०५९ जरा-यौवनानुभूती

[ಐವತ್ತೊಂಭತ್ತನೆಯ ಸರ್ಗ]

ಭಾಗಸೂಚನಾ

ಯಯಾತಿಗೆ ಪೂರುವಿನಿಂದ ಯೌವನದ ಪ್ರದಾನ, ಪುರುವಿನ ಪಟ್ಟಾಭಿಷೇಕ, ಯದುವಿಗೆ ಶಾಪ

ಮೂಲಮ್ - 1

ಶ್ರುತ್ವಾ ತೂಶನಸಂ ಕ್ರುದ್ಧಂ ತದಾರ್ತೋ ನಹುಷಾತ್ಮಜಃ ।
ಜರಾಂ ಪರಮಿಕಾಂ ಪ್ರಾಪ್ಯ ಯದುಂ ವಚನಮಬ್ರವೀತ್ ॥

ಅನುವಾದ

ಶುಕ್ರಾಚಾರ್ಯರು ಕುಪಿತರಾಗಿ ಕೊಟ್ಟ ಶಾಪದಿಂದಾಗಿ ಬೇರೆಯವರ ಯೌವನ ಬದಲಾಯಿಸಬಹುದಾದ ವೃದ್ಧಾವಸ್ಥೆ ಪ್ರಾಪ್ತವಾಯಿತು. ಆ ವಿಲಕ್ಷಣ ವೃದ್ಧಾವಸ್ಥೆ ಪಡೆದು ರಾಜನು ಯದುವಿನಲ್ಲಿ ಹೇಳಿದನು.॥1॥

ಮೂಲಮ್ - 2

ಯದೋ ತ್ವಮಸಿ ಧರ್ಮಜ್ಞೋ ಮದರ್ಥಂ ಪ್ರತಿಗೃಹ್ಯತಾಮ್ ।
ಜರಾ ಪರಮಿಕಾ ಪುತ್ರ ಭೋಗೈ ರಂಸ್ಯೇಮಹಾಯಶಃ ॥

ಅನುವಾದ

ಯದುವೇ! ನೀನು ಧರ್ಮಜ್ಞನಾಗಿ ನನ್ನ ಮಹಾಯಶಸ್ವೀ ಪುತ್ರನಾಗಿರುವೆ. ನೀನು ನನಗಾಗಿ ಬೇರೆಯವರ ಶರೀರದಲ್ಲಿ ಸಂಚಾರಿತವಾದ ಈ ಮುದಿತನ ತೆಗೆದುಕೋ. ನಾನು ಭೋಗಗಳ ಮೂಲಕ ರಮಿಸುವೆನು, ನನ್ನ ಭೋಗವಿಷಯಕ ಇಚ್ಛೆಯನ್ನು ಪೂರ್ಣಗೊಳಿಸುವೆನು.॥2॥

ಮೂಲಮ್ - 3

ನ ತಾವತ್ಕೃತಕೃತ್ಯೋಽಸ್ಮಿ ವಿಷಯೇಷು ನರರ್ಷಭ ।
ಅನುಭೂಯ ತದಾ ಕಾಮಂ ತತಃ ಪ್ರಾಪ್ಸ್ಯಾಮ್ಯಹಂ ಜರಾಮ್ ॥

ಅನುವಾದ

ನರಶ್ರೇಷ್ಠನೇ! ಇಷ್ಟರವರೆಗೆ ನಾನು ವಿಷಯ ಭೋಗಗಳಿಂದ ತೃಪ್ತನಾಗಲಿಲ್ಲ. ಇಚ್ಛಾನುಸಾರ ವಿಷಯಸುಖವನ್ನು ಅನುಭವಿಸಿ ಮತ್ತೆ ನನ್ನ ವೃದ್ಧಾವಸ್ಥೆಯನ್ನು ನಿನ್ನಿಂದ ಪಡೆದುಕೊಳ್ಳುವೆ.॥3॥

ಮೂಲಮ್ - 4

ಯದುಸ್ತದ್ವಚನಂ ಶ್ರುತ್ವಾ ಪ್ರತ್ಯುವಾಚ ನರರ್ಷಭಮ್ ।
ಪುತ್ರಸ್ತೇ ದಯಿತಃ ಪೂರುಃ ಪ್ರತಿಗೃಹ್ಣಾತು ವೈ ಜರಾಮ್ ॥

ಅನುವಾದ

ಅವನ ಮಾತನ್ನು ಕೇಳಿ ಯದುವು ನರಶ್ರೇಷ್ಠ ಯಯಾತಿಗೆ ಉತ್ತರಿಸಿದನು - ನಿಮ್ಮ ಮುದ್ದಿನ ಮಗ ಪುರುವೇ ಈ ವೃದ್ಧಾವಸ್ಥೆಯನ್ನು ಸ್ವೀಕರಿಸಲಿ.॥4॥

ಮೂಲಮ್ - 5

ಬಹಿಷ್ಕೃತೋಽಹಮರ್ಥೇಷು ಸಂನಿಕರ್ಷಾಚ್ಚ ಪಾರ್ಥಿವ ।
ಪ್ರತಿಗೃಹ್ಣಾತು ವೈ ರಾಜನ್ಯೈಃ ಸಹಾಶ್ನಾಸಿ ಭೋಜನಮ್ ॥

ಅನುವಾದ

ಪೃಥಿವಿನಾಥನೇ! ನನಗಾದರೋ ನಿಮ್ಮ ಧನ ಮತ್ತು ನಿಮ್ಮ ಹತ್ತಿರದಲ್ಲಿಯೇ ಇದ್ದು ಪ್ರೀತಿ ಪಡೆಯುವ ಅಧಿಕಾರದಿಂದ ವಂಚಿತರಾಗಿಸಿದಿರಿ. ಆದ್ದರಿಂದ ಯಾರೊಂದಿಗೆ ಕುಳಿತು ಊಟ ಮಾಡುತ್ತಿರುವಿರೋ ಅವನಿಂದಲೇ ಯುವಾವಸ್ಥೆಯನ್ನು ಸ್ವೀಕರಿಸಿರಿ.॥5॥

ಮೂಲಮ್ - 6

ತಸ್ಯ ತದ್ವಚನಂ ಶ್ರುತ್ವಾ ರಾಜಾಪೂರುಮಥಾಬ್ರವೀತ್ ।
ಇಯಂ ಜರಾ ಮಹಾಬಾಹೋ ಮದರ್ಥಂ ಪ್ರತಿಗೃಹ್ಯತಾಮ್ ॥

ಅನುವಾದ

ಯದುವಿನ ಮಾತನ್ನು ಕೇಳಿ ರಾಜನು ಪುರುವಿನಲ್ಲಿ ಹೇಳಿದನು - ಮಹಾಬಾಹುವೇ! ನನ್ನ ಸುಖ-ಸುವಿಧೆಗಾಗಿ ನೀನು ಈ ವೃದ್ಧಾಪ್ಯವನ್ನು ಸ್ವೀಕರಿಸು.॥6॥

ಮೂಲಮ್ - 7

ನಾಹುಷೇಣೈವಮುಕ್ತಸ್ತು ಪೂರುಃ ಪ್ರಾಂಜಲಿರಬ್ರವೀತ್ ।
ಧನ್ಯೋಽಸ್ಮ್ಯನುಗೃಹೀತೋಽಸ್ಮಿ ಶಾಸನೇಽಸ್ಮಿ ತವ ಸ್ಥಿತಃ ॥

ಅನುವಾದ

ನಹುಷ ಪುತ್ರ ಯಯಾತಿಯು ಹೀಗೆ ಹೇಳಿದಾಗ ಪೂರು ಕೈಮುಗಿದುಕೊಂಡು ಹೇಳಿದನು - ಪಿತಾಜೀ! ನಿಮ್ಮ ಸೇವೆಯ ಅವಕಾಶ ದೊರಕಿ ನಾನು ಧನ್ಯನಾದೆನು. ಇದು ನನ್ನ ಮೇಲೆ ನಿಮ್ಮ ದೊಡ್ಡ ಅನುಗ್ರಹವಾಗಿದೆ. ನಿಮ್ಮ ಆಜ್ಞೆಯನ್ನು ಪಾಲಿಸಲು ನಾನು ಎಲ್ಲ ರೀತಿಯಿಂದ ಸಿದ್ಧನಿದ್ದೇನೆ.॥7॥

ಮೂಲಮ್ - 8

ಪುರೋರ್ವಚನಮಾಜ್ಞಾಯ ನಾಹುಷಃ ಪರಯಾ ಮುದಾ ।
ಪ್ರಹರ್ಷಮತುಲಂ ಲೇಭೇ ಜರಾಂ ಸಂಕ್ರಾಮಯಚ್ಚ ತಾಮ್ ॥

ಅನುವಾದ

ಪೂರುವು ಇದನ್ನು ಒಪ್ಪಿಕೊಂಡ ಮಾತನ್ನು ಕೇಳಿ ಯಯಾತಿಗೆ ಬಹಳ ಸಂತೋಷವಾಯಿತು. ಅವನಿಗೆ ಅನುಪಮ ಹರ್ಷವಾಗಿ ತನ್ನ ವೃದ್ಧಾವಸ್ಥೆಯನ್ನು ಪೂರುವಿನ ಶರೀರದಲ್ಲಿ ಸಂಚಾರಿತಗೊಳಿಸಿದನು.॥8॥

ಮೂಲಮ್ - 9

ತತಃ ಸ ರಾಜಾ ತರುಣಃ ಪ್ರಾಪ್ಯ ಯಜ್ಞಾನ್ ಸಹಸ್ರಶಃ ।
ಬಹುವರ್ಷಸಹಸ್ರಾಣಿ ಪಾಲಯಾಮಾಸ ಮೇದಿನೀಮ್ ॥

ಅನುವಾದ

ಅನಂತರ ತರುಣನಾದ ರಾಜಾ ಯಯಾತಿಯು ಸಾವಿರಾರು ಯಜ್ಞಗಳ ಅನುಷ್ಠಾನ ಮಾಡುತ್ತಾ ಅನೇಕ ಸಾವಿರ ವರ್ಷಗಳವರೆಗೆ ರಾಜ್ಯವಾಳಿದನು.॥9॥

ಮೂಲಮ್ - 10

ಅಥ ದೀರ್ಘಸ್ಯ ಕಾಲಸ್ಯ ರಾಜಾ ಪೂರುಮಥಾಬ್ರವೀತ್ ।
ಆನಯಸ್ವ ಜರಾಂ ಪುತ್ರ ನ್ಯಾಸಂ ನಿರ್ಯಾತಯಸ್ವ ಮೇ ॥

ಅನುವಾದ

ಬಳಿಕ ದೀರ್ಘಕಾಲ ಕಳೆದಾಗ ರಾಜನು ಪೂರುವಿನಲ್ಲಿ ಹೇಳಿದನು - ಮಗು! ನಿನ್ನ ಬಳಿಯಲ್ಲಿ ಒತ್ತೆಯಿಟ್ಟ ನನ್ನ ವೃದ್ಧಾವಸ್ಥೆಯನ್ನು ನನಗೆ ಮರಳಿ ಕೊಡು.॥10॥

ಮೂಲಮ್ - 11

ನ್ಯಾಸಭೂತಾ ಮಯಾ ಪುತ್ರ ತ್ವಯಿ ಸಂಕ್ರಾಮಿಕಾ ಜರಾ ।
ತಸ್ಮಾತ್ಪ್ರತಿಗೃಹೀಷ್ಯಾಮಿ ತಾಂ ಜರಾಂ ಮಾ ವ್ಯಥಾಂ ಕೃಥಾಃ ॥

ಅನುವಾದ

ಮಗನೇ! ನಾನು ವೃದ್ಧಾವಸ್ಥೆಯನ್ನು ನ್ಯಾಸವಾಗಿ ನಿನ್ನ ಶರೀರದಲ್ಲಿ ಸಂಚಾರಿತಗೊಳಿಸಿದ್ದೆ; ಅದಕ್ಕಾಗಿ ಅದನ್ನು ಹಿಂದಕ್ಕೆ ಪಡೆಯುವೆನು. ನೀನು ಮನಸ್ಸಿನಲ್ಲಿ ದುಃಖಿಸಬಾರದು.॥11॥

ಮೂಲಮ್ - 12

ಪ್ರೀತಶ್ಚಾಸ್ಮಿ ಮಹಾಬಾಹೋ ಶಾಸನಸ್ಯ ಪ್ರತಿಗ್ರಹಾತ್ ।
ತ್ವಾಂ ಚಾಹಮಭಿಷೇಕ್ಷ್ಯಾಮಿ ಪ್ರೀತಿಯುಕ್ತೋನರಾಧಿಪಮ್ ॥

ಅನುವಾದ

ಮಹಾಬಾಹೋ! ನೀನು ನನ್ನ ಆಜ್ಞೆಯನ್ನು ಪಾಲಿಸಿದೆ, ಇದರಿಂದ ನನಗೆ ಬಹಳ ಸಂತೋಷವಾಗಿದೆ. ಈಗ ನಾನು ತುಂಬಾ ಪ್ರೇಮದಿಂದ ನಿನಗೆ ರಾಜ್ಯಾಭಿಷೇಕ ಮಾಡುವೆನು.॥12॥

ಮೂಲಮ್ - 13

ಏವಮುಕ್ತ್ವಾ ಸುತಂ ಪೂರುಂ ಯಯಾತಿರ್ನಹುಷಾತ್ಮಜಃ ।
ದೇವಯಾನೀಸುತಂ ಕ್ರುದ್ಧೋ ರಾಜಾ ವಾಕ್ಯಮುವಾಚ ಹ ॥

ಅನುವಾದ

ತನ್ನ ಪುತ್ರ ಪೂರುವಿನಲ್ಲಿ ಹೀಗೆ ಹೇಳಿ ರಾಜಾ ಯಯಾತಿಯು ದೇವಯಾನಿಯ ಮಗನಲ್ಲಿ ಕುಪಿತನಾಗಿ ಹೇಳಿದನು.॥13॥

ಮೂಲಮ್ - 14

ರಾಕ್ಷಸಸ್ತ್ವಂ ಮಯಾ ಜಾತಃ ಕ್ಷತ್ರರೂಪೋದುರಾಸದಃ ।
ಪ್ರತಿಹಂಸಿ ಮಮಾಜ್ಞಾಂ ತ್ವಂ ಪ್ರಜಾರ್ಥೇ ವಿಲೋ ಭವ ॥

ಅನುವಾದ

ಯದುವೇ! ದುರ್ಜಯ ಕ್ಷತ್ರಿಯ ರೂಪದಿಂದ ನಾನು ನಿನ್ನಂತಹ ರಾಕ್ಷಸನಿಗೆ ಜನ್ಮ ಕೊಟ್ಟೆ. ನೀನು ನನ್ನ ಆಜ್ಞೆಯನ್ನು ಉಲ್ಲಂಘಿಸಿದೆ, ಆದ್ದರಿಂದ ನಿನ್ನ ಸಂತಾನವು ರಾಜ್ಯಾಧಿಕಾರದಿಂದ ವಂಚಿತರಾಗಲಿ.॥14॥

ಮೂಲಮ್ - 15

ಪಿತರಂ ಗುರುಭೂತಂ ಮಾಂ ಯಸ್ಮಾತ್ತ್ವಮವಮನ್ಯಸೇ ।
ರಾಕ್ಷಸಾನ್ಯಾತುಧಾನಾಂಸ್ತ್ವ ಜನಯಿಷ್ಯಸಿ ದಾರುಣಾನ್ ॥

ಅನುವಾದ

ನಾನು ತಂದೆ, ಗುರು ಆಗಿದ್ದೇನೆ, ಹೀಗಿದ್ದರೂ ನೀನು ನನ್ನ ಅಪಮಾನ ಮಾಡುತ್ತಿರುವೆ. ಇದಕ್ಕಾಗಿ ಭಯಂಕರ ರಾಕ್ಷಸರು ಮತ್ತು ಯಾತುಧಾನರು ನಿನ್ನಲ್ಲಿ ಹುಟ್ಟುವರು.॥15॥

ಮೂಲಮ್ - 16

ನ ತು ಸೋಮಕುಲೋತ್ಪನ್ನೇ ವಂಶೇ ಸ್ಥಾಸ್ಯತಿ ದುರ್ಮತೇ ।
ವಂಶೋಽಪಿ ಭವತಸ್ತುಲ್ಯೋ ದುರ್ವಿನೀತೋ ಭವಿಷ್ಯತಿ ॥

ಅನುವಾದ

ನಿನ್ನ ಬುದ್ಧಿ ಕೆಟ್ಟುಹೋಗಿದೆ. ಆದ್ದರಿಂದ ನಿನ್ನ ಸಂತಾನವು ಸೋಮಕುಲದಲ್ಲಿ ಹುಟ್ಟಿ ವಂಶಪರಂಪರೆಯಲ್ಲಿ ರಾಜನಾಗಿ ಪ್ರತಿಷ್ಠಿತನಾಗಲಾರರು. ನಿನ್ನ ಸಂತತಿ ನಿನ್ನಂತೆಯೇ ಉದ್ಧಟವಾಗುವುದು.॥16॥

ಮೂಲಮ್ - 17

ತಮೇವಮುಕ್ತ್ವಾ ರಾಜರ್ಷಿಃ ಪೂರುಂ ರಾಜ್ಯವಿವರ್ಧನಮ್ ।
ಅಭಿಷೇಕೇಣ ಸಂಪೂಜ್ಯ ಆಶ್ರಮಂ ಪ್ರವಿವೇಶ ಹ ॥

ಅನುವಾದ

ಯದುವಿಗೆ ಹೀಗೆ ಹೇಳಿ ರಾಜರ್ಷಿ ಯಯಾತಿಯು ರಾಜ್ಯದ ವೃದ್ಧಿ ಮಾಡುವ ಪೂರುವಿಗೆ ಪಟ್ಟಾಭಿಷೇಕದ ಮೂಲಕ ಸಮ್ಮಾನಿಸಿ ವಾನಪ್ರಸ್ಥ ಆಶ್ರಮವನ್ನು ಕೈಗೊಂಡನು.॥17॥

ಮೂಲಮ್ - 18

ತತಃ ಕಾಲೇನ ಮಹತಾ ದಿಷ್ಟಾಂತಮುಪಜಗ್ಮಿವಾನ್ ।
ತ್ರಿದಿವಂ ಸ ಗತೋ ರಾಜಾಯಯಾತಿರ್ನಹುಷಾತ್ಮಜಃ ॥

ಅನುವಾದ

ದೀರ್ಘಕಾಲದ ಬಳಿಕ ಪ್ರಾರಬ್ಧ ಭೋಗ ತೀರಿದಾಗ ಯಯಾತಿಯು ಶರೀರವನ್ನು ತ್ಯಜಿಸಿ, ಸ್ವರ್ಗಲೋಕಕ್ಕೆ ಪ್ರಸ್ಥಾನ ಮಾಡಿದನು.॥18॥

ಮೂಲಮ್ - 19

ಪೂರುಶ್ಚಕಾರ ತದ್ರಾಜ್ಯಂ ಧರ್ಮೇಣ ಮಹತಾ ವೃತಃ ।
ಪ್ರತಿಷ್ಠಾನೇ ಪುರವರೇ ಕಾಶಿರಾಜ್ಯೇ ಮಹಾಯಶಾಃ ॥

ಅನುವಾದ

ಅನಂತರ ಮಹಾಯಶಸ್ವೀ ಪೂರು ಮಹಾನ್ ಧರ್ಮದಿಂದ ಕೂಡಿ ಕಾಶಿರಾಜನ ಶ್ರೇಷ್ಠ ಪ್ರತಿಷ್ಠಾನಪುರಿಯಲ್ಲಿ ಇರುತ್ತಾ ಆ ರಾಜ್ಯವನ್ನು ಪಾಲಿಸಿದನು.॥19॥

ಮೂಲಮ್ - 20

ಯದುಸ್ತು ಜನಯಾಮಾಸ ಯಾತುಧಾನಾನ್ ಸಹಸ್ರಶಃ ।
ಪುರೇ ಕ್ರೌಂಚವನೇ ದುರ್ಗೇ ರಾಜವಂಶಬಹಿಷ್ಕೃತಃ ॥

ಅನುವಾದ

ರಾಜಕುಲದಿಂದ ಬಹಿಷ್ಕೃತನಾದ ಯದುವು ನಗರದಲ್ಲಿ ಹಾಗೂ ದುರ್ಜಯ ಕೌಂಚವನದಲ್ಲಿ ಸಾವಿರಾರು ಯಾತುಧಾನರಿಗೆ ಜನ್ಮ ನೀಡಿದನು.॥20॥

ಮೂಲಮ್ - 21

ಏಷ ತೂಶನಸಾ ಮುಕ್ತಃ ಶಾಪೋತ್ಸರ್ಗೋ ಯಯಾತಿನಾ ।
ಧಾರಿತಃ ಕ್ಷತ್ರಧರ್ಮೇಣ ಯಂ ನಿಮಿಶ್ಚಕ್ಷಮೇ ನ ಚ ॥

ಅನುವಾದ

ಶುಕ್ರಾಚಾರ್ಯರು ಕೊಟ್ಟ ಈ ಶಾಪವನ್ನು ರಾಜಾ ಯಯಾತಿಯು ಕ್ಷತ್ರಿಯ ಧರ್ಮಕ್ಕನುಸಾರ ಧರಿಸಿಕೊಂಡನು. ಆದರೆ ರಾಜಾ ನಿಮಿಯು ವಸಿಷ್ಛರ ಶಾಪವನ್ನು ಸಹಿಸಲಿಲ್ಲ.॥21॥

ಮೂಲಮ್ - 22

ಏತತ್ತೇ ಸರ್ವಮಾಖ್ಯಾತಂ ದರ್ಶನಂ ಸರ್ವಕಾರಿಣಾಮ್ ।
ಅನುವರ್ತಾಮಹೇ ಸೌಮ್ಯ ದೋಷೋ ನ ಸ್ಯಾದ್ಯಥಾ ನೃಗೇ ॥

ಅನುವಾದ

ಸೌಮ್ಯ ! ಇದೆಲ್ಲ ಪ್ರಸಂಗಗಳನ್ನು ನಿನಗೆ ನಾನು ತಿಳಿಸಿದೆ. ಸಮಸ್ತ ಕೃತ್ಯಗಳನ್ನು ಪಾಲಿಸುವ ಸತ್ಪುರುಷರ ದೃಷ್ಟಿಯನ್ನೇ ನಾವು ಅನುಸರಿಸುತ್ತೇವೆ. ಅದರಿಂದ ನೃಗರಾಜನಂತೆ ನಮಗೂ ದೋಷ ಪ್ರಾಪ್ತವಾಗದಿರಲಿ.॥22॥

ಮೂಲಮ್ - 23

ಇತಿ ಕಥಯತಿ ರಾಮೇ ಚಂದ್ರತುಲ್ಯಾನನೇನ
ಪ್ರವಿರಲತರತಾರಂ ವ್ಯೋಮ ಜಜ್ಞೇ ತದಾನೀಮ್ ।
ಅರುಣಕಿರಣರಕ್ತಾ ದಿಗ್ ಬಭೌ ಚೈವ ಪೂರ್ವಾ
ಕುಸುಮರಸವಿಮುಕ್ತಂ ವಸ್ತ್ರಮಾಗುಂಠಿತೇವ ॥

ಅನುವಾದ

ಚಂದ್ರನಂತೆ ಮನೋಹರ ಮುಖ ವುಳ್ಳ ಶ್ರೀರಾಮನು ಹೀಗೆ ಹೇಳುತ್ತಿರುವಾಗ - ಆಕಾಶದಲ್ಲಿ ಎರಡೇ ತಾರೆಗಳು ಉಳಿದು, ಮೂಡಣದಿಕ್ಕು ಕೆಂಪಾಗಿ, ಕುಸುಮ ಬಣ್ಣದ ಬಟ್ಟೆಯನ್ನು ಹೊದ್ದುಕೊಂಡಿರುವಂತಿತ್ತು.॥23॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಐವತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು. ॥59॥