[ಐವತ್ತೆರಡನೆಯ ಸರ್ಗ]
ಭಾಗಸೂಚನಾ
ಅಯೋಧ್ಯೆಗೆ ಹಿಂದಿರುಗಿದ ದುಃಖೀ ಲಕ್ಷ್ಮಣನು ಶ್ರೀರಾಮನನ್ನು ಸಮಾಧಾನಗೊಳಿಸಿದುದು
ಮೂಲಮ್ - 1
ತತ್ರ ತಾಂ ರಜನೀಮುಷ್ಯ ಕೇಶಿನ್ಯಾಂ ರಘುನಂದನಃ ।
ಪ್ರಭಾತೇ ಪುನರುತ್ಥಾಯ ಲಕ್ಷ್ಮಣಃ ಪ್ರಯಯೌ ತದಾ ॥
ಅನುವಾದ
ಕೇಶಿನೀ ನದಿಯ ತೀರದಲ್ಲಿ ರಾತ್ರೆ ಕಳೆದು, ಬೆಳಗಾಗುತ್ತಲೇ ಲಕ್ಷ್ಮಣನು ಪ್ರಯಾಣ ಮುಂದುವರಿಸಿದನು.॥1॥
ಮೂಲಮ್ - 2
ತತೋಽರ್ಧದಿವಸೇ ಪ್ರಾಪ್ತೇ ಪ್ರವಿವೇಶ ಮಹಾರಥಃ ।
ಅಯೋಧ್ಯಾಂ ರತ್ನ ಸಂಪೂರ್ಣಾಂ ಹೃಷ್ಟಪುಷ್ಟಜನಾವೃತಾಮ್ ॥
ಅನುವಾದ
ಮಧ್ಯಾಹ್ನವಾಗುತ್ತಲೇ ಆ ರಥವು ಧನ-ಧಾನ್ಯಗಳಿಂದ ಸಂಪನ್ನವಾದ, ಹೃಷ್ಟ-ಪುಷ್ಟ ಜನರಿಂದ ತುಂಬಿದ ಅಯೋಧ್ಯಾಪುರಿಯನ್ನು ಪ್ರವೇಶಿಸಿತು.॥2॥
ಮೂಲಮ್ - 3
ಸೌಮಿತ್ರಿಸ್ತು ಪರಂ ದೈನ್ಯಂ ಜಗಾಮ ಸುಮಹಾಮತಿಃ ।
ರಾಮಪಾದೌ ಸಮಾಸಾದ್ಯ ವಕ್ಷ್ಯಾಮಿ ಕಿಮಹಂ ಗತಃ ॥
ಅನುವಾದ
ಅಲ್ಲಿಗೆ ಹೋಗುತ್ತಲೇ ಪರಮಬುದ್ಧಿವಂತ ಸುಮಿತ್ರಾಕುಮಾರನಿಗೆ ಬಹಳ ದುಃಖವಾಯಿತು. ನಾನು ಶ್ರೀರಾಮಚಂದ್ರನ ಬಳಿಗೆ ಹೋಗಿ ಏನು ಹೇಳಲಿ? ಎಂದು ಯೋಚಿಸತೊಡಗಿದನು.॥3॥
ಮೂಲಮ್ - 4
ತಸ್ಯೈವಂ ಚಿಂತಯಾನಸ್ಯ ಭವನಂ ಶಶಿಸಂನಿಭಮ್ ।
ರಾಮಸ್ಯ ಪರಮೋದಾರಂ ಪುರಸ್ತಾತ್ಸಮದೃಶ್ಯತ ॥
ಅನುವಾದ
ಅವನು ಹೀಗೆ ವಿಚಾರ ಮಾಡುತ್ತಿರುವಾಗಲೇ ಚಂದ್ರನಂತೆ ಉಜ್ವಲವಾದ ಶ್ರೀರಾಮನ ವಿಶಾಲ ಅರಮನೆಯು ಗೋಚರಿಸಿತು.॥4॥
ಮೂಲಮ್ - 5
ರಾಜ್ಞಸ್ತು ಭವನದ್ವಾರಿ ಸೋಽವತೀರ್ಯ ನರೋತ್ತಮಃ ।
ಅವಾಙ್ಮುಖೋ ದೀನಮನಾಃ ಪ್ರವಿವೇಶಾನಿವಾರಿತಃ ॥
ಅನುವಾದ
ಅರಮನೆಯ ಬಾಗಿಲಲ್ಲಿ ರಥದಿಂದ ಇಳಿದು, ನರಶ್ರೇಷ್ಠ ಲಕ್ಷ್ಮಣನು ತಲೆತಗ್ಗಿಸಿಕೊಂಡು ದುಃಖಿತ ಮನಸ್ಸಿನಿಂದ ಯಾವುದೇ ತಡೆಯಿಲ್ಲದೆ ಒಳಗೆ ಪ್ರವೇಶಿಸಿದನು.॥5॥
ಮೂಲಮ್ - 6
ಸ ದೃಷ್ಟ್ವಾ ರಾಘವಂ ದೀನಮಾಸೀನಂ ಪರಮಾಸನೇ ।
ನೇತ್ರಾಭ್ಯಾಮಶ್ರುಪೂರ್ಣಾಭ್ಯಾಂ ದದರ್ಶಾಗ್ರಜಮಗ್ರತಃ ॥
ಮೂಲಮ್ - 7
ಜಗ್ರಾಹ ಚರಣೌ ತಸ್ಯ ಲಕ್ಷ್ಮಣೋ ದೀನಚೇತನಃ ।
ಉವಾಚ ದೀನಯಾ ವಾಚಾ ಪ್ರಾಂಜಲಿಃ ಸುಸಮಾಹಿತಃ ॥
ಅನುವಾದ
ಶ್ರೀರಘುನಾಥನು ದುಃಖಿತನಾಗಿ ಒಂದು ಸಿಂಹಾಸನದಲ್ಲಿ ಕುಳಿತು ಕಣ್ಣೀರು ಸುರಿಸುತ್ತಿರುವುದನ್ನು ನೋಡಿ, ದುಃಖಿತನಾದ ಲಕ್ಷ್ಮಣನು ಮುಂದೆ ಹೋಗಿ ಅಣ್ಣನ ಎರಡೂ ಪಾದಗಳನ್ನು ಹಿಡಿದುಕೊಂಡು ಕೈಮುಗಿದು ಮನಸ್ಸನ್ನು ಏಕಾಗ್ರಗೊಳಿಸಿ ದೀನವಾಣಿಯಲ್ಲಿ ಹೇಳತೊಡಗಿದನು.॥6-7॥
ಮೂಲಮ್ - 8
ಆರ್ಯಸ್ಯಾಜ್ಞಾಂ ಪುರಸ್ಕೃತ್ಯ ವಿಸೃಜ್ಯ ಜನಕಾತ್ಮಜಾಮ್ ।
ಗಂಗಾತೀರೇ ಯಥೋದ್ದಿಷ್ಟೇ ವಾಲ್ಮೀಕೇರಾಶ್ರಮೇಶುಭೇ ॥
ಮೂಲಮ್ - 9
ತತ್ರ ತಾಂ ಚ ಶುಭಾಚಾರಾಮಾಶ್ರಮಾಂತೇ ಯಶಸ್ವಿನೀಮ್ ।
ಪುನರಪ್ಯಾಗತೋ ವೀರ ಪಾದಮೂಲಮುಪಾಸಿತುಮ್ ॥
ಅನುವಾದ
ವೀರ ಮಹಾರಾಜನ ಆಜ್ಞೆಯನ್ನು ಶಿರಸಾವಹಿಸಿ ನಾನು ಶುಭಾಚರಣವುಳ್ಳ, ಯಶಸ್ವಿನೀ ಜನಕಾತ್ಮಜೆ ಸೀತೆಯನ್ನು ಗಂಗಾತೀರದಲ್ಲಿ ವಾಲ್ಮೀಕಿಗಳ ಶುಭ ಆಶ್ರಮದ ಬಳಿಯಲ್ಲಿ ಬಿಟ್ಟು ನಿಮ್ಮ ಶ್ರೀಚರಣಗಳ ಸೇವೆಗಾಗಿ ಇಲ್ಲಿಗೆ ಮರಳಿ ಬಂದಿರುವೆನು.॥8-9॥
ಮೂಲಮ್ - 10
ಮಾ ಶುಚಃ ಪುರುಷವ್ಯಾಘ್ರ ಕಾಲಸ್ಯ ಗತಿರೀದೃಶೀ ।
ತ್ವದ್ವಿಧಾ ನ ಹಿ ಶೋಚಂತಿ ಬುದ್ಧಿಮಂತೋ ಮನಸ್ವಿನಃ ॥
ಅನುವಾದ
ಪುರುಷಸಿಂಹನೇ! ನೀವು ಶೋಕಿಸಬೇಡಿ. ಕಾಲದ ಗತಿ ಹೀಗೆಯೇ ಇದೆ. ನಿಮ್ಮಂತಹ ಬುದ್ಧಿವಂತರು ಮತ್ತು ದೃಢಚಿತ್ತ ಮನುಷ್ಯರು ಶೋಕಿಸುವುದಿಲ್ಲ.॥10॥
ಮೂಲಮ್ - 11
ಸರ್ವೇ ಕ್ಷಯಾಂತಾ ನಿಚಯಾಃ ಪತನಾಂತಾಃ ಸಮುಚ್ಛ್ರಯಾಃ ।
ಸಂಯೋಗಾ ವಿಪ್ರಯೋಗಾಂತಾ ಮರಣಾಂತಂ ಚ ಜೀವಿತಮ್ ॥
ಅನುವಾದ
ಜಗತ್ತಿನಲ್ಲಿ ಸಂಗ್ರಹವೆಲ್ಲದರ ಅಂತ್ಯವಿನಾಶವಾಗಿದೆ, ಉತ್ಥಾನದ ಅಂತ್ಯಪತನವಾಗಿದೆ, ಸಂಯೋಗದ ಅಂತ್ಯ ವಿಯೋಗವಾಗಿದೆ, ಜೀವನದ ಅಂತ್ಯ ಮರಣವಾಗಿದೆ.॥11॥
ಮೂಲಮ್ - 12
ತಸ್ಮಾತ್ಪುತ್ರೇಷು ದಾರೇಷು ಮಿತ್ರೇಷುಚ ಧನೇಷು ಚ ।
ನಾತಿಪ್ರಸಂಗಃ ಕರ್ತವ್ಯೋ ವಿಪ್ರಯೋಗೋ ಹಿ ತೈರ್ಧ್ರುವಮ್ ॥
ಅನುವಾದ
ಆದ್ದರಿಂದ ಪತ್ನೀ, ಪುತ್ರ, ಮಿತ್ರ, ಧನ-ಕನಕಗಳಲ್ಲಿ ವಿಶೇಷ ಆಸಕ್ತಿ ಇರಬಾರದು; ಏಕೆಂದರೆ ಅವುಗಳಿಂದ ವಿಯೋಗ ನಿಶ್ಚಿತವಾಗಿದೆ.॥12॥
ಮೂಲಮ್ - 13
ಶಕ್ತಸ್ತ್ವಮಾತ್ಮನಾಽಽತ್ಮಾನಂ ವಿನೇತುಂ ಮನಸಾ ಮನಃ ।
ಲೋಕಾನ್ಸರ್ವಾಂಶ್ಚ ಕಾಕುತ್ಸ್ಥ ಕಿಂ ಪುನಃ ಶೋಕಮಾತ್ಮನಃ ॥
ಅನುವಾದ
ಕಕುತ್ಸ್ಥ ಕುಲಭೂಷಣ! ನೀನು ಆತ್ಮನಿಂದ ಆತ್ಮನನ್ನು, ಮನಸ್ಸಿನಿಂದ ಮನಸ್ಸನ್ನು ಹಾಗೂ ಸಮಸ್ತ ಲೋಕಗಳನ್ನು ನಿಯಂತ್ರಣದಲ್ಲಿಡಲು ಸಮರ್ಥನಾಗಿರುವೆ. ಹಾಗಿರುವಾಗ ಶೋಕವನ್ನು ಹತೋಟಿಯಲ್ಲಿಡುವುದು ಯಾವ ದೊಡ್ಡ ಮಾತು.॥13॥
ಮೂಲಮ್ - 14
ನೇದೃಶೇಷುವಿಮುಹ್ಯಂತಿ ತ್ವದ್ವಿಧಾಃ ಪುರುಷರ್ಷಭಾಃ ।
ಅಪವಾದಃ ಸ ಕಿಲ ತೇ ಪುನರೇಷ್ಯತಿ ರಾಘವ ॥
ಅನುವಾದ
ನಿನ್ನಂತಹ ಶ್ರೇಷ್ಠ ಪುರುಷರು ಇಂತಹ ಪ್ರಸಂಗಗಳು ಬಂದಾಗಲೂ ಮೋಹಿತರಾಗುವುದಿಲ್ಲ. ರಘುನಂದನ! ನೀವು ದುಃಖಿಯಾಗಿದ್ದರೆ ಆ ಅಪವಾದ ನಿಮ್ಮ ಮೇಲೆ ಮತ್ತೆ ಬಂದೀತು.॥14॥
ಮೂಲಮ್ - 15
ಯದರ್ಥಂ ಮೈಥಿಲೀ ತ್ಯಕ್ತಾ ಅಪವಾದಭಯಾನ್ನೃಪ ।
ಸೋಽಪವಾದಃ ಪುರೇ ರಾಜನ್ಭವಿಷ್ಯತಿ ನ ಸಂಶಯಃ ॥
ಅನುವಾದ
ನರೇಶ್ವರ! ಯಾವ ಅಪವಾದದ ಭಯದಿಂದ ನೀವು ಸೀತೆಯನ್ನು ತ್ಯಜಿಸಿದಿರೋ, ಆ ಅಪವಾದವು ಖಂಡಿತ ವಾಗಿ ಈ ನಗರದಲ್ಲಿ ಮತ್ತೆ ಆಗತೊಡಗೀತು. (ಬೇರೆಯವರ ಮನೆಯಲ್ಲಿ ಇದ್ದ ಪತ್ನಿಯನ್ನು ತ್ಯಾಗಮಾಡಿ ಇವನು ಹಗಲು-ರಾತ್ರೆ ಆಕೆಯ ಚಿಂತೆಯಿಂದ ದುಃಖಿತನಾಗಿದ್ದಾನೆ ಎಂದು ಜನರು ಹೇಳುವರು.॥15॥
ಮೂಲಮ್ - 16
ಸ ತ್ವಂ ಪುರುಷಶಾರ್ದೂಲ ಧೈರ್ಯೇಣ ಸುಸಮಾಹಿತಃ ।
ತ್ಯಜೇಮಾಂ ದುರ್ಬಲಾಂ ಬುದ್ಧಿಂ ಸಂತಾಪಂ ಮಾ ಕುರುಷ್ವ ಹ ॥
ಅನುವಾದ
ಆದ್ದರಿಂದ ಪುರುಷ ಸಿಂಹನೇ! ನೀವು ಧೈರ್ಯದಿಂದ ಚಿತ್ತವನ್ನು ಏಕಾಗ್ರಗೊಳಿಸಿ, ಈ ದುರ್ಬಲ ಶೋಕಬುದ್ಧಿಯನ್ನು ತ್ಯಜಿಸಿರಿ, ಸಂತಪ್ತರಾಗಬೇಡಿ.॥16॥
ಮೂಲಮ್ - 17
ಏವಮುಕ್ತಃ ಸ ಕಾಕುತ್ಸ್ಥೋ ಲಕ್ಷ್ಮಣೇನ ಮಹಾತ್ಮನಾ ।
ಉವಾಚ ಪರಯಾ ಪ್ರೀತ್ಯಾ ಸೌಮಿತ್ರಿಂ ಮಿತ್ರವತ್ಸಲಃ ॥
ಅನುವಾದ
ಮಹಾತ್ಮಾ ಲಕ್ಷ್ಮಣನು ಹೀಗೆ ಹೇಳಿದಾಗ ಮಿತ್ರವತ್ಸಲ ಶ್ರೀರಾಮನು ಬಹಳ ಸಂತೋಷದಿಂದ ಆ ಸುಮಿತ್ರಾಕುಮಾರನಲ್ಲಿ ಹೇಳಿದನು.॥17॥
ಮೂಲಮ್ - 18
ಏವಮೇತನ್ನರಶ್ರೇಷ್ಠ ಯಥಾ ವದಸಿ ಲಕ್ಷ್ಮಣ ।
ಪರಿತೋಷಶ್ಚ ಮೇ ವೀರ ಮಮ ಕಾರ್ಯಾನುಶಾಸನೇ ॥
ಅನುವಾದ
ನರಶ್ರೇಷ್ಠ ವೀರ ಲಕ್ಷ್ಮಣ! ನೀನು ಹೇಳಿದ ಮಾತು ಸರಿಯಾಗಿದೆ. ನೀನು ನನ್ನ ಆದೇಶವನ್ನು ಪಾಲಿಸಿದೆ, ಇದರಿಂದ ನನಗೆ ತುಂಬಾ ಸಂತೋಷವಾಗಿದೆ.॥18॥
ಮೂಲಮ್ - 19
ನಿವೃತ್ತಿಶ್ಚಾಗತಾ ಸೌಮ್ಯ ಸಂತಾಪಶ್ಚ ನಿರಾಕೃತಃ ।
ಭವದ್ವಾಕ್ಯೈಃ ಸುರುಚಿರೈರನುನೀತೋಽಸ್ಮಿ ಲಕ್ಷ್ಮಣ ॥
ಅನುವಾದ
ಸೌಮ್ಯಲಕ್ಷ್ಮಣ! ಈಗ ನಾನು ದುಃಖದಿಂದ ನಿವೃತ್ತನಾಗಿದ್ದೇನೆ. ಸಂತಾಪವನ್ನು ಮನಸ್ಸಿನಿಂದ ಕಿತ್ತುಹಾಕಿದ್ದೇನೆ. ನಿನ್ನ ಸುಂದರ ವಚನಗಳಿಂದ ನನಗೆ ಬಹಳ ಶಾಂತಿ ದೊರಕಿತು.॥19॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಐವತ್ತೆರಡನೆಯ ಸರ್ಗ ಪೂರ್ಣವಾಯಿತು. ॥52॥