०५१ भृगु-शापः

[ಐವತ್ತೊಂದನೆಯ ಸರ್ಗ]

ಭಾಗಸೂಚನಾ

ಸುಮಂತ್ರನು ದುರ್ವಾಸರಿಂದ ಕೇಳಿದ ಭೃಗುಮಹರ್ಷಿಯ ಶಾಪದ ಕಥೆಯನ್ನು ಲಕ್ಷ್ಮಣನಿಗೆ ತಿಳಿಸಿ ಸಮಾಧಾನಗೊಳಿಸಿದುದು

ಮೂಲಮ್ - 1

ತಥಾ ಸಂಚೋದಿತಃ ಸೂತೋ ಲಕ್ಷ್ಮಣೇನ ಮಹಾತ್ಮನಾ ।
ತದ್ವಾಕ್ಯಮೃಷಿಕಾಪ್ರೋಕ್ತಂ ವ್ಯಾಹರ್ತುಮುಪಚಕ್ರಮೇ ॥

ಅನುವಾದ

ಸುಮಂತ್ರನು ಮಹಾತ್ಮಾ ಲಕ್ಷ್ಮಣನ ಪ್ರೇರಣೆಯಿಂದ ದುರ್ವಾಸರು ಹೇಳಿದ ಮಾತನ್ನು ಹೇಳಲು ತೊಡಗಿದನು.॥1॥

ಮೂಲಮ್ - 2

ಪುರಾ ನಾಮ್ನಾ ಹಿ ದುರ್ವಾಸಾ ಅತ್ರೇಃ ಪುತ್ರೋ ಮಹಾಮುನಿಃ ।
ವಸಿಷ್ಠಸ್ಯಾಶ್ರಮೇ ಪುಣ್ಯೇ ವಾರ್ಷಿಕ್ಯಂ ಸಮುವಾಸಹ ॥

ಅನುವಾದ

ಲಕ್ಷ್ಮಣ! ಅತ್ರಿಮಹರ್ಷಿಗಳ ಪುತ್ರರಾದ ಮಹಾಮುನಿ ದುರ್ವಾಸರು ಹಿಂದೊಮ್ಮೆ ವಸಿಷ್ಠರ ಪವಿತ್ರ ಆಶ್ರಮದಲ್ಲಿ ವರ್ಷಾಕಾಲದ ನಾಲ್ಕು ತಿಂಗಳನ್ನು ಕಳೆದಿದ್ದರು.॥2॥

ಮೂಲಮ್ - 3

ತಮಾಶ್ರಮಂ ಮಹಾತೇಜಾಃ ಪಿತಾತೇ ಸುಮಹಾಯಶಾಃ ।
ಪುರೋಹಿತಂ ಮಹಾತ್ಮಾನಾಂ ದಿದೃಕ್ಷುರಗಮತ್ಸ್ವಮ್ ॥

ಅನುವಾದ

ಒಂದು ದಿನ ಮಹಾಯಶೋವಂತನಾದ ನಿನ್ನ ತಂದೆಯವರು ಪುರೋಹಿತರಾದ ವಸಿಷ್ಠರನ್ನು ಕಾಣಲು ಆಶ್ರಮಕ್ಕೆ ತಾವಾಗಿಯೇ ಬಂದರು.॥3॥

ಮೂಲಮ್ - 4

ಸ ದೃಷ್ಟ್ವಾ ಸೂರ್ಯಸಂಕಾಶಂ ಜ್ವಲಂತಮಿವ ತೇಜಸಾ ।
ಉಪವಿಷ್ಟಂ ವಸಿಷ್ಠಸ್ಯ ಸವ್ಯಪಾರ್ಶ್ವೇ ಮಹಾಮುನಿಮ್ ॥

ಅನುವಾದ

ಅಲ್ಲಿ ತನ್ನ ತೇಜದಿಂದ ಸೂರ್ಯನಂತೆ ದೇದೀಪ್ಯಮಾನರಾದ ಓರ್ವ ಮಹಾಮುನಿಗಳು ವಸಿಷ್ಠರ ವಾಮಭಾಗದಲ್ಲಿ ಕುಳಿತಿರುವುದನ್ನು ರಾಜನು ನೋಡಿದನು.॥4॥

ಮೂಲಮ್ - 5½

ತೌ ಮುನೀ ತಾಪಸಶ್ರೇಷ್ಠೌ ವಿನೀತೋ ಹ್ಯಭ್ಯವಾದಯತ್ ।
ಸ ತಾಭ್ಯಾಂ ಪೂಜಿತೋ ರಾಜಾ ಸ್ವಾಗತೇನಾಸನೇನ ಚ ॥
ಪಾದ್ಯೇನ ಲಮೂಲೈಶ್ಚ ಉವಾಸ ಮುನಿಭಿಃ ಸಹ ।

ಅನುವಾದ

ಆಗ ರಾಜನು ಇಬ್ಬರೂ ತಾಪಸಶ್ರೇಷ್ಠ ಮಹರ್ಷಿಯರನ್ನು ವಿನಯದಿಂದ ಅಭಿವಾದನ ಮಾಡಿದನು. ಅವರಿಬ್ಬರೂ ಸ್ವಾಗತಪೂರ್ವಕ ಆಸನ ನೀಡಿ, ಪಾದ್ಯ, ಫಲ-ಮೂಲ ಅರ್ಪಿಸಿ ರಾಜನನ್ನು ಸತ್ಕರಿಸಿದರು. ಮತ್ತೆ ಅವನು ಅಲ್ಲಿ ಮುನಿಗಳ ಬಳಿ ಕುಳಿತುಕೊಂಡನು.॥5½॥

ಮೂಲಮ್ - 6½

ತೇಷಾಂ ತತ್ರೋಪವಿಷ್ಟಾನಾಂ ತಾಸ್ತಾಃ ಸುಮಧುರಾಃ ಕಥಾಃ ॥
ಬಭೂವುಃ ಪರಮರ್ಷೀಣಾಂ ಮಧ್ಯಾದಿತ್ಯಗತೇಽಹನಿ ।

ಅನುವಾದ

ಅಲ್ಲಿ ಕುಳಿತಿರುವ ಮಹರ್ಷಿಗಳು ಮಧ್ಯಾಹ್ನದ ಸಮಯ ಬಗೆ-ಬಗೆಯ ಅತ್ಯಂತ ಮಧುರ ಕಥೆಗಳನ್ನು ಪರಸ್ಪರ ಹೇಳಿಕೊಂಡರು.॥6½॥

ಮೂಲಮ್ - 7½

ತತಃ ಕಥಾಯಾಂ ಕಸ್ಯಾಂಚಿತ್ಪ್ರಾಂಜಲಿಃ ಪ್ರಗ್ರಹೋ ನೃಪಃ ॥
ಉವಾಚ ತಂ ಮಹಾತ್ಮಾನಮತ್ರೇಃ ಪುತ್ರಂ ತಪೋಧನಮ್ ।

ಅನುವಾದ

ಬಳಿಕ ಯಾವುದೋ ಕಥೆಯ ಸಂದರ್ಭದಲ್ಲಿ ಮಹಾರಾಜನು ಕೈಮುಗಿದು ತಪೋಧನ ಅತ್ರಿಪುತ್ರ ಮಹಾತ್ಮಾ ದುರ್ವಾಸರಲ್ಲಿ ವಿನಯದಿಂದ ಕೇಳಿದನು.॥7½॥

ಮೂಲಮ್ - 8½

ಭಗವನ್ಕಿಂಪ್ರಮಾಣೇನ ಮಮ ವಂಶೋ ಭವಿಷ್ಯತಿ ॥
ಕಿಮಾಯುಶ್ಚ ಹಿ ಮೇ ರಾಮಃ ಪುತ್ರಾಶ್ಚಾನ್ಯೇ ಕಿಮಾಯುಷಃ ।

ಅನುವಾದ

ಪೂಜ್ಯರೇ! ನನ್ನ ವಂಶ ಎಷ್ಟು ಸಮಯ ನಡೆದೀತು? ನನ್ನ ರಾಮನಿಗೆ ಆಯುಸ್ಸು ಎಷ್ಟಿದ್ದೀತು? ಹಾಗೂ ಉಳಿದ ಎಲ್ಲ ಪುತ್ರರ ಆಯುಸ್ಸೂ ಕೂಡ ಎಷ್ಟಿರಬಹುದು.॥8½॥

ಮೂಲಮ್ - 9½

ರಾಮಸ್ಯ ಚ ಸುತಾ ಯೇ ಸ್ಯುಸ್ತೇಷಾಮಾಯುಃ ಕಿಯದ್ಭವೇತ್ ॥
ಕಾಮ್ಯಯಾ ಭಗವನ್ಬ್ರೂಹಿ ವಂಶಸ್ಯಾಸ್ಯ ಗತಿಂ ಮಮ ।

ಅನುವಾದ

ಶ್ರೀರಾಮನಿಗೆ ಹುಟ್ಟುವ ಪುತ್ರರ ಆಯುಸ್ಸು ಎಷ್ಟಾಗಬಹುದು? ಪೂಜ್ಯರೇ! ತಾವು ಇಚ್ಛಾನುಸಾರ ನನ್ನ ವಂಶದ ಸ್ಥಿತಿಯನ್ನು ತಿಳಿಸಿರಿ.॥9½॥

ಮೂಲಮ್ - 10½

ತಚ್ಛ್ರುತ್ವಾ ವ್ಯಾಹೃತಂ ವಾಕ್ಯಂ ರಾಜ್ಞೋದಶರಥಸ್ಯ ತು ॥
ದುರ್ವಾಸಾಃ ಸುಮಹಾತೇಜಾ ವ್ಯಾಹರ್ತುಮುಪಚಕ್ರಮೇ ।

ಅನುವಾದ

ದಶರಥರಾಜನ ಮಾತನ್ನು ಕೇಳಿ ಮಹಾತೇಜಸ್ವಿ ದುರ್ವಾಸರು ಹೇಳತೊಡಗಿದರು.॥10½॥

ಮೂಲಮ್ - 11

ಶೃಣು ರಾಜನ್ಪುರಾವೃತ್ತಂ ತದಾ ದೇವಾಸುರೇ ಯುಧಿ ॥

ಮೂಲಮ್ - 12

ದೈತ್ಯಾಃ ಸುರೈರ್ಭರ್ತ್ಸ್ಯಮಾನಾ ಭೃಗುಪತ್ನೀಂ ಸಮಾಶ್ರಿತಾಃ ।
ತಯಾ ದತ್ತಾಭಯಾಸ್ತತ್ರ ನ್ಯವಸನ್ನಭಯಾಸ್ತದಾ ॥

ಅನುವಾದ

ರಾಜನೇ! ಕೇಳು, ಹಿಂದೊಮ್ಮೆ ದೇವಾಸುರ ಸಂಗ್ರಾಮದಲ್ಲಿ ದೇವತೆಗಳಿಂದ ಪೀಡಿತರಾದ ದೈತ್ಯರು ಮಹರ್ಷಿ ಭೃಗುಪತ್ನಿಯಲ್ಲಿ ಶರಣಾದರು. ಭೃಗುಪತ್ನಿಯು ಆಗ ದೈತ್ಯರಿಗೆ ಅಭಯವಿತ್ತರು ಹಾಗೂ ಅವರ ಆಶ್ರಮದಲ್ಲಿ ನಿರ್ಭಯರಾಗಿ ಇರತೊಡಗಿದರು.॥11-12॥

ಮೂಲಮ್ - 13

ತಯಾ ಪರಿಗೃಹೀತಾಂಸ್ತಾನ್ ದೃಷ್ಟ್ವಾ ಕ್ರುದ್ಧಃಸುರೇಶ್ವರಃ ।
ಚಕ್ರೇಣ ಶಿತಧಾರೇಣಭೃಗುಪತ್ನ್ಯಾಃ ಶಿರೋಽಹರತ್ ॥

ಅನುವಾದ

ಭೃಗುಪತ್ನಿಯು ದೈತ್ಯರಿಗೆ ಆಶ್ರಯ ನೀಡಿದುದನ್ನು ನೋಡಿ ಕುಪಿತನಾದ ದೇವೇಶ್ವರ ಭಗವಾನ್ ವಿಷ್ಣು ಹರಿತವಾದ ಚಕ್ರದಿಂದ ಆಕೆಯ ತಲೆಯನ್ನು ಕತ್ತರಿಸಿದನು.॥13॥

ಮೂಲಮ್ - 14

ತತಸ್ತಾಂ ನಿಹತಾಂ ದೃಷ್ಟ್ವಾ ಪತ್ನೀಂ ಭೃಗುಕುಲೋದ್ವಹಃ ।
ಶಶಾಪ ಸಹಸಾ ಕ್ರುದ್ಧೋ ವಿಷ್ಣುಂ ರಿಪುಕುಲಾರ್ದನಮ್ ॥

ಅನುವಾದ

ತನ್ನ ಪತ್ನಿಯ ವಧೆಯನ್ನು ನೋಡಿ ಭಾರ್ಗವ ವಂಶ ಪ್ರವರ್ತಕ ಭೃಗುಮುನಿಗಳು ಕುಪಿತರಾಗಿ ಶತ್ರುಕುಲನಾಶಕ ಭಗವಾನ್ ವಿಷ್ಣುವಿಗೆ ಶಾಪವನ್ನಿತ್ತರು.॥14॥

ಮೂಲಮ್ - 15½

ಯಸ್ಮಾದವಧ್ಯಾಂ ಮೇ ಪತ್ನೀಮವಧೀಃ ಕ್ರೋಧಮೂರ್ಛಿತಃ ।
ತಸ್ಮಾತ್ತ್ವಂ ಮಾನುಷೇ ಲೋಕೇ ಜನಿಷ್ಯಸಿ ಜನಾರ್ದನ ॥
ತತ್ರ ಪತ್ನೀವಿಯೋಗಂ ತ್ವಂ ಪ್ರಾಪ್ಸ್ಯಸೇ ಬಹುವಾರ್ಷಿಕಮ್ ।

ಅನುವಾದ

ಜನಾರ್ದನನೇ! ನನ್ನ ಪತ್ನಿಯು ವಧೆಗೆ ಯೋಗ್ಯಳಿರಲಿಲ್ಲ. ಆದರೂ ನೀನು ಕ್ರೋಧಮೂರ್ಛಿತನಾಗಿ ಆಕೆಯನ್ನು ವಧಿಸಿದೆ. ಇದರಿಂದ ನಿನಗೆ ಮನುಷ್ಯಲೋಕದಲ್ಲಿ ಹುಟ್ಟಬೇಕಾದೀತು ಮತ್ತು ಅಲ್ಲಿ ಬಹಳ ದಿನಗಳವರೆಗೆ ರಾಮನಿಗೆ ಪತ್ನೀ ವಿಯೋಗದ ಕಷ್ಟ ಸಹಿಸಬೇಕಾದೀತು.॥15½॥

ಮೂಲಮ್ - 16½

ಶಾಪಾಭಿಹತಚೇತಾಸ್ತು ಸ್ವಾತ್ಮನಾ ಭಾವಿತೋಽಭವತ್ ॥
ಅರ್ಚಯಾಮಾಸ ತಂ ದೇವಂ ಭೃಗುಃ ಶಾಪೇನ ಪೀಡಿತಃ ।

ಅನುವಾದ

ಆದರೆ ಈ ಪ್ರಕಾರ ಶಾಪಕೊಟ್ಟ ಅವರ ಮನಸ್ಸಿನಲ್ಲಿ ಬಹಳ ಪಶ್ಚಾತ್ತಾಪವುಂಟಾಯಿತು. ವಿಷ್ಣುವು ಶಾಪವನ್ನು ಸ್ವೀಕರಿಸುವಂತೆ ವಿಷ್ಣುವಿನ ಆರಾಧನೆ ಮಾಡುವಂತೆ ಮಹರ್ಷಿಗಳನ್ನು ಅವರ ಅಂತರಾತ್ಮವು ಪ್ರೇರೇಪಿಸಿತು. ಹೀಗೆ ಶಾಪದ ವಿಫಲತೆಯ ಭಯದಿಂದ ಪೀಡಿತರಾದ ಭೃಗುವು ತಪಸ್ಸಿನ ಮೂಲಕ ಭಗವಾನ್ ವಿಷ್ಣುವಿನ ಆರಾಧನೆಯನ್ನು ಮಾಡಿದರು.॥16½॥

ಮೂಲಮ್ - 17½

ತಪಸಾಽಽರಾಧಿತೋ ದೇವೋ ಹ್ಯಬ್ರವೀದ್ಭಕ್ತವತ್ಸಲಃ ॥
ಲೋಕಾನಾಂ ಸಂಪ್ರಿಯಾರ್ಥಂ ತು ತಂ ಶಾಪಂ ಗ್ರಹ್ಯಮುಕ್ತವಾನ್ ।

ಅನುವಾದ

ತಪಸ್ಸಿನ ಮೂಲಕ ಆರಾಧನೆ ಮಾಡಿದಾಗ ಭಕ್ತಿವತ್ಸಲ ಮಹಾವಿಷ್ಣು ಪ್ರಸನ್ನನಾಗಿ ಮಹರ್ಷಿಗಳಿಗೆ ಹೇಳಿದನು - ಮಹರ್ಷಿಗಳೇ! ಸಮಸ್ತ ಲೋಕಗಳ ಪ್ರಿಯವನ್ನುಂಟು ಮಾಡಲು ನಿಮ್ಮ ಶಾಪವನ್ನು ಸ್ವೀಕರಿಸುವೆನು.॥17½॥

ಮೂಲಮ್ - 18

ಇತಿ ಶಪ್ತೋ ಮಹಾತೇಜಾ ಭೃಗುಣಾ ಪೂರ್ವಜನ್ಮನಿ ॥

ಮೂಲಮ್ - 19

ಇಹಾಗತೋ ಹಿ ಪುತ್ರತ್ವಂ ತವ ಪಾರ್ಥಿವಸತ್ತಮ ।
ರಾಮ ಇತ್ಯಭಿವಿಖ್ಯಾತಸ್ತ್ರಿಷು ಲೋಕೇಷು ಮಾನದ ॥

ಅನುವಾದ

ಹಿಂದೆ ಮಹಾವಿಷ್ಣುವು ವಾಮನನಾಗಿ ಅವತರಿಸಿದಾಗ ಮಹಾವಿಷ್ಣುವಿಗೆ ಭೃಗು ಮಹರ್ಷಿಗಳಿಂದ ಹೀಗೆ ಶಾಪ ಬಂದಿತ್ತು. ಆ ಶಾಪದ ಪರಿಣಾಮವಾಗಿ ಆ ಮಹಾವಿಷ್ಣುವೇ ಭೂಮಿಯಲ್ಲಿ ನಿನ್ನ ಮಗನಾಗಿ ಹುಟ್ಟಿ ರಾಮನೆಂಬ ಹೆಸರಿನಿಂದ ಮೂರು ಲೋಕಗಳಲ್ಲಿ ವಿಖ್ಯಾತನಾಗುತ್ತಾನೆ.॥18-19॥

ಮೂಲಮ್ - 20

ತತ್ಫಲಂ ಪ್ರಾಪ್ಸ್ಯತೇ ಚಾಪಿ ಭೃಗುಶಾಪಕೃತಂ ಮಹತ್ ।
ಅಯೋಧ್ಯಾಯಾಃ ಪತೀ ರಾಮೋ ದೀರ್ಘಕಾಲಂ ಭವಿಷ್ಯತಿ ॥

ಅನುವಾದ

ಭೃಗು ಮಹರ್ಷಿಗಳ ಶಾಪದ ಪರಿಣಾಮವಾಗಿ ಅವನು ಪತ್ನೀ ವಿಯೋಗ ರೂಪವಾದ ಫಲವನ್ನು ಪಡೆದರೂ ಬಹಳ ದೀರ್ಘಕಾಲದವರೆಗೆ ಅಯೋಧ್ಯೆಯಲ್ಲಿ ರಾಜ್ಯಭಾರ ಮಾಡಿಕೊಂಡಿರುವನು.॥20॥

ಮೂಲಮ್ - 21½

ಸುಖಿನಶ್ಚ ಸಮೃದ್ಧಾಶ್ಚ ಭವಿಷ್ಯಂತ್ಯಸ್ಯ ಯೇಽನುಗಾಃ ।
ದಶವರ್ಷಸಹಸ್ರಾಣಿ ದಶವರ್ಷಶತಾನಿ ಚ ॥
ರಾಮೋ ರಾಜ್ಯಮುಪಾಸಿತ್ವಾ ಬ್ರಹ್ಮಲೋಕಂ ಗಮಿಷ್ಯತಿ ।

ಅನುವಾದ

ಅವನ ಅನುಯಾಯಿಗಳೂ ಕೂಡ ಪರಮಸುಖಿ ಮತ್ತು ಧನ-ಧಾನ್ಯಗಳಿಂದ ಸಂಪನ್ನರಾಗುವರು. ಶ್ರೀರಾಮನು ಹನ್ನೊಂದು ಸಾವಿರ ವರ್ಷ ರಾಜ್ಯವಾಳಿ ಕೊನೆಗೆ ವೈಕುಂಠ ಅಥವಾ ಸಾಕೇತಧಾಮಕ್ಕೆ ತೆರಳುವನು.॥21½॥

ಮೂಲಮ್ - 22

ಸಮೃದ್ಧೈಶ್ಚಾಶ್ವಮೇಧೈಶ್ಚ ಇಷ್ಟ್ವಾ ಪರಮದುರ್ಜಯಃ ॥

ಮೂಲಮ್ - 23

ರಾಜವಂಶಾಶ್ಚ ಬಹುಶೋ ಬಹೂನ್ಸಂಸ್ಥಾಪಯಿಷ್ಯತಿ ।
ದ್ವೌ ಪುತ್ರೌ ತು ಭವಿಷ್ಯೇತೇ ಸೀತಾಯಾಂ ರಾಘವಸ್ಯ ತು ॥

ಅನುವಾದ

ಪರಮ ದುರ್ಜಯವೀರ ಶ್ರೀರಾಮನು ಸಮೃದ್ಧಿಶಾಲೀ ಅಶ್ವಮೇಧ ಯಜ್ಞಗಳನ್ನು ಅನುಷ್ಠಾನ ಮಾಡಿ ಅನೇಕ ರಾಜ ವಂಶರುಗಳನ್ನು ಸ್ಥಾಪನೆ ಮಾಡುವನು. ಶ್ರೀರಘುನಾಥನಿಗೆ ಸೀತೆಯ ಗರ್ಭದಿಂದ ಇಬ್ಬರು ಪುತ್ರರಾಗುವರು.॥22-23॥

ಮೂಲಮ್ - 24

ಸ ಸರ್ವಮಖಿಲಂ ರಾಜ್ಞೋ ವಂಶಸ್ಯಾಹ ಗತಾಗತಮ್ ।
ಆಖ್ಯಾಯ ಸುಮಹಾತೇಜಾಸ್ತೂಷ್ಣೀಮಾಸೀನ್ಮಹಾಮುನಿಃ ॥

ಅನುವಾದ

ಇವೆಲ್ಲ ಮಾತುಗಳನ್ನು ಹೇಳಿ ಆ ಮಹಾತೇಜಸ್ವೀ ಮಹಾಮುನಿಯು ರಾಜವಂಶದ ಭೂತ, ಭವಿಷ್ಯದ ಎಲ್ಲ ಮಾತುಗಳನ್ನು ತಿಳಿಸಿ ಸುಮ್ಮನಾದರು.॥24॥

ಮೂಲಮ್ - 25

ತೂಷ್ಣೀಂಭೂತೇ ತದಾ ತಸ್ಮಿನ್ರಾಜಾ ದಶರಥೋ ಮುನೌ ।
ಅಭಿವಾದ್ಯ ಮಹಾತ್ಮಾನೌ ಪುನರಾಯಾತ್ಪುರೋತ್ತಮಮ್ ॥

ಅನುವಾದ

ದುರ್ವಾಸರು ಸುಮ್ಮನಾದಾಗ ದಶರಥನೂ ಇಬ್ಬರೂ ಮಹಾತ್ಮರಿಗೆ ವಂದಿಸಿ ತನ್ನ ನಗರಕ್ಕೆ ಬಂದನು.॥25॥

ಮೂಲಮ್ - 26

ಏತದ್ವಚೋ ಮಯಾ ತತ್ರ ಮುನಿನಾ ವ್ಯಾಹೃತಂ ಪುರಾ ।
ಶ್ರುತಂ ಹೃದಿ ಚ ನಿಕ್ಷಿಪ್ತಂ ನಾನ್ಯಥಾ ತದ್ಭವಿಷ್ಯತಿ ॥

ಅನುವಾದ

ಹೀಗೆ ಹಿಂದೆ ದುರ್ವಾಸರು ಹೇಳಿದ ಎಲ್ಲ ಮಾತುಗಳನ್ನು ನಾನು ಅಲ್ಲಿ ಕೇಳಿಸಿಕೊಂಡು ಮನಸ್ಸಿನಲ್ಲಿಟ್ಟುಕೊಂಡು ಪ್ರಕಟಪಡಿಸಲಿಲ್ಲ. ಆ ಮಾತುಗಳು ಸುಳ್ಳಾಗಲಾರವು.॥26॥

ಮೂಲಮ್ - 27

ಸೀತಾಯಾಶ್ಚ ತತಃ ಪುತ್ರಾವಭಿಷೇಕ್ಷ್ಯತಿ ರಾಘವಃ ।
ಅನ್ಯತ್ರ ನ ತ್ವಯೋಧ್ಯಾಯಾಂ ಮುನೇಸ್ತು ವಚನಂಯಥಾ ॥

ಅನುವಾದ

ದುರ್ವಾಸರ ಮಾತಿನಂತೆ ಶ್ರೀರಘುನಾಥನು ಸೀತೆಯ ಇಬ್ಬರೂ ಪುತ್ರರ ಪಟ್ಟಾಭಿಷೇಕ ಅಯೋಧ್ಯೆಯಿಂದ ಹೊರಗೇ ನಡೆಸುವನು.॥27॥

ಮೂಲಮ್ - 28

ಏವಂ ಗತೇ ನಸಂತಾಪಂ ಕರ್ತುಮರ್ಹಸಿ ರಾಘವ ।
ಸೀತಾರ್ಥೇ ರಾಘವಾರ್ಥೇ ವಾ ದೃಢೋ ಭವ ನರೋತ್ತಮ ॥

ಅನುವಾದ

ನರಶ್ರೇಷ್ಠ ಲಕ್ಷ್ಮಣ! ವಿಧಾತನ ವಿಧಾನ ಹೀಗೇ ಇರುವುದರಿಂದ ನೀನು ಸೀತೆ ಅಥವಾ ಶ್ರೀರಾಮನ ಕುರಿತು ಸಂತಾಪ ಪಡಬೇಡ. ಧೈರ್ಯಧರಿಸಿಕೋ.॥28॥

ಮೂಲಮ್ - 29

ಶ್ರುತ್ವಾ ತು ವ್ಯಾಹೃತಂ ವಾಕ್ಯಂ ಸೂತಸ್ಯ ಪರಮಾದ್ಭುತಮ್ ।
ಪ್ರಹರ್ಷಮತುಲಂ ಲೇಭೇ ಸಾಧು ಸಾಧ್ವಿತಿ ಚಾಬ್ರವೀತ್ ॥

ಅನುವಾದ

ಸಾರಥಿಯಿಂದ ಕೇಳಿದ ಈ ಅತ್ಯಂತ ಅದ್ಭುತ ಮಾತಿನಿಂದ ಲಕ್ಷ್ಮಣನಿಗೆ ಅನುಪಮ ಹರ್ಷವಾಯಿತು. ಸಾಧು! ಸಾಧು! ಹಾಗೆಯೇ ಆಗಲಿ ಎಂದು ಹೇಳಿದನು.॥29॥

ಮೂಲಮ್ - 30

ತತಃ ಸಂವದತೋರೇವಂ ಸೂತಲಕ್ಷ್ಮಣಯೋಃ ಪಥಿ ।
ಅಸ್ತಮರ್ಕೇ ಗತೇ ವಾಸಂ ಕೇಶಿನ್ಯಾಂ ತಾವಥೋಷತುಃ ॥

ಅನುವಾದ

ದಾರಿಯಲ್ಲಿ ಸುಮಂತ್ರ ಮತ್ತು ಲಕ್ಷ್ಮಣರು ಹೀಗೆ ಮಾತನಾಡಿಕೊಂಡು ಬರುವಾಗ ಸಂಜೆಯಾಯಿತು. ಆಗ ಅವರಿಬ್ಬರೂ ಕೇಶಿನೀ ನದೀ ತೀರದಲ್ಲಿ ರಾತ್ರೆಯನ್ನು ಕಳೆದರು.॥30॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಐವತ್ತೊಂದನೆಯ ಸರ್ಗ ಪೂರ್ಣವಾಯಿತು. ॥51॥