[ನೂರ ಐದನೆಯ ಸರ್ಗ]
ಭಾಗಸೂಚನಾ
ದುರ್ವಾಸರ ಶಾಪದ ಭಯದಿಂದ ಲಕ್ಷ್ಮಣನು ಅವರು ಬಂದಿರುವ ಸಮಾಚಾರವನ್ನು ತಿಳಿಸಲು ಶ್ರೀರಾಮನ ಆಜ್ಞೆಯ ವಿರುದ್ಧವಾಗಿ ಅವನ ಬಳಿಗೆ ಹೋಗುವುದು, ಶ್ರೀರಾಮನು ದುರ್ವಾಸರಿಗೆ ಭೋಜನ ಮಾಡಿಸುವುದು, ಅವರು ಹೊರಟು ಹೋದ ಬಳಿಕ ಲಕ್ಷ್ಮಣನಿಗಾಗಿ ಶ್ರೀರಾಮ ಚಿಂತಿಸಿದುದು
ಮೂಲಮ್ - 1
ತಥಾ ತಯೋಃ ಸಂವದತೋರ್ದುರ್ವಾಸಾ ಭಗವಾನೃಷಿಃ ।
ರಾಮಸ್ಯ ದರ್ಶನಾಕಾಂಕ್ಷೀ ರಾಜದ್ವಾರಮುಪಾಗಮತ್ ॥
ಅನುವಾದ
ಇವರಿಬ್ಬರಲ್ಲಿ ಹೀಗೆ ಮಾತುಕತೆ ನಡೆಯುತ್ತಿದ್ದಾಗಲೇ, ಶ್ರೀರಾಮಚಂದ್ರನನ್ನು ಕಾಣಲು ಮಹರ್ಷಿ ದುರ್ವಾಸರು ರಾಜದ್ವಾರಕ್ಕೆ ಬಂದರು.॥1॥
ಮೂಲಮ್ - 2
ಸೋಽಭಿಗಮ್ಯ ತು ಸೌಮಿತ್ರಿಮುವಾಚ ಋಷಿಸತ್ತಮಃ ।
ರಾಮಂ ದರ್ಶಯ ಮೇ ಶೀಘ್ರಂ ಪುರಾ ಮೇಽರ್ಥೋಽತಿವರ್ತತೇ ॥
ಅನುವಾದ
ಆ ಮುನಿಶ್ರೇಷ್ಠರು ಸುಮಿತ್ರಾಕುಮಾರನ ಬಳಿಗೆ ಹೋಗಿ ಹೇಳಿದರು- ನೀನು ಶೀಘ್ರವಾಗಿ ನನ್ನನ್ನು ಶ್ರೀರಾಮನ ಭೆಟ್ಟಿಮಾಡಿಸು. ಅವನನ್ನು ನೋಡದೆ ನನ್ನ ಒಂದು ಕಾರ್ಯ ಕೆಟ್ಟು ಹೋಗುತ್ತಾ ಇದೆ.॥2॥
ಮೂಲಮ್ - 3
ಮುನೇಽಸ್ತು ಭಾಷಿತಂ ಶ್ರುತ್ವಾ ಲಕ್ಷ್ಮಣಃಪರವೀರಹಾ ।
ಅಭಿವಾದ್ಯ ಮಹಾತ್ಮಾನಂ ವಾಕ್ಯಮೇತದುವಾಚ ಹ ॥
ಅನುವಾದ
ಮುನಿಯ ಮಾತನ್ನು ಕೇಳಿ ಶತ್ರುವೀರರನ್ನು ಸಂಹಾರ ಮಾಡುವ ಲಕ್ಷ್ಮಣನು ಆ ಮಹಾತ್ಮನಿಗೆ ನಮಸ್ಕರಿಸಿ ಹೇಳಿದನು.॥3॥
ಮೂಲಮ್
(ಶ್ಲೋಕ - 4)
ಕಿಂ ಕಾರ್ಯಂ ಬ್ರೂಹಿ ಭಗವನ್
ಕೋಹ್ಯರ್ಥಃ ಕಿಂ ಕರೋಮ್ಯಹಮ್ ।
ವ್ಯಗ್ರೋ ಹಿ ರಾಘವೋ ಬ್ರಹ್ಮನ್
ಮೂಹೂರ್ತಂ ಪ್ರತಿಪಾಲ್ಯತಾಮ್ ॥
ಅನುವಾದ
ಪೂಜ್ಯರೇ! ನಿಮ್ಮ ಯಾವ ಕಾರ್ಯವಿದೆ? ಏನು ಪ್ರಯೋಜನವಿದೆ? ನಾನು ನಿಮ್ಮ ಯಾವ ಸೇವೆ ಮಾಡಲಿ? ತಿಳಿಸಿರಿ. ಬ್ರಹ್ಮನ್! ಈಗ ರಘುನಾಥನು ಬೇರೆ ಕಾರ್ಯದಲ್ಲಿ ಮುಳುಗಿರುವನು, ಆದ್ದರಿಂದ ಎರಡು ಗಳಿಗೆ ಪ್ರತೀಕ್ಷೆ ಮಾಡಿರಿ.॥4॥
ಮೂಲಮ್ - 5
ತಚ್ಛ್ರುತ್ವಾ ಋಷಿಶಾರ್ದೂಲಃ ಕ್ರೋಧೇನ ಕಲುಷೀಕೃತಃ ।
ಉವಾಚ ಲಕ್ಷ್ಮಣಂ ವಾಕ್ಯಂ ನಿರ್ದಹನ್ನಿವ ಚಕ್ಷುಷಾ ॥
ಅನುವಾದ
ಇದನ್ನು ಕೇಳಿ ಮುನಿಶ್ರೇಷ್ಠ ದುರ್ವಾಸರ ಮನಸ್ಸು ಕ್ರೋಧದಿಂದ ಕದಡಿಹೋಯಿತು. ತನ್ನ ನೇತ್ರಾಗ್ನಿಯಿಂದಲೇ ಅವನನ್ನು ಸುಟ್ಟುಬಿಡುವರೋ ಎಂದು ನೋಡುತ್ತಾ ಹೇಳಿದರು .॥5॥
ಮೂಲಮ್ - 6
ಅಸ್ಮಿನ್ ಕ್ಷಣೇ ಮಾಂ ಸೌಮಿತ್ರೇ ರಾಮಾಯ ಪ್ರತಿವೇದಯ ।
ಅಸ್ಮಿನ್ ಕ್ಷಣೇ ಮಾಂ ಸೌಮಿತ್ರೇ ನ ನಿವೇದಯಸೇಯದಿ ।
ವಿಷಯಂ ತ್ವಾಂ ಪುರಂ ಚೈವ ಶಪಿಷ್ಯೇ ರಾಘವಂತಥಾ ॥
ಮೂಲಮ್ - 7
ಭರತಂ ಚೈವ ಸೌಮಿತ್ರೇ ಯುಷ್ಮಾಕಂ ಯಾ ಚ ಸಂತತಿಃ ।
ನ ಹಿ ಶಕ್ಷ್ಯಾಮ್ಯಹಂ ಭೂಯೋ ಮನ್ಯುಂ ಧಾರಯಿತುಂ ಹೃದಿ ॥
ಅನುವಾದ
ಸುಮಿತ್ರಾಕುಮಾರ! ಈ ಕ್ಷಣದಲ್ಲೇ ಶ್ರೀರಾಮನಿಗೆ ನನ್ನ ಆಗಮನದ ಸೂಚನೆ ಕೊಡು. ಈಗಿಂದೀಗಲೇ ನಾನು ಬಂದಿರುವ ಸಮಾಚಾರ ತಿಳಿಸದಿದ್ದರೆ ನಾನು ಈ ರಾಜ್ಯವನ್ನು, ನಗರವನ್ನು, ನಿನ್ನನ್ನು, ಶ್ರೀರಾಮನನ್ನು, ಭರತನನ್ನು ಮತ್ತು ನಿಮ್ಮ ಸಂತತಿಯನ್ನು ಶಪಿಸಿಬಿಡುವೆನು. ನಾನು ಈ ಕ್ರೋಧವನ್ನು ತಡೆದುಕೊಳ್ಳಲಾರೆನು.॥6-7॥
ಮೂಲಮ್ - 8
ತಚ್ಛ್ರುತ್ವಾ ಘೋರಸಂಕಾಶಂ ವಾಕ್ಯಂ ತಸ್ಯ ಮಹಾತ್ಮನಃ ।
ಚಿಂತಯಾಮಾಸ ಮನಸಾ ತಸ್ಯ ವಾಕ್ಯಸ್ಯ ನಿಶ್ಚಯಮ್ ॥
ಅನುವಾದ
ಆ ಮಹಾತ್ಮರ ಈ ಘೋರವಚನವನ್ನು ಕೇಳಿ ಲಕ್ಷ್ಮಣನು ಅವರ ವಾಣಿಯಿಂದ ಪ್ರಕಟವಾಗುತ್ತಿದ್ದ ನಿಶ್ಚಯದ ಕುರಿತು ಮನಸ್ಸಿನಲ್ಲೇ ಯೋಚಿಸಿದನು.॥8॥
ಮೂಲಮ್ - 9
ಏಕಸ್ಯ ಮರಣಂ ಮೇಽಸ್ತು ಮಾ ಭೂತ್ಸರ್ವವಿನಾಶನಮ್ ।
ಇತಿ ಬುದ್ಧ್ಯಾ ವಿನಿಶ್ಚಿತ್ಯ ರಾಘವಾಯ ನ್ಯವೇದಯತ್ ॥
ಅನುವಾದ
ನನ್ನೊಬ್ಬನ ಮೃತ್ಯುವಾಗುವುದು ಒಳ್ಳೆಯದೇ, ಆದರೆ ಎಲ್ಲರ ವಿನಾಶವಾಗಬಾರದು. ಹೀಗೆ ತನ್ನ ಬುದ್ಧಿಯಿಂದ ನಿಶ್ಚಯಿಸಿ ಲಕ್ಷ್ಮಣನು ಶ್ರೀರಘುನಾಥನಲ್ಲಿ ದುರ್ವಾಸರ ಆಗಮನದ ಸಮಾಚಾರ ನಿವೇದಿಸಿಕೊಂಡನು.॥9॥
ಮೂಲಮ್ - 10
ಲಕ್ಷ್ಮಣಸ್ಯ ವಚಃ ಶ್ರುತ್ವಾ ರಾಮಃ ಕಾಲಂ ವಿಸೃಜ್ಯ ಚ ।
ನಿಃಸೃತ್ಯ ತ್ವರಿತೋ ರಾಜಾ ಅತ್ರೇಃ ಪುತ್ರಂ ದದರ್ಶ ಹ ॥
ಅನುವಾದ
ಲಕ್ಷ್ಮಣನ ಮಾತನ್ನು ಕೇಳಿ ರಾಜಾ ಶ್ರೀರಾಮನು ಕಾಲನನ್ನು ಬೀಳ್ಕೊಟ್ಟು ಕೂಡಲೇ ಹೊರಟು, ಅತ್ರಿಪುತ್ರ ದುರ್ವಾಸರನ್ನು ಭೆಟ್ಟಿಯಾದನು.॥10॥
ಮೂಲಮ್ - 11
ಸೋಽಭಿವಾದ್ಯ ಮಹಾತ್ಮಾನಂಜ್ವಲಂತಮಿವ ತೇಜಸಾ ।
ಕಿಂ ಕಾರ್ಯಮಿತಿ ಕಾಕುತ್ಸ್ಥಃ ಕೃತಾಂಜಲಿರಭಾಷತ ॥
ಅನುವಾದ
ತನ್ನ ತೇಜದಿಂದ ಪ್ರಜ್ವಲಿಸುತ್ತಿದ್ದ ಮಹಾತ್ಮಾ ದುರ್ವಾಸರಿಗೆ ಪ್ರಣಾಮ ಮಾಡಿ, ಶ್ರೀರಾಮನು ಕೈಮುಗಿದು ಕೇಳಿದನು - ಮಹರ್ಷಿಯೇ! ನನ್ನಿಂದ ಯಾವ ಕಾರ್ಯವಾಗಬೇಕಾಗಿದೆ? ಆಜ್ಞಾಪಿಸಿರಿ.॥11॥
ಮೂಲಮ್ - 12
ತದ್ವಾಕ್ಯಂ ರಾಘವೇಣೋಕ್ತಂ ಶ್ರುತ್ವಾ ಮುನಿವರಃ ಪ್ರಭುಃ ।
ಪ್ರತ್ಯಾಹ ರಾಮಂ ದುರ್ವಾಸಾಃ ಶ್ರೂಯತಾಂ ಧರ್ಮವತ್ಸಲ ॥
ಅನುವಾದ
ಶ್ರೀರಘುನಾಥನ ಮಾತನ್ನು ಕೇಳಿ ಪ್ರಭಾವಶಾಲೀ ಮುನಿವರ ದುರ್ವಾಸರು ಅವನಲ್ಲಿ ಹೇಳಿದರು - ಧರ್ಮವತ್ಸಲನೇ ಕೇಳು.॥12॥
ಮೂಲಮ್ - 13
ಅದ್ಯ ವರ್ಷಸಹಸ್ರಸ್ಯ ಸಮಾಪ್ತಿರ್ಮಮ ರಾಘವ ।
ಸೋಽಹಂ ಭೋಜನಮಿಚ್ಛಾಮಿ ಯಥಾಸಿದ್ಧಂ ತವಾನಘ ॥
ಅನುವಾದ
ಅನಘ ರಘುನಂದನ ! ನಾನು ಒಂದು ಸಾವಿರ ವರ್ಷಗಳಿಂದ ಉಪವಾಸ ಮಾಡಿದ್ದೇನೆ. ಇಂದು ಆ ಉಪವಾಸ ವ್ರತದ ಸಮಾಪ್ತಿಯ ದಿನವಾಗಿದೆ. ಅದಕ್ಕಾಗಿ ಈಗ ನಿಮ್ಮಲ್ಲಿ ಸಿದ್ಧವಿರುವ ಭೋಜನವನ್ನು ನಾನು ಸ್ವೀಕರಿಸಲು ಬಯಸಿದ್ದೇನೆ.॥13॥
ಮೂಲಮ್ - 14
ತಚ್ಛ್ರುತ್ವಾ ವಚನಂ ರಾಜಾ ರಾಘವಃ ಪ್ರೀತಮಾನಸಃ ।
ಭೋಜನಂ ಮುನಿಮುಖ್ಯಸ್ಯಯಥಾಸಿದ್ಧಮುಪಾಹರತ್ ॥
ಅನುವಾದ
ಇದನ್ನು ಕೇಳಿ ರಾಜಾ ಶ್ರೀರಾಮನು ಮನಸ್ಸಿನಲ್ಲೇ ಸಂತೋಷಗೊಂಡು, ಆ ಮುನಿಶ್ರೇಷ್ಠರಿಗೆ ಸಿದ್ಧವಾದ ಭೋಜನವನ್ನು ಬಡಿಸಿದನು.॥14॥
ಮೂಲಮ್ - 15
ಸ ತು ಭುಕ್ತ್ವಾ ಮುನಿಶ್ರೇಷ್ಠಸ್ತದನ್ನಮಮೃತೋಪಮಮ್ ।
ಸಾಧು ರಾಮೇತಿ ಸಂಭಾಷ್ಯ ಸ್ವಮಾಶ್ರಮಮುಪಾಗಮತ್ ॥
ಅನುವಾದ
ಆ ಅಮೃತಮಯ ಅನ್ನ ಸ್ವೀಕರಿಸಿ ದುರ್ವಾಸ ಮುನಿಗಳು ತೃಪ್ತರಾಗಿ, ಶ್ರೀರಾಮನಿಗೆ ಸಾಧುವಾದ ಹೇಳುತ್ತಾ ತನ್ನ ಆಶ್ರಮಕ್ಕೆ ಹೊರಟು ಹೋದರು.॥15॥
ಮೂಲಮ್ - 16
ತಸ್ಮಿನ್ಗತೇ ಮುನಿವರೇ ಸ್ವಾಶ್ರಮಂ ಲಕ್ಷ್ಮಣಾಗ್ರಜಃ ।
ಸಂಸ್ಮೃತ್ಯ ಕಾಲವಾಕ್ಯಾನಿ ತತೋ ದುಃಖಮುಪಾಗಮತ್ ॥
ಅನುವಾದ
ಮುನಿವರ ದುರ್ವಾಸರು ತಮ್ಮ ಆಶ್ರಮಕ್ಕೆ ಹೊರಟು ಹೋದ ಮೇಲೆ ಲಕ್ಷ್ಮಣಾಗ್ರಜ ಶ್ರೀರಾಮನು ಕಾಲನ ಮಾತನ್ನು ಸ್ಮರಿಸಿ ದುಃಖಿಯಾದನು.॥16॥
ಮೂಲಮ್ - 17
ದುಃಖೇನ ಚ ಸುಸಂತಪ್ತಃಸ್ಮೃತ್ವಾ ತದ್ಘೋರದರ್ಶನಮ್ ।
ಅವಾಙ್ಮುಖೋ ದೀನಮನಾ ವ್ಯಾಹರ್ತುಂ ನ ಶಶಾಕ ಹ ॥
ಅನುವಾದ
ಭಯಂಕರ ಭಾವೀ ಭ್ರಾತೃವಿಯೋಗದ ದೃಶ್ಯವು ಕಣ್ಣಿಗೆ ಕಟ್ಟುವ ಕಾಲನ ಮಾತಿನ ಕುರಿತು ವಿಚಾರ ಮಾಡಿ ಶ್ರೀರಾಮನ ಮನಸ್ಸಿನಲ್ಲಿ ಭಾರೀ ದುಃಖವಾಯಿತು. ತಲೆತಗ್ಗಿ ಹೋಗಿ, ಬಾಯಿಂದ ಮಾತೇ ಹೊರಡಲಿಲ್ಲ.॥17॥
ಮೂಲಮ್ - 18
ತತೋ ಬುದ್ಧ್ಯಾ ವಿನಿಶ್ಚಿತ್ಯ ಕಾಲವಾಕ್ಯಾನಿ ರಾಘವಃ ।
ನೈತದಸ್ತೀತಿ ನಿಶ್ಚಿತ್ಯ ತೋಷ್ಣೀಮಾಸೀನ್ಮಹಾಯಶಾಃ ॥
ಅನುವಾದ
ಅನಂತರ ಕಾಲನ ಮಾತಿನ ಕುರಿತು ಬುದ್ಧಿಪೂರ್ವಕವಾಗಿ ವಿಚಾರ ಮಾಡಿ ಮಹಾಯಶಸ್ವೀ ಶ್ರೀರಘುನಾಥನು ‘ಇನ್ನು ಇದೆಲ್ಲ ಏನೂ ಉಳಿಯಲಾರದು’ ಎಂದು ನಿರ್ಣಯಿಸಿ ಸುಮ್ಮನಾದನು.॥18॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ನೂರಐದನೆಯ ಸರ್ಗ ಪೂರ್ಣವಾಯಿತು. ॥105॥