[ಅರವತ್ತೆರಡನೆಯ ಸರ್ಗ]
ಭಾಗಸೂಚನಾ
ಶ್ರೀರಾಮನು ಋಷಿಗಳಿಂದ ಲವಣಾಸುರನ ಆಹಾರ - ವಿಹಾರಗಳ ವಿಷಯವನ್ನು ತಿಳಿದುಕೊಂಡುದು, ಲವಣಾಸುರನ ವಧೆಗಾಗಿ ಶತ್ರುಘ್ನನನ್ನು ನಿಯಮಿಸಿದುದು
ಮೂಲಮ್ - 1
ತಥೋಕ್ತೇ ತಾನೃಷೀನ್ರಾಮಃ ಪ್ರತ್ಯುವಾಚ ಕೃತಾಂಜಲಿಃ ।
ಕಿಮಾಹಾರಃ ಕಿಮಾಚಾರೋ ಲವಣಃ ಕ್ವ ಚ ವರ್ತತೇ ॥
ಅನುವಾದ
ಋಷಿಗಳು ಹೀಗೆ ಹೇಳಿದಾಗ ಶ್ರೀರಾಮಚಂದ್ರನು ಅವರಿಗೆ ಕೈಮುಗಿದು - ಲವಣಾಸುರನು ಏನು ತಿನ್ನುತ್ತಾನೆ? ಅವನ ಆಚಾರ - ವ್ಯವಹಾರ ಹೇಗಿದೆ? ಅವನೆಲ್ಲಿ ಇರುತ್ತಾನೆ? ಎಂದು ಕೇಳಿದನು.॥1॥
ಮೂಲಮ್ - 2
ರಾಘವಸ್ಯ ವಚಃ ಶ್ರುತ್ವಾ ಋಷಯಃ ಸರ್ವ ಏವ ತೇ ।
ತತೋ ನಿವೇದಯಾಮಾಸುರ್ಲವಣೋ ವವೃಧೇ ಯಥಾ ॥
ಅನುವಾದ
ಶ್ರೀರಾಮನ ಈ ಮಾತನ್ನು ಕೇಳಿ ಆ ಋಷಿಗಳೆಲ್ಲರೂ ಲವಣಾಸುರನ ಆಹಾರ-ವಿಹಾರಗಳ ಬಗ್ಗೆ ಎಷ್ಟು ತಿಳಿದಿತ್ತೋ ಅದೆಲ್ಲವನ್ನು ತಿಳಿಸಿದರು.॥2॥
ಮೂಲಮ್ - 3
ಆಹಾರಃ ಸರ್ವಸತ್ತ್ವಾನಿ ವಿಶೇಷೇಣ ಚ ತಾಪಸಾಃ ।
ಆಚಾರೋ ರೌದ್ರತಾ ನಿತ್ಯಂ ವಾಸೋ ಮಧುವನೇ ತಥಾ ॥
ಅನುವಾದ
ಅವರು ಹೇಳಿದರು - ಪ್ರಭೋ! ಅವನ ಆಹಾರ ಎಲ್ಲ ಪ್ರಾಣಿಗಳಾಗಿವೆ, ಆದರೆ ವಿಶೇಷವಾಗಿ ಅವನು ತಪಸ್ವೀ ಮುನಿಗಳನ್ನು ತಿನ್ನುತ್ತಾನೆ. ಅವನ ಆಚಾರ-ವ್ಯವಹಾರಗಳು ಕ್ರೂರ ಮತ್ತು ಭಯಾನಕ ವಾಗಿವೆ. ಅವನು ಸದಾ ಮಧುವನದಲ್ಲಿ ವಾಸಿಸುತ್ತಾನೆ.॥3॥
ಮೂಲಮ್ - 4
ಹತ್ವಾ ಬಹುಸಹಸ್ರಾಣಿ ಸಿಂಹವ್ಯಾಘ್ರಮೃಗಾಂಡಜಾನ್ ।
ಮಾನುಷಾಂಶ್ಚೈವ ಕುರುತೇ ನಿತ್ಯಮಾಹಾರಮಾಹ್ನಿಕಮ್ ॥
ಅನುವಾದ
ಅವನು ಪ್ರತಿದಿನವೂ ಎಷ್ಟೋ ಸಾವಿರ ಸಿಂಹ, ಹುಲಿ, ಮೃಗ, ಪಕ್ಷಿ ಮತ್ತು ಮನುಷ್ಯರನ್ನು ಕೊಂದು ತಿನ್ನುತ್ತಾನೆ.॥4॥
ಮೂಲಮ್ - 5
ತತೋಽಂತರಾಣಿ ಸತ್ತ್ವಾನಿ ಖಾದತೇ ಸ ಮಹಾಬಲಃ ।
ಸಂಹಾರೇ ಸಮನುಪ್ರಾಪ್ತೇ ವ್ಯಾದಿತಾಸ್ಯ ಇವಾಂತಕಃ ॥
ಅನುವಾದ
ಸಂಹಾರ ಕಾಲ ಬಂದಾಗ ಬಾಯಿ ತೆರೆದು ನಿಂತ ಯಮರಾಜನಂತೆ ಆ ಮಹಾಬಲಿ ಅಸುರನು ಬೇರೆ-ಬೇರೆ ಜೀವಿಗಳನ್ನು ತಿನ್ನುತ್ತಾ ಇರುತ್ತಾನೆ.॥5॥
ಮೂಲಮ್ - 6
ತಚ್ಛ್ರುತ್ವಾ ರಾಘವೋ ವಾಕ್ಯಮುವಾಚ ಸ ಮಹಾಮುನೀಮ್ ।
ಘಾತಯಿಷ್ಯಾಮಿ ತದ್ರಕ್ಷೋ ವ್ಯಪಗಚ್ಛತು ವೋ ಭಯಮ್ ॥
ಅನುವಾದ
ಅವರ ಮಾತನ್ನು ಕೇಳಿ ಶ್ರೀರಾಮನು ಆ ಮಹಾಮುನಿಗಳಲ್ಲಿ ಹೇಳಿದನು - ಮಹರ್ಷಿಗಳೇ! ನಾನು ಆ ರಾಕ್ಷಸನನ್ನು ಕೊಲ್ಲಿಸುವೆನು. ನಿಮ್ಮ ಭಯ ದೂರವಾಗಲಿ.॥6॥
ಮೂಲಮ್ - 7
ಪ್ರತಿಜ್ಞಾಯ ತಥಾ ತೇಷಾಂ ಮುನೀನಾಮುಗ್ರತೇಜಸಾಮ್ ।
ಸ ಭ್ರಾತೃನ್ಸಹಿತಾನ್ ಸರ್ವಾನುವಾಚ ರಘುನಂದನಃ ॥
ಅನುವಾದ
ಹೀಗೆ ಆ ಉಗ್ರ ತೇಜಸ್ವೀ ಮುನಿಗಳ ಬಳಿ ಪ್ರತಿಜ್ಞೆ ಮಾಡಿ ರಘುನಂದನ ಶ್ರೀರಾಮನು ಅಲ್ಲಿ ನೆರೆದ ತನ್ನ ಎಲ್ಲ ಸಹೋದರರಲ್ಲಿ ಕೇಳಿದನು.॥7॥
ಮೂಲಮ್ - 8
ಕೋ ಹಂತಾ ಲವಣಂ ವೀರಃ ಕಸ್ಯಾಂಶಃ ಸ ವಿಧೀಯತಾಮ್ ।
ಭರತಸ್ಯ ಮಹಾಬಾಹೋಃ ಶತ್ರುಘ್ನಸ್ಯ ಚ ಧೀಮತಃ ॥
ಅನುವಾದ
ತಮ್ಮಂದಿರೇ! ಲವಣನನ್ನು ಯಾವ ವೀರನು ಕೊಲ್ಲುವನು? ಅದು ಮಹಾಬಾಹು ಭರತ ಅಥವಾ ಬುದ್ಧಿವಂತ ಶತ್ರುಘ್ನನ ಪಾಲಿಗೆ ಸೇರುವುದು.॥8॥
ಮೂಲಮ್ - 9
ರಾಘವೇಣೈವಮುಕ್ತಸ್ತು ಭರತೋ ವಾಕ್ಯಮಬ್ರವೀತ್ ।
ಅಹಮೇನಂ ವಧಿಷ್ಯಾಮಿ ಮಮಾಂಶಃ ಸ ವಿಧೀಯತಾಮ್ ॥
ಅನುವಾದ
ರಘುನಾಥನು ಹೀಗೆ ಕೇಳಿದಾಗ ಭರತನು ಹೇಳಿದನು - ಅಣ್ಣ! ನಾನು ಈ ಲವಣಾಸುರನನ್ನು ವಧಿಸುವೆನು. ಇದು ನನ್ನ ಪಾಲಿಗೆ ಇರಲಿ.॥9॥
ಮೂಲಮ್ - 10
ಭರತಸ್ಯ ವಚಃಶ್ರುತ್ವಾ ಧೈರ್ಯಶೌರ್ಯಸಮನ್ವಿತಮ್ ।
ಲಕ್ಷ್ಮಣಾವರಜಸ್ತಸ್ಥೌ ಹಿತ್ವಾ ಸೌವರ್ಣಮಾಸನಮ್ ॥
ಮೂಲಮ್ - 11
ಶತ್ರುಘ್ನಸ್ತ್ವಬ್ರವೀದ್ವಾಕ್ಯಂ ಪ್ರಣಿಪತ್ಯ ನರಾಧಿಪಮ್ ।
ಕೃತಕರ್ಮಾ ಮಹಾಬಾಹುರ್ಮಧ್ಯಮೋ ರಘುನಂದನ ॥
ಅನುವಾದ
ಭರತನ ಈ ಧೈರ್ಯ ಮತ್ತು ಶೌರ್ಯಪೂರ್ಣ ಮಾತನ್ನು ಕೇಳಿ, ಶತ್ರುಘ್ನನು ಸ್ವರ್ಣ ಸಿಂಹಾಸನವನ್ನು ಬಿಟ್ಟು ನಿಂತು ಮಹಾರಾಜ ಶ್ರೀರಾಮನಿಗೆ ವಂದಿಸಿ ಹೇಳಿದನು - ರಘುನಂದನ! ಮಹಾಬಾಹು ಭರತನು ಬಹಳ ಕಾರ್ಯ ಮಾಡಿರುವನು.॥10-11॥
ಮೂಲಮ್ - 12
ಆರ್ಯೇಣ ಹಿ ಪುರಾ ಶೂನ್ಯಾ ತ್ವಯೋಧ್ಯಾ ಪರಿಪಾಲಿತಾ ।
ಸಂತಾಪಂ ಹೃದಯೇ ಕೃತ್ವಾ ಆರ್ಯಸ್ಯಾಗಮನಂ ಪ್ರತಿ ॥
ಅನುವಾದ
ಮೊದಲು ಅಯೋಧ್ಯೆಯು ಬರಿದಾಗಿದ್ದಾಗ ನಿಮ್ಮ ಆಗಮನದ ಕಾಲದವರೆಗೆ ಹೃದಯದಲ್ಲಿ ಅತ್ಯಂತ ಸಂತಾಪಪಟ್ಟು ಇವನು ಅಯೋಧ್ಯಾಪುರಿಯನ್ನು ಪಾಲಿಸಿದ್ದನು.॥12॥
ಮೂಲಮ್ - 13½
ದುಃಖಾನಿ ಚ ಬಹೂನೀಹ ಅನುಭೂತಾನಿ ಪಾರ್ಥಿವ ।
ಶಯಾನೋ ದುಃಖಶಯ್ಯಾಸು ನಂದಿಗ್ರಾಮೇ ಮಹಾಯಶಾಃ ॥
ಫಲಮೂಲಾಶನೋ ಭೂತ್ವಾ ಜಟೀ ಚೀರಧರಸ್ತಥಾ ।
ಅನುವಾದ
ಪೃಥಿವಿನಾಥನೇ! ಮಹಾಯಶಸ್ವೀ ಭರತನು ನಂದಿಗ್ರಾಮದಲ್ಲಿ ದುಃಖಕರ ಒರಟಾದ ಶಯ್ಯೆಯಲ್ಲಿ ಮಲಗುತ್ತಾ ಬಹಳ ದುಃಖ ಭೋಗಿಸಿರುವನು. ಇವನು ಫಲ-ಮೂಲ ತಿಂದು ಇರುತ್ತಿದ್ದನು ಮತ್ತು ತಲೆಯ ಮೇಲೆ ಜಟೆಯನ್ನು ಧರಿಸಿ ನಾರುಮಡಿಯನ್ನು ಧರಿಸುತ್ತಿದ್ದನು.॥13½॥
ಮೂಲಮ್ - 14½
ಅನುಭೂಯೇದೃಶಂ ದುಃಖಮೇಷ ರಾಘವನಂದನಃ ॥
ಪ್ರೇಷ್ಯೇ ಮಯಿ ಸ್ಥಿತೇ ರಾಜನ್ನ ಭೂಯಃ ಕ್ಲೇಶಮಾಪ್ನುಯಾತ್ ।
ಅನುವಾದ
ಮಹಾರಾಜಾ! ಇಂತಿಂಥ ದುಃಖಗಳನ್ನು ಭೋಗಿಸಿ ಈ ರಘುಕುಲನಂದನ ಭರತನು ಸೇವಕನಾದ ನಾನಿರುವಾಗ ಈಗ ಪುನಃ ಹೆಚ್ಚು ಕ್ಲೇಶಪಡಬಾರದು.॥14½॥
ಮೂಲಮ್ - 15
ತಥಾ ಬ್ರುವತಿ ಶತ್ರುಘ್ನೇ ರಾಘವಃ ಪುನರಬ್ರವೀತ್ ॥
ಮೂಲಮ್ - 16
ಏವಂ ಬ್ರುವತಿ ಕಾಕುತ್ಸ್ಥ ಕ್ರಿಯತಾಂ ಮಮ ಶಾಸನಮ್ ।
ರಾಜ್ಯೇ ತ್ವಾಮಭಿಷೇಕ್ಷ್ಯಾಮಿ ಮಧೋಸ್ತು ನಗರೇ ಶುಭೇ ॥
ಅನುವಾದ
ಶತ್ರುಘ್ನನು ಹೀಗೆ ಹೇಳಿದಾಗ ಶ್ರೀರಾಮನು ಪುನಃ ಹೇಳಿದನು-ಕಾಕುತ್ಸ್ಥನೇ! ನೀನು ಹೇಳಿದಂತೆ ಆಗಲಿ. ನೀನೇ ನನ್ನ ಆದೇಶವನ್ನು ಪಾಲಿಸು. ನಾನು ನಿನಗೆ ಮಧುವಿನ ಸುಂದರ ನಗರದಲ್ಲಿ ರಾಜನಾಗಿ ಪಟ್ಟಾಭಿಷೇಕ ಮಾಡುವೆ.॥15-16॥
ಮೂಲಮ್ - 17
ನಿವೇಶಯ ಮಹಾಬಾಹೋ ಭರತಂ ಯದ್ಯವೇಕ್ಷಸೇ ।
ಶೂರಸ್ತ್ವಂ ಕೃತವಿದ್ಯಶ್ಚ ಸಮರ್ಥಶ್ಚ ನಿವೇಶನೇ ॥
ಅನುವಾದ
ಮಹಾಬಾಹೋ! ನೀನು ಭರತನಿಗೆ ಕ್ಲೇಶ ಕೊಡಲು ಬಯಸುವುದಿಲ್ಲವಾದರೆ ಅವನು ಇಲ್ಲೇ ಇರಲಿ. ನೀನು ಶೂರ-ವೀರನಾಗಿರುವೆ, ಅಸ್ತ್ರವಿದ್ಯೆಯನ್ನು ತಿಳಿದಿರುವೆ, ನಿನ್ನಲ್ಲಿ ನೂತನ ನಗರ ನಿರ್ಮಿಸುವ ಶಕ್ತಿ ಇದೆ.॥17॥
ಮೂಲಮ್ - 18½
ನಗರಂ ಯಮುನಾಜುಷ್ಟಂ ತಥಾ ಜನಪದಾನ್ ಶುಭಾನ್ ।
ಯೋ ಹಿ ವಂಶಂ ಸಮುತ್ಪಾಟ್ಯ ಪಾರ್ಥಿವಸ್ಯ ನಿವೇಶನೇ ॥
ನ ವಿಧತ್ತೇ ನೃಪಂ ತತ್ರ ನರಕಂ ಸ ಹಿ ಗಚ್ಛತಿ ।
ಅನುವಾದ
ನೀನು ಯಮುನಾ ತೀರದಲ್ಲಿ ಸುಂದರ ನಗರವನ್ನು ನೆಲೆಗೊಳಿಸಬಲ್ಲೆ. ಉತ್ತಮೋತ್ತಮ ಸಾಮ್ರಾಜ್ಯವನ್ನು ಸ್ಥಾಪಿಸಬಲ್ಲೆ. ಯಾರು ಯಾವುದಾದರೂ ರಾಜವಂಶವನ್ನು ನಾಶಮಾಡಿ ಅವನ ರಾಜಧಾನಿಯಲ್ಲಿ ಬೇರೆ ರಾಜನನ್ನು ಸ್ಥಾಪಿಸುವನೋ ಅವನು ನರಕಕ್ಕೆ ಹೋಗುತ್ತಾನೆ.॥18½॥
ಮೂಲಮ್ - 19
ಸ ತ್ವಂ ಹತ್ವಾ ಮಧುಸುತಂ ಲವಣಂಪಾಪನಿಶ್ಚಯಮ್ ॥
ಮೂಲಮ್ - 20
ರಾಜ್ಯಂ ಪ್ರಶಾಧಿ ಧರ್ಮೇಣ ವಾಕ್ಯಂ ಮೇಯದ್ಯವೇಕ್ಷಸೇ ।
ಉತ್ತರಂ ಚ ನ ವಕ್ತವ್ಯಂ ಶೂರವಾಕ್ಯಾಂತರೇ ಮಮ ॥
ಮೂಲಮ್ - 21
ಬಾಲೇನ ಪೂರ್ವಜಸ್ಯಾಜ್ಞಾ ಕರ್ತವ್ಯಾ ನಾತ್ರ ಸಂಶಯಃ ।
ಅಭಿಷೇಕಂ ತು ಕಾಕುತ್ಸ್ಥ ಪ್ರತೀಚ್ಛಸ್ವ ಮಯೋದ್ಯತಮ್ ।
ವಸಿಷ್ಠ ಪ್ರಮುಖೈರ್ವಿಪ್ರೈರ್ವಿಧಿಮಂತ್ರಪುರಸ್ಕೃತಮ್ ॥
ಅನುವಾದ
ಆದ್ದರಿಂದ ನೀನು ಮಧುವಿನ ಪುತ್ರ ಪಾಪಾತ್ಮಾ ಲವಣಾಸುರನನ್ನು ವಧಿಸಿ, ಧರ್ಮಪೂರ್ವಕ ಅಲ್ಲಿಯ ರಾಜ್ಯವನ್ನು ಆಳು. ಶೂರ ವೀರನೇ! ನೀನು ನನ್ನ ಮಾತನ್ನು ಒಪ್ಪುವೆಯಾದರೆ ನಾನು ಹೇಳುವುದನ್ನು ಮರು ಮಾತನಾಡದೆ ಸ್ವೀಕಾರ ಮಾಡು. ನಡುವೆ ಯಾವುದೇ ಉತ್ತರ ನನಗೆ ಕೊಡಬಾರದು. ಬಾಲಕನು ಅವಶ್ಯವಾಗಿ ಹಿರಿಯರ ಮಾತನ್ನು ಪಾಲಿಸಬೇಕು. ಶತ್ರುಘ್ನನೇ! ವಸಿಷ್ಠಾದಿ ಮುಖ್ಯ-ಮುಖ್ಯ ಬ್ರಾಹ್ಮಣರು ವಿಧಿ ಮತ್ತು ಮಂತ್ರೋಚ್ಚಾರಣದೊಂದಿಗೆ ನಿನಗೆ ಪಟ್ಟಾಭಿಷೇಕ ಮಾಡುವರು. ನನ್ನ ಆಜ್ಞೆಯಂತೆ ದೊರಕಿದ ಈ ರಾಜ್ಯಾಭಿಷೇಕವನ್ನು ನೀನು ಸ್ವೀಕರಿಸು.॥19-21॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಅರವತ್ತೆರಡನೆಯ ಸರ್ಗ ಪೂರ್ಣವಾಯಿತು. ॥62॥