[ಎಪ್ಪತ್ತಮೂರನೆಯ ಸರ್ಗ]
ಭಾಗಸೂಚನಾ
ಓರ್ವ ಬ್ರಾಹ್ಮಣನು ಸತ್ತ ತನ್ನ ಮಗನನ್ನು ರಾಜದ್ವಾರಕ್ಕೆ ತಂದು, ರಾಜನೇ ದೋಷಿಯೆಂದು ತಿಳಿಸಿ ವಿಲಾಪಿಸಿದುದು
ಮೂಲಮ್ - 1
ಪ್ರಸ್ಥಾಪ್ಯ ತು ಸ ಶತ್ರುಘ್ನಂ ಭ್ರಾತೃಭ್ಯಾಂ ಸಹ ರಾಘವಃ ।
ಪ್ರಮುಮೋದ ಸುಖೀ ರಾಜ್ಯಂ ಧರ್ಮೇಣ ಪರಿಪಾಲಯನ್ ॥
ಅನುವಾದ
ಶತ್ರುಘ್ನನನ್ನು ಮಥುರೆಗೆ ಕಳಿಸಿಕೊಟ್ಟು ಭಗವಾನ್ ಶ್ರೀರಾಮನು ಭರತ ಮತ್ತು ಲಕ್ಷ್ಮಣರೊಂದಿಗೆ ಧರ್ಮ ಪೂರ್ವಕ ರಾಜ್ಯವನ್ನು ಪಾಲಿಸುತ್ತಾ ಬಹಳ ಸುಖ - ಆನಂದದಿಂದ ಇರತೊಡಗಿದನು.॥1॥
ಮೂಲಮ್ - 2
ತತಃ ಕತಿಪಯಾಹಃಸು ವೃದ್ಧೋ ಜಾನಪದೋ ದ್ವಿಜಃ ।
ಮೃತಂ ಬಾಲಮುಪಾದಾಯ ರಾಜದ್ವಾರಮುಪಾಗಮತ್ ॥
ಅನುವಾದ
ಅನಂತರ ಕೆಲವು ದಿನಗಳ ಬಳಿಕ ರಾಷ್ಟ್ರದಲ್ಲಿ ವಾಸಿಸುವ ಓರ್ವ ಮುದುಕ ಬ್ರಾಹ್ಮಣನು ತನ್ನ ಸತ್ತಿರುವ ಬಾಲಕನ ಶವವನ್ನೆತ್ತಿಕೊಂಡು ರಾಜದ್ವಾರಕ್ಕೆ ಬಂದನು.॥2॥
ಮೂಲಮ್ - 3
ರುದನ್ ಬಹುವಿಧಾ ವಾಚಃ ಸ್ನೇಹದುಃಖಸಮನ್ವಿತಃ ।
ಅಸಕೃತ್ಪುತ್ರ ಪುತ್ರೇತಿ ವಾಕ್ಯಮೇತದುವಾಚ ಹ ॥
ಅನುವಾದ
ಅವನು ಸ್ನೇಹ ಮತ್ತು ದುಃಖದಿಂದ ವ್ಯಾಕುಲನಾಗಿ ನಾನಾ ರೀತಿಯ ಮಾತುಗಳನ್ನು ಹೇಳುತ್ತಾ ಅಳುತ್ತಿದ್ದನು. ಪದೇ-ಪದೇ ಮಗು! ಮಗನೇ! ಎಂದು ಕೂಗುತ್ತಾ ಹೀಗೆ ಪ್ರಲಾಪಿಸುತ್ತಿದ್ದನು.॥3॥
ಮೂಲಮ್ - 4
ಕಿಂ ನು ಮೇ ದುಷ್ಕೃತಂ ಕರ್ಮ ಪುರಾ ದೇಹಾಂತರೇ ಕೃತಮ್ ।
ಯದಹಂ ಪುತ್ರಮೇಕಂ ತು ಪಶ್ಯಾಮಿ ನಿಧನಂ ಗತಮ್ ॥
ಅನುವಾದ
ಅಯ್ಯೋ! ನಾನು ಹಿಂದಿನ ಜನ್ಮದಲ್ಲಿ ಯಾವ ಪಾಪ ಮಾಡಿದ್ದೆನೋ, ಅದರಿಂದ ಇಂದು ನನ್ನ ಏಕಮಾತ್ರ ಪುತ್ರನ ಮರಣವನ್ನು ನೋಡಬೇಕಾಯಿತಲ್ಲ.॥4॥
ಮೂಲಮ್ - 5
ಅಪ್ರಾಪ್ತಯೌವನಂಬಾಲಂ ಪಂಚವರ್ಷಸಹಸ್ರಕಮ್ ।
ಅಕಾಲೇ ಕಾಲಮಾಪನ್ನಂ ಮಮ ದುಃಖಾಯ ಪುತ್ರಕ ॥
ಅನುವಾದ
ಮಗು ! ಇನ್ನೂ ನೀನು ಯುವಕನಾಗದೆ ಬಾಲಕನೇ ಆಗಿದ್ದೆ. ಐದು ಸಾವಿರ ದಿನ (ಹದಿಮೂರು ವರ್ಷ ಹತ್ತು ತಿಂಗಳು ಇಪ್ಪತ್ತು ದಿನ)ವಷ್ಟೇ ನಿನ್ನ ವಯಸ್ಸಾಗಿತ್ತು. ಆದರೆ ನೀನು ನನಗೆ ದುಃಖ ಕೊಡಲೆಂದೇ ಅಕಾಲದಲ್ಲಿ ಕಾಲವಶನಾದೆ.॥5॥
ಮೂಲಮ್ - 6
ಅಲ್ಪೈರಹೋಭಿರ್ನಿಧನಂ ಗಮಿಷ್ಯಾಮಿ ನ ಸಂಶಯಃ ।
ಅಹಂ ಚ ಜನನೀ ಚೈವ ತವ ಶೋಕೇನ ಪುತ್ರಕ ॥
ಅನುವಾದ
ವತ್ಸ! ನಿನ್ನ ಶೋಕದಲ್ಲಿ ನಾನು ಮತ್ತು ನಿನ್ನ ತಾಯಿ ಇಬ್ಬರೂ ಕೆಲವೇ ದಿನಗಳಲ್ಲಿ ಸತ್ತುಹೋಗುವೆವು. ಇದರಲ್ಲಿ ಸಂಶಯವೇ ಇಲ್ಲ.॥6॥
ಮೂಲಮ್ - 7
ನ ಸ್ಮರಾಮ್ಯನೃತಂ ಹ್ಯುಕ್ತಂ ನ ಚ ಹಿಂಸಾಂಸ್ಮರಾಮ್ಯಹಮ್ ।
ಸರ್ವೇಷಾಂ ಪ್ರಾಣಿನಾಂ ಪಾಪಂ ನ ಸ್ಮರಾಮಿ ಕದಾಚನ ॥
ಅನುವಾದ
ನಾನು ಎಂದೂ ಸುಳ್ಳಾಡಿದುದು ನೆನಪಿಲ್ಲ. ಯಾರ ಹಿಂಸೆಯಾಗಲೀ ಅಥವಾ ಸಮಸ್ತ ಪ್ರಾಣಿಗಳಲ್ಲಿ ಯಾವುದಕ್ಕೂ ಕಷ್ಟ ಕೊಡಲಿಲ್ಲ.॥7॥
ಮೂಲಮ್ - 8
ಕೇನಾದ್ಯ ದುಷ್ಕೃತೇನಾಯಂ ಬಾಲ ಏವ ಮಮಾತ್ಮಜಃ ।
ಅಕೃತ್ವಾ ಪಿತೃಕಾರ್ಯಾಣಿ ಗತೋ ವೈವಸ್ವತಕ್ಷಯಮ್ ॥
ಅನುವಾದ
ಹಾಗಿರುವಾಗ ಇಂದು ಯಾವ ಪಾಪದಿಂದಾಗಿ ಈ ಮಗನು ಪಿತೃಕರ್ಮ ಮಾಡದೆ, ಈ ಬಾಲ್ಯಾವಸ್ಥೆಯಲ್ಲೇ ಯಮನಾಲಯಕ್ಕೆ ಹೊರಟುಹೋದೆ.॥8॥
ಮೂಲಮ್ - 9
ನೇದೃಶಂ ದೃಷ್ಟಪೂರ್ವಂ ಮೇ ಶ್ರುತಂ ವಾಘೋರದರ್ಶನಮ್ ।
ಮೃತ್ಯುರಪ್ರಾಪ್ತ ಕಾಲಾನಾಂ ರಾಮಸ್ಯ ವಿಷಯೇ ಹ್ಯಯಮ್ ॥
ಅನುವಾದ
ಶ್ರೀರಾಮಚಂದ್ರನ ರಾಜ್ಯದಲ್ಲಾದರೋ ಅಕಾಲಮೃತ್ಯುವಿನಂತಹ ಭಯಂಕರ ಘಟನೆ ಮೊದಲು ಎಂದೂ ನೋಡಿಲ್ಲ, ಕೇಳಿಲ್ಲ.॥9॥
ಮೂಲಮ್ - 10
ರಾಮಸ್ಯ ದುಷ್ಕೃತಂ ಕಿಂಚಿನ್ಮಹದಸ್ತಿ ನ ಸಂಶಯಃ ।
ಯಥಾ ಹಿ ವಿಷಯಸ್ಥಾನಾಂ ಬಾಲಾನಾಂಮೃತ್ಯುರಾಗತಃ ॥
ಅನುವಾದ
ನಿಃಸಂದೇಹವಾಗಿ ರಾಮನದೇ ಯಾವುದೋ ಮಹಾದುಷ್ಕರ್ಮವಾಗಿದೆ. ಅದರಿಂದ ಅವನ ರಾಜ್ಯದಲ್ಲಿ ವಾಸಿಸುವ ಬಾಲಕರ ಮೃತ್ಯುವಾಗತೊಡಗಿದೆ.॥10॥
ಮೂಲಮ್ - 11
ನ ಹ್ಯನ್ಯವಿಷಯಸ್ಥಾನಾಂ ಬಾಲಾನಾಂ ಮೃತ್ಯುತೋ ಭಯಮ್ ।
ಸ ರಾಜನ್ ಜೀವಯಸ್ವೈನಂ ಬಾಲಂ ಮೃತ್ಯುವಶಂ ಗತಮ್ ॥
ಮೂಲಮ್ - 12
ರಾಜದ್ವಾರಿ ಮರಿಷ್ಯಾಮಿ ಪತ್ನ್ಯಾ ಸಾರ್ಧಮನಾಥವತ್ ।
ಬ್ರಹ್ಮಹತ್ಯಾಂ ತತೋ ರಾಮ ಸಮುಪೇತ್ಯ ಸುಖೀ ಭವ ॥
ಅನುವಾದ
ಬೇರೆ ರಾಜ್ಯದಲ್ಲಿರುವ ಬಾಲಕರಿಗೆ ಮೃತ್ಯುಭಯವಿಲ್ಲ. ಆದ್ದರಿಂದ ರಾಜನೇ! ಮೃತ್ಯು ವಶನಾದ ಈ ಬಾಲಕನನ್ನು ಜೀವಂತಗೊಳಿಸು. ಇಲ್ಲದಿದ್ದರೆ ನಾನು ನನ್ನ ಪತ್ನಿಯೊಂದಿಗೆ ಈ ರಾಜದ್ವಾರದಲ್ಲಿ ಅನಾಥನಂತೆ ಪ್ರಾಣತ್ಯಾಗ ಮಾಡುವೆನು. ಶ್ರೀರಾಮಾ! ಮತ್ತೆ ಬ್ರಹ್ಮಹತ್ಯೆಯ ಪಾಪ ಪಡೆದು ನೀನು ಸುಖಿಯಾಗು.॥11-12॥
ಮೂಲಮ್ - 13
ಭ್ರಾತೃಭಿಃ ಸಹಿತೋ ರಾಜನ್ದೀರ್ಘಮಾಯುರವಾಪ್ಸ್ಯಸಿ ।
ಉಷಿತಾಃ ಸ್ಮ ಸುಖಂ ರಾಜ್ಯೇತವಾಸ್ಮಿನ್ ಸುಮಹಾಬಲ ॥
ಅನುವಾದ
ಮಹಾಬಲೀ ರಾಜನೇ! ನಾವು ನಿಮ್ಮ ರಾಜ್ಯದಲ್ಲಿ ಸುಖವಾಗಿ ಇದ್ದೆವು. ಅದಕ್ಕಾಗಿ ನೀನು ನಿನ್ನ ತಮ್ಮಂದಿರೊಂದಿಗೆ ದೀರ್ಘಜೀವಿಯಾಗಿ ಬಾಳು.॥13॥
ಮೂಲಮ್ - 14
ಇದಂ ತು ಪತಿತಂ ತಸ್ಮಾತ್ ತವ ರಾಮವಶೇ ಸ್ಥಿತಾಃ ।
ಕಾಲಸ್ಯ ವಶಮಾಪನ್ನಾಃ ಸ್ವಲ್ಪಂ ಹಿ ನಹಿ ನಃ ಸುಖಮ್ ॥
ಅನುವಾದ
ಶ್ರೀರಾಮಾ! ನಿನ್ನ ಅಧೀನದಲ್ಲಿರುವ ನಮ್ಮ ಮೇಲೆ ಈ ಬಾಲಮೃತ್ಯುರೂಪೀ ದುಃಖ ಬಂದೆರಗಿದೆ. ಇದರಿಂದ ನಾವು ಕಾಲವಶರಾಗಿದ್ದೇವೆ. ಆದ್ದರಿಂದ ನಿನ್ನ ರಾಜ್ಯದಲ್ಲಿ ನಮಗೆ ಕೊಂಚವೂ ಸುಖ ಸಿಗಲಿಲ್ಲ.॥14॥
ಮೂಲಮ್ - 15
ಸಂಪ್ರತ್ಯನಾಥೋ ವಿಷಯ ಇಕ್ಷ್ವಾಕೂಣಾಂ ಮಹಾತ್ಮನಾಮ್ ।
ರಾಮಂ ನಾಥಮಿಹಾಸಾದ್ಯ ಬಾಲಾಂತಕರಣಂ ಧ್ರುವಮ್ ॥
ಅನುವಾದ
ಮಹಾತ್ಮಾ ಇಕ್ಷ್ವಾಕು ರಾಜರ ಈ ರಾಜ್ಯವು ಈಗ ಅನಾಥವಾಗಿದೆ. ಶ್ರೀರಾಮನನ್ನು ಒಡೆಯನಾಗಿ ಪಡೆದು ಇಲ್ಲಿ ಬಾಲಕರ ಮೃತ್ಯು ಯಾವಾಗಲೂ ಆಗುತ್ತಿದೆ.॥15॥
ಮೂಲಮ್ - 16
ರಾಜದೋಷೈರ್ವಿಪದ್ಯಂತೇ ಪ್ರಜಾ ಹ್ಯವಿಧಿಪಾಲಿತಾಃ ।
ಅಸದ್ವತ್ತೇ ಹಿ ನೃಪತಾವಕಾಲೇ ಮ್ರಿಯತೇ ಜನಃ ॥
ಅನುವಾದ
ರಾಜನ ದೋಷದಿಂದ ಪ್ರಜೆಯ ವಿಧಿವತ್ತಾಗಿ ಪಾಲನೆ ಆಗದಿದ್ದಾಗ ಪ್ರಜಾವರ್ಗವು ಇಂತಹ ವಿಪತ್ತುಗಳನ್ನು ಎದುರಿಸಬೇಕಾಗುತ್ತದೆ. ರಾಜನು ದುರಾಚಾರಿಯಾದಾಗಲೇ ಪ್ರಜೆಯ ಅಕಾಲ ಮೃತ್ಯು ಆಗುತ್ತದೆ.॥16॥
ಮೂಲಮ್ - 17
ಯದ್ವಾ ಪುರೇಷ್ವಯುಕ್ತಾನಿ ಜನಾ ಜನಪದೇಷು ಚ ।
ಕುರ್ವತೇ ನ ಚ ರಕ್ಷಾಸ್ತಿ ತದಾಕಾಲಕೃತಂ ಭಯಮ್ ॥
ಅನುವಾದ
ನಗರಗಳಲ್ಲಿ, ದೇಶದಲ್ಲಿ ಇರುವ ಜನರು ಅನುಚಿತ ಕರ್ಮ-ಪಾಪಾಚಾರ ಮಾಡಿದಾಗ ಅಲ್ಲಿ ರಕ್ಷಣೆಯ ವ್ಯವಸ್ಥೆ ಇಲ್ಲದಿದ್ದಾಗ, ಅನುಚಿತ ಕರ್ಮದಿಂದ ತಡೆಯುವ ಯಾವುದೇ ಉಪಾಯವಿಲ್ಲದಿದ್ದಾಗ, ದೇಶದ ಪ್ರಜೆಯಲ್ಲಿ ಅಕಾಲ ಮೃತ್ಯುವಿನ ಭಯ ಪ್ರಾಪ್ತವಾಗುತ್ತದೆ.॥17॥
ಮೂಲಮ್ - 18
ಸುವ್ಯಕ್ತಂ ರಾಜದೋಷೋ ಹಿ ಭವಿಷ್ಯತಿ ನಸಂಶಯಃ ।
ಪುರೇ ಜನಪದೇ ವಾಪಿ ತಥಾ ಬಾಲವಧೋ ಹ್ಯಯಮ್ ॥
ಅನುವಾದ
ಆದ್ದರಿಂದ ನಗರ ಅಥವಾ ರಾಜ್ಯದಲ್ಲಿ ಎಲ್ಲಾದರೂ ರಾಜನಿಂದಲೇ ಯಾವುದೋ ಅಪರಾಧ ನಡೆದಿರಬಹುದು; ಇದು ಸ್ಪಷ್ಟವಾಗಿದೆ. ಆಗಲೇ ಈ ರೀತಿ ಬಾಲಕನ ಮೃತ್ಯುವಾಗಿದೆ ಇದರಲ್ಲಿ ಸಂಶಯವೇ ಇಲ್ಲ.॥18॥
ಮೂಲಮ್ - 19
ಏವಂ ಬಹುವಿಧೈರ್ವಾಕ್ಯೈರುಪರುಧ್ಯ ಮಹುರ್ಮುಹುಃ ।
ರಾಜಾನಂದುಃಖಸಂತಪ್ತಃ ಸುತಂ ತಮುಪಗೂಹತೀ ॥
ಅನುವಾದ
ಹೀಗೆ ಅನೇಕ ರೀತಿಯಿಂದ ಅವನು ಪದೇ-ಪದೇ ರಾಜನ ಎದುರಿಗೆ ತನ್ನ ದುಃಖವನ್ನು ನಿವೇದಿಸಿಕೊಂಡನು ಮತ್ತು ಶೋಕ ಸಂತಪ್ತನಾಗಿ ಸತ್ತಿರುವ ಮಗನನ್ನು ಎತ್ತಿ-ಎತ್ತಿ ಅಪ್ಪಿಕೊಳ್ಳುತ್ತಿದ್ದನು.॥19॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಎಪ್ಪತ್ತಮೂರನೆಯ ಸರ್ಗ ಪೂರ್ಣವಾಯಿತು. ॥73॥