[ಐವತ್ತನೆಯ ಸರ್ಗ]
ಭಾಗಸೂಚನಾ
ಲಕ್ಷ್ಮಣ ಮತ್ತು ಸುಮಂತ್ರರ ಸಂಭಾಷಣೆ
ಮೂಲಮ್ - 1
ದೃಷ್ಟ್ವಾ ತು ಮೈಥಿಲೀಂ ಸೀತಾಮಾಶ್ರಯೇ ಸಂಪ್ರವೇಶಿತಾಮ್ ।
ಸಂತಾಪಮಗಮದ್ಘೋರಂ ಲಕ್ಷ್ಮಣೋ ದೀನಚೇತನಃ ॥
ಅನುವಾದ
ಮಿಥಿಲೇಶಕುಮಾರೀ ಸೀತೆಯು ಮುನಿಯ ಆಶ್ರಮದಲ್ಲಿ ಪ್ರವೇಶಿಸಿದಳು, ಇದನ್ನು ನೋಡಿ ಲಕ್ಷ್ಮಣನು ಮನಸ್ಸಿನಲ್ಲೇ ಅತ್ಯಂತ ದುಃಖಿತನಾಗಿ, ಘೋರ ಸಂತಾಪವುಂಟಾಯಿತು.॥1॥
ಮೂಲಮ್ - 2
ಅಬ್ರವೀಚ್ಚ ಮಹಾತೇಜಾ ಸುಮಂತ್ರಂ ಮಂತ್ರಸಾರಥೀಮ್ ।
ಸೀತಾಸಂತಾಪಜಂ ದುಃಖಂ ಪಶ್ಯ ರಾಮಸ್ಯ ಸಾರಥೇ ॥
ಅನುವಾದ
ಆಗ ಮಹಾತೇಜಸ್ವೀ ಲಕ್ಷ್ಮಣನು ಮಂತ್ರಿಯೂ, ಸಾರಥಿಯೂ ಆಗಿದ್ದ ಸುಮಂತ್ರನಲ್ಲಿ ಹೇಳಿದನು- ಸಾರಥಿಯೇ! ನೋಡು, ಶ್ರೀರಾಮನಿಗೆ ಸೀತಾ ವಿರಹದ ದುಃಖ ಈಗಿನಿಂದಲೇ ಅನುಭವಿಸ ಬೇಕಾಯಿತಲ್ಲ.॥2॥
ಮೂಲಮ್ - 3
ತತೋ ದುಃಖತರಂ ಕಿಂ ನು ರಾಘವಸ್ಯ ಭವಿಷ್ಯತಿ ।
ಪತ್ನೀಂ ಶುದ್ಧ ಸಮಾಚಾರಾಂ ವಿಸೃಜ್ಯಜನಕಾತ್ಮಜಾಮ್ ॥
ಅನುವಾದ
ಪವಿತ್ರ ಆಚರಣವುಳ್ಳ ಧರ್ಮಪತ್ನೀ ಜನಕಾತ್ಮಜೆಯನ್ನು ಪರಿತ್ಯಾಗ ಮಾಡಬೇಕಾಯಿತು. ಇದಕ್ಕಿಂತ ಮಿಗಿಲಾದ ದುಃಖ ಶ್ರೀರಾಮನಿಗೆ ಬೇರೆ ಏನಿರಬಹುದು.॥3॥
ಮೂಲಮ್ - 4
ವ್ಯಕ್ತಂ ದೈವಾದಹಂ ಮನ್ಯೇ ರಾಘವಸ್ಯ ವಿನಾಭವಮ್ ।
ವೈದೇಹ್ಯಾ ಸಾರಥೇ ನಿತ್ಯಂ ದೈವಂ ಹಿ ದುರತಿಕ್ರಮಮ್ ॥
ಅನುವಾದ
ಸಾರಥಿಯೇ! ರಘುನಾಥನಿಗೆ ಉಂಟಾದ ಈ ಸೀತೆಯ ನಿತ್ಯ ವಿಯೋಗದಲ್ಲಿ ದೈವವೇ ಕಾರಣವೆಂದು ನಾನು ತಿಳಿಯುತ್ತೇನೆ; ಏಕೆಂದರೆ ದೈವವಿಧಾನವನ್ನು ಅತಿಕ್ರಮಿಸು ವುದು ಅಸಾಧ್ಯವಾದುದು.॥4॥
ಮೂಲಮ್ - 5
ಯೋ ಹಿ ದೇವಾನ್ಸಗಂಧರ್ವಾನಸುರಾನ್ಸಹ ರಾಕ್ಷಸೈಃ ।
ನಿಹನ್ಯಾದ್ರಾಘವಃ ಕ್ರುದ್ಧಃ ಸ ದೈವಂ ಪರ್ಯುಪಾಸತೇ ॥
ಅನುವಾದ
ಯಾವ ರಘುನಾಥನು ಕ್ರುದ್ಧನಾದರೆ ದೇವ-ದಾನವ-ಗಂಧರ್ವ-ಅಸುರ-ರಾಕ್ಷಸ ರನ್ನು ಸಂಹರಿಸಲು ಸಮರ್ಥನೋ, ಅವನೇ ಇಂದು ದೈವಕ್ಕೆ ಅಧೀನನಾಗಿದ್ದಾನೆ.॥5॥
ಮೂಲಮ್ - 6
ಪುರಾ ರಾಮಃ ಪಿತುರ್ವಾಕ್ಯಾದ್ದಂಡಕೇ ವಿಜನೇವನೇ ।
ಉಷಿತ್ವಾ ನವ ವರ್ಷಾಣಿ ಪಂಚ ಚೈವ ಮಹಾವನೇ ॥
ಅನುವಾದ
ಮೊದಲು ಶ್ರೀರಾಮನಿಗೆ ತಂದೆಯ ಆಜ್ಞೆಯಂತೆ ಹದಿನಾಲ್ಕು ವರ್ಷ ನಿರ್ಜನ ದಂಡಕಾರಣ್ಯದಲ್ಲಿ ಇರಬೇಕಾಯಿತು.॥6॥
ಮೂಲಮ್ - 7
ತತೋ ದುಃಖತರಂ ಭೂಯಃ ಸೀತಾಯಾ ವಿಪ್ರವಾಸನಮ್ ।
ಪೌರಾಣಾಂ ವಚನಂ ಶ್ರುತ್ವಾ ನೃಶಂಸಂ ಪ್ರತಿಭಾತಿಮೇ ॥
ಅನುವಾದ
ಈಗ ಅವನಿಗೆ ಸೀತೆಯನ್ನು ಅರಣ್ಯಕ್ಕೆ ಕಳಿಸಬೇಕಾದ ದುಃಖವು ಅದಕ್ಕಿಂತಲೂ ದೊಡ್ಡದಾಗಿದೆ. ಆದರೆ ಪುರವಾಸಿಗಳ ಮಾತನ್ನು ಕೇಳಿ ಹೀಗೆ ಮಾಡುವುದು ಅತ್ಯಂತ ನಿರ್ದಯವಾದ ಕರ್ಮವೆಂದು ನನಗೆ ತೋರುತ್ತದೆ.॥7॥
ಮೂಲಮ್ - 8
ಕೋ ನು ಧರ್ಮಾಶ್ರಯಃ ಸೂತ ಕರ್ಮಣ್ಯಸ್ಮಿನ್ಯಶೋಹರೇ ।
ಮೈಥಿಲೀಂ ಸಮನುಪ್ರಾಪ್ತಃ ಪೌರೈರ್ಹೀನಾರ್ಥವಾದಿಭಿಃ ॥
ಅನುವಾದ
ಸಾರಥಿಯೇ! ಸೀತೆಯ ವಿಷಯದಲ್ಲಿ ಅನ್ಯಾಯದ ಮಾತನ್ನು ಆಡಿದ ಈ ಪುರವಾಸಿಗಳಿಂದಾಗಿ, ಇಂತಹ ಕೀರ್ತಿನಾಶಕ ಕರ್ಮದಲ್ಲಿ ಪ್ರವೃತ್ತನಾಗಿ ಶ್ರೀರಾಮನು ಎಂತಹ ಧರ್ಮವನ್ನು ಸಾಧಿಸಿದಂತಾಯಿತು.॥8॥
ಮೂಲಮ್ - 9
ಏತಾ ವಾಚೋ ಬಹುವಿಧಾಃ ಶ್ರುತ್ವಾ ಲಕ್ಷ್ಮಣಭಾಷಿತಾಃ ।
ಸುಮಂತ್ರಃ ಶ್ರದ್ಧಯಾ ಪ್ರಾಜ್ಞೋ ವಾಕ್ಯಮೇತದುವಾಚ ಹ ॥
ಅನುವಾದ
ಲಕ್ಷ್ಮಣನು ಆಡಿದ ಅನೇಕ ಮಾತುಗಳನ್ನು ಕೇಳಿ ಬುದ್ಧಿವಂತ ಸುಮಂತ್ರನು ಶ್ರದ್ಧಾಪೂರ್ವಕ ಹೀಗೆ ಹೇಳಿದನು .॥9॥
ಮೂಲಮ್ - 10
ನ ಸಂತಾಪಸ್ತ್ವಯಾ ಕಾರ್ಯಃ ಸೌಮಿತ್ರೇ ಮೈಥಿಲೀಂ ಪ್ರತಿ ।
ದೃಷ್ಟಮೇತತ್ಪುರಾ ವಿಪ್ರೈಃ ಪಿತುಸ್ತೇ ಲಕ್ಷ್ಮಣಾಗ್ರತಃ ॥
ಅನುವಾದ
ಸುಮಿತ್ರಾನಂದನ! ಮೈಥಿಲೀ ಸೀತೆಯ ಕುರಿತು ನೀವು ಸಂತಪ್ತವಾಗಬಾರದು. ಲಕ್ಷ್ಮಣ! ಈ ಮಾತುಗಳನ್ನು ಬ್ರಾಹ್ಮಣರು ನಿಮ್ಮ ತಂದೆಯವರ ಮುಂದೆಯೇ ತಿಳಿಸಿದ್ದರು.॥10॥
ಮೂಲಮ್ - 11
ಭವಿಷ್ಯತಿ ದೃಢಂ ರಾಮೋ ದುಃಖಪ್ರಾಯೋ ವಿಸೌಖ್ಯಭಾಕ್ ।
ಪ್ರಾಪ್ಸ್ಯತೇ ಚ ಮಹಾಬಾಹುರ್ವಿಪ್ರಯೋಗಂ ಪ್ರಿಯೈರ್ದ್ರುತಮ್ ॥
ಅನುವಾದ
ಶ್ರೀರಾಮನು ನಿಶ್ಚಯವಾಗಿ ಹೆಚ್ಚು ದುಃಖಪಡುವನು, ಸುಖರಹಿತನಾಗುವನು, ಮಹಾಬಾಹು ಶ್ರೀರಾಮನಿಗೆ ಶೀಘ್ರವಾಗಿ ತನ್ನ ಪ್ರಿಯಜನರ ವಿಯೋಗ ಉಂಟಾಗುವುದು ಎಂದು ಆಗಲೇ ದೂರ್ವಾಸರು ಹೇಳಿದ್ದರು.॥11॥
ಮೂಲಮ್ - 12
ತ್ವಾಂ ಚೈವ ಮೈಥಿಲೀಂಚೈವ ಶತ್ರುಘ್ನ ಭರತೌ ತಥಾ ।
ಸತ್ಯ ಜಿಷ್ಯತಿ ಧರ್ಮಾತ್ಮಾ ಕಾಲೇನ ಮಹತಾ ಮಹಾನ್ ॥
ಅನುವಾದ
ಸುಮಿತ್ರಾನಂದನ! ಧರ್ಮಾತ್ಮಾ ಮಹಾಪುರುಷ ಶ್ರೀರಾಮನು ಬಹಳ ಕಾಲ ಕಳೆದ ಬಳಿಕ ನಿಮ್ಮನ್ನು, ಮೈಥಿಲಿಯನ್ನು, ಭರತ ಮತ್ತು ಶತ್ರುಘ್ನನನ್ನು ತ್ಯಜಿಸುವನು.॥12॥
ಮೂಲಮ್ - 13
ಇದಂ ತ್ವಯಿ ನ ವಕ್ತವ್ಯಂ ಸೌಮಿತ್ರೇ ಭರತೇಽಪಿ ವಾ ।
ರಾಜ್ಞಾ ವೋ ವಾಹೃತಂ ವಾಕ್ಯಂ ದುರ್ವಾಸಾಯದುವಾಚ ಹ ॥
ಅನುವಾದ
ದುರ್ವಾಸರು ಹೇಳಿದ ಮಾತನ್ನು ನಿನ್ನಲ್ಲಿ, ಶತ್ರುಘ್ನನಲ್ಲಿ, ಭರತನಲ್ಲಿ ಹೇಳಲು ದಶರಥ ಮಹಾರಾಜರು ಹೇಳಬಾರದೆಂದು ನನಗೆ ಆಜ್ಞಾಪಿಸಿದ್ದರು.॥13॥
ಮೂಲಮ್ - 14
ಮಹಾಜನಸಮೀಪೇ ಚ ಮಮ ಚೈವ ನರರ್ಷಭ ।
ಋಷಿಣಾ ವ್ಯಾಹೃತಂ ವಾಕ್ಯಂ ವಸಿಷ್ಠಸ್ಯ ಚ ಸಂನಿಧೌ ॥
ಅನುವಾದ
ನರಶ್ರೇಷ್ಠನೇ! ದುರ್ವಾಸಮುನಿಗಳು ದೊಡ್ಡ ಜನಸಮುದಾಯದಲ್ಲಿ ನನ್ನ ಮತ್ತು ವಸಿಷ್ಠರ ಸನ್ನಿಧಿಯಲ್ಲಿ ನಿನ್ನ ತಂದೆಗೆ ಹೇಳಿದ್ದರು.॥14॥
ಮೂಲಮ್ - 15
ಋಷೇಸ್ತು ವಚನಂ ಶ್ರುತ್ವಾ ಮಾಮಾಹ ಪುರುಷರ್ಷಭಃ ।
ಸೂತ ನ ಕ್ವಚಿದೇವಂ ತೇ ವಕ್ತವ್ಯಂ ಜನಸಂನಿಧೌ ॥
ಅನುವಾದ
ದುರ್ವಾಸಮುನಿಯ ಮಾತನ್ನು ಕೇಳಿ ಪುರುಷಶ್ರೇಷ್ಠ ದಶರಥನು ನನಗೆ ಹೇಳಿದ್ದರು - ಸಾರಥಿಯೇ! ನೀನು ಇತರ ಜನರಲ್ಲಿ ಈ ರೀತಿಯ ಮಾತುಗಳನ್ನು ಹೇಳಬಾರದು.॥15॥
ಮೂಲಮ್ - 16
ತಸ್ಯಾಹಂ ಲೋಕಪಾಲಸ್ಯ ವಾಕ್ಯಂ ತತ್ಸುಸಮಾಹಿತಃ ।
ನೈವ ಜಾತ್ವನೃತಂ ಕುರ್ಯಾಮಿತಿ ಮೇ ಸೌಮ್ಯ ದರ್ಶನಮ್ ॥
ಅನುವಾದ
ಸೌಮ್ಯ! ಲೋಕಪಾಲಕ ದಶರಥನ ಆ ವಾಕ್ಯವನ್ನು ನಾನು ಸುಳ್ಳಾಗಿಸಲಾರೆ, ಎಂಬುದೇ ನನ್ನ ಸಂಕಲ್ಪ. ಇದಕ್ಕಾಗಿ ನಾನು ಎಚ್ಚರಿಕೆಯಿಂದ ಇರುವೆನು.॥16॥
ಮೂಲಮ್ - 17
ಸರ್ವಥೈವ ನ ವಕ್ತವ್ಯಂ ಮಯಾ ಸೌಮ್ಯ ತವಾಗ್ರತಃ ।
ಯದಿ ತೇ ಶ್ರವಣೇ ಶ್ರದ್ಧಾ ಶ್ರೂಯತಾಂ ರಘುನಂದನ ॥
ಅನುವಾದ
ಸೌಮ್ಯ ರಘುನಂದನ! ಈ ಮಾತನ್ನು ನಿಮ್ಮ ಮುಂದೆ ಹೇಳಬಾರದಾಗಿತ್ತು, ಆದರೆ ನಿಮ್ಮ ಮನಸ್ಸಿನಲ್ಲಿ ಇದನ್ನು ಕೇಳಲು ಶ್ರದ್ಧೆ (ಉತ್ಸುಕತೆ) ಇದ್ದರೆ ಕೇಳು.॥17॥
ಮೂಲಮ್ - 18
ಯದ್ಯಪ್ಯಹಂ ನರೇಂದ್ರೇಣ ರಹಸ್ಯಂ ಶ್ರಾವಿತಂ ಪುರಾ ।
ತಥಾಪ್ಯುದಾಹರಿಷ್ಯಾಮಿ ದೈವಂ ಹಿ ದುರತಿಕ್ರಮಮ್ ॥
ಮೂಲಮ್ - 19
ಯೇನೇದಮೀದೃಶಂ ಪ್ರಾಪಂ ದುಃಖಂ ಶೋಕಸಮನ್ವಿತಮ್ ।
ನ ತ್ವಯಾ ಭರತಸ್ಯಾಗ್ರೇ ಶತ್ರುಘ್ನಸ್ಯಾಪಿ ಸಂನಿಧೌ ॥
ಅನುವಾದ
ಹಿಂದೆ ಮಹಾರಾಜರು ಈ ರಹಸ್ಯವನ್ನು ಬೇರೆಯವರಲ್ಲಿ ಪ್ರಕಟಿಸಬಾರದೆಂದು ಆದೇಶಿಸಿದ್ದರೂ, ಇಂದು ನಾನು ಅದನ್ನು ತಿಳಿಸುವೆನು. ದೈವವಿಧಾನವನ್ನು ಉಲ್ಲಂಘಿಸುವುದು ಬಹಳ ಕಷ್ಟವಾಗಿದೆ; ಅದರಿಂದಲೇ ಈ ದುಃಖ ಮತ್ತು ಶೋಕ ಪ್ರಾಪ್ತವಾಗಿದೆ. ಅಯ್ಯಾ! ನೀನೂ ಕೂಡ ಭರತ-ಶತ್ರುಘ್ನರಿಗೆ ತಿಳಿಸಬಾರದು.॥18-19॥
ಮೂಲಮ್ - 20
ತಚ್ಛ್ರುತ್ವಾ ಭಾಷಿತಂ ತಸ್ಯ ಗಂಭೀರಾರ್ಥಪದಂ ಮಹತ್ ।
ತಥ್ಯಂ ಬ್ರೂಹೀತಿ ಸೌಮಿತ್ರಿಃ ಸೂತಂ ತಂ ವಾಕ್ಯಮಬ್ರವೀತ್ ॥
ಅನುವಾದ
ಸುಮಂತ್ರನ ಈ ಗಂಭೀರ ಭಾಷಣ ಕೇಳಿ ಸುಮಿತ್ರಾಕುಮಾರ ಲಕ್ಷ್ಮಣನು ಹೇಳಿದನು-ಸುಮಂತ್ರನೇ! ನಿಜವಾದ ಮಾತನ್ನು ನೀವು ಅವಶ್ಯವಾಗಿ ತಿಳಿಸಿರಿ.॥20॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಐವತ್ತನೆಯ ಸರ್ಗ ಪೂರ್ಣವಾಯಿತು. ॥50॥