१०१ तक्ष-शिला--पुष्कल-ग्रहणम्

[ನೂರ ಒಂದನೆಯ ಸರ್ಗ]

ಭಾಗಸೂಚನಾ

ಗಂಧರ್ವರ ಮೇಲೆ ಭರತನ ಆಕ್ರಮಣ, ಅವರನ್ನು ಸಂಹರಿಸಿ ಅಲ್ಲಿ ಎರಡು ಸುಂದರ ನಗರಗಳನ್ನು ನಿರ್ಮಿಸಿ, ತನ್ನ ಇಬ್ಬರೂ ಪುತ್ರರನ್ನು ಆ ರಾಜ್ಯಗಳಲ್ಲಿ ಇರಿಸಿ, ಮತ್ತೆ ಅಯೋಧ್ಯೆಗೆ ಹಿಂದಿರುಗಿದುದು

ಮೂಲಮ್ - 1

ಶ್ರುತ್ವಾ ಸೇನಾಪತಿಂಪ್ರಾಪ್ತಂ ಭರತಂ ಕೇಕಯಾಧಿಪಃ ।
ಯುಧಾಜಿದ್ಗಾರ್ಗ್ಯಸಹಿತಂ ಪರಾಂ ಪ್ರೀತಿಮುಪಾಗಮತ್ ॥

ಅನುವಾದ

ಕೇಕಯ ರಾಜಾ ಯುಧಾಜಿತ್ತು ಮಹರ್ಷಿಗಾರ್ಗ್ಯರೊಂದಿಗೆ ಸ್ವತಃ ಭರತನು ಸೈನ್ಯಸಹಿತ ಬರುತ್ತಿದ್ದಾನೆ ಎಂದು ಕೇಳಿ ಅವನಿಗೆ ಬಹಳ ಸಂತೋಷವಾಯಿತು.॥1॥

ಮೂಲಮ್ - 2

ಸ ನಿರ್ಯಯೌ ಜನೌಘೇನ ಮಹತಾ ಕೇಕಯಾಧಿಪಃ ।
ತ್ವ ರಮಾಣೋಽಭಿಚಕ್ರಾಮ ಗಂಧರ್ವಾನ್ಕಾಮರೂಪಿಣಃ ॥

ಅನುವಾದ

ಆ ಕೇಕಯ ರಾಜನು ಭಾರೀ ಜನಸಮುದಾಯದೊಂದಿಗೆ ಹೊರಟು, ಭರತನನ್ನು ಕೂಡಿಕೊಂಡು ಅವಸರವಾಗಿ ಕಾಮರೂಪಿಗಳಾದ ಗಂಧರ್ವರ ದೇಶದ ಕಡೆಗೆ ಹೊರಟನು.॥2॥

ಮೂಲಮ್ - 3

ಭರತಶ್ಚ ಯುಧಾಜಿಚ್ಚ ಸಮೇತೌ ಲಘುವಿಕ್ರಮೈಃ ।
ಗಂಧರ್ವನಗರಂ ಪ್ರಾಪ್ತೌ ಸಬಲೌ ಸಪದಾನುಗೌ ॥

ಅನುವಾದ

ಭರತ ಮತ್ತು ಯುಧಾಜಿತ್ತು ಇಬ್ಬರೂ ಸೇರಿ ಬಹಳ ತೀವ್ರಗತಿಯಿಂದ ಸೈನ್ಯ, ವಾಹನಗಳೊಂದಿಗೆ ಗಂಧರ್ವ ರಾಜಧಾನಿಯ ಮೇಲೆ ಆಕ್ರಮಣ ಮಾಡಿದರು.॥3॥

ಮೂಲಮ್ - 4

ಶ್ರುತ್ವಾ ತು ಭರತಂ ಪ್ರಾಪ್ತಂ ಗಂಧರ್ವಾಸ್ತೇ ಸಮಾಗತಾಃ ।
ಯೋದ್ಧುಕಾಮಾ ಮಹಾವೀರ್ಯಾ ವ್ಯನದಂಸ್ತೇ ಸಮಂತತಃ ॥

ಅನುವಾದ

ಭರತನ ಆಗಮನವನ್ನು ಕೇಳಿ, ಆ ಮಹಾಪರಾಕ್ರಮಿ ಗಂಧರ್ವರು ಯುದ್ಧದ ಇಚ್ಛೆಯಿಂದ ಒಟ್ಟಾಗಿ ಎಲ್ಲೆಡೆ ಜೋರು-ಜೋರಾಗಿ ಗರ್ಜಿಸತೊಡಗಿದರು.॥4॥

ಮೂಲಮ್ - 5

ತತಃ ಸಮಭವದ್ಯುದ್ಧಂ ತುಮುಲಂ ರೋಮಹರ್ಷಣಮ್ ।
ಸಪ್ತರಾತ್ರಂ ಮಹಾಭೀಮಂ ನ ಚಾನ್ಯತರಯೋರ್ಜಯಃ ॥

ಅನುವಾದ

ಮತ್ತೆ ಎರಡೂ ಕಡೆಯ ಸೈನಿಕರಲ್ಲಿ ರೋಮಾಂಚಕರ ಭಯಂಕರ ಯುದ್ಧ ಪ್ರಾರಂಭವಾಯಿತು. ಆ ಮಹಾಭಯಂಕರ ಸಂಗ್ರಾಮ ಒಂದೇಸಮನೆ ಏಳು ಹಗಲು ರಾತ್ರಿ ನಡೆದರೂ ಯಾವ ಪಕ್ಷಕ್ಕೂ ವಿಜಯ ದೊರೆಯಲಿಲ್ಲ.॥5॥

ಮೂಲಮ್ - 6

ಖಡ್ಗಶಕ್ತಿಧನುರ್ಗ್ರಾಹಾ ನದ್ಯಃ ಶೋಣಿತಸಂಸ್ರವಾಃ ।
ನೃಕಲೇವರವಾಹನ್ಯಃ ಪ್ರವೃತ್ತಾಃ ಸರ್ವತೋ ದಿಶಮ್ ॥

ಅನುವಾದ

ಎಲ್ಲೆಡೆ ರಕ್ತದ ಹೊಳೆ ಹರಿದವು. ಖಡ್ಗ, ಶಕ್ತಿ, ಧನುಷ್ಯ ನದಿಯಲ್ಲಿ ವಿಚರಿಸುವ ಮೊಸಳೆಯಂತೆ ಕಂಡು ಬರುತ್ತಿತ್ತು. ಅದರ ಪ್ರವಾಹದಲ್ಲಿ ಮನುಷ್ಯರ ಹೆಣಗಳು ಹರಿದುಹೋಗುತ್ತಿದ್ದವು.॥6॥

ಮೂಲಮ್ - 7

ತತೋ ರಾಮಾನುಜಃ ಕ್ರುದ್ಧಃ ಕಾಲಸ್ಯಾಸ್ತ್ರಂ ಸುದಾರುಣಮ್ ।
ಸಂವರ್ತಂ ನಾಮ ಭರತೋ ಗಂಧರ್ವೇಷ್ವಭ್ಯಚೋದಯತ್ ॥

ಅನುವಾದ

ಆಗ ರಾಮಾನುಜ ಭರತನು ಕುಪಿತನಾಗಿ ಗಂಧರ್ವರ ಮೇಲೆ ಕಾಲದೇವತೆಯ ಅತ್ಯಂತ ಭಯಂಕರ ಸಂವರ್ತಕ ಎಂಬ ಪ್ರಸಿದ್ಧವಾದ ಅಸ್ತ್ರವನ್ನು ಪ್ರಯೋಗಿಸಿದನು.॥7॥

ಮೂಲಮ್ - 8

ತೇ ಬದ್ಧಾಃ ಕಾಲಪಾಶೇನ ಸಂವರ್ತೇನ ವಿದಾರಿತಾಃ ।
ಕ್ಷಣೇನಾಭಿಹತಾಸ್ತೇನ ತಿಸ್ರಃ ಕೋಟ್ಯೋಮಹಾತ್ಮನಾ ॥

ಅನುವಾದ

ಹೀಗೆ ಮಹಾತ್ಮಾ ಭರತನು ಕ್ಷಣಾರ್ಧದಲ್ಲಿ ಮೂರುಕೋಟಿ ಗಂಧರ್ವರನ್ನು ಸಂಹಾರ ಮಾಡಿದನು. ಆ ಗಂಧರ್ವರು ಕಾಲಪಾಶದಿಂದ ಬದ್ಧರಾಗಿ, ಸಂವರ್ತಕಾಸ್ತ್ರದಿಂದ ಸೀಳಲ್ಪಟ್ಟ ವರಾಗಿ ಹತರಾದರು.॥8॥

ಮೂಲಮ್ - 9

ತದ್ಯುದ್ಧಂ ತಾದೃತಂ ಘೋರಂನ ಸ್ಮರಂತಿ ದಿವೌಕಸಃ ।
ನಿಮೇಷಾಂತರಮಾತ್ರೇಣ ತಾದೃಶಾನಾಂ ಮಹಾತ್ಮನಾಮ್ ॥

ಮೂಲಮ್ - 10

ಹತೇಷುತೇಷು ಸರ್ವೇಷು ಭರತಃ ಕೇಕಯೀಸುತಃ ।
ನಿವೇಶಯಾಮಾಸ ತದಾ ಸಮೃದ್ಧೇ ದ್ವೇ ಪುರೋತ್ತಮೇ ॥

ಅನುವಾದ

ಇಂತಹ ಭಯಂಕರ ಯುದ್ಧವನ್ನು ದೇವತೆಗಳು ಎಂದೂ ನೋಡಿರಲಿಲ್ಲ, ಅವರಿಗೆ ನೆನಪಿರಲಿಲ್ಲ. ರೆಪ್ಪೆ ಹೊಡೆಯುವಂತೆ ಪರಾಕ್ರಮಿ ಮಹಾತ್ಮರಾದ ಸಮಸ್ತ ಗಂಧರ್ವರ ಸಂಹಾರವಾದಾಗ ಕೈಕೆಯಿ ಕುಮಾರ ಭರತನು ಆಗ ಅಲ್ಲಿ ಎರಡು ಸಮೃದ್ಧಶಾಲೀ ಸುಂದರ ನಗರಗಳನ್ನು ಸ್ಥಾಪಿಸಿದನು.॥9-10॥

ಮೂಲಮ್ - 11

ತಕ್ಷಂ ತಕ್ಷಶಿಲಾಯಾಂ ತು ಪುಷ್ಕಲಂ ಪುಷ್ಕಲಾವತೇ ।
ಗಂಧರ್ವದೇಶೇ ರುಚಿರೇ ಗಾಂಧಾರವಿಷಯೇಚ ಸಃ ॥

ಅನುವಾದ

ಮನೋಹರ ಗಂಧರ್ವ ದೇಶದಲ್ಲಿ ತಕ್ಷಶಿಲಾ ಎಂಬ ನಗರವನ್ನು ನೆಲೆಗೊಳಿಸಿ ಭರತನು ತಕ್ಷನನ್ನು ರಾಜನಾಗಿಸಿದನು ಹಾಗೂ ಗಾಂಧಾರ ದೇಶದಲ್ಲಿ ಪುಷ್ಕಲಾವತ ಎಂಬ ನಗರವನ್ನು ಸ್ಥಾಪಿಸಿ ಪುಷ್ಕಲನಿಗೆ ಒಪ್ಪಿಸಿದನು.॥11॥

ಮೂಲಮ್ - 12

ಧನರತ್ನೌಘಸಂಕೀರ್ಣೇ ಕಾನನೈರುಪಶೋಭಿತೇ ।
ಅನ್ಯೋನ್ಯಸಂಘರ್ಷಕೃತೇ ಸ್ಪರ್ಧಯಾ ಗುಣವಿಸ್ತರೈಃ ॥

ಅನುವಾದ

ಆ ಎರಡೂ ನಗರಗಳು ಧನ-ಧಾನ್ಯ ಗಳಿಂದ, ನವರತ್ನಗಳಿಂದ ತುಂಬಿದ್ದವು. ಅನೇಕಾನೇಕ ಕಾನನಗಳು ಅವುಗಳ ಶೋಭೆ ಹೆಚ್ಚಿಸಿದ್ದವು. ಗುಣವಿಸ್ತಾರದ ದೃಷ್ಟಿಯಿಂದ ಪರಸ್ಪರ ಸ್ಪರ್ಧಿಸುತ್ತವೋ ಎಂಬಂತೆ ಬೆಳೆಯುತ್ತಿದ್ದವು.॥12॥

ಮೂಲಮ್ - 13

ಉಭೇ ಸುರುಚಿರಪ್ರಖ್ಯೇ ವ್ಯವಹಾರೈರಕಿಲ್ಬಿಷೈಃ ।
ಉದ್ಯಾನಯಾನಸಂಪೂರ್ಣೇ ಸುವಿಭಕ್ತಾಂತರಾಪಣೇ ॥

ಅನುವಾದ

ಎರಡೂ ನಗರಗಳ ಶೋಭೆ ಪರಮ ಮನೋಹರವಾಗಿತ್ತು. ಎರಡೂ ಕಡೆಯ ವ್ಯಾಪಾರ- ವ್ಯವಹಾರ ನಿಷ್ಕಪಟ, ಶುದ್ಧ, ಸರಳವಾಗಿದ್ದವು. ಅವುಗಳು ಉದ್ಯಾನಗಳಿಂದ ಮತ್ತು ನಾನಾ ವಾಹನಗಳಿಂದ ತುಂಬಿದ್ದು, ಅದರೊಳಗೆ ಬೇರೆ-ಬೇರೆ ಅನೇಕ ಪೇಟೆಗಳಿದ್ದವು.॥13॥

ಮೂಲಮ್ - 14

ಉಭೇ ಪುರವರೇ ರಮ್ಯೇ ವಿಸ್ತರೈರುಪಶೋಭಿತೇ ।
ಗೃಹಮುಖ್ಯೈಃಸುರುಚಿರೈರ್ವಿಮಾನೈರ್ಬಹುಭಿರ್ವೃತೇ ॥

ಅನುವಾದ

ಎರಡೂ ಪಟ್ಟಣಗಳೂ ರಮ್ಯವಾಗಿದ್ದವು. ಇಷ್ಟರವರೆಗೆ ಹೆಸರಿಸದ ಅನೇಕ ವಿಸ್ತೃತ ಪದಾರ್ಥಗಳಿಂದ ಅವುಗಳ ಶೋಭೆ ಹೆಚ್ಚಿಸುತ್ತಿತ್ತು. ಸುಂದರ ಏಳಂತಸ್ತಿನ ಮನೆಗಳಿಂದ ಅಲ್ಲಿನ ಶ್ರೀಮಂತಿಕೆ ಮೆರೆಯುತ್ತಿತ್ತು.॥14॥

ಮೂಲಮ್ - 15

ಶೋಭಿತೇ ಶೋಭನೀಯೈಶ್ಚ ದೇವಾಯತನವಿಸ್ತರೈಃ ।
ತಾಲೈಸ್ತಮಾಲೈಸ್ತಿಲಕೈರ್ಬಕುಲೈರುಪಶೋಭಿತೇ ॥

ಅನುವಾದ

ಶೋಭಾಯಮಾನ ದೇವಮಂದಿರಗಳಿಂದಲೂ, ತಾಲ-ತಮಾಲ-ತಿಲಕ ಮುಂತಾದ ವೃಕ್ಷಗಳಿಂದಲೂ ಆ ಎರಡು ನಗರಗಳ ಶೋಭೆ, ರಮಣೀಯತೆ ಹೆಚ್ಚಾಗಿತ್ತು.॥15॥

ಮೂಲಮ್ - 16

ನಿವೇಶ್ಯ ಪಂಚಭಿರ್ವರ್ಷೈರ್ಭರತೋ ರಾಘವಾನುಜಃ ।
ಪುನರಾಯಾನ್ಮಹಾಬಾಹುರಯೋಧ್ಯಾಂ ಕೇಕಯೀಸುತಃ ॥

ಅನುವಾದ

ಐದು ವರ್ಷಗಳವರೆಗೆ ಆ ರಾಜಧಾನಿಗಳ ರಾಜ್ಯಭಾರ ಕ್ರಮವನ್ನು ವ್ಯವಸ್ಥೆಗೊಳಿಸಿ, ರಾಮನ ತಮ್ಮ ಕೈಕೆಯೀ ಕುಮಾರ ಮಹಾಬಾಹು ಭರತನು ಮತ್ತೆ ಅಯೋಧ್ಯೆಗೆ ಮರಳಿ ಬಂದನು.॥16॥

ಮೂಲಮ್ - 17

ಸೋಽಭಿವಾದ್ಯ ಮಹಾತ್ಮಾನಂ ಸಾಕ್ಷಾದ್ಧರ್ಮಮಿವಾಪರಮ್ ।
ರಾಘವಂ ಭರತಃ ಶ್ರೀಮಾನ್ ಬ್ರಹ್ಮಾಣಮಿವ ವಾಸವಃ ॥

ಅನುವಾದ

ಅಲ್ಲಿಗೆ ಹೋಗಿ ಇಂದ್ರನು ಬ್ರಹ್ಮದೇವರನ್ನು ವಂದಿಸುವಂತೆ, ಶ್ರೀಮಾನ್ ಭರನು ದ್ವಿತೀಯ ಧರ್ಮರಾಜನಂತಿರುವ ಮಹಾತ್ಮಾ ಶ್ರೀರಘುನಾಥನಿಗೆ ಪ್ರಣಾಮ ಮಾಡಿದನು.॥17॥

ಮೂಲಮ್ - 18

ಶಶಂಸ ಚಯಥಾವೃತ್ತಂ ಗಂಧರ್ವವಧಮುತ್ತಮಮ್ ।
ನಿವೇಶನಂ ಚ ದೇಶಸ್ಯ ಶ್ರುತ್ವಾ ಪ್ರೀತೋಽಸ್ಯರಾಘವಃ ॥

ಅನುವಾದ

ಬಳಿಕ ಅವನು ಗಂಧರ್ವರ ವಧೆ, ಆ ದೇಶವನ್ನು ಚೆನ್ನಾಗಿ ಸ್ವತಂತ್ರಗೊಳಿಸಿದ ಸಮಾಚಾರವನ್ನು ಯಥಾವತ್ತಾಗಿ ತಿಳಿಸಿದನು. ಕೇಳಿ ಶ್ರೀರಘುನಾಥನು ಅವನ ಮೇಲೆ ಬಹಳ ಪ್ರಸನ್ನನಾದನು.॥18॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ನೂರಒಂದನೆಯ ಸರ್ಗ ಪೂರ್ಣವಾಯಿತು. ॥101॥