[ನೂರ ಆರನೆಯ ಸರ್ಗ]
ಭಾಗಸೂಚನಾ
ಶ್ರೀರಾಮನು ತ್ಯಜಿಸಿದಾಗ ಲಕ್ಷ್ಮಣನು ಸಶರೀರವಾಗಿ ಸ್ವರ್ಗಗಮನ
ಮೂಲಮ್ - 1
ಅವಾಙ್ಮ್ಮುಖಮಥೋ ದೀನಂ ದೃಷ್ಟ್ವಾ ಸೋಮಮಿವಾಪ್ಲುತಮ್ ।
ರಾಘವಂ ಲಕ್ಷ್ಮಣೋ ವಾಕ್ಯಂ ಹೃಷ್ಟೋ ಮಧುರಮಬ್ರವೀತ್ ॥
ಅನುವಾದ
ಶ್ರೀರಾಮಚಂದ್ರನು ರಾಹುಗ್ರಸ್ತ ಚಂದ್ರನಂತೆ ದೀನನಾಗಿದ್ದನು, ಅವನು ತಲೆತಗ್ಗಿಸಿ ಖೇದಪಡುತ್ತಿರುವುದನ್ನು ನೋಡಿ ಲಕ್ಷ್ಮಣನು ಬಹಳ ಹರ್ಷದಿಂದ ಮಧುರವಾಣಿಯಿಂದ ಹೇಳಿದನು.॥1॥
ಮೂಲಮ್ - 2
ನ ಸಂತಾಪಂ ಮಹಾಬಾಹೋ ಮದರ್ಥಂಕರ್ತುಮರ್ಹಸಿ ।
ಪೂರ್ವನಿರ್ಮಾಣಬದ್ಧಾ ಹಿ ಕಾಲಸ್ಯ ಗತಿರೀದೃಶೀ ॥
ಅನುವಾದ
ಮಹಾಬಾಹೋ! ನೀನು ನನ್ನ ಕುರಿತು ಸಂತಾಪಪಡಬಾರದು; ಏಕೆಂದರೆ ಪೂರ್ವಜನ್ಮದ ಕರ್ಮಗಳಿಂದ ಬಂಧಿತವಾದ ಕಾಲದ ಗತಿ ಹೀಗೆಯೇ ಇರುತ್ತದೆ.॥2॥
ಮೂಲಮ್ - 3
ಜಹಿ ಮಾಂ ಸೌಮ್ಯ ವಿಸ್ರಬ್ಧಂ ಪ್ರತಿಜ್ಞಾಂ ಪರಿಪಾಲಯ ।
ಹೀನಪ್ರತಿಜ್ಞಾಃ ಕಾಕುತ್ಸ್ಥ ಪ್ರಯಾಂತಿ ನರಕಂನರಾಃ ॥
ಅನುವಾದ
ಸೌಮ್ಯ! ನೀನು ನಿಶ್ಚಿಂತನಾಗಿ ನನ್ನನ್ನು ವಧಿಸಿಬಿಡು. ಹೀಗೆ ಮಾಡಿ ತನ್ನ ಪ್ರತಿಜ್ಞೆಯನ್ನು ಪಾಲಿಸು. ಕಾಕುತ್ಸ್ಥ! ಪ್ರತಿಜ್ಞಾಭಂಗ ಮಾಡುವವನು ನರಕಕ್ಕೆ ಹೋಗುತ್ತಾನೆ.॥3॥
ಮೂಲಮ್ - 4
ಯದಿ ಪ್ರೀತಿರ್ಮಹಾರಾಜ ಯದ್ಯನುಗ್ರಾಹ್ಯತಾಮಯಿ ।
ಜಹಿ ಮಾಂ ನಿರ್ವಿಶಂಕಸ್ತ್ವಂ ಧರ್ಮಂ ವರ್ಧಯರಾಘವ ॥
ಅನುವಾದ
ಮಹಾರಾಜಾ! ನಿನಗೆ ನನ್ನ ಮೇಲೆ ಪ್ರೇಮವಿದ್ದರೆ, ನನ್ನನ್ನು ಕೃಪಾಪಾತ್ರನೆಂದು ನೀನು ತಿಳಿಯುವೆಯಾದರೆ ನಿಃಶಂಕನಾಗಿ ನನಗೆ ಮರಣದಂಡನೆಯನ್ನು ಕೊಡು. ರಘುನಂದನ! ನೀನು ನಿನ್ನ ಧರ್ಮವನ್ನು ವೃದ್ಧಿಗೊಳಿಸು.॥4॥
ಮೂಲಮ್ - 5
ಲಕ್ಷ್ಮಣೇನ ತಥೋಕ್ತಸ್ತು ರಾಮಃ ಪ್ರಚಲಿತೇಂದ್ರಿಯಃ ।
ಮಂತ್ರಿಣಃ ಸಮುಪಾನೀಯ ತಥೈವ ಚ ಪುರೋಧಸಮ್ ॥
ಮೂಲಮ್ - 6
ಅಬ್ರವೀಚ್ಚ ತದಾ ವೃತ್ತಂ ತೇಷಾಂ ಮಧ್ಯೇಸ ರಾಘವಃ ।
ದುರ್ವಾಸೋಽಭಿಗಮಂ ಚೈವ ಪ್ರತಿಜ್ಞಾಂ ತಾಪಸಸ್ಯ ಚ ॥
ಅನುವಾದ
ಲಕ್ಷ್ಮಣನು ಹೀಗೆ ಹೇಳಿದಾಗ ಶ್ರೀರಾಮನ ಇಂದ್ರಿಯಗಳು ಚಂಚಲವಾದುವು, ಅವನು ಧೈರ್ಯಗೆಟ್ಟನು ಮತ್ತು ಮಂತ್ರಿಗಳನ್ನು, ಪುರೋಹಿತರನ್ನು ಕರೆಸಿ, ಅವರೆಲ್ಲರ ನಡುವೆ ಶ್ರೀರಘುನಾಥನು ಈ ಎಲ್ಲ ವೃತ್ತಾಂತವನ್ನು ತಿಳಿಸುತ್ತಾ ದುರ್ವಾಸರ ಆಗಮನ, ತಪಸ್ವೀರೂಪಧಾರೀ ಕಾಲನ ಮುಂದೆ ಮಾಡಿದ ಪ್ರತಿಜ್ಞೆಯನ್ನು ತಿಳಿಸಿದನು.॥5-6॥
ಮೂಲಮ್ - 7
ತಚ್ಛ್ರುತ್ವಾ ಮಂತ್ರಿಣಃ ಸರ್ವೇ ಸೋಪಾಧ್ಯಾಯಾಃ ಸಮಾಸತ ।
ವಸಿಷ್ಠಸ್ತು ಮಹಾತೇಜಾ ವಾಕ್ಯಮೇತದುವಾಚ ಹ ॥
ಅನುವಾದ
ಇದನ್ನು ಕೇಳಿ ಎಲ್ಲ ಮಂತ್ರಿಗಳು, ಪುರೋಹಿತರು ಸುಮ್ಮನೇ ಕುಳಿತುಬಿಟ್ಟರು. ಯಾರೂ ಮಾತನಾಡದೆ ಇರುವಾಗ ಮಹಾತೇಜಸ್ವಿ ವಸಿಷ್ಠರು ಹೀಗೆ ನುಡಿದರು.॥7॥
ಮೂಲಮ್ - 8
ದೃಷ್ಟಮೇತನ್ಮಹಾಬಾಹೋ ಕ್ಷಯಂ ತೇರೋಮಹರ್ಷಣಮ್ ।
ಲಕ್ಷ್ಮಣೇನ ವಿಯೋಗಶ್ಚ ತವ ರಾಮ ಮಹಾಯಶಃ ॥
ಅನುವಾದ
ಮಹಾಬಾಹೋ! ಮಹಾಯಶಸ್ವೀ ಶ್ರೀರಾಮಾ! ಈಗ ರೋಮಾಂಚಕರ ವಿಕಟ ವಿನಾಶ ಬರುವುದಿದೆ (ನಿನ್ನೊಂದಿಗೆ ಅನೇಕ ಪ್ರಾಣಿಗಳು ಸಾಕೇತ ಗಮನವಾಗುವುದಿದೆ) ಮತ್ತು ಲಕ್ಷ್ಮಣನೊಂದಿಗೆ ಆಗುತ್ತಿರುವ ವಿಯೋಗವೆಲ್ಲವನ್ನು ನಾನು ತಪೋಬಲದಿಂದ ಮೊದಲೇ ನೋಡಿರುವೆನು.॥8॥
ಮೂಲಮ್ - 9
ತ್ಯಜೈನಂ ಬಲವಾನ್ಕಾಲೋ ಮಾ ಪ್ರತಿಜ್ಞಾಂ ವೃಥಾಕೃಥಾಃ ।
ಪ್ರತಿಜ್ಞಾಯಾಂ ಹಿ ನಷ್ಟಾಯಾಂ ಧರ್ಮೋಹಿ ವಿಲಯಂ ವ್ರಜೇತ್ ॥
ಅನುವಾದ
ಕಾಲವು ಬಹಳ ಪ್ರಬಲವಾಗಿದೆ. ನೀನು ಲಕ್ಷ್ಮಣನನ್ನು ತ್ಯಜಿಸಿಬಿಡು. ಪ್ರತಿಜ್ಞೆ ಸುಳ್ಳಾಗಿಸಬೇಡ; ಏಕೆಂದರೆ ಪ್ರತಿಜ್ಞೆ ನಾಶವಾದಾಗ ಧರ್ಮದ ಲೋಪವಾಗುವುದು.॥9॥
ಮೂಲಮ್ - 10
ತತೋ ಧರ್ಮೇ ವಿನಷ್ಟೇ ತು ತ್ರೈಲೋಕ್ಯಂ ಸಚರಾಚರಮ್ ।
ಸದೇವರ್ಷಿಗಣಂಸರ್ವಂ ವಿನಶ್ಯೇತ್ತು ನ ಸಂಶಯಃ ॥
ಅನುವಾದ
ಧರ್ಮದ ಲೋಪವಾದಾಗ ಚರಾಚರ ಪ್ರಾಣಿಗಳ, ದೇವತೆಗಳ ಮತ್ತು ಋಷಿಗಳ ಸಹಿತ ಸಮಸ್ತ ತ್ರಿಲೋಕಗಳು ನಾಶವಾಗಿ ಹೋಗುವುದು. ಇದರಲ್ಲಿ ಸಂಶಯವೇ ಇಲ್ಲ.॥10॥
ಮೂಲಮ್ - 11
ಸ ತ್ವಂ ಪುರುಷಶಾರ್ದೂಲ ತ್ರೈಲೋಕ್ಯಸ್ಯಾಭಿಪಾಲನಾತ್ ।
ಲಕ್ಷ್ಮಣೇನ ವಿನಾ ಚಾದ್ಯ ಜಗತ್ಸ್ವಸ್ಥಂ ಕುರುಷ್ವ ಹ ॥
ಅನುವಾದ
ಆದ್ದರಿಂದ ಪುರುಷಸಿಂಹನೇ! ನೀನು ತ್ರಿಭುವನಗಳ ರಕ್ಷಣೆಯ ಕಡೆಗೆ ನೋಡಿ ಲಕ್ಷ್ಮಣನನ್ನು ತ್ಯಜಿಸಿಬಿಡು. ಅವನಿಲ್ಲದೆ ಧರ್ಮಪೂರ್ವಕ ಸ್ಥಿತನಾಗಿ ಸಂಪೂರ್ಣ ಜಗತ್ತನ್ನು ಸ್ವಸ್ಥ ಮತ್ತು ಸುಖಿಯಾಗಿಸು.॥11॥
ಮೂಲಮ್ - 12
ತೇಷಾಂ ತತ್ಸಮವೇತಾನಾಂ ವಾಕ್ಯಂ ಧರ್ಮಾರ್ಥಸಂಹಿತಮ್ ।
ಶ್ರುತ್ವಾ ಪರಿಷದೋ ಮಧ್ಯೇ ರಾಮೋಲಕ್ಷ್ಮಣಮಬ್ರವೀತ್ ॥
ಅನುವಾದ
ಅಲ್ಲಿ ಸೇರಿದ ಮಂತ್ರಿ, ಪುರೋಹಿತರೇ ಆದಿ ಎಲ್ಲ ಸಭಾಸದರ ನಡುವೆ ವಸಿಷ್ಠರು ಹೇಳಿದ ಮಾತನ್ನು ಕೇಳಿ ಶ್ರೀರಾಮನು ಲಕ್ಷ್ಮಣನಲ್ಲಿ ಹೇಳಿದನು.॥12॥
ಮೂಲಮ್ - 13
ವಿಸರ್ಜಯೇ ತ್ವಾಂ ಸೌಮಿತ್ರೇ ಮಾ ಭೂದ್ಧರ್ಮವಿಪರ್ಯಯಃ ।
ತ್ಯಾಗೋ ವಧೋ ವಾ ವಿಹಿತಃ ಸಾಧೂನಾಂ ಹ್ಯುಭಯಂ ಸಮಮ್ ॥
ಅನುವಾದ
ಸುಮಿತ್ರಾನಂದನ! ನಾನು ನಿನ್ನನ್ನು ಪರಿತ್ಯಾಗ ಮಾಡುತ್ತಿದ್ದೇನೆ. ಅದರಿಂದ ಧರ್ಮದ ಲೋಪ ಆಗದಿರಲಿ. ಸಾಧು ಪುರುಷರನ್ನು ತ್ಯಜಿಸುವುದು ಅಥವಾ ವಧಿಸುವುದು ಎರಡೂ ಒಂದೇ ಆಗಿದೆ.॥13॥
ಮೂಲಮ್ - 14
ರಾಮೇಣ ಭಾಷಿತೇ ವಾಕ್ಯೇ ಬಾಷ್ಪವ್ಯಾಕುಲಿತೇಂದ್ರಿಯಃ ।
ಲಕ್ಷ್ಮಣಸ್ತ್ವರಿತಂ ಪ್ರಾಯಾತ್ಸ್ವಗೃಹಂ ನ ವಿವೇಶ ಹ ॥
ಅನುವಾದ
ಶ್ರೀರಾಮನು ಹೀಗೆ ಹೇಳುತ್ತಲೇ ಲಕ್ಷ್ಮಣನ ಕಣ್ಣುಗಳಲ್ಲಿ ಕಂಬನಿ ತುಂಬಿ ಬಂತು. ಅವನು ಕೂಡಲೇ ಅಲ್ಲಿಂದಲೇ ಮನೆಗೂ ಹೋಗದೆ ಹೊರಟುಹೋದನು.॥14॥
ಮೂಲಮ್ - 15
ಸ ಗತ್ವಾ ಸರಯೂತೀರಮುಪಸ್ಪೃಶ್ಯ ಕೃತಾಂಜಲಿಃ ।
ನಿಗೃಹ್ಯ ಸರ್ವಸ್ರೋತಾಂಸಿ ನಿಃಶ್ವಾಸಂ ನ ಮುಮೋಚ ಹ ॥
ಅನುವಾದ
ಸರಯೂ ತೀರಕ್ಕೆ ಹೋಗಿ ಅವನು ಆಚಮನ ಮಾಡಿ, ಕೈಮುಗಿದು ಕೊಂಡು ಸಂಪೂರ್ಣ ಇಂದ್ರಿಯಗಳನ್ನು ವಶಪಡಿಸಿಕೊಂಡು ಪ್ರಾಣವಾಯುವನ್ನು ತಡೆದು ಬಿಟ್ಟನು.॥15॥
ಮೂಲಮ್ - 16
ಅನಿಶ್ವಸಂತಂ ಯುಕ್ತಂ ತಂ ಸಶಕ್ರಾಃ ಸಾಪ್ಸರೋಗಣಾಃ ।
ದೇವಾಃಸರ್ಷಿಗಣಾಃ ಸರ್ವೇ ಪುಷ್ಪೈರಭ್ಯಕಿರಂಸ್ತದಾ ॥
ಅನುವಾದ
ಲಕ್ಷ್ಮಣನು ಯೋಗಯುಕ್ತನಾಗಿ ಶ್ವಾಸೋಚ್ಛ್ವಾಸವನ್ನು ಬಂಧಿಸಿರುವುದನ್ನು ನೋಡಿ, ಇಂದ್ರಾದಿ ದೇವತೆಗಳೆಲ್ಲರೂ, ಋಷಿಗಳು, ಅಪ್ಸರೆಯರು ಆಗ ಅವನ ಮೇಲೆ ಹೂಮಳೆಯನ್ನು ಸುರಿಸತೊಡಗಿದರು.॥16॥
ಮೂಲಮ್ - 17
ಅದೃಶ್ಯಂ ಸರ್ವಮನುಜೈಃ ಸಶರೀರಂ ಮಹಾಬಲಮ್ ।
ಪ್ರಗೃಹ್ಯ ಲಕ್ಷ್ಮಣಂ ಶಕ್ರಸ್ತ್ರಿದಿವಂ ಸಂವಿವೇಶ ಹ ॥
ಅನುವಾದ
ಮಹಾಬಲೀ ಲಕ್ಷ್ಮಣನು ತನ್ನ ಶರೀರದೊಂದಿದೇ ಜನರ ದೃಷ್ಟಿಯಿಂದ ಅಗೋಚರನಾದನು. ಆಗ ದೇವೇಂದ್ರನು ಅವನನ್ನು ಕರೆದುಕೊಂಡು ಸ್ವರ್ಗಕ್ಕೆ ಹೊರಟುಹೋದನು.॥17॥
ಮೂಲಮ್ - 18
ತತೋ ವಿಷ್ಣೋಶ್ಚತುರ್ಭಾಗಮಾಗತಂ ಸುರಸತ್ತಮಾಃ ।
ಹೃಷ್ಟಾಃ ಪ್ರಮುದಿತಾಃ ಸರ್ವೇ ಪೂಜಯಂತಿ ಸ್ಮ ರಾಘವಮ್ ॥
ಅನುವಾದ
ಭಗವಾನ್ ವಿಷ್ಣುವಿನ ಚತುರ್ಧಾಂಶ ಲಕ್ಷ್ಮಣನು ಬಂದಿರು ವುದನ್ನು ನೋಡಿ ದೇವತೆಗಳೆಲ್ಲ ಹರ್ಷಗೊಂಡರು ಹಾಗೂ ಅವರೆಲ್ಲರೂ ಸಂತೋಷದಿಂದ ಲಕ್ಷ್ಮಣನನ್ನು ಪೂಜಿಸಿದರು.॥18॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರಕಾಂಡದಲ್ಲಿ ನೂರ ಆರನೆಯ ಸರ್ಗ ಪೂರ್ಣವಾಯಿತು. ॥106॥