०७५ व्यभिचार्य्-अन्वेषणम्

[ಎಪ್ಪತ್ತನಾಲ್ಕನೆಯ ಸರ್ಗ]

ಭಾಗಸೂಚನಾ

ಶೂದ್ರತಪಸ್ವಿಯು ಅಧರ್ಮಾಚರಣೆ ಮಾಡುತ್ತಿರುವುದೇ ಬ್ರಾಹ್ಮಣ ಬಾಲಕನ ಅಕಾಲ ಮರಣದ ಕಾರಣವೆಂದು ನಾರದರು ಶ್ರೀರಾಮನಿಗೆ ತಿಳಿಸಿದುದು

ಮೂಲಮ್ - 1

ತಥಾ ತು ಕರುಣಂ ತಸ್ಯ ದ್ವಿಜಸ್ಯ ಪರಿದೇವನಮ್ ।
ಶುಶ್ರಾವ ರಾಘವಃ ಸರ್ವಂ ದುಃಖಶೋಕಸಮನ್ವಿತಮ್ ॥

ಅನುವಾದ

ಅಂತಹ ಕರುಣಾಜನಕ ದುಃಖ-ಶೋಕದಿಂದ ಕೂಡಿದ ಬ್ರಾಹ್ಮಣನ ಗೋಳಾಟವನ್ನು ಶ್ರೀರಾಮನು ಕೇಳಿದನು.॥1॥

ಮೂಲಮ್ - 2

ಸ ದುಃಖೇನ ಚ ಸಂತಪ್ತೋ ಮಂತ್ರಿಣಸ್ತಾನುಪಾಹ್ವಯತ್ ।
ವಸಿಷ್ಠಂ ವಾಮದೇವಂ ಚಭ್ರಾತರೌ ಸಹನೈಗಮಾನ್ ॥

ಅನುವಾದ

ಇದರಿಂದ ಅವನು ಸಂತಪ್ತನಾದನು. ಶ್ರೀರಾಮನು ಮಂತ್ರಿಗಳನ್ನು, ವಸಿಷ್ಠ, ವಾಮದೇವ ಹಾಗೂ ಮಹಾಜನರೊಂದಿಗೆ ತನ್ನ ತಮ್ಮಂದಿರನ್ನು ಆಮಂತ್ರಿಸಿದನು.॥2॥

ಮೂಲಮ್ - 3

ತತೋ ದ್ವಿಜಾ ವಸಿಷ್ಠೇನ ಸಾರ್ಧಮಷ್ಟೌ ಪ್ರವೇಶಿತಾಃ ।
ರಾಜಾನಂ ದೇವಸಂಕಾಶಂ ವರ್ಧಸ್ವೇತಿ ತತೋಽಬ್ರುವನ್ ॥

ಅನುವಾದ

ಬಳಿಕ ವಸಿಷ್ಠರೊಂದಿಗೆ ಎಂಟು ಬ್ರಾಹ್ಮಣರು ರಾಜಸಭೆಯನ್ನು ಪ್ರವೇಶಿಸಿದರು. ಆ ದೇವತುಲ್ಯ ರಾಜನು ಹೇಳಿದನು- ಮಹಾರಾಜ! ನಿಮಗೆ ಜಯವಾಗಲೀ.॥3॥

ಮೂಲಮ್ - 4

ಮಾರ್ಕಂಡೇಯೋಽಥ ಮೌದ್ಗಲ್ಯೋ ವಾಮದೇವಶ್ಚ ಕಾಶ್ಯಪಃ ।
ಕಾತ್ಯಾಯನೋಽಥ ಜಾಬಾಲಿರ್ಗೌತಮೋ ನಾರದಸ್ತಥಾ ॥

ಅನುವಾದ

ಮಾರ್ಕಂಡೇಯ, ಮೌದ್ಗಲ್ಯ, ವಾಮದೇವ, ಕಾಶ್ಯಪ, ಕಾತ್ಯಾಯನ, ಜಾಬಾಲಿ, ಗೌತಮ ಮತ್ತು ನಾರದರು ಹೀಗೆ ಆ ಎಂಟು ಮಂದಿ ಇದ್ದರು.॥4॥

ಮೂಲಮ್ - 5

ಏತೇ ದ್ವಿಜರ್ಷಭಾಃ ಸರ್ವ ಆಸನೇಷೂಪವೇಶಿತಾಃ ।
ಮಹರ್ಷೀನ್ಸಮನುಪ್ರಾಪ್ತಾನಭಿವಾದ್ಯ ಕೃತಾಂಜಲಿಃ ॥

ಅನುವಾದ

ಆ ಎಲ್ಲ ಶ್ರೇಷ್ಠ ಬ್ರಾಹ್ಮಣರನ್ನು ಆಸನಗಳಲ್ಲಿ ಕುಳ್ಳಿರಿಸಿದನು. ಅಲ್ಲಿಗೆ ಆಗಮಿಸಿದ ಮಹರ್ಷಿಗಳಿಗೆ ಶ್ರೀರಾಮನು ಕೈಮುಗಿದು ನಮಸ್ಕರಿಸಿ, ತಾನು ಆಸನದಲ್ಲಿ ಕುಳಿತುಕೊಂಡನು.॥5॥

ಮೂಲಮ್ - 6

ಮಂತ್ರಿಣೋ ನೈಗಮಾಶ್ಚೈವ ಯಥಾರ್ಹಮನುಕೂಲತಃ ।
ತೇಷಾಂ ಸಮುಪವಿಷ್ಟಾನಾಂ ಸರ್ವೇಷಾಂ ದೀಪ್ತತೇಜಸಾಮ್ ॥
ರಾಘವಃ ಸರ್ವಮಾಚಷ್ಟೇ ದ್ವಿಜೋಽಯಮುಪರೋಧತೇ ।

ಅನುವಾದ

ಮತ್ತೆ ಮಂತ್ರಿಗಳು ಮತ್ತು ಮಹಾಜನರೊಂದಿಗೆ ಶಿಷ್ಟಾಚಾರ ನಿರ್ವಹಿಸಿದನು. ಉದ್ದೀಪ್ತ ತೇಜವುಳ್ಳ ಅವರೆಲ್ಲರೂ ಯಥಾಸ್ಥಾನಗಳಲ್ಲಿ ಕುಳಿತುಕೊಂಡಾಗ ಶ್ರೀರಾಮನು ಅವರಲ್ಲಿ ಎಲ್ಲ ಮಾತುಗಳನ್ನು ತಿಳಿಸಿ, ಹೇಳಿದನು - ಈ ಬ್ರಾಹ್ಮಣನು ರಾಜದ್ವಾರದಲ್ಲಿ ಸತ್ಯಾಗ್ರಹ ಹೂಡಿದ್ದಾನೆ.॥6॥

ಮೂಲಮ್ - 7

ತಸ್ಯ ತದ್ವಚನಂ ಶ್ರುತ್ವಾ ರಾಜ್ಞೋ ದೀನಸ್ಯನಾರದಃ ॥
ಪ್ರತ್ಯುವಾಚ ಶುಭಂ ವಾಕ್ಯಮೃಷೀಣಾಂ ಸಂನಿಧೌ ಸ್ವಯಮ್ ।

ಅನುವಾದ

ಬ್ರಾಹ್ಮಣನ ದುಃಖದಿಂದ ದುಃಖಿತನಾದ ಮಹಾರಾಜರ ಈ ಮಾತನ್ನು ಕೇಳಿ ಇತರ ಎಲ್ಲ ಋಷಿಗಳಲ್ಲಿ ಸ್ವತಃ ನಾರದರು ಹೀಗೆ ಶುಭವಚನವನ್ನಾಡಿದರು.॥7॥

ಮೂಲಮ್ - 8

ಶೃಣು ರಾಜನ್ಯಥಾಕಾಲೇ ಪ್ರಾಪ್ತೋ ಬಾಲಸ್ಯ ಸಂಕ್ಷಯಃ ॥
ಶ್ರುತ್ವಾ ಕರ್ತವ್ಯತಾಂ ರಾಜನ್ ಕುರುಷ್ವ ರಘುನಂದನ ।

ಅನುವಾದ

ರಾಜನೇ! ಯಾವ ಕಾರಣದಿಂದ ಈ ಬಾಲಕನ ಮೃತ್ಯು ಆಗಿದೆಯೋ, ಅದನ್ನು ತಿಳಿಸುತ್ತೇನೆ. ರಘುನಂದನ! ನನ್ನ ಮಾತನ್ನು ಕೇಳಿ ಉಚಿತ ಕರ್ತವ್ಯವನ್ನು ಪಾಲಿಸು.॥8॥

ಮೂಲಮ್ - 9

ಪುರಾ ಕೃತಯುಗೇ ರಾಜನ್ ಬ್ರಾಹ್ಮಣಾ ವೈ ತಪಸ್ವಿನಃ ॥
ಅಬ್ರಾಹ್ಮಣಸ್ತದಾ ರಾಜನ್ ನ ತಪಸ್ವೀ ಕಥಂಚನ ।

ಅನುವಾದ

ರಾಜನೇ! ಮೊದಲು ಕೃತಯುಗದಲ್ಲಿ ಕೇವಲ ಬ್ರಾಹ್ಮಣರೇ ತಪಸ್ವೀಗಳಾಗಿದ್ದರು. ಮಹಾರಾಜಾ! ಆಗ ಬ್ರಾಹ್ಮಣೇತರ ಮನುಷ್ಯನು ಯಾವ ರೀತಿಯಿಂದಲೂ ತಪಸ್ಸಿನಲ್ಲಿ ಪ್ರವೃತ್ತನಾಗುತ್ತಿರಲಿಲ್ಲ.॥9॥

ಮೂಲಮ್ - 10

ತಸ್ಮಿನ್ಯುಗೇ ಪ್ರಜ್ವಲಿತೇ ಬ್ರಹ್ಮಭೂತೇ ತ್ವನಾವೃತೇ ॥
ಅಮೃತ್ಯವಸ್ತದಾ ಸರ್ವೇ ಜಜ್ಞಿರೇ ದೀರ್ಘದರ್ಶಿನಃ ।

ಅನುವಾದ

ಆ ಯುಗವು ತಪಸ್ಸಿನಿಂದ ಪ್ರಕಾಶಿತವಾಗುತ್ತಿತ್ತು. ಅದರಲ್ಲಿ ಬ್ರಾಹ್ಮಣರದೇ ಪ್ರಧಾನತೆ ಇತ್ತು. ಆಗ ಅಜ್ಞಾನದ ವಾತಾವರಣವಿರಲಿಲ್ಲ. ಅದರಿಂದ ಆ ಯುಗದ ಎಲ್ಲರೂ ಅಕಾಲ ಮರಣ ರಹಿತರಾಗಿದ್ದು, ತ್ರಿಕಾಲದರ್ಶಿಯಾಗಿದ್ದರು.॥10॥

ಮೂಲಮ್ - 11

ತತಸ್ತ್ರೇತಾಯುಗಂನಾಮ ಮಾನವಾನಾಂ ವಪುಷ್ಮತಾಮ್ ॥
ಕ್ಷತ್ರಿಯಾ ಯತ್ರ ಜಾಯಂತೇ ಪೂರ್ವೇಣತಪಸಾನ್ವಿತಾಃ ।

ಅನುವಾದ

ಕೃತಯುಗದ ಬಳಿಕ ತ್ರೇತಾಯುಗ ಬಂತು. ಇದರಲ್ಲಿ ಸುದೃಢ ಶರೀರವುಳ್ಳ ಕ್ಷತ್ರಿಯರ ಪ್ರಧಾನತೆ ಉಂಟಾಯಿತು. ಆ ಕ್ಷತ್ರಿಯರೂ ಅದೇ ಪ್ರಕಾರದ ತಪಸ್ಸು ಮಾಡತೊಡಗಿದರು.॥11॥

ಮೂಲಮ್ - 12

ವೀರ್ಯೇಣ ತಪಸಾ ಚೈವ ತೇಽಧಿಕಾಃ ಪೂರ್ವಜನ್ಮನಿ ॥
ಮಾನವಾ ಯೇ ಮಹಾತ್ಮಾನಸ್ತತ್ರ ತ್ರೇತಾಯುಗೇ ಯುಗೇ ।

ಅನುವಾದ

ಆದರೂ ತ್ರೇತಾಯುಗದಲ್ಲಿ ಇರುವ ಮಹಾತ್ಮಾ ಪುರುಷರಿಗಿಂತ ಕೃತಯುಗದ ಜನರು ತಪಸ್ಸು ಮತ್ತು ಪರಾಕ್ರಮದ ದೃಷ್ಟಿಯಿಂದ ಹೆಚ್ಚಿನವರಾಗಿದ್ದರು.॥12॥

ಮೂಲಮ್ - 13

ಬ್ರಹ್ಮ ಕ್ಷತ್ರಂ ಚ ತತ್ಸರ್ವಂ ಯತ್ಪೂರ್ವಮವರಂ ಚ ಯತ್ ॥
ಯುಗಯೋರುಭಯೋರಾಸೀತ್ಸಮವೀರ್ಯಸಮನ್ವಿತಮ್ ।

ಅನುವಾದ

ಹೀಗೆ ಹಿಂದಿನ ಯುಗದಲ್ಲಿ ಬ್ರಾಹ್ಮಣರು ಉತ್ಕೃಷ್ಟ ಮತ್ತು ಕ್ಷತ್ರಿಯರು ಅಪಕೃಷ್ಟರಾಗಿದ್ದರು. ಈ ತ್ರೇತಾಯುಗದಲ್ಲಿ ಅವರೆಲ್ಲರೂ ಸಮಾನ ಶಕ್ತಿಶಾಲಿಯಾಗಿದ್ದಾರೆ.॥13॥

ಮೂಲಮ್ - 14

ಅಪಶ್ಯಂತಸ್ತು ತೇ ಸರ್ವೇ ವಿಶೇಷಮಧಿಕಂ ತತಃ ॥
ಸ್ಥಾಪನಂ ಚಕ್ರಿರೇ ತತ್ರ ಚಾತುರ್ವರ್ಣ್ಯಸ್ಯ ಸಂಮತಮ್ ।

ಅನುವಾದ

ಆಗ ಮನು ಆದಿ ಎಲ್ಲ ಧರ್ಮಪ್ರವರ್ತಕರು ಬ್ರಾಹ್ಮಣ ಮತ್ತು ಕ್ಷತ್ರಿಯರಲ್ಲಿ ಒಬ್ಬರಿಗಿಂತ ಒಬ್ಬರು ಯಾವುದೇ ವಿಶೇಷತೆ ಅಥವಾ ನ್ಯೂನಾಧಿಕ್ಯತೆ ನೋಡದೆ ಸರ್ವಲೋಕ ಸಮ್ಮತ ಚಾತುರ್ವರ್ಣ್ಯದ ವ್ಯವಸ್ಥೆ ಸ್ಥಾಪಿಸಿದರು.॥14॥

ಮೂಲಮ್ - 15

ತಸ್ಮಿನ್ ಯುಗೇ ಪ್ರಜ್ವಲಿತೇ ಧರ್ಮಭೂತೇ ಹ್ಯನಾವೃತೇ ॥

ಮೂಲಮ್ - 16

ಅಧರ್ಮಃ ಪಾದಮೇಕಂ ತು ಪಾತಯತ್ಪೃಥಿವೀತಲೇ ।
ಅಧರ್ಮೇಣ ಹಿ ಸಂಯುಕ್ತಸ್ತೇಜೋ ಮಂದಂ ಭವಿಷ್ಯತಿ ॥

ಅನುವಾದ

ತ್ರೇತಾಯುಗ ವರ್ಣಾಶ್ರಮ ಧರ್ಮ ಪ್ರಧಾನವಾಗಿದೆ. ಅದು ಧರ್ಮದ ಪ್ರಕಾಶದಿಂದ ಪ್ರಕಾಶಿತವಾಗಿದೆ. ಅದು ಧರ್ಮದಲ್ಲಿ ಬಾಧೆಪಡಿಸುವ ಪಾಪದಿಂದ ರಹಿತವಾಗಿದೆ. ಈ ಯುಗದಲ್ಲಿ ಅಧರ್ಮವು ಭೂತಳದಲ್ಲಿ ತನ್ನ ಒಂದು ಕಾಲನ್ನೂರಿದೆ. ಅಧರ್ಮಯುಕ್ತವಾದ್ದರಿಂದ ಇಲ್ಲಿ ಜನರ ತೇಜ ದಿನೇ-ದಿನೇ ಮಂದವಾಗುತ್ತಿದೆ.॥15-16॥

ಮೂಲಮ್ - 17

ಆಮಿಷಂ ಯಚ್ಚ ಪೂರ್ವೇಷಾಂ ರಾಜಸಂ ಚ ಮಲಂ ಭೃಶಮ್ ।
ಅನೃತಂ ನಾಮ ತದ್ಭೂತಂ ಪಾದೇನ ಪೃಥಿವೀತಲೇ ॥

ಅನುವಾದ

ಕೃತಯುಗದಲ್ಲಿ ಜೀವನದ ಸಾಧನೆಯಾದ ಕೃಷಿ ಆದಿ ರಜೋಗುಣ ಮೂಲಕ ಕರ್ಮ ‘ಅನೃತ’ ಎಂದು ಹೇಳಲ್ಪಟ್ಟಿತ್ತು ಮತ್ತು ಮಲದಂತೆ ಅತ್ಯಂತ ತಾಜ್ಯವಾಗಿತ್ತು. ಆ ಅನೃತವೂ ಅಧರ್ಮದ ಒಂದು ಪಾದವಾಗಿ ತ್ರೇತಾಯುಗದಲ್ಲಿ ಈ ಭೂತಳದಲ್ಲಿ ಸ್ಥಿರವಾಯಿತು.॥17॥

ಮೂಲಮ್ - 18

ಅನೃತಂ ಪಾತಯಿತ್ವಾ ತು ಪಾದಮೇಕಮಧರ್ಮತಃ ।
ತತಃ ಪ್ರಾದುಷ್ಕೃತಂ ಪೂರ್ವಮಾಯುಷಃ ಪರಿನಿಷ್ಠಿತಮ್ ॥

ಅನುವಾದ

ಹೀಗೆ ಆನೃತ (ಅಸತ್ಯ)ರೂಪೀ ಒಂದು ಕಾಲನ್ನು ಭೂತಳದಲ್ಲಿ ಇಟ್ಟು ಅಧರ್ಮವು ತ್ರೇತಾಯುಗದಲ್ಲಿ ಕೃತಯುಗಕ್ಕಿಂತ ಆಯುಸ್ಸನ್ನು ಸೀಮಿತಗೊಳಿಸಿತು.॥18॥

ಮೂಲಮ್ - 19

ಪಾತಿತೇ ತ್ವನೃತೇ ತಸ್ಮಿನ್ನಧರ್ಮೇಣ ಮಹೀತಲೇ ।
ಶುಭಾನ್ಯೇವಾಚರಂಲ್ಲೋಕಃ ಸತ್ಯಧರ್ಮಪರಾಯಣಃ ॥

ಅನುವಾದ

ಆದ್ದರಿಂದ ಪೃಥಿವಿಯಲ್ಲಿ ಅಧರ್ಮದ ಈ ಅನೃತರೂಪೀ ಚರಣಬಿದ್ದಾಗ ಸತ್ಯಧರ್ಮಪರಾಯಣ ಪುರುಷನು ಆ ಅನೃತದ ಕೆಟ್ಟ ಪರಿಣಾಮದಿಂದ ಬದುಕುಳಿಯಲು ಶುಭಕರ್ಮಗಳನ್ನೇ ಆಚರಿಸುತ್ತಾನೆ.॥19॥

ಮೂಲಮ್ - 20

ತ್ರೇತಾಯುಗೇ ಚ ವರ್ತಂತೇ ಬ್ರಾಹ್ಮಣಾಃ ಕ್ಷತ್ರಿಯಾಶ್ಚ ಯೇ ।
ತಪೋಽತಪ್ಯಂತ ತೇ ಸರ್ವೇ ಶುಶ್ರೂಷಾಮಪರೇಜನಾಃ ॥

ಅನುವಾದ

ಹೀಗಿದ್ದರೂ ತ್ರೇತಾಯುಗದಲ್ಲಿ ಇರುವ ಬ್ರಾಹ್ಮಣ, ಕ್ಷತ್ರಿಯರೆಲ್ಲರೂ ತಪಸ್ಸು ಮಾಡುತ್ತಾರೆ. ಇತರ ವರ್ಣದ ಜನರು ಸೇವಾ-ಕಾರ್ಯ ಮಾಡುತ್ತಾ ಇದ್ದಾರೆ..॥20॥

ಮೂಲಮ್ - 21

ಸ್ವಧರ್ಮಃ ಪರಮಸ್ತೇಷಾಂ ವೈಶ್ಯಶೂದ್ರಂ ತದಾಗಮತ್ ।
ಪೂಜಾಂ ಚ ಸರ್ವವರ್ಣಾನಾಂ ಶೂದ್ರಾಶ್ಚಕ್ರುರ್ವಿಶೇಷತಃ ॥

ಅನುವಾದ

ಆ ನಾಲ್ಕು ವರ್ಣಗಳಲ್ಲಿನ ವೈಶ್ಯ ಮತ್ತು ಶೂದ್ರರಿಗೆ ಸೇವಾರೂಪಿ ಉತ್ಕೃಷ್ಟ ಧರ್ಮವು ಸ್ವಧರ್ಮದ ರೂಪದಲ್ಲಿ ಪ್ರಾಪ್ತವಾಯಿತು. ವೈಶ್ಯರು ಕೃಷಿ ಆದಿಗಳಿಂದ ಬ್ರಾಹ್ಮಣರ ಸೇವೆ ಮಾಡತೊಡಗಿದರು. ಶೂದ್ರರು ಎಲ್ಲ ಮೂರು ವರ್ಣದ ಜನರ ವಿಶೇಷವಾಗಿ ಪೂಜೆ ಆದರ ಸತ್ಕಾರ ಮಾಡತೊಡಗಿದರು.॥21॥

ಮೂಲಮ್ - 22

ಏತಸ್ಮಿನ್ನಂತರೇ ತೇಷಾಮಧರ್ಮೇ ಚಾನೃತೇ ಚ ಹ ।
ತತಃ ಪೂರ್ವೇ ಪುನರ್ಹ್ರಾಸಮಗಮನ್ ನೃಪಸತ್ತಮ ॥

ಅನುವಾದ

ನೃಪಶ್ರೇಷ್ಠನೇ! ಇದರ ನಡುವೆ ತ್ರೇತಾಯುಗದ ಅವಸಾನವಾಗಿ ವೈಶ್ಯರಿಗೆ ಮತ್ತು ಶೂದ್ರರಿಗೆ ಅಧರ್ಮದ ಒಂದು ಪಾದರೂಪಿ ಅನೃತದ ಪ್ರಾಪ್ತಿಯಾದಾಗ ಬ್ರಾಹ್ಮಣ-ಕ್ಷತ್ರಿಯರ ಹ್ರಾಸವಾಗತೊಡಗುತ್ತದೆ. (ಏಕೆಂದರೆ ಅವರಿಬ್ಬರಿಗೂ ಅಂತಿಮ ಎರಡು ವರ್ಣಗಳ ಸಂಸರ್ಗದೋಷ ಪ್ರಾಪ್ತವಾಗುತ್ತದೆ..॥22॥

ಮೂಲಮ್ - 23

ತತಃ ಪಾದಮಧರ್ಮಸ್ಯ ದ್ವಿತೀಯಮವತಾರಯತ್ ।
ತತೋ ದ್ವಾಪರಸಂಖ್ಯಾ ಸಾ ಯುಗಸ್ಯ ಸಮಜಾಯತ ॥

ಅನುವಾದ

ಅನಂತರ ಅಧರ್ಮವು ತನ್ನ ಎರಡನೆಯ ಚರಣವನ್ನು ನೆಲಕ್ಕೆ ಊರುವುದು. ದ್ವಿತೀಯ ಕಾಲು ಇಟ್ಟಿದ್ದರಿಂದಲೇ ಆಯುಗಕ್ಕೆ ದ್ವಾಪರ ಎಂಬ ಸಂಜ್ಞೆ ಉಂಟಾಯಿತು.॥23॥

ಮೂಲಮ್ - 24

ತಸ್ಮಿನ್ ದ್ವಾಪರಸಂಖ್ಯೇ ತು ವರ್ತಮಾನೇ ಯುಗಕ್ಷಯೇ ।
ಅಧರ್ಮಶ್ಚಾನೃತಂ ಚೈವ ವವೃಧೇ ಪುರುಷರ್ಷಭ ॥

ಅನುವಾದ

ಪುರುಷೋತ್ತಮನೇ! ಆ ದ್ವಾಪರವೆಂಬ ಯುಗದಲ್ಲಿ ಅಧರ್ಮದ ಎರಡು ಚರಣಗಳ ಆಶ್ರಯವಾಗಿದೆ, ಅಧರ್ಮ ಮತ್ತು ಅನೃತ ಎರಡರ ವೃದ್ಧಿಯಾಗತೊಡಗುತ್ತದೆ.॥24॥

ಮೂಲಮ್ - 25

ಅಸ್ಮಿನ್ ದ್ವಾಪರಸಂಖ್ಯಾನೇ ತಪೋ ವೈಶ್ಯಾನ್ ಸಮಾವಿಶತ್ ।
ತ್ರಿಭ್ಯೋ ಯುಗೇಭ್ಯಸ್ತ್ರೀನ್ ವರ್ಣಾನ್ ಕ್ರಮಾದ್ವೈ ತಪ ಆವಿಶತ್ ॥

ಅನುವಾದ

ಈ ದ್ವಾಪರಯುಗದಲ್ಲಿ ತಪಸ್ಯಾರೂಪೀ ಕರ್ಮ ವೈಶ್ಯರಿಗೂ ಲಭಿಸುತ್ತದೆ. ಹೀಗೆ ಮೂರು ಯುಗಗಳಲ್ಲಿ ಕ್ರಮವಾಗಿ ಮೂರೂ ವರ್ಣಗಳಿಗೆ ತಪಸ್ಸಿನ ಅಧಿಕಾರ ಪ್ರಾಪ್ತವಾಗುತ್ತದೆ.॥25॥

ಮೂಲಮ್ - 26

ತ್ರಿಭ್ಯೋ ಯುಗೇಭ್ಯಸ್ತ್ರೀನ್ ವರ್ಣಾನ್ ಧರ್ಮಶ್ಚ ಪರಿನಿಷ್ಠಿತಃ ।
ನ ಶೂದ್ರೋ ಲಭತೇ ಧರ್ಮಂ ಯುಗತಸ್ತು ನರರ್ಷಭ ॥

ಅನುವಾದ

ಮೂರು ಯುಗಗಳಲ್ಲಿ ಮೂರೂ ವರ್ಣಗಳ ಆಶ್ರಯವನ್ನು ಪಡೆದು ತಪಸ್ಯಾರೂಪೀ ಧರ್ಮ ಪ್ರತಿಷ್ಠಿತವಾಗುತ್ತದೆ; ಆದರೆ ನರಶ್ರೇಷ್ಠ! ಶೂದ್ರರಿಗೆ ಈ ಮೂರೂ ಯುಗಗಳಲ್ಲಿ ತಪಸ್ಸು ರೂಪೀಧರ್ಮದ ಅಧಿಕಾರ ಲಭಿಸುವುದಿಲ್ಲ.॥26॥

ಮೂಲಮ್ - 27

ಹೀನವರ್ಣೋ ನೃಪಶ್ರೇಷ್ಠ ತಪ್ಯತೇ ಸುಮಹತ್ತಪಃ ।
ಭವಿಷ್ಯಚ್ಛೂದ್ರಯೋನ್ಯಾಂ ಹಿ ತಪಶ್ಚರ್ಯಾಂ ಕಲೌಯುಗೇ ॥

ಅನುವಾದ

ನೃಪಶಿರೋಮಣಿಯೇ! ಹೀನವರ್ಣದ ಮನುಷ್ಯನೂ ಕೂಡ ಭಾರೀ ತಪಸ್ಸು ಮಾಡುವಂತಹ ಸಮಯ ಬಂದೀತು. ಕಲಿಯುಗ ಬಂದಾಗ ಭವಿಷ್ಯದಲ್ಲಿ ಶೂದ್ರಯೋನಿಯಲ್ಲಿ ಹುಟ್ಟುವ ಮನುಷ್ಯರ ಸಮುದಾಯದಲ್ಲಿ ತಪಶ್ಚರ್ಯೆಯ ಪ್ರವೃತ್ತಿ ಉಂಟಾದೀತು.॥27॥

ಮೂಲಮ್ - 28

ಅಧರ್ಮಃ ಪರಮೋ ರಾಜನ್ ದ್ವಾಪರೇ ಶೂದ್ರಜನ್ಮನಃ ।
ಸ ವೈ ವಿಷಯಪರ್ಯಂತೇ ತವ ರಾಜನ್ಮಹಾತಪಾಃ ॥
ಅದ್ಯ ತಪ್ಯತಿ ದುರ್ಬುದ್ಧಿಸ್ತೇನ ಬಾಲವಧೋ ಹ್ಯಯಮ್ ।

ಅನುವಾದ

ರಾಜನೇ! ದ್ವಾಪರದಲ್ಲಿಯೂ ಶೂದ್ರನು ತಪಸ್ಸಿನಲ್ಲಿ ಪ್ರವೃತ್ತನಾಗುವುದು ಮಹಾ ಅಧರ್ಮ ವೆಂದು ತಿಳಿಯಲಾಗಿದೆ. (ಹಾಗಿರುವಾಗ ತ್ರೇತಾಯುಗದಲ್ಲಿ ಹೇಳುವುದೇನಿದೆ.) ಮಹಾರಾಜ! ನಿಶ್ಚಯವಾಗಿ ನಿನ್ನ ರಾಜ್ಯದ ಸೀಮೆಯೊಳಗೆ ಯಾರೋ ದುರ್ಬುದ್ಧಿ ಶೂದ್ರನು ಮಹಾತಪಸ್ಸನ್ನು ಆಶ್ರಯಿಸಿದ್ದಾನೆ. ಅದರ ಕಾರಣದಿಂದಲೇ ಈ ಬಾಲಕನ ಮೃತ್ಯು ಆಗಿದೆ.॥28॥

ಮೂಲಮ್ - 29

ಯೋ ಹ್ಯಧರ್ಮಮಕಾರ್ಯಂ ವಾವಿಷಯೇ ಪಾರ್ಥಿವಸ್ಯ ತು ॥

ಮೂಲಮ್ - 30

ಕರೋತಿ ಚಾಶ್ರೀಮೂಲಂ ತತ್ಪುರೇ ವಾ ದುರ್ಮತಿರ್ನರಃ ।
ಕ್ಷಿಪ್ರಂ ಚ ನರಕಂ ಯಾತಿ ಸ ಚ ರಾಜಾ ನ ಸಂಶಯಃ ॥

ಅನುವಾದ

ಯಾವನೇ ದುರ್ಬುದ್ಧಿ ಮನುಷ್ಯನು ಯಾವುದೇ ರಾಜನ ರಾಜ್ಯದಲ್ಲಿ, ನಗರದಲ್ಲಿ ಅಧರ್ಮ ಅಥವಾ ಮಾಡಲು ಯೋಗ್ಯವಲ್ಲದ ಕಾರ್ಯ ಮಾಡುತ್ತಾನೋ, ಅವನ ಆ ಕರ್ಮವು ರಾಜ್ಯದ ದರಿದ್ರತೆಯ ಕಾರಣವಾಗುತ್ತದೆ. ಆ ರಾಜನು ಬೇಗನೇ ನರಕದಲ್ಲಿ ಬೀಳುವುದಲ್ಲಿ ಸಂಶಯವೇ ಇಲ್ಲ.॥29-30॥

ಮೂಲಮ್ - 31

ಅಧೀತಸ್ಯ ಚ ತಪ್ತಸ್ಯ ಕರ್ಮಣಃ ಸುಕೃತಸ್ಯ ಚ ।
ಷಷ್ಠಂ ಭಜತಿ ಭಾಗಂ ತು ಪ್ರಜಾ ಧರ್ಮೇಣ ಪಾಲಯನ್ ॥

ಅನುವಾದ

ಹೀಗೆಯೇ ಯಾವ ರಾಜನು ಧರ್ಮಪೂರ್ವಕ ಪ್ರಜೆಯನ್ನು ಪಾಲಿಸುವನೋ, ಅವನು ವೇದಾಧ್ಯಯನ, ತಪಸ್ಸು, ಶುಭ ಕರ್ಮಗಳ ಪುಣ್ಯದ ಆರನೆಯ ಒಂದು ಭಾಗ ಪಡೆಯುತ್ತಾನೆ.॥31॥

ಮೂಲಮ್ - 32

ಷಡ್ಭಾಗಸ್ಯ ಚ ಭೋಕ್ತಾಸೌ ರಕ್ಷತೇ ನ ಪ್ರಜಾಃ ಕಥಮ್ ।
ಸ ತ್ವಂ ಪುರುಷಶಾರ್ದೂಲ ಮಾರ್ಗಸ್ವ ವಿಷಯಂ ಸ್ವಕಮ್ ॥
ದುಷ್ಕೃತಂ ಯತ್ರ ಪಶ್ಯೇಥಾಸ್ತತ್ರ ಯತ್ನಂ ಸಮಾಚರ ।

ಅನುವಾದ

ಪುರುಷಸಿಂಹನೇ! ಪ್ರಜೆಯ ಶುಭ ಕರ್ಮಗಳ ಆರನೆಯ ಒಂದು ಭಾಗ ಪಡೆಯುವ ರಾಜನ ಪ್ರಜೆಯನ್ನು ಏಕೆ ಮಾಡಲಾರನು? ಆದ್ದರಿಂದ ನೀನು ನಿನ್ನ ರಾಜ್ಯದಲ್ಲಿ ಹುಡುಕಿಸು. ಎಲ್ಲಾದರೂ ದುಷ್ಕರ್ಮ ಕಂಡು ಬಂದರೆ ಅದನ್ನು ತಡೆಯುವ ಪ್ರಯತ್ನ ಮಾಡು.॥32॥

ಮೂಲಮ್ - 33

ಏವಂ ಚೇದ್ಧರ್ಮವೃದ್ಧಿಶ್ಚ ನೃಣಾಂ ಚಾಯುರ್ವಿವರ್ಧನಮ್ ।
ಭವಿಷ್ಯತಿ ನರಶ್ರೇಷ್ಠ ಬಾಲಸ್ಯಾಸ್ಯ ಚ ಜೀವಿತಮ್ ॥

ಅನುವಾದ

ನರಶ್ರೇಷ್ಠನೇ! ಹೀಗೆ ಮಾಡುವುದರಿಂದ ಧರ್ಮದ ವೃದ್ಧಿಯಾಗುವುದು ಹಾಗೂ ಮನುಷ್ಯರ ಆಯುಷ್ಯ ಹೆಚ್ಚುವುದು. ಜೊತೆಗೆ ಈ ಬಾಲಕನಿಗೂ ಹೊಸ ಜೀವನ ಲಭಿಸುವುದು.॥33॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಎಪ್ಪತ್ತನಾಲ್ಕನೆಯ ಸರ್ಗ ಪೂರ್ಣವಾಯಿತು. ॥74॥