०९२ आरम्भः

[ತೊಂಭತ್ತೆರಡನೆಯ ಸರ್ಗ]

ಭಾಗಸೂಚನಾ

ಶ್ರೀರಾಮನ ಅಶ್ವಮೇಧ ಯಜ್ಞದಲ್ಲಿ ದಾನಗಳ ವೈಶಿಷ್ಟ್ಯ

ಮೂಲಮ್ - 1

ತತ್ಸರ್ವಮಖಿಲೇನಾಶು ಪ್ರಸ್ಥಾಪ್ಯ ಭರತಾಗ್ರಜಃ ।
ಹಯಂ ಲಕ್ಷಣಸಂಪನ್ನಂ ಕೃಷ್ಣಸಾರಂ ಮುಮೋಚಹ ॥

ಅನುವಾದ

ಹೀಗೆ ಎಲ್ಲ ಪ್ರಕಾರದ ಸಮಸ್ತ ಸಾಮಗ್ರಿಗಳನ್ನು ಕಳಿಸಿ ಭರತಾಗ್ರಜನಾದ ಶ್ರೀರಾಮನು ಉತ್ತಮ ಲಕ್ಷಣಗಳಿಂದ ಕೂಡಿದ, ಕೃಷ್ಣಸಾರ ಮೃಗದಂತೆ ಕಪ್ಪುಬಣ್ಣದ ಯಜ್ಞಾಶ್ವವನ್ನು ಬಿಟ್ಟನು.॥1॥

ಮೂಲಮ್ - 2

ಋತ್ವಿಗ್ಭಿರ್ಲಕ್ಷ್ಮಣಂ ಸಾರ್ಧಮಶ್ವೇ ಚ ವಿನಿಯೋಜ್ಯ ಚ ।
ತತೋಽಭ್ಯಗಚ್ಛತ್ಕಾಕುತ್ಸ್ಥಃ ಸಹ ಸೈನ್ಯೇನ ನೈಮಿಷಮ್ ॥

ಅನುವಾದ

ಋತ್ವಿಜರ ಸಹಿತ ಲಕ್ಷ್ಮಣನನ್ನು ಆ ಅಶ್ವದ ರಕ್ಷಣೆಗಾಗಿ ನಿಯುಕ್ತಗೊಳಿಸಿ, ಶ್ರೀರಘುನಾಥನು ಸೈನ್ಯಸಹಿತ ನೈಮಿಷಾರಣ್ಯಕ್ಕೆ ಪ್ರಯಾಣ ಮಾಡಿದನು.॥2॥

ಮೂಲಮ್ - 3

ಯಜ್ಞವಾಟಂ ಮಹಾಬಾಹುರ್ದೃಷ್ಟ್ವಾ ಪರಮಮದ್ಭುತಮ್ ।
ಪ್ರಹರ್ಷಮತುಲಂ ಲೇಭೇ ಶ್ರೀಮಾನಿತಿ ಚ ಸೋಽಬ್ರವೀತ್ ॥

ಅನುವಾದ

ಅಲ್ಲಿ ನಿರ್ಮಿತವಾದ ಅತ್ಯಂತ ಅದ್ಭುತ ಯಜ್ಞ ಮಂಟಪವನ್ನು ನೋಡಿ ಮಹಾಬಾಹು ಶ್ರೀರಾಮನಿಗೆ ಅತುಲ ಸಂತೋಷವಾಗಿ ‘ಬಹಳ ಸುಂದರವಾಗಿದೆ’ ಎಂದು ಹೇಳಿದನು.॥3॥

ಮೂಲಮ್ - 4

ನೈಮಿಷೇ ವಸತಸ್ತಸ್ಯ ಸರ್ವ ಏವ ನರಾಧಿಪಾಃ ।
ಆನಿನ್ಯುರುಪಹಾರಾಂಶ್ಚ ತಾನ್ರಾಮಃ ಪ್ರತ್ಯಪೂಜಯತ್ ॥

ಅನುವಾದ

ನೈಮಿಷಾರಣ್ಯದಲ್ಲಿ ವಾಸಿಸುವಾಗ ಶ್ರೀರಾಮಚಂದ್ರನ ಬಳಿ ಭೂಮಂಡಲದ ಎಲ್ಲ ರಾಜರೂ ಬಗೆ-ಬಗೆಯ ಉಡುಗೊರೆಗಳನ್ನೆತ್ತಿಕೊಂಡು ಬಂದರು. ಶ್ರೀರಾಮನು ಅವರೆಲ್ಲರ ಸ್ವಾಗತ-ಸತ್ಕಾರ ಮಾಡಿದನು.॥4॥

ಮೂಲಮ್ - 5

ಅನ್ನಪಾನಾದಿವಸ್ತ್ರಾಣಿ ಸರ್ವೋಪಕರಣಾನಿ ಚ ।
ಭರತಃ ಸಹಶತ್ರುಘ್ನೋ ನಿಯುಕ್ತೋ ರಾಜಪೂಜನೇ ॥

ಅನುವಾದ

ಅವರಿಗೆ ಅನ್ನ-ಪಾನಾದಿ, ವಸ್ತ್ರ ಹಾಗೂ ಇತರ ಆವಶ್ಯಕ ವಸ್ತುಗಳನ್ನು ಕೊಟ್ಟನು. ಶತ್ರುಘ್ನನ ಸಹಿತ ಭರತನನ್ನು ಆ ರಾಜರ ಸ್ವಾಗತ-ಸತ್ಕಾರದಲ್ಲಿ ನಿಯುಕ್ತಗೊಳಿಸಲಾಗಿತ್ತು.॥5॥

ಮೂಲಮ್ - 6

ವಾನರಾಶ್ಚ ಮಹಾತ್ಮಾನಃ ಸುಗ್ರೀವಸಹಿತಾಸ್ತದಾ ।
ಪರಿವೇಷಣಂ ಚ ವಿಪ್ರಾಣಾಂ ಪ್ರಯತಃ ಸಂಪ್ರಚಕ್ರಿರೇ ॥

ಅನುವಾದ

ಸುಗ್ರೀವ ಸಹಿತ ಮಹಾತ್ಮರಾದ ವಾನರರು ಪರಮ ಪವಿತ್ರ ಹಾಗೂ ಏಕಾಗ್ರಚಿತ್ತರಾಗಿ ಆಗ ಅಲ್ಲಿ ಬ್ರಾಹ್ಮಣರಿಗೆ ಭೋಜನ ಬಡಿಸುತ್ತಿದ್ದರು.॥6॥

ಮೂಲಮ್ - 7

ವಿಭೀಷಣಶ್ಚ ರಕ್ಷೋಭಿರ್ಬಹುಭಿಃ ಸುಸಮಾಹಿತಃ ।
ಋಷೀಣಾಮುಗ್ರತಪಸಾಂ ಕಿಂಕರಃ ಸಮಪದ್ಯತ ॥

ಅನುವಾದ

ಅನೇಕ ರಾಕ್ಷಸರಿಂದ ಪರಿವೃತನಾದ ವಿಭೀಷಣನು ಅತ್ಯಂತ ಎಚ್ಚರಿಕೆಯಿಂದ ಇದ್ದು ಉಗ್ರ ತಪಸ್ವೀ ಋಷಿಗಳ ಸೇವಾ ಕಾರ್ಯದಲ್ಲಿ ತೊಡಗಿದ್ದನು.॥7॥

ಮೂಲಮ್ - 8

ಉಪಕಾರ್ಯಾ ಮಹಾರ್ಹಾಶ್ಚ ಪಾರ್ಥಿವಾನಾಂ ಮಹಾತ್ಮನಾಮ್ ।
ಸಾನುಗಾನಾಂ ನರಶ್ರೇಷ್ಠೋ ವ್ಯಾದಿದೇಶಮಹಾಬಲಃ ॥

ಅನುವಾದ

ಮಹಾಬಲಿ ನರಶ್ರೇಷ್ಠ ಶ್ರೀರಾಮನು ಸೇವಕರೊಂದಿಗೆ ಮಹಾತ್ಮಾ ಭೂಪಾಲಕರಿಗೆ ವಸತಿಗಾಗಿ ಬಹುಮೂಲ್ಯ ಬಿಡಾರಗಳನ್ನು ಬಿಟ್ಟು ಕೊಟ್ಟನು.॥8॥

ಮೂಲಮ್ - 9

ಏವಂ ಸುವಿಹಿತೋ ಯಜ್ಞೋ ಹಯಮೇಧೋಽಭ್ಯವರ್ತತ ।
ಲಕ್ಷ್ಮಣೇನ ಸುಗುಪ್ತಾ ಸಾ ಹಯಚರ್ಯಾ ಪ್ರವರ್ತತ ॥

ಅನುವಾದ

ಹೀಗೆ ಸುಂದರವಾಗಿ ಅಶ್ವಮೇಧ ಯಜ್ಞದ ಕಾರ್ಯ ಪ್ರಾರಂಭವಾಯಿತು ಮತ್ತು ಲಕ್ಷ್ಮಣನ ಸಂರಕ್ಷಣೆಯಲ್ಲಿ ಯಜ್ಞಾಶ್ವವು ಭೂಮಂಡಲದ ಭ್ರಮಣದ ಕಾರ್ಯವೂ ಚೆನ್ನಾಗಿ ನೆರವೇರಿತು.॥9॥

ಮೂಲಮ್ - 10

ಈದೃಶಂ ರಾಜಸಿಂಹಸ್ಯ ಯಜ್ಞಪ್ರವರಮುತ್ತಮಮ್ ।
ನಾನ್ಯಃ ಶಬ್ದೋಽಭವತ್ತತ್ರ ಹಯಮೇಧೇಮಹಾತ್ಮನಃ ॥

ಮೂಲಮ್ - 11½

ಛಂದತೋ ದೇಹಿ ದೇಹೀತಿ ಯಾವತ್ತುಷ್ಯಂತಿ ಯಾಚಕಾಃ ।
ತಾವತ್ಸರ್ವಾಣಿ ದತ್ತಾನಿ ಕ್ರತುಮುಖ್ಯೇ ಮಹಾತ್ಮನಃ ॥
ವಿವಿಧಾನಿ ಚ ಗೌಡಾನಿ ಖಾಂಡವಾನಿ ತಥೈವ ಚ ।

ಮೂಲಮ್ - 12½

ನ ನಿಃಸೃತಂ ಭವತ್ಯೋಷ್ಠಾದ್ವಚನಂ ಯಾವದರ್ಥಿನಾಮ್ ॥
ತಾವದ್ವಾನರರಕ್ಷೋಭಿರ್ದತ್ತಮೇವಾಭ್ಯದೃಶ್ಯತ ।

ಅನುವಾದ

ರಾಜಸಿಂಹ ಪರಾಕ್ರಮೀ ಮಹಾತ್ಮಾ ಶ್ರೀರಾಮನ ಆ ಶ್ರೇಷ್ಠಯಜ್ಞವು ಹೀಗೆ ಉತ್ತಮ ವಿಧಿಯಿಂದ ನಡೆಯುತ್ತಿತ್ತು. ಆ ಅಶ್ವಮೇಧ ಯಜ್ಞದಲ್ಲಿ ಯಾಚಕರು ಸಂತುಷ್ಟರಾಗುವವರೆಗೆ ಅವರ ಇಚ್ಛೆಗನುಸಾರ ಎಲ್ಲ ವಸ್ತುಗಳನ್ನು ಕೊಡಿರಿ ಎಂಬ ಒಂದೇ ಮಾತು ಎಲ್ಲೆಡೆ ಕೇಳಿ ಬರುತ್ತಿತ್ತು. ಬೇರೆ ಏನೂ ಕೇಳಿ ಬರುತ್ತಿರಲಿಲ್ಲ. ಹೀಗೆ ಮಹಾತ್ಮಾ ಶ್ರೀರಾಮನ ಶ್ರೇಷ್ಠಯಜ್ಞದಲ್ಲಿ ನಾನಾಪ್ರಕಾರದ ಬೆಲ್ಲದಿಂದ ಮಾಡಿದ ಭಕ್ಷಗಳನ್ನೂ, ಸಿಹಿಮೋದಕಗಳನ್ನು ಯಾಚಕರು ‘ಸಾಕು’ ಎಂದು ಹೇಳುವವರೆಗೆ ನಿರಂತರವಾಗಿ ಹಂಚುತ್ತಿದ್ದರು.॥10-12½॥

ಮೂಲಮ್ - 13½

ನ ಕಶ್ಚಿನ್ಮಲಿನೋ ವಾಪಿ ದೀನೋ ವಾಪ್ಯಥವಾಕೃಶಃ ॥
ತಸ್ಮಿನ್ಯಜ್ಞವರೇ ರಾಜ್ಞೋ ಹೃಷ್ಟಪುಷ್ಟಜನಾವೃತೇ ।

ಅನುವಾದ

ರಾಜಾ ಶ್ರೀರಾಮನ ಆ ಶ್ರೇಷ್ಠಯಜ್ಞದಲ್ಲಿ ಹೃಷ್ಟ-ಪುಷ್ಟ ಮನುಷ್ಯರು ನೆರೆದಿದ್ದರು. ಅಲ್ಲಿ ಯಾರೂ ಮಲಿನ, ದೀನ, ದುರ್ಬಲರು ಕಂಡು ಬರುತ್ತಿರಲಿಲ್ಲ..॥13½॥

ಮೂಲಮ್ - 14½

ಯೇ ಚ ತತ್ರಮಹಾತ್ಮಾನೋ ಮುನಯಶ್ಚಿರಜೀವಿನಃ ॥
ನಾಸ್ಮರಂಸ್ತಾದೃಶಂ ಯಜ್ಞಂ ದಾನೌಘಸಮಲಂಕೃತಮ್ ।

ಅನುವಾದ

ಆ ಯಜ್ಞದಲ್ಲಿ ಆಗಮಿಸಿದ ಚಿರಂಜೀವಿ, ಮಹಾತ್ಮಾ ಮುನಿಗಳಿಗೆ ಹಿಂದೆ ನಡೆದ ಇಂತಹ ಯಾವುದೇ ಯಜ್ಞದ ಸ್ಮರಣೆಯಾಗಲಿಲ್ಲ. ಅಲ್ಲಿ ದಾನ ವಸ್ತುಗಳು ರಾಶಿ-ರಾಶಿಯಾಗಿ ಅಲಂಕೃತವಾಗಿದ್ದವು.॥14½॥

ಮೂಲಮ್ - 15½

ಯಃ ಕೃತ್ಯವಾನ್ಸುವರ್ಣೇನಸುವರ್ಣಂ ಲಭತೇ ಸ್ಮ ಸಃ ॥
ವಿತ್ತಾರ್ಥೀ ಲಭತೇ ವಿತ್ತಂ ರತ್ನಾರ್ಥೀ ರತ್ನಮೇವ ಚ ।

ಅನುವಾದ

ಯಾರಿಗೆ ಸುವರ್ಣದ ಆವಶ್ಯಕತೆ ಇತ್ತೋ, ಅವನು ಸುವರ್ಣ ಪಡೆಯುತ್ತಿದ್ದನು. ಧನವನ್ನು ಬಯಸುವವರಿಗೆ ಧನ ಸಿಗುತ್ತಿತ್ತು. ರತ್ನವನ್ನು ಇಚ್ಛಿಸುವವರಿಗೆ ರತ್ನ ಕೊಡಲಾಗುತ್ತಿತ್ತು.॥15½॥

ಮೂಲಮ್ - 16½

ಹಿರಣ್ಯಾನಾಂ ಸುವರ್ಣಾನಾಂ ರತ್ನಾನಾಮಥ ವಾಸನಾಮ್ ॥
ಅನಿಶಂದೀಯಮಾನಾನಾಂ ರಾಶಿಃ ಸಮುಪದೃಶ್ಯತೇ ।

ಅನುವಾದ

ಅಲ್ಲಿ ನಿರಂತರ ದಾನ ಮಾಡಿದ ಬೆಳ್ಳಿ, ಬಂಗಾರ, ರತ್ನ, ವಸ್ತ್ರ ಮುಂತಾದವುಗಳ ರಾಶಿ-ರಾಶಿ ಕಂಡು ಬರುತ್ತಿದ್ದವು.॥16½॥

ಮೂಲಮ್ - 17½

ನಶಕ್ರಸ್ಯ ನ ಸೋಮಸ್ಯ ಯಮಸ್ಯ ವರುಣಸ್ಯ ಚ ॥
ಈದೃಶೋ ದೃಷ್ಚಪೂರ್ವೋ ನ ಏವಮೂಚುಸ್ತಪೋಧನಾಃ ।

ಅನುವಾದ

ಅಲ್ಲಿಗೆ ಬಂದ ತಪಸ್ವೀ ಮುನಿಗಳು - ಇಂತಹ ಯಜ್ಞವಾದರೋ ಇಂದ್ರ, ಚಂದ್ರ, ಯಮ, ವರುಣ ಇವರಲ್ಲಿಯೂ ಮೊದಲು ನೋಡಲಿಲ್ಲ ಎಂದು ಹೇಳುತ್ತಿದ್ದರು.॥17½॥

ಮೂಲಮ್ - 18½

ಸರ್ವತ್ರ ವಾನರಾಸ್ತಸ್ಥುಃ ಸರ್ವತ್ರೈವ ಚ ರಾಕ್ಷಸಾಃ ॥
ವಾಸೋಧನಾನ್ನಕಾಮೇಭ್ಯಃ ಪೂರ್ಣಹಸ್ತಾ ದದುರ್ಭೃಶಮ್ ।

ಅನುವಾದ

ವಾನರರೂ, ರಾಕ್ಷಸರೂ ಎಲ್ಲೆಡೆ ದಾನ ಕೊಡಲು ವಸ್ತುಗಳನ್ನು ಹಿಡಿದು ನಿಂತಿದ್ದರು. ವಸ್ತ್ರ, ಧನ, ಅನ್ನದ ಇಚ್ಛೆಯುಳ್ಳವರಿಗೆ ಹೆಚ್ಚೆಚ್ಚು ನೀಡುತ್ತಿದ್ದರು.॥18½॥

ಮೂಲಮ್ - 19

ಈದೃಶೋ ರಾಜಸಿಂಹಸ್ಯ ಯಜ್ಞಃ ಸರ್ವಗುಣಾನ್ವಿತಃ ।
ಸಂವತ್ಸರಮಥೋ ಸಾಗ್ರಂ ವರ್ತತೇ ನ ಚ ಹೀಯತೇ ॥

ಅನುವಾದ

ರಾಜಸಿಂಹ ಭಗವಾನ್ ಶ್ರೀರಾಮನ ಇಂತಹ ಸರ್ವಗುಣ ಸಂಪನ್ನ ಯಜ್ಞವು ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲದವರೆಗೆ ನಡೆಯುತ್ತಿತ್ತು. ಅದರಲ್ಲಿ ಯಾವುದೇ ಕೊರತೆ ಎಂದೂ ಉಂಟಾಗಲಿಲ್ಲ.॥19॥

ಮೂಲಮ್ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ತೊಂಭತ್ತೆರಡನೆಯ ಸರ್ಗ ಪೂರ್ಣವಾಯಿತು. ॥92॥

ಅನುವಾದ