[ಐವತ್ತೈದನೆಯ ಸರ್ಗ]
ಭಾಗಸೂಚನಾ
ರಾಜಾನಿಮಿ ಮತ್ತು ವಸಿಷ್ಠರು ಪರಸ್ಪರ ಶಾಪದಿಂದ ದೇಹತ್ಯಾಗ
ಮೂಲಮ್ - 1
ಏಷ ತೇ ನೃಗಶಾಪಸ್ಯ ವಿಸ್ತರೋಽಭಿಹಿತೋ ಮಯಾ ।
ಯದ್ಯಸ್ತಿ ಶ್ರವಣೇ ಶ್ರದ್ಧಾ ಶೃಣುಷ್ವೇಹಾಪರಾಂ ಕಥಾಮ್ ॥
ಅನುವಾದ
(ಶ್ರೀರಾಮನು ಹೇಳಿದನು- ) ಲಕ್ಷ್ಮಣ ! ಹೀಗೆ ನಾನು ನಿನಗೆ ನೃಗರಾಜನ ಶಾಪ ಪ್ರಸಂಗವನ್ನು ವಿಸ್ತಾರವಾಗಿ ತಿಳಿಸಿದೆ. ನಿನಗೆ ಕೇಳುವ ಇಚ್ಛೆ ಇದ್ದರೆ ಇನ್ನೊಂದು ಕಥೆಯನ್ನು ಕೇಳು.॥1॥
ಮೂಲಮ್ - 2
ಏವಮುಕ್ತಸ್ತು ರಾಮೇಣ ಸೌಮಿತ್ರಿಃ ಪುನರಬ್ರವೀತ್ ।
ತೃಪ್ತಿರಾಶ್ಚರ್ಯಭೂತಾನಾಂ ಕಥಾನಾಂ ನಾಸ್ತಿ ಮೇ ನೃಪ ॥
ಅನುವಾದ
ಶ್ರೀರಾಮನು ಹೀಗೆ ಹೇಳಿದಾಗ ಸುಮಿತ್ರಾನಂದನ ಹೇಳಿದನು - ನರೇಶ್ವರ! ಇಂತಹ ಆಶ್ಚರ್ಯಕರ ಕಥೆಗಳನ್ನು ಕೇಳಲು ನನಗೆ ಎಂದೂ ತೃಪ್ತಿಯಾಗುವುದಿಲ್ಲ.॥2॥
ಮೂಲಮ್ - 3
ಲಕ್ಷ್ಮಣೇನೈವಮುಕ್ತಸ್ತು ರಾಮ ಇಕ್ಷ್ವಾಕುನಂದನಃ ।
ಕಥಾಂ ಪರಮಧರ್ಮಿಷ್ಠಾಂ ವ್ಯಾಹರ್ತುಮುಪಚಕ್ರಮೇ ॥
ಅನುವಾದ
ಲಕ್ಷ್ಮಣನು ಹೀಗೆ ಹೇಳಿದಾಗ ಇಕ್ಷ್ವಾಕುಕುಲನಂದನ ಶ್ರೀರಾಮನು ಪುನಃ ಉತ್ತಮ ಧರ್ಮದಿಂದ ಕೂಡಿದ ಕಥೆಯನ್ನು ಹೇಳಲು ಪ್ರಾರಂಭಿಸಿದನು.॥3॥
ಮೂಲಮ್ - 4
ಆಸೀದ್ರಾಜಾ ನಿಮಿರ್ನಾಮ ಇಕ್ಷ್ವಾಕೂಣಾಂ ಮಹಾತ್ಮನಾಮ್ ।
ಪುತ್ರೋ ದ್ವಾದಶಮೋ ವೀರ್ಯೇ ಧರ್ಮೇ ಚ ಪರಿನಿಷ್ಠಿತಃ ॥
ಅನುವಾದ
ಸುಮಿತ್ರಾನಂದನ! ಮಹಾತ್ಮಾ ಇಕ್ಷ್ವಾಕು ಪುತ್ರರಲ್ಲಿ ಹನ್ನೆರಡನೆಯ* ಪುತ್ರ ನಿಮಿ ಎಂಬ ಒಬ್ಬ ರಾಜನಾಗಿ ಹೋದನು. ಅವನು ಪರಾಕ್ರಮ ಮತ್ತು ಧರ್ಮದಲ್ಲಿ ಪೂರ್ಣವಾಗಿ ಸ್ಥಿರವಾಗಿ ಇರುವವನಿದ್ದನು.॥4॥
ಟಿಪ್ಪನೀ
- ಶ್ರೀಮದ್ಭಾಗವತ 9-6-4ರಲ್ಲಿ, ವಿಷ್ಣುಪುರಾಣ 4-2-11ರಲ್ಲಿ, ಮಹಾಭಾರತ ಅನುಶಾಸನಪರ್ವ 2-5ರಲ್ಲಿ ಇಕ್ಷ್ವಾಕುವಿಗೆ ನೂರು ಪುತ್ರರೆಂದು ತಿಳಿಸಲಾಗಿದೆ. ಇವರಲ್ಲಿ ವಿಕುಕ್ಷಿ, ನಿಮಿ, ದಂಡ ಇವರು ಪ್ರಧಾನರಾಗಿದ್ದರು. ಈ ದೃಷ್ಟಿಯಿಂದ ನಿಮಿ ದ್ವಿತೀಯ ಪುತ್ರನೆಂದು ಸಿದ್ಧವಾಗುತ್ತದೆ; ಆದರೆ ಇಲ್ಲಿ ಮೂಲದಲ್ಲಿ ಇವನನ್ನು ಹನ್ನೆರಡನೆಯವನೆಂದು ಹೇಳಿದೆ. ಗುಣವಿಶೇಷದಿಂದಾಗಿ ಈ ಮೂವರು ಪ್ರಧಾನರೆಂದು ಹೇಳಿರಬಹುದು ಮತ್ತು ವಯಸ್ಸಿನ ಕ್ರಮದಿಂದ ಹನ್ನೆರಡನೆಯವನಿರಬಹುದು.
ಮೂಲಮ್ - 5
ಸ ರಾಜಾ ವೀರ್ಯಸಂಪನ್ನಃ ಪುರಂ ದೇವಪುರೋಪಮಮ್ ।
ನಿವೇಶಯಾಮಾಸ ತದಾಅಭ್ಯಾಶೇ ಗೌತಮಸ್ಯ ತು ॥
ಅನುವಾದ
ಆ ಪರಾಕ್ರಮ ಸಂಪನ್ನ ನರೇಶನು ಗೌತಮರ ಆಶ್ರಮದ ಹತ್ತಿರದಲ್ಲೆ ದೇವಪುರದಂತೆ ಒಂದು ನಗರವನ್ನು ನೆಲೆಗೊಳಿಸಿದನು.॥5॥
ಮೂಲಮ್ - 6
ಪುರಸ್ಯ ಸುಕೃತಂ ನಾಮ ವೈಜಯಂತಮಿತಿ ಶ್ರುತಮ್ ।
ನಿವೇಶಂ ಯತ್ರ ರಾಜರ್ಷಿರ್ನಿಮಿಶ್ಚಕ್ರೇ ಮಹಾಯಶಾಃ ॥
ಅನುವಾದ
ಮಹಾಯಶಸ್ವೀ ರಾಜರ್ಷಿ ನಿಮಿಯು ವಾಸಿಸುವ ನಗರದ ಹೆಸರು ವೈಜಯಂತ ಎಂದು ಇಟ್ಟನು. (ದೇವರಾಜ ಇಂದ್ರನ ಪಾಸಾದನ ಹೆಸರು ವೈಜಯಂತ ಎಂದು ಇತ್ತು. ನಿಮಿಯು ಅದೇ ಹೆಸರನ್ನಿಟ್ಟಿದ್ದನು.॥6॥
ಮೂಲಮ್ - 7
ತಸ್ಯ ಬುದ್ಧಿಃ ಸಮುತ್ಪನ್ನಾ ನಿವೇಶ್ಯ ಸುಮಹಾಪುರಮ್ ।
ಯಜೇಯಂ ದೀರ್ಘಸತ್ರೇಣ ಪಿತುಃ ಪ್ರಹ್ಲಾದಯನ್ಮನಃ ॥
ಅನುವಾದ
ಆ ಮಹಾನಗರವನ್ನು ಸ್ಥಾಪಿಸಿ, ನಾನು ತಂದೆಯ ಮನಸ್ಸಿಗೆ ಆಹ್ಲಾದವನ್ನುಂಟು ಮಾಡುವಂತಹ ದೀರ್ಘಕಾಲದವರೆಗೆ ನಡೆಯುವ ಯಜ್ಞಾನುಷ್ಠಾನ ಮಾಡುವೆನೆಂಬ ವಿಚಾರ ನಿಮಿಗೆ ಮನಸ್ಸಿನಲ್ಲಿ ಉಂಟಾಯಿತು.॥7॥
ಮೂಲಮ್ - 8
ತತಃ ಪಿತರಮಾಮಂತ್ರ್ಯ ಇಕ್ಷ್ವಾಕುಂ ಹಿ ಮನೋಃ ಸುತಮ್ ।
ವಸಿಷ್ಠಂ ವರಯಾಮಾಸ ಪೂರ್ವಂ ಬ್ರಹ್ಮರ್ಷಿಸತ್ತಮಮ್ ॥
ಮೂಲಮ್ - 9
ಅನಂತರಂ ಸ ರಾಜರ್ಷಿರ್ನಿಮಿರಿಕ್ಷ್ವಾಕುನಂದನಃ ।
ಅತ್ರಿಮಂಗಿರಸಂ ಚೈವ ಭೃಗುಂ ಚೈವ ತಪೋನಿಧಿಮ್ ॥
ಅನುವಾದ
ಅನಂತರ ಇಕ್ಷ್ವಾಕುಕುಲನಂದ ನಿಮಿಯು ತನ್ನ ತಂದೆ ಮನುಪುತ್ರ ಇಕ್ಷ್ವಾಕುವಿನಲ್ಲಿ ಕೇಳಿ ತನ್ನ ಯಜ್ಞ ಮಾಡಿಸಲು ಮೊಟ್ಟಮೊದಲು ಬ್ರಹ್ಮರ್ಷಿ ಶಿರೋಮಣಿ ವಸಿಷ್ಠರನ್ನು ವರಣ ಮಾಡಿದನು. ಬಳಿಕ ಅತ್ರಿ, ಅಂಗಿರಾ, ತಪೋಧನ, ಭೃಗುವನ್ನು ಆಮಂತ್ರಿಸಿದನು.॥8-9॥
ಮೂಲಮ್ - 10
ತಮುವಾಚವಸಿಷ್ಠಸ್ತು ನಿಮಿಂ ರಾಜರ್ಷಿಸತ್ತಮಮ್ ।
ವೃತೋಽಹಂ ಪೂರ್ವಮಿಂದ್ರೇಣ ಅಂತರಂ ಪ್ರತಿಪಾಲಯ ॥
ಅನುವಾದ
ಆಗ ಬ್ರಹ್ಮರ್ಷಿ ವಸಿಷ್ಠರು ರಾಜರ್ಷಿಯರಲ್ಲಿ ಶ್ರೇಷ್ಠ ನಿಮಿಯಲ್ಲಿ ಹೇಳಿದರು - ದೇವೇಂದ್ರನು ಒಂದು ಯಜ್ಞಕ್ಕಾಗಿ ಮೊದಲೇ ನನ್ನನ್ನು ವರಣಮಾಡಿಕೊಂಡಿರುವನು. ಆದ್ದರಿಂದ ಆ ಯಜ್ಞ ಸಮಾಪ್ತವಾಗುವ ತನಕ ನನ್ನ ಆಗಮನವನ್ನು ಪ್ರತೀಕ್ಷೆ ಮಾಡುತ್ತಾ ಇರು.॥10॥
ಮೂಲಮ್ - 11
ಅನಂತರಂ ಮಹಾವಿಪ್ರೋ ಗೌತಮಃ ಪ್ರತ್ಯಪೂರಯತ್ ।
ವಸಿಷ್ಠೋಽಪಿ ಮಹಾತೇಜಾ ಇಂದ್ರಯಜ್ಞಮಥಾಕರೋತ್ ॥
ಅನುವಾದ
ವಸಿಷ್ಠರು ಹೊರಟು ಹೋದ ಬಳಿಕ ಮಹಾಬ್ರಾಹ್ಮಣ ಮಹರ್ಷಿ ಗೌತಮರು ಬಂದು ಅವನ ಕಾರ್ಯವನ್ನು ಪೂರ್ಣಗೊಳಿಸಿದರು. ಅತ್ತ ಮಹಾತೇಜಸ್ವೀ ವಸಿಷ್ಠರೂ ಇಂದ್ರನ ಯಜ್ಞ ಮಾಡಿಸತೊಡಗಿದರು.॥11॥
ಮೂಲಮ್ - 12
ನಿಮಿಸ್ತು ರಾಜಾ ವಿಪ್ರಾಂಸ್ತಾನ್ಸಮಾನೀಯ ನರಾಧಿಪಃ ।
ಅಯಜದ್ಧಿಮವತ್ಪಾರ್ಶ್ವೇ ಸ್ವಪುರಸ್ಯ ಸಮೀಪತಃ ।
ಪಂಚವರ್ಷಸಹಸ್ರಾಣಿ ರಾಜಾ ದೀಕ್ಷಾಮಥಾಕರೋತ್ ॥
ಅನುವಾದ
ರಾಜಾನಿಮಿಯು ಆ ಬ್ರಾಹ್ಮಣರನ್ನು ಕರೆಯಿಸಿ ಹಿಮಾಲಯದ ಬಳಿ ತನ್ನ ನಗರದ ಸಮೀಪವೇ, ಐದುಸಾವಿರ ವರ್ಷಗಳವರೆಗೆ ನಡೆಯುವ ಯಜ್ಞದೀಕ್ಷೆ ಪಡೆದು ಯಜ್ಞ ಪ್ರಾರಂಭಿಸಿದನು.॥12॥
ಮೂಲಮ್ - 13½
ಇಂದ್ರಯಜ್ಞಾವಸಾನೇ ತು ವಸಿಷ್ಠೋ ಭಗವಾನೃಷಿಃ ।
ಸಕಾಶಮಾಗತೋ ರಾಜ್ಞೋ ಹೌತ್ರಂ ಕರ್ತುಮನಿಂದಿತಃ ॥
ತದಂತರಮಥಾಪಶ್ಯದ್ ಗೌತಮೇನಾಭಿಪೂರಿತಮ್ ।
ಅನುವಾದ
ಇತ್ತ ಇಂದ್ರನ ಯಜ್ಞ ಸಮಾಪ್ತವಾದಾಗ ಅನಿಂದ್ಯ ವಸಿಷ್ಠ ಋಷಿಗಳು ನಿಮಿ ರಾಜನ ಬಳಿಗೆ ಹೋತೃಕರ್ಮ ಮಾಡಲು ಬಂದರು. ಅಲ್ಲಿ ಬಂದು ನೋಡಿದರೆ ಯಾವ ಸಮಯ ಪ್ರತೀಕ್ಷೆಗಾಗಿ ಕೊಟ್ಟಿದೇನೋ, ಅದನ್ನು ಗೌತಮರು ಬಂದು ಪೂರ್ಣಗೊಳಿಸಿದರು.॥13½॥
ಮೂಲಮ್ - 14
ಕೋಪೇನ ಮಹತಾವಿಷ್ಟೋ ವಸಿಷ್ಠೋ ಬ್ರಹ್ಮಣಃ ಸುತಃ ॥
ಮೂಲಮ್ - 15
ಸ ರಾಜ್ಞೋ ದರ್ಶನಾಕಾಂಕ್ಷೀ ಮುಹೂರ್ತಂ ಸಮುಪಾವಿಶತ್ ।
ತಸ್ಮಿನ್ನಹನಿ ರಾಜರ್ಷಿರ್ನಿದ್ರಯಾಪಹೃತೋ ಭೃಶಮ್ ॥
ಅನುವಾದ
ಇದನ್ನು ನೋಡಿ ಬ್ರಹ್ಮಕುಮಾರ ವಸಿಷ್ಠರು ಮಹಾಕ್ರೋಧಗೊಂಡರು ಹಾಗೂ ರಾಜನನ್ನು ಕಾಣಲು ಎರಡು ಗಳಿಗೆ ಅಲ್ಲೇ ಕುಳಿತ್ತಿದ್ದರು. ಆದರೆ ಅಂದು ರಾಜರ್ಷಿ ನಿಮಿಯು ಅತ್ಯಂತ ನಿದ್ದೆಯಿಂದಾಗಿ ಮಲಗಿಬಿಟ್ಟಿದ್ದನು.॥14-15॥
ಮೂಲಮ್ - 16
ತತೋ ಮನ್ಯುರ್ವಸಿಷ್ಠಸ್ಯ ಪ್ರಾದುರಾಸೀನ್ಮಹಾತ್ಮನಃ ।
ಆದರ್ಶನೇನ ರಾಜರ್ಷೇರ್ವ್ಯಾಹರ್ತುಮುಪಚಕ್ರಮೇ ॥
ಅನುವಾದ
ರಾಜನು ಸಿಗದಿದ್ದ ಕಾರಣ ಮಹಾತ್ಮಾ ವಸಿಷ್ಠ ಮುನಿಗಳಿಗೆ ಭಾರೀ ಕ್ರೋಧಗೊಂಡು, ರಾಜರ್ಷಿಯನ್ನು ಕುರಿತು ನುಡಿಯತೊಡಗಿದರ.॥16॥
ಮೂಲಮ್ - 17
ಯಸ್ಮಾತ್ತ್ವಮನ್ಯ ವೃತವಾನ್ಮಾಮವಜ್ಞಾಯ ಪಾರ್ಥಿವ ।
ಚೇತನೇನ ವಿನಾಭೂತೋ ದೇಹಸ್ತೇ ಪಾರ್ಥಿವೈಷ್ಯತಿ ॥
ಅನುವಾದ
ಭೂಪಾಲ ನಿಮಿಯೇ! ನೀನು ನನ್ನ ಅಪಮಾನಮಾಡಿ ಇನ್ನೊಬ್ಬ ಪುರೋಹಿತನನ್ನು ವರಣಮಾಡಿಕೊಂಡಿರುವೆ, ಇದಕ್ಕಾಗಿ ನಿನ್ನ ಈ ಶರೀರ ಅಚೇತನವಾಗಿ ಬಿದ್ದು ಹೋಗಲಿ.॥17॥
ಮೂಲಮ್ - 18
ತತಃ ಪ್ರಬುದ್ಧೋ ರಾಜಾ ತು ಶ್ರುತ್ವಾ ಶಾಪಮುದಾಹೃತಮ್ ।
ಬ್ರಹ್ಮಯೋನಿಮಥೋವಾಚ ಸ ರಾಜಾ ಕ್ರೋಧಮೂರ್ಛಿತಃ ॥
ಅನುವಾದ
ಬಳಿಕ ರಾಜನು ನಿದ್ದೆಯಿಂದ ಎದ್ದು, ಅವರು ಕೊಟ್ಟಿರುವ ಶಾಪವೃತ್ತಾಂತ ಕೇಳಿ ಕ್ರೋಧ-ಮೂರ್ಛಿತನಾಗಿ, ಬ್ರಹ್ಮಯೋನಿ ವಸಿಷ್ಠರಲ್ಲಿ ಹೇಳಿದನು .॥18॥
ಮೂಲಮ್ - 19
ಅಜಾನತಃ ಶಯಾನಸ್ಯ ಕ್ರೋಧೇನ ಕಲುಷೀಕೃತಃ ।
ಉಕ್ತವಾನ್ಮಮ ಶಾಪಾಗ್ನಿಂ ಯಮದಂಡಮಿವಾಪರಮ್ ॥
ಅನುವಾದ
ನನಗೆ ನಿಮ್ಮ ಆಗಮನ ತಿಳಿದಿರಲಿಲ್ಲ, ಅದಕ್ಕಾಗಿ ಮಲಗಿದ್ದೆ. ಆದರೆ ನೀವು ಕ್ರೋಧದಿಂದ ಕಲುಷಿತರಾಗಿ ನನ್ನ ಮೇಲೆ ಯಮದಂಡದಂತಹ ಶಾಪಾಗ್ನಿಯಿಂದ ಪ್ರಹರಿಸಿದಿರಿ.॥19॥
ಮೂಲಮ್ - 20
ತಸ್ಮಾತ್ತವಾಪಿ ಬ್ರಹ್ಮರ್ಷೇ ಚೇತನೇನ ವಿನಾಕೃತಃ ।
ದೇಹಃ ಸ ಸುಚಿರಪ್ರಖ್ಯೋ ಭವಿಷ್ಯತಿ ನ ಸಂಶಯಃ ॥
ಅನುವಾದ
ಆದ್ದರಿಂದ ಬ್ರಹ್ಮರ್ಷಿಯೇ! ಚಿರಂತನ ಶೋಭಾಯುಕ್ತವಾದ ನಿಮ್ಮ ಶರೀರವೂ ಅಚೇತನವಾಗಿ ಬಿದ್ದು ಹೋಗುವುದು; ಇದರಲ್ಲಿ ಸಂಶಯವೇ ಇಲ್ಲ.॥20॥
ಮೂಲಮ್ - 21
ಇತಿ ರೋಷವಶಾದುಭೌ ತದಾನೀ-
ಮನ್ಯೋನ್ಯಂ ಶಪಿತೌನೃಪದ್ವಿಜೇಂದ್ರೌ ।
ಸಹಸೈವ ಬಭೂವತುರ್ವಿದೇಹೌ
ತತ್ತುಲ್ಯಾಧಿಗತಪ್ರಭಾವವಂತೌ ॥
ಅನುವಾದ
ಹೀಗೆ ಆಗ ರೋಷಕ್ಕೆ ವಶೀಭೂತರಾದ ಇಬ್ಬರೂ ನೃಪೇಂದ್ರ ಮತ್ತು ವಿಪ್ರೇಂದ್ರರು ಪರಸ್ಪರ ಶಾಪ ಕೊಟ್ಟುಕೊಂಡು ವಿದೇಹರಾದರು. ಅವರಿಬ್ಬರ ಪ್ರಭಾವ ಬ್ರಹ್ಮದೇವರಂತೇ ಇತ್ತು.॥21॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಐವತ್ತೈದನೆಯ ಸರ್ಗ ಪೂರ್ಣವಾಯಿತು. ॥55॥