[ತೊಂಭತ್ತೆಂಟನೆಯ ಸರ್ಗ]
ಭಾಗಸೂಚನಾ
ಸೀತೆಗಾಗಿ ಶ್ರೀರಾಮನ ವಿಲಾಪ, ಬ್ರಹ್ಮದೇವರು ಶ್ರೀರಾಮನನ್ನು ಸಮಜಾಯಿಸಿ, ಉತ್ತರಕಾಂಡದ ಉಳಿದ ಭಾಗವನ್ನು ಕುಶ-ಲವರು ಹೇಳಲು ಅವರನ್ನು ಪ್ರೇರೇಪಿಸಿದುದು
ಮೂಲಮ್ - 1
ರಸಾತಲಂ ಪ್ರವಿಷ್ಟಾಯಾಂವೈದೇಹ್ಯಾಂ ಸರ್ವವಾನರಾಃ ।
ಚುಕ್ರುಶುಃ ಸಾಧು ಸಾಧ್ವೀತಿ ಮುನಯೋರಾಮಸಂನಿಧೌ ॥
ಅನುವಾದ
ವೈದೇಹೀ ಸೀತಾದೇವಿಯು ರಸಾತಳದಲ್ಲಿ ಪ್ರವೇಶಿಸಿದಾಗ ಶ್ರೀರಾಮನ ಬಳಿಯಲ್ಲಿ ಕುಳಿತಿರುವ ವಾನರರೆಲ್ಲರೂ ಹಾಗೂ ಋಷಿಮುನಿಗಳು - ಸಾಧ್ವೀ ಸೀತೇ! ನೀನು ಧನ್ಯ! ಧನ್ಯ! ಎಂದು ಹೇಳತೊಡಗಿದರು.॥1॥
ಮೂಲಮ್ - 2
ದಂಡಕಾಷ್ಠಮವಷ್ಟಭ್ಯ ಬಾಷ್ಪವ್ಯಾಕುಲಿತೇಕ್ಷಣಃ ।
ಅವಾಕ್ಶಿರಾ ದೀನಮನಾರಾಮೋ ಹ್ಯಾಸೀತ್ಸುದುಃಖಿತಃ ॥
ಅನುವಾದ
ಆದರೆ ಸ್ವತಃ ಶ್ರೀರಾಮನು ಬಹಳ ದುಃಖಿತನಾದನು. ಅವನು ದೀನಮನಸ್ಕನಾಗಿ, ಅತ್ತಿಯ ದಂಡದ ಆಸರೆ ಪಡೆದು ನಿಂತುಕೊಂಡು ತಲೆತಗ್ಗಿಸಿ ಕಣ್ಣುಗಳಿಂದ ಕಂಬನಿ ಹರಿಸಿದನು.॥2॥
ಮೂಲಮ್ - 3
ಸ ರುದಿತ್ವಾ ಚಿರಂ ಕಾಲಂ ಬಹುಶೋ ಬಾಷ್ಪಮುತ್ಸೃಜನ್ ।
ಕ್ರೋಧಶೋಕಸಮಾವಿಷ್ಟೋ ರಾಮೋವಚನಮಬ್ರವೀತ್ ॥
ಅನುವಾದ
ಬಹಳ ಹೊತ್ತು ತಡೆದು ಪದೇ-ಪದೇ ಕಣ್ಣೀರು ಸುರಿಸುತ್ತಾ ಕ್ರೋಧ ಮತ್ತು ಶೋಕದಿಂದ ಕೂಡಿ ಶ್ರೀರಾಮ ಚಂದ್ರನು ಈ ಪ್ರಕಾರ ನುಡಿದನು.॥3॥
ಮೂಲಮ್ - 4
ಅಭೂತಪೂರ್ವಂ ಶೋಕಂ ಮೇ ಮನಃ ಸ್ಪ್ರಷ್ಟುಮಿವೇಚ್ಛತಿ ।
ಪಶ್ಯತೋ ಮೇ ಯಥಾ ನಷ್ಟಾ ಸೀತಾ ಶ್ರೀರಿವ ರೂಪಿಣೀ ॥
ಅನುವಾದ
ಇಂದು ನನ್ನ ಮನಸ್ಸು ಅಭೂತಪೂರ್ವ ಶೋಕದಲ್ಲಿ ಮುಳುಗುತ್ತಿದೆ; ಏಕೆಂದರೆ ಈಗ ನನ್ನ ಕಣ್ಣಮುಂದೆಯೇ ಮೂರ್ತಿಮಂತ ಲಕ್ಷ್ಮಿಗೆ ಸಮಾನಳಾದ ಸೀತೆಯು ಅದೃಶ್ಯಳಾದಳು.॥4॥
ಮೂಲಮ್ - 5
ಸಾದರ್ಶನಂ ಪುರಾ ಸೀತಾ ಲಂಕಾಂ ಪಾರೇ ಮಹೋದಧೇಃ ।
ತತಶ್ಚಾಪಿ ಮಯಾಽಽನೀತಾ ಕಿಂಪುನರ್ವಸುಧಾತಲಾತ್ ॥
ಅನುವಾದ
ಮೊದಲೊಮ್ಮೆ ಸೀತೆಯು ಸಮುದ್ರದ ಆಚೆ ಲಂಕೆಗೆ ಹೋಗಿ ನನ್ನ ಕಣ್ಣುಗಳಿಂದ ಮರೆಯಾಗಿದ್ದಳು. ಆದರೆ ನಾನು ಅಲ್ಲಿಂದಲೂ ಮರಳಿ ತಂದಿರುವಾಗ ಪೃಥಿವಿಯ ಒಳಗಿಂದ ತರುವುದು ಏನು ದೊಡ್ಡ ಮಾತು.॥5॥
ಮೂಲಮ್ - 6
ವಸುಧೇ ದೇವಿ ಭವತಿ ಸೀತಾನಿರ್ಯಾತ್ಯತಾಂ ಮಮ ।
ದರ್ಶಯಿಷ್ಯಾಮಿ ವಾ ರೋಷಂ ಯಥಾ ಮಾಮವಗಚ್ಛಸಿ ॥
ಅನುವಾದ
(ಹೀಗೆ ಹೇಳಿ ಪೃಥಿವಿಯ ಬಳಿ ಹೇಳುತ್ತಾನೆ- ) ಪೂಜನೀಯ ಭಗವತಿ ವಸುಂಧರೇ! ನನಗೆ ಸೀತೆಯನ್ನು ಮರಳಿಸಿ ಕೊಡು; ಇಲ್ಲದಿದ್ದರೆ ನಾನು ನನ್ನ ಕ್ರೋಧವನ್ನು ತೋರುವೆನು. ನನ್ನ ಪ್ರಭಾವವನ್ನು ನೀನು ತಿಳಿದಿರುವೆ.॥6॥
ಮೂಲಮ್ - 7
ಕಾಮಂ ಶ್ವಶ್ರೂರ್ಮಮೈವ ತ್ವಂ ತ್ವತ್ಸಕಾಶಾತ್ತುಮೈಥಿಲೀ ।
ಕರ್ಷತಾ ಹಲಹಸ್ತೇನ ಜನಕೇನೋದ್ಧೃತಾ ಪುರಾ ॥
ಅನುವಾದ
ದೇವಿ! ವಾಸ್ತವವಾಗಿ ನೀನು ನನಗೆ ಅತ್ತೆಯಾಗಿರುವೆ. ರಾಜಾ ಜನಕನು ಕೈಯಲ್ಲಿ ನೇಗಿಲು ಹಿಡಿದು ನಿನ್ನನ್ನು ಊಳುತ್ತಿದ್ದನು, ಅದರಿಂದ ನಿನ್ನ ಒಳಗಿನಿಂದ ಸೀತೆಯ ಪ್ರಾದುರ್ಭಾವವಾಯಿತು.॥7॥
ಮೂಲಮ್ - 8
ತಸ್ಮಾನ್ನಿರ್ಯಾತ್ಯತಾಂ ಸೀತಾ ವಿವರಂ ವಾ ಪ್ರಯಚ್ಛ ಮೇ ।
ಪಾತಾಲೇ ನಾಕಪೃಷ್ಠೇವಾ ವಸೇಯಂ ಸಹಿತಸ್ತಯಾ ॥
ಅನುವಾದ
ಆದ್ದರಿಂದ ಒಂದೋ ಸೀತೆಯನ್ನು ಮರಳಿಸಿಕೊಡು, ಇಲ್ಲವೇ ನನ್ನನ್ನು ನಿನ್ನ ಮಡಿಲಿಗೆ ಸೇರಿಸಿಕೋ; ಏಕೆಂದರೆ ಪಾತಾಳವಿರಲೀ, ಸ್ವರ್ಗವಿರಲೀ, ನಾನು ಸೀತೆಯೊಂದಿಗೆ ಇರುವೆನು.॥8॥
ಮೂಲಮ್ - 9
ಆನಯ ತ್ವಂ ಹಿ ತಾಂ ಸೀತಾಂ ಮತ್ತೋಽಹಂ ಮೈಥಿಲೀಕೃತೇ ।
ನ ಮೇ ದಾಸ್ಯಸಿ ಚೇತ್ಸಿತಾಂ ಯಥಾರೂಪಂ ಮಹೀತಲೇ ॥
ಮೂಲಮ್ - 10
ಸಪರ್ವತವನಾಂ ಕೃತ್ಸ್ನಾಂ ವಿಧಮಿಷ್ಯಾಮಿ ತೇಸ್ಥಿತಿಮ್ ।
ನಾಶಯಿಷ್ಯಾಮ್ಯಹಂ ಭೂಮಿಂ ಸರ್ವಮಾಪೋ ಭವತ್ವಿಹ ॥
ಅನುವಾದ
ನೀನು ನನ್ನ ಸೀತೆಯನ್ನು ತಂದುಕೊಡು. ನಾನು ಮಿಥಿಲೇಶ ಕುಮಾರಿಗಾಗಿ ವಿವೇಕ ಶೂನ್ಯನಾಗಿದ್ದೇನೆ. ಈ ಪೃಥಿವಿಯಲ್ಲಿ ನೀನು ಅದೇ ರೂಪದಲ್ಲಿ ಸೀತೆಯನ್ನು ಮರಳಿಸಿಕೊಡದಿದ್ದರೆ, ನಾನು ಪರ್ವತ, ವನಸಹಿತ ನಿನ್ನ ಅಸ್ತಿತ್ವವನ್ನು ನಾಶಮಾಡಿ ಬಿಡುವೆನು. ಇಡೀ ಭೂಮಿಯನ್ನು ವಿನಾಶ ಮಾಡುವೆನು. ಮತ್ತೆ ಬೇಕಾದರೆ ಎಲ್ಲವೂ ಜಲಮಯವಾಗಲಿ.॥9-10॥
ಮೂಲಮ್ - 11
ಏವಂ ಬ್ರುವಾಣೇ ಕಾಕುತ್ಸ್ಥೇ ಕ್ರೋಧಶೋಕಸಮನ್ವಿತೇ ।
ಬ್ರಹ್ಮಾ ಸುರಗಣೈಃ ಸಾರ್ಧಮುವಾಚ ರಘುನಂದನಮ್ ॥
ಅನುವಾದ
ಶ್ರೀರಘುನಾಥನು ಕ್ರೋಧ, ಶೋಕದಿಂದ ಯುಕ್ತನಾಗಿ ಹೀಗೆ ಮಾತುಗಳನ್ನಾಡತೊಡಗಿದಾಗ ದೇವತೆಗಳ ಸಹಿತ ಬ್ರಹ್ಮದೇವರು ರಘುಕುಲನಂದನ ಶ್ರೀರಾಮನಲ್ಲಿ ಹೇಳಿದರು.॥11॥
ಮೂಲಮ್ - 12
ರಾಮ ರಾಮ ನ ಸಂತಾಪಂ ಕರ್ತುಮರ್ಹಸಿ ಸುವ್ರತ ।
ಸ್ಮರ ತ್ವಂ ಪೂರ್ವಕಂ ಭಾವಂ ಮಂತ್ರಂ ಚಾಮಿತ್ರಕರ್ಶನ ॥
ಅನುವಾದ
ಸುವ್ರತನಾದ ಶ್ರೀರಾಮಾ! ಮನಸ್ಸಿನಲ್ಲಿ ಸಂತಾಪಪಡಬೇಡ. ಶತ್ರುಸೂದನ ! ನಿನ್ನ ಹಿಂದಿನ ಸ್ವರೂಪವನ್ನು ನೆನೆದುಕೋ.॥12॥
ಮೂಲಮ್ - 13
ನ ಖಲು ತ್ವಾಂ ಮಹಾಬಾಹೋ ಸ್ಮಾರಯೇಯಮನುತ್ತಮಮ್ ।
ಇಮಂ ಮುಹೂರ್ತಂ ದುರ್ಧರ್ಷ ಸ್ಮರ ತ್ವಂ ಜನ್ಮ ವೈಷ್ಣವಮ್ ॥
ಅನುವಾದ
ಮಹಾಬಾಹೋ! ದುರ್ಧರ್ಷನೇ! ನಿನಗೆ ನಾನು ಏನನ್ನೂ ಜ್ಞಾಪಿಸಬೇಕಾದ ಆವಶ್ಯಕತೆಯಿಲ್ಲ. ಆದರೂ ವಿಜ್ಞಾಪಿಸುತ್ತೇನೆ - ನೀನು ವಿಷ್ಣುವಿನ ಅವತಾರನಾಗಿದ್ದು, ವೈಷ್ಣವ ಸ್ವರೂಪವನ್ನು ಜ್ಞಾಪಿಸಿಕೋ.॥13॥
ಮೂಲಮ್ - 14
ಸೀತಾ ಹಿ ವಿಮಲಾ ಸಾಧ್ವೀ ತವ ಪೂರ್ವಪರಾಯಣಾ ।
ನಾಗಲೋಕಂ ಸುಖಂ ಪ್ರಾಯಾತ್ತ್ವದಾಶ್ರಯತಪೋಬಲಾತ್ ॥
ಅನುವಾದ
ಸಾಧ್ವೀ ಸೀತೆಯು ಸರ್ವಥಾ ಶುದ್ಧಳಾಗಿದ್ದಾಳೆ. ಅವಳು ಮೊದಲಿನಿಂದಲೂ ನಿನ್ನಲ್ಲೇ ಪರಾಯಣಳಾಗಿದ್ದಳು. ನಿನ್ನ ಆಶ್ರಯ ಪಡೆಯುವುದೇ ಆಕೆಯ ತಪೋಬಲವಾಗಿದೆ. ಅದರಿಂದಾಗಿ ಆಕೆ ಸುಖಪೂರ್ವಕವಾಗಿ ನಾಗಲೋಕದ ಮೂಲಕ ನಿನ್ನ ಪರಮಧಾಮಕ್ಕೆ ಹೊರಟು ಹೋದಳು.॥14॥
ಮೂಲಮ್ - 15
ಸ್ವರ್ಗೇ ತೇ ಸಂಗಮೋ ಭೂಯೋ ಭವಿಷ್ಯತಿ ನ ಸಂಶಯಃ ।
ಅಸ್ಯಾಸ್ತು ಪರಿಷನ್ಮಧ್ಯೇ ಯದ್ ಬ್ರವೀಮಿನಿಬೋಧ ತತ್ ॥
ಅನುವಾದ
ಇನ್ನು ಪುನಃ ಸಾಕೇತಧಾಮದಲ್ಲಿ ನಿನಗೆ ಆಕೆಯು ದೊರೆಯುವಳು, ಇದರಲ್ಲಿ ಸಂಶಯವೇ ಇಲ್ಲ. ಈಗ ಈ ಸಭೆಯಲ್ಲಿ ನಾನು ಹೇಳುವುದರ ಕಡೆಗೆ ಗಮನಕೊಡು.॥15॥
ಮೂಲಮ್ - 16
ಏತದೇವ ಹಿ ಕಾವ್ಯಂ ತೇ ಕಾವ್ಯಾನಾಮುತ್ತಮಂಶ್ರುತಮ್ ।
ಸರ್ವಂ ವಿಸ್ತರತೋ ರಾಮ ವ್ಯಾಖ್ಯಾಸ್ಯತಿ ನ ಸಂಶಯಃ ॥
ಅನುವಾದ
ನೀನು ಕೇಳಿದ ನಿನ್ನ ಚರಿತ್ರೆಗೆ ಸಂಬಂಧಿಸಿದ ಈ ಕಾವ್ಯವು ಎಲ್ಲ ಕಾವ್ಯಗಳಲ್ಲಿ ಉತ್ತಮವಾಗಿದೆ. ಶ್ರೀರಾಮಾ! ಇದು ನಿನ್ನ ಜೀವನ-ವೃತ್ತಾಂತವನ್ನು ವಿಸ್ತಾರವಾಗಿ ತಿಳಿಸಿ ಹೇಳುತ್ತದೆ, ಇದರಲ್ಲಿ ಸಂದೇಹವೇ ಇಲ್ಲ.॥16॥
ಮೂಲಮ್ - 17
ಜನ್ಮಪ್ರಭೃತಿ ತೇ ವೀರ ಸುಖದುಃಖೋಪಸೇವನಮ್ ।
ಭವಿಷ್ಯದುತ್ತರಂ ಚೇಹ ಸರ್ವಂ ವಾಲ್ಮೀಕಿನಾಕೃತಮ್ ॥
ಅನುವಾದ
ವೀರನೇ! ಆವಿರ್ಭವಿಸಿದಂದಿನಿಂದ ನೀನು ಸೇವಿಸಿದ ಸುಖ-ದುಃಖಗಳ ಹಾಗೂ ಸೀತೆಯ ಅಂತರ್ಧಾನವಾದ ಮೇಲೆ, ಭವಿಷ್ಯದಲ್ಲಿ ನಡೆಯುವ ಸಂಗತಿಗಳನ್ನು ಮಹರ್ಷಿ ವಾಲ್ಮೀಕಿಗಳು ಇದರಲ್ಲಿ ಪೂರ್ಣರೂಪದಿಂದ ವರ್ಣಿಸಿರುವರು.॥17॥
ಮೂಲಮ್ - 18
ಆದಿಕಾವ್ಯಮಿದಂ ರಾಮ ತ್ವಯಿ ಸರ್ವಂ ಪ್ರತಿಷ್ಠಿತಮ್ ।
ನಹ್ಯನ್ಯೋಽರ್ಹತಿ ಕಾವ್ಯಾನಾಂ ಯಶೋಭಾಗ್ರಾಘವಾದೃತೇ ॥
ಅನುವಾದ
ಶ್ರೀರಾಮಾ! ಇದು ಆದಿಕಾವ್ಯವಾಗಿದೆ. ಈ ಸಮಗ್ರ ಕಾವ್ಯದ ಆಧಾರಶಿಲೆಯು ನೀನೇ ಆಗಿರುವೆ. ನಿನ್ನ ಜೀವನ ವೃತ್ತಾಂತವನ್ನೇ ಆಧರಿಸಿ ಈ ಕಾವ್ಯದ ರಚನೆಯಾಗಿದೆ. ಕಾವ್ಯದ ನಾಯಕನಾಗುವ ಅಧಿಕಾರಿ ನೀನಲ್ಲದೆ ಬೇರೆ ಯಶಸ್ವೀ ಪುರುಷನು ಯಾರೂ ಇಲ್ಲ.॥18॥
ಮೂಲಮ್ - 19
ಶ್ರುತಂ ತೇ ಪೂರ್ವಮೇತದ್ಧಿ ಮಯಾ ಸರ್ವಂ ಸುರೈಃ ಸಹ ।
ದಿವ್ಯಮದ್ಭುತರೂಪಂ ಚ ಸತ್ಯವಾಕ್ಯಮನಾವೃತಮ್ ॥
ಅನುವಾದ
ದೇವತೆಗಳೊಂದಿಗೆ ನಾನು ಮೊದಲು ನಿನಗೆ ಸಂಬಂಧಿತ ಈ ಕಾವ್ಯವನ್ನು ಪೂರ್ಣವಾಗಿ ಶ್ರವಣಿಸಿದ್ದೇನೆ. ಇದು ದಿವ್ಯ, ಅದ್ಭುತವಾಗಿದೆ. ಇದರಲ್ಲಿ ಯಾವುದೇ ಸಂಗತಿ ಅಡಗಿಲ್ಲ. ಇದರಲ್ಲಿ ಹೇಳಿದ ಎಲ್ಲ ಸಂಗತಿಗಳು ಸತ್ಯವಾಗಿವೆ.॥19॥
ಮೂಲಮ್ - 20
ಸ ತ್ವಂ ಪುರುಷಶಾರ್ದೂಲ ಧರ್ಮೇಣಸುಸಮಾಹಿತಃ ।
ಶೇಷಂ ಭವಿಷ್ಯಂ ಕಾಕುತ್ಸ್ಥ ಕಾವ್ಯಂ ರಾಮಾಯಣಂ ಶೃಣು ॥
ಅನುವಾದ
ಪುರುಷಸಿಂಹ ರಘುನಂದನ! ನೀನು ಧರ್ಮಪೂರ್ವಕ ಏಕಾಗ್ರಚಿತ್ತನಾಗಿ ಭವಿಷ್ಯದ ಘಟನೆಗಳಿಂದ ಕೂಡಿದ ಉಳಿದ ರಾಮಾಯಣ ಕಾವ್ಯವನ್ನು ಕೇಳಿಕೊ.॥20॥
ಮೂಲಮ್ - 21
ಉತ್ತರಂನಾಮ ಕಾವ್ಯಸ್ಯ ಶೇಷಮತ್ರ ಮಹಾಯಶಃ ।
ತಚ್ಛಣುಷ್ವ ಮಹಾತೇಜ ಋಷಿಭಿಃ ಸಾರ್ಧಮುತ್ತಮಮ್ ॥
ಅನುವಾದ
ಮಹಾ ಯಶಸ್ವೀ ಹಾಗೂ ಮಹಾತೇಜಸ್ವೀ ಶ್ರೀರಾಮಾ! ಈ ಕಾವ್ಯದ ಅಂತಿಮ ಭಾಗದ ಹೆಸರು ಉತ್ತರಕಾಂಡವಾಗಿದೆ. ಆ ಉತ್ತಮ ಭಾಗವನ್ನು ನೀನು ಋಷಿಗಳೊಡನೆ ಶ್ರವಣಿಸು.॥21॥
ಮೂಲಮ್ - 22
ನ ಖಲ್ವನ್ಯೇನಕಾಕುತ್ಸ್ಥ ಶ್ರೋತವ್ಯಮಿದಮುತ್ತಮಮ್ ।
ಪರಮಋಷಿಣಾ ವೀರ ತ್ವಯೈವ ರಘುನಂದನ ॥
ಅನುವಾದ
ಕಾಕುತ್ಸ್ಥವೀರ ರಘುನಂದನ! ನೀನು ಸರ್ವೋತ್ತಮ ರಾಜರ್ಷಿಯಾಗಿರುವೆ. ಆದ್ದರಿಂದ ಮೊದಲು ನೀನೇ ಈ ಉತ್ತಮ ಕಾವ್ಯವನ್ನು ಕೇಳಬೇಕು. ಬೇರೆಯವರು ಅಲ್ಲ.॥22॥
ಮೂಲಮ್ - 23
ಏತಾವದುಕ್ತ್ವಾ ವಚನಂ ಬ್ರಹ್ಮಾ ತ್ರಿಭುವನೇಶ್ವರಃ ।
ಜಗಾಮ ತ್ರಿದಿವಂ ದೇವೋ ದೇವೈಃ ಸಹಸಬಾಂಧವೈಃ ॥
ಅನುವಾದ
ಇಷ್ಟು ಹೇಳಿ ತ್ರಿಲೋಕಸ್ವಾಮಿ ಬ್ರಹ್ಮದೇವರು ದೇವತೆಗಳೊಂದಿಗೆ, ಬಂಧು ಬಾಂಧವರೊಂದಿಗೆ ತಮ್ಮ ಲೋಕಕ್ಕೆ ತೆರಳಿದರು.॥23॥
ಮೂಲಮ್ - 24½
ಯೇ ಚ ತತ್ರ ಮಹಾತ್ಮಾನ ಋಷಯೋ ಬ್ರಾಹ್ಮಲೌಕಿಕಾಃ ।
ಬ್ರಹ್ಮಣಾ ಸಮನುಜ್ಞಾತಾ ನ್ಯವರ್ತಂತ ಮಹೌಜಸಃ ॥
ಉತ್ತರಂ ಶ್ರೋತುಮನಸೋ ಭವಿಷ್ಯಂ ಯಚ್ಚ ರಾಘವೇ ।
ಅನುವಾದ
ಬ್ರಹ್ಮಲೋಕದಲ್ಲಿ ವಾಸಿಸುವ ಮಹಾತೇಜಸ್ವೀ ಮಹಾತ್ಮಾ ಋಷಿಗಳು, ಬ್ರಹ್ಮದೇವರ ಆದೇಶದಂತೆ ಮುಂದಿನ ವೃತ್ತಾಂತದಿಂದ ಕೂಡಿದ ಉತ್ತರ ಕಾಂಡವನ್ನು ಕೇಳುವ ಇಚ್ಛೆಯಿಂದ ತಮ್ಮ ಲೋಕಕ್ಕೆ ಮರಳಿ ಹೋಗದೇ ಅಲ್ಲೇ ಉಳಿದರು.॥24½॥
ಮೂಲಮ್ - 25½
ತತೋ ರಾಮಃ ಶುಭಾಂ ವಾಣೀಂ ದೇವದೇವಸ್ಯ ಭಾಷಿತಮ್ ॥
ಶ್ರುತ್ವಾ ಪರಮತೇಜಸ್ವೀ ವಾಲ್ಮೀಕಿಮಿದಮಬ್ರವೀತ್ ।
ಅನುವಾದ
ಬಳಿಕ ಬ್ರಹ್ಮದೇವರು ಹೇಳಿದ ಶುಭವಾಣಿಯನ್ನು ನೆನೆದು ಪರಮ ತೇಜಸ್ವೀ ಶ್ರೀರಾಮನು ಮಹರ್ಷಿ ವಾಲ್ಮೀಕಿಗಳಲ್ಲಿ ಇಂತೆಂದನು-॥25½॥
ಮೂಲಮ್ - 26½
ಭಗವನ್ ಶ್ರೋತುಮನಸ ಋಷಯೋ ಬ್ರಾಹ್ಮಲೌಕಿಕಾಃ ॥
ಭವಿಷ್ಯದುತ್ತರಂ ಯನ್ಮೇ ಶ್ವೋಭೂತೇ ಸಂಪ್ರವರ್ತತಾಮ್ ।
ಅನುವಾದ
ಪೂಜ್ಯರೇ! ಈ ಬ್ರಹ್ಮಲೋಕ ನಿವಾಸಿ ಮಹರ್ಷಿಗಳು ನನ್ನ ಭಾವೀ ಚರಿತ್ರದಿಂದ ಕೂಡಿದ ಉತ್ತರಕಾಂಡದ ಉಳಿದ ಭಾಗವನ್ನು ಕೇಳಲು ಬಯಸುತ್ತಿದ್ದಾರೆ. ಆದ್ದರಿಂದ ನಾಳೆ ಬೆಳಿಗ್ಗೆಯೇ ಆದರ ಗಾಯನ ಪ್ರಾರಂಭವಾಗಬೇಕು.॥26½॥
ಮೂಲಮ್ - 27
ಏವಂ ವಿನಿಶ್ಚಯಂ ಕೃತ್ವಾ ಸಂಪ್ರಗೃಹ್ಯ ಕುಶೀಲವೌ ॥
ಮೂಲಮ್ - 28
ತಂ ಜನೌಘಂ ವಿಸೃಜ್ಯಾಥ ಪರ್ಣಶಾಲಾಮುಪಾಗಮತ್ ।
ತಾಮೇವ ಶೋಚತಃ ಸೀತಾಂ ಸಾ ವ್ಯತೀತಾ ಚ ಶರ್ವರೀ ॥
ಅನುವಾದ
ಹೀಗೆ ನಿಶ್ಚಯಿಸಿ ಶ್ರೀರಘುನಾಥನು ಜನಸಮುದಾಯವನ್ನು ಬೀಳ್ಕೊಟ್ಟು, ಲವ-ಕುಶರನ್ನು ಜೊತೆಗೆ ಕರೆದುಕೊಂಡು ತನ್ನ ಪರ್ಣಶಾಲೆಗೆ ಬಂದನು. ಅಲ್ಲಿ ಸೀತೆಯನ್ನೇ ಚಿಂತಿಸುತ್ತಾ ಅವನು ಇರುಳನ್ನು ಕಳೆದನು.॥27-28॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ತೊಂಭತ್ತೆಂಟನೆಯ ಸರ್ಗ ಪೂರ್ಣವಾಯಿತು. ॥98॥