०५७ निमि-वसिष्ठ-देह-प्राप्तिः

[ಐವತ್ತೇಳನೆಯ ಸರ್ಗ]

ಭಾಗಸೂಚನಾ

ವಸಿಷ್ಠರು ನೂತನ ಶರೀರ ಧರಿಸಿದುದು, ನಿಮಿಯು ಪ್ರಾಣಿಗಳ ರೆಪ್ಪೆಗಳಲ್ಲಿ ವಾಸಿಸಿದುದು

ಮೂಲಮ್ - 1

ತಾಂ ಶ್ರುತ್ವಾ ದಿವ್ಯಸಂಕಾಶಾಂಕಥಾಮದ್ಭುತದರ್ಶನಾಮ್ ।
ಲಕ್ಷ್ಮಣಃ ಪರಮಪ್ರೀತೋ ರಾಘವಂ ವಾಕ್ಯಮಬ್ರವೀತ್ ॥

ಅನುವಾದ

ಆ ದಿವ್ಯ ಹಾಗೂ ಅದ್ಭುತ ಕಥೆಯನ್ನು ಕೇಳಿ ಲಕ್ಷ್ಮಣನಿಗೆ ಬಹಳ ಸಂತೋಷವಾಯಿತು. ಅವನು ಶ್ರೀರಘುನಾಥನಲ್ಲಿ ಕೇಳಿದನು.॥1॥

ಮೂಲಮ್ - 2

ನಿಕ್ಷಿಪ್ತದೇಹೌ ಕಾಕುತ್ಸ್ಥ ಕಥಂ ತೌ ದ್ವಿಜಪಾರ್ಥಿವೌ ।
ಪುನರ್ದೇಹೇನ ಸಂಯೋಗಂ ಜಗ್ಮತುರ್ದೇವಸಮ್ಮತೌ ॥

ಅನುವಾದ

ಕಾಕುತ್ಸ್ಥನೇ! ದೇವತೆಗಳಿಂದ ಸಮ್ಮಾನಿತರಾದ ಆ ಬ್ರಹ್ಮರ್ಷಿ ವಸಿಷ್ಠರು ಮತ್ತು ರಾಜರ್ಷಿ ನಿಮಿ ತಮ್ಮ-ತಮ್ಮ ಶರೀರ ಬಿಟ್ಟು ಮತ್ತೆ ನೂತನ ಶರೀರಗಳನ್ನು ಹೇಗೆ ಪಡೆದರು.॥2॥

ಮೂಲಮ್ - 3

ತಸ್ಯ ತದ್ಭಾಷಿತಂ ಶ್ರುತ್ವಾ ರಾಮಃ ಸತ್ಯಪರಾಕ್ರಮಃ ।
ತಾಂ ಕಥಾಂ ಕಥಯಾಮಾಸ ವಸಿಷ್ಠಸ್ಯ ಮಹಾತ್ಮನಃ ॥

ಅನುವಾದ

ಅವನ ಪ್ರಶ್ನೆ ಕೇಳಿ ಸತ್ಯಪರಾಕ್ರಮಿ ಶ್ರೀರಾಮನು ಮಹಾತ್ಮಾ ವಸಿಷ್ಠರು ಶರೀರ ಪಡೆದ ಸಂಬಂಧವಾದ ಕಥೆಯನ್ನು ಮುಂದುವರೆಸಿದನು.॥3॥

ಮೂಲಮ್ - 4

ಯಃ ಸ ಕುಂಭೋ ರಘುಶ್ರೇಷ್ಠ ತೇಜಃಪೂರ್ಣೋ ಮಹಾತ್ಮನೋಃ ।
ತಸ್ಮಿಂಸ್ತೇಜೋಮಯೌ ವಿಪ್ರೌಸಂಭೂತಾವೃಷಿಸತ್ತವೌ ॥

ಅನುವಾದ

ರಘುಶ್ರೇಷ್ಠ! ಮಹಾತ್ಮಾ ಮಿತ್ರ ಮತ್ತು ವರುಣ ದೇವನ ತೇಜ (ವೀರ್ಯ)ದಿಂದ ಕೂಡಿದ ಆ ಪ್ರಸಿದ್ಧ ಕುಂಭದಿಂದ ಇಬ್ಬರು ತೇಜಸ್ವೀ ಬ್ರಾಹ್ಮಣರು ಪ್ರಕಟರಾದರು. ಅವರಿಬ್ಬರೂ ಋಷಿಗಳಲ್ಲಿ ಶ್ರೇಷ್ಠರಾಗಿದ್ದರು.॥4॥

ಮೂಲಮ್ - 5

ಪೂರ್ವಂ ಸಮಭವತ್ತತ್ರ ಅಗಸ್ತ್ಯೋ ಭಗವಾನೃಷಿಃ ।
ನಾಹಂ ಸುತಸ್ತವೇತ್ಯುಕ್ತ್ವಾಮಿತ್ರಂ ತಸ್ಮಾದಪಾಕ್ರಮತ್ ॥

ಅನುವಾದ

ಮೊದಲಿಗೆ ಆ ಘಟದಿಂದ ಮಹರ್ಷಿ ಅಗಸ್ತ್ಯರು ಉತ್ಪನ್ನರಾದರು ಹಾಗೂ ಮಿತ್ರನಲ್ಲಿ ‘ನಾನು ನಿಮ್ಮ ಪುತ್ರನಲ್ಲ’ ಎಂದು ಹೇಳಿ ಅಲ್ಲಿಂದ ಬೇರೆಡೆಗೆ ಹೊರಟುಹೋದರು.॥5॥

ಮೂಲಮ್ - 6

ತದ್ಧಿ ತೇಜಸ್ತು ಮಿತ್ರಸ್ಯ ಉರ್ವಶ್ಯಾಃಪೂರ್ವಮಾಹಿತಮ್ ।
ತಸ್ಮಿನ್ಸಮಭವತ್ಕುಂಭೇ ತತ್ತೇಜೋ ಯತ್ರ ವಾರುಣಮ್ ॥

ಅನುವಾದ

ಊರ್ವಶಿಯ ನಿಮಿತ್ತದಿಂದ ಮೊದಲೇ ಆ ಕುಂಭದಲ್ಲಿ ಮಿತ್ರನ ತೇಜ ಸ್ಥಾಪಿತವಾಗಿತ್ತು. ಅನಂತರ ಆ ಕುಂಭದಲ್ಲಿ ವರುಣದೇವನ ತೇಜವೂ ಸಮ್ಮಿಲಿತವಾಗಿತ್ತು.॥6॥

ಮೂಲಮ್ - 7

ಕಸ್ಯಚಿತ್ತ್ವಥ ಕಾಲಸ್ಯ ಮಿತ್ರಾವರುಣಸಂಭವಃ ।
ವಸಿಷ್ಠಸ್ತೇಜಸಾ ಯುಕ್ತೋ ಜಜ್ಞೇ ಇಕ್ಷ್ವಾಕುದೈವತಮ್ ॥

ಅನುವಾದ

ಅನಂತರ ಕೆಲವು ಕಾಲದಲ್ಲಿ ಮಿತ್ರಾವರುಣರ ಆ ವೀರ್ಯದಿಂದ ತೇಜಸ್ವೀ ವಸಿಷ್ಠ ಮುನಿಯ ಪ್ರಾದುರ್ಭಾವವಾಯಿತು. ಅವರು ಇಕ್ಷ್ವಾಕು ಕುಲದ ಗುರು ಅಥವಾ ಪುರೋಹಿತರಾದರು.॥7॥

ಮೂಲಮ್ - 8

ತಮಿಕ್ಷ್ವಾ ಕುರ್ಮಹಾತೇಜಾ ಜಾತಮಾತ್ರಮನಿಂದಿತಮ್ ।
ವವ್ರೇ ಪುರೋಧಸಂ ಸೌಮ್ಯ ವಂಶಸ್ಯಾಸ್ಯ ಹಿತಾಯ ನಃ ॥

ಅನುವಾದ

ಸೌಮ್ಯ ಲಕ್ಷ್ಮಣ! ಮಹಾತೇಜಸ್ವೀ ರಾಜಾ ಇಕ್ಷ್ವಾಕು ಅವರು ಹುಟ್ಟಿದಾಕ್ಷಣ ನಮ್ಮ ಕುಲದ ಹಿತಕ್ಕಾಗಿ ಅವರನ್ನು ಪುರೋಹಿತರನ್ನಾಗಿ ಮಾಡಿಕೊಂಡನು.॥8॥

ಮೂಲಮ್ - 9

ಏವಂ ತ್ವಪೂರ್ವದೇಹಸ್ಯ ವಸಿಷ್ಠಸ್ಯ ಮಹಾತ್ಮನಃ ।
ಕಥಿತೋ ನಿರ್ಗಮಃ ಸೌಮ್ಯ ನಿಮೇಃ ಶೃಣು ಯಥಾಭವತ್ ॥

ಅನುವಾದ

ಸೌಮ್ಯ! ಹೀಗೆ ನೂತನ ಶರೀರದಿಂದ ಕೂಡಿದ ವಸಿಷ್ಠ ಮುನಿಗಳ ಉತ್ಪತ್ತಿಯನ್ನು ತಿಳಿಸಿರುವೆ. ಈಗ ನಿಮಿಯ ವೃತ್ತಾಂತವನ್ನು ಕೇಳು.॥9॥

ಮೂಲಮ್ - 10

ದೃಷ್ಟ್ವಾ ವಿದೇಹಂರಾಜಾನಮೃಷಯಃ ಸರ್ವ ಏವ ತೇ ।
ತಂ ಚ ತೇ ಯಾಜಯಾಮಾಸುರ್ಯಜ್ಞದೀಕ್ಷಾಂ ಮನೀಷಿಣಃ ॥

ಅನುವಾದ

ನಿಮಿರಾಜನು ದೇಹದಿಂದ ಬೇರೆಯಾದುದನ್ನು ನೋಡಿದ ವಿದ್ವಾಂಸರಾದ ಎಲ್ಲ ಋಷಿಗಳು ಸ್ವತಃ ಯಜ್ಞದ ದೀಕ್ಷೆ ಕೈಗೊಂಡು ಆ ಯಜ್ಞವನ್ನು ಪೂರ್ಣಗೊಳಿಸಿದರು.॥10॥

ಮೂಲಮ್ - 11

ತಂ ಚ ದೇಹಂ ನರೇಂದ್ರಸ್ಯ ರಕ್ಷಂತಿ ಸ್ಮ ದ್ವಿಜೋತ್ತಮಾಃ ।
ಗಂಧೈರ್ಮಾಲ್ಯೈಶ್ಚ ವಸ್ತ್ರೈಶ್ಚ ಪೌರಭೃತ್ಯಸಮನ್ವಿತಾಃ ॥

ಅನುವಾದ

ಶ್ರೇಷ್ಠ ಮಹರ್ಷಿಗಳೂ, ಪುರವಾಸಿಗಳೂ, ಸೇವಕರೊಂದಿಗೆ ಗಂಧ, ಪುಷ್ಪ, ವಸ್ತ್ರಸಹಿತ ನಿಮಿರಾಜನ ಆ ಶರೀರವನ್ನು ಎಣ್ಣೆಯ ಕೊಪ್ಪರಿಗೆಯಲ್ಲಿ ಸುರಕ್ಷಿತವಾಗಿ ಇರಿಸಿದರು.॥11॥

ಮೂಲಮ್ - 12

ತತೋ ಯಜ್ಞೇ ಸಮಾಪ್ತೇ ತುಭೃಗುಸ್ತತ್ರೇದಮಬ್ರವೀತ್ ।
ಆನಯಿಷ್ಯಾಮಿ ತೇ ಚೇತಸ್ತುಷ್ಟೋಽಸ್ಮಿ ತವಪಾರ್ಥಿವ ॥

ಅನುವಾದ

ಬಳಿಕ ಯಜ್ಞ ಸಮಾಪ್ತವಾದಾಗ ಅಲ್ಲಿ ಭೃಗು ಹೇಳಿದನು - ರಾಜನ ಜೀವಾತ್ಮವನ್ನು ಸಂಬೋಧಿಸುತ್ತಾ ರಾಜನೇ! ನಾನು ನಿನ್ನ ಮೇಲೆ ಬಹಳ ಸಂತುಷ್ಟನಾಗಿದ್ದೇನೆ; ಆದ್ದರಿಂದ ನೀನು ಬಯಸುವೆಯಾದರೆ ನಿನ್ನ ಜೀವ ಚೈತನ್ಯವನ್ನು ಪುನಃ ಈ ಶರೀರದಲ್ಲಿ ನಾನು ತುಂಬಿ ಕೊಡುವೆನು.॥12॥

ಮೂಲಮ್ - 13

ಸುಪ್ರೀತಾಶ್ಚ ಸುರಾಃ ಸರ್ವೇನಿಮೇಶ್ಚೇತಸ್ತದಾಬ್ರುವನ್ ।
ವರಂ ವರಯ ರಾಜರ್ಷೇ ಕ್ವ ತೇ ಚೇತೋ ನಿರೂಪ್ಯತಾಮ್ ॥

ಅನುವಾದ

ಭೃಗುಗಳೊಂದಿಗೆ ಇತರ ದೇವತೆಗಳೆಲ್ಲರೂ ಅತ್ಯಂತ ಪ್ರಸನ್ನರಾಗಿ ನಿಮಿಯ ಜೀವಾತ್ಮನಲ್ಲಿ ಹೇಳಿದರು - ರಾಜರ್ಷಿಯೇ! ನಿನ್ನ ಜೀವ-ಚೈತನ್ಯವನ್ನು ಎಲ್ಲಿ ಸ್ಥಾಪಿಸಬೇಕೆಂದು ವರವನ್ನು ಕೇಳು.॥13॥

ಮೂಲಮ್ - 14

ಏವಮುಕ್ತಃ ಸುರೈಃ ಸರ್ವೈರ್ನಿಮೇಶ್ಚೇತಸ್ತದಾಬ್ರವೀತ್ ।
ನೇತ್ರೇಷು ಸರ್ವಭೂತಾನಾಂ ವಸೇಯಂಸುರಸತ್ತಮಾಃ ॥

ಅನುವಾದ

ಸಮಸ್ತ ದೇವತೆಗಳು ಹೀಗೆ ಹೇಳಿದಾಗ ನಿಮಿಯ ಜೀವಾತ್ಮನು ಅವರಲ್ಲಿ ಹೇಳಿದನು - ಸುರಶ್ರೇಷ್ಠರೇ ! ನಾನು ಸಮಸ್ತ ಪ್ರಾಣಿಗಳ ನೇತ್ರಗಳಲ್ಲಿ ವಾಸಿಸಲು ಬಯಸುತ್ತೇನೆ.॥14॥

ಮೂಲಮ್ - 15

ಬಾಢಮಿತ್ಯೇವ ವಿಬುಧಾ ನಿಮೇಶ್ಚೇತಸ್ತದಾಬ್ರುವನ್ ।
ನೇತ್ರೇಷುಸರ್ವಭೂತಾನಾಂ ವಾಯುಭೂತಶ್ಚರಿಷ್ಯಸಿ ॥

ಅನುವಾದ

ಆಗ ದೇವತೆಗಳು ನಿಮಿಯ ಜೀವಾತ್ಮನಲ್ಲಿ ಹೇಳಿದರು - ಬಹಳ ಒಳ್ಳೆಯದು, ನೀನು ವಾಯುರೂಪವಾಗಿ ಸಮಸ್ತ ಪ್ರಾಣಿಗಳ ಕಣ್ಣುಗಳಲ್ಲಿ ವಿಚರಿಸುತ್ತಾ ಇರುವೆ.॥15॥

ಮೂಲಮ್ - 16

ತ್ವತ್ಕೃತೇ ಚ ನಿಮಿಷ್ಯಂತಿ ಚಕ್ಷೂಂಷಿ ಪೃಥಿವೀಪತೇ ।
ವಾಯುಭೂತೇನ ಚರತಾ ವಿಶ್ರಾಮಾರ್ಥಂ ಮುಹುರ್ಮುಹುಃ ॥

ಅನುವಾದ

ಪೃಥಿವೀನಾಥನೇ! ವಾಯುರೂಪದಿಂದ ಸಂಚರಿಸುವ ನಿನಗೆ ವಿಶ್ರಾಂತಿಗಾಗಿ ಪ್ರಾಣಿಗಳು ಪದೇ-ಪದೇ ರೆಪ್ಪೆಗಳನ್ನು ಮುಚ್ಚಿಕೊಳ್ಳುತ್ತಾ ಇರುವರು.॥16॥

ಮೂಲಮ್ - 17½

ಏವಮುಕ್ತ್ವಾ ತು ವಿಬುಧಾಃ ಸರ್ವೇ ಜಗ್ಮುರ್ಯಥಾಗತಮ್ ।
ಋಷಯೋಽಪಿ ಮಹಾತ್ಮಾನೋ ನಿಮೇರ್ದೇಹಂ ಸಮಾಹರನ್ ॥
ಅರಣಿಂ ತತ್ರ ನಿಕ್ಷಿಪ್ಯ ಮಥನಂ ಚಕ್ರುರೋಜಸಾ ।

ಅನುವಾದ

ಹೀಗೆ ಹೇಳಿ ದೇವತೆಗಳೆಲ್ಲರೂ ಹೊರಟು ಹೋದರು. ಮತ್ತೆ ಮಹಾತ್ಮಾ ಋಷಿಗಳು ನಿಮಿಯ ಶರೀರವನ್ನು ಅರಣಿಯ ಮೇಲೆ ಇಟ್ಟು ವೇಗವಾಗಿ ಕಡೆಯತೊಡಗಿದರು.॥17½॥

ಮೂಲಮ್ - 18

ಮಂತ್ರಹೋಮೈರ್ಮಹಾತ್ಮಾನಃಪುತ್ರಹೇತೋರ್ನಿಮೇಸ್ತದಾ ॥

ಮೂಲಮ್ - 19

ಅರಣ್ಯಾಂ ಮಥ್ಯಮಾನಾಯಾಂ ಪ್ರಾದುರ್ಭೂತೋ ಮಹಾತಪಾಃ ।
ಮಥನಾನ್ಮಿಥಿರಿತ್ಯಾಹುರ್ಜನನಾಜ್ಜನಕೋಽಭವತ್ ॥

ಮೂಲಮ್ - 20

ಯಸ್ಮಾದ್ವಿದೇಹಾತ್ಸಂಭೂತೋವೈದೇಹಸ್ತು ತತಃ ಸ್ಮೃತಃ ।
ಏವಂ ವಿದೇಹರಾಜಶ್ಚ ಜನಕಃ ಪೂರ್ವಕೋಽಭವತ್ ।
ಮಿಥಿರ್ನಾಮ ಮಹಾತೇಜಾಸ್ತೇನಾಯಂ ಮೈಥಿಲೋಽಭವತ್ ॥

ಅನುವಾದ

ಹಿಂದಿನಂತೆ ಮಂತ್ರೋಚ್ಚಾರಣಪೂರ್ವಕ ಹೋಮ ಮಾಡುತ್ತಾ ಆ ಮಹಾತ್ಮರು ನಿಮಿಯ ಪುತ್ರನ ಉತ್ಪತ್ತಿಗಾಗಿ ಅರಣಿಮಂಥನ ಪ್ರಾರಂಭಿಸಿದಾಗ ಅದರಿಂದ ಮಹಾತೇಜಸ್ವೀ ಮಿಥಿ ಎಂಬುವನು ಉತ್ಪನ್ನನಾದನು. ಜನ್ಮಕ್ಕೆ ಈ ಅದ್ಭುತ ಕಾರಣವಾದ್ದರಿಂದ ಅವನು ಜನಕನೆಂದಾದನು ಹಾಗೂ ವಿದೇಹ (ಜೀವರಹಿತ ಶರೀರ)ದಿಂದ ಪ್ರಕಟನಾದ ಕಾರಣ ಅವನನ್ನು ವೈದೇಹ ಎಂದೂ ಹೇಳಲಾಯಿತು. ಹೀಗೆ ಮೊದಲು ವಿದೇಹರಾಜಾ ಜನಕನ ಹೆಸರು ಮಹಾತೇಜಸ್ವೀ ಮಿಥಿ ಎಂದಾಯಿತು. ಅವನಿಂದ ಈ ಜನಕವಂಶ ಮೈಥಿಲವೆಂದಾಯಿತು.॥18-20॥

ಮೂಲಮ್ - 21

ಇತಿ ಸರ್ವಮಶೇಷತೋ ಮಯಾ
ಕಥಿತಂ ಸಂಭವಕಾರಣಂ ತು ಸೌಮ್ಯ ।
ನೃಪಪುಂಗವಶಾಪಜಂ ದ್ವಿಜಸ್ಯ
ದ್ವಿಜಶಾಪಾಚ್ಚ ಯದದ್ಭುತಂ ನೃಪಸ್ಯ ॥

ಅನುವಾದ

ಸೌಮ್ಯ ಲಕ್ಷ್ಮಣ! ರಾಜರಲ್ಲಿ ಶ್ರೇಷ್ಠನಾದ ನಿಮಿಯ ಶಾಪದಿಂದ ಬ್ರಾಹ್ಮಣ ವಸಿಷ್ಠರ ಮತ್ತು ವಸಿಷ್ಠರ ಶಾಪದಿಂದ ರಾಜಾನಿಮಿಯ ಈ ಅದ್ಭುತ ಜನ್ಮ ಘಟಿಸಿತು. ಅದೆಲ್ಲವನ್ನು ನಾನು ನಿನಗೆ ತಿಳಿಸಿರುವೆನು.॥21॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಐವತ್ತೇಳನೆಯ ಸರ್ಗ ಪೂರ್ಣವಾಯಿತು. ॥57॥