[ಅರವತ್ತಮೂರನೆಯ ಸರ್ಗ]
ಭಾಗಸೂಚನಾ
ಶತ್ರುಘ್ನನಿಗೆ ಪಟ್ಟಾಭಿಷೇಕ, ಲವಣಾಸುರನ ಶೂಲದಿಂದ ಪಾರಾಗುವ ಉಪಾಯ
ಮೂಲಮ್ - 1
ಏವಮುಕ್ತಸ್ತು ರಾಮೇಣ ಪರಾಂ ವ್ರೀಡಾಮುಪಾಗಮತ್ ।
ಶತ್ರುಘ್ನೋ ವೀರ್ಯಸಂಪನ್ನೋ ಮಂದ ಮಂದಮುವಾಚ ಹ ॥
ಅನುವಾದ
ಶ್ರೀರಾಮಚಂದ್ರನು ಹೀಗೆ ಹೇಳಿದಾಗ ಬಲ-ವಿಕ್ರಮದಿಂದ ಸಂಪನ್ನ ಶತ್ರುಘ್ನನು ಲಜ್ಜಿತನಾಗಿ ನಿಧಾನವಾಗಿ ಹೇಳಿದನು.॥1॥
ಮೂಲಮ್ - 2
ಅಧರ್ಮಂ ವಿದ್ಮ ಕಾಕುತ್ಸ್ಥ ಅಸ್ಮಿನ್ನರ್ಥೇ ನರೇಶ್ವರ ।
ಕಥಂ ತಿಷ್ಠತ್ಸು ಜ್ಯೇಷ್ಠೇಷು ಕನೀಯಾನಭಿಷಿಚ್ಯತೇ ॥
ಅನುವಾದ
ನರೇಶ್ವರನೇ! ಈ ಅಭಿಷೇಕವನ್ನು ಸ್ವೀಕರಿಸುವುದರಲ್ಲಿ ನನಗೆ ಅಧರ್ಮ ತೋರುತ್ತದೆ. ಹಿರಿಯ ಅಣ್ಣಂದಿರು ಇರುವಾಗ ತಮ್ಮನ ಅಭಿಷೇಕ ಹೇಗೆ ಮಾಡಲಾಗುವುದು.॥2॥
ಮೂಲಮ್ - 3
ಅವಶ್ಯಂ ಕರಣೀಯಂ ಚ ಶಾಸನಂ ಪುರುಷರ್ಷಭ ।
ತವ ಚೈವ ಮಹಾಭಾಗ ಶಾಸನಂ ದುರತಿಕ್ರಮಮ್ ॥
ಅನುವಾದ
ಹಾಗಿದ್ದರೂ ಪುರುಷಪ್ರವರ! ಮಹಾಭಾಗ! ನಿನ್ನ ಆಜ್ಞೆಯನ್ನು ನಾನು ಅವಶ್ಯ ಪಾಲಿಸಬೇಕು. ನಿನ್ನ ಶಾಸನವನ್ನು ಯಾರೂ ಉಲ್ಲಂಘಿಸಲಾರರು.॥3॥
ಮೂಲಮ್ - 4
ತ್ವತ್ತೋ ಮಯಾ ಶ್ರುತಂ ವೀರ ಶ್ರುತಿಭ್ಯಶ್ಚ ಮಯಾ ಶ್ರುತಮ್ ।
ನೋತ್ತರಂ ಹಿ ಮಯಾ ವಾಚ್ಯಂ ಮಧ್ಯಮೇ ಪ್ರತಿಜಾನತಿ ॥
ಅನುವಾದ
ವೀರನೇ! ವಾಸ್ತವವಾಗಿ ನಡುವಣ ಅಣ್ಣನು ಪ್ರತಿಜ್ಞೆ ಮಾಡಿದಾಗ ನಾನು ಏನನ್ನು ಮಾತನಾಡಬಾರದೆಂದು ನಿನ್ನಿಂದ ಹಾಗೂ ವೇದವಾಕ್ಯಗಳಿಂದ ಕೇಳಿರುವೆ.॥4॥
ಮೂಲಮ್ - 5
ವ್ಯಾಹೃತಂ ದುರ್ವಚೋ ಘೋರಂ ಹಂತಾಸ್ಮಿ ಲವಣಂ ಮೃಧೇ ।
ತಸ್ಯೇಯಂ ಮೇ ದುರುಕ್ತಸ್ಯದುರ್ಗತಿಃ ಪುರುಷರ್ಷಭ ॥
ಅನುವಾದ
ನಾನು ಲವಣಾಸುರನನ್ನು ಕೊಲ್ಲುವೆನು ಎಂಬ ಅನುಚಿತ ಶಬ್ದ ನನ್ನ ಬಾಯಿಂದ ಹೊರಟಿತು. ಪುರುಷೋತ್ತಮ! ಆ ಅನುಚಿತ ಮಾತಿನ ಪರಿಣಾಮವೇ ನನ್ನ ಹೀಗೆ ದುರ್ಗತಿ ಆಗುತ್ತಿದೆ. (ಹಿರಿಯರು ಇರುವಾಗ ಅಭಿಷಿಕ್ತವಾಗ ಬೇಕಾಯಿತು..॥5॥
ಮೂಲಮ್ - 6
ಉತ್ತರಂ ನಹಿ ವಕ್ತವ್ಯಂ ಜ್ಯೇಷ್ಠೇನಾಭಿಹಿತೇ ಪುನಃ ।
ಅಧರ್ಮಸಹಿತಂ ಚೈವ ಪರಲೋಕವಿವರ್ಜಿತಮ್ ॥
ಅನುವಾದ
ಜೇಷ್ಠನಾದ ಭರತನು ಲವಣಾಸುರನನ್ನು ಸಂಹರಿಸುವೆನೆಂದು ಹೇಳಿದಾಗ ನಾನು ಯಾವ ಮಾತನ್ನು ಆಡಬಾರದಾಗಿತ್ತು. ಅದರ ಪರಿಣಾಮವಾಗಿಯೇ ನಾನೀಗ ಅಧರ್ಮಯುಕ್ತವಾದ ಮತ್ತು ಪರಲೋಕದಿಂದ ವಂಚಿತವಾದ ಹೀನಕಾರ್ಯ ಮಾಡಬೇಕಾಯಿತು. ಹಿರಿಯರನ್ನು ಅತಿಕ್ರಮಿಸಿ ಪಟ್ಟಾಭಿಷೇಕ ಮಾಡಿಕೊಳ್ಳಬೇಕಾಗಿದೆ. ಏಕೆಂದರೆ ನಿನ್ನ ಆಜ್ಞೆಯನ್ನು ನಾನು ಉಲ್ಲಂಘಿಸಲು ಸಾಧ್ಯವೇ ಇಲ್ಲ.॥6॥
ಮೂಲಮ್ - 7
ಸೋಽಹಂ ದ್ವಿತೀಯಂ ಕಾಕುತ್ಸ್ಥ ನ ವಕ್ಷ್ಯಾಮೀತಿ ಚೋತ್ತರಮ್ ।
ಮಾ ದ್ವಿತೀಯೇನ ದಂಡೋ ವೈ ನಿಪತೇನ್ಮಯಿ ಮಾನದ ॥
ಅನುವಾದ
ಕಾಕುತ್ಸ್ಥನೇ! ಈಗ ನಿಮ್ಮ ಆಜ್ಞೆಗೆ ವಿರುದ್ಧವಾಗಿ ನಾನು ಏನನ್ನು ಹೇಳಲಾರೆ. ಮಾನದ! ಬೇರೆ ಏನಾದರೂ ಮಾತನಾಡಿ ಇದರಿಂದಲೂ ಕಠೋರವಾದ ಶಿಕ್ಷೆ ಅನುಭವಿಸುವಂತೆ ಆಗದಿರಲಿ.॥7॥
ಮೂಲಮ್ - 8
ಕಾಮಕಾರೋ ಹ್ಯಹಂರಾಜಂಸ್ತವಾಸ್ಮಿ ಪುರುಷರ್ಷಭ ।
ಅಧರ್ಮಂ ಜಹಿ ಕಾಕುತ್ಸ್ಥ ಮತ್ಕೃತೇ ರಘುನಂದನ ॥
ಅನುವಾದ
ಪುರುಷಪ್ರವರ ರಘುನಂದನ! ನಾನು ನಿನ್ನ ಇಚ್ಛೆಯಂತೆಯೇ ಕಾರ್ಯ ಮಾಡುವೆನು. ಆದರೆ ಇದರಿಂದ ನನಗಾಗಿ ಪ್ರಾಪ್ತವಾಗುವ ಅಧರ್ಮ ವನ್ನು ನೀನೇ ನಾಶಮಾಡು.॥8॥
ಮೂಲಮ್ - 9
ಏವಮುಕ್ತೇ ತು ಶೂರೇಣ ಶತ್ರುಘ್ನೇನ ಮಹಾತ್ಮನಾ ।
ಉವಾಚ ರಾಮಃ ಸಂಹೃಷ್ಟೋ ಭರತಂ ಲಕ್ಷ್ಮಣಂ ತಥಾ ॥
ಅನುವಾದ
ಶೂರನಾದ ಮಹಾತ್ಮಾ ಶತ್ರುಘ್ನನು ಹೀಗೆ ಹೇಳಿದಾಗ ಶ್ರೀರಾಮಚಂದ್ರನಿಗೆ ಬಹಳ ಸಂತೋಷವಾಯಿತು ಮತ್ತು ಭರತ-ಲಕ್ಷ್ಮಣರಲ್ಲಿ ಹೇಳಿದನು.॥9॥
ಮೂಲಮ್ - 10
ಸಂಭಾರಾನಭಿಷೇಕಸ್ಯ ಆನಯಧ್ವಂ ಸಮಾಹಿತಾಃ ।
ಅದ್ಯೈವ ಪುರುಷವ್ಯಾಘ್ರಮಭಿಷೇಕ್ಷ್ಯಾಮಿ ರಾಘವಮ್ ॥
ಅನುವಾದ
ನೀವೆಲ್ಲರೂ ಏಕಾಗ್ರಚಿತ್ತರಾಗಿ ಪಟ್ಟಾಭಿಷೇಕದ ಎಲ್ಲ ಸಾಮಗ್ರಿಗಳನ್ನು ಸಿದ್ಧಪಡಿಸಿರಿ. ನಾನು ಈಗಲೇ ರಘುಕುಲನಂದನ ಪುರುಷಸಿಂಹ ಶತ್ರುಘ್ನನ ಪಟ್ಟಾಭಿಷೇಕ ಮಾಡುವೆನು.॥10॥
ಮೂಲಮ್ - 11
ಪುರೋಧಸಂ ಚ ಕಾಕುತ್ಸ್ಥ ನೈಗಮಾನೃತ್ವಿಜಸ್ತಥಾ ।
ಮಂತ್ರಿಣಶ್ಚೈವ ತಾನ್ಸರ್ವಾನಾನಯಧ್ವಂ ಮಮಾಜ್ಞಯಾ ॥
ಅನುವಾದ
ಕಾಕುತ್ಸ್ಥ! ನನ್ನ ಅಪ್ಪಣೆಯಂತೆ ಪುರೋಹಿತರನ್ನು, ವೈದಿಕ ವಿದ್ವಾಂಸರನ್ನು, ಋತ್ವಿಜರನ್ನು, ಸಮಸ್ತ ಮಂತ್ರಿಗಳನ್ನು ಕರೆದುಕೊಂಡು ಬನ್ನಿ.॥11॥
ಮೂಲಮ್ - 12½
ರಾಜ್ಞಃ ಶಾಸನಮಾಜ್ಞಾಯ ತಥಾಕುರ್ವನ್ಮಹಾರಥಾಃ ।
ಅಭಿಷೇಕಸಮಾರಂಭ ಪುರಸ್ಕೃತ್ಯ ಪುರೋಧಸಮ್ ॥
ಪ್ರವಿಷ್ಟಾರಾಜಭವನಂ ರಾಜಾನೋ ಬ್ರಾಹ್ಮಣಸ್ತಥಾ ।
ಅನುವಾದ
ಮಹಾರಾಜರ ಆಜ್ಞೆ ಪಡೆದು ಮಹಾರಥಿ ಭರತ ಮತ್ತು ಲಕ್ಷ್ಮಣರು ಹಾಗೆಯೇ ಮಾಡಿದರು. ಅವರು ಪುರೋಹಿತರನ್ನು ಮುಂದಿಟ್ಟುಕೊಂಡು ಅಭಿಷೇಕದ ಸಾಮಗ್ರಿಯೊಂದಿಗೆ ರಾಜಭವನಕ್ಕೆ ಬಂದರು. ಅವರೊಂದಿಗೆ ಅನೇಕ ರಾಜರೂ, ಬ್ರಾಹ್ಮಣರೂ ಅಲ್ಲಿಗೆ ಬಂದರು.॥12½॥
ಮೂಲಮ್ - 13½
ತತೋಽಭಿಷೇಕೋ ವವೃಧೇ ಶತ್ರುಘ್ನಸ್ಯ ಮಹಾತ್ಮನಃ ॥
ಸಂಪ್ರಹರ್ಷಕರಃ ಶ್ರೀಮಾನ್ ರಾಘವಸ್ಯ ಪುರಸ್ಯ ಚ ।
ಅನುವಾದ
ಅನಂತರ ಶ್ರೀರಘುನಾಥನಿಗೆ ಹಾಗೂ ಪ್ರಜೆಗಳ ಹರ್ಷವನ್ನು ಹೆಚ್ಚಿಸು ಮಹಾತ್ಮಾ ಶತ್ರುಘ್ನನ ವೈಭವಶಾಲೀ ಪಟ್ಟಾಭಿಷೇಕ ಪ್ರಾರಂಭವಾಯಿತು.॥13½॥
ಮೂಲಮ್ - 14½
ಅಭಿಷಿಕ್ತಸ್ತು ಕಾಕುತ್ಸ್ಥೋ ಬಭೌ ಚಾದಿತ್ಯಸಂನಿಭಃ ॥
ಅಭಿಷಿಕ್ತಃ ಪುರಾ ಸ್ಕಂದಃ ಸೇಂದ್ರೈರಿವ ದಿವೌಕಸೈಃ ।
ಅನುವಾದ
ಹಿಂದೆ ಇಂದ್ರಾದಿ ದೇವತೆಗಳು ದೇವಸೇನಾಪತಿಯಾಗಿ ಸ್ಕಂದನಿಗೆ ಅಭಿಷೇಕ ಮಾಡಿದಂತೆ ಶ್ರೀರಾಮಾದಿಗಳು ಶತ್ರುಘ್ನನ ಪಟ್ಟಾಭಿಷೇಕ ಮಾಡಿದರು. ಹೀಗೆ ಅಭಿಷಿಕ್ತನಾಗಿ ಶತ್ರುಘ್ನನು ಸೂರ್ಯನಂತೆ ಶೋಭಿಸಿದನು.॥14½॥
ಮೂಲಮ್ - 15½
ಅಭಿಷಿಕ್ತೇ ತು ಶತ್ರುಘ್ನೇ ರಾಮೇಣಾಕ್ಲಿಷ್ಟಕರ್ಮಣಾ ॥
ಪೌರಾಃ ಪ್ರಮುದಿತಾಶ್ಚಾಸನ್ಬ್ರಾಹ್ಮಣಾಶ್ಚ ಬಹುಶ್ರುತಾಃ ।
ಅನುವಾದ
ಆಯಾಸವಿಲ್ಲದೆ ಎಲ್ಲ ಕರ್ಮಮಾಡುವ ಶ್ರೀರಾಮನು ಶತ್ರುಘ್ನನಿಗೆ ಪಟ್ಟಕಟ್ಟಿದಾಗ ನಗರವಾಸಿಗಳು, ವಿದ್ವಾಂಸರಾದ ಬ್ರಾಹ್ಮಣರು ಬಹಳ ಸಂತಸಪಟ್ಟರು.॥15½॥
ಮೂಲಮ್ - 16½
ಕೌಸಲ್ಯಾ ಚ ಸುಮಿತ್ರಾ ಚ ಮಂಗಲಂ ಕೇಕಯೀ ತಥಾ ॥
ಚಕ್ರುಸ್ತಾ ರಾಜಭವನೇ ಯಾಶ್ಚಾನ್ಯಾ ರಾಜಯೋಷಿತಃ ।
ಅನುವಾದ
ಆಗ ಕೌಸಲ್ಯಾ, ಸುಮಿತ್ರಾ, ಕೈಕೇಯಿ ಹಾಗೂ ಅರಮನೆಯ ಇತರ ರಾಜ ಮಹಿಳೆಯರು ಸೇರಿ ಮಂಗಳಕಾರ್ಯವನ್ನು ನಿರ್ವಹಿಸಿದರು.॥16½॥
ಮೂಲಮ್ - 17½
ಋಷಯಶ್ಚ ಮಹಾತ್ಮಾನೋ ಯಮುನಾತೀರವಾಸಿನಃ ॥
ಹತಂ ಲವಣಮಾಶಂಸುಃ ಶತ್ರುಘ್ನಸ್ಯಾಭಿಷೇಚನಾತ್ ।
ಅನುವಾದ
ಶತ್ರುಘ್ನನ ಪಟ್ಟಾಭಿಷೇಕವಾದಾಗ ಯಮುನಾತೀರ ನಿವಾಸಿ ಮಹಾತ್ಮಾ ಋಷಿಗಳು - ಈಗ ಲವಣಾಸುರನು ಹತನಾದಂತೆ ನಿಶ್ಚಯಿಸಿದರು.॥17½॥
ಮೂಲಮ್ - 18
ತತೋಽಭಿಷಿಕ್ತಂ ಶತ್ರುಘ್ನ ಮಂಕಮಾರೋಪ್ಯ ರಾಘವಃ ।
ಉವಾಚ ಮಧುರಾಂ ವಾಣೀಂ ತೇಜಸ್ತಸ್ಯಾಭಿಪೂರಯನ್ ॥
ಅನುವಾದ
ಅಭಿಷೇಕದ ಬಳಿಕ ಶತ್ರುಘ್ನನನ್ನು ತೊಡೆಯಲ್ಲಿ ಕುಳ್ಳಿರಿಸಿಕೊಂಡು ಶ್ರೀರಘುನಾಥನು ಅವನ ತೇಜವನ್ನು ಹೆಚ್ಚಿಸುತ್ತಾ ಮಧುರವಾಗಿ ಹೇಳಿದನು .॥18॥
ಮೂಲಮ್ - 19
ಅಯಂ ಶರಸ್ತ್ವಮೋಘಸ್ತೇ ದಿವ್ಯಃ ಪರಪುರಂಜಯಃ ।
ಅನೇನ ಲವಣಂ ಸೌಮ್ಯ ಹಂತಾಸಿ ರಘುನಂದನ ॥
ಅನುವಾದ
ರಘುನಂದನ! ಸೌಮ್ಯ ಶತ್ರುಘ್ನ! ನಾನು ನಿನಗೆ ಈ ದಿವ್ಯ ಅಮೋಘ ಬಾಣಗಳನ್ನು ಕೊಡುತ್ತೇನೆ. ನೀನು ಅವುಗಳಿಂದ ಲವಣಾಸುರನನ್ನು ಅವಶ್ಯವಾಗಿ ವಧಿಸುವೆ.॥19॥
ಮೂಲಮ್ - 20
ಸೃಷ್ಟಃ ಶರೋಽಯಂ ಕಾಕುತ್ಸ್ಥ ಯದಾಶೇತೇ ಮಹಾರ್ಣವೇ ।
ಸ್ವಯಂಭೂರಜಿತೋ ದಿವ್ಯೋ ಯಂನಾಪಶ್ಯನ್ಸುರಾಸುರಾಃ ॥
ಮೂಲಮ್ - 21
ಅದೃಶ್ಯಃ ಸರ್ವಭೂತಾನಾಂ ತೇನಾಯಂ ಹಿ ಶರೋತ್ತಮಃ ।
ಸೃಷ್ಟಃ ಕ್ರೋಧಾಭಿಭೂತೇನ ವಿನಾಶಾರ್ಥಂ ದುರಾತ್ಮನೋಃ ॥
ಮೂಲಮ್ - 22
ಮಧುಕೈಟಭಯೋರ್ವೀರ ವಿಘಾತೇ ಸರ್ವರಕ್ಷಸಾಮ್ ।
ಸ್ರಷ್ಟುಕಾಮೇನ ಲೋಕಾಂಸ್ತ್ರೀಂಸ್ತೌ ಚಾನೇನ ಹತೌ ಯುಧಿ ॥
ಮೂಲಮ್ - 23
ತೌ ಹತ್ವಾ ಜನಭೋಗಾರ್ಥೇ ಕೈಟಭಂ ತು ಮಧುಂ ತಥಾ ।
ಅನೇನ ಶರಮುಖ್ಯೇನ ತತೋ ಲೋಕಾಂಶ್ಚಕಾರ ಸಃ ॥
ಅನುವಾದ
ಕಾಕುತ್ಸ್ಥನೇ! ಹಿಂದಿನ ಪ್ರಳಯ ಕಾಲದಲ್ಲಿ ಜಗತ್ತೆಲ್ಲವೂ ಜಲಮಯವಾಗಿತ್ತು. ಅಪರಾಜಿತನಾದ, ಸ್ವಯಂಭೂ, ದಿವ್ಯರೂಪನಾದ ಮಹಾವಿಷ್ಣುವು ಏಕಾರ್ಣವ ಮಹಾಸಮುದ್ರದಲ್ಲಿ ಪವಡಿಸಿದ್ದನು. ಆಗ ದೇವತೆಗಳಾಗಲೀ, ದಾನವರಾಗಲೀ ಅವನನ್ನು ನೋಡಲಾಗಲಿಲ್ಲ. ಸರ್ವ ಪ್ರಾಣಿಗಳಿಗೆ ನಾರಾಯಣನು ಅದೃಶ್ಯನಾಗಿದ್ದನು. ಆಗ ಮಧು-ಕೈಟಭರೆಂಬ ರಾಕ್ಷಸರು ಲೋಕಸೃಷ್ಟಿಗೆ ತಡೆಯನ್ನುಂಟು ಮಾಡುತ್ತಿದ್ದರು. ಕ್ರೋಧಾಭಿಭೂತನಾದ ನಾರಾಯಣನು ಆ ದುರಾತ್ಮರನ್ನು ಸಂಹರಿಸಲು ಈ ಬಾಣಗಳನ್ನು ಸೃಷ್ಟಿಸಿದ್ದನು. ಈ ಬಾಣಗಳಿಂದಲೇ ಲೋಕಕಂಟಕರಾದ ಮಧು-ಕೈಟಭರನ್ನು ಸಂಹರಿಸಿ ಪ್ರಾಣಿಗಳ ಕರ್ಮಫಲ ಭೋಗಕ್ಕಾಗಿ ಮೂರು ಲೋಕಗಳನ್ನು ಸೃಷ್ಟಿಸಿದನು.॥20-23॥
ಮೂಲಮ್ - 24
ನಾಯಂ ಮಯಾ ಶರಃ ಪೂರ್ವಂ ರಾವಣಸ್ಯ ವಧಾರ್ಥಿನಾ ।
ಮುಕ್ತಃ ಶತ್ರುಘ್ನ ಭೂತಾನಾಂ ಮಹಾನ್ ಹ್ರಾಸೋ ಭವೇದಿತಿ ॥
ಅನುವಾದ
ಶತ್ರುಘ್ನನೇ! ಮೊದಲು ನಾನು ರಾವಣನನ್ನು ವಧಿಸುವಾಗಲೂ ಈ ಬಾಣಗಳನ್ನು ಪ್ರಯೋಗಿಸಲಿಲ್ಲ; ಏಕೆಂದರೆ ಇವುಗಳಿಂದಾಗಿ ಅನೇಕ ಪ್ರಾಣಿಗಳು ನಾಶವಾಗುವ ಆಶಂಕೆ ಇತ್ತು.॥24॥
ಮೂಲಮ್ - 25
ಯಚ್ಚ ತಸ್ಯ ಮಹಚ್ಛೂಲಂತ್ರ್ಯಂಬಕೇಣ ಮಹಾತ್ಮನಾ ।
ದತ್ತಂ ಶತ್ರುವಿನಾಶಾಯ ಮಧೋರಾಯುಧಮುತ್ತಮಮ್ ॥
ಮೂಲಮ್ - 26
ತತ್ ಸಂ ನಿಕ್ಷಿಪ್ಯಭವನೇ ಪೂಜ್ಯಮಾನಂ ಪುನಃಪುನಃ ।
ದಿಶಃ ಸರ್ವಾಃ ಸಮಾಸಾದ್ಯ ಪ್ರಾಪ್ನೋತ್ಯಾಹಾರಮುತ್ತಮಮ್ ॥
ಅನುವಾದ
ಮಹಾತ್ಮಾ ಮಹಾದೇವನು ಶತ್ರುವಿನಾಶಕ್ಕಾಗಿ ಕೊಟ್ಟಿರುವ ದಿವ್ಯ, ಉತ್ತಮ, ಮಹಾಶೂಲ ಮಧುವಿನ ಬಳಿ ಇದೆ. ಅದನ್ನು ಅವನು ಪ್ರತಿದಿನ ಪೂಜಿಸುತ್ತಾ, ಅದನ್ನು ಅರಮನೆಯಲ್ಲಿ ಗುಪ್ತವಾಗಿಟ್ಟು, ಎಲ್ಲ ದಿಕ್ಕುಗಳಿಗೆ ಹೋಗಿ ತನಗಾಗಿ ಉತ್ತಮ ಆಹಾರ ಸಂಗ್ರಹ ಮಾಡುತ್ತಿದ್ದನು.॥25-26॥
ಮೂಲಮ್ - 27
ಯದಾ ತು ಯುದ್ಧಮಾಕಾಂಕ್ಷನ್ಕಶ್ಚಿದೇನಂ ಸಮಾಹ್ವಯೇತ್ ।
ತದಾ ಶೂಲಂ ಗೃಹೀತ್ವಾ ತುಭಸ್ಮ ರಕ್ಷಃ ಕರೋತಿ ಹಿ ॥
ಅನುವಾದ
ಯಾರಾದರೂ ಯುದ್ಧಕ್ಕಾಗಿ ಅವನನ್ನು ಆಹ್ವಾನಿಸಿದಾಗ ಆ ರಾಕ್ಷಸನು ಆ ಶೂಲವನ್ನೆತ್ತಿಕೊಂಡು ಅದರಿಂದ ಶತ್ರುವನ್ನು ಭಸ್ಮಮಾಡಿ ಬಿಡುತ್ತಾನೆ.॥27॥
ಮೂಲಮ್ - 28
ಸ ತ್ವಂ ಪುರುಷಶಾರ್ದೂಲ ತಮಾಯುಧವಿನಾಕೃತಮ್ ।
ಅಪ್ರವಿಷ್ಟಂ ಪುರಂ ಪೂರ್ವಂ ದ್ವಾರಿ ತಿಷ್ಠ ಧೃತಾಯುಧಃ ॥
ಅನುವಾದ
ಪುರುಷಸಿಂಹನೇ! ಯಾವಾಗ ಶೂಲವು ಅವನ ಬಳಿ ಇರುವುದಿಲ್ಲವೋ, ಅವನು ನಗರಕ್ಕೆ ಹಿಂದಿರುಗುವ ಮೊದಲೇ ನಗರದ್ವಾರದಲ್ಲಿ ಅಸ್ತ್ರ-ಶಸ್ತ್ರ ಧರಿಸಿಕೊಂಡು ಅವನ ನಿರೀಕ್ಷೆಯಲ್ಲಿ ಯುದ್ಧಕ್ಕೆ ಸಿದ್ಧನಾಗಿ ನಿಂತಿರು.॥28॥
ಮೂಲಮ್ - 29
ಅಪ್ರವಿಷ್ಟಂ ಚ ಭವನಂ ಯುದ್ಧಾಯ ಪುರುಷರ್ಷಭ ।
ಅಹ್ವಯೇಥಾ ಮಹಾಬಾಹೋ ತತೋ ಹಂತಾಸಿ ರಾಕ್ಷಸಮ್ ॥
ಅನುವಾದ
ಮಹಾಬಾಹು ಪುರುಷೋತ್ತಮ! ಆ ರಾಕ್ಷಸನು ಅರಮನೆ ಹೊಕ್ಕುವ ಮೊದಲೇ ನೀನು ಯುದ್ಧಕ್ಕಾಗಿ ಆಹ್ವಾನಿಸು. ಆಗ ಅವಶ್ಯವಾಗಿ ಅವನನ್ನು ವಧಿಸಬಲ್ಲೆ.॥29॥
ಮೂಲಮ್ - 30
ಅನ್ಯಥಾಕ್ರಿಯಮಾಣೇ ತು ಹ್ಯವಧ್ಯಃ ಸ ಭವಿಷ್ಯತಿ ।
ಯದಿ ತ್ವೇವಂ ಕೃತಂ ವೀರ ವಿನಾಶಮುಪಯಾಸ್ಯತಿ ॥
ಅನುವಾದ
ಹೀಗೆ ಮಾಡದಿದ್ದರೆ ಅವನು ಅವಧ್ಯನಾಗುವನು. ವೀರನೇ! ನೀನು ಹೀಗೆ ಮಾಡಿದರೆ ಆ ರಾಕ್ಷಸರ ವಿನಾಶವಾಗುವುದು ನಿಶ್ಚಿ.॥30॥
ಮೂಲಮ್ - 31
ಏತತ್ತೇ ಸರ್ವಮಾಖ್ಯಾತಂ ಶೂಲಸ್ಯ ಚ ವಿಪರ್ಯಯಃ ।
ಶ್ರೀಮತಃ ಶಿತಿಕಂಠಸ್ಯ ಕೃತ್ಯಂ ಹಿ ದುರತಿಕ್ರಮಮ್ ॥
ಅನುವಾದ
ಹೀಗೆ ನಾನು ನಿನಗೆ ಆ ಶೂಲದಿಂದ ತಪ್ಪಿಸಿಕೊಳ್ಳುವ ಉಪಾಯ ಹಾಗೂ ಆವಶ್ಯಕ ಮಾತುಗಳನ್ನು ತಿಳಿಸಿದ್ದೇನೆ. ಏಕೆಂದರೆ ಶ್ರೀಮಾನ್ ಭಗವಾನ್ ನೀಲಕಂಠನ ವಿಧಾನವನ್ನು ಮೀರುವುದು ಬಹಳ ಕಠಿಣವಾಗಿದೆ.॥31॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಅರವತ್ತಮೂರನೆಯ ಸರ್ಗ ಪೂರ್ಣವಾಯಿತು.॥63॥