[ನೂರಮೂರನೆಯ ಸರ್ಗ]
ಭಾಗಸೂಚನಾ
ಶ್ರೀರಾಮನಲ್ಲಿಗೆ ಕಾಲಪುರುಷನ ಆಗಮನ
ಮೂಲಮ್ - 1
ಕಸ್ಯಚಿತ್ವಥ ಕಾಲಸ್ಯ ರಾಮೇ ಧರ್ಮಪರೇ ಸ್ಥಿತೇ ।
ಕಾಲಸ್ತಾಪಸರೂಪೇಣ ರಾಜದ್ವಾರಮುಪಾಗಮತ್ ॥
ಅನುವಾದ
ಅನಂತರ ಕೆಲಕಾಲ ಸಂದ ಬಳಿಕ ಭಗವಾನ್ ಶ್ರೀರಾಮನು ಧರ್ಮಪೂರ್ವಕವಾಗಿ ಅಯೋಧ್ಯೆಯನ್ನು ಆಳುತ್ತಿದ್ದಾಗ ಸಾಕ್ಷಾತ್ ಕಾಲನು ತಪಸ್ವಿಯ ರೂಪದಲ್ಲಿ ಅರಮನೆಯ ದ್ವಾರಕ್ಕೆ ಬಂದನು.॥1॥
ಮೂಲಮ್ - 2
ಸೋಽಬ್ರವೀಲ್ಲಕ್ಷ್ಮಣಂ ವಾಕ್ಯಂ ಧೃತಿಮಂತಂ ಯಶಸ್ವಿನಮ್ ।
ಮಾಂ ನಿವೇದಯ ರಾಮಾಯ ಸಂಪ್ರಾಪ್ತಂ ಕಾರ್ಯಗೌರವಾತ್ ॥
ಅನುವಾದ
ಅವನು ದ್ವಾರದಲ್ಲಿ ನಿಂತು ಧೈರ್ಯವಂತ, ಯಶಸ್ವೀ ಲಕ್ಷ್ಮಣನಲ್ಲಿ ಹೇಳಿದನು - ನಾನೊಂದು ಭಾರೀ ಕಾರ್ಯದಿಂದ ಬಂದಿರುವೆನು. ನೀನು ರಾಮಚಂದ್ರನಿಗೆ ನಾನು ಬಂದಿರುವ ಸೂಚನೆಯನ್ನು ಕೊಡು.॥2॥
ಮೂಲಮ್ - 3
ದೂತೋಹ್ಯತಿಬಲಸ್ಯಾಹಂ ಮಹರ್ಷೇರಮಿತೌಜಸಃ ।
ರಾಮಂ ದಿದೃಕ್ಷುರಾಯಾತಃ ಕಾರ್ಯೇಣ ಹಿ ಮಹಾಬಲ ॥
ಅನುವಾದ
ಮಹಾಬಲಿ ಲಕ್ಷ್ಮಣ! ನಾನು ಅಮಿತ ತೇಜಸ್ವೀ ಮಹರ್ಷಿ ಅತಿ ಬಲನ ದೂತನಾಗಿದ್ದೇನೆ ಹಾಗೂ ಒಂದು ಆವಶ್ಯಕ ಕಾರ್ಯವಶ ಶ್ರೀರಾಮಚಂದ್ರನನ್ನು ಕಾಣಲು ಬಂದಿರುವೆನು.॥3॥
ಮೂಲಮ್ - 4
ತಸ್ಯ ತದ್ವಚನಂ ಶ್ರುತ್ವಾ ಸೌಮಿತ್ರಿಸ್ತ್ವರಯಾನ್ವಿತಃ ।
ನ್ಯವೇದಯತ ರಾಮಾಯ ತಾಪಸಂ ತಂ ಸಮಾಗತಮ್ ॥
ಅನುವಾದ
ಅವನ ಮಾತನ್ನು ಕೇಳಿ ಸುಮಿತ್ರಾ ಕುಮಾರ ಲಕ್ಷ್ಮಣನು ಲಗುಬಗೆಯಿಂದ ಒಳಗೆ ಹೋಗಿ ಶ್ರೀರಾಮನಲ್ಲಿ ಆ ತಾಪಸನ ಆಗಮನವನ್ನು ಸೂಚಿಸಿದನು.॥4॥
ಮೂಲಮ್ - 5
ಜಯಸ್ವ ರಾಜಧರ್ಮೇಣ ಉಭೌ ಲೋಕೌ ಮಹಾದ್ಯುತೇ ।
ದೂತಸ್ತ್ವಾಂ ದ್ರಷ್ಟುಮಾಯಾತಸ್ತಪಸಾ ಭಾಸ್ಕರಪ್ರಭಃ ॥
ಅನುವಾದ
ಮಹಾತೇಜಸ್ವೀ ಮಹಾರಾಜ! ನೀನು ನಿನ್ನ ರಾಜಧರ್ಮದ ಪ್ರಭಾವದಿಂದ ಇಹ- ಪರಲೋಕಗಳನ್ನು ಜಯಿಸಿದ್ದೀಯೆ. ಓರ್ವ ಮಹರ್ಷಿ ದೂತನ ರೂಪದಲ್ಲಿ ನಿಮ್ಮನ್ನು ಕಾಣಲು ಬಂದಿರುವರು. ಅವರು ತಪಸ್ಸಿನಿಂದ ಪ್ರಾಪ್ತವಾದ ತೇಜದಿಂದ ಸೂರ್ಯನಂತೆ ಪ್ರಕಾಶಿಸುತ್ತಿರುವರು.॥5॥
ಮೂಲಮ್ - 6
ತದ್ವಾಕ್ಯಂ ಲಕ್ಷ್ಮಣೇನೋಕ್ತಂ ಶ್ರುತ್ವಾ ರಾಮ ಉವಾಚ ಹ ।
ಪ್ರವೇಶ್ಯತಾಂಮುನಿಸ್ತಾತ ಮಹೌಜಾಸ್ತಸ್ಯ ವಾಕ್ಯಧೃಕ್ ॥
ಅನುವಾದ
ಲಕ್ಷ್ಮಣನು ಹೇಳಿದ ಮಾತನ್ನು ಕೇಳಿ ಶ್ರೀರಾಮನು - ಅಯ್ಯಾ! ತನ್ನ ಸ್ವಾಮಿಯ ಸಂದೇಶವನ್ನು ಹೊತ್ತು ತಂದಿರುವ ಆ ಮಹಾತೇಜಸ್ವೀ ಮುನಿಯನ್ನು ಒಳಗೆ ಕರೆದುಕೊಂಡು ಬಾ ಎಂದು ಹೇಳಿದನು.॥6॥
ಮೂಲಮ್ - 7
ಸೌಮಿತ್ರಿಸ್ತು ತಥೇತ್ಯುಕ್ತ್ವಾ ಪ್ರಾವೇಶಯತ ತಂ ಮುನಿಮ್ ।
ಜ್ವಲಂತಮಿವ ತೇಜೋಭಿಃ ಪ್ರದಹಂತಮಿವಾಂಶುಭಿಃ ॥
ಅನುವಾದ
‘ಹಾಗೆಯೇ ಆಗಲಿ’ ಎಂದು ಹೇಳಿ ಸೌಮಿತ್ರಿಯು ಆ ಮುನಿಯನ್ನು ಒಳಗೆ ಕರೆದುಕೊಂಡು ಬಂದನು. ಅವರು ತೇಜದಿಂದ ಪ್ರಜ್ವಲಿತನಾಗಿ, ತನ್ನ ಪ್ರಖರ ಕಿರಣಗಳಿಂದ ಸುಟ್ಟುಬಿಡುವರೋ ಎಂದೆನಿಸುತ್ತಿತ್ತು.॥7॥
ಮೂಲಮ್ - 8
ಸೋಽಭಿಗಮ್ಯ ರಘುಶ್ರೇಷ್ಠಂ ದೀಪ್ಯಮಾನಂ ಸ್ವತೇಜಸಾ ।
ಋಷಿರ್ಮಧುರಯಾ ವಾಚಾ ವರ್ಧಸ್ವೇತ್ಯಾಹ ರಾಘವಮ್ ॥
ಅನುವಾದ
ತನ್ನ ತೇಜದಿಂದ ದೀಪ್ತಿಮಂತನಾದ ರಘುಕುಲತಿಲಕ ಶ್ರೀರಾಮನ ಬಳಿಗೆ ಬಂದ ಋಷಿಯು ಅವನಲ್ಲಿ ಮಧುರವಾಗಿ ಹೇಳಿದನು - ರಘುಕುಲನಂದನ! ನಿನಗೆ ಅಭ್ಯುದಯವಾಗಲಿ.॥8॥
ಮೂಲಮ್ - 9
ತಸ್ಮೈ ರಾಮೋ ಮಹಾತೇಜಾಃ ಪೂಜಾಮರ್ಘ್ಯಪುರೋಗಮಾಮ್ ।
ದದೌ ಕುಶಲಮವ್ಯಗ್ರಂ ಪ್ರಷ್ಟುಂ ಚೈವೋಪಚಕ್ರಮೇ ॥
ಅನುವಾದ
ಮಹಾತೇಜಸ್ವೀ ಶ್ರೀರಾಮನು ಅವರಿಗೆ ಅರ್ಘ್ಯ, ಪಾದ್ಯಾದಿ ಪೂಜೋಪಚಾರಗಳನ್ನು ಅರ್ಪಿಸಿ, ಶಾಂತವಾಗಿ ಅವರ ಕ್ಷೇಮ ಸಮಾಚಾರ ಕೇಳತೊಡಗಿದನು.॥9॥
ಮೂಲಮ್ - 10
ಪೃಷ್ಟಶ್ಚ ಕುಶಲಂ ತೇನ ರಾಮೇಣ ವದತಾಂ ವರಃ ।
ಆಸನೇ ಕಾಂಚನೇ ದಿವ್ಯೇ ನಿಷಸಾದ ಮಹಾಯಶಾಃ ॥
ಅನುವಾದ
ಶ್ರೀರಾಮನು ಕೇಳಿದಾಗ ಶ್ರೇಷ್ಠವಾಗ್ನಿ, ಮಹಾಯಶಸ್ವೀ ಮುನಿಯು ಕ್ಷೇಮ-ಸಮಾಚಾರ ತಿಳಿಸಿ, ದಿವ್ಯ ಸ್ವರ್ಣಮಯ ಆಸನದಲ್ಲಿ ವಿರಾಜಮಾನರಾದರು.॥10॥
ಮೂಲಮ್ - 11
ತಮುವಾಚ ತತೋ ರಾಮಃ ಸ್ವಾಗತಂ ತೇ ಮಹಾಮತೇ ।
ಪ್ರಾಪಯಾಸ್ಯ ಚ ವಾಕ್ಯಾನಿ ಯತೋ ದೂತಸ್ತ್ವಮಾಗತಃ ॥
ಅನುವಾದ
ಬಳಿಕ ಶ್ರೀರಾಮನು ಅವರಲ್ಲಿ ಹೇಳಿದನು - ಮಹಾಮತೇ! ನಿಮಗೆ ಸ್ವಾಗತವಿರಲಿ. ನೀವು ಯಾರ ದೂತರಾಗಿ ಇಲ್ಲಿಗೆ ಆಗಮಿಸಿರುವಿರೋ, ಅವರ ಸಂದೇಶ ತಿಳಿಸಿರಿ.॥11॥
ಮೂಲಮ್ - 12
ಚೋದಿತೋ ರಾಜಸಿಂಹೇನ ಮುನಿರ್ವಾಕ್ಯಮಭಾಷತ ।
ದ್ವಂದ್ವೇ ಹ್ಯೇತತ್ಪ್ರವಕ್ತವ್ಯಂ ಹಿತಂ ವೈ ಯದ್ಯವೇಕ್ಷಸೇ ॥
ಅನುವಾದ
ರಾಜಸಿಂಹ ಶ್ರೀರಾಮನು ಹೀಗೆ ಪ್ರೇರೇಪಿಸಿದಾಗ ಮುನಿ ಹೇಳಿದರು - ನೀನು ನಮ್ಮ ಹಿತವನ್ನು ಬಯಸುವೆಯಾದರೆ, ನಾನು-ನೀನು ಇಬ್ಬರೇ ಇರುವಲ್ಲಿಯೇ ಹೇಳುವುದು ಉಚಿತವಾದೀತು.॥1.॥
ಮೂಲಮ್ - 13
ಯಃ ಶೃಣೋತಿ ನಿರೀಕ್ಷೇದ್ವಾ ಸವಧ್ಯೋ ಭವಿತಾ ತವ ।
ಭವೇದ್ವೈ ಮುನಿಮುಖ್ಯಸ್ಯ ವಚನಂ ಯದ್ಯವೇಕ್ಷಸೇ ॥
ಅನುವಾದ
ನೀನು ಮುನಿಶ್ರೇಷ್ಠ ಅತಿಬಲನ ಮಾತಿನ ಕಡೆಗೆ ಗಮನ ಕೊಡುವುದಿದ್ದರೆ, ಯಾರೇ ಮನುಷ್ಯನು ನಮ್ಮಿಬ್ಬರ ಮಾತನ್ನು ಕೇಳಿಸಿಕೊಂಡರೆ, ಅಥವಾ ನಾವು ಮಾಡುವ ವಾರ್ತಾಲಾಪವನ್ನು ನೋಡಿದರೆ ಅವನನ್ನು ವಧಿಸಲಾಗುವುದು ಎಂದು ನೀನು ಘೋಷಣೆ ಮಾಡಬೇಕು.॥13॥
ಮೂಲಮ್ - 14
ತಥೇತಿ ಚ ಪ್ರತಿಜ್ಞಾಯ ರಾಮೋಲಕ್ಷ್ಮಣಮಬ್ರವೀತ್ ।
ದ್ವಾರಿ ತಿಷ್ಠ ಮಹಾಬಾಹೋ ಪ್ರತಿಹಾರಂ ವಿಸರ್ಜಯ ॥
ಅನುವಾದ
ಶ್ರೀರಾಮನು ‘ಹಾಗೆಯೇ ಆಗಲಿ’ ಎಂದು ಹೇಳಿ ಪ್ರತಿಜ್ಞೆ ಮಾಡಿದನು ಮತ್ತು ಲಕ್ಷ್ಮಣನಲ್ಲಿ ಹೇಳಿದನು- ಮಹಾಬಾಹೋ! ದ್ವಾರಪಾಲಕನನ್ನು ಕಳಿಸಿ ನೀನೇ ಸ್ವತಃ ಬಾಗಿಲಲ್ಲಿ ನಿಂತು ಕಾವಲು ಕಾಯಬೇಕು.॥14॥
ಮೂಲಮ್ - 15
ಸ ಮೇ ವಧ್ಯಃ ಖಲು ಭವೇದ್ವಾಚಂ ದ್ವಂದ್ವಸಮೀರಿತಮ್ ।
ಋಷೇರ್ಮಮ ಚ ಸೌಮಿತ್ರೇ ಪಶ್ಯೇದ್ವಾ ಶೃಣುಯಾಚ್ಚ ಯಃ ॥
ಅನುವಾದ
ಸುಮಿತ್ರಾನಂದನ! ಋಷಿ ಮತ್ತು ನನ್ನ ಮಾತನ್ನು ಕೇಳುವವನು, ನಾವು ಮಾತನಾಡುವುದನ್ನು ನೋಡುವವನು ನನ್ನಿಂದ ವಧಿಸಲ್ಪಡುವನು.॥15॥
ಮೂಲಮ್ - 16
ತತೋ ನಿಕ್ಷಿಪ್ಯ ಕಾಕುತ್ಸ್ಥೋ ಲಕ್ಷ್ಮಣಂ ದ್ವಾರಿಸಂಗ್ರಹಮ್ ।
ತಮುವಾಚ ಮುನೇವಾಕ್ಯಂ ಕಥಯಸ್ವೇತಿ ರಾಘವಃ ॥
ಮೂಲಮ್ - 17
ಯತ್ತೇ ಮನೀಷಿತಂ ವಾಕ್ಯಂ ಯೇನ ವಾಸಿ ಸಮಾಹಿತಃ ।
ಕಥಯಸ್ವಾವಿಶಂಕಸ್ತ್ವಂ ಮಮಾಪಿ ಹೃದಿ ವರ್ತತೇ ॥
ಅನುವಾದ
ಹೀಗೆ ತನ್ನ ಮಾತನ್ನು ನಡೆಸುವ ಲಕ್ಷ್ಮಣನನ್ನು ದ್ವಾರದಲ್ಲಿ ನಿಯಮಿಸಿ, ಶ್ರೀರಾಮನು ಬಂದಿರುವ ಮಹರ್ಷಿಯಲ್ಲಿ - ಮುನೇ! ಈಗ ನೀವು ನಿಃಶಂಕರಾಗಿ ನಿಮಗೆ ಹೇಳಬೇಕಾದ ಮಾತನ್ನು ಹೇಳಿರಿ, ಅಥವಾ ಯಾವುದನ್ನು ಹೇಳಲು ನಿಮ್ಮನ್ನು ಕಳಿಸಲಾಗಿದೆಯೋ ಅದನ್ನು ಹೇಳಿರಿ. ಅದನ್ನು ಕೇಳುವ ಉತ್ಕಂಠತೆ ನನ್ನ ಮನಸ್ಸಿನಲ್ಲಿದೆ.॥16-17॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ನೂರಮೂರನೆಯ ಸರ್ಗಪೂರ್ಣವಾಯಿತು. ॥103॥