[ಎಪ್ಪತ್ತೊಂದನೆಯ ಸರ್ಗ]
ಭಾಗಸೂಚನಾ
ಶತ್ರುಘ್ನನು ಸ್ವಲ್ಪ ಸೈನಿಕರೊಂದಿಗೆ ಅಯೋಧ್ಯೆಗೆ ಪ್ರಯಾಣ, ದಾರಿಯಲ್ಲಿ ವಾಲ್ಮೀಕಿಗಳ ಆಶ್ರಮದಲ್ಲಿ ರಾಮಚರಿತ ಗಾನವನ್ನು ಕೇಳಿ, ಆಶ್ಚರ್ಯಚಕಿತನಾದುದು
ಮೂಲಮ್ - 1
ತತೋ ದ್ವಾದಶಮೇ ವರ್ಷೇ ಶತ್ರುಘ್ನೋ ರಾಮಪಾಲಿತಾಮ್ ।
ಅಯೋಧ್ಯಾಂ ಚಕ್ರಮೇ ಗಂತುಮಲ್ಪಭೃತ್ಯ ಬಲಾನುಗಃ ॥
ಅನುವಾದ
ಬಳಿಕ ಹನ್ನೆರಡನೆಯ ವರ್ಷದಲ್ಲಿ ಸ್ವಲ್ಪ ಸೈನಿಕರನ್ನು, ಸೇವಕರನ್ನು ಕರೆದುಕೊಂಡು ಶತ್ರುಘ್ನನು ಶ್ರೀರಾಮನಿಂದ ರಕ್ಷಿತವಾದ ಅಯೋಧ್ಯೆಗೆ ಹೋಗಲು ಯೋಚಿಸಿದನು.॥1॥
ಮೂಲಮ್ - 2
ತತೋ ಮಂತ್ರಿ ಪುರೋಗಾಂಶ್ಚ ಬಲಮುಖ್ಯಾನ್ನಿವರ್ತ್ಯ ಚ ।
ಜಗಾಮ ಹಯಮುಖ್ಯೇನ ರಥಾನಾಂ ಚ ಶತೇನ ಸಃ ॥
ಅನುವಾದ
ಮಂತ್ರಿಮುಖ್ಯರನ್ನು, ಸೇನಾನಾಯಕರನ್ನು ನಗರದ ರಕ್ಷಣೆಗಾಗಿ ನೇಮಿಸಿ, ಉತ್ತಮ ಕುದುರೆಗಳಿಂದ ಕೂಡಿದ ನೂರು ರಥಗಳನ್ನು ಜೊತೆಯಲ್ಲಿ ಕರೆದುಕೊಂಡು ಅಯೋಧ್ಯೆಗೆ ಹೊರಟನು.॥2॥
ಮೂಲಮ್ - 3
ಸ ಗತ್ವಾ ಗಣಿತಾನ್ವಾಸಾನ್ಸಪ್ತಾಷ್ಟೌ ರಘುನಂದನಃ ।
ವಾಲ್ಮೀಕಾಶ್ರಮಮಾಗತ್ಯ ವಾಸಂ ಚಕ್ರೇಮಹಾಯಶಾಃ ॥
ಅನುವಾದ
ಮಹಾಯಶಸ್ವೀ ರಘುಕುಲನಂದನ ಶತ್ರುಘ್ನನು ಪ್ರಯಾಣ ಮಾಡುತ್ತಾ ದಾರಿಯಲ್ಲಿ ಏಳೆಂಟು ಕಡೆ ಬಿಡಾರ ಬಿಟ್ಟು, ಮುಂದರಿಯುತ್ತಾ ವಾಲ್ಮೀಕಿಮುನಿಗಳ ಆಶ್ರಮಕ್ಕೆ ತಲುಪಿ, ರಾತ್ರೆ ಅಲ್ಲೇ ಉಳಿದುಕೊಂಡನು.॥3॥
ಮೂಲಮ್ - 4
ಸೋಽಭಿವಾದ್ಯ ತತಃ ಪಾದೌ ವಾಲ್ಮೀಕೇಃ ಪುರುಷರ್ಷಭಃ ।
ಪಾದ್ಯಮರ್ಘ್ಯಂತಥಾತಿಥ್ಯಂ ಜಗ್ರಾಹ ಮುನಿಹಸ್ತತಃ ॥
ಅನುವಾದ
ಆ ಪುರುಷಶ್ರೇಷ್ಠ ರಘುವೀರನು ವಾಲ್ಮೀಕಿಗಳ ಚರಣಗಳಿಗೆ ವಂದಿಸಿ, ಅವರಿಂದ ಅರ್ಘ್ಯಪಾದ್ಯಗಳನ್ನು ಸ್ವೀಕರಿಸಿ, ಆತಿಥ್ಯ ಸತ್ಕಾರವನ್ನು ಸ್ವೀಕರಿಸಿದನು.॥4॥
ಮೂಲಮ್ - 5
ಬಹುರೂಪಾಃ ಸುಮಧುರಾಃ ಕಥಾಸ್ತತ್ರ ಸಹಸ್ರಶಃ ।
ಕಥಯಾಮಾಸ ಸ ಮುನಿಃ ಶತ್ರುಘ್ನಾಯ ಮಹಾತ್ಮನೇ ॥
ಅನುವಾದ
ಅಲ್ಲಿ ಮಹರ್ಷಿ ವಾಲ್ಮೀಕಿಗಳು ಮಹಾತ್ಮಾ ಶತ್ರುಘ್ನನಿಗೆ ಬಗೆ-ಬಗೆಯ ಸಾವಿರಾರು ಸುಮಧುರ ಕಥೆಗಳನ್ನು ಹೇಳಿದರು.॥5॥
ಮೂಲಮ್ - 6
ಉವಾಚ ಚ ಮುನಿರ್ವಾಕ್ಯಂ ಲವಣಸ್ಯ ವಧಾಶ್ರಿತಮ್ ।
ಸುದುಷ್ಕರಂ ಕೃತಂ ಕರ್ಮಲವಣಂ ನಿಘ್ನ ತಾ ತ್ವಯಾ ॥
ಅನುವಾದ
ಮತ್ತೆ ಅವರು ಲವಣಾಸುರನನ್ನು ಕೊಂದು ನೀನು ಅಂತ್ಯತ ದುಷ್ಕರಕಾರ್ಯ ಮಾಡಿದೆ ಎಂದು ಹೇಳಿದರು.॥6॥
ಮೂಲಮ್ - 7
ಬಹವಃ ಪಾರ್ಥಿವಾಃ ಸೌಮ್ಯ ಹತಾಃಸಬಲವಾಹನಾಃ ।
ಲವಣೇನ ಮಹಾಬಾಹೋ ಯುಧ್ಯಮಾನಾ ಮಹಾಬಲಾಃ ॥
ಅನುವಾದ
ಸೌಮ್ಯ! ಮಹಾಬಾಹೋ! ಲವಣಾಸುರನೊಂದಿಗೆ ಯುದ್ಧ ಮಾಡಿ ಅನೇಕ ಮಹಾಬಲಿ ರಾಜರು ಸೈನ್ಯ, ವಾಹನಗಳೊಂದಿಗೆ ಹತರಾಗಿದ್ದಾರೆ.॥7॥
ಮೂಲಮ್ - 8
ಸ ತ್ವಯಾ ನಿಹತಃ ಪಾಪೋ ಲೀಲಯಾಪುರುಷರ್ಷಭ ।
ಜಗತಶ್ಚ ಭಯಂ ತತ್ರ ಪ್ರಶಾಂತಂ ತವ ತೇಜಸಾ ॥
ಅನುವಾದ
ಪುರುಷಶ್ರೇಷ್ಠನೇ! ಆ ಪಾಪಿ ಲವಣಾಸುರನನ್ನು ನೀನು ಅನಾಯಾಸವಾಗಿ ಸಂಹರಿಸಿದೆ. ಅವನಿಂದ ಜಗತ್ತಿನಲ್ಲಿ ಉಂಟಾದ ಭಯವು ನಿನ್ನ ತೇಜದಿಂದ ತೊಲಗಿತು.॥8॥
ಮೂಲಮ್ - 9
ರಾವಣಸ್ಯ ವಧೋ ಘೋರೋ ಯತ್ನೇನ ಮಹತಾ ಕೃತಾಃ ।
ಇದಂ ಚ ಸುಮಹತ್ಕರ್ಮ ತ್ವಯಾ ಕೃತಮಯತ್ನತಃ ॥
ಅನುವಾದ
ರಾವಣನ ಘೋರ ವಧೆ ಮಹಾಪ್ರಯತ್ನದಿಂದ ಮಾಡಲಾಗಿತ್ತು; ಆದರೆ ಈ ಮಹಾಕಾರ್ಯವನ್ನು ನೀನು ಪ್ರಯತ್ನವಿಲ್ಲದೆಯೇ ಮಾಡಿ ಮುಗಿಸಿರುವೆ.॥9॥
ಮೂಲಮ್ - 10
ಪ್ರೀತಿಶ್ಚಾಸ್ಮಿನ್ ಪರಾ ಜಾತಾ ದೇವಾನಾಂ ಲವಣೇ ಹತೇ ।
ಭೂತಾನಾಂ ಚೈವ ಸರ್ವೇಷಾಂ ಜಗತಶ್ಚ ಪ್ರಿಯಂ ಕೃತಮ್ ॥
ಅನುವಾದ
ಲವಣಾಸುರನು ಹತನಾದ್ದರಿಂದ ದೇವತೆಗಳಿಗೆ ಬಹಳ ಸಂತೋಷವಾಗಿದೆ. ನೀನು ಸಮಸ್ತ ಪ್ರಾಣಿಗಳ ಮತ್ತು ಇಡೀ ಜಗತ್ತಿನ ಪ್ರಿಯಕಾರ್ಯ ಮಾಡಿರುವೆ.॥10॥
ಮೂಲಮ್ - 11
ತಚ್ಛ ಯುದ್ಧಂ ಮಯಾ ದೃಷ್ಟಂ ಯಥಾವತ್ಪುರುಷರ್ಷಭ ।
ಸಭಾಯಾಂ ವಾಸವಸ್ಯಾಥ ಉಪವಿಷ್ಟೇನ ರಾಘವ ॥
ಅನುವಾದ
ನರಶ್ರೇಷ್ಠನೇ! ನಾನು ಇಂದ್ರನ ಸಭೆಯಲ್ಲಿ ಕುಳಿತ್ತಿದ್ದೆ. ಆ ವಿಮಾನಾಕಾರ ಸಭೆಯು ಯುದ್ಧವನ್ನು ನೋಡಲು ಬಂದಾಗ, ಅಲ್ಲೇ ಕುರಿತು ನಾನೂ ಕೂಡ ನಿನ್ನ ಮತ್ತು ಲವಣರ ಯುದ್ಧವನ್ನು ಚೆನ್ನಾಗಿ ನೋಡಿದ್ದೆ.॥11॥
ಮೂಲಮ್ - 12
ಮಮಾಪಿ ಪರಮಾಪ್ರೀತಿರ್ಹೃದಿ ಶತ್ರುಘ್ನ ವರ್ತತೇ ।
ಉಪಾಘ್ರಾಸ್ಯಾಮಿ ತೇ ಮೂರ್ಧ್ನಿ ಸ್ನೇಹಸ್ಯೈಷಾ ಪರಾ ಗತಿಃ ॥
ಅನುವಾದ
ಶತ್ರುಘ್ನನೇ! ನನ್ನ ಹೃದಯದಲ್ಲಿಯೂ ನಿನ್ನ ಕುರಿತು ಅಪಾರ ಪ್ರೇಮವಿದೆ. ಆದ್ದರಿಂದ ನಾನು ನಿನ್ನ ಮಸ್ತಕವನ್ನು ಆಘ್ರಾಣಿಸುವೆನು. ಇದೇ ಸ್ನೇಹದ ಪರಾಕಾಷ್ಠೇ ಆಗಿದೆ.॥12॥
ಮೂಲಮ್ - 13
ಇತ್ಯುಕ್ತ್ವಾ ಮೂರ್ಧ್ನಿ ಶತ್ರುಘ್ನ ಮುಪಾಘ್ರಾಯ ಮಹಾಮತಿಃ ।
ಆತಿಥ್ಯಮಕರೋತ್ತಸ್ಯ ಯೇ ಚ ತಸ್ಯ ಪದಾನುಗಾಃ ॥
ಅನುವಾದ
ಹೀಗೆ ಹೇಳಿ ಪರಮಬುದ್ಧಿವಂತ ವಾಲ್ಮೀಕಿಗಳು ಶತ್ರುಘ್ನನ ಮಸ್ತಕವನ್ನು ಆಘ್ರಾಣಿಸಿ, ಅವನ ಹಾಗೂ ಅವನ ಸಾರಥಿಗಳನ್ನು ಆತಿಥ್ಯ-ಸತ್ಕಾರ ಮಾಡಿದರು.॥13॥
ಮೂಲಮ್ - 14
ಸ ಭುಕ್ತವಾನ್ನರಶ್ರೇಷ್ಠೋ ಗೀತಮಾಧುರ್ಯಮುತ್ತಮಮ್ ।
ಶುಶ್ರಾವ ರಾಮಚರಿತಂತಸ್ಮಿನ್ಕಾಲೇ ಯಥಾಕ್ರಮಮ್ ॥
ಅನುವಾದ
ನರಶ್ರೇಷ್ಠ ಶತ್ರುಘ್ನನು ಭೋಜನ ಮಾಡಿ, ಆಗ ಶ್ರೀರಾಮಚಂದ್ರನ ಚರಿತ್ರೆಯ ವರ್ಣನೆಯನ್ನು ಕ್ರಮವಾಗಿ ಕೇಳಿದನು. ಆ ಗೀತದ ಮಧುರತೆಯಿಂದಾಗಿ ಬಹಳ ಪ್ರಿಯ ಮತ್ತು ಉತ್ತಮವಾಗಿತ್ತು.॥14॥
ಮೂಲಮ್ - 15
ತಂತ್ರೀಲಯಸಮಾಯುಕ್ತಂ ತ್ರಿಸ್ಥಾನಕರಣಾನ್ವಿತಮ್ ।
ಸಂಸ್ಕೃತಂ ಲಕ್ಷಣೋಪೇತಂ ಸಮತಾಲಸಮನ್ವಿತಮ್ ॥
ಶುಶ್ರಾವ ರಾಮಚರಿತಂ ತಸ್ಮಿನ್ಕಾಲೇ ಪುರಾ ಕೃತಮ್ ।
ಅನುವಾದ
ಆಗ ಕೇಳಿದ ರಾಮಚರಿತವು ಮೊದಲೇ ಕಾವ್ಯಬದ್ಧವಾಗಿ ರಚಿತವಾಗಿತ್ತು. ಆ ಕಾವ್ಯಗಾಯನವು ವೀಣೆಯ ಲಯದೊಂದಿಗೆ ನಡೆಯುತ್ತಿತ್ತು. ಹೃದಯ, ಕಂಠ, ಮೂರ್ಧ್ನಾ ಈ ಮೂರು ಸ್ಥಾನಗಳಲ್ಲಿ ಮಂದ್ರ, ಮಧ್ಯಮ, ತಾರ ಸ್ವರಭೇದದಿಂದ ಹಾಡಲ್ಪಟ್ಟಿತು. ಸಂಸ್ಕೃತ ಭಾಷೆಯಲ್ಲಿ ನಿರ್ಮಿತವಾಗಿ ವ್ಯಾಕರಣ, ಛಂದ, ಕಾವ್ಯ, ಸಂಗೀತ ಶಾಸ್ತ್ರದ ಲಕ್ಷಣಗಳಿಂದ ಕೂಡಿದ್ದು, ತಾಳ ಸಹಿತ ಗಾನ ಮಾಡಲ್ಪಟ್ಟಿತು.॥15॥
ಮೂಲಮ್ - 16
ತಾನ್ಯಕ್ಷರಾಣಿ ಸತ್ಯಾನಿ ಯಥಾವೃತ್ತಾನಿ ಪೂರ್ವಶಃ ॥
ಶ್ರುತ್ವಾ ಪುರುಷಶಾರ್ದೂಲೋ ವಿಸಂಜ್ಞೋ ಬಾಷ್ಪಲೋಚನಃ ।
ಅನುವಾದ
ಆ ಕಾವ್ಯದ ಅಕ್ಷರಗಳೆಲ್ಲ ಹಾಗೂ ವಾಕ್ಯಗಳು ನಿಜಘಟನೆಯನ್ನು ಪ್ರತಿಪಾದಿಸುತ್ತಿತ್ತು. ಮೊದಲು ನಡೆದ ವೃತ್ತಾಂತದ ಪರಿಚಯಕೊಡುತ್ತಿತ್ತು. ಆ ಅದ್ಭುತ ಕಾವ್ಯಗಾನ ಕೇಳಿ ಪುರುಷಸಿಂಹ ಶತ್ರುಘ್ನನು ಪರವಶನಾಗಿ, ಕಂಗಳಿಂದ ಕಂಬನಿ ಹರಿಯತೊಡಗಿತು.॥16॥
ಮೂಲಮ್ - 17
ಸ ಮುಹೂರ್ತಮಿವಾಸಂಜ್ಞೋ ವಿನಿಃಶ್ವಸ್ಯಮುಹುರ್ಮುಹುಃ ॥
ತಸ್ಮಿನ್ಗೀತೇ ಯಥಾವೃತ್ತಂ ವರ್ತಮಾನಮಿವಾಶೃಣೋತ್ ।
ಅನುವಾದ
ಅವನು ಎರಡು ಗಳಿಗೆ ಪರವಶನಾಗಿ ದೀರ್ಘವಾಗಿ ನಿಟ್ಟುಸಿರುಬಿಡುತ್ತಿದ್ದನು. ಆ ಗಾಯನದಲ್ಲಿ ಕಳೆದು ಹೋದ ಘಟನೆಗಳು ವರ್ತ ಮಾನದಲ್ಲಿ ನಡೆದಂತೆ ಅನಿಸುತ್ತಿತ್ತು.॥17॥
ಮೂಲಮ್ - 18
ಪದಾನುಗಾಶ್ಚ ಯೇ ರಾಜ್ಞಸ್ತಾಂಶ್ರುತ್ವಾ ಗೀತಿಸಂಪದಮ್ ॥
ಅವಾಙ್ಮುಖಾಶ್ಚ ದೀನಾಶ್ಚ ಹ್ಯಾಶ್ಚರ್ಯಮಿತಿಚಾಬ್ರುವನ್ ।
ಅನುವಾದ
ರಾಜಾ ಶತ್ರುಘ್ನನ ಸಂಗಡಿಗರೂ ಕೂಡ ಆ ಗೀತಸಂಪತ್ತನ್ನು ಕೇಳಿ, ನತಮಸ್ತರಾಗಿ, ದೀನವಾಣಿಯಲ್ಲಿ ಇದಾದರೋ ಆಶ್ಚರ್ಯದ ಮಾತಾಗಿದೆ ಎಂದು ನುಡಿದರು.॥18॥
ಮೂಲಮ್ - 19
ಪರಸ್ಪರಂ ಚ ಯೇ ತತ್ರ ಸೈನಿಕಾಃ ಸಂಬಭಾಷಿರೇ ॥
ಮೂಲಮ್ - 20
ಕಿಮಿದಂ ಕ್ವ ಚ ವರ್ತಾಮಃ ಕಿಮೇತತ್ಸ್ವ್ವಪ್ನದರ್ಶನಮ್ ।
ಅರ್ಥೋ ಯೋ ನಃ ಪುರಾ ದೃಷ್ಟಸ್ತಮಾಶ್ರಮಪದೇ ಪುನಃ ॥
ಅನುವಾದ
ಅಲ್ಲಿ ನೆರೆದ ಶತ್ರುಘ್ನನ ಸೈನಿಕರು ಪರಸ್ಪರ - ಇದೇನು? ನಾವು ಎಲ್ಲಿದ್ದೇವೆ? ಇದು ಸ್ವಪ್ನವನ್ನು ನೋಡುತ್ತಿಲ್ಲ ತಾನೇ! ಮೊದಲು ನಾವು ನೋಡಿದುದನ್ನೇ ಈ ಆಶ್ರಮದಲ್ಲಿ ಹಾಗೆಯೇ ಕೇಳುತ್ತಿದ್ದೇವೆ ಎಂದು ಆಡಿಕೊಂಡರು.॥19-20॥
ಮೂಲಮ್ - 21
ಶೃಣುಮಃ ಕಿಮಿದಂ ಸ್ವಪ್ನೇ ಗೀತಬಂಧಮನುತ್ತಮಮ್ ।
ವಿಸ್ಮಯಂ ತೇ ಪರಂ ಗತ್ವಾ ಶತ್ರುಘ್ನ ಮಿದಮಬ್ರುವನ್ ॥
ಅನುವಾದ
ಈ ಉತ್ತಮ ಗೀತಬಂಧವನ್ನು ನಾವು ಸ್ವಪ್ನದಲ್ಲಿ ನೋಡುತ್ತಿಲ್ಲವಲ್ಲ ಎಂದು ವಿಸ್ಮಯಗೊಡು ಅವರು ಶತ್ರುಘ್ನನಲ್ಲಿ ಹೇಳಿದರು.॥21॥
ಮೂಲಮ್ - 22
ಸಾಧು ಪೃಚ್ಛ ನರಶ್ರೇಷ್ಠ ವಾಲ್ಮೀಕಿಂ ಮುನಿಪುಂಗವಮ್ ।
ಶತ್ರುಘ್ನಸ್ತ್ವಬ್ರವೀತ್ ಸರ್ವಾನ್ ಕೌತೂಹಲಸಮನ್ವಿತಾನ್ ॥
ಮೂಲಮ್ - 23
ಸೈನಿಕಾನಕ್ಷಮೋಽಸ್ಮಾಕಂ ಪರಿಪ್ರಷ್ಟು ಮಿಹೇದೃಶಃ ।
ಆಶ್ಚರ್ಯಾಣಿ ಬಹೂನೀಹ ಭವಂತ್ಯಸ್ಯಾಶ್ರಮೇ ಮುನೇಃ ॥
ಅನುವಾದ
ನರಶ್ರೇಷ್ಠನೇ! ‘ನೀವು ಈ ವಿಷಯವಾಗಿ ಮುನಿವರ ವಾಲ್ಮೀಕಿಗಳಲ್ಲಿ ಚೆನ್ನಾಗಿ ಕೇಳಿರಿ’. ಶತ್ರುಘ್ನನು ಕುತೂಹಲ ತುಂಬಿದ ಆ ಎಲ್ಲ ಸೈನಿಕರಲ್ಲಿ ಹೇಳಿದನು - ಮುನಿಗಳ ಆಶ್ರಮದಲ್ಲಿ ಇಂತಹ ಅನೇಕ ಆಶ್ಚರ್ಯಕರ ಘಟನೆ ನಡೆಯುತ್ತವೆ. ಈ ವಿಷಯದಲ್ಲಿ ಅವರಲ್ಲಿ ಕೇಳುವುದು ನಮಗೆ ಉಚಿತವಲ್ಲ.॥22-23॥
ಮೂಲಮ್ - 24
ನ ತು ಕೌತೂಹಲಾದ್ಯುಕ್ತಮನ್ವೇಷ್ಟುಂ ತಂ ಮಹಾಮುನಿಮ್ ।
ಏವಂತದ್ವಾಕ್ಯಮುಕ್ತ್ವಾ ತು ಸೈನಿಕಾನ್ ರಘುನಂದನಃ ।
ಅಭಿವಾದ್ಯ ಮಹರ್ಷಿಂ ತಂ ಸ್ವಂ ನಿವೇಶಂ ಯಯೌ ತದಾ ॥
ಅನುವಾದ
‘ಕುತೂಹಲದಿಂದ ಮಹಾಮುನಿ ವಾಲ್ಮೀಕಿಗಳಲ್ಲಿ ಈ ಮಾತುಗಳನ್ನು ತಿಳಿಯು ವುದು ಅಥವಾ ಕೇಳುವುದು ಉಚಿತವಾಗಲಾರದು’ ಹೀಗೆ ತನ್ನ ಸೈನಿಕರಲ್ಲಿ ಹೇಳಿ ಶತ್ರುಘ್ನನು ಮಹರ್ಷಿಗಳಿಗೆ ವಂದಿಸಿ ತಮ್ಮ ಬಿಡಾರಕ್ಕೆ ಹೋದನು.॥24॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಎಪ್ಪತ್ತೊಂದನೆಯ ಸರ್ಗ ಪೂರ್ಣವಾಯಿತು. ॥71॥