०७६ वधः

[ಎಪ್ಪತ್ತೈದನೆಯ ಸರ್ಗ]

ಭಾಗಸೂಚನಾ

ದುಷ್ಕರ್ಮಿಗಳನ್ನು ಹುಡುಕಲು ಪುಷ್ಪಕವಿಮಾನದಿಂದ ರಾಜ್ಯದ ಎಲ್ಲೆಡೆಗಳಲ್ಲಿಯೂ ಶ್ರೀರಾಮನ ಸಂಚಾರ, ಎಲ್ಲೆಡೆ ಸತ್ಕರ್ಮಿಗಳನ್ನೇ ಕಂಡು, ದಕ್ಷಿಣ ದಿಕ್ಕಿನಲ್ಲಿ ಪ್ರಯಾಣ ಮಾಡುತ್ತಾ ಶೂದ್ರತಪಸ್ವಿಯೊಬ್ಬನ ಬಳಿಗೆ ಹೋದುದು

ಮೂಲಮ್ - 1

ನಾರದಸ್ಯ ತು ತದ್ವಾಕ್ಯಂಶ್ರುತ್ವಾಮೃತಮಯಂ ಯಥಾ ।
ಪ್ರಹರ್ಷಮತುಲಂ ಲೇಭೇ ಲಕ್ಷ್ಮಣಂ ಚೇದಮಬ್ರವೀತ್ ॥

ಅನುವಾದ

ನಾರದರ ಅಮೃತಮಯ ಮಾತುಗಳನ್ನು ಕೇಳಿ ಶ್ರೀರಾಮನಿಗೆ ಅಪಾರ ಆನಂದ ಪ್ರಾಪ್ತವಾಗಿ, ಲಕ್ಷ್ಮಣನಲ್ಲಿ ಈ ಪ್ರಕಾರ ಹೇಳಿದನು.॥1॥

ಮೂಲಮ್ - 2

ಗಚ್ಛ ಸೌಮ್ಯ ದ್ವಿಜಶ್ರೇಷ್ಠಂ ಸಮಾಶ್ವಾಸಯ ಸುವ್ರತ ।
ಬಾಲಸ್ಯ ಚ ಶರೀರಂ ತತ್ತೈಲದ್ರೋಣ್ಯಾಂ ನಿಧಾಪಯ ॥

ಮೂಲಮ್ - 3

ಗಂಧೈಶ್ಚ ಪರಮೋದಾರೈಸ್ತೈಲೈಶ್ಚ ಸುಸುಗಂಧಿಭಿಃ ।
ಯಥಾ ನ ಕ್ಷೀಯತೇ ಬಾಲಸ್ತಥಾ ಸೌಮ್ಯ ವಿಧೀಯತಾಮ್ ॥

ಅನುವಾದ

ಸೌಮ್ಯ ! ಹೋಗು, ಸುವ್ರತನಾದ ಆ ಬ್ರಾಹ್ಮಣನಿಗೆ ಸಾಂತ್ವನಪಡಿಸಿ, ಅವನ ಬಾಲಕನ ಶರೀರವನ್ನು ಉತ್ತಮ ಸುಗಂಧಯುಕ್ತ ಎಣ್ಣೆ ತುಂಬಿದ ಮರದ ದೋಣಿಯಲ್ಲಿ ಮುಳುಗಿಸಿ ಇಡಿಸು. ಅದರಿಂದ ಬಾಲಕನ ಶರೀರ ವಿಕೃತ ಅಥವಾ ನಾಶವಾಗದಂತೆ ವ್ಯವಸ್ಥೆ ಮಾಡು.॥2-3॥

ಮೂಲಮ್ - 4

ಯಥಾ ಶರೀರೋ ಬಾಲಸ್ಯ ಗುಪ್ತಃ ಸನ್ ಶಿಷ್ಟ ಕರ್ಮಣಃ ।
ವಿಪತ್ತಿಃ ಪರಿಭೇದೋ ವಾ ನ ಭವೇಚ್ಚ ತಥಾ ಕುರು ॥

ಅನುವಾದ

ಶುಭಕರ್ಮ ಮಾಡುವ ಈ ಬಾಲಕನ ಶರೀರವು ಸುರಕ್ಷಿತವಾಗಿದ್ದು, ನಾಶವಾಗದಂತೆ ನೋಡಿಕೋ.॥4॥

ಮೂಲಮ್ - 5

ಏವಂ ಸಂದಿಶ್ಯ ಕಾಕುತ್ಸ್ಥೋ ಲಕ್ಷ್ಮಣಂ ಶುಭಲಕ್ಷಣಮ್ ।
ಮನಸಾ ಪುಷ್ಪಕಂ ದಧ್ಯಾವಾಗಚ್ಛೇತಿ ಮಹಾಯಶಾಃ ॥

ಅನುವಾದ

ಶುಭಲಕ್ಷಣ ಲಕ್ಷ್ಮಣನಿಗೆ ಹೀಗೆ ಹೇಳಿ ಮಹಾಯಶಸ್ವೀ ಶ್ರೀರಘುನಾಥನು ಮನಸ್ಸಿನಲ್ಲಿ ಪುಷ್ಪಕವಿಮಾನವನ್ನು ನೆನೆದು ಹೇಳಿದನು - ಬಂದು ಬಿಡು.॥5॥

ಮೂಲಮ್ - 6

ಇಂಗಿತಂ ಸ ತು ವಿಜ್ಞಾಯ ಪುಷ್ಪಕೋ ಹೇಮಭೂಷಿತಃ ।
ಆಜಗಾಮ ಮುಹೂರ್ತೇನ ಸಮೀಪೇ ರಾಘವಸ್ಯ ವೈ ॥

ಅನುವಾದ

ಶ್ರೀರಾಮಚಂದ್ರನ ಅಭಿಪ್ರಾಯ ತಿಳಿದು ಸುವರ್ಣಭೂಷಿತ ಪುಷ್ಪಕವಿಮಾನವು ಒಂದೇ ಮುಹೂರ್ತದಲ್ಲಿ ಅವನ ಬಳಿಗೆ ಬಂದು ಬಿಟ್ಟಿತು.॥6॥

ಮೂಲಮ್ - 7

ಸೋಽಬ್ರವೀತ್ಪ್ರಣತೋ ಭೂತ್ವಾ ಅಯಮಸ್ಮಿ ನರಾಧಿಪ ।
ವಶ್ಯಸ್ತವ ಮಹಾಬಾಹೋ ಕಿಂಕರಃ ಸಮುಪಸ್ಥಿತಃ ॥

ಅನುವಾದ

ಬಂದು ನತಮಸ್ತಕವಾಗಿ ಹೇಳಿತು - ನರೇಶ್ವರ! ಇದೋ ನಾನು ಬಂದಿದ್ದೇನೆ. ಮಹಾಬಾಹೋ! ನಾನು ಸದಾ ನಿಮ್ಮ ಅಧೀನದಲ್ಲಿರುವ ಕಿಂಕರನಾಗಿದ್ದೇನೆ. ನಿಮ್ಮ ಸೇವೆಯಲ್ಲಿ ಉಪಸ್ಥಿತನಾಗಿದ್ದೇನೆ.॥7॥

ಮೂಲಮ್ - 8

ಭಾಷಿತಂ ರುಚಿರಂ ಶ್ರುತ್ವಾ ಪುಷ್ಪಕಸ್ಯ ನರಾಧಿಪಃ ।
ಅಭಿವಾದ್ಯ ಮಹರ್ಷೀನ್ಸ ವಿಮಾನಂ ಸೋಽಧ್ಯರೋಹತ ॥

ಅನುವಾದ

ಪುಷ್ಪಕ ವಿಮಾನದ ಈ ಮನೋಹರ ಮಾತನ್ನು ಕೇಳಿ ಮಹಾರಾಜ ಶ್ರೀರಾಮನು ಮಹರ್ಷಿಗಳಿಗೆ ಪ್ರಣಾಮ ಮಾಡಿ, ಆ ವಿಮಾನವನ್ನು ಹತ್ತಿದನು.॥8॥

ಮೂಲಮ್ - 9

ಧನುರ್ಗೃಹೀತ್ವಾ ತೂಣೀಂ ಚ ಖಡ್ಗಂ ಚ ರುಚಿರಪ್ರಭಮ್ ।
ನಿಕ್ಷಿಪ್ಯ ನಗರೇ ಚೇತೌಸೌಮಿತ್ರಿಭರತಾವುಭೌ ॥

ಅನುವಾದ

ಅವನು ಧನುಷ್ಯ, ಬಾಣಗಳು ತುಂಬಿದ ಎರಡು ಬತ್ತಳಿಕೆ ಮತ್ತು ಒಂದು ಹೊಳೆಯುತ್ತಿರುವ ಖಡ್ಗವನ್ನು ಕೈಲೆತ್ತಿಕೊಂಡು, ಲಕ್ಷ್ಮಣ, ಭರತರನ್ನು ನಗರ ರಕ್ಷಣೆಗೆ ನಿಯಮಿಸಿ, ಅಲ್ಲಿಂದ ಹೊರಟನು.॥9॥

ಮೂಲಮ್ - 10

ಪ್ರಾರ್ಯಾಪ್ರತೀಚೀಂ ಹರಿತಂ ವಿಚಿನ್ವಂಶ್ಚ ತತಸ್ತತಃ ।
ಉತ್ತರಾಮಗಮಚ್ಛ್ರೀಮಾಂದಿಶಂ ಹಿಮವತಾವೃತಾಮ್ ॥

ಅನುವಾದ

ಶ್ರೀಮಾನ್ ರಾಮನು ಮೊದಲು ಅತ್ತ-ಇತ್ತ ಹುಡುಕುತ್ತಾ ಪಶ್ಚಿಮ ದಿಕ್ಕಿಗೆ ಹೋದನು. ಮತ್ತೆ ಹಿಮಾಲಯ ಆವೃತವಾದ ಉತ್ತರ ದಿಕ್ಕಿಗೆ ಹೋದನು.॥10॥

ಮೂಲಮ್ - 11

ಅಪಶ್ಯಮಾನಸ್ತತ್ರಾಪಿ ಸ್ವಲ್ಪಮಪ್ಯಥ ದುಷ್ಕೃತಮ್ ।
ಪೂರ್ವಾಮಪಿ ದಿಶಂ ಸರ್ವಾಮಥಾಪಶ್ಯನ್ನರಾಧಿಪಃ ॥

ಅನುವಾದ

ಆ ಎರಡೂ ದಿಕ್ಕುಗಳಲ್ಲಿ ಎಲ್ಲಿಯೂ ಸ್ವಲ್ಪವೂ ದುಷ್ಕರ್ಮ ಕಂಡು ಬಂದಿಲ್ಲ. ಆಗ ನರೇಶ್ವರ ಶ್ರೀರಾಮನು ಪೂರ್ವದಿಕ್ಕನ್ನು ನಿರೀಕ್ಷಿಸಿದನು.॥11॥

ಮೂಲಮ್ - 12

ಪ್ರವಿಶುದ್ಧ ಸಮಾಚಾರಾಮಾದರ್ಶತಲನಿರ್ಮಲಾಮ್ ।
ಪುಷ್ಪಕಸ್ಥೋ ಮಹಾಬಾಹುಸ್ತದಾಪಶ್ಯನ್ನರಾಧಿಪಃ ॥

ಅನುವಾದ

ಪುಷ್ಪಕದಲ್ಲಿ ಕುಳಿತು ಮಹಾಬಾಹು ರಾಜಾ ಶ್ರೀರಾಮನು ಅಲ್ಲಿಯೂ ಶುದ್ಧ ಸದಾಚಾರ ಪಾಲನೆ ಆಗುತ್ತಿತ್ತು. ಆ ದಿಕ್ಕೂ ಕೂಡ ಕನ್ನಡಿಯಂತೆ ನಿರ್ಮಲವಾಗಿ ಕಂಡಿತು.॥12॥

ಮೂಲಮ್ - 13

ದಕ್ಷಿಣಾಂ ದಿಶಮಾಕ್ರಾಮತ್ತತೋರಾಜರ್ಷಿನಂದನಃ ।
ಶೈವಲಸ್ಯೋತ್ತರೇ ಪಾರ್ಶ್ವೇ ದದರ್ಶ ಸುಮಹತ್ಸರಃ ॥

ಅನುವಾದ

ಆಗ ರಾಜರ್ಷಿನಂದನ ಶ್ರೀರಾಮನು ದಕ್ಷಿಣ ದಿಕ್ಕಿಗೆ ಹೋದನು. ಅಲ್ಲಿ ಶೈವಲ ಪರ್ವತದ ಉತ್ತರ ಭಾಗದಲ್ಲಿ ಒಂದು ಮಹಾಸರೋವರ ಕಂಡು ಬಂತು.॥13॥

ಮೂಲಮ್ - 14

ತಸ್ಮಿನ್ಸರಸಿ ತಪ್ಯಂತಂ ತಾಪಸಂ ಸುಮಹತ್ತಪಃ ।
ದದರ್ಶ ರಾಘವಃ ಶ್ರೀಮಾನ್ ಲಂಬಮಾನಮಧೋಮುಖಮ್ ॥

ಅನುವಾದ

ಆ ಸರೋವರದ ತೀರದಲ್ಲಿ ಒಬ್ಬ ತಪಸ್ವೀ ಭಾರೀ ತಪಸ್ಸು ಮಾಡುತ್ತಿದ್ದನು. ಅವನು ಕೆಳಮುಖವಾಗಿ ನೇತಾಡುತ್ತಿದ್ದನು. ಶ್ರೀರಾಮನು ಅವನನ್ನು ನೋಡಿದನು.॥14॥

ಮೂಲಮ್ - 15

ರಾಘವಸ್ತಮುಪಾಗಮ್ಯ ತಪ್ಯಂತಂ ತಪ ಉತ್ತಮಮ್ ।
ಉವಾಚ ಚ ನೃಪೋ ವಾಕ್ಯಂ ಧನ್ಯಸ್ತ್ವಮಸಿ ಸುವ್ರತ ॥

ಮೂಲಮ್ - 16

ಕಸ್ಯಾಂ ಯೋನ್ಯಾಂ ತಪೋವೃದ್ಧ ವರ್ತಸೇದೃಢವಿಕ್ರಮ ।
ಕೌತೂಹಲಾತ್ತ್ವಾಂ ಪೃಚ್ಛಾಮಿ ರಾಮೋ ದಾಶರಥಿರ್ಹ್ಯಹಮ್ ॥

ಅನುವಾದ

ನೋಡಿ ರಾಜಾ ಶ್ರೀರಘುನಾಥನು ಉಗ್ರತಪಸ್ಸು ಮಾಡುತ್ತಿರುವ ಆ ತಪಸ್ವಿಯ ಬಳಿಗೆ ಹೋದನು ಹಾಗೂ ನುಡಿದನು - ಉತ್ತಮ ವ್ರತವನ್ನು ಪಾಲಿಸುವ ತಾಪಸನೇ ! ನೀನು ಧನ್ಯನಾಗಿರುವೆ. ತಪಸ್ಸಿನಲ್ಲಿ ನಿಷ್ಣಾತನಾದ ಪರಾಕ್ರಮಿ ಪುರುಷನೇ! ನೀನು ಯಾವ ಜಾತಿಯಲ್ಲಿ ಹುಟ್ಟಿರುವೆ? ನಾನು ದಶರಥಕುಮಾರ ರಾಮನು ನಿನ್ನ ಪರಿಚಯ ತಿಳಿಯಲು ಕುತೂಹಲಿಯಾಗಿ ಇದನ್ನು ಕೇಳುತ್ತಿದ್ದೇನೆ.॥15-16॥

ಮೂಲಮ್ - 17

ಕೋಽರ್ಥೋ ಮನೀಷಿತಸ್ತುಭ್ಯಂ ಸ್ವರ್ಗಲಾಭೋಽಪರೋಽಥವಾ ।
ವರಾಶ್ರಯೋ ಯದರ್ಥಂ ತ್ವಂ ತಪಸ್ಯನ್ಯೈಃ ಸುದುಶ್ಚರಮ್ ॥

ಅನುವಾದ

ನಿನಗೆ ಯಾವ ವಸ್ತುವನ್ನು ಪಡೆಯಲು ಇಚ್ಛೆ ಇದೆ? ತಪಸ್ಸಿನಿಂದ ಸಂತುಷ್ಟವಾದ ದೇವತೆಯಲ್ಲಿ ವರವಾಗಿ ನೀನು ಏನನ್ನು ಪಡೆಯಲು ಬಯಸುವೆ? ಸ್ವರ್ಗ ಅಥವಾ ಬೇರೆ ವಸ್ತು? ಯಾವ ಪದಾರ್ಥಕ್ಕಾಗಿ ಬೇರೆಯವರಿಗೆ ದುಷ್ಕರವಾದ ಇಂತಹ ಕಠೋರ ತಪಸ್ಸು ಮಾಡುತ್ತಿರುವೆ.॥17॥

ಮೂಲಮ್ - 18

ಯಮಾಶ್ರಿತ್ಯ ತಪಸ್ತಪ್ತಂ ಶ್ರೋತುಮಿಚ್ಛಾಮಿ ತಾಪಸ ।
ಬ್ರಾಹ್ಮಣೋ ವಾಸಿ ಭದ್ರಂ ತೇ ಕ್ಷತ್ರಿಯೋ ವಾಸಿ ದುರ್ಜಯಃ ।
ವೈಶ್ಯಸ್ತೃತೀಯವರ್ಣೋ ವಾ ಶೂದ್ರೋ ವಾಸತ್ಯವಾಗ್ಭವ ॥

ಅನುವಾದ

ತಾಪಸನೇ! ಯಾವ ವಸ್ತುವಿಗಾಗಿ ನೀನು ತಪಸ್ಸಿಗೆ ತೊಡಗಿರುವೆಯೋ ಅದನ್ನು ಕೇಳಲು ನಾನು ಬಯಸುತ್ತಿದ್ದೇನೆ. ಅಲ್ಲದೆ ನೀನು ಬ್ರಾಹ್ಮಣನೋ ಅಥವಾ ದುರ್ಜಯ ಕ್ಷತ್ರಿಯನೋ ಅದನ್ನು ತಿಳಿಸು. ಮೂರನೆಯ ವರ್ಣದ ವೈಶ್ಯನೋ, ಶೂದ್ರನೋ? ಸರಿಯಾಗಿ ತಿಳಿಸು. ನಿನಗೆ ಒಳ್ಳೆಯದಾಗಲಿ.॥18॥

ಮೂಲಮ್ - 19

ಇತ್ಯೇವಮುಕ್ತಃ ಸ ನರಾಧಿಪೇನ
ಅವಾಕ್ಶಿರಾ ದಾಶರಥಾಯ ತಸ್ಮೈ ।
ಉವಾಚ ಜಾತಿಂ ನೃಪಪುಂಗವಾಯ
ಯತ್ಕಾರಣಂ ಚೈವ ತಪಃಪ್ರಯತ್ನಃ ॥

ಅನುವಾದ

ಮಹಾರಾಜ ಶ್ರೀರಾಮನು ಹೀಗೆ ಕೇಳಿದಾಗ ತಲೆಕೆಳಗಾಗಿ ನೇತಾಡುತ್ತಿರುವ ಆತಪಸ್ವಿಯು ಆ ನೃಪಶ್ರೇಷ್ಠ ದಶರಥನಂದನ ಶ್ರೀರಾಮನಲ್ಲಿ ತನ್ನ ಜಾತಿಯ ಪರಿಚಯ ಕೊಟ್ಟು, ಯಾವ ಉದ್ದೇಶದಿಂದ ಅವನು ತಪಸ್ಸಿಗಾಗಿ ಪ್ರಯತ್ನಿಸುತ್ತಿದ್ದನೋ, ಅದನ್ನು ತಿಳಿಸಿದನು.॥19॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಎಪ್ಪತ್ತೈದನೆಯ ಸರ್ಗ ಪೂರ್ಣವಾಯಿತು. ॥75॥