१०० गन्धर्व-राज्य-ग्रहण-चोदनम्

[ನೂರನೆಯ ಸರ್ಗ]

ಭಾಗಸೂಚನಾ

ಕೇಕೆಯ ದೇಶದಿಂದ ಬ್ರಹ್ಮರ್ಷಿ ಗಾರ್ಗ್ಯರು ಶ್ರೀರಾಮನಿಗೆ ಬಹುಮಾನಗಳನ್ನು ತಂದುದು, ಮಹರ್ಷಿಯ ಸಂದೇಶದಂತೆ ಶ್ರೀರಾಮನ ಆಜ್ಞೆಯಂತೆ ಭರತನು ಕುಮಾರರೊಂದಿಗೆ ಗಂಧರ್ವದೇಶದ ಆಕ್ರಮಣಕ್ಕಾಗಿ ಪ್ರಯಾಣ

ಮೂಲಮ್ - 1½

ಕಸ್ಯಚಿತ್ತ್ವಥ ಕಾಲಸ್ಯ ಯುಧಾಜಿತ್ಕೇಕಯೋ ನೃಪಃ ।
ಸ್ವಗುರುಂ ಪ್ರೇಷಯಾಮಾಸ ರಾಘವಾಯ ಮಹಾತ್ಮನೇ ॥
ಗಾರ್ಗ್ಯಮಂಗಿರಸಃ ಪುತ್ರಂ ಬ್ರಹ್ಮರ್ಷಿಮಮಿತಪ್ರಭಮ್ ।

ಅನುವಾದ

ಕೆಲಕಾಲದ ಬಳಿಕ ಕೇಕಯ ದೇಶದ ರಾಜಾ ಯುಧಾಜಿತ್ತು ತನ್ನ ಪುರೋಹಿತ ಅಮಿತ ತೇಜಸ್ವೀ ಅಂಗೀರಸನ ಪುತ್ರರಾದ ಬ್ರಹ್ಮರ್ಷಿ ಗಾರ್ಗ್ಯರನ್ನು ಮಹಾತ್ಮಾ ಶ್ರೀರಾಮನ ಬಳಿಗೆ ಕಳಿಸಿದನು.॥1½॥

ಮೂಲಮ್ - 2

ದಶ ಚಾಶ್ವಸಹಸ್ರಾಣಿ ಪ್ರೀತಿದಾನಮನುತ್ತಮಮ್ ॥

ಮೂಲಮ್ - 3

ಕಂಬಲಾನಿ ಚ ರತ್ನಾನಿ ಚಿತ್ರವಸ್ತ್ರಮಥೋತ್ತಮಮ್ ।
ರಾಮಾಯ ಪ್ರದದೌ ರಾಜಾಶುಭಾನ್ಯಾಭರಣಾನಿ ಚ ॥

ಅನುವಾದ

ಅವರೊಂದಿಗೆ ಶ್ರೀರಾಮಚಂದ್ರನಿಗೆ ಪ್ರೇಮದ ಕಾಣಿಕೆಯಾಗಿ ಹತ್ತುಸಾವಿರ ಕುದುರೆಗಳನ್ನು, ರತ್ನ ಕಂಬಳಿಗಳನ್ನು, ಉಣ್ಣೆಯ ಶಾಲುಗಳನ್ನು, ನಾನಾ ರೀತಿಯ ರತ್ನಗಳನ್ನು, ಚಿತ್ರ-ವಿಚಿತ್ರ ಸುಂದರ ವಸಗಳನ್ನು, ಮನೋಹರ ಒಡವೆಗಳನ್ನು ಕಳಿಸಿಕೊಟ್ಟನು.॥2-3॥

ಮೂಲಮ್ - 4

ಶ್ರುತ್ವಾ ತು ರಾಘವೋ ಧೀಮಾನ್ಮಹರ್ಷಿಂ ಗಾರ್ಗ್ಯಮಾಗತಮ್ ।
ಮಾತುಲಸ್ಯಾಶ್ವಪತಿನಃ ಪ್ರಹಿತಂ ತನ್ಮಹಾಧನಮ್ ॥

ಮೂಲಮ್ - 5

ಪ್ರತ್ಯುದ್ಗಮ್ಯ ಚ ಕಾಕುತ್ಸ್ಥಃ ಕ್ರೋಶಮಾತ್ರಂ ಸಹಾನುಜಃ ।
ಗಾರ್ಗ್ಯಂ ಸಂಪೂಜಯಾಮಾಸ ಯಥಾ ಶಕ್ರೋ ಬೃಹಸ್ಪತಿಮ್ ॥

ಅನುವಾದ

ಮಾವನಾದ ಅಶ್ವಪತಿ ಪುತ್ರ ಯುಧಾಜಿತ್ತು ಕಳಿಸಿದ ಮಹರ್ಷಿ ಗಾರ್ಗ್ಯರು ಬಹುಮೂಲ್ಯ ಕಾಣಿಕೆಗಳನ್ನೆತ್ತಿಕೊಂಡು ಅಯೋಧ್ಯೆಗೆ ಬಂದಿರುವರು ಎಂದು ಪರಮ ಬುದ್ಧಿವಂತ ರಾಘವೇಂದ್ರನು ಕೇಳಿದಾಗ, ಅವನು ತಮ್ಮಂದಿರೊಂದಿಗೆ ಒಂದು ಗಾವುದ ಮುಂದೆ ಹೋಗಿ, ಇಂದ್ರನು ಬೃಹಸ್ಪತಿಯನ್ನು ಸ್ವಾಗತಿಸಿ ಪೂಜಿಸಿದಂತೆ ಮಹರ್ಷಿ ಗಾರ್ಗ್ಯರನ್ನು ಸ್ವಾಗತ-ಸತ್ಕಾರ ಮಾಡಿ ಪೂಜಿಸಿದನು.॥4-5॥

ಮೂಲಮ್ - 6½

ತಥಾ ಸಂಪೂಜ್ಯ ತಮೃಷಿಂ ತದ್ಧನಂ ಪ್ರತಿಗೃಹ್ಯ ಚ ।
ಪೃಷ್ಟ್ವಾ ಪ್ರತಿಪದಂ ಸರ್ವಂ ಕುಶಲಂ ಮಾತುಲಸ್ಯ ಚ ॥
ಉಪವಿಷ್ಟಂ ಮಹಾಭಾಗಂ ರಾಮಃ ಪ್ರಷ್ಟುಂಪ್ರಚಕ್ರಮೇ ।

ಅನುವಾದ

ಹೀಗೆ ಮಹರ್ಷಿಯನ್ನು ಆದರ-ಸತ್ಕಾರ ಮಾಡಿ ಆ ಉಡುಗೊರೆಯನ್ನು ಸ್ವೀಕರಿಸಿದ ಬಳಿಕ ಶ್ರೀರಾಮನು ಮಾವನ ಮನೆಯ ಎಲ್ಲ ಕ್ಷೇಮವನ್ನು ಕೇಳಿದನು. ಮತ್ತೆ ಮಹಾಭಾಗ ಬ್ರಹ್ಮರ್ಷಿಗಳು ಸುಂದರ ಆಸನದಲ್ಲಿ ವಿರಾಜಿಸಿ ದಾಗ ಶ್ರೀರಾಮನು ಇಂತು ಕೇಳಿದನು.॥6½॥

ಮೂಲಮ್ - 7½

ಕಿಮಾಹ ಮಾತುಲೋ ವಾಕ್ಯಂ ಯದರ್ಥಂಭಗವಾನಿಹ ॥
ಪ್ರಾಪ್ತೋ ವಾಕ್ಯಮಿದಾಂ ಶ್ರೇಷ್ಠಃ ಸಾಕ್ಷಾದಿವ ಬೃಹಸ್ಪತಿಃ ।

ಅನುವಾದ

ಬ್ರಹ್ಮರ್ಷಿಯೇ! ನನ್ನ ಮಾವನು ಏನು ಸಂದೇಶ ಕಳಿಸಿರುವನು? ಅದಕ್ಕಾಗಿ ಸಾಕ್ಷಾತ್ ಬೃಹಸ್ಪತಿಯಂತಿರುವ ಶ್ರೇಷ್ಠ ವಾಗ್ಮಿಗಳಾದ ಪೂಜ್ಯಪಾದ ಮಹರ್ಷಿಗಳಾದ ನೀವು ಇಲ್ಲಿಗೆ ಆಗಮಿಸುವ ಕಾರಣವೇನು.॥7½॥

ಮೂಲಮ್ - 8½

ರಾಮಸ್ಯ ಭಾಷಿತಂ ಶ್ರುತ್ವಾ ಮಹರ್ಷಿಃ ಕಾರ್ಯವಿಸ್ತರಮ್ ॥
ವಕ್ತುಮದ್ಭುತಸಂಕಾಶಂ ರಾಘವಾಯೋಪಚಕ್ರಮೇ ।

ಅನುವಾದ

ಶ್ರೀರಾಮನ ಈ ಪ್ರಶ್ನೆ ಕೇಳಿ ಮಹರ್ಷಿಗಳು ಅವನಲ್ಲಿ ಅದ್ಭುತಕಾರ್ಯದ ವಿವರಣೆ ಹೇಳತೊಡಗಿದರು.॥8½॥

ಮೂಲಮ್ - 9½

ಮಾತುಲಸ್ತೇ ಮಹಾಬಾಹೋ ವಾಕ್ಯಮಾಹ ನರರ್ಷಭಃ ॥
ಯುಧಾಜಿತ್ಪ್ರೀತಿಸಂಯುಕ್ತಂ ಶ್ರೂಯತಾಂ ಯದಿ ರೋಚತೇ ।

ಅನುವಾದ

ಮಹಾಬಾಹೋ ! ನಿಮ್ಮ ಮಾವ ನರಶ್ರೇಷ್ಠ ಯುಧಾಜಿತ್ತು ಪ್ರೇಮಪೂರ್ವಕ ಕಳಿಸಿದ ಸಂದೇಶವನ್ನು ಕೇಳಲು ನಿನಗೆ ಇಷ್ಟವಿರುವುದಾದರೆ ಹೇಳುವೆನು, ಕೇಳು.॥9½॥

ಮೂಲಮ್ - 10½

ಅಯಂ ಗಂಧರ್ವವಿಷಯಃ ಲಮೂಲೋಪಶೋಭಿತಃ ॥
ಸಿನ್ಧೋರುಭಯತಃ ಪಾರ್ಶ್ವೇ ದೇಶಃಪರಮಶೋಭನಃ ।

ಅನುವಾದ

ಅವರು ಹೇಳಿದರು - ಫಲ ಮೂಲಗಳಿಂದ ಸಮೃದ್ಧವಾದ, ಸುಶೋಭಿತವಾದ ಸುಂದರ ಗಂಧರ್ವ ದೇಶವು ಸಿಂಧೂ ನದಿಯ ಎರಡೂ ತೀರಗಳನ್ನು ವ್ಯಾಪಿಸಿಕೊಂಡಿದೆ.॥10½॥

ಮೂಲಮ್ - 11½

ತಂ ಚ ರಕ್ಷಂತಿ ಗಂಧರ್ವಾಃ ಸಾಯುಧಾ ಯುದ್ಧಕೋವಿದಾಃ ॥
ಶೈಲೂಷಸ್ಯ ಸುತಾ ವೀರ ತಿಸ್ರಃ ಕೋಟ್ಯೋಮಹಾಬಲಾಃ ।

ಅನುವಾದ

ವೀರ ರಘುನಂದನ! ಗಂಧರ್ವ ರಾಜ ಶೈಲೂಷನ ಸಂತಾನಗಳು, ಯುದ್ಧ ಕಲೆಯಲ್ಲಿ ಕುಶಲರಾದ, ಮಹಾಬಲಿಷ್ಠರಾದ ಮೂರು ಕೋಟಿ ಗಂಧರ್ವರು ಅಸ್ತ್ರ-ಶಸ್ತ್ರಗಳಿಂದ ಸಂಪನ್ನರಾಗಿ ಆ ದೇಶವನ್ನು ರಕ್ಷಿಸುತ್ತಿದ್ದಾರೆ.॥11½॥

ಮೂಲಮ್ - 12

ತಾನ್ವಿನಿರ್ಜಿತ್ಯ ಕಾಕುತ್ಸ್ಥ ಗಂಧರ್ವನಗರಂ ಶುಭಮ್ ॥

ಮೂಲಮ್ - 13

ನಿವೇಶಯ ಮಹಾಬಾಹೋ ಸ್ವೇ ಪುರೇ ಸುಸಮಾಹಿತೇ ।
ಅನ್ಯಸ್ಯ ನ ಗತಿಸ್ತತ್ರ ದೇಶಃ ಪರಮಶೋಭನಃ ।
ರೋಚತಾಂ ತೇ ಮಹಾಬಾಹೋ ನಾಹಂತ್ವಾಮಹಿತಂವದೇ ॥

ಅನುವಾದ

ಮಹಾಬಾಹೋ! ಶುಭಕರವಾದ ಆ ಗಂಧರ್ವ ನಗರವನ್ನು ನೀನು ಗೆದ್ದು ಅಲ್ಲಿ ಸಂಪತ್ಸಮೃದ್ಧವಾದ ಎರಡು ನಗರಗಳನ್ನು ಪ್ರತಿಷ್ಠಾಪಿಸು. ಅತ್ಯಂತ ಸುಂದರವಾದ ಆ ದೇಶಕ್ಕೆ ಮತ್ಯಾರೂ ಹೋಗಲಾರರು. ಆದುದರಿಂದ ನೀನೇ ಅಲ್ಲಿಗೆ ಹೋಗಿ ಅದನ್ನು ಸ್ವಾಧೀನಪಡಿಸಿಕೋ. ನಾನು ಎಂದೂ ನಿನಗೆ ಅಹಿತವಾದುದನ್ನು ಹೇಳುವುದಿಲ್ಲ.॥12-13॥

ಮೂಲಮ್ - 14

ತಚ್ಛ್ರುತ್ವಾ ರಾಘವಃ ಪ್ರೀತೋ ಮಹರ್ಷೇರ್ಮಾತುಲಸ್ಯ ಚ ।
ಉವಾಚ ಬಾಢಮಿತ್ಯೇವ ಭರತಂ ಚಾನ್ವವೈಕ್ಷತ ॥

ಅನುವಾದ

ಮಹರ್ಷಿ ಮತ್ತು ಮಾವನ ಆ ಮಾತನ್ನು ಕೇಳಿ ರಘುನಾಥನಿಗೆ ಬಹಳ ಸಂತೋಷವಾಗಿ ಹಾಗೆಯೇ ಆಗಲಿ ಎಂದು ಹೇಳಿ ಭರತನ ಕಡೆಗೆ ನೋಡಿದನು.॥14॥

ಮೂಲಮ್ - 15

ಸೋಽಬ್ರವೀದ್ರಾಘವಃ ಪ್ರೀತಃ ಸಾಂಜಲಿಪ್ರಗ್ರಹೋದ್ವಿಜಮ್ ।
ಇವೌ ಕುಮಾರೌ ತಂ ದೇಶಂ ಬ್ರಹ್ಮರ್ಷೇ ವಿಚರಿಷ್ಯತಃ ॥

ಮೂಲಮ್ - 16

ಭರತಸ್ಯಾತ್ಮಜೌ ವೀರೌ ತಕ್ಷಃ ಪುಷ್ಕಲ ಏವ ಚ ।
ಮಾತುಲೇನ ಸುಗುಪ್ತೌ ತು ಧರ್ಮೇಣ ಸುಸಮಾಹಿತೌ ॥

ಅನುವಾದ

ಬಳಿಕ ಶ್ರೀರಾಮನು ಆ ಮಹರ್ಷಿಗೆ ಕೈಜೋಡಿಸಿಕೊಂಡು ಹೇಳಿದನು- ಬ್ರಹ್ಮರ್ಷಿಗಳೇ! ಇವರಿಬ್ಬರು ಕುಮಾರರು ತಕ್ಷ ಮತ್ತು ಪುಷ್ಕಲರು ಭರತನ ವೀರಪುತ್ರರಾಗಿದ್ದಾರೆ. ಇವರು ಆ ದೇಶದಲ್ಲಿ ಇದ್ದು, ಮಾವನಿಂದ ಸುರಕ್ಷಿತರಾಗಿ ಧರ್ಮದಿಂದ ಏಕಾಗ್ರಚಿತ್ತರಾಗಿ ಆ ದೇಶವನ್ನು ಆಳುವರು.॥15-16॥

ಮೂಲಮ್ - 17

ಭರತಂ ಚಾಗ್ರತಃ ಕೃತ್ವಾ ಕುಮಾರೌ ಸಬಲಾನುಗೌ ।
ನಿಹತ್ಯ ಗಂಧರ್ವಸುತಾನ್ದ್ವೇ ಪುರೇ ವಿಭಜಿಷ್ಯತಃ ॥

ಅನುವಾದ

ಇವರಿಬ್ಬರೂ ಕುಮಾರರು ಭರತನನ್ನು ಮುಂದಿಟ್ಟುಕೊಂಡು ಸೈನ್ಯ, ಸೇವಕರೊಂದಿಗೆ ಅಲ್ಲಿಗೆ ಹೋಗಿ, ಆ ಗಂಧರ್ವ ರನ್ನು ಸಂಹರಿಸಿ ಬೇರೆ-ಬೇರೆಯಾಗಿ ಎರಡು ನಗರಗಳನ್ನು ನೆಲೆಗೊಳಿಸುವರು.॥17॥

ಮೂಲಮ್ - 18

ನಿವೇಶ್ಯ ತೇ ಪುರವರೇ ಆತ್ಮಜೌ ಸಂನಿವೇಶ್ಯ ಚ ।
ಆಗಮಿಷ್ಯತಿ ಮೇ ಭೂಯಃ ಸಕಾಶಮತಿಧಾರ್ಮಿಕಃ ॥

ಅನುವಾದ

ಆ ಎರಡು ಶ್ರೇಷ್ಠ ನಗರಗಳನ್ನು ಸ್ಥಾಪಿಸಿ ಅವುಗಳಲ್ಲಿ ತನ್ನ ಎರಡೂ ಪುತ್ರರಿಗೆ ಪಟ್ಟಾಭಿಷೇಕ ಮಾಡಿ ಅತ್ಯಂತ ಧರ್ಮಾತ್ಮಾ ಭರತನು ಪುನಃ ನನ್ನ ಬಳಿಗೆ ಹಿಂದಿರುಗುವನು.॥18॥

ಮೂಲಮ್ - 19

ಬ್ರಹ್ಮರ್ಷಿಮೇವಮುಕ್ತ್ವಾ ತುಭರತಂ ಸಬಲಾನುಗಮ್ ।
ಆಜ್ಞಾಪಯಾಮಾಸ ತದಾ ಕುಮಾರೌ ಚಾಭ್ಯಷೇಚಯತ್ ॥

ಅನುವಾದ

ಬ್ರಹ್ಮರ್ಷಿಗಳಲ್ಲಿ ಹೀಗೆ ಹೇಳಿ ಶ್ರೀರಾಮಚಂದ್ರನು ಭರತನಿಗೆ ಸೈನ್ಯದೊಂದಿಗೆ ಅಲ್ಲಿಗೆ ಹೋಗಲು ಆಜ್ಞಾಪಿಸಿದನು ಹಾಗೂ ಇಬ್ಬರೂ ಕುಮಾರರಿಗೆ ಮೊದಲೇ ರಾಜ್ಯಾಭಿಷೇಕ ಮಾಡಿಬಿಟ್ಟನು.॥19॥

ಮೂಲಮ್ - 20

ನಕ್ಷತ್ರೇಣ ಚ ಸೌಮ್ಯೇನ ಪುರಸ್ಕೃತ್ಯಾಂಗಿರಃಸುತಮ್ ।
ಭರತಃ ಸಹ ಸೈನ್ಯೇನ ಕುಮಾರಾಭ್ಯಾಂ ವಿನಿರ್ಯಯೌ ॥

ಅನುವಾದ

ಬಳಿಕ ಸೌಮ್ಯ ಮೃಗಶಿರಾ ನಕ್ಷತ್ರದಲ್ಲಿ ಅಂಗಿರಾಪುತ್ರ ಮಹರ್ಷಿ ಗಾರ್ಗ್ಯರನ್ನು ಮುಂದಿಟ್ಟುಕೊಂಡು, ಕುಮಾರರೊಂದಿಗೆ ಭರತನು ಪ್ರಯಾಣ ಬೆಳೆಸಿದನು.॥20॥

ಮೂಲಮ್ - 21

ಸಾ ಸೇನಾ ಶಕ್ರಯುಕ್ತೇವ ನಗರಾನ್ನಿರ್ಯಯಾವಥ ।
ರಾಘವಾನುಗತಾದೂರಂ ದುರಾಧರ್ಷಾ ಸುರೈರಪಿ ॥

ಅನುವಾದ

ಇಂದ್ರನಿಂದ ಪ್ರೇರಿತನಾದ ದೇವಸೈನ್ಯದಂತೆ, ದೇವತೆಗಳಿಗೂ ದುರ್ಜಯವಾದ ಆ ಸೇನೆಯು ನಗರದಿಂದ ಹೊರಟಿತು. ಭಗವಾನ್ ಶ್ರೀರಾಮನು ದೂರದವರೆಗೆ ಹೋಗಿ ಬೀಳ್ಕೊಟ್ಟನು.॥21॥

ಮೂಲಮ್ - 22

ಮಾಂಸಾಶಿನಶ್ಚ ಯೇ ಸತ್ತ್ವಾ ರಕ್ಷಾಂಸಿ ಸುಮಹಾಂತಿ ಚ ।
ಅನುಜಗ್ಮುರ್ಹಿ ಭರತಂ ರುಧಿರಸ್ಯ ಪಿಪಾಸಯಾ ॥

ಅನುವಾದ

ಮಾಂಸಾಹಾರಿ ಜಂತುಗಳು, ದೊಡ್ಡ-ದೊಡ್ಡ ರಾಕ್ಷಸರು ಯುದ್ಧದಲ್ಲಿ, ರಕ್ತಪಾತದ ಇಚ್ಛೆಯಿಂದ ಭರತನ ಹಿಂದೆ-ಹಿಂದೆಯೇ ನಡೆದವು.॥22॥

ಮೂಲಮ್ - 23

ಭೂತಗ್ರಾಮಾಶ್ಚ ಬಹವೋ ಮಾಂಸಭಕ್ಷಾಃ ಸುದಾರುಣಾಃ ।
ಗಂಧರ್ವಪುತ್ರಮಾಂಸಾನಿಭೋಕ್ತುಕಾಮಾಃ ಸಹಸ್ರಶಃ ॥

ಅನುವಾದ

ಅತ್ಯಂತ ಭಯಂಕರ ಅನೇಕ ಸಾವಿರ ಮಾಂಸಭಕ್ಷಿ ಭೂತ ಸಮೂಹವು ಗಂಧರ್ವ ಪುತ್ರರ ಮಾಂಸವನ್ನು ತಿನ್ನಲು ಆ ಸೈನ್ಯದೊಂದಿಗೆ ಹೋಯಿತು.॥23॥

ಮೂಲಮ್ - 24

ಸಿಂಹವ್ಯಾಘ್ರವರಾಹಾಣಾಂ ಖೇಚರಾಣಾಂ ಚ ಪಕ್ಷಿಣಾಮ್ ।
ಬಹೂನಿ ವೈ ಸಹಸ್ರಾಣಿ ಸೇನಾಯಾ ಯಯುರಗ್ರತಃ ॥

ಅನುವಾದ

ಸಿಂಹ, ಹುಲಿ, ಕಾಡುಹಂದಿ, ಆಕಾಶಚಾರೀ ಪಕ್ಷಿಗಳು ಅನೇಕ ಸಾವಿರ ಸಂಖ್ಯೆಯಲ್ಲಿ ಸೈನ್ಯದ ಮುಂದೆ-ಮುಂದೆ ನಡೆದವು.॥24॥

ಮೂಲಮ್ - 25

ಅಧ್ಯರ್ಧಮಾಸಮುಷಿತಾ ಪಥಿ ಸೇನಾ ನಿರಾಮಯಾ ।
ಹೃಷ್ಟಪುಷ್ಟಜನಾಕೀರ್ಣಾ ಕೇಕಯಂ ಸಮುಪಾಗಮತ್ ॥

ಅನುವಾದ

ದಾರಿಯಲ್ಲಿ ಒಂದೂವರೆ ತಿಂಗಳು ಕಳೆದು ಹೃಷ್ಟ-ಪುಷ್ಟ ಮನುಷ್ಯರಿಂದ ತುಂಬಿದ ಆ ಸೈನ್ಯವು ಕ್ಷೇಮವಾಗಿ ಕೇಕಯ ದೇಶವನ್ನು ತಲುಪಿತು.॥25॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ನೂರನೆಯ ಸರ್ಗ ಪೂರ್ಣವಾಯಿತು. ॥100॥