[ಅರವತ್ತೇಳನೆಯ ಸರ್ಗ]
ಭಾಗಸೂಚನಾ
ಚ್ಯವನರು ಶತ್ರುಘ್ನನಿಗೆ ಲವಣಾಸುರನ ಶೂಲದ ಪ್ರಭಾವವನ್ನು ವಿವರಿಸಿ, ಮಾಂಧಾತನ ವಧೆಯ ಪ್ರಸಂಗವನ್ನು ತಿಳಿಸಿದುದು
ಮೂಲಮ್ - 1
ಅಥ ರಾತ್ರ್ಯಾಂ ಪ್ರವೃತ್ತಾಯಾಂ ಶತ್ರುಘ್ನೋ ಭೃಗುನಂದನಮ್ ।
ಪಪ್ರಚ್ಛ ಚ್ಯವನಂ ವಿಪ್ರಂ ಲವಣಸ್ಯ ಯಥಾಬಲಮ್ ॥
ಮೂಲಮ್ - 2
ಶೂಲಸ್ಯ ಚ ಬಲಂ ಬ್ರಹ್ಮನ್ಕೇ ಚ ಪೂರ್ವಂ ವಿನಾಶಿತಾಃ ।
ಅನೇನ ಶೂಲಮುಖ್ಯೇನ ದ್ವಂದ್ವಯುದ್ಧಮುಪಾಗತಾಃ ॥
ಅನುವಾದ
ಹೀಗಿರಲು ಒಂದು ದಿನ ರಾತ್ರೆ ಶತ್ರುಘ್ನನು ಭೃಗುನಂದನ ಚ್ಯವನರಲ್ಲಿ ಕೇಳಿದನು - ಬ್ರಹ್ಮನ್! ಲವಣಾಸುರನಲ್ಲಿ ಎಷ್ಟು ಬಲವಿದೆ? ಅವನ ಶೂಲದ ಶಕ್ತಿ ಎಷ್ಟು? ಆ ಉತ್ತಮ ಶೂಲದಿಂದ ಅವನು ಯುದ್ಧದಲ್ಲಿ ಯಾರು ಯಾರನ್ನು ವಧಿಸಿರುವನು.॥1-2॥
ಮೂಲಮ್ - 3
ತಸ್ಯ ತದ್ವಚನಂ ಶ್ರುತ್ವಾ ಶತ್ರುಘ್ನಸ್ಯ ಮಹಾತ್ಮನಃ ।
ಪ್ರತ್ಯುವಾಚ ಮಹಾತೇಜಾಶ್ಚ್ಯವನೋ ರಘುನಂದನಮ್ ॥
ಅನುವಾದ
ಮಹಾತ್ಮಾ ಶತ್ರುಘ್ನನ ಮಾತನ್ನು ಕೇಳಿ ಮಹಾತೇಜಸ್ವೀ ಚ್ಯವನರು ಆ ರಘುಕುಲನಂದನ ರಾಜಕುಮಾರನಲ್ಲಿ ಹೇಳಿದರು.॥3॥
ಮೂಲಮ್ - 4
ಅಸಂಖ್ಯೇಯಾನಿ ಕರ್ಮಾಣಿ ಯಾನ್ಯಸ್ಯ ರಘುನಂದನ ।
ಇಕ್ಷ್ವಾಕುವಂಶಪ್ರಭವೇ ಯದ್ ವೃತ್ತಂ ತಚ್ಛಣುಶ್ವ ಮೇ ॥
ಅನುವಾದ
ರಘುನಂದನ! ಈ ಲವಣಾಸುರನ ಕರ್ಮ ಅಸಂಖ್ಯವಾಗಿವೆ. ಅದಲ್ಲಿ ಒಂದು ಇಕ್ಷ್ವಾಕುವಂಶೀ ರಾಜಾ ಮಾಂಧಾತನ ಮೇಲೆ ಘಟಿಸಿದ ಕರ್ಮವನ್ನು ವರ್ಣಿಸುವೆನು ಕೇಳು.॥4॥
ಮೂಲಮ್ - 5
ಅಯೋಧ್ಯಾಯಾಂ ಪುರಾ ರಾಜಾ ಯುನಾಶ್ವಸುತೋಬಲೀ ।
ಮಾಂಧಾತಾ ಇತಿ ವಿಖ್ಯಾತಸ್ತ್ರಿಷು ಲೋಕೇಷು ವೀರ್ಯವಾನ್ ॥
ಅನುವಾದ
ಹಿಂದೆ ಅಯೋಧ್ಯಾಪುರಿಯಲ್ಲಿ ಯುವನಾಶ್ವನ ಪುತ್ರ ರಾಜಾ ಮಾಂಧಾತನು ರಾಜ್ಯವಾಳುತ್ತಿದ್ದನು. ಅವನು ಭಾರೀ ಬಲವಂತನೂ, ಪರಾಕ್ರಮಿಯೂ ಆಗಿದ್ದು, ಮೂರು ಲೋಕಗಳಲ್ಲಿ ವಿಖ್ಯಾತನಾಗಿದ್ದನು.॥5॥
ಮೂಲಮ್ - 6
ಸ ಕೃತ್ವಾ ಪೃಥಿವೀಂ ಕೃತ್ಸ್ನಾಂ ಶಾಸನೇ ಪೃಥಿವೀಪತಿಃ ।
ಸುರಲೋಕಮಿತೋಜೇತುಮುದ್ಯೋಗಮಕರೋನ್ನೃಪಃ ॥
ಅನುವಾದ
ಆ ಪೃಥಿವೀಪತಿ ರಾಜನು ಇಡೀ ಪೃಥಿವಿಯನ್ನು ಗೆದ್ದು, ದೇವಲೋಕದ ಮೇಲೆ ವಿಜಯ ಪಡೆಯಲು ಉದ್ಯೋಗ ಪ್ರಾರಂಭಿಸಿದನು.॥6॥
ಮೂಲಮ್ - 7
ಇಂದ್ರಸ್ಯ ಚ ಭಯಂ ತೀವ್ರಂ ಸುರಾಣಾಂ ಚ ಮಹಾತ್ಮನಾಮ್ ।
ಮಾಂಧಾತರಿ ಕೃತೋದ್ಯೋಗೇ ದೇವಲೋಕಜಿಗೀಷಯಾ ॥
ಅನುವಾದ
ರಾಜಾಮಾಧಾಂತನು ದೇವಲೋಕದ ಮೇಲೆ ವಿಜಯ ಪಡೆಯಲು ಉದ್ಯೋಗ ಪ್ರಾರಂಭಿಸಿದಾಗ ಇಂದ್ರ ಹಾಗೂ ಮಹಾತ್ಮಾ ದೇವತೆಗಳಿಗೆ ಭಾರೀ ಭಯ ಉಂಟಾಯಿತು.॥7॥
ಮೂಲಮ್ - 8
ಅರ್ಧಾಸನೇನ ಶಕ್ರಸ್ಯ ರಾಜ್ಯಾರ್ಧೇನ ಪಾರ್ಥಿವಃ ।
ವಂದ್ಯಮಾನಃ ಸುರಗಣೈಃ ಪ್ರತಿಜ್ಞಾಮಧ್ಯರೋಹತ ॥
ಅನುವಾದ
ನಾನು ಇಂದ್ರನ ಅರ್ಧಾಸನ ಮತ್ತು ಅವನ ಅರ್ಧರಾಜ್ಯ ಪಡೆದು ಭೂಮಂಡಲದ ರಾಜನಾಗಿ, ದೇವತೆಗಳಿಂದ ವಂದಿತನಾಗಿ ಇರುವೆನು, ಎಂಬ ಪ್ರತಿಜ್ಞೆ ಮಾಡಿ ಅವನು ಸ್ವರ್ಗಕ್ಕೆ ದಾಳಿಯಿಟ್ಟನು.॥8॥
ಮೂಲಮ್ - 9
ತಸ್ಯ ಪಾಪಮಭಿಪ್ರಾಯಂ ವಿದಿತ್ವಾ ಪಾಕಶಾಸನಃ ।
ಸಾಂತ್ವ್ವಪೂರ್ವಮಿದಂ ವಾಕ್ಯಮುವಾಚ ಯುವನಾಶ್ವಜಮ್ ॥
ಅನುವಾದ
ಅವನ ಈ ದುರಭಿಪ್ರಾಯವನ್ನು ತಿಳಿದು ಪಾಕಶಾಸನ ಇಂದ್ರನು ಆ ಯುವನಾಶ್ವ ಪುತ್ರ ಮಾಂಧಾತನ ಬಳಿಗೆ ಹೋಗಿ, ಅವನನ್ನು ಶಾಂತವಾಗಿ ಸಮಜಾಯಿಸುತ್ತಾ ಹೇಳಿದನು.॥9॥
ಮೂಲಮ್ - 10
ರಾಜಾ ತ್ವಂ ಮಾನುಷೇ ಲೋಕೇನ ತಾವತ್ಪುರುಷರ್ಷಭ ।
ಅಕೃತ್ವಾ ಪೃಥಿವೀಂ ವಶ್ಯಾಂ ದೇವರಾಜ್ಯಮಿಹೇಚ್ಛಸಿ ॥
ಅನುವಾದ
ಪುರುಷಪ್ರವರ! ಈಗ ನೀನು ಇಡೀ ಮರ್ತ್ಯಲೋಕಕ್ಕೆ ರಾಜನಾಗಲಿಲ್ಲ. ಸಮಗ್ರ ಪೃಥಿವಿಯನ್ನು ವಶಪಡಿಸದೆಯೇ ದೇವತೆಗಳ ರಾಜ್ಯವನ್ನು ಹೇಗೆ ಪಡೆಯಲು ಬಯಸುವೆ.॥10॥
ಮೂಲಮ್ - 11
ಯದಿ ವೀರ ಸಮಗ್ರಾ ತೇ ಮೇದಿನೀ ನಿಖಿಲಾ ವಶೇ ।
ದೇವರಾಜ್ಯಂ ಕುರುಷ್ವೇಹ ಸಭೃತ್ಯಬಲವಾಹನಃ ॥
ಅನುವಾದ
ವೀರನೇ! ಇಡೀ ಪೃಥಿವೀ ನಿನ್ನ ವಶವಾದರೆ ನೀನು ಸೇವಕ, ಸೈನ್ಯ, ವಾಹನಗಳ ಸಹಿತ ಇಲ್ಲೇ ದೇವಲೋಕದ ರಾಜ್ಯವಾಳು.॥11॥
ಮೂಲಮ್ - 12
ಇಂದ್ರಮೇವಂ ಬ್ರುವಾಣಂ ತಂ ಮಾಂಧಾತಾ ವಾಕ್ಯಮಬ್ರವೀತ್ ।
ಕ್ವ ಮೇ ಶಕ್ರ ಪ್ರತಿಹತಂ ಶಾಸನಂ ಪೃಥಿವೀತಲೇ ॥
ಅನುವಾದ
ಹೀಗೆ ಹೇಳಿದಾಗ ಇಂದ್ರನಲ್ಲಿ ಮಾಂಧಾತನು ಕೇಳಿದನು- ದೇವರಾಜ! ಈ ಪೃಥಿವಿಯಲ್ಲಿ ಎಲ್ಲಿ ನನ್ನ ಆದೇಶದ ಅವಹೇಳನೆ ನಡೆಯುತ್ತದೆ ತಿಳಿಸು.॥12॥
ಮೂಲಮ್ - 13
ತಮುವಾಚ ಸಹಸ್ರಾಕ್ಷೋ ಲವಣೋ ನಾಮ ರಾಕ್ಷಸಃ ।
ಮಧುಪುತ್ರೋ ಮಧುವನೇ ನ ತೇಽಽಜ್ಞಾಂ ಕುರುತೇಽನಘ ॥
ಅನುವಾದ
ಆಗ ಇಂದ್ರನು ಹೇಳಿದನು - ನಿಷ್ಪಾಪ ನರೇಶನೇ! ಮಧುವನದಲ್ಲಿ ಮಧುವಿನ ಪುತ್ರ ಲವಣಾಸುರ ಇರುತ್ತಾನೆ. ಅವನು ನಿನ್ನ ಆಜ್ಞೆಯನ್ನು ಮನ್ನಿಸುವುದಿಲ್ಲ.॥13॥
ಮೂಲಮ್ - 14
ತಚ್ಛ್ರುತ್ವಾ ವಿಪ್ರಿಯಂ ಘೋರಂ ಸಹಸ್ರಾಕ್ಷೇಣ ಭಾಷಿತಮ್ ।
ವ್ರೀಡಿತೋಽವಾಙ್ಮುಖೋ ರಾಜಾ ವ್ಯಾಹರ್ತುಂ ನ ಶಶಾಕ ಹ ॥
ಅನುವಾದ
ಇಂದ್ರನು ಹೇಳಿದ ಈ ಘೋರ, ಅಪ್ರಿಯ ಮಾತನ್ನು ಕೇಳಿ ನಾಚಿಕೆಯಿಂದ ರಾಜಾ ಮಾಂಧಾತನ ಮುಖ ತಗ್ಗಿತು. ಅವನು ಏನ್ನು ಮಾತನಾಡದಾದನು.॥14॥
ಮೂಲಮ್ - 15
ಆಮಂತ್ಯ್ರ ತು ಸಹಸ್ರಾಕ್ಷಂ ಪ್ರಾಯಾತ್ಕಿಂಚಿದವಾಙ್ಮುಖಃ ।
ಪುನರೇವಾಗಮಚ್ಛ್ರೀಮಾನಿಮಂ ಲೋಕಂ ನರೇಶ್ವರಃ ॥
ಅನುವಾದ
ಆ ನರೇಶನು ಇಂದ್ರನಿಂದ ಬೀಳ್ಕೊಂಡು ತಲೆ ತಗ್ಗಿಸಿ ಅಲ್ಲಿಂದ ಹೊರಟು ಹೋದನು ಹಾಗು ಪುನಃ ಈ ಮರ್ತ್ಯಲೋಕಕ್ಕೆ ಬಂದನು.॥15॥
ಮೂಲಮ್ - 16
ಸ ಕೃತ್ವಾ ಹೃದಯೇಽಮರ್ಷಂ ಸಭೃತ್ಯಬಲವಾಹನಃ ।
ಆಜಗಾಮ ಮಧೋಃ ಪುತ್ರಂ ವಶೇ ಕರ್ತುಮರಿಂದಮಃ ॥
ಅನುವಾದ
ಅವನು ತನ್ನ ಹೃದಯದಲ್ಲಿ ಕ್ರೋಧ ತುಂಬಿಕೊಂಡು, ಆ ಶತ್ರುದಮನ ಮಾಂಧಾತಾ ಮಧುಪುತ್ರನನ್ನು ವಶಪಡಿಸಿಕೊಳ್ಳಲು ಸೇವಕ, ಸೈನ್ಯ, ವಾಹನಗಳೊಂದಿಗೆ ಅವನ ರಾಜಧಾನಿಯ ಸಮೀಪಕ್ಕೆ ಬಂದನು.॥16॥
ಮೂಲಮ್ - 17
ಸ ಕಾಂಕ್ಷಮಾಣೋ ಲವಣಂ ಯುದ್ಧಾಯ ಪುರುಷರ್ಷಭಃ ।
ದೂತಂ ಸಂಪ್ರೇಷಯಾಮಾಸ ಸಕಾಶಂ ಲವಣಸ್ಯ ಸಃ ॥
ಅನುವಾದ
ಪುರುಷಪ್ರವರ ಶತ್ರುಘ್ನನು ಯುದ್ಧದ ಇಚ್ಛೆಯಿಂದ ಲವಣಾಸುರನ ಬಳಿಗೆ ತನ್ನ ದೂತನನ್ನು ಕಳಿಸಿದನು.॥17॥
ಮೂಲಮ್ - 18
ಸ ಗತ್ವಾ ವಿಪ್ರಿಯಾಣ್ಯಾಹ ಬಹೂನಿ ಮಧುನಃ ಸುತಮ್ ।
ವದಂತಮೇವಂ ತಂ ದೂತಂಭಕ್ಷಯಾಮಾಸ ರಾಕ್ಷಸಃ ॥
ಅನುವಾದ
ದೂತನು ಅಲ್ಲಿಗೆ ಹೋಗಿ ಮಧುಪುತ್ರನಿಗೆ ಅನೇಕ ಕಟುವಚನಗಳನ್ನು ಹೇಳಿದನು. ಹೀಗೆ ಕಠೋರ ಮಾತುಗಳನ್ನಾಡುವ ಆ ದೂತನನ್ನು ರಾಕ್ಷಸನು ಕೂಡಲೇ ತಿಂದುಹಾಕಿದನು.॥18॥
ಮೂಲಮ್ - 19
ಚಿರಾಯಮಾಣೇ ದೂತೇ ತು ರಾಜಾ ಕ್ರೋಧಸಮನ್ವಿತಃ ।
ಅರ್ದಯಾಮಾಸ ತದ್ರಕ್ಷಃ ಶರವೃಷ್ಟ್ಯಾ ಸಮಂತತಃ ॥
ಅನುವಾದ
ದೂತನು ಮರಳಲು ತಡವಾದಾಗ ರಾಜನು ಬಹಳ ಕ್ರುದ್ಧನಾಗಿ ಬಾಣಗಳ ಮಳೆಸುರಿದು ಆ ರಾಕ್ಷಸನನ್ನು ಪೀಡಿಸತೊಡಗಿದನು.॥19॥
ಮೂಲಮ್ - 20
ತತಃ ಪ್ರಹಸ್ಯ ತದ್ರಕ್ಷಃ ಶೂಲಂ ಜಗ್ರಾಹ ಪಾಣಿನಾ ।
ವಧಾಯ ಸಾನುಬಂಧಸ್ಯ ಮುಮೋಚಾಯುಧಮುತ್ತಮಮ್ ॥
ಅನುವಾದ
ಆಗ ಲವಣಾಸುರನು ನಗುತ್ತಾ ಕೈಯಲ್ಲಿ ಆ ಶೂಲವನ್ನೆತ್ತಿಕೊಂಡು, ಸೇವಕರ ಸಹಿತ ರಾಜಾ ಮಾಂಧಾತನನ್ನು ಮಧಿಸಲು ಉತ್ತಮ ಅಸ್ತ್ರಗಳನ್ನು ಅವನ ಮೇಲೆ ಪ್ರಯೋಗಿಸಿದನು.॥20॥
ಮೂಲಮ್ - 21
ತಚ್ಛೂಲಂ ದೀಪ್ಯಮಾನಂತು ಸಭೃತ್ಯಬಲವಾಹನಮ್ ।
ಭಸ್ಮೀಕೃತ್ವಾ ನೃಪಂ ಭೂಯೋ ಲವಣಸ್ಯಾಗಮತ್ಕರಮ್ ॥
ಅನುವಾದ
ಆ ಹೊಳೆಯುವ ಶೂಲವು ಸೇವಕ, ಸೈನ್ಯ, ವಾಹನಗಳ ಸಹಿತ ರಾಜಾ ಮಾಂಧಾತನನ್ನು ಭಸ್ಮ ಮಾಡಿ ಮತ್ತೆ ಲವಣಾಸುರನ ಕೈಗೆ ಬಂತು.॥21॥
ಮೂಲಮ್ - 22
ಏವಂ ಸ ರಾಜಾ ಸುಮಹಾನ್ಹತಃ ಸಬಲವಾಹನಃ ।
ಶೂಲಸ್ಯ ತು ಬಲಂ ಸೌಮ್ಯ ಅಪ್ರಮೇಯಮನುತ್ತಮಮ್ ॥
ಅನುವಾದ
ಹೀಗೆ ಎಲ್ಲ ಸೈನ್ಯ ಮತ್ತು ವಾಹನ ಗಳೊಂದಿಗೆ ಮಹಾರಾಜಾ ಮಾಂಧಾತನು ಹತನಾದನು. ಸೌಮ್ಯ ಈ ಶೂಲದ ಶಕ್ತಿ ಅಸೀಮವಾಗಿದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿದೆ.॥22॥
ಮೂಲಮ್ - 23
ಶ್ವಃ ಪ್ರಭಾತೇತು ಲವಣಂ ವಧಿಷ್ಯಸಿ ನ ಸಂಶಯಃ ।
ಅಗೃಹೀತಾಯುಧಂ ಕ್ಷಿಪ್ರಂ ಧ್ರುವೋ ಹಿ ವಿಜಯಸ್ತವ ॥
ಅನುವಾದ
ರಾಜನೇ! ನಾಳೆ ಬೆಳಿಗ್ಗೆ ಆ ರಾಕ್ಷಸನು ಆ ಅಸ್ತ್ರವನ್ನು ಕೈಗೆತ್ತಿಕೊಳ್ಳುವುದರೊಳಗೆ ಶೀಘ್ರವಾಗಿ ನೀನು ನಿಃಸಂದೇಹವಾಗಿ ಅವನ ವಧೆ ಮಾಡಬಲ್ಲೆ ಮತ್ತು ಹೀಗೆ ನಿಶ್ಚಯವಾಗಿ ನಿನ್ನ ವಿಜಯವಾಗುವುದು.॥23॥
ಮೂಲಮ್ - 24
ಲೋಕಾನಾಂ ಸ್ವಸ್ತಿ ಚೈವಂ ಸ್ಯಾತ್ಕೃತೇ ಕರ್ಮಣಿ ಚ ತ್ವಯಾ ।
ಏತತ್ತೇ ಸರ್ವಮಾಖ್ಯಾತಂ ಲವಣಸ್ಯ ದುರಾತ್ಮನಃ ॥
ಮೂಲಮ್ - 25
ಶೂಲಸ್ಯ ಚ ಬಲಂ ಘೋರಮಪ್ರಮೇಯಂ ನರರ್ಷಭ ।
ವಿನಾಶಶ್ಚೈವ ಮಾಂಧಾತುರ್ಯತ್ನೇನಾಭೂಚ್ಚ ಪಾರ್ಥಿವ ॥
ಅನುವಾದ
ನಿನ್ನಿಂದ ಈಕಾರ್ಯ ನೆರವೇರಿದಾಗ ಸಮಸ್ತ ಲೋಕಗಳ ಶ್ರೇಯಸ್ಸು ಆಗುವುದು. ಹೀಗೆ ನಾನು ದುರಾತ್ಮಾ ಲವಣಾಸುರನ ಬಲವನ್ನು ತಿಳಿಸಿದೆ ಹಾಗೂ ಅವನ ಶೂಲದ ಘೋರ, ಅಸೀಮ ಶಕ್ತಿಯ ಪರಿಚಯವನ್ನು ಮಾಡಿಸಿದೆ. ಪೃಥಿವಿನಾಥ! ಇಂದ್ರನ ಪ್ರಯತ್ನದಿಂದ ಅದೇ ಶೂಲದ ಮೂಲಕ ಮಾಂಧಾತನ ವಿನಾಶವಾಯಿತು.॥24-25॥
ಮೂಲಮ್ - 26
ತ್ವಂ ಶ್ವಃ ಪ್ರಭಾತೇ ಲವಣಂ ಮಹಾತ್ಮನ್
ವಧಿಷ್ಯಸೇ ನಾತ್ರ ತು ಸಂಶಯೋ ಮೇ ।
ಶೂಲಂ ವಿನಾ ನಿರ್ಗತಮಾಮಿಷಾರ್ಥೇ
ಧ್ರುವೋ ಜಯಸ್ತೇಭವಿತಾ ನರೇಂದ್ರ ॥
ಅನುವಾದ
ಮಹಾತ್ಮನೇ! ನಾಳೆ ಬೆಳಿಗ್ಗೆ ಅವನು ಶೂಲವಿಲ್ಲದೇ ಮಾಂಸ ಸಂಗ್ರಹಕ್ಕಾಗಿ ಹೊರಗೆ ಹೊರಟಾಗಲೇ ನೀನು ಅವನನ್ನು ವಧಿಸಿ ಬಿಡುವೆ, ಇದರಲ್ಲಿ ಸಂಶಯವೇ ಇಲ್ಲ. ನರೇಂದ್ರನೇ! ಖಂಡಿತವಾಗಿ ನಿನ್ನ ವಿಜಯವಾಗುವುದು.॥26॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಅರವತ್ತೇಳನೆಯ ಸರ್ಗ ಪೂರ್ಣವಾಯಿತು. ॥67॥