[ನೂರ ಎರಡನೆಯ ಸರ್ಗ]
ಭಾಗಸೂಚನಾ
ಶ್ರೀರಾಮನ ಆಜ್ಞೆಯಂತೆ ಭರತ-ಲಕ್ಷ್ಮಣರು ಕುಮಾರರಾದ ಅಂಗದ ಮತ್ತು ಚಂದ್ರಕೇತು ಇವರನ್ನು ಕಾರುಪಥ ದೇಶಕ್ಕೆ ರಾಜನನ್ನಾಗಿ ನೇಮಿಸಿದುದು
ಮೂಲಮ್ - 1
ತಚ್ಛ್ರುತ್ವಾ ಹರ್ಷಮಾಪೇದೇ ರಾಘವೋ ಭ್ರಾತೃಭಿಃ ಸಹ ।
ವಾಕ್ಯಂ ಚಾದ್ಭುತಸಂಕಾಶಂ ಭ್ರಾತೄನ್ ಪ್ರೋವಾಚ ರಾಘವಃ ॥
ಅನುವಾದ
ಗಂಧರ್ವದೇಶದ ಸಮಾಚಾರವನ್ನು ಭರತನಿಂದ ಕೇಳಿದ ಶ್ರೀರಾಮಚಂದ್ರನಿಗೆ ತಮ್ಮಂದಿರೊಂದಿಗೆ ತುಂಬಾ ಸಂತೋಷವಾಯಿತು. ಅನಂತರ ಶ್ರೀರಾಮನು ಪರಮಾದ್ಭುತವಾದ ಮಾತನ್ನು ಅನುಜರಲ್ಲಿ ಹೇಳಿದನು.॥1॥
ಮೂಲಮ್ - 2
ಇಮೌ ಕುಮಾರೌ ಸೌಮಿತ್ರೇ ತವ ಧರ್ಮವಿಶಾರದೌ ।
ಅಂಗದಶ್ಚಂದ್ರಕೇತುಶ್ಚ ರಾಜ್ಯಾರ್ಥೇ ದೃಢವಿಕ್ರವೌ ॥
ಅನುವಾದ
ಸುಮಿತ್ರಾ ನಂದನ ! ಅಂಗದ ಮತ್ತು ಚಿತ್ರಕೇತು ಇವರಿಬ್ಬರೂ ನಿನ್ನ ಕುಮಾರರು ಧರ್ಮಜ್ಞರಾಗಿದ್ದಾರೆ. ಇವರು ರಾಜ್ಯದ ರಕ್ಷಣೆಗಾಗಿ ಬೇಕಾದ ದೃಢತೆ ಹಾಗೂ ಪರಾಕ್ರಮವನ್ನು ಹೊಂದಿರುವರು.॥2॥
ಮೂಲಮ್ - 3
ಇಮೌ ರಾಜ್ಯೇಽಭಿಷೇಕ್ಷ್ಯಾಮಿ ದೇಶಃ ಸಾಧು ವಿಧೀಯತಾಮ್ ।
ರಮಣೀಯೋ ಹ್ಯಸಂಬಾಧೋ ರಮೇತಾಂ ಯತ್ರ ಧನ್ವಿನೌ ॥
ಅನುವಾದ
ಆದ್ದರಿಂದ ನಾನು ಇವರಿಗೂ ಪಟ್ಟಾಭಿಷೇಕ ಮಾಡುವೆನು. ನೀನು ಇವರಿಗಾಗಿ ಒಳ್ಳೆಯ ದೇಶವನ್ನು ಆರಿಸು. ಅದು ರಮಣೀಯವಾಗಿದ್ದು, ವಿಘ್ನಬಾಧೆಗಳಿಂದ ರಹಿತವಾಗಿರಲಿ. ಅಲ್ಲಿ ಇವರಿಬ್ಬರು ಧನುರ್ಧರವೀರರು ಆನಂದವಾಗಿ ಇರಲಿ.॥3॥
ಮೂಲಮ್ - 4
ನ ರಾಜ್ಞಾಂ ಯತ್ರ ಪೀಡಾ ಸ್ಯಾನ್ನಾಶ್ರಮಾಣಾಂ ವಿನಾಶನಮ್ ।
ಸ ದೇಶೋ ದೃಶ್ಯತಾಂ ಸೌಮ್ಯ ನಾಪರಾಧ್ಯಾಮಹೇಯಥಾ ॥
ಅನುವಾದ
ಸೌಮ್ಯ! ಇವರು ವಾಸಿಸುವುದರಿಂದ ಇತರ ರಾಜರಿಗೆ ಪೀಡೆ, ಉದ್ವೇಗ ಆಗದಿರುವ, ಆಶ್ರಮಗಳ ನಾಶವಾಗದಿರುವ, ನಾವೂ ಕೂಡ ಯಾರ ಕಣ್ಣಿಗೂ ಅಪರಾಧಿಗಳಾಗದಿರುವಂತಹ ಒಂದು ದೇಶವನ್ನು ನೋಡು.॥4॥
ಮೂಲಮ್ - 5
ತಥೋಕ್ತವತಿ ರಾಮೇ ತು ಭರತಃ ಪ್ರತ್ಯುವಾಚ ಹ ।
ಅಯಂ ಕಾರುಪಥೋ ದೇಶೋ ರಮಣೀಯೋ ನಿರಾಮಯಃ ॥
ಅನುವಾದ
ಶ್ರೀರಾಮಚಂದ್ರನು ಹೀಗೆ ಹೇಳಿದಾಗ ಭರತನು ಉತ್ತರಿಸಿದನು- ಆರ್ಯನೇ! ಕಾರುಪಥ ಎಂಬ ದೇಶ ಬಹಳ ಸುಂದರವಾಗಿದೆ. ಅಲ್ಲಿ ಯಾವುದೇ ರೋಗ-ವ್ಯಾಧಿಗಳ ಭಯವಿಲ್ಲ.॥5॥
ಮೂಲಮ್ - 6
ನಿವೇಶ್ಯತಾಂ ತತ್ರ ಪುರಮಂಗದಸ್ಯ ಮಹಾತ್ಮನಃ ।
ಚಂಂದ್ರಕೇತೋಃ ಸುರುಚಿರಂ ಚಂದ್ರಕಾಂತಂ ನಿರಾಮಯಮ್ ॥
ಅನುವಾದ
ಅಲ್ಲಿ ಮಹಾತ್ಮಾ ಅಂಗದನಿಗಾಗಿ ಹೊಸ ರಾಜಧಾನೀ ಸ್ಥಾಪಿಸಲ್ಪಡಲಿ ಹಾಗೂ ಚಂದ್ರಕೇತುವಿಗೆ ಇರಲು ಚಂದ್ರಕಾಂತ ಎಂಬ ನಗರದ ನಿರ್ಮಾಣವಾಗಲಿ. ಅದು ಸುಂದರ ಮತ್ತು ಆರೋಗ್ಯ ವರ್ಧಕವಾಗಲಿ.॥6॥
ಮೂಲಮ್ - 7
ತದ್ವಾಕ್ಯಂ ಭರತೇನೋಕ್ತಂ ಪ್ರತಿಜಗ್ರಾಹ ರಾಘವಃ ।
ತಂ ಚ ಕೃತ್ವಾ ವಶೇ ದೇಶಮಂಗದಸ್ಯ ನ್ಯವೇಶಯತ್ ॥
ಅನುವಾದ
ಭರತನು ಹೇಳಿದ ಮಾತನ್ನು ಶ್ರೀರಘುನಾಥನು ಅನುಮೋದಿಸಿ, ಕಾರುಪಥ ದೇಶವನ್ನು ತನ್ನ ಅಧಿಕಾರದಲ್ಲಿ ಪಡೆದು ಅಂಗದನನ್ನು ಅಲ್ಲಿಯ ರಾಜನನ್ನಾಗಿಸಿದನು.॥7॥
ಮೂಲಮ್ - 8
ಅಂಗದೀಯಾ ಪುರೀ ರಮ್ಯಾಪ್ಯಂಗದಸ್ಯ ನಿವೇಶಿತಾ ।
ರಮಣೀಯಾ ಸುಗುಪ್ತಾ ಚ ರಾಮೇಣಾಕ್ಲಿಷ್ಟಕರ್ಮಣಾ ॥
ಅನುವಾದ
ಕ್ಲೇಶರಹಿತ ಕರ್ಮಮಾಡುವ ಶ್ರೀರಾಮನು ಅಂಗದನಿಗಾಗಿ ‘ಅಂಗದೀಯಾ’ ಎಂಬ ರಮಣೀಯ ಪುರಿಯನ್ನು ಸ್ಥಾಪಿಸಿದನು. ಪರಮ ಸುಂದರವಾಗಿದ್ದು, ಎಲ್ಲ ಕಡೆಗಳಿಂದ ಸುರಕ್ಷಿತವಾಗಿತ್ತು.॥8॥
ಮೂಲಮ್ - 9
ಚಂದ್ರಕೇತೋಶ್ಚ ಮಲ್ಲಸ್ಯಮಲ್ಲಭೂಮ್ಯಾಂ ನಿವೇಶಿತಾ ।
ಚಂದ್ರಕಾಂತೇತಿ ವಿಖ್ಯಾತಾ ದಿವ್ಯಾ ಸ್ವರ್ಗಪುರೀ ಯಥಾ ॥
ಅನುವಾದ
ಚಂದ್ರಕೇತು ಹೃಷ್ಟ-ಪುಷ್ಟನಾಗಿ ಮಲ್ಲನಂತೆ ಇದ್ದನು. ಅವನಿಗಾಗಿ ಮಲ್ಲ ದೇಶದಲ್ಲಿ ‘ಚಂದ್ರಕಾಂತಾ’ ಎಂಬ ವಿಖ್ಯಾತ ದಿವ್ಯಪುರಿಯನ್ನು ನಿರ್ಮಿಸಲಾಯಿತು. ಅದು ಸ್ವರ್ಗದ ಅಮರಾವತಿಯಂತೆ ಸುಂದರವಾಗಿತ್ತು.॥9॥
ಮೂಲಮ್ - 10
ತತೋ ರಾಮಃ ಪರಾಂ ಪ್ರೀತಿಂ ಲಕ್ಷ್ಮಣೋ ಭರತಸ್ತಥಾ ।
ಯಯುರ್ಯುದ್ಧೇ ದುರಾಧರ್ಷಾ ಅಭಿಷೇಕಂ ಚ ಚಕ್ರಿರೇ ॥
ಅನುವಾದ
ಇದರಿಂದ ಶ್ರೀರಾಮ - ಲಕ್ಷ್ಮಣ - ಭರತ ಮೂವರಿಗೂ ಬಹಳ ಸಂತೋಷವಾಯಿತು. ಆ ಎಲ್ಲ ರಣದುರ್ಜಯ ವೀರರು ಸ್ವತಃ ಆ ಕುಮಾರರಿಗೆ ಪಟ್ಟಾಭಿಷೇಕ ಮಾಡಿದರು.॥10॥
ಮೂಲಮ್ - 11
ಅಭಿಷಿಚ್ಯ ಕುಮಾರೌ ದ್ವೌ ಪ್ರಸ್ಥಾಪ್ಯ ಸುಸಮಾಹಿತೌ ।
ಅಂಗದಂ ಪಶ್ಚಿಮಾಂ ಭೂಮಿಂ ಚಂದ್ರಕೇತುಮುದಙ್ಮುಖಮ್ ॥
ಅನುವಾದ
ಏಕಾಗ್ರಚಿತ್ತ ಹಾಗೂ ಎಚ್ಚರಿಕೆಯಿಂದಿರುವ ಆ ಕುಮಾರರಿಬ್ಬರ ಪಟ್ಟಾಭಿಷೇಕ ಮಾಡಿ, ಅಂಗದನನ್ನು ಪಶ್ಚಿಮಕ್ಕೆ ಮತ್ತು ಚಂದ್ರಕೇತುವನ್ನು ಉತ್ತರಕ್ಕೆ ಕಳಿಸಿಕೊಟ್ಟರು.॥11॥
ಮೂಲಮ್ - 12
ಅಂಗದಂ ಚಾಪಿ ಸೌಮಿತ್ರಿರ್ಲಕ್ಷ್ಮಣೋಽನುಜಗಾಮ ಹ ।
ಚಂದ್ರಕೇತೋಸ್ತು ಭರತಃ ಪಾರ್ಷ್ಣಿಗ್ರಾಹೋ ಬಭೂವ ಹ ॥
ಅನುವಾದ
ಅಂಗದನೊಂದಿಗೆ ಸ್ವತಃ ಸುಮಿತ್ರಾ ಕುಮಾರ ಲಕ್ಷ್ಮಣನು ಹೋದನು ಹಾಗೂ ಚಂದ್ರಕೇತುವಿಗೆ ಪಾರ್ಶ್ವರಕ್ಷಕನಾಗಿ ಭರತನು ಪ್ರಯಾಣ ಬೆಳೆಸಿದನು.॥12॥
ಮೂಲಮ್ - 13
ಲಕ್ಷ್ಮಣಸ್ತ್ವಂಗದೀಯಾಯಾಂ ಸಂವತ್ಸರಮಥೋಷಿತಃ ।
ಪುತ್ರೇ ಸ್ಥಿತೇ ದುರಾಧರ್ಷೇ ಅಯೋಧ್ಯಾಂ ಪುನರಾಗಮತ್ ॥
ಅನುವಾದ
ಲಕ್ಷ್ಮಣನು ಅಂಗದೀಯಾ ಪುರಿಯಲ್ಲಿ ಒಂದು ವರ್ಷವಿದ್ದು, ಅವನ ದುರ್ಧರ್ಷಪುತ್ರ ಅಂಗದನು ದೃಢತೆ ಯಿಂದ ರಾಜ್ಯವನ್ನು ಆಳತೊಡಗಿದಾಗ, ಅವನು ಪುನಃ ಅಯೋಧ್ಯೆಗೆ ಮರಳಿದನು.॥13॥
ಮೂಲಮ್ - 14
ಭರತೋಽಪಿ ತಥೈವೋಷ್ಯಸಂವತ್ಸರಮತೋಧಿಕಮ್ ।
ಅಯೋಧ್ಯಾಂ ಪುನರಾಗಮ್ಯರಾಮಪಾದಾವುಪಾಸ್ತ ಸಃ ॥
ಅನುವಾದ
ಹೀಗೆಯೇ ಭರತನೂ ಚಂದ್ರಕಾಂತಾ ನಗರದಲ್ಲಿ ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚು ಕಾಲ ಉಳಿದು, ಚಂದ್ರಕೇತುವಿನ ರಾಜ್ಯವು ದೃಢವಾದಾಗ ಅವನು ಅಯೋಧ್ಯೆಗೆ ಬಂದು ಶ್ರೀರಾಮನ ಚರಣಸೇವೆಯಲ್ಲಿ ತೊಡಗಿದನು.॥14॥
ಮೂಲಮ್ - 15
ಉಭೌ ಸೌಮಿತ್ರಿಭರತೌ ರಾಮಾಪಾದಾವನುವ್ರತೌ ।
ಕಾಲಂ ಗತಮಪಿ ಸ್ನೇಹಾನ್ನ ಜಜ್ಞಾತೇಽತಿಧಾರ್ಮಿಕೌ ॥
ಅನುವಾದ
ಲಕ್ಷ್ಮಣ - ಭರತರಿಗೆ ಶ್ರೀರಾಮಚಂದ್ರನ ಚರಣಗಳಲ್ಲಿ ಅನನ್ಯ ಅನುರಾಗವಿತ್ತು. ಇಬ್ಬರೂ ಬಹಳ ಧರ್ಮಾತ್ಮರಾಗಿದ್ದು, ಶ್ರೀರಾಮನ ಸೇವೆಯಲ್ಲಿ ಇರುವಾಗ ಬಹಳ ಸಮಯ ಕಳೆಯಿತು; ಆದರೆ ಸ್ನೇಹಾಧಿಕ್ಯದಿಂದಾಗಿ ಅವರಿಗೆ ಅದು ತಿಳಿಯಲೇ ಇಲ್ಲ.॥15॥
ಮೂಲಮ್ - 16
ಏವಂ ವರ್ಷಸಹಸ್ರಾಣಿ ದಶ ತೇಷಾಂ ಯಯುಸ್ತದಾ ।
ಧರ್ಮೇ ಪ್ರಯತಮಾನಾನಾಂ ಪೌರಕಾರ್ಯೇಷು ನಿತ್ಯದಾ ॥
ಅನುವಾದ
ಆ ಮೂವರೂ ಸಹೋದರರು ಪುರವಾಸಿಗಳ ಕಾರ್ಯದಲ್ಲಿ ಸದಾ ಮುಳುಗಿದ್ದು, ಧರ್ಮ ಪಾಲನೆಗಾಗಿ ಪ್ರಯತ್ನಶೀಲರಾಗಿ ಇರುತ್ತಿದ್ದರು. ಹೀಗೆ ಹತ್ತು ಸಾವಿರ ವರ್ಷಗಳು ಕಳೆದು ಹೋದುವು.॥16॥
ಮೂಲಮ್ - 17
ವಿಹೃತ್ಯ ಕಾಲಂ ಪರಿಪೂರ್ಣಮಾನಸಾಃ
ಶ್ರಿಯಾ ವೃತಾ ಧರ್ಮಪುರೇ ಚ ಸಂಸ್ಥಿತಾಃ ।
ತ್ರಯಃ ಸಮಿದ್ಧಾ ಇವ ದೀಪ್ತತೇಜಸೋ
ಹುತಾಗ್ನಯಃ ಸಾಧುಮಹಾಧ್ವರೇ ತ್ರಯಃ ॥
ಅನುವಾದ
ಧರ್ಮಸಾಧನವಾದ ಅಯೋಧ್ಯಾಪುರಿಯಲ್ಲಿ ವೈಭವ ಸಂಪನ್ನರಾಗಿ ಇರುತ್ತಾ, ಮೂವರೂ ಆಗಾಗ ತಿರುಗಾಡುತ್ತಾ ಪ್ರಜೆಯನ್ನು ನಿರೀಕ್ಷಿಸುತ್ತಿದ್ದರು. ಅವರ ಮನೋರಥಗಳೆಲ್ಲ ಪೂರ್ಣವಾಗಿದ್ದವು ಹಾಗೂ ಅವರು ಮಹಾಯಜ್ಞದಲ್ಲಿ ಆಹುತಿ ಪಡೆದು ಪ್ರಜ್ವಲಿತವಾದ ತೇಜಸ್ವಿ ಗಾರ್ಹಪತ್ಯ, ಆಹವನೀಯ ಹಾಗೂ ದಕ್ಷಿಣಾಗ್ನಿಗಳೆಂಬ ತ್ರಿವಿಧ ಯಜ್ಞೇಶ್ವರರಂತೆ ಪ್ರಕಾಶಿಸುತ್ತಿದ್ದರು.॥17॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ನೂರ ಎರಡನೆಯ ಸರ್ಗ ಪೂರ್ಣವಾಯಿತು. ॥102॥