०८४ वृत्र-तपः

[ಎಂಭತ್ತಮೂರನೆಯ ಸರ್ಗ]

ಭಾಗಸೂಚನಾ

ಭರತನ ಮಾತಿನಂತೆ ಶ್ರೀರಾಮನು ರಾಜಸೂಯಯಾಗವನ್ನು ನಿಲ್ಲಿಸಿದುದು

ಮೂಲಮ್ - 1

ತಚ್ಛ್ರುತ್ವಾ ಭಾಷಿತಂ ತಸ್ಯ ರಾಮಸ್ಯಾಕ್ಲಿಷ್ಟ ಕರ್ಮಣಃ ।
ದ್ವಾಸ್ಸ್ಥಃ ಕುಮಾರಾವಾಹೂಯ ರಾಘವಾಯ ನ್ಯವೇದಯತ್ ॥

ಅನುವಾದ

ಕ್ಲೇಶರಹಿತ ಕರ್ಮಮಾಡುವ ಶ್ರೀರಾಮನ ಮಾತನ್ನು ಕೇಳಿ ದ್ವಾರಪಾಲಕನು ಭರತ - ಲಕ್ಷ್ಮಣರನ್ನು ಕರೆತಂದು, ಅವರು ಆಗಮಿಸಿದ ವಾರ್ತೆಯನ್ನು ಶ್ರೀರಾಮನಿಗೆ ನಿವೇದಿಸಿಕೊಂಡನು.॥1॥

ಮೂಲಮ್ - 2

ದೃಷ್ಟ್ವಾ ತು ರಾಘವಃ ಪ್ರಾಪ್ತಾವುಭೌ ಭರತಲಕ್ಷ್ಮಣೌ ।
ಪರಿಷ್ವಜ್ಯ ತತೋ ರಾಮೋ ವಾಕ್ಯಮೇತದುವಾಚ ಹ ॥

ಅನುವಾದ

ಭರತ ಮತ್ತು ಲಕ್ಷ್ಮಣರು ಬಂದಿರುವುದನ್ನು ನೋಡಿ ರಘುಕುಲತಿಲಕ ಶ್ರೀರಾಮನು ಅವರನ್ನು ಬಿಗಿದಪ್ಪಿಕೊಂಡು ಇಂತೆಂದನು.॥2॥

ಮೂಲಮ್ - 3

ಕೃತಂ ಮಯಾ ಯಥಾ ತಥ್ಯಂ ದ್ವಿಜಕಾರ್ಯಮನುತ್ತಮಮ್ ।
ಧರ್ಮಸೇತುಮಥೋ ಭೂಯಃ ಕರ್ತುಮಿಚ್ಛಾಮಿ ರಾಘವೌ ॥

ಅನುವಾದ

ರಘುವಂಶೀ ರಾಜಕುಮಾರರೇ! ಬ್ರಾಹ್ಮಣನ ಕಾರ್ಯವನ್ನು ನಾನು ಯಥಾವತ್ತಾಗಿ ಪೂರೈಸಿದೆ. ಈಗ ನಾನು ರಾಜಧರ್ಮದ ಚರಮಸೀಮೆಯಾದ ರಾಜಸೂಯ ಯಜ್ಞವನ್ನು ಮಾಡಲು ಬಯಸುತ್ತಿರುವೆನು.॥3॥

ಮೂಲಮ್ - 4

ಅಕ್ಷಯಶ್ಚಾವ್ಯಯಶ್ಚೈವ ಧರ್ಮಸೇತುರ್ಮತೋಮಮ ।
ಧರ್ಮಪ್ರವಚನಂ ಚೈವ ಸರ್ವಪಾಪಪ್ರಣಾಶನಮ್ ॥

ಅನುವಾದ

ಧರ್ಮಸೇತು (ರಾಜಸೂಯ ಯಾಗ) ಅಕ್ಷಯ, ಅವಿನಾಶಿ ಫಲವನ್ನು ಕೊಡುವಂತಹುದು ಮತ್ತು ಅದು ಧರ್ಮದ ಪೋಷಕ ಹಾಗೂ ಸಮಸ್ತ ಪಾಪಗಳನ್ನು ನಾಶಮಾಡುವಂತಹುದು ಎಂಬುದು ನನ್ನ ಅನಿಸಿಕೆ.॥4॥

ಮೂಲಮ್ - 5

ಯುವಾಭ್ಯಾಮಾತ್ಮಭೂತಾಭ್ಯಾಂ ರಾಜಸೂಯಮನುತ್ತಮಮ್ ।
ಸಹಿತೋ ಯಷ್ಟುಮಿಚ್ಛಾಮಿ ತತ್ರ ಧರ್ಮಸ್ತು ಶಾಶ್ವತಃ ॥

ಅನುವಾದ

ನೀವಿಬ್ಬರೂ ನನ್ನ ಆತ್ಮಸ್ವರೂಪೀ ಆಗಿದ್ದೀರಿ. ಆದ್ದರಿಂದ ನಿಮ್ಮೊಂದಿಗೆ ಈ ಉತ್ತಮ ರಾಜಸೂಯ ಯಜ್ಞವನ್ನು ಮಾಡಲು ಇಚ್ಛಿಸುತ್ತೇನೆ; ಏಕೆಂದರೆ ಅದರಲ್ಲಿ ರಾಜನ ಶಾಶ್ವತಧರ್ಮ ಪ್ರತಿಷ್ಠಿತವಾಗಿದೆ.॥5॥

ಮೂಲಮ್ - 6

ಇಷ್ಟ್ವಾತು ರಾಜಸೂಯೇನ ಮಿತ್ರಃಶತ್ರುನಿರ್ಬರ್ಹಣಃ ।
ಸುಹುತೇನ ಸುಯಜ್ಞೇನ ವರುಣತ್ವಮುಪಾಗಮತ್ ॥

ಅನುವಾದ

ಶತ್ರುಸೂದನ ಮಿತ್ರದೇವತೆಯು ಉತ್ತಮ ಆಹುತಿಗಳಿಂದ ಕೂಡಿದ ರಾಜಸೂಯ ಎಂಬ ಶ್ರೇಷ್ಠಯಜ್ಞದಿಂದ ಪರಮಾತ್ಮನನ್ನು ಪೂಜಿಸಿ ವರುಣಪದವಿಯನ್ನು ಪಡೆದುಕೊಂಡಿದ್ದನು.॥6॥

ಮೂಲಮ್ - 7

ಸೋಮಶ್ಚ ರಾಜಸೂಯೇನ ಇಷ್ಟ್ವಾ ಧರ್ಮೇಣ ಧರ್ಮವಿತ್ ।
ಪ್ರಾಪ್ತಶ್ಚ ಸರ್ವಲೋಕೇಷು ಕೀರ್ತಿಂ ಸ್ಥಾನಂ ಚ ಶಾಶ್ವತಮ್ ॥

ಅನುವಾದ

ಧರ್ಮಜ್ಞ ಸೋಮದೇವನು ಧರ್ಮಪೂರ್ವಕ ರಾಜಸೂಯ ಯಜ್ಞದ ಅನುಷ್ಠಾನ ಮಾಡಿ ಸಮಸ್ತ ಲೋಕಗಳಲ್ಲಿ ಕೀರ್ತಿ ಹಾಗೂ ಶಾಶ್ವತ ಸ್ಥಾನವನ್ನು ಪ್ರಾಪ್ತಮಾಡಿಕೊಂಡನು.॥7॥

ಮೂಲಮ್ - 8

ಅಸ್ಮಿನ್ನಹನಿ ಯಚ್ಛ್ರೇಯಶ್ಚಿಂತ್ಯತಾಂ ತನ್ಮಯಾ ಸಹ ।
ಹಿತಂ ಚಾಯತಿಯುಕ್ತಂ ಚ ಪ್ರಯತೌವಕ್ತುಮರ್ಹಥಃ ॥

ಅನುವಾದ

ಅದಕ್ಕಾಗಿ ಇಂದು ನನ್ನೊಂದಿಗೆ ಕುಳಿತು, ನಮಗಾಗಿ ಈ ಲೋಕ ಮತ್ತು ಪರಲೋಕದಲ್ಲಿ ಶ್ರೇಯಸ್ಕರ ಕರ್ಮಯಾವುದು ಎಂದು ಏಕಾಗ್ರಚಿತ್ತರಾಗಿ ನೀವಿಬ್ಬರು ವಿಚಾರಮಾಡಿ, ನನಗೆ ಸಲಹೆ ನೀಡಿರಿ.॥8॥

ಮೂಲಮ್ - 9

ಶ್ರುತ್ವಾ ತು ರಾಘವಸ್ಯೈತದ್ ವಾಕ್ಯಂ ವಾಕ್ಯವಿಶಾರದಃ ।
ಭರತಃ ಪ್ರಾಂಜಲಿರ್ಭೂತ್ವಾ ವಾಕ್ಯಮೇತದುವಾಚಹ ॥

ಅನುವಾದ

ಶ್ರೀರಘುನಾಥನ ಮಾತನ್ನು ಕೇಳಿ ವಾಕ್ಯವಿಶಾರದ ಭರತನು ಕೈಮುಗಿದುಕೊಂಡು ಹೀಗೆ ಹೇಳಿದನು.॥9॥

ಮೂಲಮ್ - 10

ತ್ವಯಿ ಧರ್ಮಃ ಪರಃ ಸಾಧೋ ತ್ವಯಿ ಸರ್ವಾ ವಸುಂಧರಾ ।
ಪ್ರತಿಷ್ಠಿತಾ ಮಹಾಬಾಹೋ ಯಶಶ್ಚಾಮಿತವಿಕ್ರಮ ॥

ಅನುವಾದ

ಅಮಿತ ಪರಾಕ್ರಮಿ ಮಹಾಬಾಹೋ! ನಿನ್ನಲ್ಲಿ ಉತ್ತಮ ಧರ್ಮ ಪ್ರತಿಷ್ಠಿತವಾಗಿದೆ. ಇಡೀ ಪೃಥಿವಿಯು ನಿನ್ನನ್ನೇ ಆಧರಿಸಿ ಕೊಂಡಿದೆ ಹಾಗೂ ನಿನ್ನಲ್ಲೇ ಯಶದ ಪ್ರತಿಷ್ಠೆ ಇದೆ.॥10॥

ಮೂಲಮ್ - 11

ಮಹೀಪಾಲಾಶ್ಚ ಸರ್ವೇ ತ್ವಾಂಪ್ರಜಾಪತಿಮಿವಾಮರಾಃ ।
ನಿರೀಕ್ಷಂತೇ ಮಹಾತ್ಮಾನಂ ಲೋಕನಾಥಂ ಯಥಾ ವಯಮ್ ॥

ಅನುವಾದ

ದೇವತೆಗಳು ಪ್ರಜಾಪತಿ ಬ್ರಹ್ಮನನ್ನೇ ಮಹಾತ್ಮಾ, ಲೋಕನಾಥನೆಂದು ತಿಳಿಯುವಂತೆಯೇ ನಾವು ಹಾಗೂ ಸಮಸ್ತ ಲೋಕನಾಥರು ನಿನ್ನನ್ನೇ ಮಹಾಪುರುಷ, ಸಮಸ್ತ ಲೋಕಗಳ ಸ್ವಾಮಿ ಎಂದೇ ನೋಡುತ್ತಾರೆ.॥11॥

ಮೂಲಮ್ - 12

ಪ್ರಜಾಶ್ಚ ಪಿತೃವದ್ರಾಜನ್ ಪಶ್ಯಂತಿ ತ್ವಾಂ ಮಹಾಬಲ ।
ಪೃಥಿವ್ಯಾ ಗತಿಭೂತೋಽಸಿ ಪ್ರಾಣಿನಾಮಪಿ ರಾಘವ ॥

ಅನುವಾದ

ಮಹಾಬಲೀ ರಘುನಂದನ! ಮಕ್ಕಳು ತಂದೆಯನ್ನು ನೋಡಿದಂತೆಯೇ ನಿನ್ನ ಕುರಿತು ಎಲ್ಲ ರಾಜರ ಭಾವನೆ ಇದೆ. ನೀನೇ ಸಮಸ್ತ ಪೃಥಿವೀ ಮತ್ತು ಸಂಪೂರ್ಣ ಪ್ರಾಣಿಗಳ ಆಶ್ರಯನಾಗಿರುವೆ.॥12॥

ಮೂಲಮ್ - 13

ಸ ತ್ವಮೇವಂವಿಧಂ ಯಜ್ಞಮಾಹರ್ತಾಸಿ ಕಥಂ ನೃಪ ।
ಪೃಥಿವ್ಯಾಂ ರಾಜವಂಶಾನಾಂ ವಿನಾಶೋ ಯತ್ರ ದೃಶ್ಯತೇ ॥

ಅನುವಾದ

ನರೇಶ್ವ! ಹಾಗಿರುವಾಗ ಭೂಮಂಡಲದ ಸಮಸ್ತ ರಾಜವಂಶಗಳ ವಿನಾಶ ಕಂಡುಬರುವಂತಹ ಇಂತಹ ಯಜ್ಞವನ್ನು ನೀನು ಹೇಗೆ ಮಾಡಬಲ್ಲೆ.॥13॥

ಮೂಲಮ್ - 14

ಪೃಥಿವ್ಯಾಂ ಯೇ ಚ ಪುರುಷಾ ರಾಜನ್ ಪೌರುಷಮಾಗತಾಃ ।
ಸರ್ವೇಷಾಂ ಭವಿತಾ ತತ್ರ ಸಂಕ್ಷಯಃ ಸರ್ವಕೋಪಜಃ ॥

ಅನುವಾದ

ರಾಜನೇ! ಪೃಥಿವಿಯಲ್ಲಿರುವ ಪುರುಷಾರ್ಥಿಗಳೆಲ್ಲ ರಾಜನ ವಿನಾಶಕ್ಕು, ಸಮಸ್ತರಿಗೆ ಕೋಪವನ್ನುಂಟುಮಾಡುವ ಈ ಯಜ್ಞವು ಕಾರಣವಾಗುತ್ತದೆ.॥14॥

ಮೂಲಮ್ - 15

ಸರ್ವಂ ಪುರುಷಶಾರ್ದೂಲ ಗುಣೈರತುಲವಿಕ್ರಮ ।
ಪೃಥಿವೀಂ ನಾರ್ಹಸೇ ಹಂತುಂ ವಶೇ ಹಿ ತವ ವರ್ತತೇ ॥

ಅನುವಾದ

ಪುರುಷಸಿಂಹ! ಅತುಲ ಪರಾಕ್ರಮೀ ವೀರನೇ! ನಿನ್ನ ಸದ್ಗುಣಗಳಿಂದ ಇಡೀ ಜಗತ್ತು ನಿನ್ನ ವಶದಲ್ಲಿದೆ. ನಿನಗೆ ಈ ಭೂತಳದ ನಿವಾಸಿಗಳ ವಿನಾಶ ಮಾಡುವುದು ಉಚಿತವಾಗಲಾರದು.॥15॥

ಮೂಲಮ್ - 16

ಭರತಸ್ಯ ತು ತದ್ವಾಕ್ಯಂ ಶ್ರುತ್ವಾಮೃತಮಯಂ ಯಥಾ ।
ಪ್ರಹರ್ಷಮತುಲಂಲೇಭೇ ರಾಮಃ ಸತ್ಯಪರಾಕ್ರಮಃ ॥

ಅನುವಾದ

ಭರತನ ಈ ಅಮೃತಮಯ ಮಾತನ್ನು ಕೇಳಿ ಸತ್ಯಪರಾಕ್ರಮಿ ಶ್ರೀರಾಮನಿಗೆ ಅನುಪಮ ಹರ್ಷವಾಯಿತು.॥16॥

ಮೂಲಮ್ - 17

ಉವಾಚ ಚ ಶುಭಂ ವಾಕ್ಯಂ ಕೈಕೇಯ್ಯಾನಂದವರ್ಧನಮ್ ।
ಪ್ರೀತೋಽಸ್ಮಿ ಪರಿತುಷ್ಟೋಽಸ್ಮಿ ತವಾದ್ಯ ವಚನೇನಘ ॥

ಅನುವಾದ

ಅವನು ಕೈಕೇಯಿನಂದನ ಭರತನಲ್ಲಿ ಹೇಳಿದನು - ಎಲೈ ನಿಷ್ಪಾಪ ಭರತನೇ! ಇಂದು ನಿನ್ನ ಮಾತನ್ನು ಕೇಳಿ ನಾನು ಬಹಳ ಪ್ರಸನ್ನ ಹಾಗೂ ಸಂತುಷ್ಟನಾಗಿದ್ದೇನೆ.॥17॥

ಮೂಲಮ್ - 18

ಇದಂ ವಚನಮಕ್ಲೀಬಂ ತ್ವಯಾಧರ್ಮಸಮಾಗತಮ್ ।
ವ್ಯಾಹೃತಂ ಪುರುಷವ್ಯಾಘ್ರ ಪೃಥಿವ್ಯಾಃ ಪರಿಪಾಲನಮ್ ॥

ಅನುವಾದ

ಪುರುಷಸಿಂಹನೇ! ನೀನು ಆಡಿದ ಈ ಉದಾರ ಮತ್ತು ಧರ್ಮಸಮ್ಮತ ಮಾತು ಇಡೀ ಪೃಥಿವಿಯನ್ನು ರಕ್ಷಿಸುವುದಾಗಿದೆ.॥18॥

ಮೂಲಮ್ - 19

ಏಷ್ಯದಸ್ಮದಭಿಪ್ರಾಯಾದ್ ರಾಜಸೂಯಾತ್ ಕ್ರತೂತ್ತಮಾತ್ ।
ನಿವರ್ತಯಾಮಿ ಧರ್ಮಜ್ಞ ತವ ಸುವ್ಯಾಹೃತೇನ ಚ ॥

ಅನುವಾದ

ಧರ್ಮಜ್ಞನೇ! ನನ್ನ ಮನಸ್ಸಿನಲ್ಲಿ ರಾಜಸೂಯ ಯಜ್ಞದ ಸಂಕಲ್ಪ ಎದ್ದಿತ್ತು, ಆದರೆ ಇಂದು ನಿನ್ನ ಸುಂದರ ಮಾತನ್ನು ಕೇಳಿ ನಾನು ಆ ಯಜ್ಞ ಮಾಡುವುದನ್ನು ಕೈಬಿಟ್ಟಿದ್ದೇನೆ.॥19॥

ಮೂಲಮ್ - 20

ಲೋಕಪೀಡಾಕರಂ ಕರ್ಮ ನ ಕರ್ತವ್ಯಂ ವಿಚಕ್ಷಣೈಃ ।
ಬಾಲಾನಾಂ ತು ಶುಭಂ ವಾಕ್ಯಂ ಗ್ರಾಹ್ಯಂ ಲಕ್ಷ್ಮಣಪೂರ್ವಜ ।
ತಸ್ಮಾಚ್ಛೃಣೋಮಿ ತೇ ವಾಕ್ಯಂ ಸಾಧು ಯುಕ್ತಂ ಮಹಾಬಲ ॥

ಅನುವಾದ

ಲಕ್ಷ್ಮಣಾಗ್ರಜನೇ! ಸಂಪೂರ್ಣ ಜಗತ್ತಿಗೆ ದುಃಖ ಕೊಡುವಂತಹ ಕಾರ್ಯವನ್ನು ಬುದ್ಧಿವಂತರು ಮಾಡಬಾರದು. ಬಾಲಕರೂ ಹೇಳಿದ ಚೆನ್ನಾದ ಮಾತನ್ನೂ ಕೂಡ ಸ್ವೀಕರಿಸುವುದು ಉಚಿತವಾಗಿದೆ. ಆದ್ದರಿಂದ ಮಹಾಬಲಿ ವೀರನೇ! ನಾನು ನಿನ್ನ ಉತ್ತಮ ಹಾಗೂ ಯುಕ್ತಿಸಂಗತ ಮಾತನ್ನು ಬಹಳ ಗಮನವಿಟ್ಟು ಕೇಳಿರುವೆನು.॥20॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಎಂಭತ್ತಮೂರನೆಯ ಸರ್ಗ ಪೂರ್ಣವಾಯಿತು.॥83॥