[ನೂರಹನ್ನೊಂದನೆಯ ಸರ್ಗ]
ಭಾಗಸೂಚನಾ
ರಾಮಾಯಣ ಕಾವ್ಯದ ಉಪಸಂಹಾರ, ಅದರ ಮಹಿಮೆ
ಮೂಲಮ್ - 1
ಏತಾವದೇತದಾಖ್ಯಾನಂ ಸೋತ್ತರಂಬ್ರಹ್ಮಪೂಜಿತಮ್ ।
ರಾಮಾಯಣಮಿತಿ ಖ್ಯಾತಂ ಮುಖ್ಯಂ ವಾಲ್ಮೀಕಿನಾ ಕೃತಮ್ ॥
ಅನುವಾದ
(ಕುಶ-ಲವರು ಹೇಳುತ್ತಾರೆ-) ಮಹರ್ಷಿ ವಾಲ್ಮೀಕಿಗಳಿಂದ ರಚಿತವಾದ ಈ ರಾಮಾಯಣ ಎಂಬ ಶ್ರೇಷ್ಠ ಆಖ್ಯಾನ ಉತ್ತರಕಾಂಡ ಸಹಿತ ಇಷ್ಟೇ ಆಗಿದೆ. ಬ್ರಹ್ಮ ದೇವರೂ ಇದನ್ನು ಆದರಿಸುತ್ತಾರೆ.॥1॥
ಮೂಲಮ್ - 2
ತತಃ ಪ್ರತಿಷ್ಠಿತೋ ವಿಷ್ಣುಃ ಸ್ವರ್ಗಲೋಕೇ ಯಥಾ ಪುರಾ ।
ಯೇನ ವ್ಯಾಪ್ತಮಿದಂ ಸರ್ವಂ ತ್ರೈಲೋಕ್ಯಂ ಸಚರಾಚರಮ್ ॥
ಅನುವಾದ
ಈ ಪ್ರಕಾರ ಭಗವಾನ್ ಶ್ರೀರಾಮನು ಮೊದಲಿನಂತೆ ತನ್ನ ವಿಷ್ಣು ಸ್ವರೂಪದಿಂದ ಪರಮಧಾಮದಲ್ಲಿ ಪ್ರತಿಷ್ಠಿತನಾದನು. ಅವನಿಂದ ಚರಾಚರ ಪ್ರಾಣಿಗಳ ಸಹಿತ ಈ ಸಮಸ್ತ ತ್ರಿಲೋಕಗಳು ವ್ಯಾಪ್ತವಾಗಿದೆ.॥2॥
ಮೂಲಮ್ - 3
ತತೋ ದೇವಾಃ ಸಗಂಧರ್ವಾಃ ಸಿದ್ಧಾಶ್ಚ ಪರಮರ್ಷಯಃ ।
ನಿತ್ಯಂ ಶೃಣ್ವಂತಿ ಸಂಹೃಷ್ಟಾಃ ಕಾವ್ಯಂ ರಾಮಾಯಣಂ ದಿವಿ ॥
ಅನುವಾದ
ಆ ಭಗವಂತನ ಪಾವನ ಚಾರಿತ್ರದಿಂದ ಕೂಡಿದ ಕಾರಣ ದೇವತೆಗಳು, ಗಂಧರ್ವರು, ಸಿದ್ಧರು, ಮಹರ್ಷಿಗಳು ಸದಾ ಸಂತೋಷದಿಂದ ದೇವಲೋಕದಲ್ಲಿ ಈ ರಾಮಾಯಣ ಕಾವ್ಯವನ್ನು ಶ್ರವಣಿಸುತ್ತಾರೆ.॥3॥
ಮೂಲಮ್ - 4
ಇದಮಾಖ್ಯಾನಮಾಯುಷ್ಯಂ ಸೌಭಾಗ್ಯಂ ಪಾಪನಾಶನಮ್ ।
ರಾಮಾಯಣಂ ವೇದಸಮಂ ಶ್ರಾದ್ಧೇಷು ಶ್ರಾವಯೇದ್ಭುಧಃ ॥
ಅನುವಾದ
ಈ ರಾಮಾಯಣ ಆಖ್ಯಾನವು ಆಯುಷ್ಯವನ್ನು, ಸೌಭಾಗ್ಯವನ್ನು ಹೆಚ್ಚಿಸುತ್ತದೆ. ಎಲ್ಲ ಪಾಪಗಳನ್ನು ನಾಶ ಮಾಡುತ್ತದೆ. ರಾಮಾಯಣವು ವೇದಕ್ಕೆ ಸಮಾನವಾಗಿದೆ. ವಿದ್ವಾಂಸರು ಶ್ರಾದ್ಧದಲ್ಲಿ ಇದನ್ನು ಓದಿ ಕೇಳಬೇಕು.॥4॥
ಮೂಲಮ್ - 5
ಅಪುತ್ರೋ ಲಭತೇ ಪುತ್ರಮಧನೋ ಲಭತೇ ಧನಮ್ ।
ಸರ್ವಪಾಪೈಃ ಪ್ರಮುಚ್ಯೇತ ಪಾದಮಪ್ಯಸ್ಯ ಯಃ ಪಠೇತ್ ॥
ಅನುವಾದ
ಇದರ ಪಾರಾಯಣದಿಂದ ಪುತ್ರ ಹೀನನು ಪುತ್ರನನ್ನು, ಧನಹೀನನು ಧನವನ್ನೂ ಪಡೆಯು ತ್ತಾನೆ. ಪ್ರತಿದಿನ ಇದರ ಶ್ಲೋಕದ ಒಂದು ಚರಣವಾದರೂ ಪಠಿಸುವವನು ಎಲ್ಲ ಪಾಪಗಳಿಂದ ಮುಕ್ತನಾಗುತ್ತಾನೆ.॥5॥
ಮೂಲಮ್ - 6
ಪಾಪಾನ್ಯಪಿ ಚ ಯಃಕುರ್ಯಾದಹನ್ಯಹನಿ ಮಾನವಃ ।
ಪಠತ್ಯೇಕಮಪಿಶ್ಲೋಕಂ ಪಾಪಾತ್ಸ ಪರಿಮುಚ್ಯತೇ ॥
ಅನುವಾದ
ಪ್ರತಿದಿನ ಪಾಪ ಮಾಡುವ ಮನುಷ್ಯನೂ ಕೂಡ ಇದರ ಒಂದು ಶ್ಲೋಕವನ್ನು ನಿತ್ಯ ಪಠಿಸಿದರೆ ಅವನು ಎಲ್ಲ ಪಾಪರಾಶಿಯಿಂದ ಮುಕ್ತನಾಗುತ್ತಾನೆ.॥6॥
ಮೂಲಮ್ - 7
ವಾಚಕಾಯ ಚ ದಾತವ್ಯಂ ವಸ್ತ್ರಂ ಧೇನುಹಿರಣ್ಯಕಮ್ ।
ವಾಚಕೇ ಪರಿತುಷ್ಟೇ ತುತುಷ್ಟಾಃ ಸ್ಯುಃ ಸರ್ವದೇವತಾಃ ॥
ಅನುವಾದ
ಇದರ ಕಥೆ ಹೇಳುವ ಪ್ರವಚನಕಾರನಿಗೆ ವಸ್ತ್ರ, ಗೋವು, ಸುವರ್ಣದ ದಕ್ಷಿಣೆ ಕೊಡಬೇಕು. ಪ್ರವಚನಕಾರನು ಸಂತುಷ್ಟನಾದಾಗ ಎಲ್ಲ ದೇವತೆಗಳು ಸಂತುಷ್ಟರಾಗುತ್ತಾರೆ.॥7॥
ಮೂಲಮ್ - 8
ಏತದಾಖ್ಯಾನಮಾಯುಷ್ಯಂ ಪಠನ್ ರಾಮಾಯಣಂ ನರಃ ।
ಸಪುತ್ರಪೌತ್ರೋ ಲೋಕೇಽಸ್ಮಿನ್ಪ್ರೇತ್ಯ ಚೇಹ ಮಹೀಯತೇ ॥
ಅನುವಾದ
ಈ ರಾಮಾಯಣ ಆಖ್ಯಾನವು ಆಯುಸ್ಸನ್ನು ವೃದ್ಧಿಗೊಳಿಸುವುದು, ಪ್ರತಿದಿನ ಇದನ್ನು ಪಾರಾಯಣ ಮಾಡುವವನು ಈ ಲೋಕದಲ್ಲಿ ಪುತ್ರ-ಪೌತ್ರರನ್ನು ಪಡೆದು, ಮೃತ್ಯುವಿನ ಬಳಿಕ ಪರಲೋಕದಲ್ಲಿ ಸಮ್ಮಾನಿತನಾಗುತ್ತಾನೆ.॥8॥
ಮೂಲಮ್ - 9
ರಾಮಾಯಣಂ ಗೋವಿಸರ್ಗೇ ಮಧ್ಯಾಹ್ನೇವಾಸಮಾಹಿತಃ ।
ಸಾಯಾಹ್ನೇ ವಾಪರಾಹ್ಣೇ ಚ ವಾಚಯನ್ ನಾವಸೀದತಿ ॥
ಅನುವಾದ
ಏಕಾಗ್ರಚಿತ್ತನಾಗಿ ಪ್ರತಿದಿನ ಪ್ರಾತಃಕಾಲ, ಮಧ್ಯಾಹ್ನ,ಅಪರಾಹ್ಣ, ಸಾಯಂಕಾಲಗಳಲ್ಲಿ ರಾಮಾಯಣದ ಪಾರಾಯಣ ಮಾಡುವವನಿಗೆ ಎಂದಿಗೂ ಯಾವುದೇ ದುಃಖವಾಗುವುದಿಲ್ಲ.॥9॥
ಮೂಲಮ್ - 10
ಅಯೋಧ್ಯಾಪಿ ಪುರೀ ರಮ್ಯಾ ಶೂನ್ಯಾವರ್ಷಗಣಾನ್ ಬಹೂನ್ ।
ಋಷಭಂ ಪ್ರಾಪ್ಯ ರಾಜಾನಂ ನಿವಾಸಮುಪಯಾಸ್ಯತಿ ॥
ಅನುವಾದ
ಶ್ರೀರಾಮನು ಪರಮ ಧಾಮಕ್ಕೆ ತೆರಳಿದ ಬಳಿಕ ರಮಣೀಯ ಅಯೋಧ್ಯಾ ಪುರಿಯು ಅನೇಕ ವರ್ಷಗಳವರೆಗೆ ಜನಶೂನ್ಯವಾಗಿರುತ್ತದೆ. ಮತ್ತೆ ಋಷಭನು ರಾಜನಾದಾಗ ಅಲ್ಲಿ ಜನವಸತಿ ಪ್ರಾರಂಭವಾಗುತ್ತದೆ.॥10॥
ಮೂಲಮ್ - 11
ಏತದಾಖ್ಯಾನಮಾಯುಷ್ಯಂ ಸಭವಿಷ್ಯಂಸಹೋತ್ತರಮ್ ।
ಕೃತವಾನ್ಪ್ರಚೇತಸಃ ಪುತ್ರಸ್ತದ್ ಬ್ರಹ್ಮಾಪ್ಯನ್ವಮನ್ಯತ ॥
ಅನುವಾದ
ಪ್ರಚೇತಸನ ಪುತ್ರ ಮಹರ್ಷಿ ವಾಲ್ಮೀಕಿಗಳು ಅಶ್ವಮೇಧಯಜ್ಞದ ನಂತರದ ಕಥೆ ಹಾಗೂ ಉತ್ತರಕಾಂಡ ಸಹಿತ ರಾಮಾಯಣ ಎಂಬ ಈ ಐತಿಹಾಸಿಕ ಕಾವ್ಯವನ್ನು ನಿರ್ಮಾಣ ಮಾಡಿರುವರು. ಬ್ರಹ್ಮದೇವರೂ ಇದನ್ನು ಅನುಮೋದಿಸುತ್ತಾರೆ.॥11॥
ಮೂಲಮ್ - 12
ಅಶ್ವಮೇಧಸಹಸ್ರಸ್ಯ ವಾಜಪೇಯಾಯುತಸ್ಯ ಚ ।
ಲಭತೇ ಶ್ರವಣಾದೇವ ಸರ್ಗಸ್ಯೈಕಸ್ಯ ಮಾನವಃ ॥
ಅನುವಾದ
ಈ ಕಾವ್ಯದ ಒಂದು ಸರ್ಗವನ್ನು ಶ್ರವಣ ಮಾಡುವುದರಿಂದ ಮನುಷ್ಯನು ಒಂದು ಸಾವಿರ ಅಶ್ವಮೇಧ ಮತ್ತು ಹತ್ತು ಸಾವಿರ ವಾಜಪೇಯ ಯಜ್ಞದ ಲವನ್ನು ಪಡೆಯುತ್ತಾನೆ.॥12॥
ಮೂಲಮ್ - 13½
ಪ್ರಯಾಗಾದೀನಿತೀರ್ಥಾನಿ ಗಂಗಾದ್ಯಾಃ ಸರಿತಸ್ತಥಾ ।
ನೈಮಿಷಾದೀನ್ಯರಣ್ಯಾನಿ ಕುರುಕ್ಷೇತ್ರಾದಿಕಾನ್ಯಪಿ ॥
ಗತಾನಿ ತೇನ ಲೋಕೇಸ್ಮಿನ್ಯೇನ ರಾಮಾಯಣಂ ಶ್ರುತಮ್ ।
ಅನುವಾದ
ಈ ಲೋಕದಲ್ಲಿ ರಾಮಾಯಣ ಕಥೆಯನ್ನು ಕೇಳಿದವನಿಗೆ, ಪ್ರಯಾಗಾದಿ ತೀರ್ಥಗಳ, ಗಂಗಾದಿ ಪವಿತ್ರ ನದಿಗಳ, ನೈಮಿಷಾರಣ್ಯ ಆದಿ ವನಗಳ, ಕುರುಕ್ಷೇತ್ರ ಆದಿ ಪುಣ್ಯ ಕ್ಷೇತ್ರಗಳ ಯಾತ್ರೆ ಪೂರ್ಣಗೊಳಿಸಿದಂತೆಯೇ ಆಗಿದೆ.॥13½॥
ಮೂಲಮ್ - 14½
ಹೇಮಭಾರಂ ಕುರುಕ್ಷೇತ್ರೇ ಗ್ರಸ್ತೇ ಭಾನೌ ಪ್ರಯಚ್ಛತಿ ॥
ಯಶ್ಚ ರಾಮಾಯಣಂ ಲೋಕೇ ಶೃಣೋತಿ ಸದೃಶಾವುಭೌ ।
ಅನುವಾದ
ಸೂರ್ಯಗ್ರಹಣದ ಸಮಯ ಕುರುಕ್ಷೇತ್ರದಲ್ಲಿ ಒಂದು ಭಾರದಷ್ಟು ಸುವರ್ಣದಾನ ಮಾಡುವವನಿಗೆ, ಎಷ್ಟು ಫಲವು ಸಿಗುವುದೋ ಅನುದಿನ ರಾಮಾಯಣ ಕೇಳುವವನಿಗೆ ಅಷ್ಟೇ ಪುಣ್ಯ ಲಭಿಸುತ್ತದೆ.॥14½॥
ಮೂಲಮ್ - 15½
ಸಮ್ಯಕ್ಶ್ರದ್ಧಾ ಸಮಾಯುಕ್ತಃ ಶೃಣುತೇ ರಾಘವೀಂ ಕಥಾಮ್ ॥
ಸರ್ವಪಾಪಾತ್ಪ್ರಮುಚ್ಯೇತ ವಿಷ್ಣುಲೋಕಂ ಸ ಗಚ್ಛತಿ ।
ಅನುವಾದ
ಉತ್ತಮ ಶ್ರದ್ಧೆಯಿಂದ ಕೂಡಿ ಶ್ರೀರಘುನಾಥನ ಕಥೆ ಕೇಳುವವನು ಎಲ್ಲ ಪಾಪಗಳಿಂದ ಮುಕ್ತನಾಗಿ ವಿಷ್ಣುಲೋಕಕ್ಕೆ ಹೋಗುತ್ತಾನೆ.॥15½॥
ಮೂಲಮ್ - 16½
ಆದಿಕಾವ್ಯಮಿದಂ ತ್ವಾರ್ಷಂ ಪುರಾ ವಾಲ್ಮೀಕಿನಾ ಕೃತಮ್ ॥
ಯಃ ಶೃಣೋತಿ ಸದಾ ಭಕ್ತ್ಯಾ ಸ ಗಚ್ಛೇದ್ವೈಷ್ಣವೀಂ ತನುಮ್ ।
ಅನುವಾದ
ಹಿಂದೆ ವಾಲ್ಮೀಕಿಗಳು ನಿರ್ಮಿಸಿದ ಈ ಆರ್ಷ ರಾಮಾಯಣ ಆದಿಕಾವ್ಯವನ್ನು ಸದಾ ಭಕ್ತಿಭಾವ ದಿಂದ ಶ್ರವಣ ಮಾಡುವವನು ಭಗವಾನ್ ವಿಷ್ಣುವಿನ ಸಾರೂಪ್ಯ ಪಡೆದುಕೊಳ್ಳುವನು.॥16½॥
ಮೂಲಮ್ - 17
ಪುತ್ರದಾರಾಶ್ಚ ವರ್ಧಂತೇ ಸಂಪದಃ ಸಂತತಿಸ್ತಥಾ ॥
ಮೂಲಮ್ - 18
ಸತ್ಯಮೇತದ್ವಿದಿತ್ವಾ ತು ಶ್ರೋತವ್ಯಂ ನಿಯತಾತ್ಮಭಿಃ ।
ಗಾಯತ್ರ್ಯಾಶ್ಚ ಸ್ವರೂಪಂ ತದ್ರಾಮಾಯಣಮನುತ್ತಮಮ್ ॥
ಅನುವಾದ
ಇದರ ಶ್ರವಣದಿಂದ ಪತ್ನೀ-ಪುತ್ರರ ಪ್ರಾಪ್ತಿಯಾಗುತ್ತದೆ, ಧನ ಮತ್ತು ಸಂತತಿ ಬೆಳೆಯುತ್ತದೆ. ಇದನ್ನು ಪೂರ್ಣವಾಗಿ ಸತ್ಯವೆಂದು ತಿಳಿದು, ಮನಸ್ಸು ವಶಪಡಿಸಿಕೊಂಡು ಇದರ ಶ್ರವಣ ಮಾಡಬೇಕು. ಈ ಪರಮೋತ್ತಮ ರಾಮಾಯಣ ಕಾವ್ಯವು ಗಾಯತ್ರೀಯ ಸ್ವರೂಪವಾಗಿದೆ.॥17-18॥
ಮೂಲಮ್ - 19
ಯಃ ಪಠೇಚ್ಛೃಣುಯಾನ್ನಿತ್ಯಂ ಚರಿತಂ ರಾಘವಸ್ಯ ಹ ।
ಭಕ್ತ್ಯಾ ನಿಷ್ಕಲ್ಮಷೋ ಭೂತ್ವಾ ದೀರ್ಘಮಾಯುರವಾಪ್ನುಯಾತ್ ॥
ಅನುವಾದ
ಪ್ರತಿದಿನ ಭಕ್ತಿಭಾವದಿಂದ ಶ್ರೀರಾಮನ ಈ ಚರಿತ್ರೆಯನ್ನು ಕೇಳುವವನು, ಓದುವವನು ನಿಷ್ಪಾಪನಾಗಿ ದೀರ್ಘಾ ಯುಸ್ಸನ್ನು ಪಡೆಯುತ್ತಾನೆ.॥19॥
ಮೂಲಮ್ - 20
ಚಿಂತಯೇದ್ರಾಘವಂ ನಿತ್ಯಂ ಶ್ರೇಯಃ ಪ್ರಾಪ್ತುಂ ಯಇಚ್ಛತಿ ।
ಶ್ರಾವಯೇದಿದಮಾಖ್ಯಾನಂ ಬ್ರಾಹ್ಮಣೇಭ್ಯೋ ದಿನೇದಿನೇ ॥
ಅನುವಾದ
ಶ್ರೇಯಸ್ಸನ್ನು ಬಯಸು ವವನು ನಿತ್ಯ-ನಿರಂತರ ಶ್ರೀರಘುನಾಥನನ್ನು ಚಿಂತಿಸಬೇಕು. ಬ್ರಾಹ್ಮಣರ ಎದುರಿಗೆ ಇದರ ಪಾರಾಯಣ - ಪ್ರವಚನ ಮಾಡಬೇಕು.॥20॥
ಮೂಲಮ್ - 21
ಯಸ್ತ್ವಿದಂ ರಘುನಾಥಸ್ಯ ಚರಿತಂ ಸಕಲಂ ಪಠೇತ್ ।
ಸೋಽಸುಕ್ಷಯೇ ವಿಷ್ಣುಲೋಕಂ ಗಚ್ಛತ್ಯೇವ ನಸಂಶಯಃ ॥
ಅನುವಾದ
ಈ ರಘುನಾಥ ಚರಿತ್ರದ ಪೂರ್ಣ ಪಾರಾಯಣ ಮಾಡುವವನು ಮೃತ್ಯುವಿನ ಬಳಿಕ ಭಗವಾನ್ ವಿಷ್ಣುವಿನ ಧಾಮಕ್ಕೆ ಹೋಗುತ್ತಾನೆ; ಇದರಲ್ಲಿ ಸಂಶಯವೇ ಇಲ್ಲ.॥21॥
ಮೂಲಮ್ - 23
ಪಿತಾ ಪಿತಾಮಹಸ್ತಸ್ಯ ತಥೈವ ಪ್ರಪಿತಾಮಹಃ ।
ತತ್ಪಿತಾ ತತ್ಪಿತಾ ಚೈವ ವಿಷ್ಣುಂ ಯಾಂತಿ ನ ಸಂಶಯಃ ॥
ಅನುವಾದ
ಇಷ್ಟೇ ಅಲ್ಲ ಅವನ ತಂದೆ, ತಾತ, ಮುತ್ತಾತ ಮತ್ತು ಅವನ ತಂದೆಯೂ ಭಗವಾನ್ ವಿಷ್ಣುವನ್ನು ಪಡೆದುಕೊಳ್ಳುವುದರಲ್ಲಿ ಸಂಶಯವೇ ಇಲ್ಲ.॥22॥
ಮೂಲಮ್ - 23
ಚತುರ್ವರ್ಗಪ್ರದಂ ನಿತ್ಯಂ ಚರಿತಂ ರಾಘವಸ್ಯ ತು ।
ತಸ್ಮಾದ್ಯತ್ನವತಾ ನಿತ್ಯಂ ಶ್ರೋತವ್ಯಂ ಪರಮಂ ಸದಾ ॥
ಅನುವಾದ
ಶ್ರೀರಾಘವೇಂದ್ರನ ಈ ಚರಿತ್ರವು ಸದಾ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನು ಕೊಡುವಂತಹುದು. ಅದಕ್ಕಾಗಿ ಪ್ರತಿದಿನ ಪ್ರಯತ್ನ ಪೂರ್ವಕ ನಿರಂತರ ಈ ಉತ್ತಮ ಕಾವ್ಯವನ್ನು ಶ್ರವಣಿಸಬೇಕು.॥23॥
ಮೂಲಮ್ - 24
ಶೃಣ್ವನ್ರಾಮಾಯಣಂ ಭಕ್ತ್ಯಾ ಯಃ ಪಾದಂ ಪದಮೇವ ವಾ ।
ಸ ಯಾತಿ ಬ್ರಹ್ಮಣಃ ಸ್ಥಾನಂ ಬ್ರಹ್ಮಣಾ ಪೂಜ್ಯತೇ ಸದಾ ॥
ಅನುವಾದ
ರಾಮಾಯಣಕಾವ್ಯದ ಶ್ಲೋಕದ ಒಂದು ಚರಣ ಅಥವಾ ಒಂದು ಪದವನ್ನು ಶ್ರವಣ ಮಾಡುವವನು ಬ್ರಹ್ಮದೇವರ ಧಾಮಕ್ಕೆ ಹೋಗಿ, ಸದಾ ಅವರಿಂದ ಪೂಜಿತನಾಗುತ್ತಾನೆ.॥24॥
ಮೂಲಮ್ - 25
ಏವಮೇತತ್ಪುರಾವೃತ್ತಮಾಖ್ಯಾನಂ ಭದ್ರಮಸ್ತು ವಃ ।
ಪ್ರವ್ಯಾಹರತ ವಿಸ್ರಬ್ಧಂ ಬಲಂ ವಿಷ್ಣೋಃ ಪ್ರವರ್ಧತಾಮ್ ॥
ಅನುವಾದ
ಈ ಪ್ರಕಾರ ಈ ಪುರಾತನ ಆಖ್ಯಾನವನ್ನು ನೀವು ವಿಶ್ವಾಸ ಪೂರ್ವಕ ಪಾರಾಯಣ ಮಾಡಿರಿ. ನಿಮಗೆ ಶ್ರೇಯಸ್ಸಾಗಲಿ ಮತ್ತು ಭಗವಾನ್ ವಿಷ್ಣುವಿನ ಬಲದ ಜಯವಾಗಲೀ. ಶ್ರೀರಾಮ ಜಯರಾಮ ಜಯಜಯರಾಮ.॥25॥
ಮೂಲಮ್ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ನೂರಹನ್ನೊಂದನೆಯ ಸರ್ಗಪೂರ್ಣವಾಯಿತು.॥111॥
ಉತ್ತರಕಾಂಡವು ಸಂಪೂರ್ಣವಾಯಿತು.
ಶ್ರೀಮದ್ವಾಲ್ಮೀಕೀಯ ರಾಮಾಯಣ ಸಂಪೂರ್ಣಮ್
Misc Detail
ಕೊನೆಯ ಪುಟ