[ಐವತ್ತಮೂರನೆಯ ಸರ್ಗ]
ಭಾಗಸೂಚನಾ
ನೃಗ ಚಕ್ರವರ್ತಿಗೆ ಬಂದ ಶಾಪ ವೃತ್ತಾಂತವನ್ನು ಶ್ರೀರಾಮನು ಲಕ್ಷ್ಮಣನಿಗೆ ತಿಳಿಸಿದುದು
ಮೂಲಮ್ - 1
ಲಕ್ಷ್ಮಣಸ್ಯ ತು ತದ್ವಾಕ್ಯಂ ನಿಶಮ್ಯ ಪರಮಾದ್ಭುತಮ್ ।
ಸುಪ್ರೀತಶ್ಚಾಭವದ್ರಾಮೋ ವಾಕ್ಯಮೇತದುವಾಚ ಹ ॥
ಅನುವಾದ
ಲಕ್ಷ್ಮಣನ ಆ ಅತ್ಯಂತ ಅದ್ಭುತ ಮಾತನ್ನು ಕೇಳಿ ಶ್ರೀರಾಮನಿಗೆ ಬಹಳ ಸಂತೋಷವಾಗಿ ಇಂತೆಂದನು-॥1॥
ಮೂಲಮ್ - 2
ದುರ್ಲಭಸ್ತ್ವೀದೃಶೋ ಬಂಧುರಸ್ಮಿನ್ಕಾಲೇ ವಿಶೇಷತಃ ।
ಯಾದೃಶಸ್ತ್ವಂ ಮಹಾಬುದ್ಧಿರ್ಮಮ ಸೌಮ್ಯ ಮನೋಽನುಗಃ ॥
ಅನುವಾದ
ಸೌಮ್ಯ! ನೀನು ಬಹಳ ಬುದ್ಧಿವಂತನಾಗಿರುವೆ. ನೀನು ನನ್ನ ಮನಸ್ಸಿನಂತೆ ಅನುಸರಿಸುವಂತಹ ಸಹೋದರ ವಿಶೇಷವಾಗಿ ಈಗ ಸಿಗುವುದು ಕಠಿಣವಾಗಿದೆ.॥2॥
ಮೂಲಮ್ - 3
ಯಚ್ಚ ಮೇ ಹೃದಯೇ ಕಿಂಚಿದ್ವರ್ತತೇ ಶುಭಲಕ್ಷಣ ।
ತನ್ನಿಶಾಮಯ ಚಶ್ರುತ್ವಾ ಕುರುಷ್ವ ವಚನಂ ಮಮ ॥
ಅನುವಾದ
ಶುಭಲಕ್ಷಣ ಲಕ್ಷ್ಮಣ! ಈಗ ನನ್ನ ಮನಸ್ಸಿನಲ್ಲಿರುವ ಮಾತನ್ನು ಕೇಳಿ, ಹಾಗೆಯೇ ಮಾಡು.॥3॥
ಮೂಲಮ್ - 4
ಚತ್ವಾರೋ ದಿವಸಾಃ ಸೌಮ್ಯ ಕಾರ್ಯಂ ಪೌರಜನಸ್ಯ ಚ ।
ಅಕುರ್ವಾಣಸ್ಯ ಸೌಮಿತ್ರೇ ತನ್ಮೇ ಮರ್ಮಾಣಿ ಕೃಂತಿತಿ ॥
ಅನುವಾದ
ಸೌಮ್ಯ! ಸುಮಿತ್ರಾಕುಮಾರ! ನಾನು ಪುರವಾಸಿಗಳ ಕಾರ್ಯಮಾಡದೆ ನಾಲ್ಕುದಿನಗಳು ಕಳೆದವು. ಈ ಮಾತು ನನ್ನ ಮರ್ಮಸ್ಥಳವನ್ನು ಸೀಳುತ್ತಿದೆ.॥4॥
ಮೂಲಮ್ - 5
ಆಹೂಯಂತಾಂ ಪ್ರಕೃತಯಃ ಪುರೋಧಾಮಂತ್ರಿಣಸ್ತಥಾ ।
ಕಾರ್ಯಾರ್ಥಿನಶ್ಚ ಪುರುಷಾಃ ಸ್ತ್ರೀಯೋ ವಾ ಪುರುಷರ್ಷಭ ॥
ಅನುವಾದ
ಪುರುಷಶ್ರೇಷ್ಠನೇ! ನೀನು ಪ್ರಜೆ, ಪುರೋಹಿತ, ಮಂತ್ರಿಗಳನ್ನು ಕರೆಸು. ಯಾವ ಪುರುಷ-ಸ್ತ್ರೀಯರಿಗೆ ಯಾವುದಾದರೂ ಕೆಲಸವಿದ್ದರೆ, ಅವರನ್ನು ಕರೆಸು.॥5॥
ಮೂಲಮ್ - 6
ಪೌರಕಾರ್ಯಾಣಿ ಯೋ ರಾಜಾ ನ ಕರೋತಿ ದಿನೇ ದಿನೇ ।
ಸಂವೃತೇ ನರಕೇ ಘೋರೇ ಪತಿತೋ ನಾತ್ರಸಂಶಯಃ ॥
ಅನುವಾದ
ಯಾವ ರಾಜನು ಪ್ರತಿದಿನ ಪ್ರಜೆಗಳ ಕಾರ್ಯ ಮಾಡುವುದಿಲ್ಲವೋ, ಅಂತಹ ರಾಜನು ಖಂಡಿತವಾಗಿ ವಾಯುಸಂಚಾರವಿಲ್ಲದ ಘೋರ ನರಕದಲ್ಲಿ ಬೀಳುವನು.॥6॥
ಮೂಲಮ್ - 7
ಶ್ರೂಯತೇ ಹಿ ಪುರಾ ರಾಜಾ ನೃಗೋ ನಾಮ ಮಹಾಯಶಾಃ ।
ಬಭೂವಪೃಥಿವೀಪಾಲೋ ಬ್ರಹ್ಮಣ್ಯಃ ಸತ್ಯವಾಕ್ಶುಚಿಃ ॥
ಅನುವಾದ
ಹಿಂದೆ ಈ ಪೃಥಿವಿಯಲ್ಲಿ ನೃಗನೆಂಬ ಪ್ರಸಿದ್ಧ ಒಬ್ಬ ಮಹಾಯಶಸ್ವೀ ರಾಜನು ರಾಜ್ಯವನ್ನಾಳುತ್ತಿದ್ದನು. ಆ ಭೂಪಾಲನು ದೊಡ್ಡ ಬ್ರಾಹ್ಮಣ ಭಕ್ತ, ಸತ್ಯವಾದೀ, ಆಚಾರ-ವಿಚಾರದಿಂದ ಪವಿತ್ರನಾಗಿದ್ದನು.॥7॥
ಮೂಲಮ್ - 8
ಸ ಕದಾಚಿದ್ಗವಾಂ ಕೋಟೀಃ ಸವತ್ಸಾಃಸ್ವರ್ಣಭೂಷಿತಾಃ ।
ನೃದೇವೋ ಭೂಮಿದೇವೇಭ್ಯಃ ಪುಷ್ಕರೇಷು ದದೌ ನೃಪಃ ॥
ಅನುವಾದ
ಆ ನರೇಶನು ಯಾವಾಗಲೋ ಪುಷ್ಕರ ತೀರ್ಥಕ್ಕೆ ಹೋಗಿ ಬ್ರಾಹ್ಮಣರಿಗೆ ಸುವರ್ಣಭೂಷಿತ, ಕರುಗಳುಳ್ಳ ಒಂದು ಕೋಟಿ ಗೋವುಗಳನ್ನು ದಾನ ಮಾಡಿದನು.॥8॥
ಮೂಲಮ್ - 9
ತತಃ ಸಂಗಾದ್ಗತಾ ಧೇನುಃ ಸವತ್ಸಾ ಸ್ಪರ್ಶಿತಾನಘ ।
ಬ್ರಾಹ್ಮಣಸ್ಯಾಹಿತಾಗ್ನೇಸ್ತು ದರಿದ್ರಸ್ಯೋಂಛವರ್ತಿನಃ ॥
ಅನುವಾದ
ನಿಷ್ಪಾಪ ಲಕ್ಷ್ಮಣ ! ಆಗ ಬೇರೆ ದರಿದ್ರ ಉಂಛವೃತ್ತಿಯ ಬ್ರಾಹ್ಮಣನಿಗೆ ದಾನಮಾಡಿದ ಒಂದು ಗೋವು ಮರಳಿ ಇತರ ಗೋವುಗಳೊಡನೆ ಸೇರಿಕೊಂಡಿತು. ಅದು ಬೇರೆಯವರದೆಂದು ತಿಳಿಯದೆ ನೃಗನು ಆ ಧೇನುವನ್ನು ಬ್ರಾಹ್ಮಣನಿಗೆ ದಾನ ಮಾಡಿದನು.॥9॥
ಮೂಲಮ್ - 10
ಸ ನಷ್ಟಾಂ ಗಾಂ ಕ್ಷುಧಾರ್ತೋವೈ ಅನ್ವಿಷಂಸ್ತತ್ರತತ್ರ ಹ ।
ನಾಪಶ್ಯತ್ಸರ್ವರಾಷ್ಟ್ರೇಷು ಸಂವತ್ಸರಗಣಾನ್ಬಹೂನ್ ॥
ಅನುವಾದ
ಆ ಬಡಪಾಯಿ ಬ್ರಾಹ್ಮಣನು ಕಳೆದು ಹೋದ ಹಸುವನ್ನು ಬಹಳ ವರ್ಷಗಳವರೆಗೆ ಇಡೀ ರಾಜ್ಯದಲ್ಲಿ ಹುಡುಕುತ್ತಾ ಹಸಿವಿನಿಂದ ಬಳಲಿ ತಿರುಗುತ್ತಿದ್ದ. ಆದರೆ ಅವನಿಗೆ ಆ ಹಸು ಸಿಗಲಿಲ್ಲ.॥10॥
ಮೂಲಮ್ - 11
ತತಃ ಕನಖಲಂ ಗತ್ವಾ ಜೀರ್ಣವತ್ಸಾಂ ನಿರಾಮಯಾಮ್ ।
ದದೃಶೇ ತಾಂ ಸ್ವಿಕಾಂ ಧೇನುಂ ಬ್ರಾಹ್ಮಣಸ್ಯ ನಿವೇಶನೇ ॥
ಅನುವಾದ
ಕೊನೆಗೆ ಒಂದು ದಿನ ಕನಖಲಗೆ ಹೋದಾಗ ಅವನು ತನ್ನ ಹಸುವನ್ನು ಒಬ್ಬ ಬ್ರಾಹ್ಮಣನ ಮನೆಯಲ್ಲಿ ನೋಡಿದನು. ಅದು ನಿರೋಗಿಯಾಗಿ ದಷ್ಟ-ಪುಷ್ಟವಾಗಿದ್ದು, ಅದರ ಕರು ಬಹಳ ದೊಡ್ಡದಾಗಿತ್ತು.॥11॥
ಮೂಲಮ್ - 12
ಅಥ ತಾಂ ನಾಮಧೇಯೇನ ಸ್ವಕೇನೋವಾಚ ಬ್ರಾಹ್ಮಣಃ ।
ಆಗಚ್ಛ ಶಬಲೇತ್ಯೇವಂ ಸಾ ತು ಶುಶ್ರಾವ ಗೌಃ ಸ್ವರಮ್ ॥
ಅನುವಾದ
ಬ್ರಾಹ್ಮಣನು ಅದಕ್ಕಿಟ್ಟ ಶಬಲಾ ಎಂಬ ಹೆಸರಿನಿಂದ ಕರೆದ - ಶಬಲಾ ಬಾ, ಬಾ! ಗೋವು ಆ ಸ್ವರವನ್ನು ಕೇಳಿತು.॥12॥
ಮೂಲಮ್ - 13
ತಸ್ಯ ತಂ ಸ್ವರಮಾಜ್ಞಾಯ ಕ್ಷುಧಾರ್ತಸ್ಯ ದ್ವಿಜಸ್ಯ ವೈ ।
ಅನ್ವಗಾತ್ಪೃಷ್ಠತಃ ಸಾ ಗೌರ್ಗಚ್ಛಂತಂ ಪಾವಕೋಪಮಮ್ ॥
ಅನುವಾದ
ಹಸಿವಿನಿಂದ ಕಂಗಾಲಾದ ಆ ಬ್ರಾಹ್ಮಣನ ಪರಿಚಿತ ಸ್ವರವನ್ನು ಗುರುತಿಸಿದ ಗೋವು ಮುಂದೆ ಹೋಗುತ್ತಿರುವ ಆ ಅಗ್ನಿತುಲ್ಯ ಬ್ರಾಹ್ಮಣನನ್ನು ಹಿಂಬಾಲಿಸಿತು.॥13॥
ಮೂಲಮ್ - 14½
ಯೋಽಪಿ ಪಾಲಯತೇ ವಿಪ್ರಃ ಸೋಽಪಿ ಗಾಮನ್ವಗಾದ್ದ್ರುತಮ್ ।
ಗತ್ವಾಚ ತಮೃಷಿಂಚಷ್ಟೇ ಮಮ ಗೌರಿತಿ ಸತ್ವರಮ್ ॥
ಸ್ಪರ್ಶಿತಾ ರಾಜಸಿಂಹೇನಮಮ ದತ್ತಾ ನೃಗೇಣ ಹ ।
ಅನುವಾದ
ಇಷ್ಟು ದಿನ ಅದನ್ನು ಸಾಕುತ್ತಿದ್ದ ಬ್ರಾಹ್ಮಣನೂ ಕೂಡಲೇ ಆ ಗೋವನ್ನು ಹಿಂಬಾಲಿಸಿದನು. ಹೋಗಿ ಆ ಬ್ರಹ್ಮರ್ಷಿಯಲ್ಲಿ ಹೇಳಿದನು-ಬ್ರಹ್ಮಾನ್! ಈ ಹಸು ನನ್ನದಾಗಿದೆ. ನನಗೆ ರಾಜಾ ನೃಗನು ದಾನವಾಗಿ ಕೊಟ್ಟಿದ್ದನು.॥14½॥
ಮೂಲಮ್ - 15½
ತಯೋರ್ಬ್ರಾಹ್ಮಣಯೋರ್ವಾದೋ ಮಹಾನಾಸೀದ್ವಿಪಶ್ಚಿತೋಃ ॥
ವಿವಂದತೌ ತತೋಽನ್ಯೋನ್ಯಂದಾತಾರಮಭಿಜಗ್ಮತುಃ ।
ಅನುವಾದ
ಮತ್ತೆ ಇಬ್ಬರೂ ಬ್ರಾಹ್ಮಣರಲ್ಲಿ ಹಸುವಿನ ಕುರಿತು ವಿವಾದ ಉಂಟಾಯಿತು. ಅವರಿಬ್ಬರೂ ಪರಸ್ಪರ ಜಗಳವಾಡುತ್ತಾ, ದಾನೀ ನೃಗರಾಜನ ಬಳಿಗೆ ಬಂದರು.॥15½॥
ಮೂಲಮ್ - 16½
ತೌ ರಾಜಭವನದ್ವಾರಿ ನ ಪ್ರಾಪ್ತೌ ನೃಗಶಾಸನಮ್ ॥
ಅಹೋರಾತ್ರಾಣ್ಯನೇಕಾನಿ ವಸಂತೌ ಕ್ರೋಧಮೀಯತುಃ ।
ಅನುವಾದ
ಅಲ್ಲಿ ಅರಮನೆಯ ಬಾಗಿಲಿಗೆ ಹೋಗಿ ಅವರು ಅನೇಕ ದಿನಗಳವರೆಗೆ ನಿಂತಿದ್ದರೂ ಅವರಿಗೆ ರಾಜನ ನ್ಯಾಯ ಸಿಗಲಿಲ್ಲ. (ಅವರಿಗೆ ರಾಜನನ್ನು ನೋಡಲಾಗಲಿಲ್ಲ.) ಇದರಿಂದ ಅವರಿಬ್ಬರಿಗೂ ಭಾರೀ ಕ್ರೋಧ ಉಂಟಾಯಿತು.॥16½॥
ಮೂಲಮ್ - 17½
ಊಚತುಶ್ಚ ಮಹಾತ್ಮಾನೌ ತಾವುಭೌ ದ್ವಿಜಸತ್ತವೌ ॥
ಕ್ರುದ್ಧೌ ಪರಮಸಂಪತ್ತೌ ವಾಕ್ಯಂಘೋರಾಭಿಸಂಹಿತಮ್ ।
ಅನುವಾದ
ಅವರಿಬ್ಬರೂ ಶ್ರೇಷ್ಠ ಬ್ರಾಹ್ಮಣರು ಅತ್ಯಂತ ಸಂತಪ್ತ ಮತ್ತು ಕುಪಿತರಾಗಿ ಘೋರ ಶಾಪವನ್ನು ಕೊಡುವಾಗ ಹೇಳಿದರು.॥17½॥
ಮೂಲಮ್ - 18
ಅರ್ಥಿನಾಂ ಕಾರ್ಯಸಿದ್ಧ್ಯರ್ಥಂ ಯಸ್ಮಾತ್ತ್ವಂ ನೈಷಿ ದರ್ಶನಮ್ ॥
ಮೂಲಮ್ - 19½
ಅದೃಶ್ಯಃ ಸರ್ವಭೂತಾನಾಂ ಕೃಕಲಾಸೋ ಭವಿಷ್ಯಸಿ ।
ಬಹುವರ್ಷಸಹಸ್ರಾಣಿ ಬಹುವರ್ಷಶತಾನಿ ಚ ॥
ಶ್ವಭ್ರೇ ತ್ವಂ ಕೃಕಲೀಭೂತೋ ದೀರ್ಘಕಾಲಂ ನಿವತ್ಸ್ಯಸಿ ।
ಅನುವಾದ
ರಾಜನೇ! ತಮ್ಮ ವಿವಾದದ ನಿರ್ಣಯ ಮಾಡಲು ಬಂದಿರುವ ಪ್ರಾರ್ಥೀ ಪುರುಷರ ಕಾರ್ಯ ಸಿದ್ಧಿಗಾಗಿ ನೀನು ಅವರಿಗೆ ದರ್ಶನ ಕೊಡುತ್ತಿಲ್ಲ; ಆದ್ದರಿಂದ ನೀನು ಎಲ್ಲ ಪ್ರಾಣಿಗಳಿಂದ ಅಡಗಿ ಇರುವ ಓತಿಕ್ಯಾತನಾಗಿ ಅನೇಕ ವರ್ಷಗಳವರೆಗೆ ಒಂದು ಹೊಂಡದಲ್ಲಿ ಬಿದ್ದಿರು.॥18-19½॥
ಮೂಲಮ್ - 20
ಉತ್ಪತ್ಸ್ಯತೇ ಹಿ ಲೋಕೇಽಸ್ಮಿನ್ಯದೂನಾಂ ಕೀರ್ತಿವರ್ಧನಃ ॥
ಮೂಲಮ್ - 21
ವಾಸುದೇವ ಇತಿಖ್ಯಾತೋ ವಿಷ್ಣುಃ ಪುರುಷವಿಗ್ರಹಃ ।
ಸ ತೇ ಮೋಕ್ಷಯಿತಾ ಶಾಪಾದ್ರಾಜಂಸ್ತಸ್ಮಾದ್ಭವಿಷ್ಯಸಿ ॥
ಮೂಲಮ್ - 22½
ಕೃತಾ ಚ ತೇನ ಕಾಲೇನ ನಿಷ್ಕಕೃತಿಸ್ತೇ ಭವಿಷ್ಯತಿ ।
ಭಾರಾವತರಣಾರ್ಥಂ ಹಿ ನರನಾರಾಯಣಾವುಭೌ ॥
ಉತ್ಪತ್ಸ್ಯೇತೇ ಮಹಾವೀರ್ಯೌ ಕಲೌ ಯುಗಉಪಸ್ಥಿತೇ ।
ಅನುವಾದ
ಯಾವಾಗ ಯದುಕುಲದ ಕೀರ್ತಿ ಬೆಳಗುವ ವಿಖ್ಯಾತ ಭಗವಾನ್ ವಿಷ್ಣು ವಾಸುದೇವನಾಗಿ ಈ ಜಗತ್ತಿನಲ್ಲಿ ಅವ ತರಿಸುವನೋ ಆಗಲೇ ಅವನು ನಿನ್ನನ್ನು ಈ ಶಾಪದಿಂದ ಬಿಡಿಸುವನು. ಆದ್ದರಿಂದ ಈಗ ನೀನು ಓತಿಕ್ಯಾತನಾಗು, ಮತ್ತೆ ಶ್ರೀಕೃಷ್ಣಾವತಾರದ ಸಮಯ ನಿನ್ನ ಉದ್ಧಾರವಾಗುವುದು. ಕಲಿಯುಗ ಬರುವ ಸ್ವಲ್ಪ ಮೊದಲು ಮಹಾಪರಾಕ್ರಮಿ ನರ-ನಾರಾಯಣರಿಬ್ಬರೂ ಈ ಭೂಮಿಯ ಭಾರವನ್ನು ಕಳೆಯಲು ಅವತರಿಸುವರು.॥20-22½॥
ಮೂಲಮ್ - 23½
ಏವಂ ತೌ ಶಾಪಮುತ್ಸೃಜ್ಯ ಬ್ರಾಹ್ಮಣೌ ವಿಗತಜ್ವರೌ ॥
ತಾಂ ಗಾಂ ಹಿ ದುರ್ಬಲಾಂ ವೃದ್ಧಾಂದದತುರ್ಬ್ರಾಹ್ಮಣಾಯ ವೈ ।
ಅನುವಾದ
ಹೀಗೆ ಶಾಪ ಕೊಟ್ಟು ಅವರಿಬ್ಬರೂ ಬ್ರಾಹ್ಮಣರು ಶಾಂತರಾದರು. ಅವರು ಆ ಮುದಿ ದುರ್ಬಲ ಗೋವನ್ನು ಯಾರೋ ಬ್ರಾಹ್ಮಣನಿಗೆ ಕೊಟ್ಟು ಬಿಟ್ಟರು.॥23½॥
ಮೂಲಮ್ - 24½
ಏವಂ ಸ ರಾಜಾ ತಂ ಶಾಪಮುಪಭುಂಕ್ತೇ ಸುದಾರುಣಮ್ ॥
ಕಾರ್ಯಾರ್ಥಿನಾ ವಿಮರ್ದೋಹಿ ರಾಜ್ಞಾಂ ದೋಷಾಯ ಕಲ್ಪತೇ ।
ಅನುವಾದ
ಹೀಗೆ ನೃಗರಾಜನು ಆ ಅತ್ಯಂತ ದಾರುಣ ಶಾಪವನ್ನು ಅನುಭವಿಸುತ್ತಿರುವನು. ಆದ್ದರಿಂದ ಕಾರ್ಯಾರ್ಥಿ ಪುರುಷರ ವಿವಾದ ನಿರ್ಣಯವಾಗದಿದ್ದರೆ ಅದು ರಾಜರಿಗೆ ದೋಷ ಕೊಡುವುದಾಗಿದೆ.॥24½॥
ಮೂಲಮ್ - 25
ತಚ್ಛೀಘ್ರಂ ದರ್ಶನಂ ಮಹ್ಯಮಭಿವರ್ತಂತು ಕಾರ್ಯಿಣಃ ॥
ಮೂಲಮ್ - 26
ಸುಕೃತಸ್ಯ ಹಿ ಕಾರ್ಯಸ್ಯ ಲಂ ನಾವೈತಿ ಪಾರ್ಥಿವಃ ।
ತಸ್ಮಾದ್ಗಚ್ಛ ಪ್ರತೀಕ್ಷಸ್ವ ಸೌಮಿತ್ರೇ ಕಾರ್ಯವಾಂಜನಃ ॥
ಅನುವಾದ
ಆದ್ದರಿಂದ ಕಾರ್ಯಾರ್ಥಿ ಮನುಷ್ಯನು ಶೀಘ್ರವಾಗಿ ನನ್ನ ಮುಂದೆ ಉಪಸ್ಥಿತನಾಗಲೀ, ಪ್ರಜಾಪಾಲನರೂಪಿ ಪುಣ್ಯಕರ್ಮದ ಫಲ ರಾಜನಿಗೆ ಸಿಗುವುದಿಲ್ಲವೇ? ಅವಶ್ಯವಾಗಿ ಪ್ರಾಪ್ತವಾಗುತ್ತದೆ. ಆದ್ದರಿಂದ ಸುಮಿತ್ರಾನಂದನನೇ! ನೀನು ಹೋಗು, ರಾಜದ್ವಾರದಲ್ಲಿ ಯಾರು ಕಾರ್ಯಾರ್ಥಿ ಪುರುಷನು ಬಂದಿರುವನೋ ಪ್ರತೀಕ್ಷೆ ಮಾಡು.॥25-26॥
ಮೂಲಮ್ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಐವತ್ತಮೂರನೆಯ ಸರ್ಗ ಪೂರ್ಣವಾಯಿತು. ॥53॥