[ತೊಂಭತ್ತೈದನೆಯ ಸರ್ಗ]
ಭಾಗಸೂಚನಾ
ಸೀತೆಯು ತಾನು ಶುದ್ಧಳೆಂದು ಪ್ರಮಾಣೀಕರಿಸಿ ಹೇಳಬೇಕೆಂದು ಶ್ರೀರಾಮನ ಅಭಿಪ್ರಾಯ
ಮೂಲಮ್ - 1
ರಾಮೋ ಬಹೂನ್ಯಹಾನ್ಯೇವ ತದ್ಗೀತಂ ಪರಮಂ ಶುಭಮ್ ।
ಶುಶ್ರಾವ ಮುನಿಭಿಃ ಸಾರ್ಧಂ ಪಾರ್ಥಿವೈಃ ಸಹ ವಾನರೈಃ ॥
ಅನುವಾದ
ಈ ಪ್ರಕಾರ ಶ್ರೀರಾಮನು ಋಷಿಗಳ, ರಾಜರ ಮತ್ತು ವಾನರರೊಂದಿಗೆ ಅನೇಕ ದಿನಗಳವರೆಗೆ ಆ ಉತ್ತಮ ರಾಮಾಯಣದ ಗಾನವನ್ನು ಕೇಳುತ್ತಾ ಇದ್ದನು.॥1॥
ಮೂಲಮ್ - 2
ತಸ್ಮಿನ್ಗೀತೇ ತು ವಿಜ್ಞಾಯ ಸೀತಾಪುತ್ರೌ ಕುಶೀಲವೌ ।
ತಸ್ಯಾಃ ಪರಿಷದೋ ಮಧ್ಯೇ ರಾಮೋ ವಚನಮಬ್ರವೀತ್ ॥
ಮೂಲಮ್ - 3
ದೂತಾನ್ ಶುದ್ಧಸಮಾಚಾರಾನಾಹೂಯಾತ್ಮಮನೀಷಯಾ ।
ಮದ್ವಚೋ ಬ್ರೂತ ಗಚ್ಛಧ್ವಮಿತೋ ಭಗವತೋಂತಿಕೇ ॥
ಅನುವಾದ
ಆ ಕಥೆಯಿಂದಲೇ ಕುಶ-ಲವ ಇಬ್ಬರೂ ಕುಮಾರರು ಸೀತೆಯ ಸುಪುತ್ರರಾಗಿದ್ದಾರೆ ಎಂದು ಅವನಿಗೆ ತಿಳಿಯಿತು. ಇದನ್ನು ತಿಳಿದು ಸಭಾಮಧ್ಯದಲ್ಲಿ ಕುಳಿತ್ತಿದ್ದ ಶ್ರೀರಾಮಚಂದ್ರನು ಶುದ್ಧ ಆಚಾರ-ವಿಚಾರವುಳ್ಳ ದೂತರನ್ನು ಕರೆಸಿ ನೀವೀಗಲೇ ಪೂಜ್ಯರಾದ ವಾಲ್ಮೀಕಿಗಳ ಬಳಿಗೆ ಹೋಗಿ, ಅವರಿಗೆ ನನ್ನ ಈ ಸಂದೇಶ ತಿಳಿಸಿರಿ ಎಂದು ಹೇಳಿದನು.॥2-3॥
ಮೂಲಮ್ - 4
ಯದಿ ಶುದ್ಧಸಮಾಚಾರಾ ಯದಿ ವಾ ವೀತಕಲ್ಮಷಾ ।
ಕರೋತ್ವಿಹಾತ್ಮನಃ ಶುದ್ಧಿಮನುಮಾನ್ಯ ಮಹಾಮುನಿಮ್ ॥
ಅನುವಾದ
ಸೀತೆಯ ಚರಿತ್ರ ಶುದ್ಧವಾಗಿದ್ದರೆ, ಆಕೆಯಲ್ಲಿ ಯಾವುದೇ ಪಾಪವಿಲ್ಲದಿದ್ದರೆ, ಅವಳು ಮಹಾಮುನಿಗಳ ಅನುಮತಿ ಪಡೆದು ಇಲ್ಲಿಗೆ ಜನಸಮುದಾಯದಲ್ಲಿ ಬಂದು ತನ್ನ ಶುದ್ಧತೆಯನ್ನು ಪ್ರಮಾಣಿತಗೊಳಿಸಲಿ.॥4॥
ಮೂಲಮ್ - 5
ಛಂದಂ ಮುನೇಶ್ಚ ವಿಜ್ಞಾಯ ಸೀತಾಯಾಶ್ಚ ಮನೋಗತಮ್ ।
ಪ್ರತ್ಯಯಂ ದಾತುಕಾಮಾಯಾಸ್ತತಃ ಶಂಸತ ಮೇ ಲಘು ॥
ಅನುವಾದ
ನೀವು ಈ ವಿಷಯದಲ್ಲಿ ಮಹರ್ಷಿ ವಾಲ್ಮೀಕಿಗಳ ಹಾಗೂ ಸೀತೆಯ ಹಾರ್ದಿಕ ಅಭಿಪ್ರಾಯ ತಿಳಿದು, ಅವಳು ಇಲ್ಲಿಗೆ ಬಂದ ತನ್ನ ಶುದ್ಧತೆಯ ಬಗ್ಗೆ ವಿಶ್ವಾಸ ಉಂಟು ಮಾಡಲು ಬಯಸು ತ್ತಿರುವಳೇ ಎಂದು ಅರಿತು ಬೇಗನೇ ನನಗೆ ಸೂಚಿಸಿರಿ.॥5॥
ಮೂಲಮ್ - 6
ಶ್ವಃ ಪ್ರಭಾತೇ ತು ಶಪಥಂ ಮೈಥಿಲೀ ಜನಕಾತ್ಮಜಾ ।
ಕರೋತು ಪರಿಷನ್ಮಧ್ಯೇ ಶೋಧನಾರ್ಥಂ ಮಮೈವ ಚ ॥
ಅನುವಾದ
ನಾಳೆ ಬೆಳಿಗ್ಗೆ ಮಿಥಿಲೇಶ ಕುಮಾರಿ ಜಾನಕಿಯು ತುಂಬಿದ ಸಭೆಗೆ ಬರಲಿ ಮತ್ತು ನನ್ನ ಕಲಂಕವನ್ನು ದೂರಗೊಳಿಸಲು ಶಪಥ ಮಾಡಲಿ.॥6॥
ಮೂಲಮ್ - 7
ಶ್ರುತ್ವಾ ತು ರಾಘವಸ್ಯೈತದ್ ವಚಃ ಪರಮಮದ್ಭುತಮ್ ।
ದೂತಾಃ ಸಂಪ್ರಯಯುರ್ಬಾಢಂ ಯತ್ರವೈ ಮುನಿಪುಂಗವಃ ॥
ಅನುವಾದ
ಶ್ರೀರಘುನಾಥನ ಅತ್ಯಂತ ಅದ್ಭುತ ಮಾತನ್ನು ಕೇಳಿ ದೂತರು ವಾಲ್ಮೀಕಿ ಮುನಿಗಳು ವಿರಾಜಿಸುತ್ತಿದ್ದ ಕುಟೀರಕ್ಕೆ ಹೋದರು.॥7॥
ಮೂಲಮ್ - 8
ತೇ ಪ್ರಣಮ್ಯ ಮಹಾತ್ಮಾನಂ ಜ್ವಲಂತಮಮಿತಪ್ರಭಮ್ ।
ಊಚುಸ್ತೇ ರಾಮವಾಕ್ಯಾನಿ ಮೃದೂನಿ ಮಧುರಾಣಿ ಚ ॥
ಅನುವಾದ
ಮಹಾತ್ಮಾ ವಾಲ್ಮೀಕಿಗಳು ಅಮಿತ ತೇಜಸ್ವೀಯಾಗಿದ್ದು, ತನ್ನ ತೇಜದಿಂದ ಅಗ್ನಿಯಂತೆ ಪ್ರಜ್ವಲಿಸುತ್ತಿದ್ದರು. ಆ ದೂತರು ಅವರಿಗೆ ವಂದಿಸಿ, ಶ್ರೀರಾಮನ ಮಾತನ್ನು ಮಧುರ ಕೋಮಲ ಶಬ್ದಗಳಲ್ಲಿ ಹೇಳಿದರು.॥8॥
ಮೂಲಮ್ - 9
ತೇಷಾಂ ತದ್ಭಾಷಿತಂ ಶ್ರುತ್ವಾ ರಾಮಸ್ಯ ಚ ಮನೋಗತಮ್ ।
ವಿಜ್ಞಾಯ ಸುಮಹಾತೇಜಾ ಮುನಿರ್ವಾಕ್ಯ ಮಥಾಬ್ರವೀತ್ ॥
ಅನುವಾದ
ಆ ದೂತರ ಮಾತನ್ನು ಕೇಳಿ, ಶ್ರೀರಾಮನ ಹಾರ್ದಿಕ ಅಭಿಪ್ರಾಯವನ್ನು ತಿಳಿದು, ಆ ಮಹಾತೇಜಸ್ವೀ ಮುನಿಗಳು ಈ ಪ್ರಕಾರ ಹೇಳಿದರು.॥9॥
ಮೂಲಮ್ - 10
ಏವಂ ಭವತು ಭದ್ರಂ ವೋ ಯಥಾ ವದತಿ ರಾಘವಃ ।
ತಥಾ ಕರಿಷ್ಯತೇ ಸೀತಾ ದೈವತಂ ಹಿ ಪತಿಃ ಸಿಯಾಃ ॥
ಅನುವಾದ
ಹಾಗೆಯೇ ಆಗುವುದು, ನಿಮಗೆ ಒಳ್ಳೆಯದಾಗಲಿ. ಶ್ರೀರಾಮನು ಆಜ್ಞಾಪಿಸಿದಂತೆಯೇ ಸೀತೆಯು ಮಾಡುವಳು; ಏಕೆಂದರೆ ಪತಿಯು ಪತ್ನಿಗೆ ದೇವತೆಯಾಗಿದ್ದಾನೆ.॥10॥
ಮೂಲಮ್ - 11
ತಥೋಕ್ತಾ ಮುನಿನಾ ಸರ್ವೇ ರಾಜದೂತಾ ಮಹೌಜಸಮ್ ।
ಪ್ರತ್ಯೇತ್ಯ ರಾಘವಂ ಸರ್ವಂ ಮುನಿವಾಕ್ಯಂ ಬಭಾಷಿರೇ ॥
ಅನುವಾದ
ಮುನಿಗಳು ಹೀಗೆ ಹೇಳಿದಾಗ ಆ ದೂತರು ಮಹಾತೇಜಸ್ವೀ ಶ್ರೀರಘುನಾಥನ ಬಳಿಗೆ ಮರಳಿ ಬಂದು, ಮುನಿಗಳು ಹೇಳಿದ ಎಲ್ಲವನ್ನು ಹಾಗೆಯೇ ನಿವೇದಿಸಿ ಕೊಂಡರು.॥11॥
ಮೂಲಮ್ - 12
ತತಃ ಪ್ರಹೃಷ್ಟಃ ಕಾಕುತ್ಸ್ಥಃಶ್ರುತ್ವಾ ವಾಕ್ಯಂ ಮಹಾತ್ಮನಃ ।
ಋಷೀಂಸ್ತತ್ರ ಸಮೇತಾಂಶ್ಚ ರಾಜ್ಞಶ್ಚೈವಾಭ್ಯಭಾಷತ ॥
ಅನುವಾದ
ಮಹಾತ್ಮಾ ವಾಲ್ಮೀಕಿಗಳ ಮಾತನ್ನು ಕೇಳಿ ಶ್ರೀರಾಮನಿಗೆ ಬಹಳ ಸಂತೋಷವಾಯಿತು. ಅವನು ಅಲ್ಲಿಗೆ ಬಂದಿರುವ ಋಷಿಗಳಲ್ಲಿ, ರಾಜರಲ್ಲಿ ಹೀಗೆ ಹೇಳಿದನು.॥12॥
ಮೂಲಮ್ - 13
ಭಗವಂತಃ ಸಶಿಷ್ಯಾ ವೈ ಸಾನುಗಾಶ್ಚ ನರಾಧಿಪಾಃ ।
ಪಶ್ಯಂತು ಸೀತಾಶಪಥಂ ಯಶ್ಚೈವಾನ್ಯೋಪಿ ಕಾಂಕ್ಷತೇ ॥
ಅನುವಾದ
ಪೂಜ್ಯಪಾದ ನೀವೆಲ್ಲ ಮುನಿಗಳು ಶಿಷ್ಯರೊಂದಿಗೆ ಸಭೆಗೆ ಆಗಮಿಸಿರಿ. ಸೇವಕರ ಸಹಿತ ರಾಜರೂ ಉಪಸ್ಥಿತರಾಗಲಿ. ಸೀತೆಯ ಪ್ರತಿಜ್ಞೆ ಕೇಳಲು ಬಯಸುವವರೂ ಬರಲಿ. ಹೀಗೆ ಎಲ್ಲ ಜನರೂ ಒಟ್ಟಾಗಿ ಬಂದು ಸೀತೆಯ ಶಪಥವನ್ನು ಕೇಳಲಿ.॥13॥
ಮೂಲಮ್ - 14
ತಸ್ಯ ತದ್ವಚನಂ ಶ್ರುತ್ವಾ ರಾಘವಸ್ಯ ಮಹಾತ್ಮನಃ ।
ಸರ್ವೇಷಾಮೃಷಿಮುಖ್ಯಾನಾಂ ಸಾಧುವಾದೋ ಮಹಾನಭೂತ್ ॥
ಅನುವಾದ
ಮಹಾತ್ಮಾ ರಾಘವೇಂದ್ರನ ಮಾತನ್ನು ಕೇಳಿ ಸಮಸ್ತ ಮಹರ್ಷಿಗಳು ಸಾಧು! ಸಾಧು! ಎಂದು ಉದ್ಗರಿಸಿದರು.॥14॥
ಮೂಲಮ್ - 15
ರಾಜಾನಶ್ಚ ಮಹಾತ್ಮಾನಂ ಪ್ರಶಂಸಂತಿ ಸ್ಮ ರಾಘವಮ್ ।
ಉಪಪನ್ನಂ ನರಶ್ರೇಷ್ಠ ತ್ವಯ್ಯೇವ ಭುವಿ ನಾನ್ಯತಃ ॥
ಅನುವಾದ
ರಾಜರೂ ಕೂಡ ಮಹಾತ್ಮಾ ಶ್ರೀರಾಮನನ್ನು ಪ್ರಶಂಸಿಸುತ್ತಾ ಹೇಳಿದರು - ನರಶ್ರೇಷ್ಠನೇ! ಈ ಪೃಥಿವಿಯಲ್ಲಿ ಉತ್ತಮ ಮಾತುಗಳು ಕೇವಲ ನಿನ್ನಲ್ಲೇ ಇರಬಲ್ಲವು, ಬೇರೆ ಯಾರಲ್ಲಿಯೂ ಇರಲಾರವು.॥15॥
ಮೂಲಮ್ - 16
ಏವಂ ವಿನಿಶ್ಚಯಂಕೃತ್ವಾ ಶ್ವೋಭೂತ ಇತಿ ರಾಘವಃ ।
ವಿಸರ್ಜಯಾಮಾಸ ತದಾ ಸರ್ವಾಂಸ್ತಾನ್ ಶತ್ರುಸೂದನಃ ॥
ಅನುವಾದ
ಹೀಗೆ ಮರುದಿನ ಸೀತೆಯ ಶಪಥ ಮಾಡುವುದಾಗಿ ನಿಶ್ಚಯಿಸಿ, ಶತ್ರುಸೂದನ ಶ್ರೀರಾಮನು ಎಲ್ಲರನ್ನು ಬೀಳ್ಕೊಂಡನು.॥16॥
ಮೂಲಮ್ - 17
ಇತಿ ಸಂಪ್ರವಿಚಾರ್ಯ ರಾಜಸಿಂಹಃ
ಶ್ವೋಭೂತೋ ಶಪಥಸ್ಯ ನಿಶ್ಚಯಮ್ ।
ವಿಸಸರ್ಜ ಮುನೀನ್ ನೃಪಾಂಶ್ಚ ಸರ್ವಾನ್
ಸ ಮಹಾತ್ಮಾ ಮಹತೋ ಮಹಾನುಭಾವಃ ॥
ಅನುವಾದ
ಹೀಗೆ ಮರುದಿನ ಬೆಳಿಗ್ಗೆ ಸೀತೆಯು ಶಪಥ ಮಾಡುವುದೆಂದು ಮಹಾನುಭಾವ ಮಹಾತ್ಮಾ ರಾಜಸಿಂಹ ಶ್ರೀರಾಮನು ಅವರೆಲ್ಲ ಮುನಿಗಳನ್ನು ಹಾಗೂ ರಾಜರನ್ನು ತಮ್ಮ-ತಮ್ಮ ವಸತಿಗೆ ಕಳಿಸಿಕೊಟ್ಟನು.॥17॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ತೊಂಭತ್ತೈದನೆಯ ಸರ್ಗ ಪೂರ್ಣವಾಯಿತು. ॥95॥