[ಅರವತ್ತೆಂಟನೆಯ ಸರ್ಗ]
ಭಾಗಸೂಚನಾ
ಲವಣಾಸುರನು ಆಹಾರಕ್ಕಾಗಿ ನಗರದಿಂದ ಹೊರಟುದು, ಶತ್ರುಘ್ನನು ಮಧುಪುರಿಯ ದ್ವಾರದಲ್ಲಿ ಯುದ್ಧಸನ್ನದ್ಧನಾಗಿ ನಿಂತಿರುವುದು, ಲವಣನೊಂದಿಗೆ ರೋಷಪೂರ್ಣ ಮಾತು
ಮೂಲಮ್ - 1
ಕಥಾಂ ಕಥಯತಾಂ ತೇಷಾಂ ಜಯಂ ಚಾಕಾಂಕ್ಷತಾಂಶುಭಮ್ ।
ವ್ಯತೀತಾ ರಜನೀ ಶೀಘ್ರಂ ಶತ್ರುಘ್ನಸ್ಯ ಮಹಾತ್ಮನಃ ॥
ಅನುವಾದ
ಹೀಗೆ ಕಥೆ ಹೇಳುತ್ತಾ, ಶುಭ ವಿಜಯದ ಆಕಾಂಕ್ಷೆ ಮಾಡುತ್ತಿರುವ ಆ ಮುನಿಗಳ ಮಾತನ್ನು ಕೇಳುತ್ತಾ - ಕೇಳುತ್ತಾ ಮಹಾತ್ಮಾ ಶತ್ರುಘ್ನನ ಆ ರಾತ್ರೆ ಕಳೆದು ಹೋಯಿತು.॥1॥
ಮೂಲಮ್ - 2
ತತಃ ಪ್ರಭಾತೇ ವಿಮಲೇ ತಸ್ಮಿನ್ಕಾಲೇ ಸ ರಾಕ್ಷಸಃ ।
ನಿರ್ಗತಸ್ತುಪುರಾದ್ವೀರೋ ಭಕ್ಷ್ಯಾಹಾರಪ್ರಚೋದಿತಃ ॥
ಅನುವಾದ
ಅನಂತರ ನಿರ್ಮಲ ಪ್ರಭಾತವಾದಾಗ ಭಕ್ಷ್ಯ ಪದಾರ್ಥ ಹಾಗೂ ಭೋಜನದ ಸಂಗ್ರಹದ ಇಚ್ಛೆಯಿಂದ ಪ್ರೇರಿತನಾಗಿ ಆ ವೀರ ರಾಕ್ಷಸನು ತನ್ನ ನಗರದಿಂದ ಹೊರಗೆ ಹೊರಟನು.॥2॥
ಮೂಲಮ್ - 3
ಏತಸ್ಮಿನಂತರೇ ವೀರಃ ಶತ್ರುಘ್ನೋ ಯಮುನಾಂ ನದೀಮ್ ।
ತೀರ್ತ್ವಾ ಮಧುಪುರದ್ವಾರಿ ಧನುಷ್ಪಾಣಿರತಿಷ್ಠತ ॥
ಅನುವಾದ
ಅಷ್ಟರಲ್ಲಿ ವೀರ ಶತ್ರುಘ್ನನು ನದಿಯನ್ನು ದಾಟಿ ಧನುರ್ಬಾಣಗಳನ್ನು ಧರಿಸಿ ಮಧುಪುರಿಯ ದ್ವಾರದಲ್ಲಿ ನಿಂತು ಕೊಂಡನು.॥3॥
ಮೂಲಮ್ - 4
ತತೋಽರ್ಧದಿವಸೇ ಪ್ರಾಪ್ತೇ ಕ್ರೂರಕರ್ಮಾ ಸ ರಾಕ್ಷಸಃ ।
ಆಗಚ್ಛದ್ಬಹುಸಾಹಸ್ರಂ ಪ್ರಾಣಿನಾಂ ಭಾರಮುದ್ವಹನ್ ॥
ಅನುವಾದ
ಅನಂತರ ಮಧ್ಯಾಹ್ನವಾದಾಗ ಆ ಕ್ರೂರಕರ್ಮಾ ರಾಕ್ಷಸನು ಸಾವಿರಾರು ಪ್ರಾಣಿಗಳ ಹೊರೆಯನ್ನೆತ್ತಿಕೊಂಡು ಅಲ್ಲಿಗೆ ಬಂದನು.॥4॥
ಮೂಲಮ್ - 5
ತತೋ ದದರ್ಶ ಶತ್ರುಘ್ನಂ ಸ್ಥಿತಂ ದ್ವಾರಿ ಧೃತಾಯುಧಮ್ ।
ತಮುವಾಚ ತತೋ ರಕ್ಷಃ ಕಿಮನೇನ ಕರಿಷ್ಯಸಿ ॥
ಮೂಲಮ್ - 6
ಈದೃಶಾನಾಂ ಸಹಸ್ರಾಣಿ ಸಾಯುಧಾನಾಂ ನರಾಧಮ ।
ಭಕ್ಷಿತಾನಿ ಮಯಾ ರೋಷಾತ್ಕಾಲೇನಾನುಗತೋಹ್ಯಸಿ ॥
ಅನುವಾದ
ಆಗ ಅವನು ಅಸ್ತ್ರ-ಶಸ್ತ್ರಗಳನ್ನು ಧರಿಸಿದ ಶತ್ರುಘ್ನನನ್ನು ನೋಡಿದನು. ನೋಡಿ ರಾಕ್ಷಸನು ಹೇಳಿದನು - ನರಾಧಮ! ಈ ಆಯುಧಗಳಿಂದ ನೀನು ನನಗೇನು ಮಾಡಬಲ್ಲೆ? ನಿನ್ನಂತಹ ಸಾವಿರಾರು ಅಸ್ತ್ರ-ಶಸ್ತ್ರಧಾರೀ ಮನುಷ್ಯರನ್ನು ನಾನು ರೋಷದಿಂದ ತಿಂದುಬಿಟ್ಟಿರುವೆನು. ಕಾಲನು ನಿನ್ನ ತಲೆಯ ಮೇಲೆ ಕುಣಿಯುತ್ತಾ ಇದೆ ಎಂದು ಅನಿಸುತ್ತದೆ.॥5-6॥
ಮೂಲಮ್ - 7
ಆಹಾರಶ್ಚಾಪ್ಯಸಂಪೂರ್ಣೋ ಮಮಾಯಂ ಪುರುಷಾಧಮ ।
ಸ್ವಯಂ ಪ್ರವಿಷ್ಟೋಽದ್ಯ ಮುಖಂ ಕಥಮಾಸಾದ್ಯ ದುರ್ಮತೇ ॥
ಅನುವಾದ
ಪುರುಷಾಧಮನೇ! ಇಂದಿನ ನನ್ನ ಆಹಾರ ಪೂರ್ಣವಾಗಲಿಲ್ಲ. ದುರ್ಮತೇ! ನೀನು ಸ್ವತಃ ನನ್ನ ಬಾಯಿಗೆ ಹೇಗೆ ಬಂದು ಬಿದ್ದೆ.॥7॥
ಮೂಲಮ್ - 8
ತಸ್ಯೈವಂ ಭಾಷಮಾಣಸ್ಯ ಹಸತಶ್ಚ ಮುಹುರ್ಮುಹುಃ ।
ಶತ್ರುಘ್ನೋ ವೀರ್ಯಸಂಪನ್ನೋ ರೋಷಾದಶ್ರೂಣ್ಯವಾಸೃಜತ್ ॥
ಅನುವಾದ
ಆ ರಾಕ್ಷಸ ಹೀಗೆ ಮಾತನಾಡುತ್ತಾ ಪದೇ-ಪದೇ ನಗುತ್ತಿದ್ದನು. ಇದನ್ನು ನೋಡಿ ಪರಾಕ್ರಮಿ ಶತ್ರುಘ್ನನ ಕಣ್ಣುಗಳು ರೋಷಗೊಂಡು ನೀರೂರಿದವು.॥8॥
ಮೂಲಮ್ - 9
ತಸ್ಯ ರೋಷಾಭಿಭೂತಸ್ಯ ಶತ್ರುಘ್ನಸ್ಯ ಮಹಾತ್ಮನಃ ।
ತೇಜೋಮಯಾ ಮರೀಚ್ಯಸ್ತು ಸರ್ವಗಾತ್ರೈರ್ವಿನಿಷ್ಪತನ್ ॥
ಅನುವಾದ
ರೋಷಗೊಂಡ ಮಹಾತ್ಮಾ ಶತ್ರುಘ್ನನ ಸರ್ವಾಂಗದಿಂದ ತೇಜೋಮಯ ಕಿರಣಗಳನ್ನು ಚಿಮ್ಮಿದವು.॥9॥
ಮೂಲಮ್ - 10
ಉವಾಚ ಚ ಸುಸಂಕ್ರುದ್ಧಃ ಶತ್ರುಘ್ನಃ ಸ ನಿಶಾಚರಮ್ ।
ಯೋದ್ಧುಮಿಚ್ಛಾಮಿ ದುರ್ಬುದ್ಧೇ ದ್ವಂದ್ವ ಯುದ್ಧಂ ತ್ವಯಾ ಸಹ ॥
ಅನುವಾದ
ಆಗ ಅತ್ಯಂತ ಕುಪಿತನಾದ ಶತ್ರುಘ್ನನು ಆ ನಿಶಾಚರನಲ್ಲಿ ಹೇಳಿದನು- ದುರ್ಬುದ್ಧೇ! ನಾನು ನಿನ್ನೊಂದಿಗೆ ದ್ವಂದ್ವಯುದ್ಧ ಮಾಡಲು ಬಯಸುತ್ತೇನೆ.॥10॥
ಮೂಲಮ್ - 11
ಪುತ್ರೋ ದಶರಥಸ್ಯಾಹಂ ಭ್ರಾತಾ ರಾಮಸ್ಯಧೀಮತಃ ।
ಶತ್ರುಘ್ನೋ ನಾಮ ಶತ್ರುಘ್ನೋ ವಧಾಕಾಂಕ್ಷೀ ತವಾಗತಃ ॥
ಅನುವಾದ
ನಾನು ಮಹಾರಾಜಾ ದಶರಥನ ಪುತ್ರ ಹಾಗೂ ಪರಮ ಬುದ್ಧಿವಂತ ರಾಜಾ ಶ್ರೀರಾಮನ ತಮ್ಮನಾಗಿದ್ದೇನೆ. ನನ್ನ ಹೆಸರು ಶತ್ರುಘ್ನನೆಂದಿದ್ದು, ಕರ್ಮದಿಂದಲೂ ಶತ್ರುಘ್ನ (ಶತ್ರುಗಳನ್ನು ಸಂಹರಿಸುವ)ನೇ ಆಗಿದ್ದೇನೆ. ಈಗ ನಿನ್ನನ್ನು ವಧಿಸಲು ಇಲ್ಲಿಗೆ ಬಂದಿರುವೆನು.॥11॥
ಮೂಲಮ್ - 12
ತಸ್ಯ ಮೇ ಯುದ್ಧ ಕಾಮಸ್ಯದ್ವಂದ್ವಯುದ್ಧಂ ಪ್ರದೀಯತಾಮ್ ।
ಶತ್ರುಸ್ತ್ವಂ ಸರ್ವಭೂತಾನಾಂ ನ ಮೇ ಜೀವನ್ಗಮಿಷ್ಯಸಿ ॥
ಅನುವಾದ
ನಾನು ಯುದ್ಧ ಮಾಡಲು ಬಯಸುತ್ತೇನೆ, ಅದಕ್ಕಾಗಿ ನೀನು ನನಗೆ ದ್ವಂದ್ವಯುದ್ಧದ ಅವಕಾಶಕೊಡು. ನೀನು ಸಮಸ್ತ ಪ್ರಾಣಿಗಳ ಶತ್ರು ಆಗಿರುವೆ; ಅದಕ್ಕಾಗಿ ಈಗ ನನ್ನ ಕೈಯಿಂದ ಬದುಕಿಹೋಗಲಾರೆ.॥12॥
ಮೂಲಮ್ - 13
ತಸ್ಮಿಂಸ್ತಥಾ ಬ್ರುವಾಣೇ ತು ರಾಕ್ಷಸಃ ಪ್ರಹಸನ್ನಿವ ।
ಪ್ರತ್ಯುವಾಚ ನರಶ್ರೇಷ್ಠಂ ದಿಷ್ಟ್ಯಾ ಪ್ರಾಪ್ತೋಽಸಿ ದುರ್ಮತೇ ॥
ಅನುವಾದ
ಅವನು ಹೀಗೆ ಹೇಳಿದಾಗ ಆ ರಾಕ್ಷಸನು ನರಶ್ರೇಷ್ಠ ಶತ್ರುಘ್ನನಲ್ಲಿ ನಗುತ್ತಾ ಹೇಳಿದನು - ದುರ್ಮತೇ! ಇಂದು ನೀನು ಸ್ವತಃ ನನಗೆ ದೊರಕಿದುದು ಸೌಭಾಗ್ಯದ ಮಾತಾಗಿದೆ.॥13॥
ಮೂಲಮ್ - 14
ಮಮ ಮಾತೃಷ್ವಸುರ್ಭ್ರಾತಾ ರಾವಣೋ ನಾಮ ರಾಕ್ಷಸಃ ।
ಹತೋ ರಾಮೇಣ ದುರ್ಬುದ್ಧೇ ಸ್ತ್ರೀಹೇತೋಃ ಪುರುಷಾಧಮ ॥
ಅನುವಾದ
ನೀಚ ಬುದ್ಧಿಯುಳ್ಳ ನರಾಧಮ! ರಾವಣನೆಂಬ ರಾಕ್ಷಸನು ನನ್ನ ಚಿಕ್ಕಮ್ಮ ಶೂರ್ಪಣಖಿಯ ಅಣ್ಣನಾಗಿದ್ದನು. ಅವನನ್ನು ನಿನ್ನ ಅಣ್ಣ ಒಂದು ಸ್ತ್ರೀಗಾಗಿ ಸಂಹಾರ ಮಾಡಿದನು.॥14॥
ಮೂಲಮ್ - 15
ತಚ್ಛ ಸರ್ವಂ ಮಯಾ ಕ್ಷಾಂತಂ ರಾವಣಸ್ಯ ಕುಲಕ್ಷಯಮ್ ।
ಅವಜ್ಞಾಂ ಪುರತಃ ಕೃತ್ವಾ ಮಯಾ ಯೂಯಂವಿಶೇಷತಃ ॥
ಅನುವಾದ
ಇಷ್ಟೇ ಅಲ್ಲ, ಅವನು ರಾವಣನ ಕುಲವನ್ನು ಸಂಹರಿಸಿದರೂ, ನಾನು ಅದೆಲ್ಲವನ್ನು ಸಹಿಸಿದೆ. ನಿಮ್ಮಿಂದಾಗಿದ ಅವಹೇಳನವನ್ನು ಎದುರಿಗಿಟ್ಟು-ಪ್ರತ್ಯಕ್ಷ ನೋಡಿಯೂ ನಿಮ್ಮನ್ನು ವಿಶೇಷವಾಗಿ ಕ್ಷಮಿಸಿದೆ.॥15॥
ಮೂಲಮ್ - 16
ನಿಹತಾಶ್ಚ ಹಿ ತೇ ಸರ್ವೇ ಪರಿಭೂತಾಸ್ತೃಣಂ ಯಥಾ ।
ಭೂತಾಶ್ಚೈವ ಭವಿಷ್ಯಾಶ್ಚ ಯೂಯಂ ಚ ಪುರುಷಾಧಮಾಃ ॥
ಅನುವಾದ
ಭೂತಳದಲ್ಲಿ ನನ್ನನ್ನು ಎದುರಿಸಲು ಬಂದ ನರಾಧಮರೆಲ್ಲರನ್ನು ನಾನು ಹುಲ್ಲುಕಡ್ಡಿಯಂತೆ ತಿಳಿದು ತಿರಸ್ಕರಿಸಿ ಕೊಂದು ಹಾಕಿರುವೆ. ಭವಿಷ್ಯದಲ್ಲಿ ಬರುವವರಿಗೂ ಇದೇ ಸ್ಥಿತಿಯಾಗುವುದು ಹಾಗೂ ವರ್ತಮಾನ ಕಾಲದಲ್ಲಿ ನಿನ್ನಂತಹ ನರಾಧಮನೂ ನನ್ನ ಕೈಯಿಂದ ಸತ್ತನೆಂದೇ ತಿಳಿ.॥16॥
ಮೂಲಮ್ - 17
ತಸ್ಯ ತೇ ಯುದ್ಧ ಕಾಮಸ್ಯ ಯುದ್ಧಂ ದಾಸ್ಯಾಮಿ ದುರ್ಮತೇ ।
ತಿಷ್ಠ ತ್ವಂ ಚ ಮುಹೂರ್ತಂ ತು ಯಾವದಾಯುಧಮಾನಯೇ ॥
ಅನುವಾದ
ದುರ್ಮತೇ! ನಿನಗೆ ಯುದ್ಧದ ಇಚ್ಛೆ ಇದೆಯಲ್ಲ? ನಾನು ಈಗಲೇ ನಿನಗೆ ಯುದ್ಧದ ಅವಕಾಶ ಕೊಡುವೆನು. ನೀನು ಎರಡು ಗಳಿಗೆ ಸೈರಿಸು. ಅಷ್ಟರೊಳಗೆ ನಾನು ನನ್ನ ಅಸ್ತ್ರ ತೆಗೆದುಕೊಂಡು ಬರುವೆ.॥17॥
ಮೂಲಮ್ - 18
ಈಪ್ಸಿತಂ ಯಾದೃಶಂ ತುಭ್ಯಂ ಸಜ್ಜಯೇಯಾವದಾಯುಧಮ್ ।
ತಮುವಾಚಾಶು ಶತ್ರುಘ್ನಃ ಕ್ವ ಮೇ ಜೀವನ್ಗಮಿಷ್ಯಸಿ ॥
ಅನುವಾದ
ನಿನ್ನ ವಧೆಗಾಗಿ ಎಂತಹ ಅಸ್ತ್ರ ಇರಬೇಕೋ ಅಂತಹ ಅಸ್ತ್ರವನ್ನು ಮೊದಲೇ ಸುಸಜ್ಜಿತಗೊಳಿಸಿಕೊಳ್ಳುವೆನು. ಮತ್ತೆ ಯುದ್ಧದ ಅವಕಾಶ ಕೊಡುವೆನು. ಇದನ್ನು ಕೇಳಿ ಶತ್ರುಘ್ನನು ಕೂಡಲೇ ಹೇಳಿದನು - ಈಗ ನೀನು ನನ್ನ ಕೈಯಿಂದ ಬದುಕಿ ಎಲ್ಲಿಗೆ ಹೋಗುವೆ.॥18॥
ಮೂಲಮ್ - 19
ಸ್ವಯಮೇವಾಗತಃ ಶತ್ರುರ್ನ ಮೋಕ್ತವ್ಯಃ ಕೃತಾತ್ಮನಾ ॥
ಯೋ ಹಿ ವಿಕ್ಲವಯಾ ಬುದ್ಧ್ಯಾ ಪ್ರಸರಂ ಶತ್ರವೇ ದಿಶೇತ್ ।
ಸ ಹತೋ ಮಂದಬುದ್ಧಿಃ ಸ್ಯಾದ್ಯಥಾ ಕಾಪುರುಷಸ್ತಥಾ ॥
ಅನುವಾದ
ಯಾರೇ ಬುದ್ಧಿವಂತ ಪುರುಷನು ತನ್ನ ಎದುರಿಗೆ ಬಂದ ಶತ್ರುವನ್ನು ಬಿಡಬಾರದು. ಗಾಬರಿಗೊಂಡ ಬುದ್ಧಿಯಿಂದ ಶತ್ರುವನ್ನು ಹೋಗಲು ಬಿಟ್ಟರೆ ಅವನು ಮಂದಬುದ್ಧಿ ಹೇಡಿಯಂತೆ ಸತ್ತುಹೋಗುವನು.॥19॥
ಮೂಲಮ್ - 20
ತಸ್ಮಾತ್ಸುದೃಷ್ಟಂ ಕುರು ಜೀವಲೋಕಂ
ಶರೈಃ ಶಿತೈಸ್ತ್ವಾಂ ವಿವಿಧೈರ್ನಯಾಮಿ ।
ಯಮಸ್ಯ ಗೇಹಾಭಿಮುಖಂ ಹಿ ಪಾಪಂ
ರಿಪುಂ ತ್ರಿಲೋಕಸ್ಯ ಚ ರಾಘವಸ್ಯ ॥
ಅನುವಾದ
ಆದ್ದರಿಂದ ರಾಕ್ಷಸನೇ ! ಈಗ ನೀನು ಈ ಜೀವ ಜಗತ್ತನ್ನು ಚೆನ್ನಾಗಿ ನೋಡಿಕೋ. ನಾನಾ ಪ್ರಕಾರದ ಹರಿತ ಬಾಣಗಳಿಂದ ಪಾಪಿಯಾದ ನಿನ್ನನ್ನು ಈಗಲೇ ಯಮಸದನಕ್ಕೆ ಕಳಿಸುವೆನು; ಏಕೆಂದರೆ ನೀನು ಮೂರುಲೋಕಗಳ ಹಾಗೂ ಶ್ರೀರಘು ನಾಥನ ಶತ್ರು ಆಗಿರುವೆ.॥20॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಅರವತ್ತೆಂಟನೆಯ ಸರ್ಗ ಪೂರ್ಣವಾಯಿತು. ॥68॥