०८५ वृत्र-वधः

[ಎಂಭತ್ತೈದನೆಯ ಸರ್ಗ]

ಭಾಗಸೂಚನಾ

ವಿಷ್ಣುವಿನ ತೇಜಸ್ಸು ಇಂದ್ರನಲ್ಲಿಯೂ, ವಜ್ರಾಯುಧದಲ್ಲಿ ಪ್ರವೇಶಿಸಿದುದು, ವಜ್ರಾಯುಧದಿಂದ ವೃತ್ರಾಸುರನ ವಧೆ, ಬ್ರಹ್ಮಹತ್ಯಾ ಪಾಪದಿಂದ ಗ್ರಸ್ತನಾದ ಇಂದ್ರನು ಅಂಧಕಾರಮಯವಾದ ಪ್ರದೇಶಕ್ಕೆ ಹೋದುದು

ಮೂಲಮ್ - 1

ಲಕ್ಷ್ಮಣಸ್ಯ ತು ತದ್ವಾಕ್ಯಂ ಶ್ರುತ್ವಾ ಶತ್ರುನಿಬರ್ಹಣಃ ।
ವೃತ್ರಘಾತಮಶೇಷೇಣ ಕಥಯೇತ್ಯಾಹ ಸುವ್ರತಃ ॥

ಅನುವಾದ

ಲಕ್ಷ್ಮಣನ ಮಾತನ್ನು ಕೇಳಿ ಶತ್ರುಸಂಹಾರ ಮಾಡುವ ಶ್ರೀರಾಮನು ಹೇಳಿದನು - ಸುವ್ರತ ಸುಮಿತ್ರಾಕುಮಾರ! ವೃತ್ರಾಸುರನ ವಧೆಯ ಕಥೆಯನ್ನು ಪೂರ್ಣವಾಗಿ ಹೇಳು.॥1॥

ಮೂಲಮ್ - 2

ರಾಘವೇಣೈವಮುಕ್ತಸ್ತು ಸುಮಿತ್ರಾನಂದವರ್ಧನಃ ।
ಭೂಯ ಏವ ಕಥಾಂ ದಿವ್ಯಾಂಕಥಯಾಮಾಸ ಸುವ್ರತಃ ॥

ಅನುವಾದ

ಶ್ರೀರಾಮನ ಆದೇಶ ಪಡೆದ ಸುವ್ರತ ಸುಮಿತ್ರಾ ನಂದನ ಲಕ್ಷ್ಮಣನು ಪುನಃ ಆ ದಿವ್ಯ ಕಥೆಯನ್ನು ಮುಂದುವರಿಸಿದನು.॥2॥

ಮೂಲಮ್ - 3

ಸಹಸ್ರಾಕ್ಷವಚಃ ಶ್ರುತ್ವಾ ಸರ್ವೇಷಾಂ ಚ ದಿವೌಕಸಾಮ್ ।
ವಿಷ್ಣುರ್ದೇವಾನುವಾಚೇದಂ ಸರ್ವಾನಿಂದ್ರಪುರೋಗಮಾನ್ ॥

ಅನುವಾದ

ಪ್ರಭೋ! ಸಹಸ್ರಾಕ್ಷ ಇಂದ್ರನ ಹಾಗೂ ಸಮಸ್ತ ದೇವತೆಗಳ ಪ್ರಾರ್ಥನೆಯನ್ನು ಕೇಳಿ ಭಗವಾನ್ ವಿಷ್ಣು ಇಂದ್ರಾದಿ ಎಲ್ಲ ದೇವತೆಗಳಲ್ಲಿ ಇಂತೆಂದನು.॥3॥

ಮೂಲಮ್ - 4

ಪೂರ್ವಂ ಸೌಹೃದಬದ್ಧೋಽಸ್ಮಿ ವೃತ್ರಸ್ಯೇಹ ಮಹಾತ್ಮನಃ ।
ತೇನ ಯುಷ್ಮತ್ಪ್ರಿಯಾರ್ಥಂ ಹಿ ನಾಹಂ ಹನ್ಮಿ ಮಹಾಸುರಮ್ ॥

ಅನುವಾದ

ದೇವತೆಗಳೇ! ನಿಮ್ಮ ಈ ಪ್ರಾರ್ಥನೆಯ ಮೊದಲೇ ನಾನು ಮಹಾತ್ಮಾ ವೃತ್ರಾಸುರನ ಸ್ನೇಹಬಂಧನದಲ್ಲಿ ಬಂಧಿತನಾಗಿದ್ದೇನೆ. ಅದಕ್ಕಾಗಿ ನಿಮ್ಮ ಪ್ರಿಯಮಾಡುವ ಉದ್ದೇಶದಿಂದ ನಾನು ಆ ಮಹಾ ಅಸುರನ ವಧೆ ಮಾಡಲಾರೆನು.॥4॥

ಮೂಲಮ್ - 5

ಅವಶ್ಯಂ ಕರಣೀಯಂ ಚ ಭವತಾಂ ಸುಖಮುತ್ತಮಮ್ ।
ತಸ್ಮಾದುಪಾಯಮಾಖ್ಯಾಸ್ಯೇ ಸಹಸ್ರಾಕ್ಷೋ ವಧಿಷ್ಯತಿ ॥

ಅನುವಾದ

ಆದರೂ ನಿಮ್ಮೆಲ್ಲರ ಉತ್ತಮ ಸುಖದ ವ್ಯವಸ್ಥೆ ಮಾಡುವುದು ನನ್ನ ಅವಶ್ಯ ಕರ್ತವ್ಯವಾಗಿದೆ. ಇದಕ್ಕಾಗಿ ದೇವೇಂದ್ರನು ಅವನ ವಧೆ ಮಾಡುವಂತಹ ಉಪಾಯ ನಾನು ಹೇಳುತ್ತೇನೆ.॥5॥

ಮೂಲಮ್ - 6

ತ್ರೇಧಾಭೂತಂ ಕರಿಷ್ಯಾಮಿ ಆತ್ಮಾನಂ ಸುರಸತ್ತಮಾಃ ।
ತೇವವೃತ್ರಂ ಸಹಸ್ರಾಕ್ಷೋ ವಧಿಷ್ಯತಿ ನ ಸಂಶಯಃ ॥

ಅನುವಾದ

ಸುರಶ್ರೇಷ್ಠರೇ! ನಾನು ನನ್ನ ಸ್ವರೂಪಭೂತ ತೇಜವನ್ನು ಮೂರು ಭಾಗವಾಗಿ ಮಾಡುವೆನು. ಅದರಿಂದ ಇಂದ್ರನು ನಿಃಸಂದೇಹವಾಗಿ ವೃತ್ರಾಸುರನ ವಧೆ ಮಾಡುವನು.॥6॥

ಮೂಲಮ್ - 7

ಏಕಾಂಶೋ ವಾಸವಂ ಯಾತು ದ್ವಿತೀಯೋವಜ್ರಮೇವ ತು ।
ತೃತೀಯೋ ಭೂತಲಂ ಯಾತು ತದಾವತ್ರಂ ಹನಿಷ್ಯತಿ ॥

ಅನುವಾದ

ನನ್ನ ತೇಜದ ಒಂದು ಅಂಶವು ಇಂದ್ರನಲ್ಲಿ ಪ್ರವೇಶಿಸಲಿ, ಇನ್ನೊಂದು ವಜ್ರದಲ್ಲಿ ವ್ಯಾಪ್ತವಾಗಲೀ, ಮೂರನೆಯ ಅಂಶ ಭೂತಳಕ್ಕೆ ಹೋಗಲಿ.* ಆಗ ಇಂದ್ರನು ವೃತ್ರಾಸುರನ ವಧೆ ಮಾಡಬಲ್ಲನು.॥.॥

ಟಿಪ್ಪನೀ
  • ವೃತ್ರವಧೆಯ ಬಳಿಕ ಇಂದ್ರನಿಗೆ ತಗುಲಿದ ಬ್ರಹ್ಮಹತ್ಯೆಯ ನಿವೃತ್ತಿಯ ಸಮಯದವರೆಗೆ ಈ ಭೂತಳದ ರಕ್ಷಣೆಗಾಗಿ ಹಾಗೂ ವೃತ್ರನು ಧರಾಶಾಯಿಯಾದಾಗ ಅವನ ಭಾರೀ ಶರೀರವನ್ನು ಧರಿಸಲು ಶಕ್ತಿ ತುಂಬಲು ಭಗವಂತನ ತೇಜದ ಮೂರನೆಯ ಅಂಶವು ಭೂಮಿಗೆ ಹೋಗುವುದು ಆವಶ್ಯಕವಾಗಿತ್ತು; ಅದಕ್ಕಾಗಿ ಹೀಗಾಯಿತು.
ಮೂಲಮ್ - 8

ತಥಾ ಬ್ರುವತಿ ದೇವೇಶೇ ದೇವಾ ವಾಕ್ಯಮಥಾಬ್ರುವನ್ ।
ಏವಮೇತನ್ನ ಸಂದೇಹೋ ಯಥಾ ವದಸಿ ದೈತ್ಯಹನ್ ॥

ಮೂಲಮ್ - 9

ಭದ್ರಂ ತೇಽಸ್ತು ಗಮಿಷ್ಯಾಮೋ ವೃತ್ರಾಸುರವಧೈಷಿಣಃ ।
ಭಜಸ್ವ ಪರಮೋದಾರ ವಾಸವಂ ಸ್ವೇನ ತೇಜಸಾ ॥

ಅನುವಾದ

ದೇವೇಶ್ವರ ವಿಷ್ಣುವು ಹೀಗೆ ಹೇಳಿದಾಗ ದೇವತೆಗಳು ನುಡಿದರು - ದೈತ್ಯವಿನಾಶಕನೇ! ನೀನು ಹೇಳಿದುದು ಸರಿಯೇ ಆಗಿದೆ, ಇದರಲ್ಲಿ ಸಂದೇಹವೇ ಇಲ್ಲ. ನಿನಗೆ ಮಂಗಳವಾಗಲಿ. ನಾವು ವೃತ್ರಾಸುರನ ವಧೆಯ ಇಚ್ಛೆಯನ್ನು ಮನಸ್ಸಿನಲ್ಲಿರಿಸಿಕೊಂಡು ಇಲ್ಲಿಂದ ಮರಳುವೆವು. ಪರಮೋದಾರ ಪ್ರಭುವೇ! ನೀನು ನಿನ್ನ ತೇಜದಿಂದಾಗಿ ದೇವೇಂದ್ರನನ್ನು ಅನುಗ್ರಹಿತನನ್ನಾಗಿಸು.॥8-9॥

ಮೂಲಮ್ - 10

ತತಃ ಸರ್ವೇ ಮಹಾತ್ಮಾನಃ ಸಹಸ್ರಾಕ್ಷಪುರೋಗಮಾಃ ।
ತದರಣ್ಯಮುಪಾಕ್ರಾಮನ್ಯತ್ರ ವೃತ್ರೋ ಮಹಾಸುರಃ ॥

ಅನುವಾದ

ಅನಂತರ ಇಂದ್ರಾದಿ ಎಲ್ಲ ಮಹಾತ್ಮಾ ದೇವತೆಗಳು ಮಹಾಅಸುರ ವೃತ್ರಾಸುರನು ತಪಸ್ಸು ಮಾಡುತ್ತಿದ್ದ ವನಕ್ಕೆ ಹೋದರು.॥10॥

ಮೂಲಮ್ - 11

ತೇಪಶ್ಯಂಸ್ತೇಜಸಾ ಭೂತಂ ತಪ್ಯಂತಮಸುರೋತ್ತಮಮ್ ।
ಪಿಬಂತಮಿವ ಲೋಕಾಂಸೀನ್ನಿರ್ದಹಂತಮಿವಾಂಬರಮ್ ॥

ಅನುವಾದ

ಅಸುರ ಶ್ರೇಷ್ಠ ವೃತ್ರಾಸುರನು ತನ್ನ ತೇಜದಿಂದ ಎಲ್ಲೆಡೆ ವ್ಯಾಪ್ತನಾಗಿರುವು ದನ್ನು ಅವರು ನೋಡಿದರು. ಅವನು ಮೂರುಲೋಕಗಳನ್ನು ಕುಡಿದುಬಿಡುವನೋ, ಆಕಾಶವನ್ನು ಸುಟ್ಟು ಬಿಡುವನೋ ಎಂಬಂತೆ ತಪಸ್ಸು ಮಾಡುತ್ತಿದ್ದನು.॥11॥

ಮೂಲಮ್ - 12

ದೃಷ್ಟ್ವೈವ ಚಾಸುರಶ್ರೇಷ್ಠಂ ದೇವಾಸ್ತ್ರಾಸಮುಪಾಗಮನ್ ।
ಕಥಮೇನಂ ವಧಿಷ್ಯಾಮಃ ಕಥಂ ನ ಸ್ಯಾತ್ಪರಾಜಯಃ ॥

ಅನುವಾದ

ಆ ಅಸುರಶ್ರೇಷ್ಠ ವೃತ್ರನನ್ನು ನೋಡುತ್ತಲೇ ದೇವತೆಗಳು ಗಾಬರಿಗೊಂಡು, ನಾವು ಹೇಗೆ ಇವನನ್ನು ವಧಿಸಬಲ್ಲೆವು? ಯಾವ ಉಪಾಯದಿಂದ ನಮ್ಮ ಪರಾಜಯ ಆಗದಿರುವುದು ಎಂದು ಯೋಚಿಸತೊಡಗಿದರು.॥12॥

ಮೂಲಮ್ - 13

ತೇಷಾಂ ಚಿಂತಯತಾಂ ತತ್ರ ಸಹಸ್ರಾಕ್ಷಃ ಪುರಂದರಃ ।
ವಜ್ರಂ ಪ್ರಗೃಹ್ಯ ಪಾಣಿಭ್ಯಾಂ ಪ್ರಾಹಿಣೋದ್ವ್ರತ್ರಮೂರ್ಧನಿ ॥

ಅನುವಾದ

ಅವರು ಅಲ್ಲಿ ಹೀಗೆ ಯೋಚಿಸುತ್ತಿರುವಾಗಲೇ ಸಹಸ್ರಾಕ್ಷ ಇಂದ್ರನು ಎರಡೂ ಕೈಗಳಿಂದ ವಜ್ರವನ್ನು ಎತ್ತಿ ಅದನ್ನು ವೃತ್ರಾಸುರನ ತಲೆಯ ಮೇಲೆ ಹೊಡೆದನು.॥13॥

ಮೂಲಮ್ - 14

ಕಾಲಾಗ್ನಿನೇವ ಘೋರೇಣ ದೀಪ್ತೇನೇವ ಮಹಾರ್ಚಿಷಾ ।
ಪತತಾ ವೃತ್ರಶಿರಸಾ ಜಗತ್ ತ್ರಾಸಮುಪಾಗಮತ್ ॥

ಅನುವಾದ

ಇಂದ್ರನ ವಜ್ರಾಯುಧವು ಪ್ರಳಯಾಗ್ನಿಯಂತೆ ಭಯಂಕರ ಪ್ರಕಾಶಮಾನವಾಗಿತ್ತು. ಅದರಿಂದ ಮಹಾಜ್ವಾಲೆಗಳು ಏಳುತ್ತಿದ್ದವು. ಅದರ ಏಟಿನಿಂದ ವೃತ್ರಾಸುರನ ಮಸ್ತಕವು ತುಂಡಾಗಿ ಬಿದ್ದಾಗ ಇಡೀ ಜಗತ್ತು ಭಯಭೀತವಾಯಿತು.॥14॥

ಮೂಲಮ್ - 15

ಅಸಂಭಾವ್ಯ ವಧಂ ತಸ್ಯ ವೃತ್ರಸ್ಯ ವಿಬುಧಾಧಿಪಃ ।
ಚಿಂತಯಾನೋ ಜಗಾಮಾಶು ಲೋಕಸ್ಯಾಂತಂ ಮಹಾಯಶಾಃ ॥

ಅನುವಾದ

ನಿರಪರಾಧೀ ವೃತ್ರಾಸುರನನ್ನು ವಧಿಸುವುದು ಅನುಚಿತವಾಗಿತ್ತು, ಆದರಿಂದ ಮಹಾಯಶಸ್ವೀ ದೇವೇಂದ್ರನು ಬಹಳ ಚಿಂತಿತನಾಗಿ ಕೂಡಲೇ ಎಲ್ಲ ಲೋಕಗಳ ಕೊನೆಗಿರುವ ಲೋಕಾಲೋಕ ಪರ್ವತದಿಂದ ಆಚೆಯ ಅಂಧಕಾರಮಯ ಪ್ರದೇಶಕ್ಕೆ ಹೊರಟು ಹೋದನು.॥15॥

ಮೂಲಮ್ - 16

ತಮಿಂದ್ರಂ ಬ್ರಹ್ಮಹತ್ಯಾಽಽಶು ಗಚ್ಛಂತಮನುಗಚ್ಛತಿ ।
ಅಪತಚ್ಚಾಸ್ಯ ಗಾತ್ರೇಷು ತಮಿಂದ್ರಂ ದುಃಖಮಾವಿಶತ್ ॥

ಅನುವಾದ

ಹೋಗುವಾಗ ಬ್ರಹ್ಮಹತ್ಯೆಯ ತತ್ಕಾಲ ಅವನ ಬೆನ್ನು ಬಿದ್ದು, ಅವನನ್ನು ಆಕ್ರಮಿಸಿತು. ಇದರಿಂದ ಇಂದ್ರನ ಮನಸ್ಸಿನಲ್ಲಿ ಭಾರೀ ದುಃಖವಾಯಿತು.॥16॥

ಮೂಲಮ್ - 17

ಹತಾರಯಃ ಪ್ರಣಷ್ಟೇಂದ್ರಾ ದೇವಾಃ ಸಾಗ್ನಿಪುರೋಗಮಾಃ ।
ವಿಷ್ಣುಂ ತ್ರಿಭುವನೇಶಾನಂ ಮುಹುರ್ಮುಹುರಪೂಜಯನ್ ॥

ಅನುವಾದ

ದೇವತೆಗಳ ಶತ್ರು ಹತನಾದನು. ಇದರಿಂದ ಅಗ್ನಿಯೇ ಆದಿ ಎಲ್ಲ ದೇವತೆಗಳು ತ್ರಿಭುವನಸ್ವಾಮಿ ವಿಷ್ಣುವನ್ನು ಪದೇ-ಪದೇ ಸ್ತುತಿಸುತ್ತಾ ಪೂಜಿಸತೊಡಗಿದರು. ಆದರೆ ಅವರ ಇಂದ್ರನು ಕಣ್ಮರೆಯಾಗಿದ್ದನು. ಇದರಿಂದ ಅವರಿಗೆ ಬಹಳ ದುಃಖವಾಗುತ್ತಿತ್ತು.॥17॥

ಮೂಲಮ್ - 18

ತ್ವಂ ಗತಿಃ ಪರಮೇಶಾನ ಪೂರ್ವಜೋ ಜಗತಃ ಪಿತಾ ।
ರಕ್ಷಾರ್ಥಂ ಸರ್ವಭೂತಾನಾಂ ವಿಷ್ಣುತ್ವಮುಪಜಗ್ಮಿವಾನ್ ॥

ಅನುವಾದ

(ದೇವತೆಗಳು ಹೇಳಿದರು-) ಪರಮೇಶ್ವರ ! ನೀನೇ ಜಗತ್ತಿನ ಆಶ್ರಯ ಮತ್ತು ಆದಿಪಿತಾ ಆಗಿದ್ದೀಯೆ. ನೀನು ಸಮಸ್ತ ಪ್ರಾಣಿಗಳ ರಕ್ಷಣೆಗಾಗಿ ವಿಷ್ಣುರೂಪವನ್ನು ಧರಿಸಿರುವೆ.॥18॥

ಮೂಲಮ್ - 19

ಹತಶ್ಚಾಯಂ ತ್ವಯಾ ವೃತ್ರೋ ಬ್ರಹ್ಮಹತ್ಯಾ ಚವಾಸವಮ್ ।
ಬಾಧತೇ ಸುರಶಾರ್ದೂಲ ಮೋಕ್ಷಂ ತಸ್ಯ ವಿನಿರ್ದಿಶ ॥

ಅನುವಾದ

ನೀನೇ ಈ ವೃತ್ರಾಸುರನನ್ನು ವಧಿಸಿರುವೆ. ಆದರೆ ಬ್ರಹ್ಮಹತ್ಯೆಯು ಇಂದ್ರನಿಗೆ ಕಷ್ಟ ಕೊಡುತ್ತಿದೆ. ಆದ್ದರಿಂದ ಸುರಶ್ರೇಷ್ಠ! ನೀನು ಅವನ ಉದ್ಧಾರದ ಯಾವುದಾದರೂ ಉಪಾಯ ತಿಳಿಸು.॥19॥

ಮೂಲಮ್ - 20

ತೇಷಾಂ ತದ್ವಚನಂ ಶ್ರುತ್ವಾ ದೇವಾನಾಂ ವಿಷ್ಣುರಬ್ರವೀತ್ ।
ಮಾಮೇವ ಯಜತಾಂ ಶಕ್ರಃ ಪಾವಯಿಷ್ಯಾಮಿ ವಜ್ರಿಣಮ್ ॥

ಅನುವಾದ

ದೇವತೆಗಳ ಮಾತನ್ನು ಕೇಳಿ ಭಗವಾನ್ ವಿಷ್ಣು ಹೇಳಿದನು - ಇಂದ್ರನು ನನ್ನ ಸಲುವಾಗಿ ಯಜ್ಞ ಮಾಡಲಿ, ನಾನು ಆ ವಜ್ರಧಾರೀ ದೇವೇಂದ್ರನನ್ನು ಪವಿತ್ರಗೊಳಿಸುವೆನು.॥20॥

ಮೂಲಮ್ - 21

ಪುಣ್ಯೇನ ಹಯಮೇಧೇನ ಮಾಮಿಷ್ಟ್ವಾ ಪಾಕಶಾಸನಃ ।
ಪುನರೇಷ್ಯತಿ ದೇವಾನಾಮಿಂದ್ರತ್ವಮಕುತೋಭಯಃ ॥

ಅನುವಾದ

ಪವಿತ್ರ ಅಶ್ವಮೇಧ ಯಜ್ಞದ ಮೂಲಕ ಯಜ್ಞ ಪುರುಷನ ಆರಾಧನೆ ಮಾಡಿ ಪಾಕಶಾಸನ ಇಂದ್ರನು ಪುನಃ ದೇವೇಂದ್ರನ ಪದವಿಯನ್ನು ಪಡೆದುಕೊಂಡನು. ಮತ್ತೆ ಅವನಿಗೆ ಯಾವ ಭಯವೂ ಇರಲಿಲ್ಲ.॥21॥

ಮೂಲಮ್ - 22

ಏವಂ ಸಂದಿಶ್ಯ ತಾಂ ವಾಣೀಂ ದೇವಾನಾಂ ಚಾಮೃತೋಪಮಾಮ್ ।
ಜಗಾಮ ವಿಷ್ಣುರ್ದೇವೇಶಃ ಸ್ತೂಯಮಾನಸ್ತ್ರಿವಿಷ್ಟಪಮ್ ॥

ಅನುವಾದ

ದೇವತೆಗಳ ಮುಂದೆ ಅಮೃತಮಯಿ ವಾಣಿಯಿಂದ ಹೀಗೆ ಸಂದೇಶ ಕೊಟ್ಟು ದೇವೇಶ್ವರ ಭಗವಾನ್ ವಿಷ್ಣು ತನ್ನ ಸ್ತುತಿಯನ್ನು ಕೇಳುತ್ತಾ ಪರಮಧಾಮಕ್ಕೆ ಬಿಜಯಂಗೈದನು.॥22॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಎಂಭತ್ತೈದನೆಯ ಸರ್ಗ ಪೂರ್ಣವಾಯಿತು.॥85॥