०६७ मान्धातृ-नाश-कथा

[ಅರವತ್ತಾರನೆಯ ಸರ್ಗ]

ಭಾಗಸೂಚನಾ

ಸೀತಾದೇವಿಯು ಅವಳಿ ಮಕ್ಕಳಿಗೆ ಜನ್ಮವಿತ್ತುದು, ವಾಲ್ಮೀಕಿಗಳಿಂದ ಮಕ್ಕಳ ಮತ್ತು ಸೀತಾದೇವಿಯ ರಕ್ಷಣಾವ್ಯವಸ್ಥೆ, ಮಕ್ಕಳು ಹುಟ್ಟಿದ ಸಮಾಚಾರವನ್ನು ಕೇಳಿ ಶತ್ರುಘ್ನನ ಸಂತೋಷ, ಅಲ್ಲಿಂದ ಹೊರಟು ಯಮುನಾ ತೀರಕ್ಕೆ ಹೋದುದು

ಮೂಲಮ್ - 1

ಯಾಮೇವ ರಾತ್ರಿಂ ಶತ್ರುಘ್ನಃ ಪರ್ಣಶಾಲಾಮುಪಾವಿಶತ್ ।
ತಾಮೇವ ರಾತ್ರಿಂ ಸೀತಾಪಿ ಪ್ರಸೂತಾ ದಾರಕದ್ವಯಮ್ ॥

ಅನುವಾದ

ಯಾವ ರಾತ್ರಿಯಲ್ಲಿ ಶತ್ರುಘ್ನನು ಪರ್ಣಶಾಲೆಯನ್ನು ಪ್ರವೇಶಿಸಿದನೋ, ಅದೇ ರಾತ್ರೆ ಸೀತಾದೇವಿಯು ಇಬ್ಬರು ಗಂಡು ಮಕ್ಕಳಿಗೆ ಜನ್ಮವನ್ನಿತ್ತಳು.॥1॥

ಮೂಲಮ್ - 2

ತತೋಽರ್ಧರಾತ್ರಸಮಯೇ ಬಾಲಕಾ ಮುನಿದಾರಕಾಃ ।
ವಾಲ್ಮೀಕೇಃ ಪ್ರಿಯಮಾಚಖ್ಯುಃ ಸೀತಾಯಾಃ ಪ್ರಸವಂ ಶುಭಮ್ ॥

ಅನುವಾದ

ಅನಂತರ ಅರ್ಧ ರಾತ್ರಿಯ ಸಮಯದಲ್ಲಿ ಮುನಿಕುಮಾರರು ಬಂದು ವಾಲ್ಮೀಕಿಗಳಿಗೆ ಸೀತೆಯು ಇಬ್ಬರು ಗಂಡು ಮಕ್ಕಳನ್ನು ಪ್ರಸವಿಸಿದಳು ಎಂಬ ಶುಭವಾದ, ಪ್ರಿಯಸಮಾಚಾರವನ್ನು ತಿಳಿಸಿದರು.॥2॥

ಮೂಲಮ್ - 3

ಭಗವನ್ ರಾಮಪತ್ನೀ ಸಾ ಪ್ರಸೂತಾ ದಾರಕದ್ವಯಮ್ ।
ತತೋ ರಕ್ಷಾಂ ಮಹಾತೇಜಃ ಕುರು ಭೂತವಿನಾಶಿನೀಮ್ ॥

ಅನುವಾದ

ಪೂಜ್ಯರೇ! ಶ್ರೀರಾಮಚಂದ್ರನ ಧರ್ಮಪತ್ನಿಯು ಇಬ್ಬರು ಪುತ್ರರಿಗೆ ಜನ್ಮ ನೀಡಿರುವಳು. ಆದ್ದರಿಂದ ಮಹಾತೇಜಸ್ವೀ ಮಹರ್ಷಿಗಳೇ! ನೀವು ಅವುಗಳ ಬಾಲಗ್ರಹಜನಿತ ಬಾಧೆ ದೂರಗೊಳಿಸುವ ರಕ್ಷೆಯನ್ನು ಮಾಡಿರಿ.॥3॥

ಮೂಲಮ್ - 4

ತೇಷಾಂ ತದ್ವಚನಂ ಶ್ರುತ್ವಾ ಮಹರ್ಷಿಃ ಸಮುಪಾಗಮತ್ ।
ಬಾಲಚಂದ್ರಪ್ರತೀಕಾಶೌ ದೇವಪುತ್ರೌ ಮಹೌಜಸೌ ॥

ಅನುವಾದ

ಆ ಮುನಿಕುಮಾರರ ಮಾತನ್ನು ಕೇಳಿ ಮಹರ್ಷಿಗಳು ಸೀತೆಯ ಇಬ್ಬರು ಬಾಲಚಂದ್ರರಂತೆ ಸುಂದರ, ದೇವಕುಮಾರರಂತೆ ಮಹಾತೇಜಸ್ವೀ ಬಾಲಕರ ಬಳಿಗೆ ಹೋದರು.॥4॥

ಮೂಲಮ್ - 5

ಜಗಾಮ ತತ್ರ ಹೃಷ್ಟಾತ್ಮಾ ದದರ್ಶ ಚ ಕುಮಾರಕೌ ।
ಭೂತಘ್ನೀಂ ಚಾಕರೋತ್ತಾಭ್ಯಾಂ ರಕ್ಷಾಂ ರಕ್ಷೋವಿನಾಶಿನೀಮ್ ॥

ಅನುವಾದ

ವಾಲ್ಮೀಕಿಗಳು ಪ್ರಸನ್ನಚಿತ್ತರಾಗಿ ಸೂತಿಕಾಗಾರವನ್ನು ಪ್ರವೇಶಿಸಿ, ಆ ಇಬ್ಬರು ಕುಮಾರರನ್ನು ನೋಡಿದರು ಹಾಗೂ ಅವರಿಗೆ ಭೂತ-ರಾಕ್ಷಸರ ರಕ್ಷೆಯ ವ್ಯವಸ್ಥೆ ಮಾಡಿದರು.॥5॥

ಮೂಲಮ್ - 6

ಕುಶಮುಷ್ಟಿ ಮುಪಾದಾಯಲವಂ ಚೈವ ತು ಸ ದ್ವಿಜಃ ।
ವಾಲ್ಮೀಕಿಃ ಪ್ರದದೌ ತಾಭ್ಯಾಂ ರಕ್ಷಾಂ ಭೂತವಿನಾಶಿನೀಮ್ ॥

ಅನುವಾದ

ಬ್ರಹ್ಮರ್ಷಿಗಳು ವಾಲ್ಮೀಕಿಗಳು ಒಂದು ಮುಷ್ಟಿದರ್ಭೆಗಳ (ಮಧ್ಯಕ್ಕೆ ಸರಿಯಾಗಿ ಕತ್ತರಿಸಿದ ದರ್ಭೆಗಳ ಅಗ್ರಭಾಗವನ್ನು ‘ಕುಶ’ವೆಂದೂ, ಕೆಳಗಿನ ಭಾಗವನ್ನು ‘ಲವ’ವೆಂದು ಹೇಳುತ್ತಾರೆ.) ಲವದಿಂದ ಇಬ್ಬರೂ ಬಾಲಕರಿಗೆ ಭೂತಬಾಧೆ ನಿವಾರಣೆಗಾಗಿ ರಕ್ಷಾವಿಧಾನವನ್ನು ಮಾಡಿದರು.॥6॥

ಮೂಲಮ್ - 7

ಯಸ್ತಯೋಃ ಪೂರ್ವಜೋ ಜಾತಃ ಸ ಕುಶೈರ್ಮಂತ್ರ ಸತ್ಕೃತೈಃ ।
ನಿರ್ಮಾರ್ಜನೀಯಸ್ತು ತದಾ ಕುಶ ಇತ್ಯಸ್ಯ ನಾಮ ತತ್ ॥

ಮೂಲಮ್ - 8

ಯಶ್ಚಾವರೋ ಭವೇತ್ತಾಭ್ಯಾಂ ಲವೇನ ಸುಸಮಾಹಿತಃ ।
ನಿರ್ಮಾರ್ಜನೀಯೋ ವೃದ್ಧಾಭಿರ್ಲವೇತಿ ಚ ಸ ನಾಮತಃ ॥

ಅನುವಾದ

ಇಬ್ಬರು ಬಾಲಕರಲ್ಲಿ ಮೊದಲು ಹುಟ್ಟಿದವನನ್ನು ಮಂತ್ರಗಳಿಂದ ಸಂಸ್ಕರಿಸಿದ ಆ ಕುಶಗಳಿಂದ ವೃದ್ಧ ಸ್ತ್ರೀಯರು ಮಾರ್ಜನ ಮಾಡಿದರು. ಹೀಗೆ ಮಾಡಿದಾಗ ಆ ಬಾಲಕನ ಹೆಸರು ‘ಕುಶ’ ಎಂದಾಗುವುದು. ಅವರಲ್ಲಿ ಕಿರಿಯವನನ್ನು ಮಾರ್ಜನ ಮಾಡಿರಿ. ಇದರಿಂದ ಅವನ ಹೆಸರು ‘ಲವ’ ಎಂದಾಗುವುದು.॥7-8॥

ಮೂಲಮ್ - 9

ಏವಂ ಕುಶಲವೌ ನಾಮ್ನಾ ತಾವುಭೌ ಯಮಜಾತಕೌ ।
ಮತ್ಕೃತಾಭ್ಯಾಂ ಚ ನಾಮಭ್ಯಾಂ ಖ್ಯಾತಿಯುಕ್ತೌ ಭವಿಷ್ಯತಃ ॥

ಅನುವಾದ

ಹೀಗೆ ಅವಳಿಯಾಗಿ ಉತ್ಪನ್ನರಾದ ಇಬ್ಬರೂ ಬಾಲಕರು ಕ್ರಮವಾಗಿ ಕುಶ ಮತ್ತು ಲವ ಎಂಬ ನಾಮಧೇಯ ಧರಿಸುವರು ಹಾಗೂ ನಾನೂ ನಿಶ್ಚಯಿಸಿದ ಇದೇ ಹೆಸರುಗಳಿಂದ ಭೂಮಂಡಲದಲ್ಲಿ ವಿಖ್ಯಾತರಾಗುವರು.॥9॥

ಮೂಲಮ್ - 10

ತಾಂ ರಕ್ಷಾಂ ಜಗೃಹುಸ್ತಾಂ ಚ ಮುನಿಹಸ್ತಾತ್ಸಮಾಹಿತಾಃ ।
ಅಕುರ್ವಂಶ್ಚ ತತೋ ರಕ್ಷಾಂ ತಯೋರ್ವಿಗತಕಲ್ಮಷಾಃ ॥

ಅನುವಾದ

ಇದನ್ನು ಕೇಳಿ ನಿಷ್ಪಾಪ ವೃದ್ಧ ಸ್ತ್ರೀಯರು ಏಕಾಗ್ರಚಿತ್ತರಾಗಿ ಮುನಿಯ ಕೈಯಿಂದ ರಕ್ಷೆಯ ಸಾಧನೀಭೂತ ದರ್ಭೆಗಳನ್ನು ಪಡೆದು, ಅವುಗಳಿಂದ ಆ ಇಬ್ಬರೂ ಬಾಲಕರಿಗೆ ಮಾರ್ಜನ ಮಾಡಿ ರಕ್ಷೆಮಾಡಿದರು.॥10॥

ಮೂಲಮ್ - 11

ತಥಾ ತಾಂ ಕ್ರಿಯಮಾಣಾಂ ಚ ವೃದ್ಧಾಭಿರ್ಗೋತ್ರನಾಮ ಚ ।
ಸಂಕೀರ್ತನಂ ಚ ರಾಮಸ್ಯ ಸೀತಾಯಾಃ ಪ್ರಸವೌ ಶುಭೌ ॥

ಮೂಲಮ್ - 12

ಅರ್ಧರಾತ್ರೇ ತು ಶತ್ರುಘ್ನಃ ಶುಶ್ರಾವಸುಮಹತ್ಪ್ರಿಯಮ್ ।
ಪರ್ಣಶಾಲಾಂ ತತೋ ಗತ್ವಾ ಮಾತರ್ದಿಷ್ಟ್ಯೇತಿ ಚಾಬ್ರವೀತ್ ॥

ಅನುವಾದ

ವೃದ್ಧಸ್ತ್ರೀಯರು ಹೀಗೆ ರಕ್ಷೆ ಮಾಡತೊಡಗಿದಾಗ ಅರ್ಧರಾತ್ರೆ ಶ್ರೀರಾಮ ಮತ್ತು ಸೀತೆಯ ನಾಮಗೋತ್ರವನ್ನುಚ್ಚರಿಸಿದ ಧ್ವನಿ ಶತ್ರುಘ್ನನ ಕಿವಿಗೆ ಬಿತ್ತು. ಜೊತೆಗೆ ಸೀತೆಯ ಇಬ್ಬರು ಸುಂದರು ಹುಟ್ಟಿದ ಸುಂದರ ಸಂವಾದವೂ ಕೇಳಿ ಬಂತು. ಆಗ ಅವನು ಸೀತೆಯ ಪರ್ಣಶಾಲೆಗೆ ಹೋಗಿ-ಮಾತಾಜೀ ! ಇದು ಬಹಳ ದೊಡ್ಡ ಸೌಭಾಗ್ಯದ ಮಾತಾಗಿದೆ ಎಂದು ಹೇಳಿದನು.॥11-12॥

ಮೂಲಮ್ - 13

ತದಾ ತಸ್ಯ ಪ್ರಹೃಷ್ಟಸ್ಯ ಶತ್ರುಘ್ನಸ್ಯ ಮಹಾತ್ಮನಃ ।
ವ್ಯತೀತಾ ವಾರ್ಷಿಕೀ ರಾತ್ರಿಃ ಶ್ರಾವಣೀ ಲಘುವಿಕ್ರಮಾ ॥

ಅನುವಾದ

ಮಹಾತ್ಮಾ ಶತ್ರುಘ್ನನು ಅತ್ಯಂತ ಪ್ರಹೃಷ್ಟನಾಗಿ ಶ್ರಾವಣದ ಆ ರಾತ್ರಿಯು ಮಾತನಾಡುತ್ತಿದ್ದಂತೆ ಕಳೆದು ಹೋದುದೇ ತಿಳಿಯಲಿಲ್ಲ.॥13॥

ಮೂಲಮ್ - 14

ಪ್ರಭಾತೇ ಸುಮಹಾವೀರ್ಯಃ ಕೃತ್ವಾ ಪೌರ್ವಾಹ್ಣಿಕೀಂ ಕ್ರಿಯಾಮ್ ।
ಮುನಿಂ ಪ್ರಾಂಜಲಿರಾಮಂತ್ಯ್ರ ಯಯೌ ಪಶ್ಚಾನ್ಮುಖಃ ಪುನಃ ॥

ಅನುವಾದ

ಬೆಳಗಾದಾಗ ಪೂರ್ವಾಹ್ಣದ ಸಂಧ್ಯಾವಂದನಾದಿಗಳನ್ನು ಪೂರೈಸಿ ಮಹಾಪರಾಕ್ರಮಿ ಶತ್ರುಘ್ನನು ಕೈಮುಗಿದು ಮುನಿಯಿಂದ ಬೀಳ್ಕೊಂಡು ಪಶ್ಚಿಮದಿಕ್ಕಿಗೆ ಪ್ರಯಾಣಿಸಿದನು.॥14॥

ಮೂಲಮ್ - 15

ಸ ಗತ್ವಾ ಯಮುನಾತೀರಂ ಸಪ್ತರಾತ್ರೋಷಿತಃ ಪಥಿ ।
ಋಷೀಣಾಂ ಪುಣ್ಯಕೀರ್ತೀನಾಮಾಶ್ರಮೇ ವಾಸಮಭ್ಯಯಾತ್ ॥

ಅನುವಾದ

ಮಾರ್ಗದಲ್ಲಿ ಏಳು ರಾತ್ರಿಗಳನ್ನು ಕಳೆದು ಅವನು ಯಮುನಾ ತೀರಕ್ಕೆ ತಲುಪಿದನು. ಅಲ್ಲಿ ಪುಣ್ಯಕೀರ್ತಿ ಮಹರ್ಷಿಗಳ ಆಶ್ರಮದಲ್ಲಿ ಇರತೊಡಗಿದನು.॥15॥

ಮೂಲಮ್ - 16

ಸ ತತ್ರ ಮುನಿಭಿಃ ಸಾರ್ಧಂ ಭಾಗರ್ವಪ್ರಮುಖೈರ್ನೃಪಃ ।
ಕಥಾಭಿರಭಿರೂಪಾಭಿರ್ವಾಸಂ ಚಕ್ರೇ ಮಹಾಯಶಾಃ ॥

ಅನುವಾದ

ಮಹಾಯಶಸ್ವೀ ರಾಜಾಶತ್ರುಘ್ನನು ಅಲ್ಲಿ ಚ್ಯವನರೇ ಆದಿ ಮುನಿಗಳ ಜೊತೆಗೆ ಸುಂದರ ಕಥಾ-ವಾರ್ತಾಲಾಪ ದಿಂದ ಕಾಲಕ್ಷೇಪ ಮಾಡುತ್ತಾ ವಾಸಿಸಿದನು.॥16॥

ಮೂಲಮ್ - 17

ಸ ಕಾಂಚನಾದ್ಯೈರ್ಮುನಿಭಿಃ ಸಮೇತೈ
ರಘುಪ್ರವೀರೋ ರಜನೀಂ ತದಾನೀಮ್ ।
ಕಥಾಪ್ರಕಾರೈರ್ಬಹುಭಿರ್ಮಹಾತ್ಮಾ
ವಿರಾಮಯಾಮಾಸ ನರೇಂದ್ರಸೂನುಃ ॥

ಅನುವಾದ

ಹೀಗೆ ರಘುಕುಲದ ಪ್ರಮುಖವೀರ ಮಹಾತ್ಮಾ ರಾಜಕುಮಾರ ಶತ್ರುಘ್ನನು ಅಲ್ಲಿ ನೆರೆದ ಚ್ಯವನಾದಿ ಮುನಿಗಳೊಂದಿಗೆ ನಾನಾ ಪ್ರಕಾರದ ಕಥೆಗಳನ್ನು ಕೇಳುತ್ತಾ ಆ ದಿನಗಳಲ್ಲಿ ಯಮುನಾ ತೀರದಲ್ಲಿ ರಾತ್ರೆಗಳನ್ನು ಕಳೆಯತೊಡಗಿದನು.॥17॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಅರವತ್ತಾರನೆಯ ಸರ್ಗ ಪೂರ್ಣವಾಯಿತು. ॥66॥