[ತೊಂಭತ್ತೊಂದನೆಯ ಸರ್ಗ]
ಭಾಗಸೂಚನಾ
ಶ್ರೀರಾಮನ ಆದೇಶದಿಂದ ಅಶ್ವಮೇಧದ ಸಿದ್ಧತೆ
ಮೂಲಮ್ - 1
ಏತದಾಖ್ಯಾಯ ಕಾಕುತ್ಸ್ಥೋ ಭ್ರಾತೃಭ್ಯಾಮಮಿತಪ್ರಭಃ ।
ಲಕ್ಷ್ಮಣಂ ಪುನರೇವಾಹ ಧರ್ಮಯುಕ್ತಮಿದಂ ವಚಃ ॥
ಅನುವಾದ
ಇಬ್ಬರೂ ಸಹೋದರರಿಗೆ ಈ ಕಥೆ ಹೇಳಿ ಅಮಿತ ತೇಜಸ್ವೀ ಶ್ರೀರಾಮಚಂದ್ರನು ಲಕ್ಷ್ಮಣನಲ್ಲಿ ಪುನಃ ಹೀಗೆ ಧರ್ಮಯುಕ್ತ ಮಾತನ್ನು ಹೇಳಿದನು.॥1॥
ಮೂಲಮ್ - 2
ವಸಿಷ್ಠಂ ವಾಮದೇವಂ ಚ ಜಾಬಾಲಿಮಥ ಕಾಶ್ಯಪಮ್ ।
ದ್ವಿಜಾಂಶ್ಚ ಸರ್ವಪ್ರವರಾನಶ್ಚಮೇಧಪುರಸ್ಕೃತಾನ್ ॥
ಮೂಲಮ್ - 3
ಏತಾನ್ಸರ್ವಾನ್ಸಮಾನೀಯ ಮಂತ್ರಯಿತ್ವಾ ಚ ಲಕ್ಷ್ಮಣ ।
ಹಯಂ ಲಕ್ಷಣಸಂಪನ್ನಂವಿಮೋಕ್ಷ್ಯಾಮಿ ಸಮಾಧಿನಾ ॥
ಅನುವಾದ
ಲಕ್ಷ್ಮಣ! ಅಶ್ವಮೇಧ ಯಜ್ಞ ಮಾಡುವ ಬ್ರಾಹ್ಮಣರಲ್ಲಿ ಅಗ್ರಗಣ್ಯರಾದ ಸರ್ವಶ್ರೇಷ್ಠ ವಸಿಷ್ಠ, ವಾಮದೇವ, ಜಾಬಾಲಿ, ಕಾಶ್ಯಪ ಮೊದಲಾದ ಎಲ್ಲ ದ್ವಿಜರನ್ನು ಕರೆಸಿ, ನಾನು ಅವರಿಂದ ಸಲಹೆ ಪಡೆದು ಪೂರ್ಣ ಎಚ್ಚರಿಕೆ ಯೊಂದಿಗೆ ಶುಭಲಕ್ಷಣಗಳಿಂದ ಕೂಡಿದ ಕುದುರೆಯನ್ನು ಬಿಡುವೆನು.॥2-3॥
ಮೂಲಮ್ - 4
ತದ್ವಾಕ್ಯಂ ರಾಘವೇಣೋಕ್ತಂ ಶ್ರುತ್ವಾ ತ್ವರಿತವಿಕ್ರಮಃ ।
ದ್ವಿಜಾನ್ಸರ್ವಾನ್ಸಮಾಹೂಯ ದರ್ಶಯಾಮಾಸ ರಾಘವಮ್ ॥
ಅನುವಾದ
ರಘುನಾಥನು ಹೇಳಿದ ಮಾತನ್ನು ಕೇಳಿ ಶೀಘ್ರಗಾಮಿ ಲಕ್ಷ್ಮಣನು ಸಮಸ್ತ ಬ್ರಾಹ್ಮಣರನ್ನು ಕರೆಸಿ ಶ್ರೀರಾಮನಿಗೆ ಭೆಟ್ಟಿ ಮಾಡಿಸಿದನು.॥4॥
ಮೂಲಮ್ - 5
ತೇ ದೃಷ್ಟ್ವಾ ದೇವಸಂಕಾಶಂ ಕೃತಪಾದಾಭಿವಂದನಮ್ ।
ರಾಘವಂ ಸುದುರಾಧರ್ಷಮಾಶೀರ್ಭಿಃ ಸಮಪೂಜಯನ್ ॥
ಅನುವಾದ
ದೇವತುಲ್ಯ ತೇಜಸ್ವೀ, ಅತ್ಯಂತ ದುರ್ಜಯ ಶ್ರೀರಾಘವೇಂದ್ರನು ತಮ್ಮ ಚರಣಗಳಿಗೆ ವಂದಿಸುತ್ತಿರುವುದನ್ನು ನೋಡಿದ ಬ್ರಾಹ್ಮಣರು ಶುಭಾಶೀರ್ವಾದಗಳಿಂದ ಅವನ ಸತ್ಕಾರ ಮಾಡಿದರು.॥5॥
ಮೂಲಮ್ - 6
ಪ್ರಾಂಜಲಿಃ ಸ ತದಾ ಭೂತ್ವಾ ರಾಘವೋ ದ್ವಿಜಸತ್ತಮಾನ್ ।
ಉವಾಚ ಧರ್ಮಸಂಯುಕ್ತಮಶ್ವಮೇಧಾಶ್ರಿತಂ ವಚಃ ॥
ಅನುವಾದ
ಆಗ ರಘುಕುಲಭೂಷಣ ಶ್ರೀರಾಮನು ಕೈಮುಗಿದು ಆ ಶ್ರೇಷ್ಠಬ್ರಾಹ್ಮಣರಲ್ಲಿ ಅಶ್ವಮೇಧ ಯಜ್ಞದ ವಿಷಯದಲ್ಲಿ ಧರ್ಮಯುಕ್ತ ಶ್ರೇಷ್ಠ ಮಾತುಗಳನ್ನಾಡಿದನು.॥6॥
ಮೂಲಮ್ - 7
ತೇಽಪಿ ರಾಮಸ್ಯ ತಚ್ಛ್ರುತ್ವಾ ನಮಸ್ಕೃತ್ವಾ ವೃಷಧ್ವಜಮ್ ।
ಅಶ್ವಮೇಧಂ ದ್ವಿಜಾಃ ಸರ್ವೇ ಪೂಜಯಂತಿ ಸ್ಮ ಸರ್ವಶಃ ॥
ಅನುವಾದ
ಆ ಎಲ್ಲ ಬ್ರಾಹ್ಮಣರೂ ಶ್ರೀರಾಮನ ಮಾತನ್ನು ಕೇಳಿ ಭಗವಾನ್ ಶಂಕರನಿಗೆ ಪ್ರಣಾಮಗೈದು ಎಲ್ಲ ವಿಧದಿಂದ ಅಶ್ವಮೇಧ ಯಜ್ಞವನ್ನು ಹೊಗಳಿದರು.॥7॥
ಮೂಲಮ್ - 8
ಸ ತೇಷಾಂ ದ್ವಿಜಮುಖ್ಯಾನಾಂ ವಾಕ್ಯಮದ್ಭುತದರ್ಶನಮ್ ।
ಅಶ್ವಮೇಧಾಶ್ರಿತಂ ಶ್ರುತ್ವಾ ಭೃಶಂ ಪ್ರೀತೋಽಭವತ್ತದಾ ॥
ಅನುವಾದ
ಅಶ್ವಮೇಧ ಯಜ್ಞದ ವಿಷಯದಲ್ಲಿ ಆ ಶ್ರೇಷ್ಠ ಬ್ರಾಹ್ಮಣರ ಅದ್ಭುತ ಜ್ಞಾನದಿಂದ ಕೂಡಿದ ಮಾತನ್ನು ಕೇಳಿ ಶ್ರೀರಾಮಚಂದ್ರನಿಗೆ ಬಹಳ ಸಂತೋಷವಾಯಿತು.॥8॥
ಮೂಲಮ್ - 9
ವಿಜ್ಞಾಯ ಕರ್ಮ ತತ್ತೇಷಾಂ ರಾಮೋ ಲಕ್ಷ್ಮಣಮಬ್ರವೀತ್ ।
ಪ್ರೇಷಯಸ್ವ ಮಹಾಬಾಹೋ ಸುಗ್ರೀವಾಯಮಹಾತ್ಮನೇ ॥
ಮೂಲಮ್ - 10
ಯಥಾ ಮಹದ್ಭಿರ್ಹರಿಭಿರ್ಬಹುಭಿಶ್ಚ ವನೌಕಸಾಮ್ ।
ಸಾರ್ಧಮಾಗಚ್ಛ ಭದ್ರಂ ತೇ ಅನುಭೋಕ್ತುಂ ಮಹೋತ್ಸವಮ್ ॥
ಅನುವಾದ
ಆ ಕರ್ಮಕ್ಕಾಗಿ ಆ ಬ್ರಾಹ್ಮಣರ ಸ್ವೀಕೃತಿ ತಿಳಿದು ಶ್ರೀರಾಮನು ಲಕ್ಷ್ಮಣನಲ್ಲಿ ಹೇಳಿದನು- ಮಹಾಬಾಹೋ! ನೀನು ಮಹಾತ್ಮಾ ವಾನರರಾಜ ಸುಗ್ರೀವನಿಗೆ ಈ ಸಂದೇಶ ಕಳಿಸು - ಕಪಿಶ್ರೇಷ್ಠನೇ! ನೀನು ಬಹಳಷ್ಟು ವಿಶಾಲಕಾಯ ವನವಾಸೀ ವಾನರರೊಂದಿಗೆ ಯಜ್ಞ ಮಹೋತ್ಸವದ ಆನಂದ ಪಡೆಯಲು ಇಲ್ಲಿಗೆ ಬಂದುಬಿಡು. ನಿನಗೆ ಮಂಗಳವಾಗಲಿ.॥9-10॥
ಮೂಲಮ್ - 11
ವಿಭೀಷಣಶ್ಚ ರಕ್ಷೋಭಿಃ ಕಾಮಗೈರ್ಬಹುಭಿರ್ವೃತಃ ।
ಅಶ್ವಮೇಧಂ ಮಹಾಯಜ್ಞಮಾಯಾತ್ವತುಲವಿಕ್ರಮಃ ॥
ಅನುವಾದ
ಜೊತೆಗೆ ಅತುಲ ಪರಾಕ್ರಮಿ ವಿಭೀಷಣನೂ ಕಾಮರೂಪಿಗಳಾದ ಅನೇಕ ರಾಕ್ಷಸರೊಂದಿಗೆ ನಮ್ಮ ಮಹಾ ಅಶ್ವಮೇಧಯಜ್ಞಕ್ಕೆ ಆಗಮಿಸಬೇಕು ಎಂಬ ಈ ಸೂಚನೆಯನ್ನು ಕೊಡು.॥11॥
ಮೂಲಮ್ - 12
ರಾಜಾನಶ್ಚ ಮಹಾಭಾಗಾ ಯೇ ಮೇಪ್ರಿಯಚಿಕೀರ್ಷವಃ ।
ಸಾನುಗಾಃ ಕ್ಷಿಪ್ರಮಾಯಾಂತು ಯಜ್ಞಂ ಭೂಮಿನಿರೀಕ್ಷಕಾಃ ॥
ಅನುವಾದ
ಇದಲ್ಲದೆ ನನ್ನ ಪ್ರಿಯವನ್ನು ಮಾಡಲು ಇಚ್ಛಿಸುವ ಮಹಾರಾಜರೂ ಕೂಡ ಯಜ್ಞವನ್ನು ನೋಡಲು ಸೈನ್ಯ ಸೇವಕರೊಂದಿಗೆ ಬರಲಿ.॥12॥
ಮೂಲಮ್ - 13
ದೇಶಾಂತರಗತಾ ಯೇ ಚ ದ್ವಿಜಾಧರ್ಮಸಮಾಹಿತಾಃ ।
ಆಮಂತ್ರಯಸ್ವ ತಾನ್ ಸರ್ವಾನಶ್ಚಮೇಧಾಯ ಲಕ್ಷ್ಮಣ ॥
ಅನುವಾದ
ಲಕ್ಷ್ಮಣ! ಕಾರ್ಯವಶ ಬೇರೆ-ಬೇರೆ ದೇಶಗಳಿಗೆ ಹೋಗಿರುವ ಧರ್ಮನಿಷ್ಠ ಬ್ರಾಹ್ಮಣರೆಲ್ಲರನ್ನು ನಮ್ಮ ಅಶ್ವಮೇಧ ಯಜ್ಞಕ್ಕಾಗಿ ಆಮಂತ್ರಿಸು.॥13॥
ಮೂಲಮ್ - 14
ಋಷಯಶ್ಚ ಮಹಾಬಾಹೋ ಆಹೂಯಂತಾಂ ತಪೋಧನಾಃ ।
ದೇಶಾಂತರಗತಾಃ ಸರ್ವೇ ಸದಾರಾಶ್ಚ ದ್ವಿಜಾತಯಃ ॥
ಅನುವಾದ
ಮಹಾಬಾಹೋ! ತಪೋಧನ ಋಷಿಗಳನ್ನು, ಬೇರೆ ರಾಜ್ಯಗಳಲ್ಲಿ ವಾಸಿಸುವ ಋಷಿಗಳನ್ನು ಪತ್ನಿಯರೊಂದಿಗೆ ಕರೆದುಕೊಂಡು ಬಾ.॥14॥
ಮೂಲಮ್ - 15½
ತಥೈವ ತಾಲಾವಚರಾಸ್ತಥೈವ ನಟನರ್ತಕಾಃ ।
ಯಜ್ಞವಾಟಶ್ಚ ಸುಮಹಾನ್ ಗೋಮತ್ಯಾ ನೈಮಿಷೇವನೇ ॥
ಆಜ್ಞಾಪ್ಯತಾಂ ಮಹಾಬಾಹೋ ತದ್ಧಿ ಪುಣ್ಯಮನುತ್ತಮಮ್ ।
ಅನುವಾದ
ಮಹಾಬಾಹೋ! ತಾಳ ಬಾರಿಸುತ್ತಾ ರಂಗಭೂಮಿಯಲ್ಲಿ ಸಂಚರಿಸುವ ಸೂತ್ರಧಾರರನ್ನು, ನಟ- ನರ್ತಕರನ್ನು ಕರೆಸು. ನೈಮಿಷಾರಣ್ಯದ ಗೋಮತೀನದಿಯ ತೀರದಲ್ಲಿ ವಿಶಾಲವಾದ ಯಜ್ಞಮಂಟಪವನ್ನು ರಚಿಸುವಂತೆ ಆಜ್ಞಾಪಿಸು; ಏಕೆಂದರೆ ಆ ವನವು ಬಹಳ ಉತ್ತಮ ಮತ್ತು ಪವಿತ್ರ ಸ್ಥಾನವಾಗಿದೆ.॥15½॥
ಮೂಲಮ್ - 16
ಶಾಂತಯಶ್ಚ ಮಹಾಬಾಹೋ ಪ್ರವರ್ತಂತಾಂ ಸಮಂತತಃ ॥
ಮೂಲಮ್ - 17
ಶತಶಶ್ಚಾಪಿ ಧರ್ಮಜ್ಞಾಃ ಕ್ರತುಮುಖ್ಯಮನುತ್ತಮಮ್ ।
ಅನುಭೂಯಮಹಾಯಜ್ಞಂ ನೈಮಿಷೇ ರಘುನಂದನ ॥
ಅನುವಾದ
ಮಹಾಬಾಹು ರಘುನಂದನ! ಅಲ್ಲಿ ಯಜ್ಞವು ನಿರ್ವಿಘ್ನವಾಗಿ ನೆರವೇರಲು ಎಲ್ಲೆಡೆ ಶಾಂತಿ ವಿಧಾನ ಪ್ರಾರಂಭ ಮಾಡಿಸು. ನೈಮಿಷಾರಣ್ಯದಲ್ಲಿ ನೂರಾರು ಧರ್ಮಜ್ಞ ಪುರುಷರು ಪರಮೋತ್ತಮ ಮಹಾಯಜ್ಞವನ್ನು ನೋಡಿ ಕೃತಾರ್ಥರಾಗಲಿ.॥16-17॥
ಮೂಲಮ್ - 18
ತುಷ್ಟಃ ಪುಷ್ಟಶ್ಚ ಸರ್ವೋಽಸೌ ಮಾನಿತಶ್ಚ ಯಥಾವಿಧಿ ।
ಪ್ರತಿಯಾಸ್ಯತಿ ಧರ್ಮಜ್ಞ ಶೀಘ್ರಮಾಮಂತ್ರ್ಯತಾಂ ಜನಃ ॥
ಅನುವಾದ
ಧರ್ಮಜ್ಞ ಲಕ್ಷ್ಮಣ- ಶೀಘ್ರವಾಗಿ ಜನರನ್ನು ಆಮಂತ್ರಿಸು ಮತ್ತು ಬರುವವರೆಲ್ಲರೂ ವಿಧಿವತ್ತಾಗಿ ತುಷ್ಟ, ಪುಷ್ಟ ಹಾಗೂ ಸಮ್ಮಾನಿತರಾಗಿ ಮರಳಿ ಹೋಗಲಿ.॥18॥
ಮೂಲಮ್ - 19½
ಶತಂ ವಾಹಸಹಸ್ರಾಣಾಂ ತಂಡುಲಾನಾಂವಪುಷ್ಮತಾಮ್ ।
ಅಯುತಂ ತಿಲಮುದ್ಗಸ್ಯ ಪ್ರಯಾತ್ವಗ್ರೇ ಮಹಾಬಲ ॥
ಚಣಕಾನಾಂ ಕುಲಿತ್ಥಾನಾಂ ಮಾಷಾಣಾಂ ಲವಣಸ್ಯ ಚ ।
ಅನುವಾದ
ಮಹಾಬಲೀ ಸುಮಿತ್ರಾಕುಮಾರ! ಒಂದು ಲಕ್ಷ ಆನೆ, ಕುದುರೆ, ಎತ್ತುಗಳು ಅಕ್ಕಿಯ ಮೂಟೆಗಳನ್ನು ಹೊತ್ತುಕೊಂಡು ಹೋಗಲಿ, ಹತ್ತುಸಾವಿರ ಪಶುಗಳು, ಎಳ್ಳು, ಕಡಲೆ, ಹುರುಳಿ, ಉದ್ದು ಮತ್ತು ಉಪ್ಪಿನ ಮೂಟೆಗಳನ್ನು ಎತ್ತಿಕೊಂಡು ಹೋಗಲಿ.॥19½॥
ಮೂಲಮ್ - 20
ಅತೋಽನುರೂಪಂ ಸ್ನೇಹಂ ಚ ಗಂಧಂಸಂಕ್ಷಿಪ್ತಮೇವ ಚ ॥
ಮೂಲಮ್ - 21
ಸುವರ್ಣಕೋಟ್ಯೋ ಬಹುಲಾ ಹಿರಣ್ಯಸ್ಯ ಶತೋತ್ತರಾಃ ।
ಅಗ್ರತೋ ಭರತಃ ಕೃತ್ವಾ ಗಚ್ಛತ್ವಗ್ರೇ ಸಮಾಧಿನಾ ॥
ಅನುವಾದ
ಈ ಧಾನ್ಯಗಳಿಗನುರೂಪವಾಗಿ ಎಣ್ಣೆ, ತುಪ್ಪ, ಮೊಸರು, ಚಂದನ ಕಟ್ಟಿಗೆ, ಸುಗಂಧಿತ ಪದಾರ್ಥಗಳನ್ನು ಕಳಿಸಬೇಕು. ಭರತನು ನೂರು ಕೋಟಿಗಿಂತಲೂ ಹೆಚ್ಚಾದ ಸ್ವರ್ಣಮುದ್ರೆಗಳನ್ನು, ಬೆಳ್ಳಿಯ ನಾಣ್ಯಗಳನ್ನು ಜೊತೆಗೆ ತೆಗೆದುಕೊಂಡು ಏಕಾಗ್ರಚಿತ್ತನಾಗಿ ಮೊದಲೇ ಪ್ರಯಾಣ ಮಾಡಲಿ.॥20-21॥
ಮೂಲಮ್ - 22
ಅಂತರಾಪಣವೀಥ್ಯಶ್ಚ ಸರ್ವೇ ಚ ನಟನರ್ತಕಾಃ ।
ಸೂದಾ ನಾರ್ಯಶ್ಚ ಬಹವೋ ನಿತ್ಯಂ ಯೌವನಶಾಲಿನಃ ॥
ಅನುವಾದ
ದಾರಿಯಲ್ಲಿ ಆವಶ್ಯಕ ವಸ್ತುಗಳ ಕ್ರಯ- ವಿಕ್ರಯಕ್ಕಾಗಿ ಅಲ್ಲಲ್ಲಿ ಅಂಗಡಿಗಳು ಇರಲಿ, ಆದ್ದರಿಂದ ವೈದ್ಯರು ಮತ್ತು ವ್ಯವಸಾಯೀ ಜನರು ಪ್ರಯಾಣ ಮಾಡಲಿ. ಎಲ್ಲ ನಟ-ನರ್ತಕರೂ ಹೋಗಲಿ. ಅನೇಕ ಅಡಿಗೆಯವರು ಹಾಗೂ ಸುಂದರ ಯುವತಿಯರೂ ಪ್ರಯಾಣ ಮಾಡಲಿ.॥22॥
ಮೂಲಮ್ - 23
ಭರತೇನ ತು ಸಾರ್ಧಂ ತೇ ಯಾಂತು ಸೈನ್ಯಾನಿ ಜಾಗ್ರತಃ ।
ನೈಗಮಾನ್ಬಾಲವೃದ್ಧಾಂಶ್ಚ ದ್ವಿಜಾಂಶ್ಚ ಸುಸಮಾಹಿತಾನ್ ॥
ಮೂಲಮ್ - 24
ಕರ್ಮಾಂತಿಕಾನ್ವರ್ಧಕಿನಃ ಕೋಶಾಧ್ಯಕ್ಷಾಂಶ ನೈಗಮಾನ್ ।
ಮಮ ಮಾತೃಸ್ತಥಾ ಸರ್ವಾಃ ಕುಮಾರಾಂತಃಪುರಾಣಿ ಚ ॥
ಮೂಲಮ್ - 25
ಕಾಂಚನೀಂ ಮಮ ಪತ್ನೀಂ ಚ ದೀಕ್ಷಾಯಾಂ ಜ್ಞಾಂಶ್ಚ ಕರ್ಮಣಿ ।
ಅಗ್ರತೋ ಭರತಃ ಕೃತ್ವಾ ಗಚ್ಛತ್ವಗ್ರೇ ಮಹಾಯಶಾಃ ॥
ಅನುವಾದ
ಭರತನ ಹಿಂದೆ-ಹಿಂದೆ ಸೈನ್ಯವೂ ಹೋಗಲಿ. ಮಹಾಯಶಸ್ವೀ ಭರತನು ಶಾಸ್ತ್ರಗಳನ್ನು ತಿಳಿದ ವಿದ್ವಾಂಸರನ್ನು, ಬಾಲಕರನ್ನು, ವೃದ್ಧರನ್ನು, ಏಕಾಗ್ರಚಿತ್ತರಾದ ಬ್ರಾಹ್ಮಣರನ್ನು, ಕೆಲಸಗಾರರನ್ನು ಬಡಗಿಗಳನ್ನೂ, ಕೋಶಾಧ್ಯಕ್ಷರನ್ನು, ವೈದಿಕರನ್ನು, ನಮ್ಮ ತಾಯಂದಿರನ್ನು, ಕುಮಾರರನ್ನು, ಭರತನೇ ಮೊದಲಾದವರ ಅಂತಃಪುರದಲ್ಲಿರುವ ರಾಣೀವಾಸದವರನ್ನು, ನನ್ನ ಪತ್ನಿಯ ಸ್ವರ್ಣಪ್ರತಿಮೆಯನ್ನು ಹಾಗೂ ಯಜ್ಞಕರ್ಮದ ದೀಕ್ಷೆಯನ್ನು ತಿಳಿದ ಬ್ರಾಹ್ಮಣರನ್ನು ಕರೆದುಕೊಂಡು ಮುಂದೆ ಹೋಗಲಿ.॥23-25॥
ಮೂಲಮ್ - 26½
ಉಪಕಾರ್ಯಾ ಮಹಾರ್ಹಾಶ್ಚ ಪಾರ್ಥಿವಾನಾಂಮಹೌಜಸಾಮ್ ।
ಸಾನುಗಾನಾಂ ನರಶ್ರೇಷ್ಠೋ ವ್ಯಾದಿದೇಶಮಹಾಬಲಃ ॥
ಅನ್ನ ಪಾನಾನಿ ವಸ್ತ್ರಾಣಿ ಅನುಗಾನಾಂ ಮಹಾತ್ಮನಾಮ್ ।
ಅನುವಾದ
ಬಳಿಕ ಮಹಾಬಲೀ ನರಶ್ರೇಷ್ಠ ಶ್ರೀರಾಮನು ಸೇವಕರ ಸಹಿತ ಮಹಾತೇಜಸ್ವೀ ರಾಜರುಗಳು ಉಳಿದುಕೊಳ್ಳಲು ಬಹುಮೂಲ್ಯ ವಾಸಸ್ಥಾನ ರಚಿಸಲು ಆದೇಶ ಕೊಟ್ಟನು ಹಾಗೂ ಸೇವಕರಸಹಿತ ಆ ಮಹಾತ್ಮಾ ರಾಜರಿಗಾಗಿ ಊಟ-ತಿಂಡಿ ಮತ್ತು ವಸಾದಿಗಳ ವ್ಯವಸ್ಥೆ ಮಾಡಿಸಿದನು.॥26½॥
ಮೂಲಮ್ - 27
ಭರತಃ ಸ ತದಾ ಯಾತಃ ಶತ್ರುಘ್ನಸಹಿತಸ್ತದಾ ॥
ಮೂಲಮ್ - 28
ವಾನರಾಶ್ಚ ಮಹಾತ್ಮಾನಃ ಸುಗ್ರೀವಸಹಿತಾಸ್ತದಾ ।
ವಿಪ್ರಾಣಾಂ ಪ್ರವರಾಃ ಸರ್ವೇಚಕ್ರುಶ್ಚ ಪರಿವೇಷಣಮ್ ॥
ಅನುವಾದ
ಅನಂತರ ಶತ್ರುಘ್ನಸಹಿತ ಭರತನು ನೈಮಿಷಾರಣ್ಯಕ್ಕೆ ಪ್ರಯಾಣ ಮಾಡಿದನು. ಆಗ ಅಲ್ಲಿ ವಾನರರೊಂದಿಗೆ ಸುಗ್ರೀವನು ಶ್ರೇಷ್ಠ ಬ್ರಾಹ್ಮಣರಿಗೆಲ್ಲರಿಗೆ ಬಡಿಸುವ ಕಾರ್ಯ ಮಾಡುತ್ತಿದ್ದನು.॥27-28॥
ಮೂಲಮ್ - 29
ವಿಭೀಷಣಶ್ಚ ರಕ್ಷೋಭಿಃ ಸ್ತ್ರೀಭಿಶ್ಚ ಬಹುಭಿರ್ವೃತಃ ।
ಋಷೀಣಾಮುಗ್ರತಪಸಾಂ ಪೂಜಾಂ ಚಕ್ರೇ ಮಹಾತ್ಮನಾಮ್ ॥
ಅನುವಾದ
ಪತ್ನಿಯರು ಹಾಗೂ ಅನೇಕ ರಾಕ್ಷಸರೊಂದಿಗೆ ವಿಭೀಷಣನು ಉಗ್ರತಪಸ್ವೀ ಮಹಾತ್ಮಾ ಮುನಿಗಳು ಸ್ವಾಗತ ಸತ್ಕಾರದ ಕಾರ್ಯವನ್ನು ನೆರವೇರಿ ಸುತ್ತಿದ್ದನು.॥29॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ತೊಂಭತ್ತೊಂದನೆಯ ಸರ್ಗ ಪೂರ್ಣವಾಯಿತು.॥91॥