[ತೊಂಭತ್ತಮೂರನೆಯ ಸರ್ಗ]
ಭಾಗಸೂಚನಾ
ಶ್ರೀರಾಮನ ಯಜ್ಞಕ್ಕೆ ಮಹರ್ಷಿ ವಾಲ್ಮೀಕಿಗಳ ಆಗಮನ, ರಾಮಾಯಣವನ್ನು ಗಾನ ಮಾಡಲು ಕುಶ-ಲವರಿಗೆ ಆದೇಶ
ಮೂಲಮ್ - 1
ವರ್ತಮಾನೇ ತಥಾಭೂತೇ ಯಜ್ಞೇ ಚ ಪರಮಾದ್ಭುತೇ ।
ಸಶಿಷ್ಯ ಆಜಗಾಮಾಶು ವಾಲ್ಮೀಕಿರ್ಭಗವಾನೃಷಿಃ ॥
ಅನುವಾದ
ಹೀಗೆ ಆ ಅತ್ಯಂತ ಅದ್ಭುತ ಯಜ್ಞ ನಡೆಯುತ್ತಿರುವಾಗ ಭಗವಾನ್ ವಾಲ್ಮೀಕಿ ಮುನಿಗಳು ತಮ್ಮ ಶಿಷ್ಯರೊಂದಿಗೆ ಅಲ್ಲಿಗೆ ಆಗಮಿಸಿದರು.॥1॥
ಮೂಲಮ್ - 2
ಸ ದೃಷ್ಟ್ವಾದಿವ್ಯಸಂಕಾಶಂ ಯಜ್ಞಮದ್ಭುತದರ್ಶನಮ್ ।
ಏಕಾಂತ ಋಷಿವಾಹಾನಾಂ ಚಕಾರ ಉಟಜಾನ್ ಶುಭಾನ್ ॥
ಅನುವಾದ
ಅವರು ಆ ದಿವ್ಯ ಅದ್ಭುತ ಯಜ್ಞವನ್ನು ದರ್ಶಿಸಿದರು. ಋಷಿಗಳಿಗಾಗಿ ನಿರ್ಮಿಸಿದ್ದ ಪರ್ಣಶಾಲೆಗಳ ಹತ್ತಿರದಲ್ಲೇ ವಾಲ್ಮೀಕಿಗಳಿಗಾಗಿ ಸುಂದರ ಪರ್ಣಶಾಲೆಯನ್ನು ನಿರ್ಮಿಸಿ ಕೊಟ್ಟರು.॥2॥
ಮೂಲಮ್ - 3
ಶಕಟಾಂಶ್ಚ ಬಹೂನ್ಪೂರ್ಣಾನ್ ಫಲಮೂಲಾಂಶ್ಚ ಶೋಭನಾನ್ ।
ವಾಲ್ಮೀಕಿವಾಟೇ ರುಚಿರೇ ಸ್ಥಾಪಯನ್ನವಿದೂರತಃ ॥
ಅನುವಾದ
ವಾಲ್ಮೀಕಿಗಳ ಸುಂದರ ಕುಟೀರದ ಬಳಿಯಲ್ಲೇ ಅನ್ನಾದಿಗಳಿಂದ ತುಂಬಿದ ಬಂಡಿಗಳನ್ನು ನಿಲ್ಲಿಸಲಾಗಿತ್ತು. ಜೊತೆಗೆ ಉತ್ತಮೋತ್ತಮ ಫಲ-ಮೂಲಗಳನ್ನು ಇರಿಸಿದ್ದರು.॥3॥
ಮೂಲಮ್ - 4
ಆಸೀತ್ಸುಪೂಜಿತೋ ರಾಜ್ಞಾ ಮುನಿಭಿಶ್ಚ ಮಹಾತ್ಮಭಿಃ ।
ವಾಲ್ಮೀಕಿಃ ಸುಮಹಾತೇಜಾ ನ್ಯವಸತ್ಪರಮಾತ್ಮವಾನ್ ॥
ಅನುವಾದ
ರಾಜಾರಾಮ ಹಾಗೂ ಅನೇಕ ಮಹಾತ್ಮಾ ಮುನಿಗಳಿಂದ ಚೆನ್ನಾಗಿ ಪೂಜೆಗೊಂಡು, ಸಮ್ಮಾನಿತರಾದ ಮಹಾತೇಜಸ್ವೀ, ಆತ್ಮಜ್ಞಾನೀ ವಾಲ್ಮೀಕಿ ಮುನಿಗಳು ಬಹಳ ಸುಖವಾಗಿ ಅಲ್ಲಿ ವಾಸಿಸಿದರು.॥4॥
ಮೂಲಮ್ - 5
ಸ ಶಿಷ್ಯಾವಬ್ರವೀದ್ಧೃಷ್ಟೋ ಯುವಾಂ ಗತ್ವಾ ಸಮಾಹಿತೌ ।
ಕೃತ್ಸ್ನಂ ರಾಮಾಯಣಂ ಕಾವ್ಯಂ ಗಾಯತಾಂ ಪರಯಾ ಮುದಾ ॥
ಅನುವಾದ
ಅವರು ತಮ್ಮ ಹೃಷ್ಟ-ಪುಷ್ಟ ಇಬ್ಬರು ಶಿಷ್ಯರಲ್ಲಿ ಹೇಳಿದರು - ನೀವಿಬ್ಬರೂ ಏಕಾಗ್ರಚಿತ್ತರಾಗಿ ಎಲ್ಲೆಡೆ ತಿರುಗಾಡುತ್ತಾ ಬಹಳ ಆನಂದವಾಗಿ ಸಂಪೂರ್ಣ ರಾಮಾಯಣ ಕಾವ್ಯವನ್ನು ಗಾಯನ ಮಾಡಿರಿ.॥5॥
ಮೂಲಮ್ - 6
ಋಷಿವಾಟೇಷು ಪುಣ್ಯೇಷು ಬ್ರಾಹ್ಮಣಾವಸಥೇಷುಚ ।
ರಥ್ಯಾಸು ರಾಜಮಾರ್ಗೇಷು ಪಾರ್ಥಿವಾನಾಂ ಗೃಹೇಷು ಚ ॥
ಅನುವಾದ
ಋಷಿಗಳ, ಬ್ರಾಹ್ಮಣರ ಪವಿತ್ರ ಸ್ಥಾನಗಳಲ್ಲಿ, ಬೀದಿಗಳಲ್ಲಿ, ರಾಜಮಾರ್ಗಗಳಲ್ಲಿ ಹಾಗೂ ರಾಜರ ನಿವಾಸ ಸ್ಥಾನಗಳಲ್ಲಿಯೂ ಈ ಕಾವ್ಯದ ಗಾಯನ ಮಾಡಿರಿ.॥6॥
ಮೂಲಮ್ - 7
ರಾಮಸ್ಯ ಭವನದ್ವಾರಿ ಯತ್ರ ಕರ್ಮ ಚ ಕುರ್ವತೇ ।
ಋತ್ವಿಜಾಮಗ್ರತಶ್ಚೈವ ತತ್ರ ಗೇಯಂ ವಿಶೇಷತಃ ॥
ಅನುವಾದ
ಶ್ರೀರಾಮಚಂದ್ರನ ಗೃಹದ್ವಾರದಲ್ಲಿ, ಬ್ರಾಹ್ಮಣರು ಯಜ್ಞ ಮಾಡುವಲ್ಲಿ ಹಾಗೂ ಋತ್ವಿಜರ ಎದುರಿನಲ್ಲಿಯೂ ಈ ಕಾವ್ಯವನ್ನು ವಿಶೇಷವಾಗಿ ಹಾಡಬೇಕು.॥7॥
ಮೂಲಮ್ - 8
ಇಮಾನಿ ಚ ಫಲಾನ್ಯತ್ರ ಸ್ವಾದೂನಿ ವಿವಿಧಾನಿ ಚ ।
ಜಾತಾನಿ ಪರ್ವತಾಗ್ರೇಷು ಆಸ್ವಾದ್ಯಾಸ್ವಾದ್ಯ ಗಾಯತಾಮ್ ॥
ಅನುವಾದ
ಇಲ್ಲಿ ಪರ್ವತ ಶಿಖರಗಳಲ್ಲಿ ನಾನಾ ರೀತಿಯ ರುಚಿಕರ ಫಲಗಳು ಬಿಟ್ಟಿವೆ. ನಿಮಗೆ ಹಸಿವಾದಾಗ ಅದನ್ನು ಸವಿಯುತ್ತಾ ಕಾವ್ಯದ ಗಾನ ಮಾಡುತ್ತಾ ಇರಿ.॥8॥
ಮೂಲಮ್ - 9
ನ ಯಾಸ್ಯಥಃ ಶ್ರಮಂ ವತ್ಸೌ ಭಕ್ಷಯಿತ್ವಾ ಲಾನ್ಯಥ ।
ಮೂಲಾನಿ ಚ ಸುಮೃಷ್ಟಾನಿನ ರಾಗಾತ್ಪರಿಹಾಸ್ಯಥಃ ॥
ಅನುವಾದ
ಮಕ್ಕಳಿರಾ! ಇಲ್ಲಿಯ ಸುಮಧುರ ಫಲಗಳನ್ನು ಭಕ್ಷಿಸುವುದರಿಂದ ನಿಮಗೆ ಎಂದೂ ಬಳಲಿಕೆ ಉಂಟಾಗದು ಮತ್ತು ನಿಮ್ಮ ಕಂಠದ ಮಧುರತೆ ನಾಶವಾಗದು.॥9॥
ಮೂಲಮ್ - 10
ಯದಿ ಶಬ್ದಾಪಯೇದ್ರಾಮಃ ಶ್ರವಣಾಯ ಮಹೀಪತಿಃ ।
ಋಷೀಣಾಮುಪವಿಷ್ಟಾನಾಂ ಯಥಾಯೋಗಂ ಪ್ರವರ್ತತಾಮ್ ॥
ಅನುವಾದ
ಮಹಾರಾಜ ಶ್ರೀರಾಮನು ನೀವಿಬ್ಬರಲ್ಲಿ ಗಾನ ಕೇಳಬೇಕೆಂದು ಕರೆದರೆ ನೀವು ಅವನಲ್ಲಿ ಹಾಗೂ ಅಲ್ಲಿ ಕುಳಿತಿರುವ ಋಷಿಮುನಿಗಳಲ್ಲಿ ಯಥಾಯೋಗ್ಯ ವಿನಯದಿಂದ ವರ್ತಿಸಿರಿ.॥10॥
ಮೂಲಮ್ - 11
ದಿವಸೇ ವಿಂಶತಿಃ ಸರ್ಗಾಃ ಗೇಯಾ ಮಧುರಯಾ ಗಿರಾ ।
ಪ್ರಮಾಣೈರ್ಬಹುಭಿಸ್ತತ್ರ ಯಥೋದ್ದಿಷ್ಟಂ ಮಯಾ ಪುರಾ ॥
ಅನುವಾದ
ನಾನು ಮೊದಲು ಬೇರೆ-ಬೇರೆ ಸಂಖ್ಯೆಯುಳ್ಳ ಶ್ಲೋಕಗಳಿಂದ ಕೂಡಿದ ರಾಮಾಯಣ ಕಾವ್ಯದ ಸರ್ಗಗಳನ್ನು ನಿಮಗೆ ಉಪದೇಶಿಸಿದಂತೆ ಅದಕ್ಕನುಸಾರ ಪ್ರತಿದಿನ ಇಪ್ಪತ್ತು-ಇಪ್ಪತ್ತು ಸರ್ಗಗಳನ್ನು ಮಧುರ ಸ್ವರದಿಂದ ಗಾನ ಮಾಡಿರಿ.॥11॥
ಮೂಲಮ್ - 12
ಲೋಭಶ್ಚಾಪಿ ನ ಕರ್ತವ್ಯಃ ಸ್ವಲ್ಪೋಪಿಧನವಾಂಛಯಾ ।
ಕಿಂ ಧನೇನಾಶ್ರಮಸ್ಥಾನಾಂ ಲಮೂಲಾಶಿನಾಂ ಸದಾ ॥
ಅನುವಾದ
ಧನದ ಇಚ್ಛೆಯಿಂದ ಸ್ವಲ್ಪವೂ ಲೋಭ ಇರಬಾರದು, ಆಶ್ರಮದಲ್ಲಿ ಇದ್ದು ಫಲ-ಮೂಲಗಳ ಭೋಜನ ಮಾಡುವ ವನವಾಸಿಗಳಿಗೆ ಧನದಿಂದ ಏನು ಕೆಲಸ.॥12॥
ಮೂಲಮ್ - 13
ಯದಿ ಪೃಚ್ಛೇತ್ಸ ಕಾಕುತ್ಸ್ಥೋ ಯುವಾಂ ಕಸ್ಯೇತಿ ದಾರಕೌ ।
ವಾಲ್ಮೀಕೇರಥ ಶಿಷ್ಯೌ ದ್ವೌ ಬ್ರೂತಮೇವಂನರಾಧಿಪಮ್ ॥
ಅನುವಾದ
ಮಕ್ಕಳೇ ! ನೀವಿಬ್ಬರೂ ಯಾರ ಮಕ್ಕಳು ಎಂದು ಶ್ರೀರಘುನಾಥನು ಕೇಳಿದರೆ ನಾವಿಬ್ಬರೂ ಸಹೋದರರು ಮಹರ್ಷಿ ವಾಲ್ಮೀಕಿಗಳ ಶಿಷ್ಯರು ಇಷ್ಟೇ ಹೇಳಬೇಕು.॥13॥
ಮೂಲಮ್ - 14
ಇಮಾಸ್ತಂತ್ರೀಃ ಸುಮಧುರಾಃ ಸ್ಥಾನಂವಾಪೂರ್ವದರ್ಶನಮ್ ।
ಮೂರ್ಛಯಿತ್ವಾ ಸುಮಧುರಂ ಗಾಯತಾಂ ವಿಗತಜ್ವರೌ ॥
ಅನುವಾದ
ಈ ವೀಣೆಗೆ ಏಳು ತಂತಿಗಳಿವೆ. ಇದರ ಸ್ವರಗಳನ್ನು ಝಂಕೃತಗೊಳಿಸಿ, ಶ್ರುತಿ ಸೇರಿಸಿ ಸುಮಧುರ ಸ್ವರದಿಂದ ನೀವಿಬ್ಬರೂ ಕಾವ್ಯಗಾಯನ ಮಾಡಿರಿ ಹಾಗೂ ಸರ್ವಥಾ ನಿಶ್ಚಿಂತರಾಗಿರಿ.॥14॥
ಮೂಲಮ್ - 15
ಆದಿಪ್ರಭೃತಿ ಗೇಯಂ ಸ್ಯಾನ್ನ ಚಾವಜ್ಞಾಯ ಪಾರ್ಥಿವಮ್ ।
ಪಿತಾ ಹಿ ಸರ್ವಭೂತಾನಾಂ ರಾಜಾ ಭವತಿ ಧರ್ಮತಃ ॥
ಅನುವಾದ
ಪ್ರಾರಂಭದಿಂದಲೇ ಈ ಕಾವ್ಯವನ್ನು ಗಾಯ ಮಾಡಬೇಕು. ಗಾಯನದಲ್ಲಿ ರಾಜನ ಅಪಮಾನವಾಗುವಂತಹ ಯಾವುದೇ ವರ್ತನೆ ಮಾಡಬೇಡಿ; ಏಕೆಂದರೆ ರಾಜನು ಧರ್ಮದ ದೃಷ್ಟಿಯಿಂದ ಸಮಸ್ತ ಪ್ರಾಣಿಗಳ ತಂದೆಯಾಗಿರುವನು.॥15॥
ಮೂಲಮ್ - 16
ತದ್ಯುವಾಂ ಹೃಷ್ಟಮನಸೌ ಶ್ವಃ ಪ್ರಭಾತೇ ಸಮಾಹಿತೌ ।
ಗಾಯತಂ ಮಧುರಂ ಗೇಯಂತಂತ್ರೀಲಯಸಮನ್ವಿತಮ್ ॥
ಅನುವಾದ
ಆದ್ದರಿಂದ ನೀವಿಬ್ಬರೂ ಪ್ರಸನ್ನ, ಏಕಾಗ್ರಚಿತ್ತದಿಂದ ನಾಳೆ ಬೆಳಿಗ್ಗಿನಿಂದಲೇ ವೀಣೆಯ ಲಯದಲ್ಲಿ ಮಧುರ ಸ್ವರದಲ್ಲಿ ರಾಮಾಯಣ ಗಾನವನ್ನು ಪ್ರಾರಂಭಿಸಿರಿ.॥16॥
ಮೂಲಮ್ - 17
ಇತಿ ಸಂದಿಶ್ಯ ಬಹುಶೋ ಮುನಿಃ ಪ್ರಾಚೇತಸಸ್ತದಾ ।
ವಾಲ್ಮೀಕಿಃ ಪರಮೋದಾರಸ್ತೂಷ್ಣೀಮಾಸೀನ್ಮಹಾಮುನಿಃ ॥
ಅನುವಾದ
ಹೀಗೆ ಬಹಳಷ್ಟು ಉಪದೇಶ ಮಾಡಿ ವರುಣನ ಪುತ್ರ ಪರಮ ಉದಾರ ಮಹಾಮುನಿ ವಾಲ್ಮೀಕಿಗಳು ಸುಮ್ಮನಾದರು.॥17॥
ಮೂಲಮ್ - 18
ಸಂದಿಷ್ಟೌ ಮುನಿನಾ ತೇನ ತಾವುಭೌ ಮೈಥಿಲೀಸುತೌ ।
ತಥೈವ ಕರವಾವೇತಿ ನಿರ್ಜಗ್ಮತುರರಿಂದವೌ ॥
ಅನುವಾದ
ಮುನಿಗಳು ಹೀಗೆ ಆದೇಶ ಕೊಟ್ಟಾಗ ಮಿಥಿಲೇಶ ಕುಮಾರಿ ಸೀತೆಯ ಆ ಇಬ್ಬರೂ ಶತ್ರುದಮನ ಪುತ್ರರು ‘ಹಾಗೆಯೇ ಆಗಲಿ’ ನಾವು ಹಾಗೆಯೇ ಮಾಡುವೆವು ಎಂದು ಅಲ್ಲಿಂದ ಹೊರಟು ಹೋದರು.॥18॥
ಮೂಲಮ್ - 19
ತಾಮದ್ಭುತಾಂ ತೌ ಹೃದಯೇ ಕುಮಾರೌ
ನಿವೇಶ್ಯ ವಾಣೀಮೃಷಿಭಾಷಿತಾಂ ತದಾ ।
ಸಮುತ್ಸುಕೌ ತೌ ಸುಖಮೂಷತುರ್ನಿಶಾಂ
ಯಥಾಶ್ವಿನೌ ಭಾರ್ಗವನೀತಿಸಂಹಿತಾಮ್ ॥
ಅನುವಾದ
ಶುಕ್ರಾಚಾರ್ಯರು ರಚಿಸಿದ ನೀತಿಸಂಹಿತೆಯನ್ನು ಧಾರಣ ಮಾಡುವ ಅಶ್ವಿನೀಕುಮಾರರಂತೆ ಋಷಿಗಳು ಹೇಳಿದ ಆ ಅದ್ಭುತ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಆ ಇಬ್ಬರೂ ಕುಮಾರರು ಮನಸ್ಸಿನಲ್ಲೇ ಉತ್ಕಂಠಿತರಾಗಿ ಅಲ್ಲೇ ರಾತ್ರಿಯಿಡೀ ಸುಖವಾಗಿ ಕಳೆದರು.॥19॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ತೊಂಭತ್ತಮೂರನೆಯ ಸರ್ಗ ಪೂರ್ಣವಾಯಿತು. ॥93॥