०८९ पुरूरव-उत्पत्तिः

[ಎಂಭತ್ತೊಂಭತ್ತನೆಯ ಸರ್ಗ]

ಭಾಗಸೂಚನಾ

ಬುಧ ಮತ್ತು ಇಲಾಳ ಸಮಾಗಮ, ಪುರೂರವನ ಉತ್ಪತ್ತಿ

ಮೂಲಮ್ - 1

ಶ್ರುತ್ವಾ ಕಿಂಪುರುಷೋತ್ಪತ್ತಿಂ ಲಕ್ಷ್ಮಣೋ ಭರತಸ್ತಥಾ ।
ಆಶ್ಚರ್ಯಮಿತಿ ಚಾಬ್ರೂತಾಮುಭೌ ರಾಮಂ ಜನೇಶ್ವರಮ್ ॥

ಅನುವಾದ

ಕಿಂಪುರುಷ ಜಾತಿಯ ಉತ್ಪತ್ತಿಯ ಈ ಪ್ರಸಂಗವನ್ನು ಕೇಳಿ ಲಕ್ಷ್ಮಣ ಮತ್ತು ಭರತರು ಮಹಾರಾಜಾ ಶ್ರೀರಾಮನಲ್ಲಿ ಇದಾದರೋ ಬಹಳ ಆಶ್ಚರ್ಯದ ಮಾತಾಗಿದೆ ಎಂದು ಹೇಳಿದರು.॥1॥

ಮೂಲಮ್ - 2

ಅಥ ರಾಮಃ ಕಥಾಮೇತಾಂ ಭೂಯ ಏವ ಮಹಾಯಶಾಃ ।
ಕಥಯಾಮಾಸ ಧರ್ಮಾತ್ಮಾ ಪ್ರಜಾಪತಿಸುತಸ್ಯ ವೈ ॥

ಅನುವಾದ

ಅನಂತರ ಮಹಾಯಶಸ್ವೀ ಧರ್ಮಾತ್ಮ ಶ್ರೀರಾಮನು ಪ್ರಜಾಪತಿ ಕರ್ದಮ ಪುತ್ರ ಇಲನ ಕಥೆಯನ್ನು ಹೀಗೆ ಮುಂದುವರಿಸಿದನು.॥2॥

ಮೂಲಮ್ - 3

ಸರ್ವಾಸ್ತಾ ವಿಹೃತಾ ದೃಷ್ಟ್ವಾ ಕಿನ್ನರೀರ್ಋಷಿಸತ್ತಮಃ ।
ಉವಾಚ ರೂಪಸಂಪನ್ನಾಂ ತಾಂ ಸ್ತ್ರಿಯಂ ಪ್ರಹಸನ್ನಿವ ॥

ಅನುವಾದ

ಆ ಎಲ್ಲ ಕಿನ್ನರಿಯರು ಪರ್ವತದ ತಪ್ಪಲಿಗೆ ಹೊರಟುಹೋದುದನ್ನು ನೋಡಿ ಮುನಿಶ್ರೇಷ್ಠ ಬುಧನು ಆ ರೂಪವತಿ ಸ್ತ್ರೀಯಲ್ಲಿ ನಗುತ್ತಾ ಹೇಳಿದನ.॥3॥

ಮೂಲಮ್ - 4

ಸೋಮಸ್ಯಾಹಂಸುದಯಿತಃ ಸುತಃ ಸುರುಚಿರಾನನೇ ।
ಭಜಸ್ವ ಮಾಂ ವರಾರೋಹೇ ಭಕ್ತ್ಯಾ ಸ್ನಿಗ್ಧೇನ ಚಕ್ಷುಷಾ ॥

ಅನುವಾದ

ಸುಮುಖಿ! ನಾನು ಸೋಮ ದೇವನ ಪರಪ್ರಿಯ ಪುತ್ರನಾಗಿದ್ದೇನೆ. ವರಾರೋಹೇ! ನನ್ನನ್ನು ಅನುರಾಗ ಮತ್ತು ಸ್ನೇಹ ತುಂಬಿದ ದೃಷ್ಟಿಯಿಂದ ನೋಡಿ ತನ್ನವನನ್ನಾಗಿಸಿಕೋ.॥4॥

ಮೂಲಮ್ - 5

ತಸ್ಯ ತದ್ವಚನಂ ಶ್ರುತ್ವಾ ಶೂನ್ಯೇ ಸ್ವಜನವರ್ಜಿತೇ ।
ಇಲಾ ಸುರುಚಿರಪ್ರಖ್ಯಂ ಪ್ರತ್ಯುವಾಚ ಮಹಾಪ್ರಭಮ್ ॥

ಅನುವಾದ

ಸ್ವಜನ ರಹಿತನಾದ ನಿರ್ಜನ ಸ್ಥಾನದಲ್ಲಿ ಬುಧನ ಮಾತನ್ನು ಕೇಳಿ ಇಲಾ ಆ ಪರಮ ಸುಂದರ ಮಹಾತೇಜಸ್ವೀ ಬುಧನಲ್ಲಿ ಹೀಗೆ ನುಡಿದಳು.॥5॥

ಮೂಲಮ್ - 6

ಅಹಂ ಕಾಮಚರೀ ಸೌಮ್ಯ ತವಾಸ್ಮಿ ವಶವರ್ತಿನೀ ।
ಪ್ರಶಾಧಿ ಮಾಂ ಸೋಮಸುತ ಯಥೇಚ್ಛಸಿ ತಥಾ ಕುರು ॥

ಅನುವಾದ

ಸೌಮ್ಯ ಸೋಮಕುಮಾರ! ನಾನು ಸ್ವೇಚ್ಛೆಯಿಂದ ಸಂಚರಿಸುವ ಸ್ವತಂತ್ರಳಾಗಿದ್ದೇನೆ, ಆದರೆ ಈಗ ತಮ್ಮ ಆಜ್ಞೆಗೆ ಅಧೀನನಾಗಿದ್ದೇನೆ. ಆದ್ದರಿಂದ ನನಗೆ ಉಚಿತ ಸೇವೆಗಾಗಿ ಆದೇಶ ಕೊಡಿ ಮತ್ತು ತಮ್ಮ ಇಚ್ಛೆಯಂತೆ ಮಾಡಿರಿ.॥6॥

ಮೂಲಮ್ - 7

ತಸ್ಯಾಸ್ತದದ್ಭುತಪ್ರಖ್ಯಂ ಶ್ರುತ್ವಾ ಹರ್ಷಮುಪಾಗತಃ ।
ಸ ವೈ ಕಾಮೀ ಸಹ ತಯಾ ರೇಮೇ ಚಂದ್ರಮಸಃ ಸುತಃ ॥

ಅನುವಾದ

ಇಲಾಳ ಈ ಅದ್ಭುತ ವಚನ ಕೇಳಿ ಕಾಮಾಸಕ್ತ ಸೋಮಪುತ್ರನಿಗೆ ಬಹಳ ಹರ್ಷವಾಯಿತು. ಅವನು ಆಕೆಯೊಂದಿಗೆ ರಮಿಸತೊಡಗಿದನು.॥7॥

ಮೂಲಮ್ - 8

ಬುಧಸ್ಯ ಮಾಧವೋ ಮಾಸಸ್ತಾಮಿಲಾಂ ರುಚಿರಾನನಾಮ್ ।
ಗತೋ ರಮಯತೋತ್ಯರ್ಥಂ ಕ್ಷಣವತ್ತಸ್ಯ ಕಾಮಿನಃ ॥

ಅನುವಾದ

ಮನೋಹರ ಮುಖವುಳ್ಳ ಇಲಾಳೊಂದಿಗೆ ಅತಿಶಯ ರಮಿಸುತ್ತಾ ಬುಧನ ವೈಶಾಖಮಾಸವು ಒಂದು ಕ್ಷಣದಂತೆ ಕಳೆದುಹೋಯಿತು.॥8॥

ಮೂಲಮ್ - 9

ಅಥ ಮಾಸೇ ತು ಸಂಪೂರ್ಣೇ ಪೂರ್ಣೇಂದುಸದೃಶಾನನಃ ।
ಪ್ರಜಾಪತಿಸುತಃ ಶ್ರೀಮಾನ್ ಶಯನೇ ಪ್ರತ್ಯಬುಧ್ಯತ ॥

ಅನುವಾದ

ಒಂದು ತಿಂಗಳು ಪೂರ್ಣವಾದಾಗ ಚಂದ್ರನಂತೆ ಮುಖವುಳ್ಳ ಪ್ರಜಾಪತಿ ಪುತ್ರ ಶ್ರೀಮಾನ್ ಇಲನು ತನ್ನ ಶಯ್ಯೆಯಿಂದ ಎದ್ದನು.॥9॥

ಮೂಲಮ್ - 10

ಸೋಽಪಶ್ಯತ್ಸೋಮಜಂ ತತ್ರ ತಪಂತಂ ಸಲಿಲಾಶಯೇ ।
ಊರ್ಧ್ವಬಾಹುಂ ನಿರಾಲಂಬಂ ತಂ ರಾಜಾಪ್ರತ್ಯಭಾಷತ ॥

ಅನುವಾದ

ಸೋಮಪುತ್ರ ಬುಧನು ಅಲ್ಲಿ ಜಲಾಶಯದಲ್ಲಿ ಭುಜಗಳನ್ನು ಮೇಲಕ್ಕೆತ್ತಿ, ನಿರಾಧಾರವಾಗಿ ನಿಂತು ತಪಸ್ಸು ಮಾಡುತ್ತಿರುವುದನ್ನು ನೋಡಿ, ಇಲ ರಾಜನು ಬುಧನಲ್ಲಿ ಕೇಳಿದನು.॥10॥

ಮೂಲಮ್ - 11

ಭಗವನ್ ಪರ್ವತಂ ದುರ್ಗಂ ಪ್ರವಿಷ್ಟೋಸ್ಮಿ ಸಹಾನುಗಃ ।
ನ ಚ ಪಶ್ಯಾಮಿ ತತ್ಸೈನ್ಯಂ ಕ್ವ ನು ತೇ ಮಾಮಕಾ ಗತಾಃ ॥

ಅನುವಾದ

ಪೂಜ್ಯರೇ! ನಾನು ನನ್ನ ಸೇವಕರೊಂದಿಗೆ ದುರ್ಗಮ ಪರ್ವತಕ್ಕೆ ಬಂದಿದ್ದೆ, ಆದರೆ ಇಲ್ಲಿ ಆ ಸೈನ್ಯವು ನನಗೆ ಕಂಡುಬರುವುದಿಲ್ಲ. ನನ್ನ ಸೈನಿಕರು ಎಲ್ಲಿಗೆ ಹೋದರೋ ತಿಳಿಯದು.॥11॥

ಮೂಲಮ್ - 12

ತಚ್ಛ್ರುತ್ವಾ ತಸ್ಯ ರಾಜರ್ಷೇರ್ನಷ್ಟಸಂಜ್ಞಸ್ಯ ಭಾಷಿತಮ್ ।
ಪ್ರತ್ಯುವಾಚ ಶುಭಂ ವಾಕ್ಯಂ ಸಾಂತ್ವಯನ್ಪರಯಾ ಗಿರಾ ॥

ಅನುವಾದ

ರಾಜರ್ಷಿ ಇಲನ ಸ್ತ್ರೀತ್ವದ ವಿಷಯದ ಸ್ಮೃತಿ ನಾಶವಾಗಿತ್ತು. ಅವನ ಮಾತನ್ನು ಕೇಳಿ ಬುಧನು ಅವನನ್ನು ಸಾಂತ್ವನ ಪಡಿಸುತ್ತಾ ಇಂತೆಂದನು.॥12॥

ಮೂಲಮ್ - 13

ಅಶ್ಮವರ್ಷೇಣ ಮಹತಾ ಭೃತ್ಯಾಸ್ತೇ ವಿನಿಪಾತಿತಾಃ ।
ತ್ವಂ ಚಾಶ್ರಮಪದೇ ಸುಪ್ತೋ ವಾತವರ್ಷಭಯಾರ್ದಿತಃ ॥

ಅನುವಾದ

ರಾಜನೇ! ನಿಮ್ಮ ಎಲ್ಲ ಸೇವಕರು ಆಲಿಕಲ್ಲಿನ ಭಾರೀ ಮಳೆಯಿಂದ ಸತ್ತುಹೋದರು. ನೀನೂ ಕೂಡ ಚಂಡಮಾರುತದ ನೀರಿನಿಂದ ಭಯಗೊಂಡು ಈ ಆಶ್ರಮಕ್ಕೆ ಬಂದು ಮಲಗಿದ್ದೆ.॥13॥

ಮೂಲಮ್ - 14

ಸಮಾಶ್ವಸಿಹಿ ಭದ್ರಂ ತೇ ನಿರ್ಭಯೋ ವಿಗತಜ್ವರಃ ।
ಲಮೂಲಾಶನೋ ವೀರ ನಿವಸೇಹ ಯಥಾಸುಖಮ್ ॥

ಅನುವಾದ

ವೀರನೇ! ಈಗ ನೀನು ಧೈರ್ಯ ವಹಿಸು. ನಿನಗೆ ಮಂಗಳವಾಗಲಿ. ನೀನು ನಿರ್ಭಯನಾಗಿ, ನಿಶ್ಚಿಂತವಾಗಿ ಫಲ-ಮೂಲಗಳನ್ನು ತಿನ್ನುತ್ತಾ ಇಲ್ಲಿ ಸುಖವಾಗಿ ವಾಸಿಸು.॥14॥

ಮೂಲಮ್ - 15

ಸ ರಾಜಾ ತೇನ ವಾಕ್ಯೇನ ಪ್ರತ್ಯಾಶ್ವಸ್ತೋಮಹಾಮತಿಃ ।
ಪ್ರತ್ಯುವಾಚ ತತೋ ವಾಕ್ಯಂ ದೀನೋ ಭೃತ್ಯಜನಕ್ಷಯಾತ್ ॥

ಅನುವಾದ

ಬುಧನ ಈ ಮಾತಿನಿಂದ ಪರಮ ಬುದ್ಧಿವಂತ ರಾಜಾ ಇಲನಿಗೆ ಬಹಳ ಆಶ್ವಾಸನೆ ದೊರಕಿದರೂ ತನ್ನ ಸೇವಕರು ನಾಶವಾಗಿದ್ದರಿಂದ ಬಹಳ ದುಃಖಿಯಾಗಿದ್ದನು, ಆದ್ದರಿಂದ ಅವನು ಇಂತೆಂದನು.॥15॥

ಮೂಲಮ್ - 16

ತ್ಯಕ್ಷ್ಯಾಮ್ಯಹಂ ಸ್ವಕಂ ರಾಜ್ಯಂ ನಾಹಂ ಭೃತ್ಯೈರ್ವಿನಾಕೃತಃ ।
ವರ್ತಯೇಯಂ ಕ್ಷಣಂ ಬ್ರಹ್ಮನ್ ಸಮನುಜ್ಞಾತುಮರ್ಹಸಿ ॥

ಅನುವಾದ

ಬ್ರಹ್ಮನ್! ನಾನು ಸೇವಕರಿಂದ ರಹಿತನಾಗಿದ್ದರೂ ರಾಜ್ಯವನ್ನು ತ್ಯಾಗ ಮಾಡಲಾರೆನು. ಈಗ ಕ್ಷಣ ಮಾತ್ರವೂ ನಾನು ಇಲ್ಲಿ ಇರಲಾರೆ, ಆದ್ದರಿಂದ ನನಗೆ ಹೋಗಲು ಅಪ್ಪಣೆ ಕೊಡಿರಿ.॥16॥

ಮೂಲಮ್ - 17

ಸುತೋ ಧರ್ಮಪರೋ ಬ್ರಹ್ಮನ್ ಜ್ಯೇಷ್ಠೋ ಮಮ ಮಹಾಯಶಾಃ ।
ಶಶಬಿಂದುರಿತಿ ಖ್ಯಾತಃ ಸ ಮೇ ರಾಜ್ಯಂ ಪ್ರಪತ್ಸ್ಯತೇ ॥

ಅನುವಾದ

ಬ್ರಹ್ಮನ್! ನನ್ನ ಧರ್ಮಪರಾಯಣ ಜೇಷ್ಠ ಪುತ್ರನು ಯಶಸ್ವಿಯಾಗಿದ್ದಾನೆ. ಶಶಬಿಂದು ಅವನ ಹೆಸರು. ನಾನು ಅಲ್ಲಿಗೆ ಹೋಗಿ ಅವನಿಗೆ ಪಟ್ಟಾಭಿಷೇಕ ಮಾಡಿದಾಗಲೇ ಅವನು ನನ್ನ ರಾಜ್ಯವನ್ನು ಸ್ವೀಕರಿಸುವನ.॥17॥

ಮೂಲಮ್ - 18

ನಹಿ ಶಕ್ಷ್ಯಾಮ್ಯಹಂ ಹಿತ್ವಾ ಭೃತ್ಯದಾರಾನ್ಸುಖಾನ್ವಿತಾನ್ ।
ಪ್ರತಿವಕ್ತುಂ ಮಹಾತೇಜಃ ಕಿಂಚಿದಪ್ಯಶುಭಂ ವಚಃ ॥

ಅನುವಾದ

ಮಹಾತೇಜಸ್ವೀ ಮುನೇ! ದೇಶದಲ್ಲಿರುವ ನನ್ನ ಸೇವಕರು, ಪತ್ನೀ, ಪುತ್ರ ಮೊದಲಾದ ಪರಿವಾರದ ಜನರನ್ನು ಬಿಟ್ಟು ನಾನು ಇಲ್ಲಿ ಇರಲಾರೆ. ಅದರಿಂದ ಸ್ವಜನರನ್ನು ಅಗಲಿ ನಾನು ದುಃಖದಿಂದ ಇರಲು ವಿವಶನಾಗುವಂತಹ ಅಶುಭ ಮಾತನ್ನಾಡಬೇಡಿ.॥18॥

ಮೂಲಮ್ - 19

ತಥಾ ಬ್ರುವತಿ ರಾಜೇಂದ್ರೇ ಬುಧಃ ಪರಮಮದ್ಭುತಮ್ ।
ಸಾಂತ್ವಪೂರ್ವಮಥೋವಾಚ ವಾಸಸ್ತ ಇಹ ರೋಚತಾಮ್ ॥

ಮೂಲಮ್ - 20

ನ ಸಂತಾಪಸ್ತ್ವಯಾ ಕಾರ್ಯಃ ಕಾರ್ದಮೇಯ ಮಹಾಬಲ ।
ಸಂವತ್ಸರೋಷಿತಸ್ಯೇಹ ಕಾರಯಿಷ್ಯಾಮಿ ತೇ ಹಿತಮ್ ॥

ಅನುವಾದ

ರಾಜೇಂದ್ರ ಇಲನು ಹೀಗೆ ಹೇಳಿದಾಗ ಬುಧನು ಅವನನ್ನು ಸಾಂತ್ವನಪಡಿಸುತ್ತಾ ಅತ್ಯಂತ ಅದ್ಭುತವಾದ ಮಾತನ್ನು ಹೇಳಿದನು - ರಾಜನೇ! ನೀನು ಸಂತೋಷವಾಗಿ ಇಲ್ಲಿ ಇರಲು ಸ್ವೀಕರಿಸು. ಕರ್ದಮಪುತ್ರನೇ! ನೀನು ಸಂತಾಪ ಪಡಬೇಡ. ನೀನು ಒಂದು ವರ್ಷದವರೆಗೆ ಇಲ್ಲಿ ವಾಸಿಸಿದಾಗ ನಾನು ನಿನ್ನ ಹಿತಸಾಧನೆ ಮಾಡುವೆನು.॥19-20॥

ಮೂಲಮ್ - 21

ತಸ್ಯ ತದ್ವಚನಂ ಶ್ರುತ್ವಾ ಬುಧಸ್ಯಾಕ್ಲಿಷ್ಟಕರ್ಮಣಃ ।
ವಾಸಾಯ ವಿದಧೇ ಬುದ್ಧಿಂ ಯದುಕ್ತಂ ಬ್ರಹ್ಮವಾದಿನಾ ॥

ಅನುವಾದ

ಪುಣ್ಯಕರ್ಮಾ ಬುಧನ ಮಾತನ್ನು ಕೇಳಿ ಬ್ರಹ್ಮವಾದೀ ಮಹಾತ್ಮನ ಮಾತಿನಂತೆ ರಾಜನು ಅಲ್ಲಿ ಇರಲು ನಿಶ್ಚಯಿಸಿದನು.॥21॥

ಮೂಲಮ್ - 22

ಮಾಸಂ ಸ ಸ್ತ್ರೀ ತದಾ ಭೂತ್ವಾ ರಮಯತ್ಯನಿಶಂ ಸದಾ ।
ಮಾಸಂ ಪುರುಷಭಾವೇನಧರ್ಮಬುದ್ಧಿಂ ಚಕಾರ ಸಃ ॥

ಅನುವಾದ

ಅವನು ಒಂದು ತಿಂಗಳವರೆಗೆ ಸ್ತ್ರೀಯಾಗಿದ್ದು ನಿರಂತರ ಬುಧನೊಂದಿಗೆ ರಮಿಸುತ್ತಾ ಮತ್ತೆ ಒಂದು ತಿಂಗಳು ಪುರುಷನಾಗಿ ಧರ್ಮಾನುಷ್ಠಾನದಲ್ಲಿ ಮನಸ್ಸು ತೊಡಗಿಸುತ್ತಿದ್ದನು.॥22॥

ಮೂಲಮ್ - 23

ತತಃ ಸಾ ನವಮೇ ಮಾಸಿ ಇಲಾ ಸೋಮಸುತಾತ್ಸುತಮ್ ।
ಜನಯಾಮಾಸ ಸುಶ್ರೋಣೀ ಪುರೂರವಸಮೂರ್ಜಿತಮ್ ॥

ಅನುವಾದ

ಅನಂತರ ಒಂಭತ್ತನೆಯ ತಿಂಗಳಲ್ಲಿ ಸುಂದರೀ ಇಲಾಳು ಸೋಮಪುತ್ರ ಬುಧನ ಒಬ್ಬ ಪುತ್ರನಿಗೆ ಜನ್ಮ ನೀಡಿದಳು. ಅವನ ಹೆಸರು ಪುರೂರವ ಎಂದಿದ್ದು, ಬಹಳ ತೇಜಸ್ವೀ ಮತ್ತು ಬಲವಂತನಾಗಿದ್ದನು.॥23॥

ಮೂಲಮ್ - 24

ಜಾತಮಾತ್ರೇ ತು ಸುಶ್ರೋಣೀ ಪಿತುರ್ಹಸ್ತೇ ನ್ಯವೇಶಯತ್ ।
ಬುಧಸ್ಯ ಸಮವರ್ಣಂ ಚ ಇಲಾ ಪುತ್ರಂಮಹಾಬಲಮ್ ॥

ಅನುವಾದ

ಆಮಹಾಬಲೀ ಪುತ್ರನ ಅಂಗಕಾಂತಿಯು ಬುಧನಂತೆ ಇತ್ತು. ಅವನುಹುಟ್ಟುತ್ತಲೇ ಉಪನಯನಕ್ಕೆ ಯೋಗ್ಯವಯಸ್ಸಿನ ಬಾಲಕನಾದನು. ಇದರಿಂದ ಸುಂದರೀ ಇಲಾಳು ಅವನನ್ನು ತಂದೆಗೆ ಒಪ್ಪಿಸಿಬಿಟ್ಟಳು.॥24॥

ಮೂಲಮ್ - 25

ಬುಧಸ್ತು ಪುರುಷೀಭೂತಂ ಸ ವೈ ಸಂವತ್ಸರಾಂತರಮ್ ।
ಕಥಾಭೀ ರಮಯಾಮಾಸ ಧರ್ಮಯುಕ್ತಾಭಿರಾತ್ಮವಾನ್ ॥

ಅನುವಾದ

ವರ್ಷ ಮುಗಿಯಲು ಉಳಿದ ತಿಂಗಳುಗಳಲ್ಲಿ ರಾಜನು ಪುರುಷನಾಗಿದ್ದಾಗಲೆಲ್ಲ ಬುಧನು ಧರ್ಮಯುಕ್ತ ಕತೆಗಳನ್ನು ಹೇಳುತ್ತಾ ಅವನ ಮನೋರಂಜನೆ ಮಾಡುತ್ತಿದ್ದನು.॥25॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಎಂಭತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥89॥