०७३ द्विज-विषादः

[ಎಪ್ಪತ್ತೆರಡನೆಯ ಸರ್ಗ]

ಭಾಗಸೂಚನಾ

ವಾಲ್ಮೀಕಿಗಳಿಂದ ಬೀಳ್ಕೊಂಡು ಶತ್ರುಘ್ನನು ಅಯೋಧ್ಯೆಗೆ ಹೋಗಿ ಶ್ರೀರಾಮಾದಿಗಳನ್ನು ಭೆಟ್ಟಿಯಾಗಿ, ಏಳುದಿನ ಅಲ್ಲಿ ಇದ್ದು ಪುನಃ ಮಧುರಾಪುರಿಗೆ ಪ್ರಯಾಣ

ಮೂಲಮ್ - 1

ತಂ ಶಯಾನಂ ನರವ್ಯಾಘ್ರಂ ನಿದ್ರಾ ನಾಭ್ಯಾಗಮತ್ತದಾ ।
ಚಿಂತಯಾನಮನೇಕಾರ್ಥಂ ರಾಮಗೀತಮನುತ್ತಮಮ್ ॥

ಅನುವಾದ

ಪುರುಷಸಿಂಹ ಶತ್ರುಘ್ನನು ಮಲಗಿದ್ದರೂ ಆ ಉತ್ತಮ ಶ್ರೀರಾಮಚಂದ್ರನ ಕುರಿತು ಅನೇಕ ರೀತಿಯ ಮಾತುಗಳನ್ನು ಯೋಚಿಸುತ್ತಿದ್ದನು. ಇದರಿಂದ ಅವನಿಗೆ ಬಹಳ ಹೊತ್ತು ನಿದ್ದೆಬಂದಿಲ್ಲ.॥1॥

ಮೂಲಮ್ - 2

ತಸ್ಯ ಶಬ್ದಂ ಸುಮಧುರಂ ತಂತ್ರೀಲಯಸಮನ್ವಿತಮ್ ।
ಶ್ರುತ್ವಾ ರಾತ್ರಿರ್ಜಗಾಮಾಶು ಶತ್ರುಘ್ನಸ್ಯ ಮಹಾತ್ಮನಃ ॥

ಅನುವಾದ

ವೀಣೆಯ ಲಯದೊಂದಿಗೆ ರಾಮಚರಿತ ಗಾಯನದ ಸುಮಧುರ ಶಬ್ದ ಕೇಳಿ ಮಹಾತ್ಮಾ ಶತ್ರುಘ್ನನ ಉಳಿದ ರಾತ್ರಿಯೂ ಬೇಗನೇ ಕಳೆದುಹೋಯಿತು.॥2॥

ಮೂಲಮ್ - 3

ತಸ್ಯಾಂ ರಜನ್ಯಾಂ ವ್ಯಷ್ಟಾಯಾಂ ಕೃತ್ವಾ ಪೌರ್ವಾಹ್ಣಿಕಂ ಕ್ರಮಮ್ ।
ಉವಾಚ ಪ್ರಾಂಜಲಿರ್ವಾಕ್ಯಂ ಶತ್ರುಘ್ನೋ ಮುನಿಪುಂಗವಮ್ ॥

ಅನುವಾದ

ರಾತ್ರೆ ಕಳೆದು ಪ್ರಾತಃಕಾಲ ಪೂರ್ವಾಹ್ಣದ ನಿತ್ಯಕರ್ಮ ಮುಗಿಸಿ ಶತ್ರುಘ್ನನು ಕೈಮುಗಿದು ಮುನಿವರ ವಾಲ್ಮೀಕಿಗಳಲ್ಲಿ ಹೇಳಿದನು.॥3॥

ಮೂಲಮ್ - 4

ಭಗವನ್ ದ್ರಷ್ಟುಮಿಚ್ಛಾಮಿ ರಾಘವಂರಘುನಂದನಮ್ ।
ತ್ವಯಾನುಜ್ಞಾತುಮಿಚ್ಛಾಮಿ ಸಹೈಭಿಃ ಸಂಶಿತವ್ರತೈಃ ॥

ಅನುವಾದ

ಪೂಜ್ಯರೇ! ಈಗ ನಾನು ರಘುಕುಲನಂದ ಶ್ರೀರಾಮನನ್ನು ದರ್ಶಿಸಲು ಬಯಸುತ್ತಿದ್ದೇನೆ. ಆದ್ದರಿಂದ ನೀವು ಆಜ್ಞೆ ಕೊಟ್ಟರೆ ಕಠೋರ ವ್ರತವನ್ನು ಪಾಲಿಸುವ ಈ ಸಂಗಡಿಗರೊಂದಿಗೆ ಅಯೋಧ್ಯೆಗೆ ಹೋಗಲು ಇಚ್ಛಿಸುತ್ತೇನೆ.॥4॥

ಮೂಲಮ್ - 5

ಇತ್ಯೇವಂ ವಾದಿನಂ ತಂ ತು ಶತ್ರುಘ್ನಂಶತ್ರುಸೂದನಮ್ ।
ವಾಲ್ಮೀಕಿಃ ಸಂಪರಿಷ್ವಜ್ಯ ವಿಸಸರ್ಜ ಚ ರಾಘವಮ್ ॥

ಅನುವಾದ

ಹೀಗೆ ಹೇಳುತ್ತಾ ರಘುಕುಲಭೂಷಣ ಶತ್ರುಸೂದನ ಶತ್ರುಘ್ನನನ್ನು ವಾಲ್ಮೀಕಿಗಳು ಬಿಗಿದಪ್ಪಿಕೊಂಡು ಹೋಗಲು ಅಪ್ಪಣೆ ನೀಡಿದರು.॥5॥

ಮೂಲಮ್ - 6

ಸೋಽಭಿವಾದ್ಯ ಮುನಿಶ್ರೇಷ್ಠಂ ರಥಮಾರುಹ್ಯ ಸುಪ್ರಭಮ್ ।
ಅಯೋಧ್ಯಾಮಗಮತ್ತೂರ್ಣಂ ರಾಘವೋತ್ಸುಕದರ್ಶನಃ ॥

ಅನುವಾದ

ಶ್ರೀರಾಮನ ದರ್ಶನಕ್ಕೆ ಉತ್ಕಂಠಿತನಾದ ಶತ್ರುಘ್ನನು ಮುನಿಶ್ರೇಷ್ಠ ವಾಲ್ಮೀಕಿಗಳಿಗೆ ವಂದಿಸಿ, ಒಂದು ಸುಂದರ ದೀಪ್ತಿಯುಳ್ಳ ರಥವನ್ನೇರಿ ಕೂಡಲೇ ಅಯೋಧ್ಯೆಯ ಕಡೆಗೆ ಹೊರಟನು.॥6॥

ಮೂಲಮ್ - 7

ಸ ಪ್ರವಿಷ್ಟಃ ಪುರೀಂ ರಮ್ಯಾಂ ಶ್ರೀಮಾನಿಕ್ಷ್ವಾಕುನಂದನಃ ।
ಪ್ರವಿವೇಶ ಮಹಾಬಾಹುರ್ಯತ್ರ ರಾಮೋ ಮಹಾದ್ಯುತಿಃ ॥

ಅನುವಾದ

ಇಕ್ಷ್ವಾಕುಕುಲನಂದನ ಮಹಾಬಾಹು ಶ್ರೀಮಾನ್ ಶತ್ರುಘ್ನನು ಅಯೋಧ್ಯೆಯನ್ನು ಪ್ರವೇಶಿಸಿ, ನೇರವಾಗಿ ಮಹಾತೇಜಸ್ವೀ ಶ್ರೀರಾಮನು ವಿರಾಜಿಸುತ್ತಿದ್ದ ಅರಮನೆಗೆ ಹೋದನು.॥7॥

ಮೂಲಮ್ - 8

ಸ ರಾಮಂ ಮಂತ್ರಿ ಮಧ್ಯಸ್ಥಂ ಪೂರ್ಣಚಂದ್ರ ನಿಭಾನನಮ್ ।
ಪಶ್ಯನ್ನಮರಮಧ್ಯಸ್ಥಂ ಸಹಸ್ರನಯನಂ ಯಥಾ ॥

ಮೂಲಮ್ - 9

ಸೋಽಭಿವಾದ್ಯ ಮಹಾತ್ಮಾನಂ ಜ್ವಲಂತಮಿವ ತೇಜಸಾ ।
ಉವಾಚ ಪ್ರಾಂಜಲಿರ್ಭೂತ್ವಾ ರಾಮಂ ಸತ್ಯಪರಾಕ್ರಮಮ್ ॥

ಅನುವಾದ

ಸಹಸ್ರನೇತ್ರಧಾರೀ ಇಂದ್ರನು ದೇವತೆಗಳ ನಡುವೆ ಕುಳಿತಿರುವಂತೆ ಪೂರ್ಣಚಂದ್ರನಂತೆ ಮನೋಹರ ಮುಖವುಳ್ಳ ಶ್ರೀರಾಮನು ಮಂತ್ರಿಗಳ ಮಧ್ಯದಲ್ಲಿ ವಿರಾಜಿಸುತ್ತಿದ್ದನು. ತನ್ನ ತೇಜದಿಂದ ಪ್ರಜ್ವಲಿತನಾದ ಸತ್ಯ ಪರಾಕ್ರಮಿ ಮಹಾತ್ಮಾ ಶ್ರೀರಾಮನನ್ನು ನೋಡಿ ಶತ್ರುಘ್ನನು ಕೈಮುಗಿದು ಇಂತೆಂದನು.॥8-9॥

ಮೂಲಮ್ - 10

ಯದಾಜ್ಞಪ್ತಂ ಮಹಾರಾಜ ಸರ್ವಂ ತತ್ಕೃತವಾನಹಮ್ ।
ಹತಃ ಸಲವಣಃ ಪಾಪಃ ಪುರೀ ಚಾಸ್ಯ ನಿವೇಶಿತಾ ॥

ಅನುವಾದ

ಮಹಾರಾಜಾ! ನೀವು ನನಗೆ ಆಜ್ಞಾಪಿಸಿದ ಎಲ್ಲ ಕಾರ್ಯವನ್ನು ಪೂರೈಸಿ ನಾನು ಬಂದಿದ್ದೇನೆ. ಪಾಪೀ ಲವಣನು ಹತನಾಗಿ ಅವನ ಪುರಿಯೂ ನೆಲೆಗೊಂಡಿತು.॥10॥

ಮೂಲಮ್ - 11

ದ್ವಾದಶೈತಾನಿ ವರ್ಷಾಣಿ ತ್ವಾಂ ವಿನಾ ರಘುನಂದನ ।
ನೋತ್ಸಹೇಯಮಹಂ ವಸ್ತುಂ ತ್ವಯಾ ವಿರಹಿತೋ ನೃಪ ॥

ಅನುವಾದ

ರಘುನಂದನ! ನಿಮ್ಮ ದರ್ಶನವಿಲ್ಲದೆ ಈ ಹನ್ನೆರಡು ವರ್ಷಗಳು ಹೇಗೋ ಕಳೆದು ಹೋದುವು; ಆದರೆ ನರೇಶ್ವರ! ಇನ್ನು ಹೆಚ್ಚು ದಿನ ನಿಮ್ಮಿಂದ ದೂರ ಉಳಿಯುವ ಸಾಹಸ ನನ್ನಲ್ಲಿ ಇಲ್ಲ.॥11॥

ಮೂಲಮ್ - 12

ಸ ಮೇ ಪ್ರಸಾದಂ ಕಾಕುತ್ಸ್ಥ ಕುರುಷ್ವಾಮಿತವಿಕ್ರಮ ।
ಮಾತೃಹೀನೋ ಯಥಾ ವತ್ಸೋ ನ ಚಿರಂ ಪ್ರವಸಾಮ್ಯಹಮ್ ॥

ಅನುವಾದ

ಅಮಿತ ಪರಾಕ್ರಮೀ ಕಾಕುತ್ಸ್ಥನೇ! ಪುಟ್ಟಮಗು ತನ್ನ ತಾಯಿಯನ್ನು ಅಗಲಿ ಇರುವುದಿಲ್ಲವೋ ಹಾಗೆಯೇ ನಾನು ಚಿರಕಾಲ ನಿಮ್ಮಿಂದ ದೂರ ಇರಲಾರೆ. ಅದಕ್ಕಾಗಿ ನೀವು ನನ್ನ ಮೇಲೆ ಕೃಪೆದೋರಿರಿ.॥12॥

ಮೂಲಮ್ - 13

ಏವಂ ಬ್ರುವಾಣಂ ಶತ್ರುಘ್ನಂ ಪರಿಷ್ವಜ್ಯೇದಮಬ್ರವೀತ್ ।
ಮಾ ವಿಷಾದಂ ಕೃಥಾಃ ಶೂರ ನೈತತ್ ಕ್ಷತ್ರಿಯಚೇಷ್ಟಿತಮ್ ॥

ಅನುವಾದ

ಹೀಗೆ ಹೇಳುತ್ತಿರುವ ಶತ್ರುಘ್ನನನ್ನು ಬಿಗಿದಪ್ಪಿಕೊಂಡು ಶ್ರೀರಾಮನು ಹೇಳಿದನು - ಶೂರವೀರನೇ! ವಿಷಾದಪಡಬೇಡ. ಈ ರೀತಿ ಕಾತರನಾಗುವುದು ಕ್ಷತ್ರಿಯರಿಗೆ ಉಚಿತವಲ್ಲ.॥13॥

ಮೂಲಮ್ - 14

ನಾವಸೀದಂತಿ ರಾಜಾನೋ ವಿಪ್ರವಾಸೇಷು ರಾಘವ ।
ಪ್ರಜಾ ಚ ಪರಿಪಾಲ್ಯಾ ಹಿ ಕ್ಷಾತ್ರಧರ್ಮೇಣ ರಾಘವ ॥

ಅನುವಾದ

ರಘುಕುಲಭೂಷಣ! ರಾಜರು ಪರದೇಶದಲ್ಲಿದ್ದರೂ ದುಃಖಿತರಾಗುವುದಿಲ್ಲ. ರಘುವೀರನೇ! ರಾಜನು ಕ್ಷತ್ರಿಯ ಧರ್ಮಕ್ಕನುಸಾರ ಪ್ರಜೆಯನ್ನು ಚೆನ್ನಾಗಿ ಪಾಲಿಸಬೇಕು.॥14॥

ಮೂಲಮ್ - 15

ಕಾಲೇ ಕಾಲೇ ತು ಮಾಂ ವೀರ ಅಯೋಧ್ಯಾಮವಲೋಕಿತುಮ್ ।
ಆಗಚ್ಛ ತ್ವಂ ನರಶ್ರೇಷ್ಠ ಗಂತಾಸಿ ಚ ಪುರಂ ತವ ॥

ಅನುವಾದ

ನರಶ್ರೇಷ್ಠವೀರನೇ! ಆಗಾಗ ನನ್ನನ್ನು ನೋಡಲು ಅಯೋಧ್ಯೆಗೆ ಬರುತ್ತಾ ಇರು ಹಾಗೂ ಮತ್ತೆ ತನ್ನ ಪುರಿಗೆ ಮರಳಿ ಹೋಗುತ್ತಾ ಇರು.॥15॥

ಮೂಲಮ್ - 16

ಮಮಾಪಿ ತ್ವಂ ಸುದಯಿತಃ ಪ್ರಾಣೈರಪಿ ನ ಸಂಶಯಃ ।
ಅವಶ್ಯಂ ಕರಣೀಯಂ ಚ ರಾಜ್ಯಸ್ಯ ಪರಿಪಾಲನಮ್ ॥

ಅನುವಾದ

ನೀನು ನನಗೆ ಪ್ರಾಣಕ್ಕಿಂತ ಹೆಚ್ಚು ಪ್ರಿಯನಾಗಿರುವೆ ಇದರಲ್ಲಿ ಸಂಶಯವೇ ಇಲ್ಲ. ಆದರೆ ರಾಜ್ಯದ ಪಾಲನೆ ಮಾಡುವುದೂ ಆವಶ್ಯಕ ಕರ್ತವ್ಯವಾಗಿದೆ.॥16॥

ಮೂಲಮ್ - 17

ತಸ್ಮಾತ್ತ್ವಂ ವಸ ಕಾಕುತ್ಸ್ಥ ಸಪ್ತರಾತ್ರಂ ಮಯಾ ಸಹ ।
ಊರ್ಧ್ವಂ ಗಂತಾಸಿ ಮಧುರಾಂ ಸಭೃತ್ಯಬಲವಾಹನಃ ॥

ಅನುವಾದ

ಆದ್ದರಿಂದ ಕಾಕುತ್ಸ್ಥನೇ ! ಈಗ ಏಳುದಿನ ನೀನು ನನ್ನೊಂದಿಗೆ ಇರು. ಅನಂತರ ಸೇವಕರು, ಸೈನ್ಯ, ವಾಹನಗಳೊಂದಿಗೆ ಮಧುರಾಪುರಿಗೆ ಹೊರಟು ಹೋಗು.॥17॥

ಮೂಲಮ್ - 18

ರಾಮಸ್ಯೈ ತದ್ವಚಃ ಶ್ರುತ್ವಾ ಧರ್ಮಯುಕ್ತಂ ಮನೋಽನುಗಮ್ ।
ಶತ್ರುಘ್ನೋ ದೀನಯಾ ವಾಚಾ ಬಾಢಮಿತ್ಯೇವ ಚಾಬ್ರವೀತ್ ॥

ಅನುವಾದ

ಶ್ರೀರಾಮಚಂದ್ರನ ಈ ಮಾತು ಧರ್ಮ ಯುಕ್ತ ಇರುವುದರೊಂದಿಗೆ ಮನಸ್ಸಿಗನುಕೂಲವಾಗಿತ್ತು. ಅದನ್ನು ಕೇಳಿ ಶತ್ರುಘ್ನನು ಶ್ರೀರಾಮನ ವಿಯೋಗದ ಭಯದಿಂದ ದೀನವಾಣಿಯಲ್ಲಿ ‘ತಮ್ಮ ಆಜ್ಞೆಯಂತಾಗಲಿ’ ಎಂದು ಹೇಳಿದನು.॥18॥

ಮೂಲಮ್ - 19

ಸಪ್ತರಾತ್ರಂ ಚ ಕಾಕುತ್ಸ್ಥೋ ರಾಘವಸ್ಯ ಯಥಾಜ್ಞಯಾ ।
ಉಷ್ಯ ತತ್ರ ಮಹೇಷ್ವಾಸೋಗಮನಾಯೋಪಚಕ್ರಮೇ ॥

ಅನುವಾದ

ಶ್ರೀರಘುನಾಥನ ಆಜ್ಞೆಯಂತೆ ಏಳು ದಿನ ಅಯೋಧ್ಯೆಯಲ್ಲಿ ಇದ್ದು, ಮಹಾಧನುರ್ಧರ ಕಾಕುತ್ಸ್ಥಕುಲಭೂಷಣ ಶತ್ರುಘ್ನನು ಅಲ್ಲಿಂದ ಹೋಗಲು ಸಿದ್ಧನಾದನು.॥19॥

ಮೂಲಮ್ - 20

ಆಮಂತ್ರ್ಯತು ಮಹಾತ್ಮಾನಂ ರಾಮಂ ಸತ್ಯಪರಾಕ್ರಮಮ್ ।
ಭರತಂ ಲಕ್ಷ್ಮಣಂ ಚೈವ ಮಹಾರಥಮುಪಾರುಹತ್ ॥

ಅನುವಾದ

ಸತ್ಯಪರಾಕ್ರಮಿ ಮಹಾತ್ಮಾ ಶ್ರೀರಾಮ, ಭರತ, ಲಕ್ಷ್ಮಣರಿಂದ ಬೀಳ್ಕೊಂಡು ಶತ್ರುಘ್ನನು ಬಂದು ವಿಶಾಲ ರಥವನ್ನು ಏರಿದನು.॥20॥

ಮೂಲಮ್ - 21

ದೂರಂ ಪದ್ಭ್ಯಾಮನುಗತೋ ಲಕ್ಷ್ಮಣೇನಮಹಾತ್ಮನಾ ।
ಭರತೇನ ಚ ಶತ್ರುಘ್ನೋ ಜಗಾಮಾಶು ಪುರೀಂ ತದಾ ॥

ಅನುವಾದ

ಮಹಾತ್ಮಾ ಲಕ್ಷ್ಮಣ ಮತ್ತು ಭರತರು ಕಾಲ್ನಡಿಗೆಯಲ್ಲಿ ಅವನನ್ನು ಬೀಳ್ಕೊಡಲು ಸ್ವಲ್ಪದೂರ ಹಿಂದೆಯೇ ಹೋದರು. ಅನಂತರ ಶತ್ರುಘ್ನನು ಶೀಘ್ರವಾಗಿ ತನ್ನ ರಾಜಧಾನಿಯ ಕಡೆಗೆ ಹೊರಟು ಹೋದನು.॥21॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಎಪ್ಪತ್ತೆರಡನೆಯ ಸರ್ಗ ಪೂರ್ಣವಾಯಿತು. ॥72॥