०९४ राम-मेलनम्

[ತೊಂಭತ್ತನಾಲ್ಕನೆಯ ಸರ್ಗ]

ಭಾಗಸೂಚನಾ

ಲವ-ಕುಶರಿಂದ ರಾಮಾಯಣ ಕಾವ್ಯಗಾಯನ, ತುಂಬಿದ ಮಹಾಸಭೆಯಲ್ಲಿ ಶ್ರೀರಾಮನು ರಾಮಾಯಣವನ್ನು ಶ್ರವಣಿಸಿದುದು

ಮೂಲಮ್ - 1

ತೌ ರಜನ್ಯಾಂ ಪ್ರಭಾತಾಯಾಂ ಸ್ನಾತೌಹುತಹುತಾಶನೌ ।
ಯಥೋಕ್ತಮೃಷಿಣಾ ಪೂರ್ವಂ ಸರ್ವಂ ತತ್ರೋಪಗಾಯತಾಮ್ ॥

ಅನುವಾದ

ರಾತ್ರೆ ಕಳೆದು ಬೆಳಗಾದಾಗ ಸ್ನಾನ-ಸಂಧ್ಯಾದಿಗಳ ಬಳಿಕ ಅಗ್ನಿಕಾರ್ಯ ಪೂರೈಸಿ ಇಬ್ಬರೂ ಸಹೋದರರು ಋಷಿಗಳು ತಿಳಿಸಿದಂತೆ ರಾಮಾಯಣ ಗಾನ ಮಾಡತೊಡಗಿದರು.॥1॥

ಮೂಲಮ್ - 2

ತಾಂ ಸ ಶುಶ್ರಾವ ಕಾಕುತ್ಸ್ಥಃ ಪೂರ್ವಾಚಾರ್ಯವಿನಿರ್ಮಿತಾಮ್ ।
ಅಪೂರ್ವಾಂ ಪಾಠ್ಯ ಜಾತಿಂ ಚ ಗೇಯೇನ ಸಮಲಂಕೃತಾಮ್ ॥

ಅನುವಾದ

ಹಿಂದಿನ ಆಚಾರ್ಯರು ತಿಳಿಸಿದ ನಿಯಮಕ್ಕನುಕೂಲವಾದ ಆ ಗಾನವನ್ನು ಶ್ರೀರಾಮನೂ ಕೇಳಿದನು. ಅದರಲ್ಲಿ ಸಂಗೀತದ ವಿಶೇಷತೆಗಳಿಂದ ಕೂಡಿದ್ದು, ಸ್ವರಗಳ ಆಲಾಪದ ಅಪೂರ್ವ ಶೈಲಿ ಇತ್ತು.॥2॥

ಮೂಲಮ್ - 3

ಪ್ರಮಾಣೈರ್ಬಹುಭಿರ್ಬದ್ಧಾಂತಂತ್ರೀಲಯಸಮನ್ವಿತಾಮ್ ।
ಬಾಲಾಭ್ಯಾಂ ರಾಘವಃ ಶ್ರುತ್ವಾ ಕೌತೂಹಲಪರೋಽಭವತ್ ॥

ಅನುವಾದ

ಅನೇಕ ವಿಧವಾದ ಶ್ರುತ್ಯರ್ಥಗಳಿಂದ ಸಂಬದ್ಧವಾಗಿ ಧ್ವನಿ-ಪರಿಚ್ಛೇದಾದಿ ಸಾಧನಗಳಿಂದಲೂ, ದ್ರುತ-ಮಧ್ಯ-ವಿಲಂಬಿತ ವೃತ್ತಿಗಳಿಂದಲೂ, ವೀಣಾ ಸ್ವರಮಾಧುರ್ಯದ ಸಾಮ್ಯದಿಂದಲೂ ಕೂಡಿದ್ದ ಬಾಲಕರ ಆ ಮಧುರ ಗಾಯನವನ್ನು ಕೇಳಿ ಶ್ರೀರಾಮಚಂದ್ರನಿಗೆ ಬಹಳ ಕುತೂಹಲ ಉಂಟಾಯಿತು.॥3॥

ಮೂಲಮ್ - 4

ಅಥ ಕರ್ಮಾಂತರೇ ರಾಜಾ ಸಮಾಹೂಯ ಮಹಾಮುನಿಮ್ ।
ಪಾರ್ಥಿವಾಂಶ್ಚ ನರವ್ಯಾಘ್ರಃ ಪಂಡಿತಾನ್ ನೈಗಮಾಂಸ್ತಥಾ ॥

ಮೂಲಮ್ - 5

ಪೌರಾಣಿಕಾನ್ ಶಬ್ದವಿದೋ ಯೇ ವೃದ್ಧಾಶ್ಚದ್ವಿಜಾತಯಃ ।
ಸ್ವರಾಣಾಂ ಲಕ್ಷಣಜ್ಞಾಂಶ್ಚ ಉತ್ಸುಕಾನ್ ದ್ವಿಜಸತ್ತಮಾನ್ ॥

ಮೂಲಮ್ - 6

ಲಕ್ಷಣಜ್ಞಾಂಶ್ಚ ಗಾಂಧರ್ವಾನ್ನೈಗಮಾಂಶ್ಚ ವಿಶೇಷತಃ ।
ಪಾದಾಕ್ಷರಸಮಾಸಜ್ಞಾಂಶ್ಛಂದಃಸು ಪರಿನಿಷ್ಠಿತಾನ್ ॥

ಮೂಲಮ್ - 7½

ಕಲಾಮಾತ್ರಾವಿಶೇಷಜ್ಞಾನ್ ಜ್ಯೌತಿಷೇ ಚ ಪರಂ ಗತಾನ್ ।
ಕ್ರಿಯಾಕಲ್ಪವಿದಶ್ಚೈವ ತಥಾ ಕಾರ್ಯವಿಶಾರದಾನ್ ॥
ಭಾಷಾಜ್ಞಾನಿಂಗಿತಜ್ಞಾಂಶ್ಚ ನೈಗಮಾಂಶ್ಚಾಪ್ಯಶೇಷತಃ ।

ಅನುವಾದ

ಅನಂತರ ಪುರುಷಸಿಂಹರಾಜಾ ಶ್ರೀರಾಮನು ಕರ್ಮಾನುಷ್ಠಾನದಲ್ಲಿ ಅವಕಾಶ ಸಿಕ್ಕಿದಾಗ ದೊಡ್ಡ-ದೊಡ್ಡ ಮಹರ್ಷಿಗಳನ್ನು, ರಾಜರನ್ನು, ವೇದವಿದರಾದ ವಿದ್ವಾಂಸರನ್ನು, ಪೌರಾಣಿಕರನ್ನು, ಶಬ್ದದ ಸ್ವರೂಪ ಬಲ್ಲ ವೈಯ್ಯಾಕರಣರನ್ನು, ಹಿರಿಯ ವೃದ್ಧ ಬ್ರಾಹ್ಮಣರನ್ನು, ಸ್ವರ ಮತ್ತು ಲಕ್ಷಣಗಳನ್ನು ತಿಳಿದಿದ್ದ ಪಂಡಿತರನ್ನು, ಗಾಯನ ಕೇಳಲು ಉತ್ಸುಕರಾದ ದ್ವಿಜರನ್ನು, ಸಾಮುದ್ರಿಕ ಲಕ್ಷಣಗಳನ್ನು ತಿಳಿದವರನ್ನು, ಸಂಗೀತ ವಿಶಾರದರನ್ನು, ನಿಗಮಾಗಮ ವಿದ್ವಾಂಸರನ್ನು, ಪುರವಾಸಿಗಳನ್ನು, ಪದ- ಅಕ್ಷರ ಸಮಾಸಗಳನ್ನು ತಿಳಿದವರನ್ನು, ಛಂದಃ ಶಾಸ್ತ್ರಜ್ಞರನ್ನು, ಹ್ರಸ್ವ-ದೀರ್ಘ-ಪ್ಲುತ-ಪ್ರಚಯಗಳ ಲಕ್ಷಣಗಳನ್ನು ತಿಳಿದವರನ್ನು, ಜ್ಯೋತಿಷ್ಯ ಪಾರಂಗತರನ್ನು, ಕಲ್ಪೋಕ್ತ-ವೇದೋಕ್ತ ವಿಧಿ ನಿಯಮಗಳನ್ನು ತಿಳಿದ ಪಂಡಿತರನ್ನು, ಕಾರ್ಯ ಕುಶಲರನ್ನು, ವಿಭಿನ್ನ ಭಾಷೆಗಳನ್ನು ತಿಳಿದವರನ್ನು, ಇಂಗಿತಜ್ಞರನ್ನು, ಸಮಸ್ತ ಮಹಾಜನರನ್ನು ಯಜ್ಞಮಂಟಪಕ್ಕೆ ಕರೆಸಿದನು.॥4-7½॥

ಮೂಲಮ್ - 8

ಹೇತೂಪಚಾರಕುಶಲಾನ್ ಹೈತುಕಾಂಶ್ಚ ಬಹುಶ್ರುತಾನ್ ॥

ಮೂಲಮ್ - 9

ಛಂದೋವಿದಃ ಪುರಾಣಜ್ಞಾನ್ ವೈದಿಕಾನ್ದ್ವಿಜಸತ್ತಮಾನ್ ।
ಚಿತ್ರಜ್ಞಾನ್ ವೃತ್ತಸೂತ್ರಜ್ಞಾನ್ ಗೀತನೃತ್ಯವಿಶಾರದಾನ್ ॥

ಮೂಲಮ್ - 10

ಶಾಸಜ್ಞಾನ್ ನೀತಿನಿಪುಣಾನ್ ವೇದಾಂತಾರ್ಥಪ್ರಬೋಧಕಾನ್ ।
ಏತಾನ್ಸರ್ವಾನ್ಸಮಾನೀಯ ಗಾತಾರೌ ಸಮವೇಶಯತ್ ॥

ಅನುವಾದ

ಇವರೇ ಅಲ್ಲದೆ ತರ್ಕಶಾಸ್ತ್ರದಲ್ಲಿ ನಿಪುಣರಾದ ನೈಯಾಯಿಕರನು, ಹಲವಾರು ಶಾಸ್ತ್ರಗಳನ್ನು ಬಲ್ಲ ಯುಕ್ತಿವಾದಿಗಳನ್ನು, ಛಂದಃಶಾಸ್ತ್ರ ಪರಿಣತರನ್ನು, ಪುರಾಣಜ್ಞರನ್ನು, ವೈದಿಕರನ್ನು, ದ್ವಿಜಶ್ರೇಷ್ಠರನ್ನು, ಚಿತ್ರಕಲೆಯನ್ನು ತಿಳಿದವರನ್ನು, ಧರ್ಮಶಾಸ್ತ್ರಾನುಸಾರ ಸದಾಚಾರಿಗಳನ್ನು, ಷಡ್ದರ್ಶನ ಮತ್ತು ಕಲ್ಪಸೂತ್ರಗಳ ಪರಿಣತರನ್ನು, ಗೀತ ನೃತ್ಯ ಪರಿಣತರನ್ನು, ಶಾಸ್ತ್ರಜ್ಞರನ್ನು, ನೀತಿ ನಿಪುಣರನ್ನು, ವೇದಾಂತದ ಅರ್ಥಗಳ ಪ್ರವಚನಕಾರರನ್ನು, ಬ್ರಹ್ಮವಿದರನ್ನು, ಆ ಯಜ್ಞಮಂಟಪಕ್ಕೆ ಶ್ರೀರಾಮನು ಕರೆಸಿದನು. ಇವರೆಲ್ಲರನ್ನು ಒಟ್ಟಾಗಿ ಸೇರಿಸಿ ಭಗವಾನ್ ಶ್ರೀರಾಮನು ರಾಮಾಯಣವನ್ನು ಹಾಡುವ ಆ ಇಬ್ಬರೂ ಬಾಲಕರನ್ನು ಆ ಮಹಾಸಭೆಗೆ ಕರೆಸಿ ಕುಳ್ಳಿರಿಸಿದನು.॥8-10॥

ಮೂಲಮ್ - 11

ತೇಷಾಂ ಸಂವದತಾಂ ತತ್ರ ಶ್ರೋತೃಣಾಂಹರ್ಷವರ್ಧನಮ್ ।
ಗೇಯಂ ಪ್ರಚಕ್ರತುಸ್ತತ್ರ ತಾವುಭೌ ಮುನಿದಾರಕೌ ॥

ಅನುವಾದ

ಅಲ್ಲಿ ನೆರೆದ ಸಭಾಸದರು ಆನಂದವರ್ಧಕ ಮಾತುಗಳನ್ನು ಪರಸ್ಪರ ಆಡಿಕೊಳ್ಳುತ್ತಿದ್ದರು. ಅದೇ ಸಮಯದಲ್ಲಿ ಇಬ್ಬರೂ ಮುನಿಕುಮಾರರು ಗಾಯನ ಪ್ರಾರಂಭಿಸಿದರು.॥11॥

ಮೂಲಮ್ - 12

ತತಃ ಪ್ರವೃತ್ತಂ ಮಧುರಂ ಗಾಂಧರ್ವಮತಿಮಾನುಷಮ್ ।
ನ ಚ ತೃಪ್ತಿಂ ಯಯುಃ ಸರ್ವೇ ಶ್ರೋತಾರೋ ಗೇಯಸಂಪದಾ ॥

ಅನುವಾದ

ಅತಿಮಾನುಷವಾದ, ಅಲೌಕಿಕ, ಅತಿ ಮಧುರವಾದ ಗಾಯನ ಪ್ರಾರಂಭವಾಯಿತು. ಗೇಯ ವಸ್ತುವಿನ ‘ರಾಮಾಯಣದ’ ವಿಶೇಷತೆಗಳ ಕಾರಣ ಎಲ್ಲ ಶ್ರೋತೃಗಳು ಮಂತ್ರಮುಗ್ಧರಾಗಿ ಕೇಳತೊಡಗಿದರು. ಎಷ್ಟು ಕೇಳಿದರೂ ಯಾರಿಗೂ ತೃಪ್ತಿಯಾಗುತ್ತಿರಲಿಲ್ಲ.॥12॥

ಮೂಲಮ್ - 13

ಹೃಷ್ಟಾ ಮುನಿಗಣಾಃ ಸರ್ವೇ ಪಾರ್ಥಿವಾಶ್ಚ ಮಹೌಜಸಃ ।
ಪಿಬಂತ ಇವ ಚಕ್ಷುರ್ಭಿಃ ಪಶ್ಯಂತಿ ಸ್ಮ ಮುಹುರ್ಮುಹುಃ ॥

ಅನುವಾದ

ಮುನಿಗಳ ಸಮುದಾಯ, ಮಹಾ ಪರಾಕ್ರಮಿ ಭೂಪಾಲರೆಲ್ಲರೂ ಆನಂದಮಗ್ನರಾಗಿ ಅವರಿಬ್ಬರನ್ನು ಪದೇ-ಪದೇ ಅವರ ರೂಪಮಾಧುರಿಯನ್ನು ಕಣ್ಣುಗಳಿಂದ ಕುಡಿದು ಬಿಡುವರೋ ಎಂಬಂತೆ ನೋಡುತ್ತಿದ್ದರು.॥13॥

ಮೂಲಮ್ - 14

ಊಚುಃ ಪರಸ್ಪರಂ ಚೇದಂ ಸರ್ವ ಏವಸಮಾಹಿತಾಃ ।
ಉಭೌ ರಾಮಸ್ಯ ಸದೃಶೌ ಬಿಂಬಾದ್ಬಿಂಬಮಿವೋತ್ಥಿತೌ ॥

ಅನುವಾದ

ಅವರೆಲ್ಲರೂ ಏಕಾಗ್ರಚಿತ್ತರಾಗಿ ಪರಸ್ಪರ ಹೀಗೆ ಹೇಳತೊಡಗಿದರು- ಇವರಿಬ್ಬರೂ ಕುಮಾರರ ಆಕೃತಿ ಶ್ರೀರಾಮನಂತೆಯೇ ಹೋಲುತ್ತದೆ. ಬಿಂಬದಿಂದ ಪ್ರತಿಸ್ಫಲಿತ ಪ್ರತಿಬಿಂಬದಂತೆ ಇದ್ದಾರೆ.॥14॥

ಮೂಲಮ್ - 15

ಜಟಿಲೌ ಯದಿ ನ ಸ್ಯಾತಾಂ ನ ವಲ್ಕಲಧರೌ ಯದಿ ।
ವಿಶೇಷಂ ನಾಧಿಗಚ್ಛಾಮೋ ಗಾಯತೋ ರಾಘವಸ್ಯ ಚ ॥

ಅನುವಾದ

ಇವರ ತಲೆಯಲ್ಲಿ ಜಟೆ ಇಲ್ಲದಿದ್ದರೆ, ವಲ್ಕಲಗಳನ್ನು ಧರಿಸಿರದಿದ್ದರೆ, ಶ್ರೀರಾಮನಲ್ಲಿ ಮತ್ತು ಗಾಯನ ಮಾಡುತ್ತಿರುವ ಇವರಿಬ್ಬರಲ್ಲಿ ಯಾವುದೇ ವ್ಯತ್ಯಾಸ ನಮಗೆ ಕಂಡು ಬರುತ್ತಿರಲಿಲ್ಲ.॥15॥

ಮೂಲಮ್ - 16

ಏವಂ ಪ್ರಭಾಷಮಾಣೇಷು ಪೌರಜಾನಪದೇಷು ಚ ।
ಪ್ರವೃತ್ತಮಾದಿತಃ ಪೂರ್ವಸರ್ಗಂ ನಾರದದರ್ಶಿತಮ್ ॥

ಅನುವಾದ

ನಾಗರೀಕರು, ರಾಷ್ಟ್ರವಾಸಿಗಳು ಹೀಗೆ ಮಾತನಾಡುತ್ತಿರುವಾಗಲೇ ನಾರದರಿಂದ ವಾಲ್ಮೀಕಿಗಳಿಗೆ ಉಪದಿಷ್ಟವಾದ ಪ್ರಥಮ ಸರ್ಗ - ಮೂಲ ರಾಮಾಯಣದಿಂದಲೇ ಗಾಯನ ಪ್ರಾರಂಭವಾಯಿತು.॥16॥

ಮೂಲಮ್ - 17

ತತಃ ಪ್ರಭೃತಿ ಸರ್ಗಾಂಶ್ಚ ಯಾವದ್ವಿಂಶತ್ಯಗಾಯತಾಮ್ ।
ತತೋಽಪರಾಹ್ಣಸಮಯೇ ರಾಘವಃ ಸಮಭಾಷತ ॥

ಮೂಲಮ್ - 18½

ಶ್ರುತ್ವಾ ವಿಂಶತಿಸರ್ಗಾಂಸ್ತಾನ್ ಭ್ರಾತರಂ ಭ್ರಾತೃವತ್ಸಲಃ ।
ಅಷ್ಟಾದಶಸಹಸ್ರಾಣಿ ಸುವರ್ಣಸ್ಯ ಮಹಾತ್ಮನೋಃ ॥
ಪ್ರಯಚ್ಛ ಶೀಘ್ರಂ ಕಾಕುತ್ಸ್ಥ ಯದನ್ಯದಭಿಕಾಂಕ್ಷಿತಮ್ ।

ಅನುವಾದ

ಅಲ್ಲಿಂದ ಹಿಡಿದು ಇಪ್ಪತ್ತು ಸರ್ಗಗಳವರೆಗೆ ಅವರು ಹಾಡಿದರು. ಆ ವೇಳೆಗೆ ಅಪರಾಹ್ಣವಾಯಿತು. ಅಷ್ಟು ಹೊತ್ತು ಇಪ್ಪತ್ತು ಸರ್ಗಗಳ ಗಾಯನ ಕೇಳಿ ಭಾತೃವತ್ಸಲ ಶ್ರೀರಘುನಾಥನು ಭರತನಲ್ಲಿ ಹೇಳಿದನು - ಕಾಕುತ್ಸ್ಥ! ನೀನು ಈ ಇಬ್ಬರು ಮಹಾತ್ಮಾ ಬಾಲಕರಿಗೆ ಹದಿನೆಂಟುಸಾವಿರ ಸ್ವರ್ಣಮುದ್ರೆಗಳನ್ನು ಪುರಸ್ಕಾರರೂಪ ವಾಗಿ ಅರ್ಪಿಸು. ಇದಲ್ಲದೇ ಬೇರೆ ವಸ್ತುವಿನ ಇಚ್ಛೆಯಿದ್ದರೆ ಅದನ್ನು ಬೇಗನೇ ಕೊಟ್ಟುಬಿಡು.॥17-18½॥

ಮೂಲಮ್ - 19½

ದದೌ ಸ ಶೀಘ್ರಂ ಕಾಕುತ್ಸ್ಥೋ ಬಾಲಯೋರ್ವೈ ಪೃಥಕ್ಪೃಥಕ್ ॥
ದೀಯಮಾನಂ ಸುವರ್ಣಂ ತು ನಾಗೃಹ್ಣೀತಾಂ ಕುಶೀಲವೌ ।

ಅನುವಾದ

ಆಜ್ಞೆ ಪಡೆದು ಭರತನು ಶೀಘ್ರವಾಗಿ ಇಬ್ಬರೂ ಬಾಲಕರಿಗೆ ಬೇರೆ-ಬೇರೆಯಾಗಿ ಸ್ವರ್ಣಮುದ್ರೆಗಳನ್ನು ಕೊಡಲು ತೊಡಗಿದನು, ಆದರೆ ಅವನು ಕೊಟ್ಟ ಸ್ವರ್ಣವನ್ನು ಕುಶ-ಲವರು ಸ್ವೀಕರಿಸಲಿಲ್ಲ.॥19½॥

ಮೂಲಮ್ - 20

ಊಚತುಶ್ಚ ಮಹಾತ್ಮಾನೌ ಕಿಮನೇನೇತಿ ವಿಸ್ಮಿತೌ ॥

ಮೂಲಮ್ - 21

ವನ್ಯೇನ ಲಮೂಲೇನ ನಿರತೌ ವನವಾಸಿನೌ ।
ಸುವರ್ಣೇನ ಹಿರಣ್ಯೇನ ಕಿಂ ಕರಿಷ್ಯಾವಹೇ ವನೇ ॥

ಅನುವಾದ

ಆ ಇಬ್ಬರೂ ಮಹಾತ್ಮಾ ಸೋದರರು ವಿಸ್ಮಿತರಾಗಿ ಹೇಳಿದರು - ಈ ಧನದ ಆವಶ್ಯಕತೆ ಏನಿದೆ? ವನವಾಸಿಗಳಾದ ನಾವು ಕಾಡಿನ ಫಲ-ಮೂಲಗಲಿಂದ ಜೀವನ ನಿರ್ವಾಹ ಮಾಡುವವರು. ಈ ಚಿನ್ನ, ಬೆಳ್ಳಿ ವನಕ್ಕೆ ಕೊಂಡು ಏನು ಮಾಡುವುದು.॥20-21॥

ಮೂಲಮ್ - 22

ತಥಾ ತಯೋಃ ಪ್ರಬ್ರುವತೋಃ ಕೌತೂಹಲಸಮನ್ವಿತಾಃ ।
ಶ್ರೋತಾರಶ್ಚೈವ ರಾಮಶ್ಚ ಸರ್ವ ಏವ ಸುವಿಸ್ಮಿತಾಃ ॥

ಅನುವಾದ

ಅವರು ಹೀಗೆ ಹೇಳಿದಾಗ ಎಲ್ಲ ಶ್ರೋತೃಗಳ ಮನಸ್ಸಿನಲ್ಲಿ ಕುತೂಹಲ ಉಂಟಾಯಿತು. ಶ್ರೋತೃಗಳು ಮತ್ತು ಶ್ರೀರಾಮನು ಆಶ್ಚಯಚಕಿತರಾದರು.॥22॥

ಮೂಲಮ್ - 23

ತಸ್ಯ ಚೈವಾಗಮಂ ರಾಮಃ ಕಾವ್ಯಸ್ಯಶ್ರೋತುಮುತ್ಸುಕಃ ।
ಪಪ್ರಚ್ಛ ತೌ ಮಹಾತೇಜಾಸ್ತಾವುಭೌ ಮುನಿದಾರಕೌ ॥

ಅನುವಾದ

ಶ್ರೀರಾಮನು ರಾಮಾಯಣ ಕಾವ್ಯವು ಋಷಿಕುಮಾರರಿಗೆ ಎಲ್ಲಿಂದ ದೊರಕಿತು ಎಂದು ತಿಳಿಯಲು ಉತ್ಸುಕನಾಗಿ, ಆ ಮಹಾತೇಜಸ್ವೀ ರಘುನಾಥನು ಇಬ್ಬರೂ ಮುನಿಕುಮಾರರಲ್ಲಿ ಕೇಳಿದನು .॥23॥

ಮೂಲಮ್ - 24

ಕಿಂಪ್ರಮಾಣಮಿದಂ ಕಾವ್ಯಂಕಾ ಪ್ರತಿಷ್ಠಾ ಮಹಾತ್ಮನಃ ।
ಕರ್ತಾಕಾವ್ಯಸ್ಯ ಮಹತಃ ಕ್ವ ಚಾಸೌ ಮುನಿಪುಂಗವಃ ॥

ಅನುವಾದ

ಈ ಮಹಾಕಾವ್ಯದ ಶ್ಲೋಕದ ಸಂಖ್ಯೆ ಎಷ್ಟು? ಇದನ್ನು ರಚಿಸಿದ ಮಹಾತ್ಮಾ ಕವಿಗಳು ಎಲ್ಲಿರುತ್ತಾರೆ? ಈ ಮಹಾಕಾವ್ಯದ ಕರ್ತೃ ಯಾವ ಮುನೀಶ್ವರರು? ಅವರು ಎಲ್ಲಿದ್ದಾರೆ.॥24॥

ಮೂಲಮ್ - 25

ಪೃಚ್ಛಂತಂ ರಾಘವಂ ವಾಕ್ಯಮೂಚರ್ತುರ್ಮುನಿದಾರಕೌ ।
ವಾಲ್ಮೀಕಿರ್ಭಗವಾನ್ಕರ್ತಾ ಸಂಪ್ರಾಪ್ತೋಯಜ್ಞಸಂವಿಧಮ್ ।
ಯೇನೇದಂ ಚರಿತಂ ತುಭ್ಯಮಶೇಷಂಸಂಪ್ರದರ್ಶಿತಮ್ ॥

ಅನುವಾದ

ಹೀಗೆ ಕೇಳುತ್ತಿರುವ ಶ್ರೀರಾಮನಲ್ಲಿ ಆ ಇಬ್ಬರು ಮುನಿಕುಮಾರರು ಹೇಳಿದರು - ಮಹಾರಾಜಾ! ಯಾವ ಕಾವ್ಯದ ಮೂಲಕ ನಿನ್ನ ಈ ಸಂಪೂರ್ಣ ಚರಿತ್ರವನ್ನು ದರ್ಶಿಸಲಾಗಿದೆಯೋ, ಅದನ್ನು ರಚಿಸಿದವರು ಪೂಜ್ಯರಾದ ವಾಲ್ಮೀಕಿಗಳು. ಅವರು ಈಯಜ್ಞ ಸ್ಥಳದಲ್ಲಿ ಆಗಮಿಸಿರುವರು.॥25॥

ಮೂಲಮ್ - 26

ಸಂನಿಬದ್ಧಂ ಹಿ ಶ್ಲೋಕಾನಾಂಚತುರ್ವಿಂಶತ್ಸಹಸ್ರಕಮ್ ।
ಉಪಾಖ್ಯಾನಶತಂ ಚೈವ ಭಾರ್ಗವೇಣ ತಪಸ್ವಿನಾ ॥

ಅನುವಾದ

ಆ ತಪಸ್ವೀ ಕವಿಗಳು ರಚಿಸಿದ ಈ ಮಹಾಕಾವ್ಯದಲ್ಲಿ ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳು ಮತ್ತು ಒಂದುನೂರು ಉಪಾಖ್ಯಾನಗಳಿವೆ.॥26॥

ಮೂಲಮ್ - 27

ಆದಿಪ್ರಭೃತಿ ವೈ ರಾಜನ್ ಪಂಚಸರ್ಗಶತಾನಿ ಚ ।
ಕಾಂಡಾನಿ ಷಟ್ ಕೃತಾನೀಹ ಸೋತ್ತರಾಣಿ ಮಹಾತ್ಮನಾ ॥

ಅನುವಾದ

ರಾಜನೇ ! ಆ ಮಹಾತ್ಮರು ಮೊದಲಿಂದ ಹಿಡಿದು ಕೊನೆಯವರೆಗೆ ಐದುನೂರು ಸರ್ಗಗಳು ಹಾಗೂ ಆರು ಕಾಂಡಗಳನ್ನು ನಿರ್ಮಿಸಿದರು. ಇದಲ್ಲದೆ ಅವರು ಉತ್ತರಕಾಂಡವನ್ನು ರಚಿಸಿರುವರು.॥27॥

ಮೂಲಮ್ - 28

ಕೃತಾನಿ ಗುರುಣಾಸ್ಮಾಕಮೃಷಿಣಾ ಚರಿತಂ ತವ ।
ಪ್ರತಿಷ್ಠಾ ಜೀವಿತಂ ಯಾವತ್ತಾವತ್ಸರ್ವಸ್ಯ ವರ್ತತೇ ॥

ಅನುವಾದ

ನಮ್ಮ ಗುರು ಮಹರ್ಷಿ ವಾಲ್ಮೀಕರೇ ಇದೆಲ್ಲವನ್ನು ನಿರ್ಮಿಸಿದವರು. ಅವರು ನಿನ್ನ ಚರಿತ್ರವನ್ನೇ ಮಹಾಕಾವ್ಯ ರೂಪದಲ್ಲಿ ಕೊಟ್ಟಿರುವರು. ಇದರಲ್ಲಿ ನಿನ್ನ ಜೀವನದ ಎಲ್ಲ ಸಂಗತಿಗಳು ಬಂದಿವೆ.॥28॥

ಮೂಲಮ್ - 29

ಯದಿ ಬುದ್ಧಿಃ ಕೃತಾ ರಾಜನ್ಶ್ರವಣಾಯ ಮಹಾರಥ ।
ಕರ್ಮಾಂತರೇ ಕ್ಷಣೀಭೂತಸ್ತಚ್ಛಣುಷ್ವ ಸಹಾನುಜಃ ॥

ಅನುವಾದ

ಮಹಾರಥೀ ನರೇಶನೇ! ನಿನಗೆ ಇದನ್ನು ಕೇಳುವ ವಿಚಾರವಿದ್ದರೆ, ಯಜ್ಞಕರ್ಮದ ನಡುವೆ ಅವಕಾಶ ಮಾಡಿಕೊಂಡು, ನಿಶ್ಚಿತ ಸಮಯದಲ್ಲಿ ಸಹೋದರರೊಂದಿಗೆ ಕುಳಿತು ಇದನ್ನು ಕೇಳಿರಿ.॥29॥

ಮೂಲಮ್ - 30

ಬಾಢಮಿತ್ಯಬ್ರವೀದ್ರಾಮಸ್ತೌ ಚಾನುಜ್ಞಾಪ್ಯ ರಾಘವಮ್ ।
ಪ್ರಹೃಷ್ಟೌ ಜಗ್ಮತುಃ ಸ್ಥಾನಂ ಯತ್ರಾಸ್ತೇ ಮುನಿಪುಂಗವಃ ॥

ಅನುವಾದ

ಆಗ ರಾಮಚಂದ್ರನು ಹೇಳಿದನು - ಹಾಗೆಯೇ ಆಗಲಿ, ನಾವು ಈ ಕಾವ್ಯವನ್ನು ಕೇಳುವೆವು. ಅನಂತರ ಶ್ರೀರಾಮನ ಅಪ್ಪಣೆ ಪಡೆದು ಕುಶ ಮತ್ತು ಲವರು ಮುನಿವರ ವಾಲ್ಮೀಕಿಗಳಿದ್ದಲ್ಲಿಗೆ ಸಂತೋಷವಾಗಿ ತೆರಳಿದರು.॥30॥

ಮೂಲಮ್ - 31

ರಾಮೋಽಪಿ ಮುನಿಭಿಃ ಸಾರ್ಧಂ ಪಾರ್ಥಿವೈಶ್ಚ ಮಹಾತ್ಮಭಿಃ ।
ಶ್ರುತ್ವಾ ತದ್ಗೀತಮಾಧುರ್ಯಂ ಕರ್ಮಶಾಲಾಮುಪಾಗಮತ್ ॥

ಅನುವಾದ

ಶ್ರೀರಾಮಚಂದ್ರನೂ ಮಹಾತ್ಮಾ ಮುನಿಗಳೊಂದಿಗೆ, ರಾಜರೊಂದಿಗೆ ಮಧುರ ಸಂಗೀತ ಕೇಳಿ ಯಜ್ಞಮಂಟಪಕ್ಕೆ ಹೋದನು.॥31॥

ಮೂಲಮ್ - 32

ಶುಶ್ರಾವ ತತ್ತಾಲಲಯೋಪಪನ್ನಂ
ಸರ್ಗಾನ್ವಿತಂ ಸುಸ್ವರಶಬ್ದಯುಕ್ತಮ್ ।
ತಂತ್ರೀಲಯವ್ಯಂಜನಯೋಗಯುಕ್ತಂ
ಕುಶೀಲವಾಭ್ಯಾಂ ಪರಿಗೀಯಮಾನಮ್ ॥

ಅನುವಾದ

ಹೀಗೆ ಮೊದಲನೆ ದಿವಸ ಶ್ರೀರಾಮನು ತಾಳ-ಲಯಗಳಿಂದ ಸಂಪನ್ನವಾದ ಸರ್ಗಗಳಿಂದ ಕೂಡಿದ್ದ, ಸುಸ್ವರಯುಕ್ತವಾದ ಶಬ್ದಗಳಿಂದ ಕೂಡಿದ್ದ, ವೀಣಾವಾದ್ಯದೊಡನೆ ಮೇಳೈಸಿ ಕುಶ-ಲವರು ಹಾಡಿದ ರಾಮಾಯಣ ಗಾಯನವನ್ನು ಕೇಳಿದನು.॥32॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ತೊಂಭತ್ತನಾಲ್ಕನೆಯ ಸರ್ಗ ಪೂರ್ಣವಾಯಿತು.॥94॥