[ಎಪ್ಪತ್ತೆಂಟನೆಯ ಸರ್ಗ]
ಭಾಗಸೂಚನಾ
ರಾಜಾಶ್ವೇತನು ನಿಂದ್ಯವಾದ ಆಹಾರವನ್ನು ತಿನ್ನಲು ಕಾರಣವನ್ನು ತಿಳಿಸಿದುದು, ಬ್ರಹ್ಮನ ಸಲಹೆಯಂತೆ ಆಭರಣಗಳನ್ನು ದಾನ ಮಾಡಿದ ನಂತರ ಹಸಿವು ಬಾಯಾರಿಕೆಗಳ ಸಂಕಟದಿಂದ ಶ್ವೇತರಾಜನು ಮುಕ್ತನಾದುದು
ಮೂಲಮ್ - 1
ಶ್ರುತ್ವಾ ತು ಭಾಷಿತಂ ವಾಕ್ಯಂ ಮಮ ರಾಮ ಶುಭಾಕ್ಷರಮ್ ।
ಪ್ರಾಂಜಲಿಃ ಪ್ರತ್ಯುವಾಚೇದಂ ಸ ಸ್ವರ್ಗೀ ರಘುನಂದನ ॥
ಅನುವಾದ
(ಅಗಸ್ತ್ಯರು ಹೇಳುತ್ತಾರೆ-) ರಘುಕುಲನಂದನ ರಾಮ! ನಾನು ಹೇಳಿದುದನ್ನು ಕೇಳಿ ಆ ಸ್ವರ್ಗೀಯ ಪುರುಷನು ಕೈಮುಗಿದು ಹೀಗೆ ಉತ್ತರಿಸಿದನು.॥1॥
ಮೂಲಮ್ - 2
ಶೃಣು ಬ್ರಹ್ಮನ್ಪುರಾ ವೃತ್ತಂ ಮಮೈತತ್ಸುಖದುಃಖಯೋಃ ।
ಅನತಿಕ್ರಮಣೀಯಂ ಚಯಥಾ ಪೃಚ್ಛಸಿ ಮಾಂ ದ್ವಿಜ ॥
ಅನುವಾದ
ಬ್ರಹ್ಮನ್! ನೀವು ಪ್ರಶ್ನಿಸಿದುದಕ್ಕೆ ಉತ್ತರವನ್ನು ಕೇಳಿರಿ - ನನ್ನ ಸುಖ-ದುಃಖಗಳಿಗೆ ಕಾರಣವಾದ ಮತ್ತು ಅತಿಕ್ರಮಿಸಿ ನಡೆಯಲು ಅಶಕ್ಯವಾದ ಹಿಂದಿನ ಘಟನೆಯನ್ನು ಕೇಳಿರಿ.॥2॥
ಮೂಲಮ್ - 3
ಪುರಾ ವೈದರ್ಭಕೋ ರಾಜಾ ಪಿತಾ ಮಮ ಮಹಾಯಶಾಃ ।
ಸುದೇವ ಇತಿ ವಿಖ್ಯಾತಸ್ತ್ರಿಷು ಲೋಕೇಷು ವೀರ್ಯವಾನ್ ॥
ಅನುವಾದ
ಹಿಂದೆ ಮಹಾಯಶೋವಂತ ನನ್ನ ತಂದೆ ಸುದೇವನೆಂಬುವರ ವಿದರ್ಭದೇಶದ ರಾಜರಾಗಿದ್ದರು. ಅವರು ಮೂರುಲೋಕಗಳಲ್ಲಿ ವಿಖ್ಯಾತ ಪರಾಕ್ರಮಿಗಳಾಗಿದ್ದರು.॥3॥
ಮೂಲಮ್ - 4
ತಸ್ಯ ಪುತ್ರದ್ವಯಂ ಬ್ರಹ್ಮನ್ದ್ವ್ವಾಭ್ಯಾಂ ಸ್ತ್ರೀಭ್ಯಾಮಜಾಯತ ।
ಅಹಂ ಶ್ವೇತ ಇತಿ ಖ್ಯಾತೋ ಯವೀಯಾನ್ಸುರಥೋಽಭವತ್ ॥
ಅನುವಾದ
ಬ್ರಹ್ಮನ್! ಅವರಿಗೆ ಇಬ್ಬರು ಪತ್ನಿಯರಿದ್ದು, ಅವರಲ್ಲಿ ಇಬ್ಬರು ಪುತ್ರರು ಹುಟ್ಟಿದರು. ಅದರಲ್ಲಿ ಹಿರಿಯವ ನಾನು ಶ್ವೇತನೆಂದು ಪ್ರಸಿದ್ಧನಾದೆ. ಕಿರಿಯವನ ಹೆಸರು ಸುರಥ ಎಂದಿತ್ತು.॥4॥
ಮೂಲಮ್ - 5
ತತಃ ಪಿತರಿ ಸ್ವರ್ಯಾತೇ ಪೌರಾ ಮಾಮಭ್ಯಷೇಚಯನ್ ।
ತತ್ರಾಹಂ ಕೃತವಾನ್ರಾಜ್ಯಂ ಧರ್ಮ್ಯಂ ಚ ಸುಸಮಾಹಿತಃ ॥
ಅನುವಾದ
ತಂದೆಯು ಸ್ವರ್ಗಸ್ಥನಾದ ಬಳಿಕ ಪ್ರಜೆಗಳು ನನಗೆ ರಾಜ್ಯದ ಪಟ್ಟ ಕಟ್ಟಿದರು. ನಾನು ಎಚ್ಚರಿಕೆಯಿಂದ ಧರ್ಮಾನುಕೂಲ ರಾಜ್ಯವಾಳಿದೆ.॥5॥
ಮೂಲಮ್ - 6
ಏವಂ ವರ್ಷಸಹಸ್ರಾಣಿ ಸಮತೀತಾನಿ ಸುವ್ರತ ।
ರಾಜ್ಯಂ ಕಾರಯತೋ ಬ್ರಹ್ಮನ್ಪ್ರಜಾ ಧರ್ಮೇಣ ರಕ್ಷತಃ ॥
ಅನುವಾದ
ಸುವ್ರತ ಬ್ರಹ್ಮರ್ಷಿಯೇ! ಹೀಗೆ ಧರ್ಮಪೂರ್ವಕ ಪ್ರಜೆಯನ್ನು ರಕ್ಷಿಸುತ್ತಾ ಒಂದು ಸಾವಿರ ವರ್ಷ ಕಳೆಯಿತು.॥6॥
ಮೂಲಮ್ - 7
ಸೋಽಹಂ ನಿಮಿತ್ತೇ ಕಸ್ಮಿಂಶ್ಚಿದ್ವಿಜ್ಞಾತಾಯುರ್ದ್ವಿಜೋತ್ತಮ ।
ಕಾಲಧರ್ಮಂ ಹೃದಿ ನ್ಯಸ್ಯ ತತೋವನಮುಪಾಗಮಮ್ ॥
ಅನುವಾದ
ದ್ವಿಜಶ್ರೇಷ್ಠನೇ! ಒಮ್ಮೆ ನನಗೆ ಯಾವುದೋ ನಿಮಿತ್ತದಿಂದ ನನ್ನ ಆಯುಸ್ಸಿನ ಕೊನೆ ಅರಿವಾಯಿತು. ನಾನು ಮೃತ್ಯು ದಿನವನ್ನು ಮನಸ್ಸಿನಲ್ಲಿಟ್ಟು ಕೊಂಡು ವನಕ್ಕೆ ತೆರಳಿದೆನು.॥7॥
ಮೂಲಮ್ - 8
ಸೋಽಹಂ ವನಮಿದಂ ದುರ್ಗಂ ಮೃಗಪಕ್ಷಿವಿವರ್ಜಿತಮ್ ।
ತಪಶ್ಚರ್ತುಂ ಪ್ರವಿಷ್ಟೋಽಸ್ಮಿ ಸಮೀಪೇ ಸರಸಃ ಶುಭೇ ॥
ಅನುವಾದ
ಆಗ ನಾನು ಈ ದುರ್ಗಮವನಕ್ಕೆ ಬಂದೆ. ಇದರಲ್ಲಿ ಪಶು-ಪಕ್ಷಿ ಇರಲಿಲ್ಲ. ಕಾಡಿಗೆ ಬಂದು ನಾನು ಇದೇ ಸರೋವರದ ತೀರದಲ್ಲಿ ತಪಸ್ಸಿಗೆ ಕುಳಿತು.॥8॥
ಮೂಲಮ್ - 9
ಭ್ರಾತರಂ ಸುರಥಂ ರಾಜ್ಯೇ ಅಭಿಷಿಚ್ಯ ಮಹೀಪತಿಮ್ ।
ಇದಂ ಸರಃ ಸಮಾಸಾದ್ಯ ತಪಸ್ತಪ್ತಂ ಮಯಾ ಚಿರಮ್ ॥
ಅನುವಾದ
ರಾಜ್ಯಕ್ಕೆ ತಮ್ಮ ಸುರಥನಿಗೆ ಪಟ್ಟ ಕಟ್ಟಿ ಈ ಸರೋವರದ ಬಳಿ ನಾನು ದೀರ್ಘಕಾಲ ತಪಸ್ಸು ಮಾಡಿದೆ.॥9॥
ಮೂಲಮ್ - 10
ಸೋಽಹಂ ವರ್ಷಸಹಸ್ರಾಣಿ ತಪಸ್ತ್ರೀಣಿ ಮಹಾವನೇ ।
ತಪ್ತ್ವಾ ಸುದುಷ್ಕರಂ ಪ್ರಾಪ್ತೋ ಬ್ರಹ್ಮಲೋಕಮನುತ್ತಮಮ್ ॥
ಅನುವಾದ
ಈ ವಿಶಾಲ ವನದಲ್ಲಿ ಮೂರುಸಾವಿರ ವರ್ಷಗಳವರೆಗೆ ಅತ್ಯಂತ ದುಷ್ಕರ ತಪಸ್ಸು ಮಾಡಿ ನಾನು ಪರಮೋತ್ತಮ ಬ್ರಹ್ಮಲೋಕವನ್ನು ಪಡೆದೆ.॥10॥
ಮೂಲಮ್ - 11
ತಸ್ಯೇಮೇ ಸ್ವರ್ಗಭೂತಸ್ಯ ಕ್ಷುತ್ಪಿಪಾಸೇ ದ್ವಿಜೋತ್ತಮ ।
ಬಾಧೇತೇ ಪರಮೋದಾರ ತತೋಽಹಂ ವ್ಯಥಿತೇಂದ್ರಿಯಃ ॥
ಅನುವಾದ
ಪರಮೋದಾರ ದ್ವಿಜಶ್ರೇಷ್ಠರೇ! ಬ್ರಹ್ಮಲೋಕಕ್ಕೆ ಹೋದ ಬಳಿಕವೂ ನನಗೆ ಹಸಿವು-ಬಾಯಾರಿಕೆ ಸತಾಯಿಸುತ್ತಿದ್ದವು. ಅಂದರಿಂದ ನನ್ನ ಎಲ್ಲ ಇಂದ್ರಿಯಗಳು ಶಿಥಿಲವಾದವು.॥11॥
ಮೂಲಮ್ - 12
ಗತ್ವಾ ತ್ರಿಭುವನಶ್ರೇಷ್ಠಂ ಪಿತಾಮಹಮುವಾಚ ಹ ।
ಭಗವನ್ ಬ್ರಹ್ಮಲೋಕೋಽಯಂ ಕ್ಷುತ್ಪಿಪಾಸಾವಿವರ್ಜಿತಃ ॥
ಮೂಲಮ್ - 13
ಕಸ್ಯಾಯಂ ಕರ್ಮಣಃ ಪಾಕಃ ಕ್ಷುತ್ಪಿಪಾಸಾನುಗೋ ಹ್ಯಹಮ್ ।
ಆಹಾರಃ ಕಶ್ಚ ಮೇ ದೇವ ತನ್ಮೇ ಬ್ರೂಹಿ ಪಿತಾಮಹ ॥
ಅನುವಾದ
ಒಂದು ದಿನ ತ್ರಿಭುವನಶ್ರೇಷ್ಠ ಭಗವಾನ್ ಬ್ರಹ್ಮದೇವರಲ್ಲಿ ಕೇಳಿದೆ - ಸ್ವಾಮಿ! ಈ ಬ್ರಹ್ಮಲೋಕವು ಹಸಿವು-ಬಾಯಾರಿಕೆಗಳಿಂದ ರಹಿತವಾಗಿದ್ದರೂ ಇಲ್ಲಿಯೂ ಇದು ನನ್ನ ಬೆನ್ನು ಬಿಡುವುದಿಲ್ಲ. ಇದು ನನ್ನ ಯಾವ ಕರ್ಮದ ಫಲವಾಗಿದೆ? ಪಿತಾಮಹನೇ! ನನ್ನ ಆಹಾರವೇನೆಂದು ತಿಳಿಸಿರಿ.॥12-13॥
ಮೂಲಮ್ - 14
ಪಿತಾಮಹಸ್ತು ಮಾಮಾಹ ತವಾಹಾರಃ ಸುದೇವಜ ।
ಸ್ವಾದೂನಿ ಸ್ವಾನಿ ಮಾಂಸಾನಿ ತಾನಿ ಭಕ್ಷಯ ನಿತ್ಯಶಃ ॥
ಅನುವಾದ
ಇದನ್ನು ಕೇಳಿ ಬ್ರಹ್ಮದೇವರು ಹೇಳಿದರು - ಸುದೇವ ನಂದನ! ನೀನು ಮರ್ತ್ಯಲೋಕದಲ್ಲಿ ಇರುವ ನಿನ್ನದೇ ಶರೀರದ ಸುಸ್ವಾದು ಮಾಂಸವನ್ನು ಪ್ರತಿದಿನ ತಿನ್ನು; ಇದೇ ನಿನ್ನ ಆಹಾರವಾಗಿದೆ.॥14॥
ಮೂಲಮ್ - 15
ಸ್ವಶರೀರಂ ತ್ವಯಾ ಪುಷ್ಟಂ ಕುರ್ವತಾ ತಪ ಉತ್ತಮಮ್ ।
ಅನುಪ್ತಂ ರೋಹತೇ ಶ್ವೇತ ನ ಕದಾಚಿನ್ಮಹಾಮತೇ ॥
ಅನುವಾದ
ಶ್ವೇತನೇ! ನೀನು ಉತ್ತಮ ತಪಸ್ಸು ಮಾಡುತ್ತಾ ಕೇವಲ ತನ್ನ ಶರೀರವನ್ನೇ ಪೋಷಿಸಿದೆ. ಮಹಾಮತೇ! ದಾನರೂಪೀ ಬೀಜ ಬಿತ್ತದೆ ಎಲ್ಲಿಯೂ ಯಾವುದೇ ಭೋಜ್ಯಪದಾರ್ಥ ಸಿಗುವುದಿಲ್ಲ.॥15॥
ಮೂಲಮ್ - 16
ದತ್ತಂ ನ ತೇಽಸ್ಮಿ ಸೂಕ್ಷ್ಮೋಽಪಿ ತಪಏವ ನಿಷೇವಸೇ ।
ತೇನ ಸ್ವರ್ಗಗತೋ ವತ್ಸ ಬಾಧ್ಯಸೇ ಕ್ಷುತ್ಪಿಪಾಸಯಾ ॥
ಅನುವಾದ
ನೀನು ದೇವತೆಗಳಿಗೆ, ಪಿತೃಗಳಿಗೆ, ಅತಿಥಿಗಳಿಗೆ ಎಂದೂ ಏನನ್ನೂ ದಾನ ಮಾಡಿದುದು ಕಂಡು ಬರುವುದಿಲ್ಲ. ನೀನು ಕೇವಲ ತಪಸ್ಸನ್ನೇ ಮಾಡುತ್ತಿದ್ದೆ. ವತ್ಸ! ಅದರಿಂದ ಬ್ರಹ್ಮಲೋಕಕ್ಕೆ ಬಂದರೂ ಹಸಿವು-ಬಾಯಾರಿಕೆಯಿಂದ ಪೀಡಿತನಾಗಿರುವೆ.॥16॥
ಮೂಲಮ್ - 17
ಸ ತ್ವಂ ಸುಪುಷ್ಟಮಾಹಾರೈಃ ಸ್ವಶರೀರಮನುತ್ತಮಮ್ ।
ಭಕ್ಷಯಿತ್ವಾಮೃತರಸಂ ತೇನ ತೃಪ್ತಿರ್ಭವಿಷ್ಯತಿ ॥
ಅನುವಾದ
ನಾನಾ ರೀತಿಯ ಆಹಾರದಿಂದ ಪೋಷಿಸಲ್ಪಟ್ಟ ನಿನ್ನ ಈ ಪರಮೋತ್ತಮ ಶರೀರ ಅಮೃತರಸದಿಂದ ಕೂಡಿರುವುದು. ಅದನ್ನೇ ತಿನ್ನುವುದರಿಂದ ನಿನ್ನ ಕ್ಷುಧೆ-ತೃಷೆ ನಿವಾರಣವಾಗುವುದು.॥17॥
ಮೂಲಮ್ - 18
ಯದಾತು ತದ್ವನಂ ಶ್ವೇತ ಅಗಸ್ತ್ಯಃ ಸ ಮಹಾನೃಷಿಃ ।
ಆಗಮಿಷ್ಯತಿ ದುರ್ಧರ್ಷಸ್ತದಾ ಕೃಚ್ಛ್ರಾದ್ವಿಮೋಕ್ಷ್ಯಸೇ ॥
ಅನುವಾದ
ಶ್ವೇತ! ಆ ವನದಲ್ಲಿ ದುರ್ಧರ್ಷ ಮಹರ್ಷಿ ಅಗಸ್ತ್ಯರು ಆಗಮಿಸಿದಾಗ ನೀನು ಈ ಕಷ್ಟದಿಂದ ಬಿಡುಗಡೆ ಹೊಂದುವೆ.॥18॥
ಮೂಲಮ್ - 19
ಸ ಹಿ ತಾರಯಿತುಂ ಸೌಮ್ಯಶಕ್ತಃ ಸುರಗಣಾನಪಿ ।
ಕಿಂ ಪಿನಸ್ತ್ವಾಂ ಮಹಾಬಾಹೋ ಕ್ಷುತ್ಪಿಪಾಸಾವಶಂಗತಮ್ ॥
ಅನುವಾದ
ಸೌಮ್ಯ! ಮಹಾಬಾಹೋ! ಅವರು ದೇವತೆಗಳನ್ನು ಉದ್ಧರಿಸಲು ಸಮರ್ಥರಾಗಿದ್ದಾರೆ. ಹಾಗಿರುವಾಗ ಹಸಿವು- ಬಾಯಾರಿಕೆಯ ವಶನಾದ ನಿನ್ನಂತಹ ಪುರುಷನನ್ನು ಸಂಕಟದಿಂದ ಬಿಡಿಸುವುದು ಯಾವ ದೊಡ್ಡ ಮಾತು.॥19॥
ಮೂಲಮ್ - 20
ಸೋಽಹಂ ಭಗವತಃ ಶ್ರುತ್ವಾ ದೇವದೇವಸ್ಯ ನಿಶ್ಚಯಮ್ ।
ಆಹಾರಂ ಗರ್ಹಿತಂ ಕುರ್ಮಿ ಸ್ವಶರೀರಂ ದ್ವಿಜೋತ್ತಮ ॥
ಅನುವಾದ
ದ್ವಿಜಶ್ರೇಷ್ಠರೇ! ದೇವಾಧಿದೇವ ಭಗವಾನ್ ಬ್ರಹ್ಮದೇವರ ಈ ನಿಶ್ಚಯವನ್ನು ಕೇಳಿ ನಾನು ತನ್ನ ಶರೀರದ್ದೇ ನಿಂದಿತ ಆಹಾರ ಸ್ವೀಕರಿಸುತ್ತಾ ಇದ್ದೇನೆ.॥20॥
ಮೂಲಮ್ - 21
ಬಹೂನ್ವರ್ಷಗಣಾನ್ ಬ್ರಹ್ಮನ್ ಭುಜ್ಯಮಾನಮಿದಂ ಮಯಾ ।
ಕ್ಷಯಂ ನಾಭ್ಯೇತಿ ಬ್ರಹ್ಮರ್ಷೇ ತೃಪ್ತಿಶ್ಚಾಪಿಮಮೋತ್ತಮಾ ॥
ಅನುವಾದ
ಬ್ರಹ್ಮರ್ಷಿಯೇ! ಬಹಳ ವರ್ಷಗಳಿಂದ ನಾನು ಉಪಯೋಗಿಸುತ್ತಿದ್ದರೂ ಈ ಶರೀರ ನಾಶವಾಗಲಿಲ್ಲ, ಅದರಿಂದ ನನಗೆ ಪೂರ್ಣ ತೃಪ್ತಿಯಾಗುತ್ತದೆ.॥21॥
ಮೂಲಮ್ - 22
ತಸ್ಯ ಮೇ ಕೃಚ್ಛ್ರಭೂತಸ್ಯ ಕೃಚ್ಛ್ರಾದಸ್ಮಾದ್ವಿಮೋಕ್ಷಯ ।
ಅನ್ಯೇಷಾಂ ನ ಗತಿರ್ಹ್ಯತ್ರ ಕುಂಭಯೋನಿಮೃತೇ ದ್ವಿಜಮ್ ॥
ಅನುವಾದ
ಮುನಿಗಳೇ! ಹೀಗೆ ನಾನು ಸಂಕಟದಲ್ಲಿ ಬಿದ್ದಿರುವೆನು. ನಿಮ್ಮನ್ನು ಇಂದು ನೋಡಿದೆ, ಅದಕ್ಕಾಗಿ ಈ ಕಷ್ಟದಿಂದ ನನ್ನನ್ನು ಉದ್ಧರಿಸಿರಿ. ನಿಮ್ಮಂತಹ ಬ್ರಹ್ಮರ್ಷಿ ಕುಂಭಜರಲ್ಲದೆ ಇತರರು ಈ ನಿರ್ಜನ ವನಕ್ಕೆ ಬರಲಾರರು. ಇದರಿಂದ ನೀವೇ ಖಂಡಿತವಾಗಿ ಕುಂಭಜ ಅಗಸ್ತ್ಯರಾಗಿರುವಿರಿ.॥22॥
ಮೂಲಮ್ - 23
ಇದಮಾಭರಣಂ ಸೌಮ್ಯ ತಾರಣಾರ್ಥಂ ದ್ವಿಜೋತ್ತಮ ।
ಪ್ರತಿಗೃಹ್ಣೀಷ್ವ ಭದ್ರಂ ತೇ ಪ್ರಸಾದಂ ಕರ್ತುಮರ್ಹಸಿ ॥
ಅನುವಾದ
ಸೌಮ್ಯ! ವಿಪ್ರವರರೇ! ನಿಮಗೆ ಮಂಗಳವಾಗಲೀ. ನೀವು ನನ್ನ ಉದ್ಧಾರ ಮಾಡುವುದಕ್ಕಾಗಿ ಈ ಆಭೂಷಣವನ್ನು ಸ್ವೀಕರಿಸಿರಿ ಹಾಗೂ ನಿಮ್ಮ ಕೃಪಾಪ್ರಸಾದ ನನಗೆ ಕರುಣಿಸಿರಿ.॥23॥
ಮೂಲಮ್ - 24
ಇದಂ ತಾವತ್ಸುವರ್ಣಂ ಚ ಧನಂ ವಸ್ತ್ರಾಣಿ ಚ ದ್ವಿಜ ।
ಭಕ್ಷ್ಯಂ ಭೋಜ್ಯಂ ಚ ಬ್ರಹ್ಮರ್ಷೇ ದದಾತ್ಯಾಭರಣಾನಿಚ ॥
ಅನುವಾದ
ಬ್ರಹ್ಮರ್ಷಿಯೇ! ಈ ದಿವ್ಯ ಆಭೂಷಣವು ಸುವರ್ಣ, ಧನ, ವಸ್ತ್ರ, ಭಕ್ಷ್ಯ-ಭೋಜ್ಯ ಹಾಗೂ ಇತರ ನಾನಾ ಪ್ರಕಾರದ ಆಭರಣಗಳನ್ನು ಕೊಡುತ್ತದೆ.॥24॥
ಮೂಲಮ್ - 25
ಸರ್ವಾನ್ಕಾಮಾನ್ ಪ್ರಯಚ್ಛಾಮಿ ಭೋಗಾಂಶ್ಚ ಮುನಿಪುಂಗವ ।
ತಾರಣೇ ಭಗವನ್ಮಹ್ಯಂ ಪ್ರಸಾದಂ ಕರ್ತುಮರ್ಹಸಿ ॥
ಅನುವಾದ
ಮುನಿಶ್ರೇಷ್ಠರೇ! ಈ ಭೂಷಣದ ಮೂಲಕ ನಾನು ಸಮಸ್ತ ಕಾಮನೆಗಳನ್ನು, ಭೋಗಗಳನ್ನು ಕೊಡುತ್ತಾ ಇದ್ದೇನೆ. ಪೂಜ್ಯರೇ! ನನ್ನ ಉದ್ಧಾರಕ್ಕಾಗಿ ನೀವು ನನ್ನ ಮೇಲೆ ಕೃಪೆ ಮಾಡಿರಿ.॥25॥
ಮೂಲಮ್ - 26
ತಸ್ಯಾಹಂ ಸ್ವರ್ಗಿಣೋ ವಾಕ್ಯಂ ಶ್ರುತ್ವಾ ದುಃಖಸಮನ್ವಿತಮ್ ।
ತಾರಣಾಯೋಪಜಗ್ರಾಹ ತದಾಭರಣಮುತ್ತಮಮ್ ॥
ಅನುವಾದ
ಸ್ವರ್ಗೀಯ ರಾಜಾ ಶ್ವೇತನ ಈ ದುಃಖ ತುಂಬಿದ ಮಾತನ್ನು ಕೇಳಿ, ನಾನು ಅವನನ್ನು ಉದ್ಧರಿಸಲು ಆ ಉತ್ತಮ ಆಭೂಷಣವನ್ನು ಪಡೆದೆ.॥26॥
ಮೂಲಮ್ - 27
ಮಯಾ ಪ್ರತಿಗೃಹೀತೇ ತು ತಸ್ಮಿನ್ನಾಭರಣೇ ಶುಭೇ ।
ಮಾನುಷಃ ಪೂರ್ವಕೋ ದೇಹೋ ರಾಜರ್ಷೇರ್ವಿನನಾಶ ಹ ॥
ಅನುವಾದ
ನಾನು ಆ ಶುಭ ಆಭೂಷಣದ ದಾನ ಸ್ವೀಕರಿಸುತ್ತಲೇ ರಾಜರ್ಷಿ ಶ್ವೇತನ ಆ ಹಿಂದಿನ ಶರೀರ (ಶವ) ಕಣ್ಮರೆಯಾಯಿತು.॥27॥
ಮೂಲಮ್ - 28
ಪ್ರಣಷ್ಟೇ ತು ಶರೀರೇಽಸೌ ರಾಜರ್ಷಿಃ ಪರಯಾ ಮುದಾ ।
ತೃಪ್ತಃ ಪ್ರಮುದಿತೋ ರಾಜಾ ಜಗಾಮ ತ್ರಿದಿವಂ ಸುಖಮ್ ॥
ಅನುವಾದ
ಆ ಶರೀರವು ಅದೃಶ್ಯವಾದಾಗ ರಾಜರ್ಷಿ ಶ್ವೇತನು ಪರಮಾ ನಂದದಿಂದ ತೃಪ್ತನಾಗಿ ಪ್ರಸನ್ನತೆಯಿಂದ ಸುಖಮಯ ಬ್ರಹ್ಮಲೋಕಕ್ಕೆ ತೆರಳಿದನು.॥28॥
ಮೂಲಮ್ - 29
ತೇನೇದಂ ಶಕ್ರತುಲ್ಯೇನ ದಿವ್ಯಮಾಭರಣಂ ಮಮ ।
ತಸ್ಮಿನ್ನಿಮಿತ್ತೇ ಕಾಕುತ್ಸ್ಥ ದತ್ತಮದ್ಭುತದರ್ಶನಮ್ ॥
ಅನುವಾದ
ಕಾಕುತ್ಸ್ಥ! ಆ ಇಂದ್ರತುಲ್ಯ ತೇಜಸ್ವೀ ರಾಜಾಶ್ರೇತನು ಆ ಹಸಿವು-ಬಾಯಾರಿಕೆಯ ನಿವಾರಣರೂಪೀ ಹಿಂದಿನ ಕಾರಣದಿಂದ ಅದ್ಭುತವಾಗಿ ಕಂಡುಬರುವ ಈ ಆಭೂಷಣವನ್ನು ನನಗೆ ಕೊಟ್ಟಿದ್ದನು.॥29॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಎಪ್ಪತ್ತೆಂಟನೆಯ ಸರ್ಗ ಪೂರ್ಣವಾಯಿತು. ॥78॥