[ಎಂಭತ್ತಾರನೆಯ ಸರ್ಗ]
ಭಾಗಸೂಚನಾ
ಇಂದ್ರನಿಲ್ಲದೆ ಜಗತ್ತಿನಲ್ಲಿ ಅಶಾಂತಿ ಹರಡಿದುದು, ಅಶ್ವಮೇಧಯಾಗದ ಅನುಷ್ಠಾನದಿಂದ ಇಂದ್ರನು ಬ್ರಹ್ಮಹತ್ಯೆಯಿಂದ ಮುಕ್ತನಾದುದು
ಮೂಲಮ್ - 1
ತದಾ ವೃತ್ರವಧಂ ಸರ್ವಮಖಿಲೇನ ಸ ಲಕ್ಷ್ಮಣಃ ।
ಕಥಯಿತ್ವಾ ನರಶ್ರೇಷ್ಠಃ ಕಥಾಶೇಷಂ ಪ್ರಚಕ್ರಮೇ ॥
ಅನುವಾದ
ಆಗ ವೃತ್ರಾಸುರನ ವಧೆಯ ಪೂರ್ಣ ಕಥೆಯನ್ನು ಕೇಳಿ ನರಶ್ರೇಷ್ಠ ಲಕ್ಷ್ಮಣನು ಉಳಿದ ಕಥೆಯನ್ನು ಮುಂದುವರಿಸಿದನು.॥1॥
ಮೂಲಮ್ - 2
ತತೋ ಹತೇ ಮಹಾವೀರ್ಯೇ ವೃತ್ರೇ ದೇವಭಯಂಕರೇ ।
ಬ್ರಹ್ಮಹತ್ಯಾವೃತಃ ಶಕ್ರಃ ಸಂಜ್ಞಾಂ ಲೇಭೇನ ವೃತ್ರಹಾ ॥
ಅನುವಾದ
ದೇವತೆಗಳಿಗೆ ಭಯವನ್ನುಂಟು ಮಾಡುವ ಮಹಾ ಪರಾಕ್ರಮಿ ವೃತ್ರಾಸುರನು ಹತನಾದಾಗ, ಬ್ರಹ್ಮಹತ್ಯೆಯಿಂದ ಪರಿವೃತನಾದ ವೃತ್ರನಾಶಕ ಇಂದ್ರನಿಗೆ ಬಹಳ ಹೊತ್ತಿನಲ್ಲಿ ಎಚ್ಚರಗೊಂಡನು.॥.॥
ಮೂಲಮ್ - 3
ಸೋಂತಮಾಶ್ರಿತ್ಯ ಲೋಕಾನಾಂ ನಷ್ಟಸಂಜ್ಞೋ ವಿಚೇತನಃ ।
ಕಾಲಂ ತತ್ರಾವಸತ್ಕಂಚಿದ್ವೇಷ್ಟಮಾನ ಇವೋರಗಃ ॥
ಅನುವಾದ
ಲೋಕಗಳ ಕೊನೆಯ ಸೀಮೆಯನ್ನು ಆಶ್ರಯಿಸಿ ಅವನು ಹಾವಿನಂತೆ ತೆವಳುತ್ತಾ ಕೆಲಕಾಲ ಅಲ್ಲೇ ನಿಶ್ಚೇಷ್ಟಿತನಾಗಿ, ಸಂಜ್ಞಾಶೂನ್ಯನಾಗಿ ಬಿದ್ದಿದ್ದನು.॥3॥
ಮೂಲಮ್ - 4
ಅಥ ನಷ್ಟೇ ಸಹಸ್ರಾಕ್ಷೇ ಉದ್ವಿಗ್ನಮಭವಜ್ಜಗತ್ ।
ಭೂಮಿಶ್ಚ ಧ್ವಸ್ತಸಂಕಾಶಾ ನಿಃಸ್ನೇಹಾ ಶುಷ್ಕಕಾನನಾ ॥
ಮೂಲಮ್ - 5
ನಿಃಸ್ರೋತಸಸ್ತೇ ಸರ್ವೇತು ಹ್ರದಾಶ್ಚ ಸರಿತಸ್ತಥಾ ।
ಸಂಕ್ಷೋಭಶ್ಚೈವ ಸತ್ತ್ವಾನಾಮನಾವೃಷ್ಟಿ ಕೃತೋಽಭವತ್ ॥
ಅನುವಾದ
ಇಂದ್ರನು ಅದೃಶ್ಯನಾದ್ದರಿಂದ ಇಡೀ ಜಗತ್ತು ವ್ಯಾಕುಲವಾಯಿತು. ಭೂಮಿ ಜಡದಂತಾಯಿತು. ಅದರ ಆರ್ದ್ರತೆ ನಾಶವಾಯಿತು, ಕಾಡುಗಳು ಒಣಗಿಹೋದುವು. ನದೀ, ಸರೋವರಗಳ ನೀರಿನ ಸೆಲೆ ಬತ್ತಿಹೋಯಿತು. ಮಳೆಯಾಗದೆ ಎಲ್ಲ ಜೀವಿಗಳು ಗಾಬರಿಗೊಂಡವು.॥4-5॥
ಮೂಲಮ್ - 6
ಕ್ಷೀಯಮಾಣೇ ತು ಲೋಕೇಽಸ್ಮಿನ್ ಸಂಭ್ರಾಂತಮನಸಃ ಸುರಾಃ ।
ಯದುಕ್ತಂ ವಿಷ್ಣುನಾ ಪೂರ್ವಂ ತಂ ಯಜ್ಞಂ ಸಮುಪಾನಯನ್ ॥
ಅನುವಾದ
ಸಮಸ್ತ ಜನರು ಕ್ಷೀಣರಾದರು. ಇದರಿಂದ ದೇವತೆಗಳ ಮನಸ್ಸಿನಲ್ಲಿ ವ್ಯಾಕುಲತೆ ಆವರಿಸಿತು ಮತ್ತು ಅವರಿಗೆ ಮೊದಲು ಭಗವಾನ್ ವಿಷ್ಣು ಹೇಳಿದ್ದ ಯಜ್ಞದ ಸ್ಮರಣೆಯಾಯಿತು.॥6॥
ಮೂಲಮ್ - 7
ತತಃ ಸರ್ವೇ ಸುರಗಣಾಃ ಸೋಪಾಧ್ಯಾಯಾಃ ಸಹರ್ಷಿಭಿಃ ।
ತಂ ದೇಶಂ ಸಮುಪಾಜಗ್ಮುರ್ಯತ್ರೇಂದ್ರೋ ಭಯಮೋಹಿತಃ ॥
ಅನುವಾದ
ಅನಂತರ ಗುರುಗಳಾದ ಬೃಹಸ್ಪತಿಗಳನ್ನು ಜೊತೆಯಲ್ಲಿ ಕರೆದುಕೊಂಡು, ಋಷಿಗಳ ಸಹಿತ ಎಲ್ಲ ದೇವತೆಗಳು ಇಂದ್ರನು ಭಯದಿಂದ ಮೋಹಿತನಾಗಿ ಅಡಗಿದ್ದಲ್ಲಿಗೆ ಹೋದರು.॥7॥
ಮೂಲಮ್ - 8
ತೇ ತು ದೃಷ್ಟ್ವಾ ಸಹಸ್ರಾಕ್ಷಮಾವೃತಂ ಬ್ರಹ್ಮಹತ್ಯಯಾ ।
ತಂ ಪುರಸ್ಕೃತ್ಯ ದೇವೇಶಮಶ್ವಮೇಧಂ ಪ್ರಚಕ್ರಿರೇ ॥
ಅನುವಾದ
ಅವರು ಬ್ರಹ್ಮಹತ್ಯೆಯಿಂದ ಆವೇಷ್ಟಿತನಾದ ಇಂದ್ರನನ್ನು ನೋಡಿ, ದೇವೇಶ್ವರನಾದ ಅವನನ್ನೇ ಮುಂದೆ ಮಾಡಿ ಅಶ್ವಮೇಧ ಯಜ್ಞವನ್ನು ಮಾಡಲು ತೊಡಗಿದರು.॥8॥
ಮೂಲಮ್ - 9
ತತೋಽಶ್ವಮೇಧಃ ಸುಮಹಾನ್ಮಹೇಂದ್ರಸ್ಯ ಮಹಾತ್ಮನಃ ।
ವವೃಧೇ ಬ್ರಹ್ಮಹತ್ಯಾಯಾಃ ಪಾವನಾರ್ಥಂ ನರೇಶ್ವರ ॥
ಅನುವಾದ
ನರೇಶ್ವರ! ಮತ್ತೆ ಮಹಾತ್ಮಾ ಮಹೇಂದ್ರನ ಆ ಮಹಾ ಅಶ್ವಮೇಧಯಜ್ಞ ಪ್ರಾರಂಭವಾಯಿತು. ಅದರ ಉದ್ದೇಶ ಬ್ರಹ್ಮಹತ್ಯೆಯನ್ನು ನಿವೃತ್ತಿಗೊಳಿಸಿ ಇಂದ್ರನನ್ನು ಪವಿತ್ರವಾಗಿಸುವುದಾಗಿತ್ತು.॥9॥
ಮೂಲಮ್ - 10
ತತೋ ಯಜ್ಞೇ ಸಮಾಪ್ತೇ ತು ಬ್ರಹ್ಮಹತ್ಯಾಮಹಾತ್ಮನಃ ।
ಅಭಿಗಮ್ಯಾಬ್ರವೀದ್ವಾಕ್ಯಂಕ್ವ ಮೇ ಸ್ಥಾನಂ ವಿಧಾಸ್ಯಥ ॥
ಅನುವಾದ
ಬಳಿಕ ಆ ಯಜ್ಞವು ಸಮಾಪ್ತವಾದಾಗ ಬ್ರಹ್ಮಹತ್ಯೆಯು ಮಹಾತ್ಮಾ ದೇವತೆಗಳ ಬಳಿಗೆ ಬಂದು - ನನಗೆ ಇರಲು ಸ್ಥಾನವನ್ನು ಏರ್ಪಡಿಸಿರಿ ಎಂದು ಹೇಳಿತು.॥10॥
ಮೂಲಮ್ - 11
ತೇ ತಾಮೂಚುಸ್ತತೋ ದೇವಾಸ್ತುಷ್ಟಾಃ ಪ್ರೀತಿಸಮನ್ವಿತಾಃ ।
ಚತುರ್ಧಾ ವಿಭಜಾತ್ಮಾನಮಾತ್ಮನೈವ ದುರಾಸದೇ ॥
ಅನುವಾದ
ಇದನ್ನು ಕೇಳಿ ಸಂತುಷ್ಟ ಹಾಗೂ ಪ್ರಸನ್ನರಾದ ದೇವತೆಗಳು ಅದರ ಬಳಿ ಹೇಳಿದರು - ದುರ್ಜಯ ಶಕ್ತಿಯುಳ್ಳ ಬ್ರಹ್ಮಹತ್ಯೆಯೇ! ನೀನು ಸ್ವತಃ ತನ್ನನ್ನು ನಾಲ್ಕು ಭಾಗವಾಗಿ ವಿಭಕ್ತನಾಗು.॥11॥
ಮೂಲಮ್ - 12
ದೇವಾನಾಂ ಭಾಷಿತಂ ಶ್ರುತ್ವಾ ಬ್ರಹ್ಮಹತ್ಯಾ ಮಹಾತ್ಮನಾಮ್ ।
ಸಂದಧೌ ಸ್ಥಾನಮನ್ಯತ್ರ ವರಯಾಮಾಸ ದುರ್ವಸಾ ॥
ಅನುವಾದ
ಮಹಾತ್ಮಾ ದೇವತೆಗಳ ಮಾತನ್ನು ಕೇಳಿ ಮಹೇಂದ್ರನ ಶರೀರದಲ್ಲಿ ದುಃಖಪೂರ್ವಕವಾಗಿ ವಾಸಿಸಿದ ಬ್ರಹ್ಮಹತ್ಯೆಯು ನಾಲ್ಕು ಭಾಗವಾಗಿ ವಿಭಕ್ತವಾಗಿ ಇಂದ್ರನ ಶರೀರವಲ್ಲದೆ ಬೇರೆ ಕಡೆ ಇರಲು ಜಾಗವನ್ನು ಬೇಡಿತು.॥12॥
ಮೂಲಮ್ - 13
ಏಕೇನಾಂಶೇನ ವತ್ಸ್ಯಾಮಿ ಪೂರ್ಣೋದಾಸು ನದೀಷು ವೈ ।
ಚತುರೋ ವಾರ್ಷಿಕಾನ್ಮಾಸಾನ್ದರ್ಪಘ್ನೀ ಕಾಮಚಾರಿಣೀ ॥
ಅನುವಾದ
ನಾನು ನನ್ನ ಒಂದಂಶದಿಂದ ಮಳೆ ಗಾಲದ ನಾಲ್ಕು ತಿಂಗಳವರೆಗೆ ನೀರು ತುಂಬಿದ ನದಿಗಳಲ್ಲಿ ವಾಸಿಸುವೆನು. ಆಗ ನಾನು ಇಚ್ಛಾನುಸಾರ ಸಂಚರಿಸುತ್ತೇನೆ ಮತ್ತು ಬೇರೆಯವರ ದರ್ಪವನ್ನು ದಮನ ಮಾಡುವೆನು.॥13॥
ಮೂಲಮ್ - 14
ಭೂಮ್ಯಾಮಹಂ ಸರ್ವಕಾಲಮೇಕೇನಾಂಶೇನ ಸರ್ವದಾ ।
ವಸಿಷ್ಯಾಮಿ ನ ಸಂದೇಹಃ ಸತ್ಯೇನೈತದ್ಬ್ರವೀಮಿ ವಃ ॥
ಅನುವಾದ
ನನ್ನ ಮತ್ತೊಂದು ಅಂಶದಿಂದ ನಾನು ಭೂಮಿಯಲ್ಲಿ ಎಲ್ಲ ಕಾಲಗಳಲ್ಲಿಯೂ ಇರುತ್ತೇನೆ. ಇದರಲ್ಲಿ ಸಂದೇಹವೇ ಇಲ್ಲ. ಸತ್ಯವಾದ ಈ ಮಾತನ್ನು ನಾನು ನಿಮ್ಮೊಡನೆ ಹೇಳುತ್ತಿದ್ದೇನೆ.॥14॥
ಮೂಲಮ್ - 15
ಯೋಯಮಂಶಸ್ತೃತೀಯೋ ಮೇ ಸ್ತ್ರೀಷು ಯೌವನಶಾಲಿಷು ।
ತ್ರಿರಾತ್ರಂ ದರ್ಪಪೂರ್ಣಾಸುವಸಿಷ್ಯೇದರ್ಪಘಾತಿನೀ ॥
ಅನುವಾದ
ನನ್ನ ಮೂರನೆಯ ಅಂಶದಿಂದ ಗರ್ವಿಷ್ಠೆಯರಾದ ಯುವತಿಯರಲ್ಲಿ ನಾನು ಪ್ರತಿ ತಿಂಗಳಲ್ಲಿಯೂ ಮೂರು ದಿವಸಗಳವರೆಗೆ ವಾಸವಾಗಿದ್ದು ಅವರ ದರ್ಪವನ್ನು ಮುರಿಯುತ್ತೇನೆ.॥15॥
ಮೂಲಮ್ - 16
ಹಂತಾರೋ ಬ್ರಾಹ್ಮಣಾನ್ಯೇ ತುಮೃಷಾಪೂರ್ವಮದೂಷಕಾನ್ ।
ತಾಂಶ್ಚತುರ್ಥೇನ ಭಾಗೇನ ಸಂಶ್ರಯಿಷ್ಯೇ ಸುರರ್ಷಭಾಃ ॥
ಅನುವಾದ
ಸುರಶ್ರೇಷ್ಠರೇ! ನನ್ನ ನಾಲ್ಕನೆಯ ಅಂಶದಿಂದ ನಾನು ಸುಳ್ಳು ಹೇಳಿ ಇತರರನ್ನು ದೂಷಿಸದಿರುವ ಬ್ರಾಹ್ಮಣರ ಹತ್ಯೆ ಮಾಡುವವರಲ್ಲಿ ಸೇರಿಕೊಳ್ಳುತ್ತೇನೆ.॥16॥
ಮೂಲಮ್ - 17
ಪ್ರತ್ಯೂಚುಸ್ತಾಂ ತತೋ ದೇವಾ ಯಥಾ ವದಸಿ ದುರ್ವಸೇ ।
ತಥಾ ಭವತು ತತ್ಸರ್ವಂ ಸಾಧಯಸ್ವ ಯದೀಪ್ಸಿತಮ್ ॥
ಅನುವಾದ
ಆಗ ದೇವತೆಗಳು ಹೇಳಿದರು - ದುರ್ವಸೇ! ನೀನು ಹೇಳಿ ದಂತೆಯೇ ಆಗಲಿ. ಹೋಗು ನಿನ್ನ ಅಭೀಷ್ಟವನ್ನು ಸಾಧಿಸಿಕೋ.॥17॥
ಮೂಲಮ್ - 18
ತತಃಪ್ರೀತ್ಯಾನ್ವಿತಾ ದೇವಾಃ ಸಹಸ್ರಾಕ್ಷಂ ವವಂದಿರೇ ।
ವಿಜ್ವರಃ ಪೂತಪಾಪ್ಮಾ ಚ ವಾಸವಃ ಸಮಪದ್ಯತ ॥
ಅನುವಾದ
ಆಗ ದೇವತೆಗಳೆಲ್ಲರೂ ಬಹಳ ಸಂತೋಷ ದಿಂದ ಸಹಸ್ರಾಕ್ಷ ಇಂದ್ರನನ್ನು ವಂದಿಸಿದರು. ಇಂದ್ರನು ನಿಶ್ಚಿಂತನಾಗಿ, ನಿಷ್ಪಾಪನಾಗಿ ವಿಶುದ್ಧನಾದನು.॥18॥
ಮೂಲಮ್ - 19
ಪ್ರಶಾಂತಂ ಚ ಜಗತ್ಸರ್ವಂ ಸಹಸ್ರಾಕ್ಷೇ ಪ್ರತಿಷ್ಠಿತೇ ।
ಯಜ್ಞಂ ಚಾದ್ಭುತಸಂಕಾಶಂ ತದಾ ಶಕ್ರೋಽಭ್ಯ ಪೂಜಯತ್ ॥
ಅನುವಾದ
ಇಂದ್ರನು ತನ್ನ ಪದವಿಯಲ್ಲಿ ಪ್ರತಿಷ್ಠಿತನಾಗುತ್ತಲೇ ಸಂಪೂರ್ಣ ಜಗತ್ತಿನಲ್ಲಿ ಶಾಂತಿ ನೆಲೆಸಿತು. ಆಗ ಇಂದ್ರನು ಆ ಅದ್ಭುತ ಶಕ್ತಿಶಾಲೀ ಯಜ್ಞವನ್ನು ಭೂರಿ-ಭೂರಿ ಪ್ರಶಂಸಿಸಿದನು.॥19॥
ಮೂಲಮ್ - 20
ಈದೃಶೋಹ್ಯಶ್ವಮೇಧಸ್ಯ ಪ್ರಭಾವೋ ರಘುನಂದನ ।
ಯಜಸ್ವ ಸುಮಹಾಭಾಗ ಹಯಮೇಧೇನ ಪಾರ್ಥಿವ ॥
ಅನುವಾದ
ರಘುನಂದನ! ಅಶ್ವಮೇಧ ಯಜ್ಞದ ಪ್ರಭಾವ ಹೀಗಿದೆ. ಆದ್ದರಿಂದ ಮಹಾಭಾಗ! ಪೃಥಿವಿಪತೇ! ನೀನು ಅಶ್ವಮೇಧ ಯಜ್ಞದ ಮೂಲಕ ಯಜನ ಮಾಡು.॥20॥
ಮೂಲಮ್ - 21
ಇತಿ ಲಕ್ಷ್ಮಣವಾಕ್ಯಮುತ್ತಮಂ
ನೃಪತಿರತೀವಮನೋಹರಂಮಹಾತ್ಮಾ ।
ಪರಿತೋಷಮವಾಪ ಹೃಷ್ಟಚೇತಾಃ
ಸ ನಿಶಮ್ಯೇಂದ್ರಸಮಾನವಿಕ್ರಮೌಜಾಃ ॥
ಅನುವಾದ
ಲಕ್ಷ್ಮಣನು ಆ ಉತ್ತಮ, ಅತ್ಯಂತ ಮನೋಹರ ಮಾತನ್ನು ಕೇಳಿ ಇಂದ್ರನಂತೆ ಪರಾಕ್ರಮೀ, ಬಲಶಾಲಿಯಾದ ಮಹಾತ್ಮಾರಾಜ ಶ್ರೀರಾಮನು ಮನಸ್ಸಿನಲ್ಲೇ ಸಂತಸಗೊಂಡು, ಸಂತುಷ್ಟನಾದನು.॥21॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಎಂಭತ್ತಾರನೆಯ ಸರ್ಗ ಪೂರ್ಣವಾಯಿತು. ॥86॥