०६६ लव-कुश-प्रसूतिः यमुना-प्राप्तिः

[ಅರವತ್ತೈದನೆಯ ಸರ್ಗ]

ಭಾಗಸೂಚನಾ

ಮಹರ್ಷಿ ವಾಲ್ಮೀಕಿಗಳು ಶತ್ರುಘ್ನನಿಗೆ ಕಲ್ಮಾಷಪಾದನ ಕಥೆ ಹೇಳಿದುದು

ಮೂಲಮ್ - 1

ಪ್ರಸ್ಥಾಪ್ಯ ಚ ಬಲಂ ಸರ್ವಂ ಮಾಸಮಾತ್ರೋಷಿತಃ ಪಥಿ ।
ಏಕ ಏವಾತು ಶತ್ರುಘ್ನೋ ಜಗಾಮ ತ್ವರಿತಂ ತದಾ ॥

ಅನುವಾದ

ತನ್ನ ಸೈನ್ಯವನ್ನು ಮುಂದೆ ಕಳಿಸಿ, ಅಯೋಧ್ಯೆಯಲ್ಲಿ ಒಂದು ತಿಂಗಳು ಇದ್ದು, ಶತ್ರುಘ್ನನು ಒಬ್ಬಂಟಿಗನಾಗಿ ಅಯೋಧ್ಯೆಯಿಂದ ಮಧುವನದ ದಾರಿಯಲ್ಲಿ ವೇಗವಾಗಿ ಹೋಗತೊಡಗಿದನು.॥1॥

ಮೂಲಮ್ - 2

ದ್ವಿರಾತ್ರಮಂತರೇ ಶೂರ ಉಷ್ಯ ರಾಘವನಂದನಃ ।
ವಾಲ್ಮೀಕೇರಾಶ್ರಮಂ ಪುಣ್ಯಮಗಚ್ಛದ್ವಾಸಮುತ್ತಮಮ್ ॥

ಅನುವಾದ

ರಘುಕುಲನಂದನ ಶೂರ ವೀರ ಶತ್ರುಘ್ನನು ದಾರಿಯಲ್ಲಿ ಎರಡು ರಾತ್ರೆ ಕಳೆದು, ಮೂರನೆಯ ದಿನ ಮಹರ್ಷಿ ವಾಲ್ಮೀಕಿಗಳ ಪವಿತ್ರ ಆಶ್ರಮಕ್ಕೆ ತಲುಪಿದನು. ಅದು ಎಲ್ಲಕ್ಕಿಂತ ಉತ್ತಮ ವಾಸಸ್ಥಾನವಾಗಿತ್ತು.॥2॥

ಮೂಲಮ್ - 3

ಸೋಽಭಿವಾದ್ಯ ಮಹಾತ್ಮಾನಂ ವಾಲ್ಮೀಕಿಂ ಮುನಿಸತ್ತಮಮ್ ।
ಕೃತಾಂಜಲಿರಥೋ ಭೂತ್ವಾ ವಾಕ್ಯಮೇತದುವಾಚ ಹ ॥

ಅನುವಾದ

ಅಲ್ಲಿ ಅವನು ಕೈಮುಗಿದು ಮುನಿಶ್ರೇಷ್ಠ ಮಹಾತ್ಮರಾದ ವಾಲ್ಮೀಕಿಗಳಿಗೆ ವಂದಿಸಿ, ಇಂತೆಂದನು.॥3॥

ಮೂಲಮ್ - 4

ಭಗವನ್ವಸ್ತುಮಿಚ್ಛಾಮಿ ಗುರೋಃ ಕೃತ್ಯಾದಿಹಾಗತಃ ।
ಶ್ವಃ ಪ್ರಭಾತೇ ಗಮಿಷ್ಯಾಮಿ ಪ್ರತೀಚೀಂ ವಾರುಣೀಂ ದಿಶಮ್ ॥

ಅನುವಾದ

ಪೂಜ್ಯರೇ! ನಾನು ಅಣ್ಣನಾದ ಶ್ರೀರಘುನಾಥನ ಕಾರ್ಯದಿಂದ ಇತ್ತ ಬಂದಿರುವೆನು. ಇಂದಿನ ಇರುಳನ್ನು ಇಲ್ಲಿ ಕಳೆಯಲು ನಿಶ್ಚಯಿಸಿದ್ದೇನೆ. ನಾಳೆ ಬೆಳಿಗ್ಗೆ ವರುಣನ ಪಶ್ಚಿಮದಿಕ್ಕಿಗೆ ಹೊರಟು ಹೋಗುವೆನು.॥4॥

ಮೂಲಮ್ - 5

ಶತ್ರುಘ್ನಸ್ಯ ವಚಃ ಶ್ರುತ್ವಾ ಪ್ರಹಸ್ಯ ಮುನಿಪುಂಗವಃ ।
ಪ್ರತ್ಯುವಾಚ ಮಹಾತ್ಮಾನಂ ಸ್ವಾಗತಂ ತೇಮಹಾಯಶಃ ॥

ಅನುವಾದ

ಶತ್ರುಘ್ನನ ಮಾತನ್ನು ಕೇಳಿ ಮುನಿವರ್ಯ ವಾಲ್ಮೀಕಿಗಳು ಆ ಮಹಾತ್ಮನಿಗೆ ನಗುತ್ತಾ ಉತ್ತರಿಸಿದರು-ಮಹಾಯಶಸ್ವೀ ವೀರನೇ! ನಿನಗೆ ಸ್ವಾಗತವಿದೆ.॥5॥

ಮೂಲಮ್ - 6

ಸ್ವಮಾಶ್ರಮಮಿದಂ ಸೌಮ್ಯ ರಾಘವಾಣಾಂ ಕುಲಸ್ಯ ವೈ ।
ಆಸನಂ ಪಾದ್ಯಮರ್ಘ್ಯಂ ಚ ನಿರ್ವಿಶಂಕಃ ಪ್ರತೀಚ್ಛ ಮೇ ॥

ಅನುವಾದ

ಸೌಮ್ಯ! ಈ ಆಶ್ರಮವು ರಘುವಂಶೀಯರಿಗೆ ತಮ್ಮ ಮನೆಯೇ ಆಗಿದೆ. ನೀನು ನಿಃಶಂಕನಾಗಿ ನಾನು ನೀಡುವ ಆಸನ, ಪಾದ್ಯ, ಅರ್ಘ್ಯ ಸ್ವೀಕರಿಸು.॥6॥

ಮೂಲಮ್ - 7

ಪ್ರತಿಗೃಹ್ಯ ತದಾ ಪೂಜಾಂ ಲಮೂಲಂ ಚ ಭೋಜನಮ್ ।
ಭಕ್ಷಯಾಮಾಸ ಕಾಕುತ್ಸ್ಥಸ್ತೃಪ್ತಿಂ ಚ ಪರಮಾಂ ಗತಃ ॥

ಅನುವಾದ

ಆಗ ಆ ಸತ್ಕಾರವನ್ನು ಸ್ವೀಕರಿಸಿ ಶತ್ರುಘ್ನನು ಫಲ-ಮೂಲಗಳನ್ನು ಸೇವಿಸಿ, ಬಹಳ ತೃಪ್ತಿಪಟ್ಟನು.॥7॥

ಮೂಲಮ್ - 8

ಸ ಭುಕ್ತ್ವಾ ಫಲಮೂಲಂ ಚ ಮಹರ್ಷಿಂ ತಮುವಾಚ ಹ ।
ಪೂರ್ವಾ ಯಜ್ಞವಿಭೂತೀಯಂ ಕಸ್ಯಾಶ್ರಮಸಮೀಪತಃ ॥

ಅನುವಾದ

ಫಲ-ಮೂಲಗಳನ್ನು ಭುಂಜಿಸಿ ಅವನು ಮಹರ್ಷಿಗಳಲ್ಲಿ ಹೇಳಿದನು-ಮುನಿಯೇ ! ಈ ಆಶ್ರಮದ ಹತ್ತಿರ ಕಂಡು ಬರುವ ಪ್ರಾಚೀನ ಯಜ್ಞ ಯೂಪಾದಿಗಳು ಯಾರದ್ದು? ಯಾವ ಯಜಮಾನ ರಾಜನು ಇಲ್ಲಿ ಯಜ್ಞ ಮಾಡಿದ್ದನು.॥8॥

ಮೂಲಮ್ - 9

ತತ್ತಸ್ಯ ಭಾಷಿತಂ ಶ್ರುತ್ವಾ ವಾಲ್ಮೀಕಿರ್ವಾಕ್ಯಮಬ್ರವೀತ್ ।
ಶತ್ರುಘ್ನ ಶೃಣು ಯಸ್ಯೇದಂ ಬಭೂವಾಯತನಂ ಪುರಾ ॥

ಅನುವಾದ

ಅವನ ಪ್ರಶ್ನೆಯನ್ನು ಕೇಳಿ ವಾಲ್ಮೀಕಿಗಳು ಹೇಳಿದರು - ಶತ್ರುಘ್ನನೇ! ಹಿಂದೆ ಯಾವ ಯಜಮಾನ ನರೇಶನ ಈ ಯಜ್ಞಮಂಟಪವಿತ್ತೋ, ಅದನ್ನು ತಿಳಿಸುವೆನು, ಕೇಳು.॥9॥

ಮೂಲಮ್ - 10

ಯುಷ್ಮಾಕಂ ಪೂರ್ವಕೋ ರಾಜಾ ಸುದಾಸಸ್ತಸ್ಯ ಭೂಪತೇಃ ।
ಪುತ್ರೋ ವೀರಸಹೋ ನಾಮ ವೀರ್ಯವಾನತಿಧಾರ್ಮಿಕಃ ॥

ಅನುವಾದ

ನಿಮ್ಮ ಪೂರ್ವಜನಾದ ಸುದಾಸರಾಜನು ಈ ಭೂಮಂಡಲಕ್ಕೆ ಒಡೆಯನಾಗಿದ್ದನು. ಆ ಭೂಪಾಲನಿಗೆ ವೀರಸಹ (ಮಿತ್ರಸಹ) ಎಂಬ ಪುತ್ರ ಹುಟ್ಟಿದನು. ಅವನು ದೊಡ್ಡ ಪರಾಕ್ರಮಿ ಮತ್ತು ಅತ್ಯಂತ ಧಾರ್ಮಿಕನಾಗಿದ್ದನು.॥10॥

ಮೂಲಮ್ - 11

ಸ ಬಾಲ ಏವ ಸೌದಾಸೋ ಮೃಗಯಾಮುಪಚಕ್ರಮೇ ।
ಚಂಚೂರ್ಯಮಾಣಂ ದದೃಶೇ ಸ ಶೂರೋ ರಾಕ್ಷಸದ್ವಯಮ್ ॥

ಅನುವಾದ

ಸುದಾಸನ ಶೂರಪುತ್ರನು ಬಾಲ್ಯದಲ್ಲೇ ಒಂದು ದಿನ ಬೇಟೆಗಾಗಿ ಕಾಡಿಗೆ ಹೋಗಿದ್ದನು. ಅಲ್ಲಿ ಅವನು ವಿಚರಿಸುತ್ತಿರುವ ಇಬ್ಬರು ರಾಕ್ಷಸರನ್ನು ನೋಡಿದನು.॥11॥

ಮೂಲಮ್ - 12

ಶಾರ್ದೂಲರೂಪಿಣೌ ಘೋರೌ ಮೃಗಾನ್ ಬಹುಸಹಸ್ರಶಃ ।
ಭಕ್ಷಮಾಣಾವಸಂತುಷ್ಟೌ ಪರ್ಯಾಪ್ತಿಂ ನೈವ ಜಗ್ಮತುಃ ॥

ಅನುವಾದ

ಆ ಇಬ್ಬರೂ ಘೋರ ರಾಕ್ಷಸರು ಹುಲಿಯ ರೂಪವನ್ನು ಧರಿಸಿ ಸಾವಿರಾರು ಮೃಗಗಳನ್ನು ಕೊಂದು ತಿಂದುಬಿಟ್ಟರು. ಆದರೂ ಹೊಟ್ಟೆ ತುಂಬದೆ ಸಂತುಷ್ಟರಾಗಲಿಲ್ಲ.॥12॥

ಮೂಲಮ್ - 13

ಸ ತು ತೌ ರಾಕ್ಷಸೌ ದೃಷ್ಟ್ವಾ ನಿರ್ಮೃಗಂ ಚ ವನಂಕೃತಮ್ ।
ಕ್ರೋಧೇನ ಮಹತಾವಿಷ್ಟೋ ಜಘಾನೈಕಂ ಮಹೇಷುಣಾ ॥

ಅನುವಾದ

ಸೌದಾಸನು ಆ ಇಬ್ಬರೂ ರಾಕ್ಷಸರನ್ನು ನೋಡಿದ. ಜೊತೆಗೆ ಅವರು ಮೃಗಗಳಿಂದ ಬರಿದಾಗಿಸಿದ ವನದ ಅವಸ್ಥೆಯನ್ನು ನೋಡಿದನು. ಇದರಿಂದ ಅವನು ಮಹಾಕ್ರೋಧಗೊಂಡು ಒಬ್ಬನನ್ನು ಕೊಂದುಹಾಕಿದನು.॥13॥

ಮೂಲಮ್ - 14

ವಿನಿಪಾತ್ಯತಮೇಕಂ ತು ಸೌದಾಸಃ ಪುರುಷರ್ಷಭಃ ।
ವಿಜ್ವರೋ ವಿಗತಾಮರ್ಷೋ ಹತಂ ರಕ್ಷೋ ಹ್ಯುದೈಕ್ಷತ ॥

ಅನುವಾದ

ಒಬ್ಬನನ್ನು ಧರಾಶಾಯಿಯಾಗಿಸಿ ಆ ಪುರುಷಶ್ರೇಷ್ಠ ಸೌದಾಸನು ನಿಶ್ಚಿಂತನಾದನು. ಅವನ ಸಿಟ್ಟು ಶಾಂತವಾಗಿ, ಸತ್ತಿರುವ ರಾಕ್ಷಸನನ್ನು ನೋಡತೊಡಗಿದನು.॥14॥

ಮೂಲಮ್ - 15

ನಿರೀಕ್ಷಮಾಣಂ ತಂ ದೃಷ್ಟ್ವಾ ಸಹಾಯಂ ತಸ್ಯ ರಕ್ಷಸಃ ।
ಸಂತಾಪಮಕರೋದ್ಘೋರಂ ಸೌದಾಸಂ ಚೇದಮಬ್ರವೀತ್ ॥

ಅನುವಾದ

ಸತ್ತಿರುವ ರಾಕ್ಷಸನ ಜೊತೆಯವನನ್ನು ಸೌದಾಸನು ನೋಡುತ್ತಿದ್ದಾಗ, ಇನ್ನೊಬ್ಬ ರಾಕ್ಷಸನು ಅವನನ್ನು ನೋಡಿ ಮನಸ್ಸಿನಲ್ಲೇ ಘೋರ ಸಂತಾಪ ಉಂಟಾಗಿ ಸೌದಾಸನಲ್ಲಿ ಹೇಳಿದನು .॥15॥

ಮೂಲಮ್ - 16

ಯಸ್ಮಾದನಪರಾಧಂ ತಂ ಸಹಾಯಂ ಮಮ ಜಘ್ನಿವಾನ್ ।
ತಸ್ಮಾತ್ತವಾಪಿ ಪಾಪಿಷ್ಠ ಪ್ರದಾಸ್ಯಾಮಿ ಪ್ರತಿಕ್ರಿಯಾಮ್ ॥

ಅನುವಾದ

ಮಹಾಪಾಪೀ ನರೇಶನೇ ! ನೀನು ನಿರಪರಾಧಿಯಾದ ನನ್ನ ಜೊತೆಯವನನ್ನು ಕೊಂದುಹಾಕಿದೆ. ಇದಕ್ಕಾಗಿ ನಾನೂ ಕೂಡ ಇದರ ಸೇಡು ತೀರಿಸಿಕೊಳ್ಳುವೆನು.॥16॥

ಮೂಲಮ್ - 17

ಏವಮುಕ್ತ್ವಾ ತು ತದ್ರಕ್ಷಸ್ತತ್ರೈವಾಂತರಧೀಯತ ।
ಕಾಲಪರ್ಯಾಯಯೋಗೇನ ರಾಜಾ ಮಿತ್ರಸಹೋಭವತ್ ॥

ಅನುವಾದ

ಹೀಗೆ ಹೇಳಿ ಆ ರಾಕ್ಷಸನು ಅಲ್ಲೇ ಅಂತರ್ಧಾನನಾದನು. ಬಹಳ ಕಾಲದ ಬಳಿಕ ಸುದಾಸನ ಕುಮಾರ ಮಿತ್ರಸಹನು ಅಯೋಧ್ಯೆಯ ರಾಜನಾದನು.॥17॥

ಮೂಲಮ್ - 18

ರಾಜಾಪಿ ಯಜತೇ ಯಜ್ಞಮಸ್ಯಾಶ್ರಮಸಮೀಪತಃ ।
ಅಶ್ವಮೇಧಂ ಮಹಾಯಜ್ಞಂ ತಂ ವಸಿಷ್ಠೋಽಪ್ಯಪಾಲಯತ್ ॥

ಅನುವಾದ

ಅದೇ ರಾಜ ಮಿತ್ರಸಹನು ಈ ಆಶ್ರಮದ ಹತ್ತಿರ ಅಶ್ವಮೇಧ ಯಜ್ಞವನ್ನು ಮಾಡಿದ್ದನು. ಮಹರ್ಷಿ ವಸಿಷ್ಠರು ತಮ್ಮ ತಪೋಬಲದಿಂದ ಆ ಯಜ್ಞವನ್ನು ರಕ್ಷಿಸುತ್ತಿದ್ದರು.॥18॥

ಮೂಲಮ್ - 19

ತತ್ರ ಯಜ್ಞೋ ಮಹಾನಾಸೀದ್ಬಹುವರ್ಷಗಣಾಯುತಃ ।
ಸಮೃದ್ಧಃ ಪರಯಾ ಲಕ್ಷ್ಮ್ಯಾದೇವಯಜ್ಞಸಮೋಽಭವತ್ ॥

ಅನುವಾದ

ಅವನ ಆ ಮಹಾಯಜ್ಞವು ಬಹಳ ವರ್ಷಗಳವರೆಗೆ ನಡೆಯುತ್ತಾ ಇತ್ತು. ಭಾರೀ ಧನ-ಸಂಪತ್ತಿನಿಂದ ಸಂಪನ್ನ ಆ ಯಜ್ಞ ದೇವತೆಗಳ ಯಜ್ಞದಂತೆ ಇತ್ತು.॥19॥

ಮೂಲಮ್ - 20

ಅಥಾವಸಾನೇ ಯಜ್ಞಸ್ಯ ಪೂರ್ವವೈರಮನುಸ್ಮರನ್ ।
ವಸಿಷ್ಠ ರೂಪೀ ರಾಜಾನಮಿತಿ ಹೋವಾಚ ರಾಕ್ಷಸಃ ॥

ಅನುವಾದ

ಆ ಯಜ್ಞದ ಸಮಾಪ್ತಿಯಾದಾಗ ಹಿಂದಿನ ವೈರವನ್ನು ಸ್ಮರಿಸಿದ ಆ ರಾಕ್ಷಸನು ವಸಿಷ್ಠರ ರೂಪವನ್ನು ಧರಿಸಿ ರಾಜನ ಬಳಿಗೆ ಬಂದು ಹೀಗೆ ನುಡಿದನು.॥20॥

ಮೂಲಮ್ - 21

ಅದ್ಯ ಯಜ್ಞಾವಸಾನಾಂತೇ ಸಾಮಿಷಂ ಭೋಜನಂಮಮ ।
ದೀಯತಾಮತಿಶೀಘ್ರಂ ವೈ ನಾತ್ರ ಕಾರ್ಯಾ ವಿಚಾರಣಾ ॥

ಅನುವಾದ

ರಾಜನೇ! ಇಂದು ಯಜ್ಞ ಸಮಾಪ್ತಿಯ ದಿನವಾಗಿದೆ. ಆದ್ದರಿಂದ ಇಂದು ನೀನು ನನಗೆ ಬೇಗನೇ ಮಾಂಸಯುಕ್ತ ಭೋಜನ ಕೊಡು. ಈ ವಿಷಯದಲ್ಲಿ ಅನ್ಯಥಾ ವಿಚಾರಮಾಡಬೇಡ.॥21॥

ಮೂಲಮ್ - 22

ತಚ್ಛ್ರುತ್ವಾ ವ್ಯಾಹೃತಂವಾಕ್ಯಂ ರಕ್ಷಸಾ ಬ್ರಹ್ಮರೂಪಿಣಾ ।
ಸೂದಾನ್ಸಂಸ್ಕಾರಕುಶಲಾನುವಾಚ ಪೃಥಿವೀಪತಿಃ ॥

ಅನುವಾದ

ಬ್ರಾಹ್ಮಣರೂಪಧಾರೀ ರಾಕ್ಷಸನು ಹೇಳಿದ ಮಾತನ್ನು ಕೇಳಿ ರಾಜನು ಅಡಿಗೆಯಲ್ಲಿ ಕುಶಲರಾದ ಅಡಿಗೆಯವನಿಗೆ ಹೇಳಿದನು.॥22॥

ಮೂಲಮ್ - 23

ಹವಿಷ್ಯಂ ಸಾಮಿಷಂ ಸ್ವಾದು ಯಥಾ ಭವತಿ ಭೋಜನಮ್ ।
ತಥಾ ಕುರುತ ಶೀಘ್ರಂವೈ ಪರಿತುಷ್ಯೇದ್ಯಥಾ ಗುರುಃ ॥

ಅನುವಾದ

ನೀವು ಇಂದು ಬೇಗನೇ ಮಾಂಸಯುಕ್ತ ಹವಿಷ್ಯ ಸಿದ್ಧಗೊಳಿಸಿರಿ. ನನ್ನ ಗುರುದೇವರು ಅದರಿಂದ ಸಂತುಷ್ಟರಾಗುವಂತಹ ಸ್ವಾದಿಷ್ಟ ಬೋಜನವನ್ನು ತಯಾರಿಸಿರಿ.॥23॥

ಮೂಲಮ್ - 24

ಶಾಸನಾತ್ಪಾರ್ಥಿವೇಂದ್ರಸ್ಯ ಸೂದಃ ಸಂಭ್ರಾಂತಮಾನಸಃ ।
ತಚ್ಚ ರಕ್ಷಃ ಪುನಸ್ತತ್ರ ಸೂದವೇಷಮಥಾಕರೋತ್ ॥

ಅನುವಾದ

ಮಹಾರಾಜರ ಈ ಆಜ್ಞೆಯನ್ನು ಕೇಳುತ್ತಲೇ ಅಡಿಗೆ ಯವರ ಮನಸ್ಸಿನಲ್ಲಿ ಗಾಬರಿ ಉಂಟಾಯಿತು. (ಅವರು ಯೋಚಿಸಿದರು - ಇಂದು ಗುರುಗಳಿಗೆ ಅಭಕ್ಷ ಭಕ್ಷಣದಲ್ಲಿ ಪ್ರವೃತ್ತಿ ಹೇಗೆ ಉಂಟಾಯಿತು?) ಇದನ್ನು ನೋಡಿ ಮತ್ತೆ ಆ ರಾಕ್ಷಸನು ಅಡಿಗೆಯವನ ವೇಷ ಹಾಕಿಕೊಂಡನು.॥24॥

ಮೂಲಮ್ - 25

ಸ ಮಾನುಷಮಥೋ ಮಾಂಸಂ ಪಾರ್ಥಿವಾಯ ನ್ಯವೇದಯತ್ ।
ಇದಂ ಸ್ವಾದು ಹವಿಷ್ಯಂ ಚ ಸಾಮಿಷಂ ಚಾನ್ನಮಾಹೃತಮ್ ॥

ಅನುವಾದ

ಅವನು ಮನುಷ್ಯನ ಮಾಂಸವನ್ನು ತಂದು ರಾಜನಿಗೆ ಕೊಟ್ಟು ಹೇಳಿದನು - ಈ ಮಾಂಸಯುಕ್ತ ಅನ್ನ ಹಾಗೂ ಹವಿಸ್ಸು ತಂದಿರುವೆನು. ಇದು ಬಹಳ ಸ್ವಾದಿಷ್ಟವಾಗಿದೆ.॥25॥

ಮೂಲಮ್ - 26

ಸ ಭೋಜನಂ ವಸಿಷ್ಠಾಯ ಪತ್ನ್ಯಾ ಸಾರ್ಧಮುಪಾಹರತ್ ।
ಮದಯಂತ್ಯಾ ನರಶ್ರೇಷ್ಠ ಸಾಮಿಷಂ ರಕ್ಷಸಾ ಹೃತಮ್ ॥

ಅನುವಾದ

ನರಶ್ರೇಷ್ಠನೇ! ತನ್ನ ಪತ್ನೀ ರಾಣೀ ಮದಯಂತಿಯೊಂದಿಗೆ ರಾಜಾ ಮಿತ್ರಸಹನು ರಾಕ್ಷಸನು ತಂದಿರುವ ಆ ಮಾಂಸಯುಕ್ತ ಭೋಜನವನ್ನು ವಸಿಷ್ಠರ ಮುಂದೆ ಇರಿಸಿದನು.॥26॥

ಮೂಲಮ್ - 27

ಜ್ಞಾತ್ವಾ ತದಾಮಿಷಂ ವಿಪ್ರೋ ಮಾನುಷಂ ಭಾಜನಂ ಗತಮ್ ।
ಕ್ರೋಧೇನ ಮಹತಾವಿಷ್ಟೋ ವ್ಯಾಹರ್ತುಮುಪಚಕ್ರಮೇ ॥

ಅನುವಾದ

ಎಲೆಯಲ್ಲಿ ಮಾನವ ಮಾಂಸ ಬಡಿಸಲಾಗಿದೆ ಎಂದು ತಿಳಿದು ಬ್ರಹ್ಮರ್ಷಿ ವಸಿಷ್ಠರು ಮಹಾಕ್ರೋಧಗೊಂಡು ಹೀಗೆ ಹೇಳಿದರು.॥27॥

ಮೂಲಮ್ - 28

ಯಸ್ಮಾತ್ತ್ವಂ ಭೋಜನಂ ರಾಜನ್ಮಮೈತದ್ದಾತುಮಿಚ್ಛಸಿ ।
ತಸ್ಮಾದ್ಭೋಜನಮೇತತ್ತೇ ಭವಿಷ್ಯತಿ ನ ಸಂಶಯಃ ॥

ಅನುವಾದ

ರಾಜನೇ! ನೀನು ನನಗೆ ಇಂತಹ ಭೋಜನವನ್ನು ಕೊಡಲು ಬಯಸುತ್ತಿರುವೆ. ಅದಕ್ಕಾಗಿ ನಿನಗೆ ಇದೇ ಭೋಜನವಾಗಲಿ, ಇದರಲ್ಲಿ ಸಂಶಯವಿಲ್ಲ. (ನೀನು ಮನುಷ್ಯ ಭಕ್ಷಿ ರಾಕ್ಷಸನಾಗು..॥28॥

ಮೂಲಮ್ - 29

ತತಃ ಕ್ರುದ್ಧಸ್ತು ಸೌದಾಸಸ್ತೋಯಂ ಜಗ್ರಾಹ ಪಾಣಿನಾ ।
ವಸಿಷ್ಠಂ ಶಪ್ತುಮಾರೇಭೇ ಭಾರ್ಯಾ ಚೈನಮವಾರಯತ್ ॥

ಅನುವಾದ

ಇದನ್ನು ಕೇಳಿ ಸೌದಾಸನೂ ಕುಪಿತನಾಗಿ ಕೈಯಲ್ಲಿ ಜಲವನ್ನೆತ್ತಿಕೊಂಡು ವಸಿಷ್ಠರಿಗೆ ಶಾಪ ಕೊಡಲು ಹೊರಟಾಗ, ಅವನ ಪತ್ನೀ ಅವನನ್ನು ತಡೆದಳು.॥29॥

ಮೂಲಮ್ - 30

ರಾಜನ್ ಪ್ರಭುರ್ಯತೋಽಸ್ಮಾಕಂ ವಸಿಷ್ಠೋ ಭಗವಾನೃಷಿಃ ।
ಪ್ರತಿಶಪ್ತುಂ ನ ಶಕ್ತಸ್ತ್ವಂ ದೇವತುಲ್ಯಂ ಪುರೋಧಸಮ್ ॥

ಅನುವಾದ

ಅವಳು ಹೇಳಿದಳು - ರಾಜನೇ! ಪೂಜ್ಯ ವಸಿಷ್ಠ ಮುನಿಗಳು ನಮಗೆಲ್ಲರಿಗೆ ಸ್ವಾಮಿಯಾಗಿದ್ದಾರೆ; ಆದ್ದರಿಂದ ತನ್ನ ದೇವತುಲ್ಯ ಪುರೋಹಿತರಿಗೆ ಬದಲಾಗಿ ಶಾಪ ಕೊಡಲಾಗದು.॥30॥

ಮೂಲಮ್ - 31

ತತಃ ಕ್ರೋಧಮಯಂ ತೋಯಂ ತೇಜೋಬಲಸಮನ್ವಿತಮ್ ।
ವ್ಯಸರ್ಜಯತ ಧರ್ಮಾತ್ಮಾ ತತಃ ಪಾದೌ ಸಿಷೇಚ ಚ ॥

ಅನುವಾದ

ಆಗ ಧರ್ಮಾತ್ಮಾ ರಾಜನು ತೇಜ, ಬಲದಿಂದ ಕೂಡಿದ ಆ ಕ್ರೋಧಮಯ ನೀರನ್ನು ಅವನು ತನ್ನ ಎರಡೂ ಕಾಲುಗಳ ಮೇಲೆ ಚೆಲ್ಲಿದನು.॥31॥

ಮೂಲಮ್ - 32½

ತೇನಾಸ್ಯ ರಾಜ್ಞಸ್ತೌ ಪಾದೌ ತದಾ ಕಲ್ಮಾಷತಾಂ ಗತೌ ।
ತದಾಪ್ರಭೃತಿ ರಾಜಾಸೌ ಸೌದಾಸಃಸುಮಹಾಯಶಾಃ ॥
ಕಲ್ಮಾಷಪಾದಃ ಸಂವೃತ್ತಃ ಖ್ಯಾತಶ್ಚೈವ ತಥಾ ನೃಪಃ ।

ಅನುವಾದ

ಹೀಗೆ ಮಾಡುವುದರಿಂದ ರಾಜನ ಎರಡೂ ಕಾಲುಗಳು ಕೊಳಕಾದವು. ಅಂದಿನಿಂದ ಮಹಾಯಶಸ್ವೀ ರಾಜಾ ಸೌದಾಸನು ಕಲ್ಮಾಷಪಾದ(ಕೊಳಕಾದ ಕಾಲುಗಳುಳ್ಳ)ನಾದನು ಮತ್ತು ಅದೇ ಹೆಸರಿನಿಂದ ಅವನು ಖ್ಯಾತನಾದನು.॥32½॥

ಮೂಲಮ್ - 33

ಸ ರಾಜಾ ಸಹ ಪತ್ನ್ಯಾ ವೈ ಪ್ರಣಿಪತ್ಯ ಮುಹುರ್ಮುಹುಃ ।
ಪುನರ್ವಸಿಷ್ಠಂ ಪ್ರೋವಾಚ ಯದುಕ್ತಂಬ್ರಹ್ಮರೂಪಿಣಾ ॥

ಅನುವಾದ

ಅನಂತರ ಪತ್ನೀಸಹಿತ ರಾಜನು ಪದೇ-ಪದೇ ಪ್ರಣಾಮ ಮಾಡಿ ವಸಿಷ್ಠರಲ್ಲಿ ಹೇಳಿದನು- ಬ್ರಹ್ಮರ್ಷಿಗಳೇ ! ನಿಮ್ಮ ರೂಪವನ್ನೇ ಧರಿಸಿ ಯಾರೋ ನನ್ನಲ್ಲಿ ಇಂತಹ ಭೋಜನಕ್ಕಾಗಿ ಪ್ರೇರೇಪಿಸಿದ್ದರು.॥33॥

ಮೂಲಮ್ - 34

ತಚ್ಛ್ರುತ್ವಾ ಪಾರ್ಥಿವೇಂದ್ರಸ್ಯ ರಕ್ಷಸಾ ವಿಕೃತಂ ಚ ತತ್ ।
ಪುನಃ ಪ್ರೋವಾಚ ರಾಜಾನಂ ವಸಿಷ್ಠಃ ಪುರುಷರ್ಷಭಮ್ ॥

ಅನುವಾದ

ರಾಜಾಧಿರಾಜ ಮಿತ್ರಸಹನ ಮಾತನ್ನು ಕೇಳಿ, ಆ ರಾಕ್ಷಸನ ಕೃತ್ಯವೇ ಆಗಿರುವುದೆಂದು ತಿಳಿದು ವಸಿಷ್ಠರು ಮತ್ತೆ ಆ ನರಶ್ರೇಷ್ಠ ರಾಜನಲ್ಲಿ ಹೇಳಿದರು.॥34॥

ಮೂಲಮ್ - 35

ಮಯಾ ರೋಷಪರೀತೇನ ಯದಿದಂ ವ್ಯಾಹೃತಂ ವಚಃ ।
ನೈತಚ್ಛಕ್ಯಂ ವೃಥಾ ಕರ್ತುಂ ಪ್ರದಾಸ್ಯಾಮಿ ಚ ತೇ ವರಮ್ ॥

ಅನುವಾದ

ರಾಜನೇ! ರೋಷಗೊಂಡು ನಾನು ಹೇಳಿದ ಮಾತು ವ್ಯರ್ಥವಾಗಲಾರದು; ಆದರೆ ಇದರಿಂದ ಬಿಡುಗಡೆ ಹೊಂದಲು ನಿನಗೆ ಒಂದು ವರವನ್ನು ಕೊಡುವೆನು.॥35॥

ಮೂಲಮ್ - 36

ಕಾಲೋ ದ್ವಾದಶವರ್ಷಾಣಿ ಶಾಪಸ್ಯಾಂತೋ ಭವಿಷ್ಯತಿ ।
ಮತ್ಪ್ರಸಾದಾಚ್ಚ ರಾಜೇಂದ್ರ ಅತೀತಂ ನ ಸ್ಮರಿಷ್ಯಸಿ ॥

ಅನುವಾದ

ರಾಜೇಂದ್ರನೇ! ಆ ವರ ಹೀಗಿದೆ - ಈ ಶಾಪವು ಹನ್ನೆರಡು ವರ್ಷ ಇದ್ದು, ಬಳಿಕ ಇದು ಕೊನೆಗೊಳ್ಳುವುದು. ನನ್ನ ಕೃಪೆಯಿಂದ ನಿನಗೆ ಕಳೆದುಹೋದ ಘಟನೆಯ ಸ್ಮರಣೆ ಇರಲಾರದು.॥36॥

ಮೂಲಮ್ - 37

ಏವಂ ಸ ರಾಜಾ ತಂ ಶಾಪಮುಪಭುಜ್ಯಾರಿಸೂದನಃ ।
ಪ್ರತಿಲೇಭೇ ಪುನಾ ರಾಜ್ಯಂ ಪ್ರಜಾಶ್ಚೈವಾನ್ವಪಾಲಯತ್ ॥

ಅನುವಾದ

ಹೀಗೆ ಆ ಶತ್ರುಸೂದನ ರಾಜನು ಹನ್ನೆರಡು ವರ್ಷಗಳವರೆಗೆ ಆ ಶಾಪವನ್ನು ಅನುಭವಿಸಿ, ಮತ್ತೆ ತನ್ನ ರಾಜ್ಯವನ್ನು ಪಡೆದು ಪ್ರಜಾಜನರನ್ನು ನಿರಂತರ ಪಾಲಿಸಿದನು.॥37॥

ಮೂಲಮ್ - 38

ತಸ್ಯ ಕಲ್ಮಾಷಪಾದಸ್ಯ ಯಜ್ಞಸ್ಯಾಯತನಂ ಶುಭಮ್ ।
ಆಶ್ರಮಸ್ಯ ಸಮೀಪೇಽಸ್ಯ ಯನ್ಮಾಂ ಪೃಚ್ಛಸಿ ರಾಘವ ॥

ಅನುವಾದ

ರಘುನಂದನ! ಅದೇ ರಾಜಾ ಕಲ್ಮಾಷಪಾದನ ಯಜ್ಞದ ಸುಂದರ ಈ ಸ್ಥಾನ ನನ್ನ ಆಶ್ರಮದ ಬಳಿ ಕಂಡು ಬರುತ್ತದೆ. ಅದರ ವಿಷಯದಲ್ಲಿ ನೀನು ಕೇಳಿದ್ದೆ.॥38॥

ಮೂಲಮ್ - 39

ತಸ್ಯ ತಾಂ ಪಾರ್ಥಿವೇಂದ್ರಸ್ಯ ಕಥಾಂ ಶ್ರುತ್ವಾ ಸುದಾರುಣಾಮ್ ।
ವಿವೇಶ ಪರ್ಣಶಾಲಾಯಾಂಮಹರ್ಷಿಮಭಿವಾದ್ಯ ಚ ॥

ಅನುವಾದ

ಮಹಾರಾಜಾ ಮಿತ್ರಸಹನ ಆ ಅತ್ಯಂತ ದಾರುಣ ಕಥೆಯನ್ನು ಕೇಳಿ, ಶತ್ರುಘ್ನನು ಮಹರ್ಷಿಗಳಿಗೆ ಪ್ರಣಾಮಗೈದು ಪರ್ಣಶಾಲೆಯನ್ನು ಪ್ರವೇಶಿಸಿದನು.॥39॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಅರವತ್ತೈದನೆಯ ಸರ್ಗ ಪೂರ್ಣವಾಯಿತು. ॥65॥