕಥಾ ಲೋಕೇ ತಾವದ್ರಾಜ್ಯಂ ತವಾಸ್ತ್ವಿಹ ॥
ಅನುವಾದ
ಚಂದ್ರ-ಸೂರ್ಯರು ಇರುವತನಕ, ಪೃಥಿವಿ ಇರುವ ತನಕ, ಪ್ರಪಂಚದಲ್ಲಿ ನನ್ನ ಕಥೆ ಪ್ರಚಲಿತ ಇರುವವರೆಗೆ ಈ ಭೂತಳದಲ್ಲಿ ನಿನ್ನ ರಾಜ್ಯ ಇರುವುದು.॥28॥
ಮೂಲಮ್ - 29
ಶಾಸಿತಶ್ಚ ಸಖಿತ್ವೇನ ಕಾರ್ಯಂ ತೇ ಮಮ ಶಾಸನಮ್ ।
ಪ್ರಜಾಃ ಸಂರಕ್ಷ ಧರ್ಮೇಣ ನೋತ್ತರಂ ವಕ್ತುಮರ್ಹಸಿ ॥
ಅನುವಾದ
ನಾನು ಮಿತ್ರಭಾವದಿಂದ ಇದನ್ನು ನಿನ್ನಲ್ಲಿ ಹೇಳಿದ್ದೇನೆ. ನೀನು ನನ್ನ ಆಜ್ಞೆಯನ್ನು ಪಾಲಿಸಬೇಕು. ನೀನು ಧರ್ಮಪೂರ್ವಕ ಪ್ರಜೆಯನ್ನು ರಕ್ಷಿಸು. ಈಗ ನಾನು ಹೇಳಿದುದನ್ನು ವಿರೋಧಿಸಬಾರದು.॥29॥
ಮೂಲಮ್ - 30½
ಕಿಂಚಾನ್ಯದ್ವಕ್ತುಮಿಚ್ಛಾಮಿ ರಾಕ್ಷಸೇಂದ್ರ ಮಹಾಬಲ ।
ಆರಾಧಯ ಜಗನ್ನಾಥಮಿಕ್ಷ್ವಾಕುಕುಲದೈವತಮ್ ॥
ಆರಾಧನೀಯಮನಿಶಂ ದೇವೈರಪಿ ಸವಾಸವೈಃ ।
ಅನುವಾದ
ಮಹಾಬಲೀ ರಾಕ್ಷಸರಾಜನೇ! ಇದಲ್ಲದೆ ನಾನು ನಿನಗೆ ಇನ್ನೊಂದು ಮಾತು ಹೇಳಲು ಬಯಸುವೆನು. ನಮ್ಮ ಇಕ್ಷ್ವಾಕುಕುಲದ ದೇವತೆ ಭಗವಾನ್ ಜಗನ್ನಾಥನು. (ಶ್ರೀಶೇಷಶಾಯಿ ಭಗವಾನ್ ವಿಷ್ಣು). ಇಂದ್ರಾದಿ ದೇವತೆಗಳೂ ಅವನನ್ನು ನಿರಂತರ ಆರಾಧನೆ ಮಾಡುತ್ತಾರೆ. ನೀನೂ ಸದಾ ಅವರ ಪೂಜೆ ಮಾಡುತ್ತಾ ಇರು.॥30½॥
ಮೂಲಮ್ - 31½
ತಥೇತಿ ಪ್ರತಿಜಗ್ರಾಹ ರಾಮವಾಕ್ಯಂ ವಿಭೀಷಣಃ ॥
ರಾಜಾ ರಾಕ್ಷಸಮುಖ್ಯಾನಾಂ ರಾಘವಾಜ್ಞಾಮನುಸ್ಮರನ್ ।
ಅನುವಾದ
ರಾಕ್ಷಸರಾಜ ವಿಭೀಷಣನು ರಘುನಾಥನ ಈ ಆಜ್ಞೆಯನ್ನು ಶಿರಸಾ ವಹಿಸಿಕೊಂಡು ‘ಹಾಗೆಯೇ ಆಗಲಿ’ ಎಂದು ಹೇಳಿ ಸ್ವೀಕರಿಸಿದನು.॥31½॥
ಮೂಲಮ್ - 32½
ತಮೇವಮುಕ್ತ್ವಾ ಕಾಕುತ್ಸ್ಥೋ ಹನೂಮಂತಮಥಾಬ್ರವೀತ್ ॥
ಜೀವಿತೇ ಕೃತಬುದ್ಧಿಸ್ತ್ವಂ ಮಾ ಪ್ರತಿಜ್ಞಾಂವೃಥಾಕೃಥಾಃ ।
ಅನುವಾದ
ವಿಭೀಷಣನಲ್ಲಿ ಹೀಗೆ ಹೇಳಿ ಶ್ರೀರಾಮನು ಹನುಮಂತನಲ್ಲಿ ಹೇಳಿದನು- ನೀನು ದೀರ್ಘಕಾಲ ಜೀವಿಸಿ ಇರಲು ನಿಶ್ಚಯಿಸಿರುವೆ. ನಿನ್ನ ಈ ಪ್ರತಿಜ್ಞೆಯನ್ನು ವ್ಯರ್ಥಗೊಳಿಸಬೇಡ.॥32½॥
ಮೂಲಮ್ - 33½
ಮತ್ಕಥಾಃ ಪ್ರಚರಿಷ್ಯಂತಿ ಯಾವಲ್ಲೋಕೇ ಹರೀಶ್ವರ ॥
ತಾವದ್ರಮಸ್ವ ಸುಪ್ರೀತೋ ಮದ್ವಾಕ್ಯಮನುಪಾಲಯನ್ ।
ಅನುವಾದ
ಹರೀಶ್ವರ! ಜಗತ್ತಿನಲ್ಲಿ ನನ್ನ ಕಥೆಗಳು ಪ್ರಚಾರ ಇರುವತನಕ ನೀನೂ ನನ್ನ ಆಜ್ಞೆಯನ್ನು ಪಾಲಿಸುತ್ತಾ ಸಂತೋಷವಾಗಿ ಸಂಚರಿಸುತ್ತಾ ಇರು.॥33½॥
ಮೂಲಮ್ - 34½
ಏವಮುಕ್ತಸ್ತು ಹನುಮಾನ್ರಾಘವೇಣ ಮಹಾತ್ಮನಾ ॥
ವಾಕ್ಯಂ ವಿಜ್ಞಾಪಯಾಮಾಸ ಪರಂ ಹರ್ಷಮವಾಪ ಚ ।
ಅನುವಾದ
ಮಹಾತ್ಮಾ ಶ್ರೀರಘುನಾಥನು ಹೀಗೆ ಹೇಳಿದಾಗ ಹನುಮಂತನಿಗೆ ಬಹಳ ಹರ್ಷವಾಗಿ ಹೀಗೆ ಹೇಳಿದನು.॥34½॥
ಮೂಲಮ್ - 35½
ಯಾವತ್ತವ ಕಥಾ ಲೋಕೇ ವಿಚರಿಷ್ಯತಿ ಪಾವನೀ ॥
ತಾವತ್ಸ್ಥಾಸ್ಯಾಮಿ ಮೇದಿನ್ಯಾಂ ತವಾಜ್ಞಾಮನುಪಾಲಯನ್ ।
ಅನುವಾದ
ಭಗವಂತಾ! ಪ್ರಪಂಚದಲ್ಲಿ ನಿನ್ನ ಪಾವನ ಕಥೆಯ ಪ್ರಚಾರ ಇರುವತನಕ, ನಿನ್ನ ಆದೇಶವನ್ನು ಪಾಲಿಸುತ್ತಾ ನಾನು ಈ ಭೂಮಂಡಲದಲ್ಲಿ ಇರುವೆನು.॥35½॥
ಮೂಲಮ್ - 36
ಜಾಂಬವಂತಂ ತಥೋಕ್ತ್ವಾತು ವೃದ್ಧಂ ಬ್ರಹ್ಮಸುತಂತದಾ ॥
ಮೂಲಮ್ - 37
ಮೈಂದಂ ಚ ದ್ವಿವಿದಂ ಚೈವಪಂಚ ಜಾಂಬವತಾ ಸಹ ।
ಯಾವತ್ಕಲಿಶ್ಚ ಸಂಪ್ರಾಪ್ತಸ್ತಾವಜ್ಜೀವತ ಸರ್ವದಾ ॥
ಅನುವಾದ
ಬಳಿಕ ಶ್ರೀರಾಮನು ಬ್ರಹ್ಮದೇವರ ಪುತ್ರ ವೃದ್ಧ ಜಾಂಬವಂತ ಹಾಗೂ ಮೈಂದ - ದ್ವಿವಿದರಲ್ಲಿ ಹೇಳಿದನು-ಜಾಂಬವಂತ ಸಹಿತ ನೀವು ಐದು ಮಂದಿಗಳೂ (ಜಾಂಬವಂತ, ವಿಭೀಷಣ, ಹನುಮಂತ, ಮೈಂದ, ದ್ವಿವಿದ) ಪ್ರಳಯ ಮತ್ತು ಕಲಿಯುಗ ಬರುವವರೆಗೆ ಜೀವಿತರಾಗಿರಿ. ಇವರಲ್ಲಿ ಹನುಮಂತ ಮತ್ತು ವಿಭೀಷಣರಾದರೋ ಪ್ರಳಯಕಾಲದವರೆಗೆ ಉಳಿಯುವರು. ಉಳಿದ ಮೂವರು ಕಲಿ ಮತ್ತು ದ್ವಾಪರದ ಸಂಧಿಕಾಲದಲ್ಲಿ ಶ್ರೀಕೃಷ್ಣಾವತಾರದ ಸಮಯ ಹತರಾದರು.॥36-37॥
ಮೂಲಮ್ - 38
ತಾನೇವಮುಕ್ತ್ವಾ ಕಾಕುತ್ಸ್ಥಃ ಸರ್ವಾಂಸ್ತಾನೃಕ್ಷವಾನರಾನ್ ।
ಉವಾಚ ಬಾಢಂ ಗಚ್ಛಧ್ವಂ ಮಯಾ ಸಾರ್ಧಂಯಥೋದಿತಮ್ ॥
ಅನುವಾದ
ಅವರೆಲ್ಲರಲ್ಲಿ ಹೀಗೆ ಹೇಳಿ ಶ್ರೀರಘುನಾಥನು ಉಳಿದ ಎಲ್ಲ ಕರಡಿ-ವಾನರರಿಗೆ ಹೇಳಿದನು. ಬಹಳ ಒಳ್ಳೆಯದು, ನಿಮ್ಮ ಮಾತು ನನಗೆ ಸ್ವೀಕಾರಾರ್ಹವಾಗಿದೆ. ನೀವೆಲ್ಲರೂ ನೀವು ಹೇಳಿದಂತೆ ನನ್ನೊಂದಿಗೆ ನಡೆಯಿರಿ.॥38॥
ಮೂಲಮ್ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ನೂರಎಂಟನೆಯ ಸರ್ಗ ಪೂರ್ಣವಾಯಿತು. ॥108॥