[ಐವತ್ತಾರನೆಯ ಸರ್ಗ]
ಭಾಗಸೂಚನಾ
ಮೈತ್ರಾವರುಣಿಯಾಗಿ ದೇಹವನ್ನು ಧರಿಸುವಂತೆ ವಸಿಷ್ಠರಿಗೆ ಬ್ರಹ್ಮನ ಆದೇಶ, ಮಿತ್ರನ ಶಾಪದಿಂದ ಊರ್ವಶಿಯು ಭೂಮಿಯಲ್ಲಿ ರಾಜಾ ಪುರೂರವನ ಮಡದಿಯಾಗಿ ಪುತ್ರರನ್ನು ಪಡೆದುದು
ಮೂಲಮ್ - 1
ರಾಮಸ್ಯಭಾಷಿತಂ ಶ್ರುತ್ವಾ ಲಕ್ಷ್ಮಣಃ ಪರವೀರಹಾ ।
ಉವಾಚ ಪ್ರಾಂಜಲಿರ್ಭೂತ್ವಾ ರಾಘವಂ ದೀಪ್ತತೇಜಸಮ್ ॥
ಅನುವಾದ
ಶ್ರೀರಾಮಚಂದ್ರನು ಹೇಳಿದ ಕಥೆಯನ್ನು ಕೇಳಿ ಶತ್ರುವೀರ ಸಂಹಾರೀ ಲಕ್ಷ್ಮಣನು ಉದ್ದೀಪ್ತ ತೇಜಸ್ಸುಳ್ಳ ಶ್ರೀರಾಮನಲ್ಲಿ ಕೈಮುಗಿದು ಕೇಳಿದನು.॥1॥
ಮೂಲಮ್ - 2
ನಿಕ್ಷಿಪ್ಯ ದೇಹೌ ಕಾಕುತ್ಸ್ಥಕಥಂ ತೌ ದ್ವಿಜಪಾರ್ಥಿವೌ ।
ಪುನರ್ದೇಹೇನ ಸಂಯೋಗಂ ಜಗ್ಮತುರ್ದೇವಸಮ್ಮತೌ ॥
ಅನುವಾದ
ಕಕುತ್ಸ್ಥ ಕುಲಭೂಷಣ! ಆ ಬ್ರಹ್ಮರ್ಷಿ ಮತ್ತು ರಾಜರ್ಷಿ ಇಬ್ಬರೂ ದೇವತೆಗಳಿಂದಲೂ ಸಮ್ಮಾನಿತರಾಗಿದ್ದರು. ಅವರು ತಮ್ಮ ಶರೀರ ತ್ಯಜಿಸಿ ಮತ್ತೆ ನೂತನ ಶರೀರವನ್ನು ಹೇಗೆ ಪಡೆದರು.॥2॥
ಮೂಲಮ್ - 3
ಲಕ್ಷ್ಮಣೇನೈವಮುಕ್ತಸ್ತು ರಾಮ ಇಕ್ಷ್ವಾಕುನಂದನಃ ।
ಪ್ರತ್ಯುವಾಚ ಮಹಾತೇಜಾ ಲಕ್ಷ್ಮಣಂ ಪುರುಷರ್ಷಭಃ ॥
ಅನುವಾದ
ಲಕ್ಷ್ಮಣನು ಹೀಗೆ ಹೇಳಿದಾಗ ಇಕ್ಷ್ವಾಕುಕುಲನಂದನ ಪುರುಷಶ್ರೇಷ್ಠ ಶ್ರೀರಾಮನು ಇಂತೆಂದನು.॥3॥
ಮೂಲಮ್ - 4
ತೌ ಪರಸ್ಪರಶಾಪೇನ ದೇಹಮುತ್ಸೃಜ್ಯ ಧಾರ್ಮಿಕೌ ।
ಅಭೂತಾಂ ನೃಪವಿಪ್ರರ್ಷೀ ವಾಯುಭೂತೌತಪೋಧನೌ ॥
ಅನುವಾದ
ಸುಮಿತ್ರಾನಂದನ! ಪರಸ್ಪರ ಶಾಪ ಕೊಟ್ಟು ದೇಹತ್ಯಾಗ ಮಾಡಿ ತಪಸ್ಸಿನ ಧನೀ ಧರ್ಮಾತ್ಮಾ ರಾಜರ್ಷಿ ಹಾಗೂ ಬ್ರಹ್ಮರ್ಷಿಯರು ವಾಯು ರೂಪರಾದರು.॥4॥
ಮೂಲಮ್ - 5
ಅಶರೀರಃ ಶರೀರಸ್ಯ ಕೃತೇಽನ್ಯಸ್ಯ ಮಹಾಮುನಿಃ ।
ವಸಿಷ್ಠಸ್ತು ಮಹಾತೇಜಾ ಜಗಾಮ ಪಿತುರಂತಿಕಮ್ ॥
ಅನುವಾದ
ಮಹಾತೇಜಸ್ವೀ ಮಹಾಮುನಿ ವಸಿಷ್ಠರು ಶರೀರರಹಿತರಾದಾಗ ಇನ್ನೊಂದು ಶರೀರದ ಪ್ರಾಪ್ತಿಗಾಗಿ ತನ್ನ ತಂದೆ ಬ್ರಹ್ಮದೇವರ ಬಳಿಗೆ ಹೋದರು.॥5॥
ಮೂಲಮ್ - 6
ಸೋಽಭಿವಾದ್ಯ ತತಃ ಪಾದೌ ದೇವದೇವಸ್ಯಧರ್ಮವಿತ್ ।
ಪಿತಾಮಹಮಥೋವಾಚ ವಾಯುಭೂತ ಇದಂ ವಚಃ ॥
ಅನುವಾದ
ಧರ್ಮಜ್ಞ ವಾಯುರೂಪಿ ವಸಿಷ್ಠರು ದೇವಾಧಿದೇವ ಬ್ರಹ್ಮದೇವರ ಚರಣಗಳಲ್ಲಿ ವಂದಿಸಿಕೊಂಡು, ಆ ಪಿತಾಮಹರಲ್ಲಿ ಹೀಗೆ ಹೇಳಿದರು.॥6॥
ಮೂಲಮ್ - 7
ಭಗವನ್ನಿಮಿಶಾಪೇನ ವಿದೇಹತ್ವಮುಪಾಗಮಮ್ ।
ದೇವದೇವ ಮಹಾದೇವ ವಾಯುಭೂತೋಽಹಮಂಡಜ ॥
ಅನುವಾದ
ಬ್ರಹ್ಮಾಂಡ ಕಟಾಹದಿಂದ ಪ್ರಕಟಗೊಂಡ ದೇವಾಧಿದೇವ ಮಹಾದೇವಾ! ಭಗವನ್! ರಾಜಾನಿಮಿಯ ಶಾಪದಿಂದ ನಾನು ದೇಹಹೀನನಾಗಿದ್ದೇನೆ; ಆದ್ದರಿಂದ ವಾಯುರೂಪದಿಂದ ಇದ್ದೇನೆ.॥7॥
ಮೂಲಮ್ - 8½
ಸರ್ವೇಷಾಂ ದೇಹಹೀನಾನಾಂ ಮಹದ್ದುಃಖಂ ಭವಿಷ್ಯತಿ ।
ಲುಪ್ಯಂತೇ ಸರ್ವಕಾರ್ಯಾಣಿ ಹೀನದೇಹಸ್ಯ ವೈ ಪ್ರಭೋ ॥
ದೇಹಸ್ಯಾನ್ಯಸ್ಯ ಸದ್ಭಾವೇ ಪ್ರಸಾದಂ ಕರ್ತುಮರ್ಹಸಿ ।
ಅನುವಾದ
ಪ್ರಭೋ! ಸಮಸ್ತ ದೇಹಹೀನರಿಗೆ ಮಹಾದುಃಖವಾಗುತ್ತದೆ, ಆಗುತ್ತಾ ಇರುವುದು; ಏಕೆಂದರೆ ದೇಹಹೀನ ಪ್ರಾಣಿಯ ಎಲ್ಲ ಕಾರ್ಯ ಲುಪ್ತವಾಗುತ್ತವೆ. ಆದ್ದರಿಂದ ಇನ್ನೊಂದು ಶರೀರದ ಪ್ರಾಪ್ತಿಗಾಗಿ ತಾವು ಕೃಪೆತೋರಿರಿ.॥8½॥
ಮೂಲಮ್ - 9
ತಮುವಾಚ ತತೋ ಬ್ರಹ್ಮಾ ಸ್ವಯಂಭೂರಮಿತಪ್ರಭಃ ॥
ಮೂಲಮ್ - 10
ಮಿತ್ರಾ ವರುಣಜಂ ತೇಜ ಆವಿಶ ತ್ವಂ ಮಹಾಯಶಃ ।
ಅಯೋನಿಜಸ್ತ್ವಂ ಭವಿತಾ ತತ್ರಾಪಿ ದ್ವಿಜಸತ್ತಮ ।
ಧರ್ಮೇಣ ಮಹತಾ ಯುಕ್ತಃ ಪುನರೇಷ್ಯಸಿ ಮೇ ವಶಮ್ ॥
ಅನುವಾದ
ಆಗ ಅಮಿತ ತೇಜಸ್ವೀ ಸ್ವಯಂಭೂ ಬ್ರಹ್ಮದೇವರು ಹೇಳಿದರು - ಮಹಾಯಶಸ್ವೀ ದ್ವಿಜಶ್ರೇಷ್ಠನೇ! ನೀನು ಮಿತ್ರ ಮತ್ತು ವರುಣರು ತ್ಯಜಿಸಿದ ವೀರ್ಯದಲ್ಲಿ ಪ್ರವಿಷ್ಟನಾಗು. ಅಲ್ಲಿಗೆ ಹೋಗಿಯೂ ನೀನು ಅಯೋನಿಜನಾಗಿಯೇ ಉತ್ಪನ್ನನಾಗಿ, ಮಹಾಧರ್ಮದಿಂದ ಕೂಡಿದ ಪುತ್ರರೂಪದಿಂದ ನನ್ನ ವಂಶದಲ್ಲೇ ಬರುವೆ. (ನನ್ನ ಪುತ್ರನಾದ ಕಾರಣ ನಿನಗೆ ಹಿಂದಿನಂತೆ ಪ್ರಜಾಪತಿಯ ಪದವಿ ಪ್ರಾಪ್ತವಾಗುವುದು.॥9-10॥
ಮೂಲಮ್ - 11
ಏವಮುಕ್ತಸ್ತು ದೇವೇನ ಅಭಿವಾದ್ಯ ಪ್ರದಕ್ಷಿಣಮ್ ।
ಕೃತ್ವಾ ಪಿತಾಮಹಂ ತೂರ್ಣಂ ಪ್ರಯಯೌ ವರುಣಾಲಯಮ್ ॥
ಅನುವಾದ
ಬ್ರಹ್ಮದೇವರು ಹೀಗೆ ಹೇಳಿದಾಗ ಅವರ ಚರಣಗಳಿಗೆ ನಮಸ್ಕರಿಸಿ, ಅವರಿಗೆ ಪ್ರದಕ್ಷಿಣೆ ಬಂದು ವಾಯುರೂಪೀ ವಸಿಷ್ಠರು ವರುಣಲೋಕಕ್ಕೆ ತೆರಳಿದರು.॥11॥
ಮೂಲಮ್ - 12
ತಮೇವ ಕಾಲಂ ಮಿತ್ರೋಽಪಿ ವರುಣತ್ವಮಕಾರಯತ್ ।
ಕ್ಷೀರೋದೇನ ಸಹೋಪೇತಃ ಪೂಜ್ಯಮಾನಃ ಸುರೇಶ್ವರೈಃ ॥
ಅನುವಾದ
ಆಗ ಮಿತ್ರದೇವತೆಯೂ ವರುಣನ ಅಧಿಕಾರವನ್ನು ಪಾಲಿಸುತ್ತಿದ್ದನು. ಅವನು ವರುಣನೊಂದಿಗೆ ಇದ್ದು ಸಮಸ್ತ ದೇವತೆಗಳಿಂದ ಪೂಜಿತನಾಗುತ್ತಿದ್ದನು.॥12॥
ಮೂಲಮ್ - 13
ಏತಸ್ಮಿನ್ನೇವ ಕಾಲೇ ತು ಉರ್ವಶೀ ಪರಮಾಪ್ಸರಾಃ ।
ಯದೃಚ್ಛಯಾ ತಮುದ್ದೇಶಮಾಗತಾ ಸಖಿಭಿರ್ವೃತಾ ॥
ಅನುವಾದ
ಆಗಲೇ ಅಪ್ಸರೆಯರಲ್ಲಿ ಶ್ರೇಷ್ಠಳಾದ ಊರ್ವಶೀ ಸಖಿಯರೊಂದಿಗೆ ಅಕಸ್ಮಾತ್ ಅಲ್ಲಿಗೆ ಬಂದಳು.॥13॥
ಮೂಲಮ್ - 14
ತಾಂ ದೃಷ್ಟ್ವಾ ರೂಪಸಂಪನ್ನಾಂ ಕ್ರೀಡಂತೀಂ ವರುಣಾಲಯೇ ।
ತದಾವಿಶತ್ಪರೋ ಹರ್ಷೋ ವರುಣಂಚೋರ್ವಶೀಕೃತೇ ॥
ಅನುವಾದ
ಆ ಪರಮ ಸುಂದರಿಯು ಕ್ಷೀರಸಾಗರದಲ್ಲಿ ಸ್ನಾನ ಮಾಡಿ ಜಲಕ್ರೀಡೆಯಾಡುತ್ತಿರುವಾಗ ವರುಣನ ಮನಸ್ಸಿನಲ್ಲಿ ಊರ್ವಶಿಯ ಕುರಿತು ಅತ್ಯಂತ ಉಲ್ಲಾಸ ಪ್ರಕಟವಾಯಿತು.॥14॥
ಮೂಲಮ್ - 15
ಸ ತಾಂ ಪದ್ಮಪಲಾಶಾಕ್ಷೀಂ ಪೂರ್ಣಚಂದ್ರನಿಭಾನನಾಮ್ ।
ವರುಣೋ ವರಯಾಮಾಸ ಮೈಥುನಾಯಾಪ್ಸರೋವರಾಮ್ ॥
ಅನುವಾದ
ಅವನು ಅರಳಿದ ಕಮಲದಂತೆ ನೇತ್ರವುಳ್ಳ, ಚಂದ್ರನಂತಹ ಮನೋಹರ ಮುಖವುಳ್ಳ, ಆ ಸುಂದರೀ ಅಪ್ಸರೆಯನ್ನು ಸಮಾಗಮಕ್ಕಾಗಿ ಆಮಂತ್ರಿಸಿದನು.॥15॥
ಮೂಲಮ್ - 16
ಪ್ರತ್ಯುವಾಚ ತತಃ ಸಾ ತು ವರುಣಂ ಪ್ರಾಂಜಲಿಃ ಸ್ಥಿತಾ ।
ಮಿತ್ರೇಣಾಹಂ ವೃತಾ ಸಾಕ್ಷಾತ್ಪೂರ್ವಮೇವ ಸುರೇಶ್ವರ ॥
ಅನುವಾದ
ಆಗ ಊರ್ವಶಿಯು ಕೈಮುಗಿದು ವರುಣನಲ್ಲಿ ಹೇಳಿದಳು - ಸುರೇಶ್ವರ! ಸಾಕ್ಷಾತ್ ಮಿತ್ರದೇವನು ಮೊದಲೇ ನನ್ನನ್ನು ವರಣ ಮಾಡಿಕೊಂಡಿರುವನು.॥16॥
ಮೂಲಮ್ - 17
ವರುಣಸ್ತ್ವಬ್ರವೀದ್ವಾಕ್ಯಂ ಕಂದರ್ಪಶರಪೀಡಿತಃ ।
ಇದಂ ತೇಜಃ ಸಮುತ್ಸ್ರಕ್ಷ್ಯೇ ಕುಂಭೇಽಸ್ಮಿನ್ ದೇವನಿರ್ಮಿತೇ ॥
ಮೂಲಮ್ - 18
ಏವಮುತ್ಸೃಜ್ಯ ಸುಶ್ರೋಣಿ ತ್ವಯ್ಯಹಂ ವರವರ್ಣಿನಿ ।
ಕೃತಕಾಮೋಭವಿಷ್ಯಾಮಿ ಯದಿ ನೇಚ್ಛಸಿ ಸಂಗಮಮ್ ॥
ಅನುವಾದ
ಇದನ್ನು ಕೇಳಿ ವರುಣನು ಕಾಮಪೀಡಿತನಾಗಿ ಹೇಳಿದನು-ಸುಂದರರೂಪ-ಬಣ್ಣವುಳ್ಳ ಸುಂದರಿ! ನೀನು ನನ್ನೊಂದಿಗೆ ಸಮಾಗಮವನ್ನು ಬಯಸದಿದ್ದರೆ, ನಾನು ನಿನ್ನ ಬಳಿಯಲ್ಲಿರುವ ಈ ದೇವನಿರ್ಮಿತ ಕುಂಭದಲ್ಲಿ ನನ್ನ ವೀರ್ಯವನ್ನು ತ್ಯಜಿಸುವೆನು, ಹೀಗೆ ವೀರ್ಯತ್ಯಜಿಸಿಯೇ ಸಫಲಮನೋರಥನಾಗುವೆ.॥17-18॥
ಮೂಲಮ್ - 19
ತಸ್ಯ ತಲ್ಲೋಕನಾಥಸ್ಯ ವರುಣಸ್ಯ ಸುಭಾಷಿತಮ್ ।
ಉರ್ವಶೀ ಪರಮಪ್ರೀತಾ ಶ್ರುತ್ವಾ ವಾಕ್ಯಮುವಾಚ ಹ ॥
ಅನುವಾದ
ಲೋಕನಾಥ ವರುಣನ ಈ ಮಾತನ್ನು ಕೇಳಿ ಊರ್ವಶಿಗೂ ಬಹಳ ಸಂತೋಷವಾಗಿ ಹೇಳಿದಳು .॥19॥
ಮೂಲಮ್ - 20
ಕಾಮಮೇತದ್ಭವತ್ವೇವಂ ಹೃದಯಂ ಮೇ ತ್ವಯಿ ಸ್ಥಿತಮ್ ।
ಭಾವಶ್ಚಾಭ್ಯಧಿಕಂ ತುಭ್ಯಂ ದೇಹೋ ಮಿತ್ರಸ್ಯ ತು ಪ್ರಭೋ ॥
ಅನುವಾದ
ಸ್ವಾಮಿ! ನಿಮ್ಮ ಇಚ್ಛೆಯಂತೆ ಹಾಗೆಯೇ ಆಗಲಿ. ನನ್ನ ಮನಸ್ಸು ವಿಶೇಷವಾಗಿ ನಿಮ್ಮಲ್ಲಿ ಅನುರಕ್ತವಾಗಿದೆ ಮತ್ತು ನಿಮ್ಮ ಅನುರಾಗವೂ ನನ್ನಲ್ಲಿ ಹೆಚ್ಚಾಗಿಯೇ ಇದೆ. ಅದಕ್ಕಾಗಿ ನೀವು ನನ್ನ ಉದ್ದೇಶದಿಂದ ಆ ಕುಂಭದಲ್ಲಿ ವೀರ್ಯಾದಾನ ಮಾಡಿರಿ. ಈ ಶರೀರದಲ್ಲಾದರೋ ಈಗ ಮಿತ್ರನ ಅಧಿಕಾರವಿದೆ.॥20॥
ಮೂಲಮ್ - 21
ಉರ್ವಶ್ಯಾ ಏವಮುಕ್ತಸ್ತು ರೇತಸ್ತನ್ಮಹದದ್ಭುತಮ್ ।
ಜ್ವಲದಗ್ನಿ ಸಮಪ್ರಖ್ಯಂ ತಸ್ಮಿನ್ಕುಂಭೇನ್ಯವಾಸೃಜತ್ ॥
ಅನುವಾದ
ಊರ್ವಶಿಯು ಹೀಗೆ ಹೇಳಿದಾಗ ವರುಣನು ಪ್ರಜ್ವಲಿತ ಅಗ್ನಿಯಂತಹ ಪ್ರಕಾಶ ಮಾನವಾದ ತನ್ನ ಅದ್ಭುತ ತೇಜ ‘ವೀರ್ಯ’ವನ್ನು ಆ ಕುಂಭದಲ್ಲಿ ಹಾಕಿದನು.॥21॥
ಮೂಲಮ್ - 22
ಉರ್ವಶೀ ತ್ವಗಮತ್ತತ್ರ ಮಿತ್ರೋ ವೈ ಯತ್ರ ದೇವತಾ ।
ತಾಂ ತು ಮಿತ್ರಃ ಸುಸಂಕ್ರುದ್ಧ ಉರ್ವಶೀಮಿದಮಬ್ರವೀತ್ ॥
ಅನುವಾದ
ಅನಂತರ ಊರ್ವಶಿಯು ಮಿತ್ರದೇವರು ಇರುವಲ್ಲಿಗೆ ಹೋದಳು. ಆಗ ಮಿತ್ರದೇವತೆ ಕುಪಿತನಾಗಿ ಆ ಊರ್ವಶಿಯಲ್ಲಿ ಹೀಗೆ ಹೇಳಿದನು.॥22॥
ಮೂಲಮ್ - 23
ಮಯಾಭಿಮಂತ್ರಿತಾ ಪೂರ್ವಂಕಸ್ಮಾತ್ತ್ವಮವಸರ್ಜಿತಾ ।
ಪತಿಮನ್ಯಂ ವೃತವತೀ ಕಿಮರ್ಥಂ ದುಷ್ಟಚಾರಿಣಿ ॥
ಅನುವಾದ
ದುರಾಚಾರಿಣಿಯೇ! ಮೊದಲು ನಾನು ನಿನ್ನನ್ನು ಆಮಂತ್ರಿಸಿದ್ದೆ; ಹಾಗಿರುವಾಗ ನೀನು ನನ್ನನ್ನು ಏಕೆ ತ್ಯಜಿಸಿದೆ? ಏಕೆ ಇನ್ನೊಬ್ಬ ಪತಿಯನ್ನು ವರಿಸಿದೆ.॥22॥
ಮೂಲಮ್ - 24
ಅನೇನ ದುಷ್ಕೃತೇನ ತ್ವಂ ಮತ್ಕ್ರೋಧಕಲುಷೀಕೃತಾ ।
ಮನುಷ್ಯಲೋಕಮಾಸ್ಥಾಯ ಕಂಚಿತ್ಕಾಲಂ ನಿವತ್ಸ್ಯಸಿ ॥
ಅನುವಾದ
ನಿನ್ನ ಈ ಪಾಪದಿಂದಾಗಿ ನನ್ನ ಕ್ರೋಧದಿಂದ ಕಲುಷಿತಳಾಗಿ ನೀನು ಸ್ವಲ್ಪಕಾಲ ಮನುಷ್ಯಲೋಕಕ್ಕೆ ಹೋಗಿ ವಾಸಿಸು.॥23॥
ಮೂಲಮ್ - 25
ಬುಧಸ್ಯ ಪುತ್ರೋ ರಾಜರ್ಷಿಃ ಕಾಶಿರಾಜಃಪುರೂರವಾಃ ।
ತಮಭ್ಯಾಗಚ್ಛ ದುರ್ಬುದ್ಧೇ ಸ ತೇ ಭರ್ತಾ ಭವಿಷ್ಯತಿ ॥
ಅನುವಾದ
ದುರ್ಬುದ್ಧಿಯವಳೇ ! ಕಾಶಿದೇಶದ ಅರಸು ಬುಧನ ಪುತ್ರ ರಾಜರ್ಷಿ ಪುರೂರವನ ಬಳಿಗೆ ಹೋಗು; ಅವನೇ ನಿನ್ನ ಪತಿಯಾಗುವನು.॥25॥
ಮೂಲಮ್ - 26
ತತಃ ಸಾ ಶಾಪದೋಷೇಣ ಪುರೂರವಸಮಭ್ಯಗಾತ್ ।
ಪ್ರತಿಷ್ಠಾನೇ ಪುರೂರವಂ ಬುಧಸ್ಯಾತ್ಮಜವೌರಸಮ್ ॥
ಅನುವಾದ
ಆಗ ಶಾಪದೋಷದಿಂದ ದೂಷಿತಳಾಗಿ ಪ್ರತಿಷ್ಠಾನಪುರದ ಬುಧನ ಔರಸ ಪುತ್ರನಾದ ಪುರೂರವನ ಬಳಿಗೆ ಹೋದಳು.॥26॥
ಮೂಲಮ್ - 27
ತಸ್ಯ ಜಜ್ಞೇ ತತಃ ಶ್ರೀಮಾನಾಯುಃ ಪುತ್ರೋ ಮಹಾಬಲಃ ।
ನಹುಷೋ ಯಸ್ಯ ಪುತ್ರಸ್ತು ಬಭೂವೇಂದ್ರಸಮದ್ಯುತಿಃ ॥
ಅನುವಾದ
ಪುರೂರವನು ಊರ್ವಶಿಯ ಗರ್ಭದಿಂದ ಶ್ರೀಮಾನ್ ಆಯು ಎಂಬ ಮಹಾಬಲಿ ಪುತ್ರನನ್ನು ಪಡೆದನು. ಅವನ ಪುತ್ರನೇ ಇಂದ್ರತುಲ್ಯ ತೇಜಸ್ವೀ ಮಹಾರಾಜಾ ನಹುಷನಾಗಿದ್ದನು.॥27॥
ಮೂಲಮ್ - 28
ವಜ್ರಮುತ್ಸೃಜ್ಯ ವೃತ್ರಾಯ ಶ್ರಾಂತೇಽಥ ತ್ರಿದಿವೇಶ್ವರೇ ।
ಶತಂ ವರ್ಷಸಹಸ್ರಾಣಿ ಯೇನೇಂದ್ರತ್ವಂ ಪ್ರಶಾಸಿತಮ್ ॥
ಅನುವಾದ
ವೃತ್ರಾಸುರನ ಮೇಲೆ ವಜ್ರಪ್ರಹಾರ ಮಾಡಿ ದೇವೇಂದ್ರನು ಬ್ರಹ್ಮಹತ್ಯೆಯ ಭಯದಿಂದ ಅಡಗಿದ್ದಾಗ ನಹುಷನೇ ಒಂದುಲಕ್ಷ ವರ್ಷಗಳವರೆಗೆ ಇಂದ್ರಪದವಿಯಲ್ಲಿ ಪ್ರತಿಷ್ಠಿತನಾಗಿ ಮೂರು ಲೋಕಗಳನ್ನು ಆಳಿದ್ದನು.॥28॥
ಮೂಲಮ್ - 29
ಸಾ ತೇನ ಶಾಪೇನ ಜಗಾಮ ಭೂಮಿಂ
ತದೋರ್ವಶೀ ಚಾರುದಶೀ ಸುನೇತ್ರಾ ।
ಬಹೂನಿ ವರ್ಷಾಣ್ಯವಸಚ್ಚ ಸುಭ್ರೂಃ
ಶಾಪಕ್ಷಯದಿಂದ್ರಸದೋ ಯಯೌ ಚ ॥
ಅನುವಾದ
ಲಕ್ಷ್ಮಣ! ಶುಭ್ರವಾದ ಹಲ್ಲುಗಳನ್ನು ಸುಂದರ ನೇತ್ರಗಳನ್ನು ಹೊಂದಿದ್ದ ಊರ್ವಶಿಯು ಮಿತ್ರನ ಶಾಪದಂತೆ ಭೂಮಿಗಿಳಿದಳು. ಅಲ್ಲಿ ಆ ಸುಂದರಿಯು ಬಹಳ ವರ್ಷವಿದ್ದು, ಶಾಪದ ಕ್ಷಯವಾದಾಗ ಇಂದ್ರಸಭೆಗೆ ತೆರಳಿದಳು.॥29॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಐವತ್ತಾರನೆಯ ಸರ್ಗ ಪೂರ್ಣವಾಯಿತು. ॥56॥