०६३ लवण-राज्याभिषेकादि

[ಅರವತ್ತೊಂದನೆಯ ಸರ್ಗ]

ಭಾಗಸೂಚನಾ

ಚ್ಯವನರು ಮಧುವಿಗೆ ಹಾಗೂ ಲವಣಾಸುರರಿಗೆ ಈಶ್ವರನಿಂದ ಪ್ರಾಪ್ತವಾದ ವರದಾನವನ್ನು ತಿಳಿಸಿ, ಅವರ ಅತ್ಯಾಚಾರವನ್ನು ವರ್ಣಿಸಿ, ಅವರ ಪೀಡೆಯನ್ನು ತಿಳಿಸಿ, ಅದರಿಂದ ತಮ್ಮನ್ನು ರಕ್ಷಿಸಬೇಕೆಂದು ಶ್ರೀರಾಮನಲ್ಲಿ ಪ್ರಾರ್ಥಿಸಿದುದು

ಮೂಲಮ್ - 1

ಬ್ರುವದ್ಭಿರೇವಮೃಷಿಭಿಃ ಕಾಕುತ್ಸ್ಥೋ ವಾಕ್ಯಮಬ್ರವೀತ್ ।
ಕಿಂ ಕಾರ್ಯಂ ಬ್ರೂತ ಮುನಯೋ ಭಯಂ ತಾವದಪೈತು ವಃ ॥

ಅನುವಾದ

ಹೀಗೆ ಹೇಳುತ್ತಿರುವ ಋಷಿಗಳಿಂದ ಪ್ರೇರಿತನಾಗಿ ಶ್ರೀರಾಮನು ಹೇಳಿದನು - ಮಹರ್ಷಿಗಳೇ! ಹೇಳಿ, ನಿಮ್ಮ ಯಾವ ಕಾರ್ಯವನ್ನು ನಾನು ಸಿದ್ಧಗೊಳಿಸಬೇಕು? ನಿಮ್ಮ ಭಯ ಈಗಲೇ ದೂರವಾಗಬೇಕು.॥1॥

ಮೂಲಮ್ - 2

ತಥಾ ಬ್ರುವತಿ ಕಾಕುತ್ಸ್ಥೇ ಭಾರ್ಗವೋವಾಕ್ಯಮಬ್ರವೀತ್ ।
ಭಯಾನಾಂ ಶೃಣು ಯನ್ಮೂಲಂ ದೇಶಸ್ಯ ಚ ನರೇಶ್ವರ ॥

ಅನುವಾದ

ಶ್ರೀರಘು ನಾಥನು ಹೀಗೆ ಹೇಳಿದಾಗ ಭೃಗುಪುತ್ರ ಚ್ಯವನರು ಹೇಳಿದರು - ನರೇಶ್ವರ ! ಇಡೀ ದೇಶದ ಮೇಲೆ ಹಾಗೂ ನಮ್ಮ ಮೇಲೆ ಪ್ರಾಪ್ತವಾದ ಮಹಾಭಯದ ಮೂಲ ಕಾರಣವನ್ನು ಕೇಳು.॥2॥

ಮೂಲಮ್ - 3

ಪೂರ್ವಂ ಕೃತಯುಗೇ ರಾಜನ್ ದೈತೇಯಃ ಸುಮಹಾಮತಿಃ ।
ಲೋಲಾಪುತ್ರೋಽಭವಜ್ಜ್ಯೇಷ್ಠೋ ಮಧುರ್ನಾಮ ಮಹಾಸುರಃ ॥

ಅನುವಾದ

ರಾಜನೇ! ಹಿಂದೆ ಕೃತಯುಗದಲ್ಲಿ ಒಬ್ಬ ದೊಡ್ಡ ಬುದ್ಧಿವಂತ ದೈತ್ಯನಿದ್ದನು. ಅವನು ಲೋಲಾನ ಜ್ಯೇಷ್ಠಪುತ್ರನಾಗಿದ್ದನು. ಆ ಮಹಾ ಅಸುರನ ಹೆಸರು ಮಧು ಎಂದಿತ್ತು.॥3॥

ಮೂಲಮ್ - 4

ಬ್ರಹ್ಮಣ್ಯಶ್ಚ ಶರಣ್ಯಶ್ಚ ಬುದ್ಧ್ಯಾ ಚ ಪರಿನಿಷ್ಠಿತಃ ।
ಸುರೈಶ್ಚ ಪರಮೋದಾರೈಃ ಪ್ರೀತಿಸ್ತಸ್ಯಾತುಲಾಭವತ್ ॥

ಅನುವಾದ

ಅವನು ಬಹಳ ಬ್ರಾಹ್ಮಣಭಕ್ತ ಮತ್ತು ಶರಣಾಗತ ವತ್ಸಲನಾಗಿದ್ದನು. ಅವನ ಬುದ್ಧಿಯು ಸುಸ್ಥಿರವಾಗಿತ್ತು. ಅತ್ಯಂತ ಉದಾರ ಸ್ವಭಾವವುಳ್ಳ ದೇವತೆಗಳೊಂದಿಗೂ ಅವನಿಗೆ ಗಾಢವಾದ ಮೈತ್ರಿ ಇತ್ತು. ಅದರಲ್ಲಿ ಅವನಿಗೆ ತುಲನೆಯೇ ಇರಲಿಲ್ಲ.॥4॥

ಮೂಲಮ್ - 5

ಸ ಮಧುರ್ವೀರ್ಯಸಂಪನ್ನೋ ಧರ್ಮಂ ಚಸುಸಮಾಹಿತಃ ।
ಬಹುಮಾನಾಚ್ಚ ರುದ್ರೇಣ ದತ್ತಸ್ತಸ್ಯಾದ್ಭುತೋ ವರಃ ॥

ಅನುವಾದ

ಮಧು ಬಲ ವಿಕ್ರಮಗಳಿಂದ ಸಂಪನ್ನನಾಗಿದ್ದು, ಏಕಾಗ್ರಚಿತ್ತನಾಗಿ ಧರ್ಮಾನುಷ್ಠಾನದಲ್ಲಿ ತೊಡಗಿದ್ದನು. ಅವನು ಭಗವಾನ್ ಶಿವನ ಆರಾಧನೆ ಮಾಡಿ, ಅವನಿಂದ ಅದ್ಭುತ ವರವನ್ನು ಪಡೆದಿದ್ದನು.॥5॥

ಮೂಲಮ್ - 6

ಶೂಲಂ ಶೂಲಾದ್ವಿನಿಷ್ಕೃಷ್ಯ ಮಹಾವೀರ್ಯಂ ಮಹಾಪ್ರಭಮ್ ।
ದದೌ ಮಹಾತ್ಮಾ ಸುಪ್ರೀತೋ ವಾಕ್ಯಂಚೈತದುವಾಚ ಹ ॥

ಅನುವಾದ

ಮಹಾತ್ಮಾ ಭಗವಾನ್ ಶಿವನು ಅತ್ಯಂತ ಪ್ರಸನ್ನನಾಗಿ ತನ್ನ ಶೂಲದಿಂದ ಒಂದು ಹೊಳೆಯುವ ಪರಮಶಕ್ತಿಶಾಲಿ ಶೂಲವನ್ನು ಪ್ರಕಟಿಸಿ ಮಧುವಿಗೆ ಕೊಟ್ಟು ಹೇಳಿದನು.॥6॥

ಮೂಲಮ್ - 7

ತ್ವಯಾಯಮತುಲೋ ಧರ್ಮೋ ಮತ್ಪ್ರಸಾದಕರಃ ಕೃತಃ ।
ಪ್ರೀತ್ಯಾ ಪರಮಯಾ ಯುಕ್ತೋ ದದಾಮ್ಯಾಯುಧಮುತ್ತಮಮ್ ॥

ಅನುವಾದ

ನೀನು ಅನುಪಮ ಧರ್ಮವನ್ನಾಚರಿಸಿ ನನ್ನನ್ನು ಪ್ರಸನ್ನಗೊಳಿಸಿರುವೆ; ಆದ್ದರಿಂದ ನಾನು ಸಂತೋಷದಿಂದ ನಿನಗೆ ಈ ಉತ್ತಮ ಆಯುಧವನ್ನು ಕೊಡುತ್ತಿದ್ದೇನೆ.॥7॥

ಮೂಲಮ್ - 8

ಯಾವತ್ಸುರೈಶ್ಚ ವಿಪ್ರೈಶ್ಚ ನ ವಿರುಧ್ಯೇರ್ಮಹಾಸುರ ।
ತಾವಚ್ಛೂಲಂ ತವೇದಂ ಸ್ಯಾದನ್ಯಥಾ ನಾಶಮೇಷ್ಯತಿ ॥

ಅನುವಾದ

ಮಹಾ ಅಸುರನೇ! ನೀನು ಬ್ರಾಹ್ಮಣರಿಗೆ ಮತ್ತು ದೇವತೆಗಳಿಗೆ ವಿರೋಧ ಮಾಡುವುದಿಲ್ಲವೋ ಅಲ್ಲಿಯವರೆಗೆ ಈ ಶೂಲ ನಿನ್ನ ಬಳಿ ಇರುವುದು. ಇಲ್ಲದಿದ್ದರೆ ಅದೃಶ್ಯವಾಗಬಹುದು.॥8॥

ಮೂಲಮ್ - 9

ಯಶ್ಚ ತ್ವಾಮಭಿಯುಂಜೀತ ಯುದ್ಧಾಯ ವಿಗತಜ್ವರಃ ।
ತಂ ಶೂಲೋ ಭಸ್ಮಸಾತ್ಕೃತ್ವಾ ಪುನರೇಷ್ಯತಿತೇ ಕರಮ್ ॥

ಅನುವಾದ

ನಿಃಶಂಕನಾಗಿ ನಿನ್ನ ಮುಂದೆ ಯುದ್ಧಕ್ಕೆ ಬರುವ ಪುರುಷನನ್ನು ಭಸ್ಮಗೊಳಿಸಿ ಪುನಃ ನಿನ್ನ ಕೈಗೆ ಬರುವುದು ಈ ಶೂಲವು.॥9॥

ಮೂಲಮ್ - 10

ಏವಂ ರುದ್ರಾದ್ವರಂ ಲಬ್ಧ್ವಾ ಭೂಯ ಏವ ಮಹಾಸುರಃ ।
ಪ್ರಣಿಪತ್ಯ ಮಹಾದೇವಂ ವಾಕ್ಯಮೇತದುವಾಚ ಹ ॥

ಅನುವಾದ

ಭಗವಾನ್ ರುದ್ರನಿಂದ ಇಂತಹ ವರವನ್ನು ಪಡೆದ ಆ ಮಹಾಅಸುರನು ಮಹಾದೇವನಿಗೆ ವಂದಿಸಿ ಮತ್ತೆ ಹೀಗೆ ಹೇಳಿದನು.॥10॥

ಮೂಲಮ್ - 11

ಭಗವನ್ಮಮ ವಂಶಸ್ಯ ಶೂಲಮೇತದನುತ್ತಮಮ್ ।
ಭವೇತ್ತು ಸತತಂ ದೇವ ಸುರಾಣಾಮೀಶ್ವರೋ ಹ್ಯಸಿ ॥

ಅನುವಾದ

ಭಗವನ್ ದೇವಾಧಿದೇವನೇ! ನೀನು ಸಮಸ್ತ ದೇವತೆಗಳ ಒಡೆಯನಾಗಿರುವೆ, ಆದ್ದರಿಂದ ಈ ಪರಮಶೂಲವು ನನ್ನ ವಂಶಜರಲ್ಲಿಯೂ ಸದಾ ಇರಬೇಕೆಂದು ಪ್ರಾರ್ಥಿಸುತ್ತಿದ್ದೇನೆ.॥11॥

ಮೂಲಮ್ - 12

ತಂ ಬ್ರುವಾಣಂ ಮಧುಂ ದೇವಃ ಸರ್ವಭೂತಪತಿಃಶಿವಃ ।
ಪ್ರತ್ಯುವಾಚ ಮಹಾದೇವೋ ನೈತದೇವಂ ಭವಿಷ್ಯತಿ ॥

ಅನುವಾದ

ಹೀಗೆ ಹೇಳಿದ ಆ ಮಧುವಿನಲ್ಲಿ ಸಮಸ್ತ ಪ್ರಾಣಿಗಳ ಅಧಿಪತಿ ಮಹಾದೇವ ಭಗವಾನ್ ಶಿವನು ಹೀಗೆ ಹೇಳಿದನು - ಹೀಗಾಗಲಾರದು.॥12॥

ಮೂಲಮ್ - 13

ಮಾ ಭೂತ್ತೇ ವಿಫಲಾ ವಾಣೀ ಮತ್ಪ್ರಸಾದಕೃತಾ ಶುಭಾ ।
ಭವತಃ ಪುತ್ರಮೇಕಂ ತು ಶೂಲಮೇತದ್ ಭವಿಷ್ಯತಿ ॥

ಅನುವಾದ

ಆದರೆ ಪ್ರಸನ್ನನಾಗಿ ನಾನು ಹೇಳಿದ ಶುಭವಾಣಿ ನಿಷ್ಫಲವಾಗಲಾರದು; ಅದಕ್ಕಾಗಿ ವರವನ್ನು ಕೊಡುತ್ತೇನೆ - ನಿನ್ನ ಒಬ್ಬ ಪುತ್ರನ ಬಳಿ ಈ ಶೂಲ ಇರುವುದು.॥13॥

ಮೂಲಮ್ - 14

ಯಾವತ್ಕರಸ್ಥಃ ಶೂಲೋಽಯಂ ಭವಿಷ್ಯತಿ ಸುತಸ್ಯ ತೇ ।
ಅವಧ್ಯಃ ಸರ್ವಭೂತಾನಾಂ ಶೂಲಹಸ್ತೋ ಭವಿಷ್ಯತಿ ॥

ಅನುವಾದ

ಈ ಶೂಲವು ನಿನ್ನ ಪುತ್ರನ ಕೈಯಲ್ಲಿ ಇರುವತನಕ ಅವನು ಸಮಸ್ತ ಪ್ರಾಣಿಗಳಿಗೆ ಅವಧ್ಯನಾಗಿ ಇರುವನು.॥14॥

ಮೂಲಮ್ - 15

ಏವಂ ಮಧುರ್ವರಂ ಲಬ್ಧ್ವಾ ದೇವಾತ್ ಸುಮಹದದ್ಭುತಮ್ ।
ಭವನಂ ಸೋಽಸುರಶ್ರೇಷ್ಠಃ ಕಾರಯಾಮಾಸ ಸುಪ್ರಭಮ್ ॥

ಅನುವಾದ

ಮಹಾದೇವನಿಂದ ಇಂತಹ ಅತ್ಯಂತ ಅದ್ಭುತ ವರವನ್ನು ಪಡೆದ ಅಸುರಶ್ರೇಷ್ಠ ಮಧುವು ಒಂದು ಸುಂದರವಾದ, ಅತ್ಯಂತ ಪ್ರಕಾಶಮಾನ ಭವನವನ್ನು ನಿರ್ಮಿಸಿದ್ದನು.॥15॥

ಮೂಲಮ್ - 16

ತಸ್ಯ ಪತ್ನೀ ಮಹಾಭಾಗಾ ಪ್ರಿಯಾ ಕುಂಭೀನಸೀತಿಯಾ ।
ವಿಶ್ವಾವಸೋರಪತ್ಯಂ ಸಾಪ್ಯನಲಾಯಾಂ ಮಹಾಪ್ರಭಾ ॥

ಅನುವಾದ

ಅವನ ಪ್ರಿಯಪತ್ನಿ ವಿಶ್ವಾವಸುವಿನ ಪುತ್ರೀ ಮಹಾಭಾಗಾ ಕುಂಭೀನಸಿಯಾಗಿದ್ದಳು. ಅವಳು ಅನಲೆಯಲ್ಲಿ ಹುಟ್ಟಿದ್ದಳು, ಕುಂಭೀನಸಿಯು ಅತ್ಯಂತ ಕಾಂತಿಮತಿಯಾಗಿದ್ದಳು.॥16॥

ಮೂಲಮ್ - 17

ತಸ್ಯಾಃ ಪುತ್ರೋ ಮಹಾವೀರ್ಯೋ ಲವಣೋ ನಾಮ ದಾರುಣಃ ।
ಬಾಲ್ಯಾತ್ಪ್ರಭೃತಿ ದುಷ್ಟಾತ್ಮಾ ಪಾಪಾನ್ಯೇವ ಸಮಾಚರತ್ ॥

ಅನುವಾದ

ಅವಳ ಪುತ್ರ ಮಹಾಪರಾಕ್ರಮಿ ಲವಣಾಸುರನಾಗಿದ್ದನು. ಅವನ ಸ್ವಭಾವ ತುಂಬಾ ಭಯಂಕರವಾಗಿತ್ತು. ಆ ದುಷ್ಟಾತ್ಮಾ ಬಾಲ್ಯದಿಂದಲೇ ಕೇವಲ ಪಾಪಾಚರಣದಲ್ಲಿ ಪ್ರವೃತ್ತನಾಗಿದ್ದನು.॥17॥

ಮೂಲಮ್ - 18

ತಂ ಪುತ್ರಂ ದುರ್ವಿನೀತಂ ತು ದೃಷ್ಟ್ವಾ ಕ್ರೋಧಸಮನ್ವಿತಃ ।
ಮಧುಃ ಸ ಕೋಪಮಾಪೇದೇ ನ ಚೈನಂ ಕಿಂಚಿದಬ್ರವೀತ್ ॥

ಅನುವಾದ

ತನ್ನ ಪುತ್ರನು ಉದ್ಧಟನಾದುದನ್ನು ನೋಡಿ ಮಧುವು ಕ್ರೋಧದಿಂದ ಉರಿಯುತ್ತಾ ಇದ್ದನು. ಮಗನ ದುಷ್ಟತೆಯನ್ನು ನೋಡಿ ಅವನಿಗೆ ಬಹಳ ಶೋಕವಾಯಿತು, ಆದರೂ ಅವನು ಇವನಲ್ಲಿ ಏನೂ ಹೇಳಲಿಲ್ಲ.॥18॥

ಮೂಲಮ್ - 19

ನ ವಿಹಾಯ ಇಮಂ ಲೋಕಂ ಪ್ರವಿಷ್ಟೋ ವರುಣಾಲಯಮ್ ।
ಶೂಲಂ ನಿವೇಶ್ಯ ಲವಣೇ ವರಂ ತಸ್ಮೈ ನ್ಯವೇದಯತ್ ॥

ಅನುವಾದ

ಕೊನೆಗೆ ಅವನು ಆ ದೇಶವನ್ನೇ ಬಿಟ್ಟು ಸಮುದ್ರದಲ್ಲಿ ವಾಸಿಸತೊಡಗಿದನು. ಹೋಗುವಾಗ ಅವನು ಆ ಶೂಲವನ್ನು ಮಗನಿಗೆ ಕೊಟ್ಟು, ವರದ ವೃತ್ತಾಂತವನ್ನು ತಿಳಿಸಿದನು.॥19॥

ಮೂಲಮ್ - 20

ಸ ಪ್ರಭಾವೇಣ ಶೂಲಸ್ಯ ದೌರಾತ್ಮ್ಯೇನಾತ್ಮನಸ್ತಥಾ ।
ಸಂತಾಪಯತಿ ಲೋಕಾಂಸ್ತ್ರೀನ್ ವಿಶೇಷೇಣ ಚ ತಾಪಸಾನ್ ॥

ಅನುವಾದ

ಈಗ ಆ ದುಷ್ಟನು ಶೂಲದ ಪ್ರಭಾವದಿಂದ ಹಾಗೂ ತನ್ನ ದುಷ್ಟತೆಯಿಂದ ಮೂರು ಲೋಕಗಳಲ್ಲಿ, ವಿಶೇಷವಾಗಿ ತಪಸ್ವೀ ಮುನಿಗಳನ್ನು ಪೀಡಿಸತೊಡಗಿದನು.॥20॥

ಮೂಲಮ್ - 21

ಏವಂಪ್ರಭಾವೋ ಲವಣಃ ಶೂಲಂ ಚೈವ ತಥಾವಿಧಮ್ ।
ಶ್ರುತ್ವಾ ಪ್ರಮಾಣಂ ಕಾಕುತ್ಸ್ಥ ತ್ವಂ ಹಿ ನಃ ಪರಮಾ ಗತಿಃ ॥

ಅನುವಾದ

ಆ ಲವಣಾಸುರನಲ್ಲಿ ಅಂತಹ ಪ್ರಭಾವ ಮತ್ತು ಅವನ ಬಳಿ ಅಂತಹ ಶಕ್ತಿಶಾಲೀ ಶೂಲವೂ ಇದೆ. ರಘುನಂದನ! ಇದೆಲ್ಲವನ್ನು ಕೇಳಿ ಯಥೋಚಿತ ಕಾರ್ಯ ಮಾಡಲು ನೀನೇ ನಮಗೆ ಪರಮಗತಿಯಾಗಿರುವೆ.॥21॥

ಮೂಲಮ್ - 22

ಬಹವಃ ಪಾರ್ಥಿವಾ ರಾಮ ಭಯಾರ್ತೈರ್ಋಷಿಭಿಃ ಪುರಾ ।
ಅಭಯಂ ಯಾಚಿತಾ ವೀರ ತ್ರಾತಾರಂ ನ ಚ ವಿದ್ಮಹೇ ॥

ಅನುವಾದ

ಶ್ರೀರಾಮ! ಇಂದಿನಿಂದ ಮೊದಲು ಭಯಗೊಂಡ ಋಷಿಗಳು ಅನೇಕ ರಾಜರ ಬಳಿಗೆ ಹೋಗಿ ಅಭಯದ ಭಿಕ್ಷೆ ಬೇಡಿದ್ದರು. ಆದರೂ ವೀರ ರಾಘವ! ಇಷ್ಟವರೆಗೆ ಯಾರೂ ರಕ್ಷಕರು ಸಿಗಲಿಲ್ಲ.॥22॥

ಮೂಲಮ್ - 23

ತೇ ವಯಂ ರಾವಣಂ ಶ್ರುತ್ವಾ ಹತಂ ಸಬಲವಾಹನಮ್ ।
ತ್ರಾತಾರಂ ವಿದ್ಮಹೇ ತಾತ ನಾನ್ಯಂ ಭುವಿ ನರಾಧಿಪಮ್ ।
ತತ್ಪರಿತ್ರಾತುಮಿಚ್ಚಾಮೋ ಲವಣಾದ್ಭಯಪೀಡಿತಾನ್ ॥

ಅನುವಾದ

ಅಯ್ಯಾ! ನೀನು ಸೈನ್ಯ, ವಾಹನಗಳೊಂದಿಗೆ ರಾವಣನನ್ನು ಸಂಹಾರ ಮಾಡಿರುವೆ ಎಂದು ನಾವು ಕೇಳಿದ್ದೇವೆ. ಅದಕ್ಕಾಗಿ ನಾವು ನೀನೇ ರಕ್ಷಣೆ ಮಾಡಲು ಸಮರ್ಥನೆಂದು ತಿಳಿಯುತ್ತೇವೆ. ಭೂತಳದಲ್ಲಿ ನೀನಲ್ಲದೆ ಬೇರೆ ಯಾವ ರಾಜನು ಇಲ್ಲ. ಆದ್ದರಿಂದ ನೀನು ಭಯಪೀಡಿತರಾದ ಮಹರ್ಷಿಗಳನ್ನು ಲವಣಾಸುರನಿಂದ ರಕ್ಷಿಸಬೇಕೆಂದು ಬಯಸುತ್ತಿದ್ದೇವೆ.॥23॥

ಮೂಲಮ್ - 24

ಇತಿ ರಾಮ ನಿವೇದಿತಂ ತು ತೇ
ಭಯಜಂ ಕಾರಣಮುತ್ಥಿತಂ ಚ ಯತ್ ।
ವಿನಿವಾರಯಿತುಂ ಭವಾನ್ ಕ್ಷಮಃ
ಕುರು ತಂ ಕಾಮಮಹೀನವಿಕ್ರಮ ॥

ಅನುವಾದ

ಬಲ-ವಿಕ್ರಮ ಸಂಪನ್ನ ಶ್ರೀರಾಮ! ಹೀಗೆ ನಮ್ಮ ಮುಂದೆ ಉಪಸ್ಥಿತವಾದ ಭಯದ ಕಾರಣವನ್ನು ನಿನ್ನ ಮುಂದೆ ನಿವೇದಿಸಿಕೊಂಡಿದ್ದೇವೆ. ನೀನು ಅದನ್ನು ದೂರ ಮಾಡಲು ಸಮರ್ಥನಾಗಿರುವೆ. ಆದ್ದರಿಂದ ನಮ್ಮ ಅಭಿಲಾಷೆ ಪೂರ್ಣಗೊಳಿಸು.॥24॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಅರವತ್ತೊಂದನೆಯ ಸರ್ಗ ಪೂರ್ಣವಾಯಿತು. ॥61॥