[ನೂರ ಏಳನೆಯ ಸರ್ಗ]
ಭಾಗಸೂಚನಾ
ವಸಿಷ್ಠರ ಸಲಹೆಯಂತೆ ಶ್ರೀರಾಮನು ಪುರವಾಸಿಗಳನ್ನು ಜೊತೆಗೆ ಕರೆದೊಯ್ಯಲು ವಿಚಾರ ಮಾಡಿ, ಕುಶ-ಲವರಿಗೆ ಪಟ್ಟಾಭಿಷೇಕ ಮಾಡಿದುದು
ಮೂಲಮ್ - 1
ವಿಸೃಜ್ಯ ಲಕ್ಷ್ಮಣಂ ರಾಮೋ ದುಃಖಶೋಕ ಸಮನ್ವಿತಃ ।
ಪುರೋಧಸಂ ಮಂತ್ರಿಣಶ್ಚ ನೈಗಮಾಂಶ್ಚೇದಮಬ್ರವೀತ್ ॥
ಅನುವಾದ
ಲಕ್ಷ್ಮಣನನ್ನು ಪರಿತ್ಯಜಿಸಿ ಶ್ರೀರಾಮನು ದುಃಖಶೋಕ ಮಗ್ನನಾದನು ಹಾಗೂ ಪುರೋಹಿತ, ಮಂತ್ರಿ ಮತ್ತು ಮಹಾಜನರಲ್ಲಿ ಇಂತೆಂದನು.॥1॥
ಮೂಲಮ್ - 2
ಅದ್ಯ ರಾಜ್ಯೇಽಭಿಷೇಕ್ಷ್ಯಾಮಿ ಭರತಂ ಧರ್ಮವತ್ಸಲಮ್ ।
ಅಯೋಧ್ಯಾಯಾಃ ಪತಿಂ ವೀರಂ ತತೋ ಯಾಸ್ಯಾಮ್ಯಹಂ ವನಮ್ ॥
ಅನುವಾದ
ಇಂದು ನಾನು ಅಯೋಧ್ಯೆಯ ರಾಜ್ಯಕ್ಕೆ ಧರ್ಮವತ್ಸಲ ವೀರ ತಮ್ಮನಾದ ಭರತನನ್ನು ರಾಜನಾಗಿ ಪಟ್ಟಾಭಿಷೇಕ ಮಾಡುವೆನು. ಬಳಿಕ ವನಕ್ಕೆ ಹೊರಟು ಹೋಗುವೆನು.॥2॥
ಮೂಲಮ್ - 3
ಪ್ರವೇಶಯತ ಸಂಭಾರಾನ್ಮಾ ಭೂತ್ಕಾಲಾತ್ಯಯೋ ಯಥಾ ।
ಅದ್ಯೈವಾಹಂ ಗಮಿಷ್ಯಾಮಿ ಲಕ್ಷ್ಮಣೇನ ಗತಾಂಗತಿಮ್ ॥
ಅನುವಾದ
ಬೇಗನೇ ಎಲ್ಲ ಸಾಮಗ್ರಿಗಳನ್ನು ಸಿದ್ಧಗೊಳಿಸಿರಿ, ಈಗ ಹೆಚ್ಚು ಸಮಯ ಕಳೆಯಬಾರದು. ನಾನು ಇಂದೇ ಲಕ್ಷ್ಮಣನ ಮಾರ್ಗವನ್ನೇ ಅನುಸರಿಸುವೆನು.॥3॥
ಮೂಲಮ್ - 4
ತಚ್ಛ್ರುತ್ವಾ ರಾಘವೇಣೋಕ್ತಂ ಸರ್ವಾಃ ಪ್ರಕೃತಯೋ ಭೃಶಮ್ ।
ಮೂರ್ಧಭಿಃ ಪ್ರಣತಾ ಭೂಮೌ ಗತಸತ್ತ್ವಾ ಇವಾಭವನ್ ॥
ಅನುವಾದ
ಶ್ರೀರಾಮಚಂದ್ರನ ಮಾತನ್ನು ಕೇಳಿ ಪ್ರಜಾವರ್ಗದ ಎಲ್ಲ ಜನರು ಸಾಷ್ಟಾಂಗ ನಮಸ್ಕರಿಸಿ ಪ್ರಾಣಹೀನರಂತಾದರು.॥4॥
ಮೂಲಮ್ - 5
ಭರತಶ್ಚ ವಿಸಂಜ್ಞೋಽಭೂಚ್ಛ್ರುತ್ವಾ ರಾಘವಭಾಷಿತಮ್ ।
ರಾಜ್ಯಂ ವಿಗರ್ಹಯಾಮಾಸ ವಚನಂ ಚೇದಮಬ್ರವೀತ್ ॥
ಅನುವಾದ
ಶ್ರೀರಘುನಾಥನ ಮಾತನ್ನು ಕೇಳಿ ಭರತನು ಮೂರ್ಛಿತನಾದನು. ಮತ್ತೆ ಎಚ್ಚರಗೊಂಡು ರಾಜ್ಯಪದವಿಯನ್ನು ನಿಂದಿಸುತ್ತಾ ಹೀಗೆ ಹೇಳಿದನು.॥5॥
ಮೂಲಮ್ - 6
ಸತ್ಯೇನಾಹಂ ಶಪೇ ರಾಜನ್ ಸ್ವರ್ಗಭೋಗೇನಚೈವ ಹಿ ।
ನ ಕಾಮಯೇ ಯಥಾ ರಾಜ್ಯಂ ತ್ವಾಂ ವಿನಾ ರಘುನಂದನ ॥
ಅನುವಾದ
ರಾಜಾ ರಘುನಂದನ! ನಾನು ಸತ್ಯದ ಮೇಲೆ ಆಣೆಯಿಟ್ಟು ಹೇಳುತ್ತೇನೆ- ನೀನಿಲ್ಲದೆ ನನಗೆ ರಾಜ್ಯವಾಗಲೀ, ಸ್ವರ್ಗಭೋಗವಾಗಲೀ ಬೇಕಾಗಿಲ್ಲ.॥6॥
ಮೂಲಮ್ - 7
ಇವೌ ಕುಶೀಲವೌ ರಾಜನ್ನಭಿಷಿಚ್ಯ ನರಾಧಿಪ ।
ಕೋಸಲೇಷು ಕುಶಂ ವೀರಮುತ್ತರೇಷು ತಥಾ ಲವಮ್ ॥
ಅನುವಾದ
ನರೇಶ್ವರನೇ! ನೀನು ಈ ಲವ-ಕುಶರಿಗೆ ಪಟ್ಟಾಭಿಷೇಕ ಮಾಡು. ದಕ್ಷಿಣ ಕೋಸಲದಲ್ಲಿ ಕುಶನನ್ನು ಮತ್ತು ಉತ್ತರ ಕೋಸಲದಲ್ಲಿ ಲವನನ್ನು ರಾಜನನ್ನಾಗಿಸಿರಿ.॥7॥
ಮೂಲಮ್ - 8
ಶತ್ರುಘ್ನಸ್ಯ ತು ಗಚ್ಛಂತು ದೂತಾಸ್ತ್ವರಿತವಿಕ್ರಮಾಃ ।
ಇದಂ ಗಮನಮಸ್ಮಾಕಂ ಶೀಘ್ರಮಾಖ್ಯಾತು ಮಾ ಚಿರಮ್ ॥
ಅನುವಾದ
ವೇಗವಾಗಿ ಹೋಗುವ ದೂತರನ್ನು ಬೇಗನೇ ಕಳಿಸಿ ಶತ್ರುಘ್ನನ ಬಳಿಗೆ ಹೋಗಲಿ ಮತ್ತು ಅವನಿಗೆ ನಮ್ಮ ಮಹಾಯಾತ್ರೆಯ ವೃತ್ತಾಂತ ತಿಳಿಸಿರಿ. ಇದರಲ್ಲಿ ವಿಳಂಬಮಾಡಬಾರದು.॥8॥
ಮೂಲಮ್ - 9
ತಚ್ಛ್ರುತ್ವಾ ಭರತೇನೋಕ್ತಂ ದೃಷ್ಟ್ವಾ ಚಾಪಿ ಹ್ಯಧೋಮುಖಾನ್ ।
ಪೌರಾನ್ ದುಃಖೇನ ಸಂತಪ್ತಾನ್ವಸಿಷ್ಠೋ ವಾಕ್ಯಮಬ್ರವೀತ್ ॥
ಅನುವಾದ
ಭರತನ ಮಾತನ್ನು ಕೇಳಿ, ದುಃಖ ಸಂತಪ್ತರಾಗಿ ಅಧೋಮುಖರಾದ ಪುರವಾಸಿಗಳನ್ನು ನೋಡಿ, ಮಹರ್ಷಿ ವಸಿಷ್ಠರು ಹೇಳಿದರು.॥9॥
ಮೂಲಮ್ - 10
ವತ್ಸ ರಾಮ ಇಮಾಃ ಪಶ್ಯ ಧರಣೀಂ ಪ್ರಕೃತೀರ್ಗತಾಃ ।
ಜ್ಞಾತ್ವೈಷಾಮೀಪ್ಸಿತಂ ಕಾರ್ಯಂ ಮಾ ಚೈಷಾಂ ವಿಪ್ರಿಯಂ ಕೃಥಾಃ ॥
ಅನುವಾದ
ವತ್ಸ ರಾಮಾ! ಭೂಮಿಯಲ್ಲಿ ಬಿದ್ದಿರುವ ಈ ಪ್ರಜಾಜನರನ್ನು ನೋಡಿ. ಇವರ ಅಭಿಪ್ರಾಯವನ್ನು ತಿಳಿದು ಅದರಂತೆ ಕಾರ್ಯ ಮಾಡು. ಇವರ ಇಚ್ಛೆಗೆ ವಿರುದ್ಧವಾಗಿ ನಡೆದು ಬಡಪಾಯಿ ಇವರ ಮನಸ್ಸು ನೋಯಿಸಬೇಡ.॥10॥
ಮೂಲಮ್ - 11
ವಸಿಷ್ಠಸ್ಯ ತು ವಾಕ್ಯೇನ ಉತ್ಥಾಪ್ಯ ಪ್ರಕೃತೀಜನಮ್ ।
ಕಿಂ ಕರೋಮೀತಿ ಕಾಕುತ್ಸ್ಥಃ ಸರ್ವಾನ್ವಚನಮಬ್ರವೀತ್ ॥
ಅನುವಾದ
ವಸಿಷ್ಠರು ಹೇಳಿದಂತೆ ಶ್ರೀರಘುನಾಥನು ಪ್ರಜೆಗಳನ್ನು ಎಬ್ಬಿಸಿ, ಅವರಲ್ಲಿ ಕೇಳಿದನು- ನಾನು ನಿಮ್ಮ ಯಾವ ಕಾರ್ಯವನ್ನು ಸಿದ್ಧಗೊಳಿಸಲಿ.॥11॥
ಮೂಲಮ್ - 12
ತತಃ ಸರ್ವಾಃ ಪ್ರಕೃತಯೋ ರಾಮಂವಚನಮಬ್ರುವನ್ ।
ಗಚ್ಛಂತಮನುಗಚ್ಛಾಮೋ ಯತ್ರ ರಾಮ ಗಮಿಷ್ಯಸಿ ॥
ಅನುವಾದ
ಆಗ ಪ್ರಜಾಜನರೆಲ್ಲರೂ ಶ್ರೀರಾಮನಲ್ಲಿ ಹೇಳಿದರು- ರಘುನಂದನ! ನೀನು ಹೋಗುವಲ್ಲಿಗೆ ನಿಮ್ಮ ಹಿಂದೆ-ಹಿಂದೆಯೇ ನಾವೂ ಬರುವೆವು.॥12॥
ಮೂಲಮ್ - 13
ಪೌರೇಷು ಯದಿ ತೇ ಪ್ರೀತಿರ್ಯದಿ ಸ್ನೇಹೋ ಹ್ಯನುತ್ತಮಃ ।
ಸಪುತ್ರದಾರಾಃ ಕಾಕುತ್ಸ್ಥ ಸಮಂ ಗಚ್ಛಾಮ ಸತ್ಪಥಮ್ ॥
ಅನುವಾದ
ಕಾಕುತ್ಸ್ಥ! ನಿಮಗೆ ಪುರವಾಸಿಗಳಲ್ಲಿ ಪ್ರೇಮವಿದ್ದರೆ, ನಮ್ಮ ಮೇಲೆ ನಿಮಗೆ ಪರಮೋತ್ತಮ ಸ್ನೇಹ ಇದ್ದರೆ, ನಮ್ಮನ್ನು ಜೊತೆಗೆ ಬರಲು ಅಪ್ಪಣೆ ಕೊಡಿರಿ. ನಾವು ನಮ್ಮ ಪತ್ನೀ ಪುತ್ರರೊಂದಿಗೆ ನಿಮ್ಮ ಜೊತೆಗೆ ಸನ್ಮಾರ್ಗದಲ್ಲಿ ನಡೆಯಲು ಉದ್ಯುಕ್ತರಾಗಿದ್ದೇವೆ.॥13॥
ಮೂಲಮ್ - 14
ತಪೋವನಂ ವಾ ದುರ್ಗಂ ವಾ ನದೀಮಂಭೋನಿಧಿಂ ತಥಾ ।
ವಯಂ ತೇ ಯದಿ ನ ತ್ಯಾಜ್ಯಾಃ ಸರ್ವಾನ್ನೋ ನಯ ಈಶ್ವರ ॥
ಅನುವಾದ
ಸ್ವಾಮಿ! ನೀವು ತಪೋವನದಲ್ಲಾಗಲೀ, ಯಾವುದೋ ದುರ್ಗಮಸ್ಥಾನದಲ್ಲಾಗಲೀ, ನದಿ ಅಥವಾ ಸಮುದ್ರದಲ್ಲಾಗಲೀ ಎಲ್ಲಿಗೆ ಹೋದರೂ ನಮ್ಮೆಲ್ಲರನ್ನು ಕರೆದುಕೊಂಡು ಹೋಗಿರಿ. ನಮ್ಮನ್ನು ತ್ಯಜಿಸುವುದು ಯೋಗ್ಯವಲ್ಲವೆಂದು ತಿಳಿಯುವುದಾದರೆ ಹೀಗೆಯೇ ಮಾಡಿರಿ.॥14॥
ಮೂಲಮ್ - 15
ಏಷಾ ನಃ ಪರಮಾಪ್ರೀತಿರೇಷ ನಃ ಪರಮೋ ವರಃ ।
ಹೃದ್ಗತಾ ನಃ ಸದಾ ಪ್ರೀತಿಸ್ತವಾನುಗಮನೇ ನೃಪ ॥
ಅನುವಾದ
ಇದೇ ನಮ್ಮ ಮೇಲೆ ನಿಮ್ಮ ಎಲ್ಲಕ್ಕಿಂತ ದೊಡ್ಡ ಕೃಪೆಯಾಗಿದೆ ಮತ್ತು ಇದೇ ನಮಗಾಗಿ ನಿಮ್ಮ ಉತ್ತಮ ವರವಾಗಬಹುದು. ನಿಮ್ಮ ಹಿಂದೆಯೇ ನಡೆಯುವುದರಲ್ಲೇ ನಮಗೆ ಹಾರ್ದಿಕ ಪ್ರಸನ್ನತೆ ಆಗಬಹುದು.॥15॥
ಮೂಲಮ್ - 16
ಪೌರಾಣಾಂ ದೃಢಭಕ್ತಿಂ ಚ ಬಾಢಮಿತ್ಯೇವ ಸೋಽಬ್ರವೀತ್ ।
ಸ್ವಕೃತಾಂತಂ ಚಾನ್ವವೇಕ್ಷ್ಯ ತಸ್ಮಿನ್ನಹನಿ ರಾಘವಃ ॥
ಮೂಲಮ್ - 17
ಕೋಸಲೇಷು ಕುಶಂ ವೀರಮುತ್ತರೇಷು ತಥಾ ಲವಮ್ ।
ಅಭಿಷಿಚ್ಯ ಮಹಾತ್ಮಾನಾವುಭೌ ರಾಮಃ ಕುಶೀಲವೌ ॥
ಮೂಲಮ್ - 18
ಅಭಿಷಿಕ್ತೌ ಸುತಾವಂಕೇ ಪ್ರತಿಷ್ಠಾಪ್ಯ ಪುರೇ ತತಃ ।
ಪರಿಷ್ವಜ್ಯ ಮಹಾಬಾಹುರ್ಮೂರ್ಧ್ನ್ಯುಪಾಘ್ರಾಯ ಚಾಸಕೃತ್ ॥
ಅನುವಾದ
ಪ್ರಜಾಜನರ ಈ ದೃಢಭಕ್ತಿಯನ್ನು ನೋಡಿ ಶ್ರೀರಾಮನು ‘ಹಾಗೆಯೇ ಆಗಲಿ’ ಎಂದು ಹೇಳಿ ಅವರ ಇಚ್ಛೆಯನ್ನು ಅನುಮೋದಿಸಿದನು. ತನ್ನ ಕರ್ತವ್ಯವನ್ನು ನಿಶ್ಚಯಿಸಿ ಶ್ರೀರಘುನಾಥನು ತತ್ಕ್ಷಣ ದಕ್ಷಿಣ ಕೋಸದ ರಾಜ್ಯದಲ್ಲಿ ವೀರ ಕುಶನನ್ನು ಮತ್ತು ಉತ್ತರ ಕೋಸಲದ ರಾಜ ಸಿಂಹಾ ಸನದಲ್ಲಿ ಲವನನ್ನು ಪಟ್ಟಾಭಿಷೇಕ ಮಾಡಿದನು. ಅಭಿಷಿಕ್ತರಾದ ಇಬ್ಬರೂ ಮಹಾತ್ಮಾ ಪುತ್ರರಾದ ಕುಶ-ಲವರನ್ನು ತೊಡೆಯಲ್ಲಿ ಕುಳ್ಳಿರಿಸಿಕೊಂಡು ಪದೇ-ಪದೇ ಆಲಿಂಗಿಸಿಕೊಂಡು ಶ್ರೀರಾಮನು ಮತ್ತೆ-ಮತ್ತೆ ಅವರ ಶಿರವನ್ನು ಆಘ್ರಾಣಿಸಿ, ತಮ್ಮ-ತಮ್ಮ ರಾಜಧಾನಿಗಳಿಗೆ ಕಳಿಸಿಕೊಟ್ಟನು.॥16-18॥
ಮೂಲಮ್ - 19
ರಥಾನಾಂ ತು ಸಹಸ್ರಾಣಿ ನಾಗಾನಾಮಯುತಾನಿಚ ।
ದಶಾಯುತಾನಿ ಚಾಶ್ವಾನಾಮೇಕೈಕಸ್ಯ ಧನಂ ದದೌ ॥
ಅನುವಾದ
ಅವನು ಪ್ರತಿಯೊಬ್ಬ ಪುತ್ರರಿಗೆ ಅನೇಕ ಸಾವಿರ ರಥ, ಹತ್ತು ಸಾವಿರ ಆನೆ ಮತ್ತು ಒಂದು ಲಕ್ಷ ಕುದುರೆಗಳನ್ನು ಕೊಟ್ಟನು.॥19॥
ಮೂಲಮ್ - 20
ಬಹುರತ್ನೌ ಬಹುಧನೌ ಹೃಷ್ಟಪುಷ್ಟಜನಾವೃತೌ ।
ಸ್ವೇ ಪುರೇ ಪ್ರೇಷಯಾಮಾಸ ಭ್ರಾತರೌ ತೌ ಕುಶೀಲವೌ ॥
ಅನುವಾದ
ಲವ-ಕುಶರಿಬ್ಬರೂ ಹೇರಳ ಧನ-ರತ್ನಾದಿಗಳಿಂದ ಸಂಪನ್ನರಾದರು. ಅವರು ಹೃಷ್ಟ-ಪುಷ್ಟ ಮನುಷ್ಯರಿಂದ ಪರಿವೃತರಾಗಿರುತ್ತಿದ್ದರು. ಶ್ರೀರಾಮನು ಅವರಿಬ್ಬರನ್ನು ಅವರವರ ರಾಜಧಾನಿಗಳಿಗೆ ಕಳಿಸಿ ಕೊಟ್ಟನು.॥20॥
ಮೂಲಮ್ - 21
ಅಭಿಷಿಚ್ಯ ತತೋ ವೀರೌ ಪ್ರಸ್ಥಾಪ್ಯ ಸ್ವಪುರೇ ತದಾ ।
ದೂತಾನ್ಸಂಪ್ರೇಷಯಾಮಾಸ ಶತ್ರುಘ್ನಾಯ ಮಹಾತ್ಮನೇ ॥
ಅನುವಾದ
ಈ ಪ್ರಕಾರ ಇಬ್ಬರೂ ವೀರರನ್ನು ಅಭಿಷಿಕ್ತಗೊಳಿಸಿ, ತಮ್ಮ-ತಮ್ಮ ನಗರಗಳಿಗೆ ಕಳಿಸಿ ಶ್ರೀರಾಮನು ಮಹಾತ್ಮಾ ಶತ್ರುಘ್ನನ ಬಳಿಗೆ ದೂತರನ್ನು ಕಳಿಸಿದನು.॥21॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ನೂರಏಳನೆಯ ಸರ್ಗ ಪೂರ್ಣವಾಯಿತು. ॥107॥