[ಎಂಭತ್ತೊಂದನೆಯ ಸರ್ಗ]
ಭಾಗಸೂಚನಾ
ಶುಕ್ರರ ಶಾಪದಿಂದ ಸಪರಿವಾರ ಸಹಿತ ದಂಡ ಮತ್ತು ಅವನ ರಾಜ್ಯದ ವಿನಾಶ
ಮೂಲಮ್ - 1
ಸ ಮುಹೂರ್ತಾದುಪಶ್ರುತ್ಯ ದೇವರ್ಷಿರಮಿತಪ್ರಭಃ ।
ಸ್ವಮಾಶ್ರಮಂ ಶಿಷ್ಯವೃತಃ ಕ್ಷುಧಾರ್ತಃ ಸಂನ್ಯವರ್ತತ ॥
ಅನುವಾದ
ಮುಹೂರ್ತಕಾಲ ಕಳೆದ ಬಳಿಕ ಶಿಷ್ಯನೊಬ್ಬನ ಬಾಯಿಂದ ಅರಜೆಯೊಡನೆ ದಂಡರಾಜನ ಬಲಾತ್ಕಾರದ ಮಾತನ್ನು ಕೇಳಿ, ಅಮಿತ ತೇಜಸ್ವೀ ಮಹರ್ಷಿಗಳು ಹಸಿವಿನಿಂದ ಪೀಡಿತರಾದ ಶುಕ್ರಾಚಾರ್ಯರು ಶಿಷ್ಯರೊಡನೆ ಆಶ್ರಮಕ್ಕೆ ಮರಳಿದರು.॥1॥
ಮೂಲಮ್ - 2
ಸೋಽಪಶ್ಯದರಜಾಂ ದೀನಾಂ ರಜಸಾ ಸಮಭಿಪ್ಲುತಾಮ್ ।
ಜ್ಯೋತ್ಸ್ನಾಮಿವ ಗ್ರಹಗ್ರಸ್ತಾಂ ಪ್ರತ್ಯೂಷೇ ನ ವಿರಾಜತೀಮ್ ॥
ಅನುವಾದ
ಅರಜಾ ದುಃಖಿತೆಯಾಗಿ ಅಳುತ್ತಿರುವಳು, ಆಕೆಯ ಶರೀರಕ್ಕೆ ಧೂಳು ಮೆತ್ತಿಕೊಂಡಿತ್ತು ಹಾಗೂ ಅವಳು ಪ್ರಾತಃಕಾಲದ ಚಂದ್ರನಂತೆ, ರಾಹುಗ್ರಸ್ತ ಚಂದ್ರನ ಶೋಭಾಹೀನ ಬೆಳದಿಂಗಳಿನಂತೆ ಇರುವವಳನ್ನು ನೋಡಿದರು.॥2॥
ಮೂಲಮ್ - 3
ತಸ್ಯ ರೋಷಃ ಸಮಭವತ್ ಕ್ಷುಧಾರ್ತಸ್ಯ ವಿಶೇಷತಃ ।
ನಿರ್ದಹನ್ನಿವ ಲೋಕಾಂಸ್ತ್ರೀನ್ ಶಿಷ್ಯಾಂಶ್ಚೈತದುವಾಚ ಹ ॥
ಅನುವಾದ
ಇದನ್ನು ನೋಡಿ, ವಿಶೇಷವಾಗಿ ಹಸಿವಿನಿಂದ ಪೀಡಿತರಾದ್ದರಿಂದ ಶುಕ್ರಾಚಾರ್ಯರ ಕೋಪ ಹೆಚ್ಚಾಯಿತು. ಮೂರು ಲೋಕಗಳನ್ನು ಸುಟ್ಟುಬಿಡುವರೋ ಎಂಬಂತೆ ಕಾಣುತ್ತಿದ್ದ ಅವರು ಶಿಷ್ಯರಲ್ಲಿ ಹೇಳಿದರು.॥3॥
ಮೂಲಮ್ - 4
ಪಶ್ಯಧ್ವಂ ವಿಪರೀತಸ್ಯ ದಂಡಸ್ಯಾವಿದಿತಾತ್ಮನಃ ।
ವಿಪತ್ತಿಂ ಘೋರಸಂಕಾಶಾಂ ಕ್ರುದ್ಧಾದಗ್ನಿಶಿಖಾಮಿವ ॥
ಅನುವಾದ
ಶಿಷ್ಯರೇ! ಶಾಸ್ತ್ರವಿಧಿಗೆ ವಿಪರೀತವಾಗಿ ಆಚರಿಸುವ ಅಜ್ಞಾನಿ ರಾಜ ದಂಡನಿಗೆ, ಕುಪಿತನಾದ ನನ್ನಿಂದಾಗಿ ಅಗ್ನಿಶಿಖೆಯಂತೆ ಹೇಗೆ ಘೋರ ವಿಪತ್ತು ಉಂಟಾದೀತೋ ನೋಡಿರಿ.॥4॥
ಮೂಲಮ್ - 5
ಕ್ಷಯೋಽಸ್ಯ ದುರ್ಮತೇಃ ಪ್ರಾಪ್ತಃ ಸಾನುಗಸ್ಯ ದುರಾತ್ಮನಃ ।
ಯಃ ಪ್ರದೀಪ್ತಾಂ ಹುತಾಶಸ್ಯ ಶಿಖಾಂ ವೈ ಸ್ಪ್ರಷ್ಟುಮರ್ಹತಿ ॥
ಅನುವಾದ
ಸೇವಕರ ಸಹಿತ ಈ ದುರ್ಬುದ್ಧಿ, ದುರಾತ್ಮಾ ರಾಜನ ವಿನಾಶದ ಸಮಯ ಬಂದಿದೆ. ಅವನು ಉರಿಯುವ ಬೆಂಕಿಯನ್ನು ಅಪ್ಪಿಕೊಳ್ಳಲು ಬಯಸುತ್ತಿದ್ದಾನೆ.॥5॥
ಮೂಲಮ್ - 6
ಯಸ್ಮಾತ್ಸ ಕೃತವಾನ್ಪಾಪಮೀದೃಶಂಘೋರಸಂಹಿತಮ್ ।
ತಸ್ಮಾತ್ಪ್ರಾಪ್ಸ್ಯತಿ ದುರ್ಮೇಧಾಃ ಫಲಂ ಪಾಪಸ್ಯ ಕರ್ಮಣಃ ॥
ಅನುವಾದ
ಆ ದುರ್ಬುದ್ಧಿಯು ಇಂತಹ ಘೋರ ಪಾಪ ಮಾಡಿರುವಾಗ ಅವನಿಗೆ ಈ ಪಾಪದ ಫಲ ಅವಶ್ಯ ದೊರಕುವುದು.॥6॥
ಮೂಲಮ್ - 7
ಸಪ್ತರಾತ್ರೇಣ ರಾಜಾಸೌ ಸಪುತ್ರಬಲವಾಹನಃ ।
ಪಾಪಕರ್ಮಸಮಾಚಾರೋ ವಧಂ ಪ್ರಾಪ್ಸ್ಯತಿ ದುರ್ಮತಿಃ ॥
ಅನುವಾದ
ಪಾಪಕರ್ಮವನ್ನು ಆಚರಿಸಿದ ಆ ದುಷ್ಟಬುದ್ಧಿ ರಾಜನು ಏಳು ರಾತ್ರೆಯೊಳಗೆ ಪುತ್ರ, ಸೈನ್ಯ, ವಾಹನಗಳೊಂದಿಗೆ ನಾಶವಾಗಿ ಹೋಗುವನು.॥7॥
ಮೂಲಮ್ - 8
ಸಮಂತಾದ್ಯೋಜನಶತಂ ವಿಷಯಂ ಚಾಸ್ಯ ದುರ್ಮತೇಃ ।
ಧಕ್ಷ್ಯತೇ ಪಾಂಸುವರ್ಷೇಣ ಮಹತಾ ಪಾಕಶಾಸನಃ ॥
ಅನುವಾದ
ದುರ್ಮತಿಯ ಈ ರಾಜನ ರಾಜ್ಯವನ್ನು ಎಲ್ಲ ಕಡೆಯಿಂದ ನೂರು ಯೋಜನ ಉದ್ದವಾದ ರಾಜ್ಯದ ಮೇಲೆ ಇಂದ್ರನು ಭಾರೀ ಧೂಳನ್ನು ಮಳೆಯಾಗಿ ಸುರಿಸಿ ನಾಶಮಾಡುವನು.॥8॥
ಮೂಲಮ್ - 9
ಸರ್ವಸತ್ತ್ವಾನಿ ಯಾನೀಹ ಸ್ಥಾವರಾಣಿ ಚರಾಣಿ ಚ ।
ಮಹತಾ ಪಾಂಸುವರ್ಷೇಣ ವಿಲಯಂ ಸರ್ವತೋಽಗಮನ್ ॥
ಅನುವಾದ
ಎಲ್ಲ ಪ್ರಕಾರದ ಸ್ಥಾವರ ಜಂಗಮ ಜೀವಿಗಳು ವಾಸಿಸುವಲ್ಲಿ ಈ ಭಾರೀ ಧೂಳಿನ ಮಳೆಯಿಂದಾಗಿ ಎಲ್ಲೆಡೆ ವಿಲೀನವಾಗುವವು.॥9॥
ಮೂಲಮ್ - 10
ದಂಡಸ್ಯ ವಿಷಯೋ ಯಾವತ್ತಾವತ್ಸರ್ವಂ ಸಮುಚ್ಛ್ರಯಮ್ ।
ಪಾಂಸುವರ್ಷಮಿವಾಲಕ್ಷ್ಯಂ ಸಪ್ತರಾತ್ರಂ ಭವಿಷ್ಯತಿ ॥
ಅನುವಾದ
ದಂಡನ ರಾಜ್ಯವಿರುವತನಿಕ ಅಲ್ಲಿಯ ಸಮಸ್ತ ಚರಾಚರ ಪ್ರಾಣಿಗಳು ಏಳು ರಾತ್ರಿಗಳವರೆಗೆ ಕೇವಲ ಧೂಳಿನ ಮಳೆಯಿಂದಾಗಿ ಅದೃಶ್ಯವಾಗಿ ಹೋಗುವುದು.॥10॥
ಮೂಲಮ್ - 11
ಇತ್ಯುಕ್ತ್ವಾ ಕ್ರೋಧತಾಮ್ರಾಕ್ಷಸ್ತಮಾಶ್ರಮನಿವಾಸಿನಮ್ ।
ಜನಂ ಜನಪದಾಂತೇಷು ಸ್ಥೀಯತಾಮಿತಿ ಚಾಬ್ರವೀತ್ ॥
ಅನುವಾದ
ಹೀಗೆ ಹೇಳಿ ಕ್ರೋಧ ತಾಮ್ರಾಕ್ಷರಾದ ಶುಕ್ರರು ಆ ಆಶ್ರಮದಲ್ಲಿ ವಾಸಿಸುವ ಜನರಲ್ಲಿ - ದಂಡನ ರಾಜ್ಯದ ಸೀಮೆಯ ಹೊರಗಿನ ದೇಶದಲ್ಲಿ ಹೋಗಿ ವಾಸಿಸಿರಿ ಎಂದು ಹೇಳಿದರು.॥11॥
ಮೂಲಮ್ - 12
ಶ್ರುತ್ವಾ ತೂಶನಸೋ ವಾಕ್ಯಂ ಸೋಽಶ್ರಮಾವಸಥೋ ಜನಃ ।
ನಿಷ್ಕ್ರಾಂತೋ ವಿಷಯಾತ್ತಸ್ಮಾತ್ ಸ್ಥಾನಂ ಚಕ್ರೇಽಥ ಬಾಹ್ಯತಃ ॥
ಅನುವಾದ
ಶುಕ್ರಾಚಾರ್ಯರ ಮಾತನ್ನು ಕೇಳಿ ಆಶ್ರಮವಾಸಿಗಳು ಆ ರಾಜ್ಯದಿಂದ ಹೊರಟು, ಸೀಮೆಯ ಹೊರಗಿನ ರಾಜ್ಯದಲ್ಲಿ ವಾಸಿಸತೊಡಗಿದರು.॥12॥
ಮೂಲಮ್ - 13
ಸ ತಥೋಕ್ತ್ವಾ ಮುನಿಜನಮರಜಾಮಿದಮಬ್ರವೀತ್ ।
ಇಹೈವ ವಸ ದುರ್ಮೇಧೇ ಆಶ್ರಯೇ ಸುಸಮಾಹಿತಾ ॥
ಅನುವಾದ
ಆಶ್ರಮವಾಸಿಗಳಲ್ಲಿ ಹೀಗೆ ಹೇಳಿ ಶುಕ್ರಚಾರ್ಯರು ಅರಜೆಯಲ್ಲಿ - ಎಲೈ ಬುದ್ಧಿಗೆಟ್ಟವಳೇ! ನೀನು ಇಲ್ಲೇ ಇದೇ ಆಶ್ರಮದಲ್ಲಿ ಮನಸ್ಸನ್ನು ಪರಮಾತ್ಮನ ಧ್ಯಾನದಲ್ಲಿ ಏಕಾಗ್ರಗೊಳಿಸಿ ಇರು.॥13॥
ಮೂಲಮ್ - 14
ಇದಂ ಯೋಜನಪರ್ಯಂತಂ ಸರಃ ಸುರುಚಿರಪ್ರಭಮ್ ।
ಅರಜೇ ವಿಜ್ವರಾ ಭುಂಕ್ಷ್ವ ಕಾಲಶ್ಚಾತ್ರ ಪ್ರತೀಕ್ಷ್ಯತಾಮ್ ॥
ಅನುವಾದ
ಅರಜೆ! ಒಂದು ಯೋಜನ ಹರಡಿದ ಈ ಸುಂದರ ಸರೋವರವನ್ನು ನಿಶ್ಚಿಂತಳಾಗಿ ಉಪಯೋಗಿಸಿ, ಹಣ್ಣು-ಹಂಪಲುಗಳನ್ನು ತಿನ್ನುತ್ತಾ, ತನ್ನ ಅಪರಾಧದ ನಿವೃತ್ತಿಗಾಗಿ ಕಾಲವನ್ನು ಪ್ರತೀಕ್ಷೆ ಮಾಡುತ್ತಾ ಇರು.॥1.॥
ಮೂಲಮ್ - 15
ತ್ವತ್ಸಮೀಪೇ ಚ ಯೇ ಸತ್ತ್ವಾ ವಾಸಮೇಷ್ಯಂತಿ ತಾಂ ನಿಶಾಮ್ ।
ಅವಧ್ಯಾಃ ಪಾಂಸುವರ್ಷೇಣ ತೇ ಭವಿಷ್ಯಂತಿ ನಿತ್ಯದಾ ॥
ಅನುವಾದ
ಯಾವ ಜೀವಿಗಳು ನಿನ್ನ ಬಳಿಯಲ್ಲಿ ಇರುವವೋ ಅವು ಎಂದೂ ಧೂಳಿನ ಮಳೆಯಿಂದ ಸಾಯಲಾರರು. ಸದಾ ನಿನ್ನ ಸಂಗಡ ಇರುವವು.॥15॥
ಮೂಲಮ್ - 16
ಶ್ರುತ್ವಾ ನಿಯೋಗಂ ಬ್ರಹ್ಮರ್ಷೇಃ ಸಾರಜಾ ಭಾರ್ಗವೀ ತದಾ ।
ತಥೇತಿ ಪಿತರಂ ಪ್ರಾಹ ಭಾರ್ಗವಂ ಭೃಶದುಃಖಿತಾ ॥
ಅನುವಾದ
ಬ್ರಹ್ಮರ್ಷಿಯ ಈ ಆದೇಶವನ್ನು ಕೇಳಿ ಆ ಭೃಗುಕನ್ಯೆ ಅರಜೆಯು ಅತ್ಯಂತ ದುಃಖಿತಳಾಗಿದ್ದರೂ, ತನ್ನ ತಂದೆ ಭಾರ್ಗವರಲ್ಲಿ ಹಾಗೆಯೇ ಆಗಲೆಂದು ಹೇಳಿದಳು.॥16॥
ಮೂಲಮ್ - 17½
ಇತ್ಯುಕ್ತ್ವಾ ಭಾರ್ಗವೋ ವಾಸಮನ್ಯತ್ರ ಸಮಕಾರಯತ್ ।
ತಚ್ಚ ರಾಜ್ಯಂ ನರೇಂದ್ರಸ್ಯ ಸಭೃತ್ಯಬಲವಾಹನಮ್ ॥
ಸಪ್ತಾಹಾದ್ಭಸ್ಮಸಾದ್ಭೂತಂಯಥೋಕ್ತಂ ಬ್ರಹ್ಮವಾದಿನಾ ।
ಅನುವಾದ
ಹೀಗೆ ಹೇಳಿ ಶುಕ್ರಾಚಾರ್ಯರು ಬೇರೆ ರಾಜ್ಯಕ್ಕೆ ಹೋಗಿ ವಾಸಿಸಿದರು. ಆ ಬ್ರಹ್ಮವಾದೀಯ ಮಾತಿನಂತೆ ದಂಡಕರಾಜನ ರಾಜ್ಯ, ಸೇವಕ, ಸೈನ್ಯ, ವಾಹನಾದಿಗಳ ಸಹಿತ ಏಳು ದಿನಗಳಲ್ಲಿ ಭಸ್ಮದಂತೆ ಆಯಿತು.॥17½॥
ಮೂಲಮ್ - 18
ತಸ್ಯಾಸೌ ದಂಡವಿಷಯೋ ವಿಂಧ್ಯಶೈವಲಯೋರ್ನೃಪ ॥
ಮೂಲಮ್ - 19
ಶಪ್ತೋ ಬ್ರಹ್ಮರ್ಷಿಣಾ ತೇನ ವೈಧರ್ಮ್ಯೇ ಸಹಿತೇ ಕೃತೇ ।
ತತಃ ಪ್ರಭೃತಿ ಕಾಕುತ್ಸ್ಥ ದಂಡಕಾರಣ್ಯಮುಚ್ಯತೇ ॥
ಅನುವಾದ
ನರೇಶ್ವರನೇ! ವಿಂಧ್ಯ ಮತ್ತು ಶೇವಲಗಿರಿಯ ಮಧ್ಯಭಾಗದಲ್ಲಿ ದಂಡಕನ ರಾಜ್ಯವಿತ್ತು. ಕಾಕುತ್ಸ್ಥನೇ! ಧರ್ಮಯುಗ ಕೃತಯುಗದಲ್ಲಿ ಧರ್ಮವಿರುದ್ಧ ಆಚರಣ ಮಾಡಿದಾಗ ಆ ಬ್ರಹ್ಮರ್ಷಿಯು ರಾಜ ಮತ್ತು ಅವನ ದೇಶಕ್ಕೆ ಶಾಪವನ್ನು ಕೊಟ್ಟರು. ಅಂದಿನಿಂದ ಆ ಭೂಭಾಗವು ದಂಡಕಾರಣ್ಯ ಎಂದು ಹೇಳಲ್ಪಟ್ಟಿತು.॥18-19॥
ಮೂಲಮ್ - 20
ತಪಸ್ವಿನಃ ಸ್ಥಿತಾ ಹ್ಯತ್ರ ಜನಸ್ಥಾನಮತೋಽಭವತ್ ।
ಏತತ್ತೇ ಸರ್ವಮಾಖ್ಯಾತಂ ಯನ್ಮಾಂ ಪೃಚ್ಛಸಿ ರಾಘವ ॥
ಅನುವಾದ
ಈ ಸ್ಥಾನದಲ್ಲಿ ತಪಸ್ವಿಗಳು ಬಂದು ನೆಲೆಸಿದರು; ಇದಕ್ಕಾಗಿ ಇದರ ಹೆಸರು ಜನಸ್ಥಾನವೆಂದಾಯಿತು. ರಘುನಂದನ! ನೀನು ಕೇಳಿದ ವಿಷಯವಾಗಿ ಎಲ್ಲವನ್ನು ನಾನು ತಿಳಿಸಿದ್ದೇನೆ.॥20॥
ಮೂಲಮ್ - 21½
ಸಂಧ್ಯಾಮುಪಾಸಿತುಂ ವೀರ ಸಮಯೋ ಹ್ಯತಿವರ್ತತೇ ।
ಏತೇ ಮಹರ್ಷಯಃ ಸರ್ವೇ ಪೂರ್ಣಕುಂಭಾಃ ಸಮಂತತಃ ॥
ಕೃತೋದಕಾ ನರವ್ಯಾಘ್ರ ಆದಿತ್ಯಂ ಪರ್ಯುಪಾಸತೇ ।
ಅನುವಾದ
ವೀರನೇ! ಈಗ ಸಂಧ್ಯೋಪಾಸನೆಯ ಸಮಯ ಮೀರಿ ಹೋಗುತ್ತಿದೆ. ಪುರುಷಸಿಂಹ! ಎಲ್ಲ ಕಡೆ ಮಹರ್ಷಿಗಳೆಲ್ಲ ಸ್ನಾನ ಮಾಡಿದ ಬಳಿಕ ತುಂಬಿದ ಕುಂಭಗಳನ್ನು ಎತ್ತಿಕೊಂಡು ಸೂರ್ಯನ ಉಪಾಸನೆ ಮಾಡುತ್ತಿದ್ದಾರೆ.॥21½॥
ಮೂಲಮ್ - 22
ಸ ತೈರ್ಬ್ರಾಹ್ಮಣಮಭ್ಯಸ್ತಂ ಸಹಿತೈರ್ಬ್ರಹ್ಮವಿತ್ತಮೈಃ ।
ರವಿರಸ್ತಂಗತೋ ರಾಮ ಗಚ್ಛೋದಕಮುಪಸ್ಪೃಶ ॥
ಅನುವಾದ
ಶ್ರೀರಾಮಾ ! ಶ್ರೇಷ್ಠರಾದ ಬ್ರಹ್ಮವಿದರು ಒಟ್ಟಿಗೆ ಕುಳಿತು ಪಠಿಸುತ್ತಿರುವ ಬ್ರಾಹ್ಮಣ ಮಂತ್ರಗಳನ್ನು ಕೇಳುತ್ತಾ ಸೂರ್ಯನು ಅಸ್ತಂಗತನಾಗುತ್ತಿದ್ದಾನೆ. ನೀನೂ ಹೋಗು, ಆಚಮನ ಸಂಧ್ಯಾದಿಗಳನ್ನು ಮಾಡು.॥22॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಎಂಭತ್ತೊಂದನೆಯ ಸರ್ಗ ಪೂರ್ಣವಾಯಿತು. ॥81॥