[ತೊಂಭತ್ತಾರನೆಯ ಸರ್ಗ]
ಭಾಗಸೂಚನಾ
ಸೀತೆಯ ಪಾವಿತ್ರ್ಯದ ಕುರಿತು ವಾಲ್ಮೀಕಿ ಮಹರ್ಷಿಗಳ ಸಮರ್ಥನೆ
ಮೂಲಮ್ - 1
ತಸ್ಯಾಂ ರಜನ್ಯಾಂ ವ್ಯಷ್ಟಾಯಾಂ ಯಜ್ಞವಾಟಂ ಗತೋ ನೃಪಃ ।
ಋಷೀನ್ಸರ್ವಾನ್ಮಹಾತೇಜಾಃ ಶಬ್ದಾಪಯತಿ ರಾಘವಃ ॥
ಅನುವಾದ
ರಾತ್ರೆ ಕಳೆದು ಬೆಳಗಾಯಿತು. ಮಹಾತೇಜಸ್ವೀ ರಾಜಾ ಶ್ರೀರಾಮಚಂದ್ರನು ಯಜ್ಞಶಾಲೆಗೆ ಆಗಮಿಸಿ, ಸಮಸ್ತ ಋಷಿಗಳನ್ನು ಕರೆಸಿದನು.॥1॥
ಮೂಲಮ್ - 2
ವಸಿಷ್ಠೋ ವಾಮದೇವಶ್ಚ ಜಾಬಾಲಿರಥ ಕಾಶ್ಯಪಃ ।
ವಿಶ್ವಾಮಿತ್ರೋ ದೀರ್ಘತಮಾ ದುರ್ವಾಸಾಶ್ಚ ಮಹಾತಪಾಃ ॥
ಮೂಲಮ್ - 3
ಪುಲಸ್ತ್ಯೋಽಪಿ ತಥಾ ಶಕ್ತಿರ್ಭಾರ್ಗವಶ್ಚೈವವಾಮನಃ ।
ಮಾರ್ಕಂಡೇಯಶ್ಚ ದೀರ್ಘಾಯುರ್ವೌದ್ಗಲ್ಯಶ್ಚಮಹಾಯಶಾಃ ॥
ಮೂಲಮ್ - 4
ಗರ್ಗಶ್ಚ ಚ್ಯವನಶ್ಚೈವ ಶತಾನಂದಶ್ಚ ಧರ್ಮವಿತ್ ।
ಭರದ್ವಾಜಶ್ಚ ತೇಜಸ್ವೀ ಹ್ಯಗ್ನಿಪುತ್ರಶ್ಚ ಸುಪ್ರಭಃ ॥
ಮೂಲಮ್ - 5
ನಾರದಃ ಪರ್ವತಶ್ಚೈವ ಗೌತಮಶ್ಚ ಮಹಾಯಶಾಃ ।
ಕಾತ್ಯಾಯನಃ ಸುಯಜ್ಞಶ್ಚ ಹ್ಯಗಸ್ತ್ಯಸ್ತಪಸಾಂ ನಿಧಿಃ ॥
ಮೂಲಮ್ - 6
ಏತೇ ಚಾನ್ಯೇ ಚ ಬಹವೋ ಮುನಯಃ ಸಂಶಿತವ್ರತಾಃ ।
ಕೌತೂಹಲಸಮಾವಿಷ್ಟಾಃ ಸರ್ವ ಏವ ಸಮಾಗತಃ ॥
ಅನುವಾದ
ವಸಿಷ್ಠ, ವಾಮದೇವ, ಜಾಬಾಲೀ, ಕಾಶ್ಯಪ, ವಿಶ್ವಾಮಿತ್ರ, ದೀರ್ಘತಮಾ, ಮಹಾ ತಪಸ್ವೀ ದುರ್ವಾಸ, ಪುಲಸ್ತ್ಯ, ಶಕ್ತಿ, ಭಾರ್ಗವ, ವಾಮನ, ದೀರ್ಘಜೀವಿ ಮಾರ್ಕಂಡೇಯ, ಮಹಾಯಶಸ್ವೀ ಮೌದ್ಗಲ್ಯ, ಗರ್ಗ, ಚ್ಯವನ, ಧರ್ಮಜ್ಞ ಶತಾನಂದ, ತೇಜಸ್ವೀ ಭರದ್ವಾಜ, ಅಗ್ನಿಪುತ್ರ ಸುಪ್ರಭ, ನಾರದ, ಪರ್ವತ, ಮಹಾಯಶಸ್ವೀ ಗೌತಮ, ಕಾತ್ಯಾಯನ, ಸುಯಜ್ಞ ಇವರೆಲ್ಲ ಹಾಗೂ ಕಠೋರ ವ್ರತವನ್ನು ಪಾಲಿಸುವ ಇನ್ನೂ ಅನೇಕ ಮಹರ್ಷಿಗಳು ಕುತೂಹಲದಿಂದ ಅಲ್ಲಿ ನೆರೆದರು.॥2-6॥
ಮೂಲಮ್ - 7
ರಾಕ್ಷಸಾಶ್ಚ ಮಹಾವೀರ್ಯಾ ವಾನರಾಶ್ಚ ಮಹಾಬಲಾಃ ।
ಸರ್ವ ಏವ ಸಮಾಜಗ್ಮುರ್ಮಹಾತ್ಮಾನಃ ಕುತೂಹಲಾತ್ ॥
ಅನುವಾದ
ಮಹಾಪರಾಕ್ರಮಿ ರಾಕ್ಷಸರು ಮತ್ತು ಮಹಾಬಲಿ ವಾನರರು ಹೀಗೆ ಎಲ್ಲರೂ ಕುತೂಹಲವಶರಾಗಿ ಅಲ್ಲಿಗೆ ಬಂದು ಸೇರಿದರು.॥7॥
ಮೂಲಮ್ - 8
ಕ್ಷತ್ರಿಯಾ ಯೇ ಚ ಶೂದ್ರಾಶ್ಚ ವೈಶ್ಯಾಶ್ಚೈವ ಸಹಸ್ರಶಃ ।
ನಾನಾದೇಶಗತಾಶ್ಚೈವ ಬ್ರಾಹ್ಮಣಾಃ ಸಂಶಿತವ್ರತಾಃ ॥
ಅನುವಾದ
ನಾನಾದೇಶಗಳಿಂದ ಆಗಮಿಸಿದ ತೀಕ್ಷ್ಣವ್ರತಧಾರೀ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಶೂದ್ರರು ಸಾವಿರಾರು ಸಂಖ್ಯೆಯಲ್ಲಿ ಅಲ್ಲಿ ಉಪಸ್ಥಿತರಾದರು.॥8॥
ಮೂಲಮ್ - 9
ಜ್ಞಾನನಿಷ್ಠಾಃ ಕರ್ಮನಿಷ್ಠಾಃ ಯೋಗನಿಷ್ಠಾಸ್ತಥಾಪರೇ ।
ಸೀತಾಶಪಥವೀಕ್ಷಾರ್ಥಂ ಸರ್ವ ಏವ ಸಮಾಗತಾಃ ॥
ಅನುವಾದ
ಸೀತೆಯು ಶಪಥ ಮಾಡುವುದನ್ನು ನೋಡಲು ಜ್ಞಾನನಿಷ್ಠ, ಕರ್ಮನಿಷ್ಠ, ಯೋಗನಿಷ್ಠ ಹೀಗೆ ಎಲ್ಲ ಪ್ರಕಾರದ ಜನರು ಅಲ್ಲಿಗೆ ಬಂದರು.॥9॥
ಮೂಲಮ್ - 10
ತದಾ ಸಮಾಗತಂ ಸರ್ವಮಶ್ಮಭೂತಮಿವಾಚಲಮ್ ।
ಶ್ರುತ್ವಾ ಮುನಿವರಸ್ತೂರ್ಣಂ ಸಸೀತಃ ಸಮುಪಾಗಮತ್ ॥
ಅನುವಾದ
ರಾಜಸಭೆಯಲ್ಲಿ ಸೇರಿದವರೆಲ್ಲ ಜನರು ಕಲ್ಲಿನ ವಿಗ್ರಹದಂತೆ ನಿಶ್ಚಲರಾಗಿ ಕುಳಿತ್ತಿದ್ದರು. ಇದನ್ನು ಕೇಳಿ ಮುನಿವರ ವಾಲ್ಮೀಕರು ಸೀತೆಯನ್ನು ಜೊತೆಗೆ ಕರೆದುಕೊಂಡು ಬೇಗನೇ ಬಂದರು.॥10॥
ಮೂಲಮ್ - 11
ತಮೃಷಿಂ ಪೃಷ್ಠತಃ ಸೀತಾ ಅನ್ವಗಚ್ಛದವಾಙ್ಮುಖೀ ।
ಕೃತಾಂಜಲಿರ್ಬಾಷ್ಪಕಲಾ ಕೃತ್ವಾ ರಾಮಂಮನೋಗತಮ್ ॥
ಅನುವಾದ
ಮಹರ್ಷಿಗಳ ಹಿಂದೆ ಸೀತೆಯು ತಲೆತಗ್ಗಿಸಿ ನಡೆದುಕೊಂಡು ಬರುತ್ತಿದ್ದಳು. ಎರಡೂ ಕೈಗಳೂ ಮುಗಿದಿದ್ದು, ಕಣ್ಣುಗಳಿಂದ ಕಂಬನಿ ಸುರಿಯುತ್ತಿತ್ತು. ಅವಳು ತನ್ನ ಹೃದಯದಲ್ಲಿ ಕುಳಿತ್ತಿದ್ದ ಶ್ರೀರಾಮನನ್ನು ಚಿಂತಿಸುತ್ತಿದ್ದಳು.॥11॥
ಮೂಲಮ್ - 12
ತಾಂ ದೃಷ್ಟ್ವಾ ಶ್ರುತಿಮಾಯಾಂತೀಂ ಬ್ರಹ್ಮಾಣಮನುಗಾಮಿನೀಮ್ ।
ವಾಲ್ಮೀಕೇಃ ಪೃಷ್ಠತಃ ಸೀತಾಂ ಸಾಧುವಾದೋ ಮಹಾನಭೂತ್ ॥
ಅನುವಾದ
ವಾಲ್ಮೀಕಿಗಳನ್ನು ಹಿಂಬಾಲಿಸಿ ಬರುವ ಸೀತೆಯು ಬ್ರಹ್ಮದೇವರನ್ನು ಅನುಸರಿಸುವ ಶ್ರುತಿಮಾತೆಯಂತೆ ಕಂಡು ಬರುತ್ತಿದ್ದಳು. ಆಕೆಯನ್ನು ನೋಡಿ ಅಲ್ಲಿ ಧನ್ಯ! ಧನ್ಯ! ಎಂಬ ಧ್ವನಿ ಎಲ್ಲೆಡೆ ಪ್ರತಿಧ್ವನಿಸಿತು.॥12॥
ಮೂಲಮ್ - 13
ತತೋ ಹಲಹಲಾಶಬ್ದಃ ಸರ್ವೇಷಾಮೇವಮಾಬಭೌ ।
ದುಃಖಜನ್ಮವಿಶಾಲೇನ ಶೋಕೇನಾಕುಲಿತಾತ್ಮನಾಮ್ ॥
ಅನುವಾದ
ಆಗ ಸಮಸ್ತ ನೋಡುಗರ ಹೃದಯ ದುಃಖ-ಶೋಕದಿಂದ ವ್ಯಾಕುಲವಾಗಿತ್ತು. ಅವರೆಲ್ಲರ ಕೋಲಾಹಲವು ಎಲ್ಲೆಡೆ ತುಂಬಿಹೋಯಿತು.॥13॥
ಮೂಲಮ್ - 14
ಸಾಧು ರಾಮೇತಿ ಕೇಚಿತ್ತು ಸಾಧು ಸೀತೇತಿ ಚಾಪರೇ ।
ಉಭಾವೇವ ಚ ತತ್ರಾನ್ಯೇ ಪ್ರೇಕ್ಷಕಾಃ ಸಂಪ್ರಚುಕ್ರುಶುಃ ॥
ಅನುವಾದ
ಕೆಲವರು - ಶ್ರೀರಾಮಾ! ನೀನು ಧನ್ಯನಾಗಿರುವೆ ಎಂದು ಹೇಳಿದರೆ, ಮತ್ತೆ ಕೆಲವರು - ದೇವಿ ಸೀತೇ! ನೀನು ಧನ್ಯ! ಎಂದು ಹೇಳುತ್ತಿದ್ದರು. ಇತರ ಕೆಲವು ದರ್ಶಕರು - ಸೀತೆ ಮತ್ತು ರಾಮ ಇಬ್ಬರಿಗೂ ಗಟ್ಟಿಯಾಗಿ ಸಾಧು! ಸಾಧು! ಎಂದು ಕೂಗಿಕೊಳ್ಳುತ್ತಿದ್ದರು.॥14॥
ಮೂಲಮ್ - 15
ತತೋ ಮಧ್ಯೇ ಜನೌಘಸ್ಯ ಪ್ರವಿಶ್ಯ ಮುನಿಪುಂಗವಃ ।
ಸೀತಾಸಹಾಯೋ ವಾಲ್ಮೀಕಿರಿತಿ ಹೋವಾಚ ರಾಘವಮ್ ॥
ಅನುವಾದ
ಆಗ ಜನಸಮುದಾಯದ ನಡುವೆ ಸೀತಾಸಹಿತ ಪ್ರವೇಶಿಸಿದ ಮುನಿವರ ವಾಲ್ಮೀಕಿಗಳು ಶ್ರೀರಘುನಾಥನಲ್ಲಿ ಈ ಪ್ರಕಾರ ಹೇಳಿದರು.॥15॥
ಮೂಲಮ್ - 16
ಇಯಂ ದಾಶರಥೇ ಸೀತಾ ಸುವ್ರತಾ ಧರ್ಮಚಾರಿಣೀ ।
ಅಪವಾದಾತ್ಪರಿತ್ಯಕ್ತಾ ಮಮಾಶ್ರಮಸಮೀಪತಃ ॥
ಅನುವಾದ
ದಶರಥನಂದನ! ಈ ಸೀತೆಯು ಉತ್ತಮ ವ್ರತವನ್ನು ಪಾಲಿಸುವವಳೂ, ಧರ್ಮಪರಾಯಣಳೂ ಆಗಿದ್ದಾಳೆ. ನೀನು ಲೋಕಾಪವಾದಕ್ಕೆ ಹೆದರಿ ಇವಳನ್ನು ನನ್ನ ಆಶ್ರಮದ ಬಳಿ ತ್ಯಜಿಸಿಬಿಟ್ಟಿದ್ದೆ.॥16॥
ಮೂಲಮ್ - 17
ಲೋಕಾಪವಾದಭೀತಸ್ಯ ತವ ರಾಮ ಮಹಾವ್ರತ ।
ಪ್ರತ್ಯಯಂ ದಾಸ್ಯತೇ ಸೀತಾ ತಾಮನುಜ್ಞಾತುಮರ್ಹಸಿ ॥
ಅನುವಾದ
ಮಹಾವ್ರತಧಾರೀ ಶ್ರೀರಾಮಾ! ಲೋಕಾಪವಾದದಿಂದ ಹೆದರಿದ ನಿನಗೆ ಸೀತೆಯು ತನ್ನ ಶುದ್ಧತೆಯ ವಿಶ್ವಾಸ ಕೊಡುವಳು. ಇದಕ್ಕಾಗಿ ತಮ್ಮ ಅಪ್ಪಣೆಯಾಗಬೇಕು.॥17॥
ಮೂಲಮ್ - 18
ಇಮೌ ತು ಜಾನಕೀಪುತ್ರಾವುಭೌ ಚ ಯಮಜಾತಕೌ ।
ಸುತೌ ತವೈವ ದುರ್ಧರ್ಷೌ ಸತ್ಯಮೇತದ್ಬ್ರವೀಮಿ ತೇ ॥
ಅನುವಾದ
ಇವರಿಬ್ಬರೂ ಕುಮಾರ ಲವ- ಕುಶರು ಜಾನಕಿಯ ಗರ್ಭದಿಂದ ಅವಳಿಗಳಾಗಿ ಹುಟ್ಟಿರುವರು. ಇವರು ನಿನ್ನ ಪುತ್ರರೇ ಆಗಿದ್ದಾರೆ ಮತ್ತು ನಿನ್ನಂತೆಯೇ ದುರ್ಧರ್ಷ ವೀರರಾಗಿದ್ದಾರೆ. ಇದನ್ನು ನಾನು ಸತ್ಯವಾಗಿ ತಿಳಿಸುತ್ತಾ ಇದ್ದೇನೆ.॥18॥
ಮೂಲಮ್ - 19
ಪ್ರಚೇತಸೋಽಹಂ ದಶಮಃ ಪುತ್ರೋರಾಘವನಂದನ ।
ನ ಸ್ಮರಾಮ್ಯನೃತಂ ವಾಕ್ಯಮಿವೌ ತು ತವ ಪುತ್ರಕೌ ॥
ಅನುವಾದ
ರಘುಕುಲನಂದನ! ನಾನು ಪ್ರಚೇತಾ ‘ವರುಣ’ನ ಹತ್ತನೆಯ ಪುತ್ರನಾಗಿದ್ದೇನೆ. ನನ್ನ ಬಾಯಿಂದ ಎಂದೂ ಸುಳ್ಳು ಹೇಳಿದುದು ನನಗೆ ನೆನಪಿಲ್ಲ. ನಾನು ಸತ್ಯವಾಗಿ ಹೇಳುತ್ತೇನೆ - ಇವರಿಬ್ಬರೂ ನಿನ್ನದೇ ಪುತ್ರರಾಗಿದ್ದಾರೆ.॥19॥
ಮೂಲಮ್ - 20
ಬಹುವರ್ಷಸಹಸ್ರಾಣಿ ತಪಶ್ಚರ್ಯಾ ಮಯಾ ಕೃತಾ ।
ನೋಪಾಶ್ನೀಯಾಂ ಲಂ ತಸ್ಯಾ ದುಷ್ಟೇಯಂ ಯದಿ ಮೈಥಿಲೀ ॥
ಅನುವಾದ
ನಾನು ಅನೇಕ ಸಾವಿರ ವರ್ಷಗಳವರೆಗೆ ಭಾರೀ ತಪಸ್ಸು ಮಾಡಿದ್ದೇನೆ. ಮಿಥಿಲೇಶ ಕುಮಾರಿ ಸೀತೆಯಲ್ಲಿ ಯಾವುದೇ ದೋಷವಿದ್ದರೆ ಆ ತಪಸ್ಸಿನ ಫಲವು ಸಿಗದೇ ಹೋಗಲಿ.॥20॥
ಮೂಲಮ್ - 21
ಮನಸಾ ಕರ್ಮಣಾ ವಾಚಾ ಭೂತ ಪೂರ್ವಂ ನ ಕಿಲ್ಬಿಷಮ್ ।
ತಸ್ಯಾಹಂ ಲಮಶ್ನಾಮಿ ಅಪಾಪಾ ಮೈಥಿಲೀ ಯದಿ ॥
ಅನುವಾದ
ನಾನು ಮನಸಾ, ವಚಸಾ ಹಾಗೂ ಕರ್ಮಣಾ ಮೊದಲು ಎಂದೂ ಪಾಪ ಮಾಡಿಲ್ಲ. ಮಿಥಿಲೇಶಕುಮಾರೀ ಸೀತೆಯು ನಿಷ್ಪಾಪಳಾಗಿದ್ದರೆ, ನನಗೆ ನನ್ನ ಆ ಪಾಪಶೂನ್ಯ ಪುಣ್ಯಕರ್ಮದ ಫಲ ಪ್ರಾಪ್ತವಾಗಲೀ.॥21॥
ಮೂಲಮ್ - 22
ಅಹಂ ಪಂಚಸು ಭೂತೇಷು ಮನಃಷಷ್ಠೇಷುರಾಘವ ।
ವಿಚಿಂತ್ಯ ಸೀತಾ ಶುದ್ಧೇತಿ ಜಗ್ರಾಹ ವನನಿರ್ಝರೇ ॥
ಅನುವಾದ
ರಘುನಂದನ! ನಾನು ನನ್ನ ಪಂಚೇಂದ್ರಿಯಗಳಿಂದ, ಮನ-ಬುದ್ಧಿಯ ಮೂಲಕ ಸೀತೆಯ ಶುದ್ಧತೆಯನ್ನು ಚೆನ್ನಾಗಿ ನಿಶ್ಚಯಿಸಿಯೇ ಈಕೆಯನ್ನು ಸಂರಕ್ಷಿಸಿದ್ದೇನೆ. ಇವಳು ಕಾಡಿನ ಒಂದು ಜಲಪಾತದ ಬಳಿ ಸಿಕ್ಕಿರುವಳು.॥22॥
ಮೂಲಮ್ - 23
ಇಯಂ ಶುದ್ಧಸಮಾಚಾರಾ ಅಪಾಪಾ ಪತಿದೇವತಾ ।
ಲೋಕಾಪವಾದಭೀತಸ್ಯ ಪ್ರತ್ಯಯಂ ತವ ದಾಸ್ಯತಿ ॥
ಅನುವಾದ
ಈಕೆಯ ಆಚರಣ ಸರ್ವಥಾ ಶುದ್ಧವಾಗಿದೆ. ಪಾಪವು ಇವಳನ್ನು ಸ್ಪರ್ಶಿಸಲಾರದು, ಇವಳು ಪತಿಯನ್ನೇ ದೇವರೆಂದು ತಿಳಿಯುವಳು. ಆದ್ದರಿಂದ ಲೋಕಾಪವಾದದಿಂದ ಹೆದರಿದ ನಿನಗೆ ತನ್ನ ಶುದ್ಧತೆಯ ವಿಶ್ವಾಸ ಕೊಡಿಸುವಳು.॥23॥
ಮೂಲಮ್ - 24
ತಸ್ಮಾದಿಯಂ ನರವರಾತ್ಮಜ ಶುದ್ಧಭಾವಾ
ದಿವ್ಯೇನ ದೃಷ್ಟಿ ವಿಷಯೇಣ ಮಯಾ ಪ್ರವಿಷ್ಟಾ ।
ಲೋಕಾಪವಾದಕಲುಷೀಕೃತಚೇತಸಾ ಯಾ
ತ್ಯಕ್ತಾ ತ್ವಯಾ ಪ್ರಿಯತಮಾ ವಿದಿತಾಪಿ ಶುದ್ಧಾ ॥
ಅನುವಾದ
ರಾಜಕುಮಾರ! ಸೀತೆಯ ಭಾವ ಮತ್ತು ವಿಚಾರ ಪರಮ ಪವಿತ್ರವಾಗಿದೆ ಎಂದು ನಾನು ದಿವ್ಯದೃಷ್ಟಿಯಿಂದ ತಿಳಿದುಕೊಂಡಿದ್ದೆ, ಅದಕ್ಕಾಗಿ ಇವಳು ನನ್ನ ಆಶ್ರಮವನ್ನು ಪ್ರವೇಶಿಸಬಲ್ಲಳು. ನಿನಗೂ ಈಕೆ ಪ್ರಾಣಗಳಿಗಿಂತ ಹೆಚ್ಚಾಗಿ ಪ್ರಿಯಳಾಗಿದ್ದಾಳೆ. ಸೀತೆಯು ಸರ್ವಥಾ ಶುದ್ಧವಾಗಿದ್ದಾಳೆ ಎಂಬುದು ನೀನೇ ತಿಳಿದಿರುವೆ, ಆದರೂ ಲೋಕಾಪವಾದದಿಂದ ಕಲುಷಿತ ಚಿತ್ತನಾಗಿ ನೀನು ಇವಳನ್ನು ತ್ಯಜಿಸಿದೆ.॥24॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ತೊಂಭತ್ತಾರನೆಯ ಸರ್ಗ ಪೂರ್ಣವಾಯಿತು. ॥96॥