०५४ राज्य-त्यागः

[ಐವತ್ತನಾಲ್ಕನೆಯ ಸರ್ಗ]

ಭಾಗಸೂಚನಾ

ನೃಗನು ಪುತ್ರನಿಗೆ ರಾಜ್ಯವನ್ನು ಒಪ್ಪಿಸಿ, ಸುಂದರವಾದ ಹೊಂಡವನ್ನು ರಚಿಸಿ ಅದರಲ್ಲಿ ಪ್ರವೇಶಿಸಿ ಶಾಪವನ್ನು ಅನುಭವಿಸಿದುದು

ಮೂಲಮ್ - 1

ರಾಮಸ್ಯ ಭಾಷಿತಂ ಶ್ರುತ್ವಾ ಲಕ್ಷ್ಮಣಃಪರಮಾರ್ಥವಿತ್ ।
ಉವಾಚ ಪ್ರಾಂಜಲಿರ್ವಾಕ್ಯಂ ರಾಘವಂ ದೀಪ್ತತೇಜಸಮ್ ॥

ಅನುವಾದ

ಶ್ರೀರಾಮನ ಭಾಷಣವನ್ನು ಕೇಳಿ ಪರಮಾರ್ಥವನ್ನು ತಿಳಿದಿದ್ದ ಲಕ್ಷ್ಮಣನು ಎರಡೂ ಕೈಮುಗಿದು ಮಹಾ ತೇಜಸ್ವಿ ಯಾದ ಶ್ರೀರಘುನಾಥನಲ್ಲಿ ಹೇಳಿದನು.॥1॥

ಮೂಲಮ್ - 2

ಅಲ್ಪಾಪರಾಧೇ ಕಾಕುತ್ಸ್ಥ ದ್ವಿಜಾಭ್ಯಾಂ ಶಾಪ ಈದೃಶಃ ।
ಮಹಾನ್ ನೃಗಸ್ಯ ರಾಜರ್ಷೇರ್ಯಮದಂಡ ಇವಾಪರಃ ॥

ಅನುವಾದ

ರಾಘವ! ಆ ಇಬ್ಬರೂ ಬ್ರಾಹ್ಮಣರು ಅಲ್ಪವಾದ ಅಪರಾಧಕ್ಕಾಗಿ ರಾಜರ್ಷಿ ನೃಗನಿಗೆ ಯಮದಂಡದಂತಹ ಮಹಾಶಾಪ ಕೊಟ್ಟರು.॥2॥

ಮೂಲಮ್ - 3

ಶ್ರುತ್ವಾ ತು ಪಾಪಸಂಯುಕ್ತ ಮಾತ್ಮಾನಂಪುರುಷರ್ಷಭ ।
ಕಿಮುವಾಚ ನೃಗೋ ರಾಜಾ ದ್ವಿಜೌ ಕ್ರೋಧಸಮನ್ವಿತೌ ॥

ಅನುವಾದ

ಪುರುಷಶ್ರೇಷ್ಠನೇ! ತಾನು ಶಾಪರೂಪೀ ಪಾಪದಿಂದ ಕೂಡಿರುವುದನ್ನು ಕೇಳಿ, ನೃಗರಾಜನು ಆ ಕ್ರೋಧೀ ಬ್ರಾಹ್ಮಣರಲ್ಲಿ ಏನು ಹೇಳಿದನು.॥3॥

ಮೂಲಮ್ - 4

ಲಕ್ಷ್ಮಣೇನೈವಮುಕ್ತಸ್ತು ರಾಘವಃ ಪುನರಬ್ರವೀತ್ ।
ಶೃಣು ಸೌಮ್ಯ ಯಥಾ ಪೂರ್ವಂ ಸ ರಾಜಾಶಾಪವಿಕ್ಷತಃ ॥

ಅನುವಾದ

ಲಕ್ಷ್ಮಣನು ಹೀಗೆ ಕೇಳಿದಾಗ ಶ್ರೀರಾಮನು ಪುನಃ ಹೇಳಿದನು - ಸೌಮ್ಯ! ಹಿಂದೆ ಶಾಪಗ್ರಸ್ತನಾದ ನೃಜರಾಜನು ಹೇಳಿದುದನ್ನು ತಿಳಿಸುವೆನು ಕೇಳು.॥4॥

ಮೂಲಮ್ - 5

ಅಥಾಧ್ವನಿ ಗತೌ ವಿಪ್ರೌ ವಿಜ್ಞಾಯ ಸ ನೃಪಸ್ತದಾ ।
ಅಹೂಯ ಮಂತ್ರಿಣಃ ಸರ್ವಾನ್ನೈಗಮಾನ್ಸಪುರೋಧಸಃ ॥

ಮೂಲಮ್ - 6

ತಾನುವಾಚ ನೃಗೋ ರಾಜಾಸರ್ವಾಶ್ಚ ಪ್ರಕೃತೀಸ್ತಥಾ ।
ದುಃಖೇನ ಸುಸಮಾವಿಷ್ಟಃ ಶ್ರೂಯತಾಂ ಮೇಸಮಾಹಿತಾಃ ॥

ಅನುವಾದ

ಆ ಇಬ್ಬರೂ ಬ್ರಾಹ್ಮಣರು ಹೊರಟುಹೋದರು, ಈಗ ಎಲ್ಲೋ ದಾರಿಯಲ್ಲಿ ಇರಬಹುದೆಂದು ತಿಳಿದು ನೃಗರಾಜನು ಮಂತ್ರಿಗಳನ್ನು, ಸಮಸ್ತ ಪುರವಾಸಿಗಳನ್ನು, ಪುರೋಹಿತರನ್ನು, ಸಮಸ್ತ ಪ್ರಜೆಗಳನ್ನು ಕರೆಸಿ, ದುಃಖದಿಂದ ಪೀಡಿತನಾಗಿ - ನೀವು ಸಾವಧಾನವಾಗಿ ನನ್ನ ಮಾತನ್ನು ಕೇಳಿರಿ ಎಂದು ಹೇಳಿದನು.॥5-6॥

ಮೂಲಮ್ - 7

ನಾರದಃ ಪರ್ವತಶ್ಚೈವ ಮಮ ದತ್ತ್ವಾ ಮಹದ್ಭಯಮ್ ।
ಗತೌತ್ರಿಭುವನಂ ಭದ್ರೌ ವಾಯುಭೂತಾವನಿಂದಿತೌ ॥

ಅನುವಾದ

ಮಂಗಳ ಸ್ವರೂಪರಾದ, ಅನಿಂದ್ಯರಾದ ದೇವರ್ಷಿ ನಾರದರು ಮತ್ತು ಪರ್ವತ ಋಷಿಗಳು ನನ್ನ ಬಳಿಗೆ ಬಂದು, ಆ ಇಬ್ಬರು ಬ್ರಾಹ್ಮಣರು ಕೊಟ್ಟ ಶಾಪದ ಮಾತನ್ನು ಹೇಳಿ ನನಗೆ ಮಹಾ ಭಯವನ್ನು ಕೊಟ್ಟು ವಾಯುವಿನಂತೆ ತೀವ್ರಗತಿಯಿಂದ ಬ್ರಹ್ಮಲೋಕಕ್ಕೆ ತೆರಳಿದರು.॥7॥

ಮೂಲಮ್ - 8

ಕುಮಾರೋಽಯಂ ವಸುರ್ನಾಮ ಸ ಚೇಹಾದ್ಯಾಭಿಷಿಚ್ಯತಾಮ್ ।
ಶ್ವಭ್ರಂ ಚ ಯತ್ಸುಖಸ್ಪರ್ಶಂ ಕ್ರಿಯತಾಂ ಶಿಲ್ಪಿಭಿರ್ಮಮ ॥

ಅನುವಾದ

ಈ ವಸು ಎಂಬ ರಾಜಕುಮಾರನನ್ನು ರಾಜ್ಯದ ಪಟ್ಟಾಭಿಷೇಕ ಮಾಡಲಾಗುವುದು. ಶಿಲ್ಪಿಗಳು ಮುಂದೆ ನನ್ನ ವಾಸಕ್ಕಾಗಿ ಸುಖಸ್ಪರ್ಶವಿರುವ ಒಂದು ಹೊಂಡವನ್ನು ನಿರ್ಮಿಸಲಿ.॥8॥

ಮೂಲಮ್ - 9½

ಯತ್ರಾಹಂ ಸಂಕ್ಷಯಿಷ್ಯಾಮಿ ಶಾಪಂಬ್ರಾಹ್ಮಣನಿಃಸೃತಮ್ ।
ವರ್ಷಘ್ನಮೇಕಂ ಶ್ವಭ್ರಂ ತು ಹಿಮಘ್ನಮಪರಂ ತಥಾ ॥
ಗ್ರೀಷ್ಮಘ್ನಂ ತು ಸುಖಸ್ಪರ್ಶಮೇಕಂ ಕುರ್ವಂತು ಶಿಲ್ಪಿನಃ ।

ಅನುವಾದ

ಬ್ರಾಹ್ಮಣರು ಕೊಟ್ಟ ಶಾಪವನ್ನು ಅಲ್ಲೇ ಇದ್ದು ನಾನು ಕಳೆಯುವೆನು. ಮಳೆಗಾಲದ ಕಷ್ಟ ನಿವಾರಿಸುವ ಒಂದು ಹೊಂಡವನ್ನು, ಚಳಿಗಾಲದ ತೊಂದರೆ ಆಗದಂತಹ ಮತ್ತೊಂದು ಹೊಂಡವನ್ನು, ಬೇಸಿಗೆಯ ಬೇಗೆ ತಾಗದಂತಹ ಮೂರನೆಯ ಹೊಂಡವನ್ನು, ಹೀಗೆ ಸುಖಸ್ಪರ್ಶದಾಯಕ ಹೊಂಡಗಳನ್ನು ಶಿಲ್ಪಿಗಳು ಸಿದ್ಧಗೊಳಿಸಲಿ.॥9½॥

ಮೂಲಮ್ - 10

ಫಲವಂತಶ್ಚ ಯೇವೃಕ್ಷಾಃ ಪುಷ್ಪವತ್ಯಶ್ಚ ಯಾ ಲತಾಃ ॥

ಮೂಲಮ್ - 11

ವಿರೋಪ್ಯಂತಾಂ ಬಹುವಿಧಾಶ್ಛಾಯಾವಂತಶ್ಚಗುಲ್ಮಿನಃ ।
ಕ್ರಿಯತಾಂ ರಮಣೀಯಂ ಚ ಶ್ವಭ್ರಾಣಾಂ ಸರ್ವತೋದಿಶಮ್ ॥

ಮೂಲಮ್ - 12½

ಸುಖಮತ್ರ ವಸಿಷ್ಯಾಮಿ ಯಾವತ್ಕಾಲಸ್ಯ ಪರ್ಯಯಃ ।
ಪುಷ್ಪಾಣಿ ಚ ಸುಗಂಧೀನಿ ಕ್ರಿಯಂತಾಂ ತೇಷುನಿತ್ಯಶಃ ॥
ಪರಿವಾರ್ಯ ಯಥಾ ಮೇ ಸ್ಯುರಧ್ಯರ್ಧಂ ಯೋಜನಂತಥಾ ।

ಅನುವಾದ

ಫಲಬಿಡುವ ವೃಕ್ಷಗಳನ್ನು, ಹೂವು ಬಿಡುವ ಲತೆಗಳನ್ನು ಈ ಹೊಂಡಗಳಲ್ಲಿ ನೆಡಿರಿ. ದಟ್ಟವಾದ ನೆರಳನ್ನು ಕೊಡುವ ಅನೇಕ ಪ್ರಕಾರದ ವೃಕ್ಷಗಳನ್ನು ನೆಡುವಂತಾಗಲಿ. ಆ ಹೊಂಡಗಳ ಸುತ್ತಲೂ ಒಂದೂವರೆ ಯೋಜನದ ಭೂಮಿಯು ತುಂಬಾ ರಮಣೀಯವಾಗಿರಲಿ. ಶಾಪದ ಸಮಯ ಕಳೆಯುವವರೆಗೆ ನಾನು ಅಲ್ಲೇ ಸುಖವಾಗಿ ಇರುವೆನು. ಆ ಹೊಂಡಗಳಲ್ಲಿ ಸುಗಂಧಿತ ಪುಷ್ಪಗಳು ತುಂಬಿರಲಿ.॥10-12½॥

ಮೂಲಮ್ - 13½

ಏವಂ ಕೃತ್ವಾ ವಿಧಾನಂಸ ಸಂನಿವೇಶ್ಯ ವಸುಂ ತದಾ ॥
ಧರ್ಮನಿತ್ಯಃ ಪ್ರಜಾಃ ಪುತ್ರಕ್ಷತ್ರಧರ್ಮೇಣ ಪಾಲಯ ।

ಅನುವಾದ

ಹೀಗೆ ವ್ಯವಸ್ಥೆ ಮಾಡಿ ರಾಜಕುಮಾರ ವಸುಗೆ ಸಿಂಹಾಸನದಲ್ಲಿ ಕುಳ್ಳಿರಿಸಿ, ರಾಜನು ಆಗ ಹೇಳಿದನು - ಮಗು! ನೀನು ಪ್ರತಿದಿನ ಧರ್ಮ ಪರಾಯಣನಾಗಿ ಕ್ಷತ್ರಿಯ ಧರ್ಮಕ್ಕನುಸಾರ ಪ್ರಜೆಯನ್ನು ಪಾಲಿಸುತ್ತಾ ಇರು.॥13½॥

ಮೂಲಮ್ - 14½

ಪ್ರತ್ಯಕ್ಷಂ ತೇ ತಥಾ ಶಾಪೋ ದ್ವಿಜಾಭ್ಯಾಂ ಮಯಿ ಪಾತಿತಃ ॥
ನರಶ್ರೇಷ್ಠ ಸರೋಷಾಭ್ಯಾಮಪರಾಧೇಽಪಿ ತಾದೃಶೇ ।

ಅನುವಾದ

ಇಬ್ಬರು ಬ್ರಾಹ್ಮಣರು ಶಾಪದ ಮೂಲಕ ನನ್ನ ಪ್ರಹಾರ ಮಾಡಿದುದು ನಿನ್ನ ಕಣ್ಣ ಮುಂದೆಯೇ ಇದೆ. ನರಶ್ರೇಷ್ಠನೇ! ಅಂತಹ ಅಲ್ಪ ಅಪರಾಧಕ್ಕಾಗಿ ಸಿಟ್ಟುಗೊಂಡು ಅವರು ನನಗೆ ಶಾಪ ಕೊಟ್ಟರು.॥14½॥

ಮೂಲಮ್ - 15½

ಮಾ ಕೃಥಾಸ್ತ್ವನುಸಂತಾಪಂ ಮತ್ಕೃತೇ ಹಿನರರ್ಷಭ ॥
ಕೃತಾಂತಃ ಕುಶಲಃ ಪುತ್ರ ಯೇನಾಸ್ಮಿ ವ್ಯಸನೀಕೃತಃ ।

ಅನುವಾದ

ಪುರುಷಪ್ರವರ! ನೀನು ನನಗಾಗಿ ದುಃಖಿಸಬೇಡ. ಮಗು! ಯಾವುದರಿಂದ ನನಗೆ ವ್ಯಸನಿಯಾಗಿಸಿ, ಸಂಕಟದಲ್ಲಿ ಹಾಕಿದೆಯೋ, ತಾನು ಮಾಡಿದ ಆ ಪ್ರಾಚೀನ ಕರ್ಮವೇ ಅನುಕೂಲ-ಪ್ರತಿಕೂಲ ಫಲ ಕೊಡುವುದರಲ್ಲಿ ಸಮರ್ಥವಾಗಿದೆ.॥15½॥

ಮೂಲಮ್ - 16

ಪ್ರಾಪ್ತವ್ಯಾನ್ಯೇವ ಪ್ರಾಪ್ನೋತಿ ಗಂತವ್ಯಾನ್ಯೇವ ಗಚ್ಛತಿ ॥

ಮೂಲಮ್ - 17

ಲಬ್ಧವ್ಯಾನ್ಯೇವ ಲಭತೇ ದುಃಖಾನಿ ಚ ಸುಖಾನಿ ಚ ।
ಪೂರ್ವೇ ಜಾತ್ಯಂತರೇ ವತ್ಸ ಮಾ ವಿಷಾದಂ ಕುರುಷ್ವ ಹ ॥

ಅನುವಾದ

ವತ್ಸ! ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಕ್ಕನುಸಾರ ಮನುಷ್ಯನು ಅದೇ ವಸ್ತುಗಳನ್ನು ಪಡೆಯುತ್ತಾನೆ. ಅದನ್ನು ಪಡೆಯುವ ಅಧಿಕಾರಿ ಅವನೇ ಆಗಿದ್ದಾನೆ. ಅವನಿಗೆ ನಿಯತವಾದ ಎಲ್ಲಿಗೆ ಹೋಗಲು ಅನಿವಾರ್ಯವಾಗಿದೆಯೋ ಅದೇ ಸ್ಥಾನಗಳಿಗೆ ಹೋಗುತ್ತಾನೆ ಮತ್ತು ಸುಖ-ದುಃಖಗಳನ್ನು ಪಡೆಯುತ್ತಾನೆ. ಆದ್ದರಿಂದ ನೀನು ವಿಷಾದಪಡಬೇಡ.॥16-17॥

ಮೂಲಮ್ - 18

ಏವಮುಕ್ತ್ವಾ ನೃಪಸ್ತತ್ರ ಸುತಂರಾಜಾ ಮಹಾಯಶಾಃ ।
ಶ್ವಭ್ರಂ ಜಗಾಮ ಸುಕೃತಂ ವಾಸಾಯ ಪುರುಷರ್ಷಭ ॥

ಅನುವಾದ

ಲಕ್ಷ್ಮಣ! ತನ್ನ ಪುತ್ರನಲ್ಲಿ ಹೀಗೆ ಹೇಳಿದ ಮಹಾ ಯಶಸ್ವೀ ನೃಗರಾಜನು ತಾನು ವಾಸಿಸಲು ಸುಂದರವಾಗಿ ನಿರ್ಮಿಸಿದ ಹೊಂಡದಲ್ಲಿ ಪ್ರವೇಶಿಸಿದನು.॥18॥

ಮೂಲಮ್ - 19

ಏವಂ ಪ್ರವಿಶ್ಯೇವ ನೃಪಸ್ತದಾನೀಂ
ಶ್ವಭ್ರಂ ಮಹದ್ರತ್ನ ವಿಭೂಷಿತಂ ತತ್ ।
ಸಂಪಾದಯಾಮಾಸ ತದಾ ಮಹಾತ್ಮಾ
ಶಾಪಂ ದ್ವಿಜಾಭ್ಯಾಂ ಹಿ ರುಷಾ ವಿಮುಕ್ತಮ್ ॥

ಅನುವಾದ

ಈ ರೀತಿ ಆ ರತ್ನಭೂಷಿತ ಮಹಾಗರ್ತದಲ್ಲಿ ಪ್ರವೇಶಿಸಿದಾಗ ಮಹಾತ್ಮಾ ನೃಗರಾಜನು ಬ್ರಾಹ್ಮಣರಿಂದ ರೋಷಪೂರ್ವಕ ಕೊಟ್ಟಿರುವ ಆ ಶಾಪವನ್ನು ಅನುಭವಿಸತೊಡಗಿದನು.॥19॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಐವತ್ತನಾಲ್ಕನೆಯ ಸರ್ಗ ಪೂರ್ಣವಾಯಿತು. ॥54॥