१०४ अवतार-समाप्ति-प्रर्थना

[ನೂರನಾಲ್ಕನೆಯ ಸರ್ಗ]

ಭಾಗಸೂಚನಾ

ಕಾಲ ಪುರುಷನು ಬ್ರಹ್ಮದೇವರ ಸಂದೇಶ ಶ್ರೀರಾಮನಿಗೆ ತಿಳಿಸುವುದು, ಶ್ರೀರಾಮನು ಅದನ್ನು ಅಂಗೀಕರಿಸಿದುದು

ಮೂಲಮ್ - 1

ಶೃಣು ರಾಜನ್ಮಹಾಸತ್ತ್ವ ಯದರ್ಥಮಹಮಾಗತಃ ।
ಪಿತಾಮಹೇನ ದೇವೇನ ಪ್ರೇಷಿತೋಽಸ್ಮಿ ಮಹಾಬಲ ॥

ಅನುವಾದ

ಮಹಾಬಲೀ ಮಹಾನ್ ಸತ್ತ್ವಶಾಲೀ ಮಹಾರಾಜಾ! ಪಿತಾಮಹ ಭಗವಾನ್ ಬ್ರಹ್ಮದೇವರು ಯಾವ ಉದ್ದೇಶದಿಂದ ನನ್ನನ್ನು ಇಲ್ಲಿ ಕಳಿಸಿರುವರೋ, ಯಾತಕ್ಕಾಗಿ ನಾನು ಬಂದಿರುವೆನೋ, ಅದೆಲ್ಲವನ್ನು ತಿಳಿಸುವೆನು; ಕೇಳು.॥1॥

ಮೂಲಮ್ - 2

ತವಾಹಂ ಪೂರ್ವಕೇ ಭಾವೇ ಪುತ್ರಃಪರಪುರಂಜಯ ।
ಮಾಯಾಸಂಭಾವಿತೋ ವೀರ ಕಾಲಃಸರ್ವಸಮಾಹರಃ ॥

ಅನುವಾದ

ಶತ್ರುನಗರಗಳನ್ನು ಜಯಿಸುವ ವೀರನೇ! ಹಿಂದೆ ಹಿರಣ್ಯಗರ್ಭದ ಉತ್ಪತ್ತಿಯ ಸಮಯ ನಾನು ಮಾಯೆಯ ಮೂಲಕ ನಿನ್ನಿಂದಲೇ ಉತ್ಪನ್ನನಾಗಿದ್ದೆ. ಅದಕ್ಕಾಗಿ ನಿಮ್ಮ ಪುತ್ರನೇ ಆಗಿದ್ದೇನೆ. ನನ್ನನ್ನು ಸರ್ವಸಂಹಾರಕಾರೀ ಕಾಲನೆಂದು ಹೇಳುತ್ತಾರೆ.॥2॥

ಮೂಲಮ್ - 3

ಪಿತಾಮಹಶ್ಚ ಭಗವಾನಾಹ ಲೋಕಪತಿಃ ಪ್ರಭುಃ ।
ಸಮಯಸ್ತೇ ಕೃತಃ ಸೌಮ್ಯ ಲೋಕಾನ್ಸಂಪರಿರಕ್ಷಿತುಮ್ ॥

ಅನುವಾದ

ಲೋಕನಾಥ ಪ್ರಭು ಭಗವಾನ್ ಪಿತಾಮಹನು ಬ್ರಹ್ಮದೇವರು ಹೇಳಿದರು - ‘ಸೌಮ್ಯ! ಲೋಕಗಳನ್ನು ರಕ್ಷಿಸಲು ನೀನು ಮಾಡಿದ ಪ್ರತಿಜ್ಞೆಯು ಪೂರ್ಣಗೊಂಡಿದೆ’.॥3॥

ಮೂಲಮ್ - 4

ಸಂಕ್ಷಿಪ್ಯ ಹಿ ಪುರಾ ಲೋಕಾನ್ಮಾಯಯಾ ಸ್ವಯಮೇವ ಹಿ ।
ಮಹಾರ್ಣವೇ ಶಯಾನೋಽಪ್ಸು ಮಾಂತ್ವಂಪೂರ್ವಮಜೀಜನಃ ॥

ಅನುವಾದ

ಹಿಂದೆ ಸಮಸ್ತ ಲೋಕಗಳನ್ನು ಮಾಯೆಯ ಮೂಲಕ ತನ್ನಲ್ಲೇ ಲೀನಗೊಳಿಸಿಕೊಂಡು ನೀನು ಸಮುದ್ರಜಲದಲ್ಲಿ ಶಯನ ಮಾಡಿದ್ದೆ. ಮತ್ತೆ ಈ ಸೃಷ್ಟಿಯ ಪ್ರಾರಂಭದಲ್ಲಿ ಮೊಟ್ಟ ಮೊದಲಿಗೆ ನನ್ನನ್ನು ಸೃಷ್ಟಿಸಿದೆ.॥4॥

ಮೂಲಮ್ - 5

ಭೋಗವಂತಂ ತತೋ ನಾಗಮನಂತಮುದಕೇಶಯಮ್ ।
ಮಾಯಯಾ ಜನಯಿತ್ವಾ ತ್ವಂ ದ್ವೇ ಚ ಸತ್ತ್ವೌ ಮಹಾಬಲೌ ॥

ಮೂಲಮ್ - 6

ಮಧುಂ ಚ ಕೈಟಭಂ ಚೈವ ಯಯೋರಸ್ಥಿಚಯೈರ್ವೃತಾ ।
ಇಯಂ ಪರ್ವತಸಂಬಾಧಾ ಮೇದಿನೀ ಚಾಭವತ್ತದಾ ॥

ಅನುವಾದ

ಅನಂತರ ವಿಶಾಲ ಹೆಡೆ ಮತ್ತು ಶರೀರದಿಂದ ಕೂಡಿ ಜಲದಲ್ಲಿ ಶಯನ ಮಾಡುವ ಅನಂತ ಸಂಜ್ಞಕ ನಾಗನನ್ನು ಮಾಯೆಯಿಂದ ಪ್ರಕಟಗೊಳಿಸಿ ನೀನು ಎರಡು ಮಹಾಬಲಿ ಜೀವಿಗಳಿಗೆ ಜನ್ಮನೀಡಿದೆ. ಅವರ ಹೆಸರು ಮಧು ಮತ್ತು ಕೈಟಭ ಎಂದಿತ್ತು; ಇವರ ಅಸ್ತಿ ಸಮೂಹಗಳಿಂದ ತುಂಬಿದ ಈ ಪರ್ವತಸಹಿತ ಪೃಥಿವಿಯು ತತ್ಕಾಲ ಪ್ರಕಟಗೊಂಡಿತು. ಅದು ಮೇದಿನೀ ಎಂದೆನಿಸಿತು.॥5-6॥

ಮೂಲಮ್ - 7

ಪದ್ಮೇ ದಿವ್ಯೇಽರ್ಕಸಂಕಾಶೇ ನಾಭ್ಯಮುತ್ಪಾದ್ಯ ಮಾಮಪಿ ।
ಪ್ರಾಜಾಪತ್ಯಂ ತ್ವಯಾ ಕರ್ಮ ಮಯಿ ಸರ್ವಂ ನಿವೇಶಿತಮ್ ॥

ಅನುವಾದ

ನಿನ್ನ ನಾಭಿಯಿಂದ ಸೂರ್ಯನಂತಹ ತೇಜಸ್ವೀ ದಿವ್ಯ ಕಮಲ ಪ್ರಕಟವಾಯಿತು. ಅದರಲ್ಲಿ ನೀನು ನನ್ನನ್ನು ಉತ್ಪನ್ನ ಮಾಡಿದೆ ಮತ್ತು ಪ್ರಜೆಯನ್ನು ಸೃಷ್ಟಿಸುವ ಕಾರ್ಯವನ್ನು ನನಗೆ ಒಪ್ಪಿಸಿದೆ.॥7॥

ಮೂಲಮ್ - 8

ಸೋಽಹಂ ಸಂನ್ಯಸ್ತಭಾರೋ ಹಿ ತ್ವಾಮುಪಾಸ್ಯ ಜಗತ್ಪತಿಮ್ ।
ರಕ್ಷಾಂ ವಿಧತ್ಸ್ವ ಭೂತೇಷು ಮಮ ತೇಜಸ್ಕರೋ ಭವಾನ್ ॥

ಅನುವಾದ

ನನ್ನ ಮೇಲೆ ಈ ಭಾರ ಇರಿಸಿದಾಗ ನಾನು ಜಗದೀಶ್ವರನಾದ ನಿನ್ನನ್ನು ಉಪಾಸನೆ ಮಾಡಿದೆ. ಪ್ರಭೋ! ನೀನೇ ಸಮಸ್ತ ಪ್ರಾಣಿಗಳಲ್ಲಿ ಇದ್ದು ಅವನ್ನು ರಕ್ಷಿಸು; ಏಕೆಂದರೆ ನೀನೇ ನನಗೆ ಜ್ಞಾನ-ಕ್ರಿಯಾಶಕ್ತಿ ಕೊಟ್ಟಿರುವವನು.॥8॥

ಮೂಲಮ್ - 9

ತತಸ್ತ್ವಮಪಿ ದುರ್ಧರ್ಷಾತ್ತಸ್ಮಾದ್ ಭಾವಾತ್ಸನಾತನಾತ್ ।
ರಕ್ಷಾಂ ವಿಧಾಸ್ಯನ್ ಭೂತಾನಾಂವಿಷ್ಣುತ್ವಮುಪಜಗ್ಮಿವಾನ್ ॥

ಅನುವಾದ

ಆಗ ನನ್ನ ವಿನಂತಿಯನ್ನು ಸ್ವೀಕರಿಸಿ ಪ್ರಾಣಿಗಳ ರಕ್ಷಣೆಗಾಗಿ ಅಪ್ರಮೇಯ ಸನಾತನ ಪುರುಷರೂಪದಿಂದ ಜದತ್ಪಾಲಕ ವಿಷ್ಣುರೂಪದಿಂದ ನೀನು ಪ್ರಕಟಗೊಂಡೆ.॥9॥

ಮೂಲಮ್ - 10

ಅದಿತ್ಯಾಂ ವೀರ್ಯವಾನ್ಪುತ್ರೋ ಭ್ರಾತೃಣಾಂ ವೀರ್ಯವರ್ಧನಃ ।
ಸಮುತ್ಪನ್ನೇಷು ಕೃತ್ಯೇಷು ತೇಷಾಂಸಾಹ್ಯಾಯ ಕಲ್ಪಸೇ ॥

ಅನುವಾದ

ಮತ್ತೆ ನೀನೇ ಅದಿತಿಯ ಗರ್ಭದಿಂದ ಪರಮ ಪರಾಕ್ರಮಿ ವಾಮನರೂಪದಿಂದ ಅವತರಿಸಿದೆ. ಆಗಿನಿಂದ ನೀನು ತನ್ನ ಸಹೋದರನಾದ ಇಂದ್ರಾದಿ ದೇವತೆಗಳ ಶಕ್ತಿಯನ್ನು ಹೆಚ್ಚಿಸುತ್ತಾ, ಆವಶ್ಯಕತೆ ಬಿದ್ದಾಗ ಅವರ ರಕ್ಷಣೆಗಾಗಿ ತೊಡಗಿರುವೆ.॥10॥

ಮೂಲಮ್ - 11

ಸ ತ್ವಮುಜ್ಜಾಸ್ಯಮಾನಾಸು ಪ್ರಜಾಸು ಜಗತಾಂ ವರ ।
ರಾವಣಸ್ಯ ವಧಾಕಾಂಕ್ಷೀ ಮಾನುಷೇಷು ಮನೋಽದಧಾಃ ॥

ಅನುವಾದ

ಜಗದೀಶ್ವರ! ರಾವಣನಿಂದ ಪ್ರಜೆಯ ವಿನಾಶವಾಗ ತೊಡಗಿದಾಗ, ನೀನು ಆ ನಿಶಾಚರನನ್ನು ವಧಿಸುವ ಇಚ್ಛೆಯಿಂದ ಮನುಷ್ಯ ಶರೀರದಲ್ಲಿ ಅವತರಿಸಲು ನಿಶ್ಚಯ ಮಾಡಿದೆ.॥11॥

ಮೂಲಮ್ - 12

ದಶವರ್ಷಸಹಸ್ರಾಣಿ ದಶವರ್ಷಶತಾನಿ ಚ ।
ಕೃತ್ವಾ ವಾಸಸ್ಯ ನಿಯಮಂ ಸ್ವಯಮೇವಾತ್ಮನಾ ಪುರಾ ॥

ಅನುವಾದ

ಸ್ವತಃ ನೀನೇ ಹನ್ನೊಂದು ಸಾವಿರ ವರ್ಷಗಳವರೆಗೆ ಮರ್ತ್ಯಲೋಕದಲ್ಲಿ ವಾಸಿಸುವ ಅವಧಿ ನಿಶ್ಚಯಿಸಿದ್ದೆ.॥12॥

ಮೂಲಮ್ - 13

ಸ ತ್ವಂ ಮನೋಮಯಃ ಪುತ್ರಃಪೂರ್ಣಾಯುರ್ಮಾನುಷೇಷ್ವಿಹ ।
ಕಾಲೋಽಯಂ ತೇ ನರಶ್ರೇಷ್ಠ ಸಮೀಪಮುಪವರ್ತಿತುಮ್ ॥

ಅನುವಾದ

ನರಶ್ರೇಷ್ಠನೇ! ನೀನು ಮನುಷ್ಯಲೋಕದಲ್ಲಿ ತನ್ನ ಸಂಕಲ್ಪದಿಂದಲೇ ಯಾರದೋ ಪುತ್ರರೂಪದಿಂದ ಪ್ರಕಟನಾಗಿರುವೆ. ಈ ಅವತಾರದಲ್ಲಿ ನೀನು ನಿಶ್ಚಯಿಸಿದ ಅವಧಿ ಪೂರ್ಣವಾಗಿದೆ. ಆದ್ದರಿಂದ ಈಗ ನಿನಗೆ ನಮ್ಮ ಲೋಕಗಳಿಗೆ ಬರುವ ಸಮಯ ಬಂದಿದೆ.॥13॥

ಮೂಲಮ್ - 14

ಯದಿ ಭೂಯೋ ಮಹಾರಾಜ ಪ್ರಜಾ ಇಚ್ಛಾಸ್ಯುಪಾಸಿತುಮ್ ।
ವಸ ವಾ ವೀರ ಭದ್ರಂ ತೇ ಏವಮಾಹ ಪಿತಾಮಹಃ ॥

ಮೂಲಮ್ - 15

ಅಥ ವಾ ವಿಜಿಗೀಷಾ ತೇ ಸುರಲೋಕಾಯ ರಾಘವ ।
ಸನಾಥಾ ವಿಷ್ಣುನಾ ದೇವಾ ಭವಂತು ವಿಗತಜ್ವರಾಃ ॥

ಅನುವಾದ

ವೀರ ಮಹಾರಾಜಾ! ಇನ್ನೂ ಹೆಚ್ಚು ಕಾಲದವರೆಗೆ ಇಲ್ಲೇ ಇದ್ದು ಪ್ರಜೆಗಳನ್ನು ಪಾಲಿಸುವ ಇಚ್ಛೆ ಇದ್ದರೆ ನೀನು ಇರಬಲ್ಲೆ. ನಿನಗೆ ಮಂಗಳವಾಗಲಿ. ರಘುನಂದನ! ಅಥವಾ ಪರಮಧಾಮಕ್ಕೆ ಆಗಮಿಸುವ ವಿಚಾರವಿದ್ದರೆ ಅವಶ್ಯವಾಗಿ ಬಂದು ಬಿಡು. ನೀನು ವಿಷ್ಣುವಾಗಿ ಸ್ವಧಾಮದಲ್ಲಿ ಪ್ರತಿಷ್ಠಿತನಾದ ಮೇಲೆ ಸಮಸ್ತ ದೇವತೆಗಳು ಸನಾಥರಾಗಿ, ನಿಶ್ಚಿಂತರಾಗುವರು; ಮುಂತಾಗಿ ಪಿತಾಮಹರು ಹೇಳಿರುವರು.॥14-15॥

ಮೂಲಮ್ - 16

ಶ್ರುತ್ವಾ ಪಿತಾಮಹೇನೋಕ್ತಂ ವಾಕ್ಯಂಕಾಲಸಮೀರಿತಮ್ ।
ರಾಘವಃ ಪ್ರಹಸನ್ವಾಕ್ಯಂ ಸರ್ವಸಂಹಾರಮಬ್ರವೀತ್ ॥

ಅನುವಾದ

ಕಾಲನು ಹೇಳಿದ ಪಿತಾಮಹ ಬ್ರಹ್ಮನ ಸಂದೇಶವನ್ನು ಕೇಳಿ ಶ್ರೀರಘುನಾಥನು ನಗುತ್ತಾ ಆ ಸರ್ವಸಂಹಾರಕಾರೀ ಕಾಲನಲ್ಲಿ ಹೇಳಿದನು.॥16॥

ಮೂಲಮ್ - 17

ಶ್ರುತ್ವಾ ಮೇ ದೇವದೇವಸ್ಯ ವಾಕ್ಯಂ ಪರಮಮದ್ಭುತಮ್ ।
ಪ್ರೀತಿರ್ಹಿ ಮಹತೀ ಜಾತಾ ತವಾಗಮನಸಂಭವಾ ॥

ಅನುವಾದ

ಕಾಲನೇ! ದೇವಾಧಿದೇವ ಬ್ರಹ್ಮದೇವರ ಈ ಪರಮಾದ್ಭುತ ಮಾತನ್ನು ಕೇಳಲು ಸಿಕ್ಕಿತು; ಅದಕ್ಕಾಗಿ ನೀನು ಬಂದಿರುವುದ ರಿಂದ ನನಗೆ ಬಹಳ ಪ್ರಸನ್ನತೆ ಉಂಟಾಗಿದೆ.॥17॥

ಮೂಲಮ್ - 18

ತ್ರಯಾಣಾಮಪಿ ಲೋಕಾನಾಂ ಕಾರ್ಯಾರ್ಥಂಮಮ ಸಂಭವಃ ।
ಭದ್ರಂ ತೇಽಸ್ತು ಗಮಿಷ್ಯಾಮಿ ಯತ ಏವಾಹಮಾಗತಃ ॥

ಅನುವಾದ

ಮೂರು ಲೋಕಗಳ ಪ್ರಯೋಜನದ ಸಿದ್ಧಿಗಾಗಿಯೇ ನನ್ನ ಈ ಅವತಾರವಾಗಿತ್ತು, ಆ ಉದ್ದೇಶ ಈಗ ಪೂರ್ಣವಾಯಿತು; ಅದಕ್ಕಾಗಿ ನಿನಗೆ ಮಂಗಳವಾಗಲೀ. ಈಗ ನಾನು ಎಲ್ಲಿಂದ ಬಂದೆನೋ ಅಲ್ಲಿಗೇ ಹೋಗುವೆನು.॥18॥

ಮೂಲಮ್ - 19

ಹೃದ್ಗತೋ ಹ್ಯಸಿ ಸಂಪ್ರಾಪ್ತೋ ನ ಮೇ ತತ್ರ ವಿಚಾರಣಾ ।
ಮಯಾ ಹಿ ಸರ್ವಕೃತ್ಯೇಷು ದೇವಾನಾಂವಶವರ್ತಿನಾ ।
ಸ್ಥಾತವ್ಯಂ ಸರ್ವಸಂಹಾರ ಯಥಾ ಹ್ಯಾಹಪಿತಾಮಹಃ ॥

ಅನುವಾದ

ಕಾಲನೇ! ನಾನು ಮನಸ್ಸಿನಲ್ಲೇ ನಿನ್ನನ್ನು ಚಿಂತಿಸಿದ್ದೆ. ಅದಕ್ಕನುಸಾರ ನೀನು ಇಲ್ಲಿಗೆ ಬಂದಿರುವೆ. ಆದ್ದರಿಂದ ಈ ವಿಷಯದಲ್ಲಿ ನನ್ನ ಮನಸ್ಸಿನಲ್ಲಿ ಯಾವುದೇ ವಿಚಾರವಿಲ್ಲ. ಸರ್ವಸಂಹಾರ ಕಾಲನೇ! ಪಿತಾಮಹರು ಹೇಳಿದಂತೆಯೇ ನಾನು ಎಲ್ಲ ಕಾರ್ಯಗಳಲ್ಲಿ ಸದಾ ದೇವತೆಗಳ ವಶವರ್ತಿಯಾಗಿಯೇ ಇರಬೇಕು.॥19॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ನೂರನಾಲ್ಕನೆಯ ಸರ್ಗ ಪೂರ್ಣವಾಯಿತು. ॥104॥