[ಎಪ್ಪತ್ತೇಳನೆಯ ಸರ್ಗ]
ಭಾಗಸೂಚನಾ
ಅಗಸ್ತ್ಯರು ಸ್ವರ್ಗೀಯ ಪುರುಷನೊಬ್ಬನು ಶವಭಕ್ಷಣೆ ಮಾಡಿದ ಪ್ರಸಂಗವನ್ನು ಶ್ರೀರಾಮನಿಗೆ ಹೇಳಿದುದು
ಮೂಲಮ್ - 1
ಪುರಾ ತ್ರೇತಾಯುಗೇ ರಾಮ ಬಭೂವಂ ಬಹುವಿಸ್ತರಮ್ ।
ಸಮಂತಾದ್ಯೋಜನಶತಂ ವಿಮೃಗಂ ಪಕ್ಷಿವರ್ಜಿತಮ್ ॥
ಅನುವಾದ
(ಅಗಸ್ತ್ಯರು ಹೇಳುತ್ತಾರೆ -) ಶ್ರೀರಾಮಾ! ಹಿಂದಿನ ತ್ರೇತಾಯುಗದ ಮಾತು - ಒಂದು ಬಹಳ ದೊಡ್ಡ ವನವಿತ್ತು, ಅದು ಸುತ್ತಲೂ ನೂರು ಯೋಜನ ವ್ಯಾಪಿಸಿತ್ತು; ಆದರೆ ಆ ವನದಲ್ಲಿ ಪಶು-ಪಕ್ಷಿಗಳು ಇರಲಿಲ್ಲ.॥1॥
ಮೂಲಮ್ - 2
ತಸ್ಮಿನ್ನಿರ್ಮಾನುಷೇಽರಣ್ಯೇ ಕುರ್ವಾಣಸ್ತಪ ಉತ್ತಮಮ್ ।
ಅಹಮಾಕ್ರಮಿತುಂ ಸೌಮ್ಯ ತದರಣ್ಯ ಮುಪಾಗಮಮ್ ॥
ಅನುವಾದ
ಸೌಮ್ಯ! ಆ ನಿರ್ಜನ ವನದಲ್ಲಿ ಉತ್ತಮ ತಪಸ್ಸು ಮಾಡಲು ಉಪಯುಕ್ತ ಸ್ಥಾನವನ್ನು ಹುಡುಕುತ್ತಾ ತಿರುಗಾಡುತ್ತಾ ನಾನು ಅಲ್ಲಿಗೆ ಹೋದೆ.॥2॥
ಮೂಲಮ್ - 3
ತಸ್ಯ ರೂಪಮರಣ್ಯಸ್ಯ ನಿರ್ದೇಷ್ಟುಂ ನ ಶಶಾಕ ಹ ।
ಫಲಮೂಲೈಃ ಸುಖಾಸ್ವಾದೈರ್ಬಹುರೂಪೈಶ್ಚ ಪಾದಪೈಃ ॥
ಅನುವಾದ
ಆ ವನವು ಎಷ್ಟು ಸುಖದಾಯಕ ಇದ್ದಿತೋ, ಅದನ್ನು ತಿಳಿಸಲು ನಾನು ಅಸಮರ್ಥನಾಗಿದ್ದೇನೆ. ಸ್ವಾದಿಷ್ಟ ಫಲ-ಮೂಲ ಹಾಗೂ ಅನೇಕ ಆಕಾರದ ಬಣ್ಣದ ವೃಕ್ಷಗಳು ಅದರ ಶೋಭೆ ಹೆಚ್ಚಿಸಿದ್ದವು.॥3॥
ಮೂಲಮ್ - 4
ತಸ್ಯಾರಣ್ಯಸ್ಯ ಮಧ್ಯೇ ತು ಸರೋ ಯೋಜನಮಾಯತಮ್ ।
ಹಂಸಕಾರಂಡವಾಕೀರ್ಣಂ ಚಕ್ರವಾಕೋಪಶೋಭಿತಮ್ ॥
ಅನುವಾದ
ಆ ವನದ ಮಧ್ಯದಲ್ಲಿ ಒಂದು ಸರೋವರವಿತ್ತು, ಅದರ ಉದ್ದ-ಅಗಲ ಒಂದೊಂದು ಯೋಜನವಿತ್ತು. ಅದರಲ್ಲಿ ಹಂಸ, ಕಾರಂಡವ, ಮೊದಲಾದ ಜಲಪಕ್ಷಿಗಳಿದ್ದು, ಚಕ್ರವಾಕಗಳ ಜೋಡಿಗಳು ಅದರ ಶೋಭೆ ಹೆಚ್ಚಿಸಿದ್ದವು.॥4॥
ಮೂಲಮ್ - 5
ಪದ್ಮೋತ್ಪಲಸಮಾಕೀರ್ಣಂ ಸಮತಿಕ್ರಾಂತಶೈವಲಮ್ ।
ತದಾಶ್ಚರ್ಯಮಿವಾತ್ಯರ್ಥಂ ಸುಖಾಸ್ವಾದಮನುತ್ತಮಮ್ ॥
ಅನುವಾದ
ಅದರಲ್ಲಿ ಕಮಲ, ನೈದಿಲೆ ಅರಳಿದ್ದವು, ಸರೋವರಕ್ಕೆ ಯಾವುದೇ ಹೆಸರಿರಲಿಲ್ಲ. ಆ ಪರಮೋತ್ತಮ ಸರೋವರ ಅತ್ಯಂತ ಆಶ್ಚರ್ಯಮಯವಾಗಿ ಕಾಣುತ್ತಿತ್ತು. ಅದರ ನೀರು ಕುಡಿಯಲು ಸ್ವಾದಿಷ್ಟ ಮತ್ತು ಸುಖದವಾಗಿತ್ತು.॥5॥
ಮೂಲಮ್ - 6½
ಅರಜಸ್ಕಂ ತದಕ್ಷೋಭ್ಯಂ ಶ್ರೀಮತ್ಪಕ್ಷಿಗಣಾಯುತಮ್ ।
ತಸ್ಮಿನ್ ಸರಃಸಮೀಪೇತು ಮಹದದ್ಭುತಮಾಶ್ರಮಮ್ ॥
ಪುರಾಣಂಪುಣ್ಯಮತ್ಯರ್ಥಂ ತಪಸ್ವಿಜನವರ್ಜಿತಮ್ ।
ಅನುವಾದ
ಕೆಸರಿಲ್ಲದೆ ಅದು ಸ್ವಚ್ಛವಾಗಿತ್ತು. ಅದನ್ನು ಯಾರೂ ದಾಟಲಾರರು. ಅದರೊಳಗೆ ಸುಂದರ ಪಕ್ಷಿಳು ಕಲರವ ಮಾಡುತ್ತಿದ್ದವು. ಆ ಸರೋವರದ ಬಳಿ ಒಂದು ಪುರಾತನ, ವಿಶಾಲ, ಅದ್ಭುತ ಆಶ್ರಮವಿದ್ದು, ಆದರೆ ಒಬ್ಬನೂ ತಪಸ್ವಿಗಳು ಇರಲಿಲ್ಲ.॥6½॥
ಮೂಲಮ್ - 7½
ತತ್ರಾಹಮವಸಂ ರಾತ್ರಿಂ ನೈದಾಘೀಂ ಪುರುಷರ್ಷಭ ॥
ಪ್ರಭಾತೇ ಕಲ್ಯಮುತ್ಥಾಯ ಸರಸ್ತದುಪಚಕ್ರಮೇ ।
ಅನುವಾದ
ಪುರುಷಶ್ರೇಷ್ಠನೇ! ಗ್ರೀಷ್ಮಋತುವಿನ ರಾತ್ರಿಯಲ್ಲಿ ನಾನು ಆ ಆಶ್ರಮದಲ್ಲಿ ತಂಗಿದ್ದೆ. ಪ್ರಾತಃಕಾಲ ಎದ್ದು ಸ್ನಾನಾದಿ ಗಳಿಗಾಗಿ ನಾನು ಆ ಸರೋವರದ ತಡಿಗೆ ಹೋದೆ.॥7½॥
ಮೂಲಮ್ - 8½
ಅಥಾಪಶ್ಯಂ ಶವಂ ತತ್ರ ಸುಪುಷ್ಟಮರಜಃ ಕ್ವಚಿತ್ ॥
ತಿಷ್ಠಂತಂ ಪರಯಾ ಲಕ್ಷ್ಮ್ಯಾ ತಸ್ಮಿಂಸ್ತೋಯಾಶಯೇ ನೃಪ ।
ಅನುವಾದ
ಆಗ ನನಗೆ ಅಲ್ಲಿ ಹೃಷ್ಟ-ಪುಷ್ಟವಾದ, ನಿರ್ಮಲವಾದ ಒಂದು ಶವ ಕಂಡುಬಂತು. ಅದರಲ್ಲಿ ಎಲ್ಲಿಯೂ ಮಲಿನತೆ ಇರಲಿಲ್ಲ. ನರೇಶ್ವರ! ಆ ಶವವು ಜಲಾಶಯದ ತೀರದಲ್ಲಿ ಬಿದ್ದಿತ್ತು.॥8½॥
ಮೂಲಮ್ - 9½
ತಮರ್ಥಂ ಚಿಂತಯಾನೋಹಂ ಮುಹೂರ್ತಂ ತತ್ರ ರಾಘವ ॥
ವಿಷ್ಠಿತೋಽಸ್ಮಿ ಸರಸ್ತೀರೇ ಕಿಂ ನ್ವಿದಂ ಸ್ಯಾದಿತಿಪ್ರಭೋ ।
ಅನುವಾದ
ಪ್ರಭೋ! ರಘುನಂದನ! ಇದೇನು ಎಂದು ನಾನು ಆ ಶವದ ಕುರಿತು ಯೋಚಿಸುತ್ತಿದ್ದೆ. ಅಲ್ಲಿ ಎರಡು ಗಳಿಗೆ ಆ ಪುಷ್ಕರಿಣಿಯ ತೀರದಲ್ಲಿ ಕುಳಿತ್ತಿದ್ದೆ.॥9½॥
ಮೂಲಮ್ - 10
ಅಥಾಪಶ್ಯಂ ಮುಹೂರ್ತಾತ್ತು ದಿವ್ಯಮದ್ಭುತದರ್ಶನಮ್ ॥
ಮೂಲಮ್ - 11½
ವಿಮಾನಂ ಪರಮೋದಾರಂ ಹಂಸಯುಕ್ತಂ ಮನೋಜವಮ್ ।
ಅತ್ಯರ್ಥಂಸ್ವರ್ಗಿಣಂ ತತ್ರ ವಿಮಾನೇ ರಘುನಂದನ ॥
ಉಪಾಸ್ತೇಽಪ್ಸರಸಾಂ ವೀರ ಸಹಸ್ರಂ ದಿವ್ಯಭೂಷಣಮ್ ।
ಅನುವಾದ
ಎರಡು ಗಳಿಗೆ ಕಳೆಯುತ್ತಲೇ ಅಲ್ಲಿ ಒಂದು ದಿವ್ಯ, ಅದ್ಭುತ, ಉತ್ತಮ ಹಂಸಯುಕ್ತ, ಮನೋವೇಗದಂತಹ ವಿಮಾನ ಇಳಿಯಿತು. ರಘುನಂದನ! ಆ ವಿಮಾನದಲ್ಲಿ ಅತ್ಯಂತ ರೂಪವಂತ ಓರ್ವ ಸ್ವರ್ಗವಾಸೀ ದೇವತೆ ಕುಳಿತ್ತಿದ್ದನು. ದಿವ್ಯ ಆಭೂಷಣಗಳಿಂದ ವಿಭೂಷಿತ ಸಾವಿರಾರು ಅಪ್ಸರೆಯರು ಅವನ ಸೇವೆಗಾಗಿ ಅದರಲ್ಲಿ ಕುಳಿತ್ತಿದ್ದರು.॥10-11½॥
ಮೂಲಮ್ - 12
ಗಾಯಂತಿ ಕಾಶ್ಚಿದ್ ರಮ್ಯಾಣಿ ವಾದಯಂತಿ ತಥಾಪರಾಃ ॥
ಮೂಲಮ್ - 13½
ಮೃದಂಗ ವೀಣಾಪಣವಾನ್ ನೃತ್ಯಂತಿ ಚ ತಥಾಪರಾಃ ।
ಅಪರಾಶ್ಚಂದ್ರರಶ್ಮ್ಯಾಭೈರ್ಹೇಮದಂಡೈರ್ಮಹಾಧನೈಃ ॥
ದೋಧೂಯುರ್ವದನಂ ತಸ್ಯ ಪುಂಡರೀಕನಿಭೇಕ್ಷಣಾಃ ।
ಅನುವಾದ
ಅವರಲ್ಲಿ ಕೆಲವರು ಮನೋಹರ ಹಾಡು ಹಾಡುತ್ತಿದ್ದರೆ, ಕೆಲವರು ಮೃದಂಗ, ವೀಣೆ, ಪಣವ ಮೊದಲಾದ ವಾದ್ಯಗಳನ್ನು ನುಡಿಸುತ್ತಿದ್ದರು. ಇತರ ಅನೇಕ ಅಪ್ಸರೆಯರು ನಾಟ್ಯವಾಡುತ್ತಿದ್ದರು. ಅರಳಿದ ಕಮಲಗಳಂತೆ ನೇತ್ರಗಳುಳ್ಳ ಇತರ ಅಪ್ಸರೆ ಯರು ಸ್ವರ್ಣಮಯ ದಂಡದಿಂದ ವಿಭೂಷಿತ, ಚಂದ್ರನಂತೆ ಬೆಳ್ಳಗಿನ ಚಾಮರಗಳನ್ನು ಬೀಸುತ್ತಾ ಸ್ವರ್ಗವಾಸೀ ದೇವತೆಗೆ ಗಾಳಿ ಹಾಕುತ್ತಿದ್ದರು.॥12-13½॥
ಮೂಲಮ್ - 14
ತತಃ ಸಿಂಹಾಸನಂ ಹಿತ್ವಾ ಮೇರುಕೂಟಮಿವಾಂಶುಮಾನ್ ॥
ಮೂಲಮ್ - 15
ಪಶ್ಯತೋ ಮೇ ತದಾ ರಾಮ ವಿಮಾನಾದವರುಹ್ಯ ಚ ।
ತಂ ಶವಂಭಕ್ಷಯಾಮಾಸ ಸ ಸ್ವರ್ಗೀ ರಘುನಂದನ ॥
ಅನುವಾದ
ರಘುಕುಲನಂದನ ಶ್ರೀರಾಮಾ! ಅನಂತರ ಸೂರ್ಯನು ಮೇರುಪರ್ವತದಿಂದ ಕೆಳಗೆ ಇಳಿಯುವಂತೆ ಆ ಸ್ವರ್ಗವಾಸೀ ಪುರುಷನು ವಿಮಾನದಿಂದ ಇಳಿದು ನಾನು ನೋಡು-ನೋಡುತ್ತಿರುವಂತೆಯೇ ಆ ಶವವನ್ನು ಭಕ್ಷಿಸಿದನು.॥14-15॥
ಮೂಲಮ್ - 16
ತತೋ ಭುಕ್ತ್ವಾ ಯಥಾಕಾಮಂ ಮಾಂಸಂ ಬಹು ಸುಪೀವರಮ್ ।
ಅವತೀರ್ಯ ತತಃ ಸ್ವರ್ಗೀ ಸಂಸ್ಪ್ರಷ್ಟುಮುಪಚಕ್ರಮೇ ॥
ಅನುವಾದ
ಸ್ವೇಚ್ಛೆಯಿಂದ ಆ ಸುಪುಷ್ಟ, ಸಾಕಷ್ಟು ಮಾಂಸವನ್ನು ತಿಂದು ಈ ಸ್ವರ್ಗೀಯ ದೇವತೆ ಸರೋವರಕ್ಕೆ ಇಳಿದು ಕೈ-ಬಾಯಿ ತೊಳೆಯತೊಡಗಿದನು.॥16॥
ಮೂಲಮ್ - 17
ಉಪಸ್ಪೃಶ್ಯ ಯಥಾನ್ಯಾಯಂ ಸ ಸ್ವರ್ಗೀ ರಘುನಂದನ ।
ಆರೋಢುಮುಪಚಕ್ರಾಮ ವಿಮಾನವರಮುತ್ತಮಮ್ ॥
ಅನುವಾದ
ರಘುನಂದನ! ಯಥೋಚಿತ ಬಾಯಿ ಮುಕ್ಕಳಿಸಿ ಆಚಮನ ಮಾಡಿ ಆ ಸ್ವರ್ಗವಾಸೀ ಪುರುಷನು ಆ ಉತ್ತಮ ವಿಮಾನವನ್ನು ಏರಲು ತೊಡಗಿದನು.॥17॥
ಮೂಲಮ್ - 18
ತಮಹಂ ದೇವಸಂಕಾಶಮಾರೋಹಂತಮುದೀಕ್ಷ್ಯ ವೈ ।
ಅಥಾಹಮಬ್ರುವಂವಾಕ್ಯಂ ತಮೇವ ಪುರುಷರ್ಷಭ ॥
ಅನುವಾದ
ಪುರುಷೋತ್ತಮ! ಆ ದೇವತುಲ್ಯ ಪುರುಷನು ವಿಮಾನವನ್ನು ಏರುವಾಗ ನಾನು ಅವನಲ್ಲಿ ಕೇಳಿದೆ.॥18॥
ಮೂಲಮ್ - 19
ಕೋ ಭವಾನ್ದೇವಸಂಕಾಶ ಆಹಾರಶ್ಚ ವಿಗರ್ಹಿತಃ ।
ತ್ವಯೇದಂ ಭುಜ್ಯತೇ ಸೌಮ್ಯ ಕಿಮರ್ಥಂ ವಕ್ತುಮರ್ಹಸಿ ॥
ಅನುವಾದ
ಸೌಮ್ಯ! ದೇವೋತ್ತಮ ಪುರುಷನೇ! ನೀವು ಯಾರು? ಯಾತಕ್ಕಾಗಿ ಇಂತಹ ಘ್ರಣಿತ ಆಹಾರ ಸ್ವೀಕರಿಸುತ್ತಿರುವಿರಿ? ಇದನ್ನು ತಿಳಿಸುವ ಕೃಪೆ ಮಾಡಿರಿ.॥19॥
ಮೂಲಮ್ - 20
ಕಸ್ಯ ಸ್ಯಾದೀದೃಶೋ ಭಾವ ಆಹಾರೋ ದೇವಸಮ್ಮತಃ ।
ಆಶ್ಚರ್ಯಂ ವರ್ತತೇ ಸೌಮ್ಯ ಶ್ರೋತುಮಿಚ್ಛಾಮಿ ತತ್ತ್ವತಃ ।
ನಾಹವೌಪಯಿಕಂ ಮನ್ಯೇ ತವ ಭಕ್ಷ್ಯಮಿಮಂಶವಮ್ ॥
ಅನುವಾದ
ದೇವತುಲ್ಯ ತೇಜಸ್ವೀ ಪುರುಷನೇ! ಇಂತಹ ದಿವ್ಯ ಸ್ವರೂಪ ಮತ್ತು ಇಂತಹ ನಿಂದ್ಯವಾದ ಆಹಾರ ಯಾರದಾಗಬಹುದು? ನಿಮ್ಮಲ್ಲಿ ಈ ಎರಡೂ ಆಶ್ಚರ್ಯಜನಕ ಮಾತುಗಳಿವೆ. ಆದ್ದರಿಂದ ನಾನು ಇದರ ಯಥಾರ್ಥ ರಹಸ್ಯ ಕೇಳಲು ಬಯಸುತ್ತೇನೆ. ಏಕೆಂದರೆ ಈ ಶವವು ನಿಮಗೆ ಯೋಗ್ಯ ಆಹಾರವೆಂದು ನಾನು ತಿಳಿಯುವುದಿಲ್ಲ.॥20॥
ಮೂಲಮ್ - 21
ಇತ್ಯೇವಮುಕ್ತಃ ಸ ನರೇಂದ್ರನಾಕೀ
ಕೌತೂಹಲಾತ್ಸೂನೃತಯಾ ಗಿರಾ ಚ ।
ಶ್ರುತ್ವಾ ಚ ವಾಕ್ಯಂ ಮಮ ಸರ್ವಮೇತತ್
ಸರ್ವಂ ತಥಾ ಚಾಕಥಯನ್ಮಮೇತಿ ॥
ಅನುವಾದ
ನರೇಶ್ವರ! ಕುತೂಹಲದಿಂದ ನಾನು ಮಧುರ ವಾಣಿಯಲ್ಲಿ ಆ ಸ್ವರ್ಗೀಯ ಪುರುಷನಲ್ಲಿ ಹೀಗೆ ಕೇಳಿದಾಗ ನನ್ನ ಮಾತುಗಳನ್ನು ಕೇಳಿ ಅವರು ನನಗೆ ಎಲ್ಲವನ್ನು ತಿಳಿಸಿದರು.॥21॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಎಪ್ಪತ್ತೇಳನೆಯ ಸರ್ಗ ಪೂರ್ಣವಾಯಿತು. ॥77॥