[ತೊಂಭತ್ತೇಳನೆಯ ಸರ್ಗ]
ಭಾಗಸೂಚನಾ
ಸೀತಾದೇವಿಯ ಶಪಥ, ಅದಕ್ಕನುಸಾರವಾಗಿ ರಸಾತಳ ಪ್ರವೇಶ
ಮೂಲಮ್ - 1
ವಾಲ್ಮೀಕಿನೈವಮುಕ್ತಸ್ತು ರಾಘವಃ ಪ್ರತ್ಯಭಾಷತ ।
ಪ್ರಾಂಜಲಿರ್ಜಗತೋ ಮಧ್ಯೇ ದೃಷ್ಟ್ವಾ ತಾಂ ವರವರ್ಣಿನೀಮ್ ॥
ಅನುವಾದ
ಮಹರ್ಷಿ ವಾಲ್ಮೀಕಿಗಳು ಹೀಗೆ ಹೇಳಿದಾಗ ಶ್ರೀರಾಮನು ಸುಂದರಿ ಸೀತಾದೇವಿಯನ್ನು ಒಮ್ಮೆ ನೋಡಿ, ಆ ಜನ ಸಮುದಾಯದ ನಡುವೆ ಕೈಮುಗಿದುಕೊಂಡು ಹೇಳಿದನು.॥1॥
ಮೂಲಮ್ - 2
ಏವಮೇತನ್ಮಹಾಭಾಗ ಯಥಾ ವದಸಿ ಧರ್ಮವಿತ್ ।
ಪ್ರತ್ಯಯಸ್ತು ಮಮ ಬ್ರಹ್ಮಂಸ್ತವ ವಾಕ್ಯೈರಕಲ್ಮಷೈಃ ॥
ಅನುವಾದ
ಮಹಾಭಾಗರೇ! ನೀವು ಧರ್ಮವನ್ನು ತಿಳಿದವರು. ಸೀತೆಯ ಕುರಿತು ನೀವು ಹೇಳಿದಂತೆಯೇ ಎಲ್ಲವೂ ಸರಿಯಾಗಿದೆ. ಬ್ರಹ್ಮನ್! ನಿಮ್ಮ ಈ ನಿರ್ದೋಷ ವಚನಗಳಿಂದ ನನಗೆ ಜಾನಕಿಯ ಶುದ್ಧತೆಯ ಕುರಿತು ಪೂರ್ಣ ವಿಶ್ವಾಸ ಉಂಟಾಗಿದೆ.॥2॥
ಮೂಲಮ್ - 3
ಪ್ರತ್ಯಯಶ್ಚ ಪುರಾ ವೃತ್ತೋ ವೈದೇಹ್ಯಾಃ ಸುರಸಂನಿಧೌ ।
ಶಪಥಶ್ಚ ಕೃತಸ್ತತ್ರ ತೇನ ವೇಶ್ಮ ಪ್ರವೇಶಿತಾ ॥
ಅನುವಾದ
ಮೊದಲೊಮ್ಮೆಯೂ ದೇವತೆಯರ ಸನ್ನಿಧಿಯಲ್ಲಿ ವಿದೇಹಕುಮಾರಿಯ ಶುದ್ಧತೆಯ ವಿಶ್ವಾಸ ನನಗೆ ಉಂಟಾಗಿತ್ತು. ಆಗ ಸೀತೆಯು ತನ್ನ ಶುದ್ಧಿಗಾಗಿ ಶಪಥ ಮಾಡಿದ್ದಳು, ಅದರಿಂದ ನಾನು ಇವಳಿಗೆ ನನ್ನ ಭವನದಲ್ಲಿ ಸ್ಥಾನ ಕೊಟ್ಟಿದ್ದೆ.॥3॥
ಮೂಲಮ್ - 4
ಲೋಕಾಪವಾದೋ ಬಲವಾನ್ ಯೇನ ತ್ಯಕ್ತಾ ಹಿ ಮೈಥಿಲೀ ।
ಸೇಯಂ ಲೋಕಭಯಾದ್ಬ್ರಹ್ಮನ್ನಪಾಪೇತ್ಯಭಿಜಾನತಾ ।
ಪರಿತ್ಯಕ್ತಾ ಮಯಾ ಸೀತಾ ತದ್ಭವಾನ್ ಕ್ಷಂತುಮರ್ಹತಿ ॥
ಅನುವಾದ
ಆದರೆ ಮುಂದೆ ಪುನಃ ಜೋರಾದ ಲೋಕಾಪವಾದ ಎದ್ದಿತು, ಅದರಿಂದ ವಿವಶನಾಗಿ ನನಗೆ ಮಿಥಿಲೇಶ ಕುಮಾರಿಯನ್ನು ತ್ಯಜಿಸಬೇಕಾಯಿತು. ಬ್ರಹ್ಮನ್! ಸೀತೆಯು ಸರ್ವಥಾ ನಿಷ್ಪಾಪಳಾಗಿದ್ದಾಳೆ ಎಂದು ತಿಳಿದಿದ್ದರೂ, ಕೇವಲ ಸಮಾಜದ ಭಯದಿಂದ ಇವಳನ್ನು ಬಿಟ್ಟುಬಿಟ್ಟಿದ್ದೆ; ಆದ್ದರಿಂದ ನೀವು ನನ್ನ ಈ ಅಪರಾಧವನ್ನು ಕ್ಷಮಿಸಿರಿ.॥4॥
ಮೂಲಮ್ - 5
ಜಾನಾಮಿ ಚೇವೌ ಪುತ್ರೌ ಮೇಯಮಜಾತೌ ಕುಶೀಲವೌ ।
ಶುದ್ಧಾಯಾಂ ಜಗತೋ ಮಧ್ಯೇ ಮೈಥಿಲ್ಯಾಂ ಪ್ರೀತಿರಸ್ತು ಮೇ ॥
ಅನುವಾದ
ಈ ಅವಳಿಯಾಗಿ ಹುಟ್ಟಿದ ಕುಮಾರ ಕುಶ-ಲವರು ನನ್ನ ಪುತ್ರರೇ ಆಗಿದ್ದಾರೆ ಎಂದು ತಿಳಿದಿದ್ದರೂ ಜನಸಮುದಾಯದಲ್ಲಿ ಶುದ್ಧತೆ ಪ್ರಮಾಣಿತವಾದಾಗಲೇ, ಮಿಥಿಲೇಶಕುಮಾರಿಯಲ್ಲಿ ನನಗೆ ಪ್ರೇಮ ಉಂಟಾಗಬಲ್ಲದು.॥5॥
ಮೂಲಮ್ - 6½
ಅಭಿಪ್ರಾಯಂ ತು ವಿಜ್ಞಾಯ ರಾಮಸ್ಯ ಸುರಸತ್ತಮಾಃ ।
ಸೀತಾಯಾಃ ಶಪಥೇ ತಸ್ಮಿನ್ಮಹೇಂದ್ರಾದ್ಯಾ ಮಹೌಜಸಃ ॥
ಪಿತಾಮಹಂ ಪುರಸ್ಕೃತ್ಯ ಸರ್ವ ಏವ ಸಮಾಗತಾಃ ।
ಅನುವಾದ
ಶ್ರೀರಾಮಚಂದ್ರನ ಅಭಿಪ್ರಾಯವನ್ನು ತಿಳಿದ ಸೀತೆಯು ಶಪಥ ಮಾಡುವಾಗ ಮಹೇಂದ್ರಾದಿ ಎಲ್ಲ ಮುಖ್ಯ- ಮುಖ್ಯ ಮಹಾತೇಜಸ್ವೀ ದೇವತೆಗಳು ಬ್ರಹ್ಮದೇವರನ್ನು ಮುಂದೆ ಮಾಡಿ ಅಲ್ಲಿಗೆ ಬಂದರು.॥6½॥
ಮೂಲಮ್ - 7
ಆದಿತ್ಯಾ ವಸವೋ ರುದ್ರಾ ವಿಶ್ವದೇವಾ ಮರುದ್ಗಣಾಃ ॥
ಮೂಲಮ್ - 8½
ಸಾಧ್ಯಾಶ್ಚ ದೇವಾಃ ಸರ್ವೇ ತೇ ಸರ್ವೇ ಚ ಪರಮರ್ಷಯಃ ।
ನಾಗಾಃ ಸುಪರ್ಣಾಃ ಸಿದ್ಧಾಶ್ಚ ತೇ ಸರ್ವೇ ಹೃಷ್ಟಮಾನಸಾಃ ॥
ಸೀತಾಶಪಥಸಂಭ್ರಾಂತಾಃ ಸರ್ವ ಏವ ಸಮಾಗತಾಃ ।
ಅನುವಾದ
ಆದಿತ್ಯ, ವಸು, ರುದ್ರ, ವಿಶ್ವೇದೇವ, ಮರುದ್ಗಣ, ಸಮಸ್ತ ಸಾಧ್ಯದೇವ, ಎಲ್ಲ ಮಹರ್ಷಿಗಳು, ನಾಗರು, ಗರುಡ ಮತ್ತು ಸಮಸ್ತ ಸಿದ್ಧಗಣರು ಪ್ರಸನ್ನಚಿತ್ತರಾಗಿ ಸೀತೆಯ ಶಪಥಗ್ರಹಣವನ್ನು ನೋಡಲು ಗಾಬರಿಗೊಂಡವರಂತೆ ಅಲ್ಲಿ ಬಂದು ಸೇರಿದರು.॥7-8½॥
ಮೂಲಮ್ - 9
ದೃಷ್ಟ್ವಾ ದೇವಾನೃಷೀಂಶ್ಚೈವ ರಾಘವಃ ಪುನರಬ್ರವೀತ್ ॥
ಮೂಲಮ್ - 10
ಪ್ರತ್ಯಯೋ ಮೇ ಸುರಶ್ರೇಷ್ಠ ಋಷಿವಾಕ್ಯೈರಕಲ್ಮಷೈಃ ।
ಶುದ್ಧಾಯಾಂ ಜಗತೋ ಮಧ್ಯೇ ವೈದೇಹ್ಯಾಂಪ್ರೀತಿರಸ್ತುಮೇ ॥
ಅನುವಾದ
ದೇವತೆಗಳು, ಋಷಿಗಳು ಉಪಸ್ಥಿತರಾದುದನ್ನು ನೋಡಿ ಶ್ರೀರಘುನಾಥನು ಮತ್ತೆ ಹೇಳಿದನು- ಸುರಶ್ರೇಷ್ಠರೇ! ಮಹರ್ಷಿ ವಾಲ್ಮೀಕಿಗಳ ನಿರ್ದೋಷ ವಚನಗಳಲ್ಲಿ ನನಗೆ ಪೂರ್ಣವಿಶ್ವಾಸವಿದ್ದರೂ, ಜನ-ಸಮಾಜದ ಮುಂದೆ ವೈದೇಹಿಯ ವಿಶುದ್ಧತೆ ಪ್ರಮಾಣಿತವಾದ ಮೇಲೆ ನನಗೆ ಹೆಚ್ಚು ಸಂತೋಷವಾಗಬಹುದು.॥9-10॥
ಮೂಲಮ್ - 11
ತತೋ ವಾಯುಃ ಶುಭಃ ಪುಣ್ಯೋ ದಿವ್ಯಗಂಧೋ ಮನೋರಮಃ ।
ತಂ ಜನೌಘಂ ಸುರಶ್ರೇಷ್ಠೋ ಹ್ಲಾದಯಾಮಾಸ ಸರ್ವತಃ ॥
ಅನುವಾದ
ಬಳಿಕ ದಿವ್ಯಸುಗಂಧದಿಂದ ಪೂರ್ಣವಾದ, ಮನಸ್ಸಿಗೆ ಆಹ್ಮಾದವನ್ನೀಯುವ, ಪರಮ ಪವಿತ್ರ ಹಾಗೂ ಶುಭಕಾರಕ ಸುರಶ್ರೇಷ್ಠ ವಾಯುದೇವರು ಮಂದಗತಿಯಿಂದ ಎಲ್ಲೆಡೆ ಪ್ರವಾಹಿತನಾಗಿ ಅಲ್ಲಿಯ ಜನಸಮುದಾಯವನ್ನು ಮುದಗೊಳಿಸತೊಡಗಿದನು.॥11॥
ಮೂಲಮ್ - 12
ತದದ್ಭುತಮಿವಾಚಿಂತ್ಯಂ ನಿರೈಕ್ಷಂತ ಸಮಾಹಿತಾಃ ।
ಮಾನವಾಃ ಸರ್ವರಾಷ್ಟ್ರೇಭ್ಯಃ ಪೂರ್ವಂ ಕೃತಯುಗೇ ಯಥಾ ॥
ಅನುವಾದ
ಸಮಸ್ತ ರಾಷ್ಟ್ರಗಳಿಂದ ಬಂದಿರುವ ಮನುಷ್ಯರು ಏಕಾಗ್ರಚಿತ್ತರಾಗಿ ಪ್ರಾಚೀನ ಕಾಲದ ಕೃತಯುಗದಂತೆ ಈ ಅದ್ಭುತ ಮತ್ತು ಅಚಿಂತ್ಯದಂತಹ ಘಟನೆಯನ್ನು ನೋಡಿದರು.॥12॥
ಮೂಲಮ್ - 13
ಸರ್ವಾನ್ಸಮಾಗತಾನ್ ದೃಷ್ಟ್ವಾ ಸೀತಾ ಕಾಷಾಯವಾಸಿನೀ ।
ಅಬ್ರವೀತ್ಪ್ರಾಂಜಲಿರ್ವಾಕ್ಯಮಧೋದೃಷ್ಟಿರವಾಙ್ಮುಖೀ ॥
ಅನುವಾದ
ಆಗ ಸೀತಾದೇವಿಯು ತಪಸ್ವಿನಿಗೆ ಯೋಗ್ಯವಾದ ಕಾಷಾಯ ವಸವನ್ನು ಧರಿಸಿದ್ದಳು. ಎಲ್ಲರೂ ಉಪಸ್ಥಿತರಾಗಿರುವುದನ್ನು ತಿಳಿದು ಕೈಮುಗಿದುಕೊಂಡು, ತಲೆತಗ್ಗಿಸಿ ಹೇಳಿದಳು.॥13॥
ಮೂಲಮ್ - 14
ಯಥಾಹಂ ರಾಘವಾದನ್ಯಂ ಮನಸಾಪಿ ನ ಚಿಂತಯೇ ।
ತಥಾ ಮೇ ಮಾಧವೀ ದೇವೀ ವಿವರಂ ದಾತುಮರ್ಹತಿ ॥
ಅನುವಾದ
ನಾನು ಶ್ರೀರಘುನಾಥನಲ್ಲದೆ ಬೇರೆ ಪುರುಷನ ‘ಸ್ಪರ್ಶ ದೂರ ಉಳಿಯಿತು’ ಮನಸ್ಸಿನಲ್ಲಿ ಚಿಂತನೆಯೂ ಮಾಡಿಲ್ಲ; ಇದು ಸತ್ಯವಾಗಿದ್ದರೆ ಭಗವತೀ ಭೂದೇವಿಯು ನನ್ನನ್ನು ತನ್ನ ರಂಧ್ರದಲ್ಲಿ ಸ್ಥಾನವನ್ನೀಯಲಿ.॥14॥
ಮೂಲಮ್ - 15
ಮನಸಾ ಕರ್ಮಣಾ ವಾಚಾ ಯಥಾ ರಾಮಂ ಸಮರ್ಚಯೇ ।
ತಥಾ ಮೇ ಮಾಧವೀ ದೇವೀ ವಿವರಂ ದಾತುಮರ್ಹತಿ ॥
ಅನುವಾದ
ನಾನು ಮನಸ್ಸಿನಿಂದ, ಕ್ರಿಯೆಯಿಂದ, ಮಾತಿನಿಂದ ಕೇವಲ ಶ್ರೀರಾಮನನ್ನೇ ಅರ್ಚಿಸುತ್ತಿದುದು ನಿಶ್ಚಯವಾದರೆ ಮಾಧವನ ಪತ್ನಿಯಾದ ಭೂದೇವಿಯು ತನ್ನ ರಂಧ್ರದೊಳಗೆ ನನಗೆ ಆಶ್ರಯ ನೀಡಲಿ.॥15॥
ಮೂಲಮ್ - 16
ಯಥೈತತ್ಸತ್ಯಮುಕ್ತಂ ಮೇವೇದ್ಮಿ ರಾಮಾತ್ಪರಂ ನ ಚ ।
ತಥಾ ಮೇ ಮಾಧವೀ ದೇವೀ ವಿವರಂ ದಾತುಮರ್ಹತಿ ॥
ಅನುವಾದ
‘ಭಗವಾನ್ ಶ್ರೀರಾಮನನ್ನು ಬಿಟ್ಟು ಬೇರೆ ಯಾರನ್ನೂ ಅರಿಯೆ’ ಈ ಮಾತು ಸತ್ಯವಾಗಿದ್ದರೆ ಭಗವತೀ ಪೃಥಿವಿ ದೇವಿಯು ತನ್ನ ರಂಧ್ರದಲ್ಲಿ ನನಗೆ ಸ್ಥಾನ ಕೊಡಲಿ.॥16॥
ಮೂಲಮ್ - 17
ತಥಾ ಶಪಂತ್ಯಾಂ ವೈದೇಹ್ಯಾಂ ಪ್ರಾದುರಾಸೀತ್ತದದ್ಭುತಮ್ ।
ಭೂತಲಾದುತ್ಥಿತಂ ದಿವ್ಯಂ ಸಿಂಹಾಸನಮನುತ್ತಮಮ್ ॥
ಅನುವಾದ
ವೈದೇಹಿಯು ಹೀಗೆ ಶಪಥ ಮಾಡುತ್ತಲೇ ಭೂಮಿಯೊಳಗಿಂದ ಒಂದು ಅದ್ಭುತ ಸಿಂಹಾಸನವು ಪ್ರಕಟವಾಯಿತು. ಅದು ಬಹಳ ಸುಂದರ ಮತ್ತು ದಿವ್ಯವಾಗಿತ್ತು.॥17॥
ಮೂಲಮ್ - 18
ಧ್ರಿಯಮಾಣ ಶಿರೋಭಿಸ್ತು ನಾಗೈರಮಿತವಿಕ್ರಮೈಃ ।
ದಿವ್ಯಂ ದಿವ್ಯೇನ ವಪುಷಾ ದಿವ್ಯರತ್ನವಿಭೂಷಿತೈಃ ॥
ಅನುವಾದ
ದಿವ್ಯರತ್ನಗಳಿಂದ ಭೂಷಿತ ಮಹಾಪರಾಕ್ರಮಿ ನಾಗರು ದಿವ್ಯರೂಪ ಧರಿಸಿ ಆ ದಿವ್ಯ ಸಿಂಹಾಸನವನ್ನು ತಮ್ಮ ತಲೆಯಲ್ಲಿ ಹೊತ್ತುಕೊಂಡಿದ್ದರು.॥18॥
ಮೂಲಮ್ - 19
ತಸ್ಮಿಂಸ್ತು ಧರಣೀ ದೇವೀ ಬಾಹುಭ್ಯಾಂ ಗೃಹ್ಯ ಮೈಥಿಲೀಮ್ ।
ಸ್ವಾಗತೇನಾಭಿನಂದ್ಯೈನಾಮಾಸನೇ ಚೋಪವೇಶಯತ್ ॥
ಅನುವಾದ
ಸಿಂಹಾಸನದೊಂದಿಗೇ ಪೃಥಿವಿಯ ಅಧಿಷ್ಠಾತ್ರೀ ದೇವಿಯೂ ದಿವ್ಯರೂಪದಿಂದ ಪ್ರಕಟಳಾದಳು. ಅವಳು ಮಿಥಿಲೇಶ ಕುಮಾರೀ ಸೀತೆಯನ್ನು ತನ್ನೆರಡು ಭುಜಗಳಿಂದ ಬಾಚಿ ತಬ್ಬಿಕೊಂಡು, ಸ್ವಾಗತಪೂರ್ವಕ ಆಕೆಯನ್ನು ಅಭಿನಂದಿಸಿ ಸಿಂಹಾಸನದಲ್ಲಿ ಕುಳ್ಳಿರಿಸಿದಳು.॥19॥
ಮೂಲಮ್ - 20
ತಾಮಾಸನಗತಾಂ ದೃಷ್ಟ್ವಾ ಪ್ರವಿಶಂತೀಂ ರಸಾತಲಮ್ ।
ಪುಷ್ಪವೃಷ್ಟಿರವಿಚ್ಛಿನ್ನಾ ದಿವ್ಯಾ ಸೀತಾಮವಾಕಿರತ್ ॥
ಅನುವಾದ
ಸಿಂಹಾಸನದಲ್ಲಿ ಕುಳಿತು ಸೀತಾದೇವಿಯು ರಸಾತಳಕ್ಕೆ ಪ್ರವೇಶಿಸುತ್ತಿರುವಾಗ ದೇವತೆಗಳು ಆಕೆಯ ಕಡೆಗೆ ನೋಡಿದರು. ಮತ್ತೆ ಆಕಾಶದಿಂದ ಆಕೆಯ ಮೇಲೆ ದಿವ್ಯಪುಷ್ಪಗಳ ಮಳೆ ಒಂದೇ ಸಮನೆ ಸುರಿಯಿತು.॥20॥
ಮೂಲಮ್ - 21
ಸಾಧುಕಾರಶ್ಚ ಸುಮಹಾನ್ದೇವಾನಾಂ ಸಹಸೋತ್ಥಿತಃ ।
ಸಾಧುಸಾಧ್ವಿತಿ ವೈ ಸೀತೇ ಯಸ್ಯಾಸ್ತೇ ಶೀಲಮೀದೃಶಮ್ ॥
ಅನುವಾದ
ದೇವತೆಗಳು ಆಕಾಶದಿಂದ ಧನ್ಯ! ಧನ್ಯ! ಎಂಬ ಮಾತು ಎಲ್ಲೆಡೆ ಕೇಳಿ ಬಂತು. ಸೀತೇ! ನೀನು ಧನ್ಯಳಾಗಿರುವೆ, ಧನ್ಯಳಾಗಿರುವೆ. ನಿನ್ನ ಶೀಲ-ಸ್ವಭಾವ ಅತ್ಯಂತ ಪವಿತ್ರ ಮತ್ತು ಶುದ್ಧವಾಗಿದೆ ಎಂದು ಹೇಳತೊಡಗಿದರು.॥21॥
ಮೂಲಮ್ - 22
ಏವಂ ಬಹುವಿಧಾ ವಾಚೋ ಹ್ಯಂತರಿಕ್ಷಗತಾಃ ಸುರಾಃ ।
ವ್ಯಾಜಹ್ರುರ್ಹೃಷ್ಟಮನಸೋ ದೃಷ್ಟ್ವಾಸೀತಾಪ್ರವೇಶನಮ್ ॥
ಅನುವಾದ
ಸೀತೆಯು ರಸಾತಲದಲ್ಲಿ ಪ್ರವೇಶಿಸಿದುದನ್ನು ನೋಡಿ ಆಕಾಶದಲ್ಲಿ ನಿಂತಿರುವ ದೇವತೆಗಳು ಪ್ರಸನ್ನಚಿತ್ತರಾಗಿ ಹೀಗೆ ಅನೇಕ ಮಾತುಗಳನ್ನು ಹೇಳ ತೊಡಗಿದರು.॥22॥
ಮೂಲಮ್ - 23
ಯಜ್ಞವಾಟಗತಾಶ್ಚಾಪಿಮುನಯಃ ಸರ್ವ ಏವ ತೇ ।
ರಾಜಾನಶ್ಚ ನರವ್ಯಾಘ್ರಾ ವಿಸ್ಮಯಾನ್ನೋಪರೇಮಿರೇ ॥
ಅನುವಾದ
ಯಜ್ಞಮಂಟಪದಲ್ಲಿ ನೆರೆದ ಎಲ್ಲ ಮುನಿಗಳು ಹಾಗೂ ನರಶ್ರೇಷ್ಠ ರಾಜರೂ ಕೂಡ ಆಶ್ಚರ್ಯಗೊಂಡರು.॥23॥
ಮೂಲಮ್ - 24
ಅಂತರೀಕ್ಷೇ ಚ ಭೂಮೌ ಚ ಸರ್ವೇ ಸ್ಥಾವರಜಂಗಮಾಃ ।
ದಾನವಾಶ್ಚ ಮಹಾಕಾಯಾಃ ಪಾತಾಲೇ ಪನ್ನಗಾಧಿಪಾಃ ॥
ಅನುವಾದ
ಅಂತರಿಕ್ಷದಲ್ಲಿ ಮತ್ತು ಭೂತಳದಲ್ಲಿ ಎಲ್ಲ ಚರಾಚರ ಪ್ರಾಣಿಗಳು ಹಾಗೂ ಪಾತಾಳದಲ್ಲಿರುವ ವಿಶಾಲಕಾಯ ದಾನವರು ಮತ್ತು ನಾಗರಾಜನೂ ಆಶ್ಚರ್ಯಚಕಿತರಾದರು.॥24॥
ಮೂಲಮ್ - 25
ಕೇಚಿದ್ವಿನೇದುಃ ಸಂಹೃಷ್ಟಾಃ ಕೇದಿದ್ಧ್ಯಾನಪರಾಯಣಾಃ ।
ಕೇಚಿದ್ರಾಮಂ ನೀರೀಕ್ಷಂತೇ ಕೇಚಿತ್ಸೀತಾಮಚೇತಸಃ ॥
ಅನುವಾದ
ಕೆಲವರು ಹರ್ಷನಾದ ಮಾಡಿದರು, ಕೆಲವರು ಧ್ಯಾನಸ್ಥರಾದರು, ಕೆಲವರು ಶ್ರೀರಾಮನ ಕಡೆಗೆ ನೋಡಿದರು, ಕೆಲವರು ಅವಾಕ್ಕಾಗಿ ಸೀತೆಯ ಕಡೆಗೆ ನಿರೀಕ್ಷಿಸಿದರು.॥25॥
ಮೂಲಮ್ - 26
ಸೀತಾಪ್ರವೇಶನಂ ದೃಷ್ಟ್ವಾ ತೇಷಾಮಾಸೀತ್ಸಮಾಗಮಃ ।
ತನ್ಮುಹೂರ್ತಮಿವಾತ್ಯರ್ಥಂ ಸಮಂ ಸಂಮೋಹಿತಂ ಜಗತ್ ॥
ಅನುವಾದ
ಸೀತೆಯು ಭೂತಳದಲ್ಲಿ ಪ್ರವೇಶಿಸಿ ದುದನ್ನು ನೋಡಿ ಅಲ್ಲಿ ಬಂದಿರುವ ಎಲ್ಲ ಜನರು ಹರ್ಷ, ಶೋಕಾದಿಗಳಲ್ಲಿ ಮುಳುಗಿ ಹೋದರು. ಒಂದು ಮುಹೂರ್ತ ಅಲ್ಲಿಯ ಎಲ್ಲ ಜನಸಮುದಾಯವು ಅತ್ಯಂತ ಮೋಹಾಚ್ಛನಂತಾಯಿತು.॥26॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ತೊಂಭತ್ತೇಳನೆಯ ಸರ್ಗ ಪೂರ್ಣವಾಯಿತು. ॥97॥