०७१ रामायण-श्रवणम्

[ಎಪ್ಪತ್ತನೆಯ ಸರ್ಗ]

ಭಾಗಸೂಚನಾ

ಶತ್ರುಘ್ನನು ದೇವತೆಗಳಿಂದ ವರಗಳನ್ನು ಪಡೆದು, ಮಧುಪುರಿಯಲ್ಲಿ ರಾಜ್ಯವಾಳಿ ಹನ್ನೆರಡು ವರ್ಷಗಳ ಬಳಿಕ ಶ್ರೀರಾಮನ ಬಳಿಗೆ ಹೋಗಲು ಯೋಚಿಸಿದುದು

ಮೂಲಮ್ - 1

ಹತೇ ತು ಲವಣೇ ದೇವಾಃ ಸೇಂದ್ರಾಃ ಸಾಗ್ನಿಪುರೋಗಮಾಃ ।
ಊಚುಃ ಸುಮಧುರಾಂ ವಾಣೀಂ ಶತ್ರುಘ್ನಂಶತ್ರುತಾಪನಮ್ ॥

ಅನುವಾದ

ಲವಣಾಸುರನು ಹತನಾದಾಗ ಇಂದ್ರಾಗ್ನಿ ಮೊದಲಾದ ದೇವತೆಗಳು ಬಂದು ಶತ್ರುತಾಪನನಾದ ಶತ್ರುಘ್ನನಲ್ಲಿ ಸುಮಧರವಾಗಿ ಹೇಳಿದರು.॥1॥

ಮೂಲಮ್ - 2

ದಿಷ್ಟ್ಯಾತೇ ವಿಜಯೋ ವತ್ಸ ದಿಷ್ಟ್ಯಾ ಲವಣರಾಕ್ಷಸಃ ।
ಹತಃ ಪುರುಷಶಾರ್ದೂಲ ವರಂ ವರಯ ಸುವ್ರತ ॥

ಅನುವಾದ

ವತ್ಸ! ಲವಣಾಸುರನ ವಧೆಯಾಗಿ ನಿನಗೆ ವಿಜಯ ಪ್ರಾಪ್ತವಾದುದು ಸೌಭಾಗ್ಯದ ಮಾತಾಗಿದೆ. ಸುವ್ರತನೇ! ನಿನಗೆ ಬೇಕಾದ ವರವನ್ನು ಕೇಳು.॥2॥

ಮೂಲಮ್ - 3

ವರದಾಸ್ತು ಮಹಾಬಾಹೋ ಸರ್ವ ಏವಸಮಾಗತಾಃ ।
ವಿಜಯಾಕಾಂಕ್ಷಿಣಸ್ತುಭ್ಯಮಮೋಘಂ ದರ್ಶನಂಹಿ ನಃ ॥

ಅನುವಾದ

ಮಹಾಬಾಹೋ! ನಾವೆಲ್ಲರೂ ವರಗಳನ್ನು ಕೊಡಲು ಇಲ್ಲಿಗೆ ಬಂದಿರುವೆವು. ನಾವು ನಿನ್ನ ವಿಜಯವನ್ನು ಬಯಸುತ್ತೇವೆ. ನಮ್ಮ ದರ್ಶನ ಅಮೋಘವಾಗಿದೆ. ಆದ್ದರಿಂದ ನೀನು ಯಾವುದಾದರೂ ವರ ಕೇಳು.॥3॥

ಮೂಲಮ್ - 4

ದೇವಾನಾಂ ಭಾಷಿತಂ ಶ್ರುತ್ವಾ ಶೂರೋ ಮೂರ್ಧ್ನಿ ಕೃತಾಂಜಲಿಃ ।
ಪ್ರತ್ಯುವಾಚ ಮಹಾಬಾಹುಃ ಶತ್ರುಘ್ನಃ ಪ್ರಯತಾತ್ಮವಾನ್ ॥

ಅನುವಾದ

ದೇವತೆಗಳ ಮಾತನ್ನು ಕೇಳಿ ವಿನಯಶೀಲನಾದ ಶೂರ ಮಹಾಬಾಹು ಶತ್ರುಘ್ನನು ಶಿರದಲ್ಲಿ ಅಂಜಲಿಬದ್ಧನಾಗಿ ಹೀಗೆ ಹೇಳಿದನು.॥4॥

ಮೂಲಮ್ - 5

ಇಯಂ ಮಧುಪುರೀ ರಮ್ಯಾ ಮಧುರಾದೇವನಿರ್ಮಿತಾ ।
ನಿವೇಶಂ ಪ್ರಾಪ್ನು ಯಾಚ್ಛೀಘ್ರಮೇಷ ಮೇಽಸ್ತು ವರಃ ಪರಃ ॥

ಅನುವಾದ

ದೇವತೆಗಳೇ! ಈ ದೇವನಿರ್ಮಿತ ರಮಣೀಯ ಮಧುಪುರಿಯು ಶೀಘ್ರವಾಗಿ ಮನೋಹರ ರಾಜಧಾನಿಯಾಗಿ ನೆಲೆಗೊಳ್ಳಲಿ. ಇದೇ ನನಗಾಗಿ ಕೊಡುವ ಶ್ರೇಷ್ಠವರವಾಗಿದೆ.॥5॥

ಮೂಲಮ್ - 6

ತಂ ದೇವಾಃ ಪ್ರೀತಮನಸೋ ಬಾಢಮಿತ್ಯೇವ ರಾಘವಮ್ ।
ಭವಿಷ್ಯತಿ ಪುರೀರಮ್ಯಾ ಶೂರಸೇನಾ ನ ಸಂಶಯಃ ॥

ಅನುವಾದ

ಆಗ ದೇವತೆಗಳು ಪ್ರಸನ್ನರಾಗಿ ರಘುಕುಲನಂದನ ಶತ್ರುಘ್ನನಲ್ಲಿ ಹೇಳಿದರು - ‘ಹಾಗೆಯೇ ಆಗುವುದು’. ಈ ರಮಣೀಯ ಪುರಿಯು ನಿಃಸಂದೇಹ ಶೂರ-ವೀರರ ಸೈನ್ಯದಿಂದ ಸಂಪನ್ನವಾಗುವುದು.॥6॥

ಮೂಲಮ್ - 7

ತೇ ತಥೋಕ್ತ್ವಾ ಮಹಾತ್ಮಾನೋದಿವಮಾರುರುಹುಸ್ತದಾ ।
ಶತ್ರುಘ್ನೋಽಪಿ ಮಹಾತೇಜಾಸ್ತಾಂ ಸೇನಾಂ ಸಮುಪಾನಯತ್ ॥

ಅನುವಾದ

ಹೀಗೆ ಹೇಳಿ ಮಹಾತ್ಮಾ ದೇವತೆಗಳು ಸ್ವರ್ಗಕ್ಕೆ ತೆರಳಿದರು. ಮಹಾತೇಜಸ್ವೀ ಶತ್ರುಘ್ನನೂ ಗಂಗಾತಟದಿಂದ ತನ್ನ ಸೈನ್ಯವನ್ನು ಕರೆಸಿಕೊಂಡನು.॥7॥

ಮೂಲಮ್ - 8

ಸಾ ಸೇನಾ ಶೀಘ್ರಮಾಗಚ್ಛಚ್ಛ್ರುತ್ವಾ ಶತ್ರುಘ್ನ ಶಾಸನಮ್ ।
ನಿವೇಶನಂ ಚ ಶತ್ರುಘ್ನಃ ಶ್ರಾವಣೇನ ಸಮಾರಭತ್ ॥

ಅನುವಾದ

ಶತ್ರುಘ್ನನ ಆದೇಶ ಪಡೆದು ಆ ಸೈನ್ಯವು ಶೀಘ್ರವಾಗಿ ಬಂದು ಬಿಟ್ಟಿತು. ಶತ್ರುಘ್ನನು ಶ್ರಾವಣಮಾಸದಿಂದ ಆ ಪುರಿಯನ್ನು ನೆಲೆಗೊಳಿಸಲು ಪ್ರಾರಂಭಿಸಿದನು.॥8॥

ಮೂಲಮ್ - 9

ಸ ಪುರಾ ದಿವ್ಯಸಂಕಾಶೋ ವರ್ಷೇ ದ್ವಾದಶಮೇ ಶುಭೇ ।
ನಿವಿಷ್ಟಃ ಶೂರಸೇನಾನಾಂ ವಿಷಯಶ್ಚಾಕುತೋಭಯಃ ॥

ಅನುವಾದ

ಅಂದಿನಿಂದ ಹನ್ನೆರಡನೆಯ ವರ್ಷದಲ್ಲಿ ಆ ಪುರಿಯು ಮತ್ತು ಶೂರಸೇನ ದೇಶದ ನಿರ್ಮಾಣ ಪೂರ್ಣಗೊಂಡಿತು. ಅಲ್ಲಿ ಯಾರಿಗೂ ಯಾರಿಂದಲೂ ಭಯವಿರಲಿಲ್ಲ. ಆ ದೇಶವು ದಿವ್ಯ ಸುಖಸಮೃದ್ಧಿಯಿಂದ ಸಂಪನ್ನವಾಗಿತ್ತು.॥9॥

ಮೂಲಮ್ - 10

ಕ್ಷೇತ್ರಾಣಿ ಸಸ್ಯಯುಕ್ತಾನಿ ಕಾಲೇ ವರ್ಷತಿ ವಾಸವಃ ।
ಅರೋಗವೀರಪುರುಷಾ ಶತ್ರುಘ್ನಭುಜಪಾಲಿತಾ ॥

ಅನುವಾದ

ಅಲ್ಲಿಯ ಹೊಲಗಳು ಪೈರಿನಿಂದ ತುಂಬಿಹೋದುವು. ಇಂದ್ರನು ಸಮಯಕ್ಕೆ ಸರಿಯಾಗಿ ಮಳೆಗರೆಯತೊಡಗಿದನು. ಶತ್ರುಘ್ನನ ಬಾಹುಬಲದಿಂದ ಸುರಕ್ಷಿತ ಮಧುಪುರಿ ನಿರೋಗಿ ಮತ್ತು ವೀರರಿಂದ ತುಂಬಿ ಹೋಗಿತ್ತು.॥10॥

ಮೂಲಮ್ - 11

ಅರ್ಧಚಂದ್ರಪ್ರತೀಕಾಶಾ ಯಮುನಾತೀರಶೋಭಿತಾ ।
ಶೋಭಿತಾ ಗೃಹಮುಖ್ಯೈಶ್ಚ ಚತ್ವರಾಪಣವೀಥಿಕೈಃ ।
ಚಾತುರ್ವರ್ಣ್ಯಸಮಾಯುಕ್ತಾನಾನಾವಾಣಿಜ್ಯಶೋಭಿತಾ ॥

ಅನುವಾದ

ಆ ಪುರಿಯು ಯಮುನೆಯ ತೀರದಲ್ಲಿ ಅರ್ಧಚಂದ್ರಾಕಾರವಾಗಿ ನೆಲೆಸಿತ್ತು. ಅನೇಕ ಸುಂದರ ಗೃಹಗಳಿಂದ, ಚೌಕಗಳಿಂದ, ಅಂಗಡಿ ಬೀದಿಗಳಿಂದ ಸುಶೋಭಿತ ವಾಗಿತ್ತು. ಅದರಲ್ಲಿ ನಾಲ್ಕು ವರ್ಣದ ಜನರು ವಾಸಿಸುತ್ತಿದ್ದರು. ನಾನಾ ರೀತಿಯ ವಾಣಿಜ್ಯ-ವ್ಯವಸಾಯಗಳು ಅದರ ಶೋಭೆ ಹೆಚ್ಚಿಸಿದ್ದವು.॥11॥

ಮೂಲಮ್ - 12

ಯಚ್ಚ ತೇನ ಪುರಾ ಶುಭ್ರಂ ಲವಣೇನ ಕೃತಂ ಮಹತ್ ।
ತಚ್ಛೋಭಯತಿ ಶತ್ರುಘ್ನೋ ನಾನಾವರ್ಣೋಪಶೋಭಿತಮ್ ॥

ಅನುವಾದ

ಹಿಂದೆ ಲವಣಾ ಸುರನು ನಿರ್ಮಿಸಿದ ವಿಶಾಲ ಗೃಹಗಳನ್ನು ಸ್ವಚ್ಛಗೊಳಿಸಿ ನಾನಾ ಪ್ರಕಾರದ ಚಿತ್ರಗಳಿಂದ ಸುಸಜ್ಜಿತಗೊಳಿಸಿ ಶತ್ರುಘ್ನನು ಅವುಗಳ ಶೋಭೆಯನ್ನು ಹೆಚ್ಚಿಸಿದನು.॥12॥

ಮೂಲಮ್ - 13

ಆರಾಮೈಶ್ಚವಿಹಾರೈಶ್ಚ ಶೋಭಮಾನಾಂ ಸಮಂತತಃ ।
ಶೋಭಿತಾಂ ಶೋಭನೀಯೈಶ್ಚ ತಥಾನ್ಯೈರ್ದೈವಮಾನುಷೈಃ ॥

ಅನುವಾದ

ಅನೇಕ ಉದ್ಯಾನವನಗಳಿಂದ, ವಿಹಾರ ಸ್ಥಳಗಳಿಂದ ಎಲ್ಲೆಡೆ ಆ ಪುರಿಯನ್ನು ಸುಶೋಭಿತಗೊಳಿಸಿದ್ದವು. ದೇವತೆಗಳಿಗೆ, ಮನುಷ್ಯರಿಗೆ ಸಂಬಂಧಿಸಿದ ಅನೇಕವಾದ ಚಿತ್ರಕಲೆಗಳಿಂದ ನಗರದ ಶೋಭೆ ಹೆಚ್ಚಿತ್ತು.॥13॥

ಮೂಲಮ್ - 14

ತಾಂ ಪುರೀಂ ದಿವ್ಯಸಂಕಾಶಾಂ ನಾನಾಪಣ್ಯೋಪಶೋಭಿತಾಮ್ ।
ನಾನಾದೇಶಗತೈಶ್ಚಾಪಿ ವಣಿಗ್ಭಿರುಪಶೋಭಿತಾಮ್ ॥

ಅನುವಾದ

ನಾನಾ ಪ್ರಕಾರದ ಕ್ರಯ-ವಿಕ್ರಯ ಯೋಗ್ಯವಾದ ವಸ್ತುಗಳಿಂದ ಸಂಪನ್ನವಾದ ಆ ದಿವ್ಯಪುರಿಯು ಅನೇಕ ದೇಶಗಳಿಂದ ಬಂದಿರುವ ವರ್ತಕರಿಂದ ಶೋಭಿಸುತ್ತಿತ್ತು.॥14॥

ಮೂಲಮ್ - 15

ತಾಂ ಸಮೃದ್ಧಾಂ ಸಮೃದ್ಧಾರ್ಥಃ ಶತ್ರುಘ್ನೋಭರತಾನುಜಃ ।
ನಿರೀಕ್ಷ್ಯ ಪರಮಪ್ರೀತಃ ಪರಂ ಹರ್ಷಮುಪಾಗಮತ್ ॥

ಅನುವಾದ

ಪೂರ್ಣವಾಗಿ ಸಮೃದ್ಧಶಾಲಿಯಾಗಿರುವ ಅದನ್ನು ನೋಡಿ ಸಲ ಮನೋರಥನಾದ ಭರತಾನುಜ ಶತ್ರುಘ್ನನು ಅತ್ಯಂತ ಸಂತೋಷಗೊಂಡು, ಹರ್ಷವನ್ನು ಅನುಭವಿಸತೊಡಗಿದನು.॥15॥

ಮೂಲಮ್ - 16

ತಸ್ಯ ಬುದ್ಧಿಃ ಸಮುತ್ಪನ್ನಾ ನಿವೇಶ್ಯ ಮಧುರಾಂ ಪುರೀಮ್ ।
ರಾಮಪಾದೌ ನಿರೀಕ್ಷೇಽಹಂ ವರ್ಷೇ ದ್ವಾದಶಆಗತೇ ॥

ಅನುವಾದ

ಮಧುಪುರಿಯಲ್ಲಿ ನೆಲೆಸಲು ಅಯೋಧ್ಯೆಯಿಂದ ಬಂದು ಹನ್ನೆರಡು ವರ್ಷವಾಯಿತು. ಈಗ ನಾನು ಅಲ್ಲಿಗೆ ಹೋಗಿ ಶ್ರೀರಾಮನ ಚರಣಾರವಿಂದಗಳನ್ನು ದರ್ಶಿಸಬೇಕೆಂದು ಮನಸ್ಸಿನಲ್ಲಿ ಯೋಚಿಸಿದನು.॥16॥

ಮೂಲಮ್ - 17

ತತಃ ಸ ತಾಮಮರಪುರೋಪಮಾಂ ಪುರೀಂ
ನಿವೇಶ್ಯ ವೈ ವಿವಿಧಜನಾಭಿಸಂವೃತಾಮ್ ।
ನರಾಧಿಪೋ ರಘುಪತಿಪಾದದರ್ಶನೇ
ದಧೇ ಮತಿಂ ರಘುಕುಲವಂಶವರ್ಧನಃ ॥

ಅನುವಾದ

ಹೀಗೆ ನಾನಾ ರೀತಿಯ ಮನುಷ್ಯರಿಂದ ತುಂಬಿದ, ದೇವ ಪುರಿಯಂತೆ ಮನೋಹರ ಮಧುರಪುರಿಯನ್ನು ನೆಲೆಗೊಳಿಸಿ ರಘುಕುಲವಂಶವರ್ಧನ ರಾಜಾ ಶತ್ರುಘ್ನನು ಶ್ರೀರಘುನಾಥನ ಚರಣಗಳನ್ನು ದರ್ಶಿಸಲು ವಿಚಾರ ಮಾಡಿದ.॥17॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಎಪ್ಪತ್ತನೆಯ ಸರ್ಗ ಪೂರ್ಣವಾಯಿತು. ॥70॥