०४९ आश्रम-प्रवेशनम्

[ನಲವತ್ತೊಂಭತ್ತನೆಯ ಸರ್ಗ]

ಭಾಗಸೂಚನಾ

ಮುನಿಕುಮಾರರಿಂದ ಸಮಾಚಾರ ತಿಳಿದು ವಾಲ್ಮೀಕಿಗಳು ಸೀತೆಯ ಬಳಿಗೆ ಬಂದು ಆಕೆಯನ್ನು ಸಂತೈಸಿ ಆಶ್ರಮಕ್ಕೆ ಕರೆದುಕೊಂಡು ಹೋದುದು

ಮೂಲಮ್ - 1

ಸೀತಾಂ ತು ರುದತೀಂ ದೃಷ್ಟ್ವಾ ತೇ ತತ್ರ ಮುನಿದಾರಕಾಃ ।
ಪ್ರಾದ್ರವನ್ಯತ್ರ ಭಗವಾನಾಸ್ತೇ ವಾಲ್ಮೀಕಿರುಗ್ರಧೀಃ ॥

ಅನುವಾದ

ಸೀತೆಯು ಅಳುತ್ತಿದ್ದರಿಂದ ಸ್ವಲ್ಪ ದೂರದಲ್ಲಿ ಋಷಿ ಬಾಲಕರು ಆಡುತ್ತಿದ್ದರು. ಅವರು ಅಳುತ್ತಿರುವ ಆಕೆಯನ್ನು ನೋಡಿ ಆಶ್ರಮಕ್ಕೆ ಓಡಿಹೋದರು. ಅಲ್ಲಿ ಉಗ್ರ ತಪಸ್ಸಿನಲ್ಲಿ ತೊಡಗಿದ ಪೂಜ್ಯ ವಾಲ್ಮೀಕಿಮುನಿಗಳು ವಿರಾಜಿಸುತ್ತಿದ್ದರು.॥1॥

ಮೂಲಮ್ - 2

ಅಭಿವಾದ್ಯ ಮುನೇಃ ಪಾದೌ ಮುನಿಪುತ್ರಾಮಹರ್ಷಯೇ ।
ಸರ್ವೇ ನಿವೇದಯಾಮಾಸುಸ್ತಸ್ಯಾಸ್ತು ರುದಿತಸ್ವನಮ್ ॥

ಅನುವಾದ

ಮುನಿಕುಮಾರರೆಲ್ಲ ಮಹರ್ಷಿಗಳ ಚರಣಗಳಲ್ಲಿ ಅಭಿವಾದನ ಮಾಡಿ ಅವರಲ್ಲಿ ಸೀತೆಯು ಅಳುತ್ತಿರುವ ಸಮಾಚಾರವನ್ನು ತಿಳಿಸಿದರು.॥2॥

ಮೂಲಮ್ - 3

ಅದೃಷ್ಟಪೂರ್ವಾ ಭಗವನ್ ಕಸ್ಯಾಪ್ಯೇಷಾ ಮಹಾತ್ಮನಃ ।
ಪತ್ನೀ ಶ್ರೀರಿವ ಸಮ್ಮೋಹಾದ್ವಿರೌತಿ ವಿಕೃತಾನನಾ ॥

ಅನುವಾದ

ಪೂಜ್ಯರೇ! ಗಂಗಾ ತೀರದಲ್ಲಿ ಯಾರೋ ಮಹಾತ್ಮಾ ನರೇಶನ ಪತ್ನಿ ಇದ್ದಾಳೆ, ಅವಳು ಸಾಕ್ಷಾತ್ ಲಕ್ಷ್ಮೀಯಂತೆ ಕಂಡುಬರುವಳು. ಆಕೆಯನ್ನು ನಾವು ಮೊದಲು ಎಂದೂ ನೋಡಿಲ್ಲ. ಅವಳು ಮೋಹದಿಂದಾಗಿ ಮುಖ ಬಾಡಿಹೋಗಿ ಅಳುತ್ತಿರುವಳು.॥3॥

ಮೂಲಮ್ - 4

ಭಗವನ್ಸಾಧು ಪಶ್ಯೇಸ್ತ್ವಂ ದೇವತಾಮಿವ ಖಾಚ್ಚ್ಯುತಮ್ ।
ನದ್ಯಾಸ್ತು ತೀರೇ ಭಗವನ್ವರಸ್ತ್ರೀ ಕಾಪಿ ದುಃಖಿತಾ ॥

ಅನುವಾದ

ಪೂಜ್ಯರೇ! ನೀವು ಸ್ವತಃ ಹೋಗಿ ಚೆನ್ನಾಗಿ ನೋಡಿರಿ. ಅವಳು ಆಕಾಶದಿಂದ ಇಳಿದ ಯಾವುದೋ ದೇವಿಯಂತೆ ಕಾಣುತ್ತಾಳೆ. ಸ್ವಾಮಿ! ಗಂಗಾತೀರದಲ್ಲಿ ಕುಳಿತಿರುವ ಶ್ರೇಷ್ಠಸುಂದರಿ ಬಹಳ ದುಃಖಿತೆಯಾಗಿದ್ದಾಳೆ.॥4॥

ಮೂಲಮ್ - 5

ದೃಷ್ಟಾಸ್ಮಾಭಿಃ ಪ್ರರುದಿತಾ ದೃಢಂ ಶೋಕಪರಾಯಣಾ ।
ಅನರ್ಹಾ ದುಃಖಶೋಕಾಭ್ಯಾಮೇಕಾ ದೀನಾ ಅನಾಥವತ್ ॥

ಅನುವಾದ

ಅವಳು ಜೋರಾಗಿ ಅಳುತ್ತಿರುವುದನ್ನು ನಾವು ನೋಡಿದೆವು. ಗಹನ ಶೋಕದಲ್ಲಿ ಮುಳುಗಿರುವಳು. ಆಕೆ ದುಃಖ, ಶೋಕ ಅನುಭವಿಸಲು ಯೋಗ್ಯಳಲ್ಲ, ದೀನಳಾಗಿ ಅನಾಥಳಂತೆ ಒಬ್ಬಳೇ ದುಃಖಿಸುತ್ತಿದ್ದಾಳೆ.॥5॥

ಮೂಲಮ್ - 6

ನ ಹ್ಯೇನಾಂ ಮಾನುಷೀಂ ವಿದ್ಮಃ ಸತ್ಕ್ರಿಯಾಸ್ಯಾಃ ಪ್ರಯುಜ್ಯತಾಮ್ ।
ಆಶ್ರಮಸ್ಯಾವಿದೂರೇ ಚ ತ್ವಾಮಿಯಂ ಶರಣಂ ಗತಾ ॥

ಅನುವಾದ

ಅವಳು ಸಾಧಾರಣ ಸ್ತ್ರೀಯೆಂದು ನಮಗನಿಸುವುದಿಲ್ಲ. ಆಕೆಯನ್ನು ನೀವು ಸತ್ಕರಿಸಬೇಕು. ಈ ಆಶ್ರಮದ ಸ್ವಲ್ಪ ದೂರದಲ್ಲೆ ಇರುವುದರಿಂದ ಇವಳು ನಿಮ್ಮ ಶರಣಾಗತಳಾಗಿಯೇ ಬಂದಿರಬೇಕು.॥6॥

ಮೂಲಮ್ - 7½

ತ್ರಾತಾರಮಿಚ್ಛತೇ ಸಾಧ್ವೀ ಭಗವಂಸ್ತ್ರಾತುಮರ್ಹಸಿ ।
ತೇಷಾಂ ತು ವಚನಂ ಶ್ರುತ್ವಾ ಬುದ್ಧ್ಯಾ ನಿಶ್ಚಿತ್ಯ ಧರ್ಮವಿತ್ ॥
ತಪಸಾ ಲಬ್ಧ ಚಕ್ಷುಷ್ಮಾನ್ ಪ್ರಾದ್ರವದ್ಯತ್ರ ಮೈಥಿಲೀ ।

ಅನುವಾದ

ಪೂಜ್ಯರೇ! ಈ ಸಾಧ್ವೀದೇವಿಯು ರಕ್ಷಕರನ್ನು ಅಪೇಕ್ಷಿಸುತ್ತಿದ್ದಾಳೆ. ನೀವು ಆಕೆಯನ್ನು ರಕ್ಷಿಸಿರಿ. ಆ ಮುನಿಕುಮಾರರ ಮಾತನ್ನು ಕೇಳಿ ಧರ್ಮಜ್ಞನಾದ ಮಹರ್ಷಿಗಳು ತಪಸ್ಸಿನಿಂದ ಪ್ರಾಪ್ತವಾದ ಅಂತರ್ದೃಷ್ಟಿಯಿಂದ ಅನಾಥೆಯಂತೆ ಅಳುತ್ತಿರು ವವಳು ಯಾರೆಂದು ತಿಳಿದು ಒಡನೆಯೇ ಮೈಥಿಲಿಯಿದ್ದಲ್ಲಿಗೆ ಧಾವಿಸಿದರು.॥7½॥

ಮೂಲಮ್ - 8

ತಂ ಪ್ರಯಾಂತಮಭಿಪ್ರೇತ್ಯ ಶಿಷ್ಯಾ ಹ್ಯೇನಂ ಮಹಾಮತಿಮ್ ॥

ಮೂಲಮ್ - 9

ತಂ ತು ದೇಶಮಭಿಪ್ರೇತ್ಯ ಕಿಂಚಿತ್ಪದ್ಭ್ಯಾಂ ಮಹಾಮತಿಃ ।
ಅರ್ಘ್ಯಮಾದಾಯ ರುಚಿರಂ ಜಾಹ್ನವೀತೀರಮಾಗಮತ್ ।
ದದರ್ಶ ರಾಘವಸ್ಯೇಷ್ಟಾಂ ಸೀತಾಂ ಪತ್ನೀಮನಾಥವತ್ ॥

ಅನುವಾದ

ಮಹಾಮತಿಗಳಾದ ಮಹರ್ಷಿಯನ್ನು ಮುನಿಕುಮಾರರು ಹಿಂಬಾಲಿಸಿದರು. ಸುಂದರವಾದ ಅರ್ಘ್ಯಪಾತ್ರೆಯನ್ನು ಎತ್ತಿಕೊಂಡು ಕಾಲ್ನಡಿಗೆಯಲ್ಲೇ ಮಹರ್ಷಿಗಳು ಗಂಗಾತೀರಕ್ಕೆ ಹೋದರು. ಅಲ್ಲಿಗೆ ಹೋಗಿ ಅವರು ಶ್ರೀರಘುನಾಥನ ಪ್ರಿಯಪತ್ನಿ ಸೀತೆಯು ಅನಾಥಳಂತೆ ಇರುವವಳನ್ನು ನೋಡಿದರು.॥8-9॥

ಮೂಲಮ್ - 10

ತಾಂ ಸೀತಾಂ ಶೋಕಭಾರಾರ್ತಾಂ ವಾಲ್ಮೀಕಿರ್ಮುನುಪುಂಗವಃ ।
ಉವಾಚ ಮಧುರಾಂ ವಾಣೀಂ ಹ್ಲಾದಯನ್ನಿವ ತೇಜಸಾ ॥

ಅನುವಾದ

ಶೋಕಭಾರದಿಂದ ಪೀಡಿತಳಾಗಿದ್ದ ಸೀತಾದೇವಿಯನ್ನು ತನ್ನ ತೇಜದಿಂದ ಆಹ್ಲಾದಗೊಳಿಸುತ್ತಾ ಮುನಿವರ ವಾಲ್ಮೀಕಿಗಳು ಮಧುರವಾದ ಮಾತನ್ನು ಸೀತೆಗೆ ಹೇಳಿದರು.॥10॥

ಮೂಲಮ್ - 11

ಸ್ನುಷಾ ದಶರಥಸ್ಯತ್ವಂ ರಾಮಸ್ಯ ಮಹಿಷೀ ಪ್ರಿಯಾ ।
ಜನಕಸ್ಯ ಸುತಾ ರಾಜ್ಞಃ ಸ್ವಾಗತಂ ತೇ ಪತಿವ್ರತೇ ॥

ಅನುವಾದ

ಪತಿವ್ರತೇ! ದಶರಥನ ಸೊಸೆ, ಮಹಾರಾಜಾ ಶ್ರೀರಾಮನ ಪಟ್ಟದರಸಿ, ಮಿಥಿಲೇಶ ಜನಕರಾಜನ ಪುತ್ರಿಯಾದ ನಿನಗೆ ಸ್ವಾಗತ ಬಯಸುತ್ತಿದ್ದೇನೆ.॥11॥

ಮೂಲಮ್ - 12

ಆಯಾಂತೀ ಚಾಸಿ ವಿಜ್ಞಾತಾ ಮಯಾ ಧರ್ಮಸಮಾಧಿನಾ ।
ಕಾರಣಂ ಚೈವ ಸರ್ವಂ ಮೇ ಹೃದಯೇನೋಪಲಕ್ಷಿತಮ್ ॥

ಅನುವಾದ

ನೀನು ಇಲ್ಲಿಗೆ ಬಂದಾಗಲೇ ನನ್ನ ಧರ್ಮಸಮಾಧಿಯಿಂದ ನನಗೆ ತಿಳಿದುಹೋಗಿತ್ತು. ನಿನ್ನ ಪರಿತ್ಯಾಗದ ಕಾರಣವನ್ನು ನನ್ನ ಅಂತರ್ದೃಷ್ಟಿಯಿಂದ ತಿಳಿದುಕೊಂಡಿರುವೆನು.॥12॥

ಮೂಲಮ್ - 13

ತವ ಚೈವ ಮಹಾಭಾಗೇ ವಿದಿತಂ ಮಮ ತತ್ತ್ವತಃ ।
ಸರ್ವಂ ಚ ವಿದಿತಂ ಮಹ್ಯಂ ತ್ರೈಲೋಕ್ಯೇ ಯದ್ಧಿ ವರ್ತತೇ ॥

ಅನುವಾದ

ಭಾಗ್ಯಶಾಲಿನಿಯೇ! ನಿನ್ನ ಸಮಗ್ರ ವೃತ್ತಾಂತವೂ ನನಗೆ ಯಥಾವತ್ತಾಗಿ ತಿಳಿದಿದೆ. ಮೂರು ಲೋಕಗಳಲ್ಲಿ ನಡೆಯುವುದೆಲ್ಲವೂ ನನಗೆ ತಿಳಿಯುತ್ತಿರುತ್ತದೆ.॥13॥

ಮೂಲಮ್ - 14

ಅಪಾಪಾಂ ವೇದ್ಮಿ ಸೀತೇ ತ್ವಾಂ ತಪೋಲಬ್ಧೇನ ಚಕ್ಷುಷಾ ।
ವಿಸ್ರಬ್ಧಾ ಭವ ವೈದೇಹಿ ಸಾಂಪ್ರತಂ ಮಯಿ ವರ್ತಸೇ ॥

ಅನುವಾದ

ಸೀತೇ! ನೀನು ನಿಷ್ಪಾಪಳಾಗಿರುವುದನ್ನು ತಪಸ್ಸಿನಿಂದ ಪ್ರಾಪ್ತವಾದ ದಿವ್ಯದೃಷ್ಟಿಯಿಂದ ತಿಳಿದಿದ್ದೇನೆ. ಆದ್ದರಿಂದ ವಿದೇಹನಂದಿನಿ! ಈಗ ನೀನು ನಿಶ್ಚಿಂತಳಾಗಿ ನನ್ನ ಆಶ್ರಮದಲ್ಲೇ ಇರು.॥14॥

ಮೂಲಮ್ - 15

ಆಶ್ರಮಸ್ಯಾವಿದೂರೇ ಮೇ ತಾಪಸ್ಯಸ್ತಪಸಿ ಸ್ಥಿತಾಃ ।
ತಾಸ್ತ್ವಾಂ ವತ್ಸೇ ಯಥಾ ವತ್ಸಂ ಪಾಲಯಿಷ್ಯಂತಿ ನಿತ್ಯಶಃ ॥

ಅನುವಾದ

ಮಗಳೇ! ನನ್ನ ಆಶ್ರಮದ ಬಳಿಯಲ್ಲೇ ಕೆಲವು ತಪಸ್ವಿಸ್ತ್ರೀಯರು ತಪಸ್ಸಿನಲ್ಲೆ ತೊಡಗಿರುವರು. ಅವರು ತಮ್ಮ ಮಗಳಂತೆ ಸದಾ ನಿನ್ನನ್ನು ಪಾಲಿಸುವರು.॥15॥

ಮೂಲಮ್ - 16

ಇದಮರ್ಘ್ಯಂ ಪ್ರತೀಚ್ಛ ತ್ವಂ ವಿಸ್ರಬ್ಧಾ ವಿಗತಜ್ವರಾ ।
ಯಥಾ ಸ್ವಗೃಹಮಭ್ಯೇತ್ಯ ವಿಷಾದಂ ಚೈವ ಮಾ ಕೃಥಾಃ ॥

ಅನುವಾದ

ಇದೋ ನನ್ನ ಅರ್ಘ್ಯವನ್ನು ಸ್ವೀಕರಿಸಿ, ನಿಶ್ಚಿಂತ ಮತ್ತು ನಿರ್ಭಯಳಾಗು. ತನ್ನ ತವರಿಗೇ ಬಂದಿರುವೆ ಎಂದು ತಿಳಿದು ವಿಷಾದ ಬಿಟ್ಟುಬಿಡು.॥16॥

ಮೂಲಮ್ - 17

ಶ್ರುತ್ವಾ ತು ಭಾಷಿತಂ ಸೀತಾ ಮುನೇಃ ಪರಮಮದ್ಭುತಮ್ ।
ಶಿರಸಾ ವಂದ್ಯ ಚರಣೌ ತಥೇತ್ಯಾಹ ಕೃತಾಂಜಲಿಃ ॥

ಅನುವಾದ

ಮಹರ್ಷಿಗಳ ಪರಮಾದ್ಭುತವಾದ ಮಾತನ್ನು ಕೇಳಿ ಸೀತೆಯು ಅವರ ಚರಣಗಳಿಗೆ ತಲೆಬಾಗಿ ವಂದಿಸಿ, ಕೈಮುಗಿದುಕೊಂಡು ಹಾಗೆಯೇ ಆಗಲಿ ಎಂದು ಹೇಳಿದಳು.॥17॥

ಮೂಲಮ್ - 18

ತಂ ಪ್ರಯಾಂತಂ ಮುನಿಂ ಸೀತಾ ಪ್ರಾಂಜಲಿಃ ಪೃಷ್ಠತೋಽನ್ವಗಾತ್ ।
ತಂ ದೃಷ್ಟ್ವಾ ಮುನಿಮಾಯಾಂತಂ ವೈದೇಹ್ಯಾ ಮುನಿಪತ್ನಯಃ ।
ಉಪಾಜಗ್ಮುರ್ಮುದಾ ಯುಕ್ತಾ ವಚನಂ ಚೇದಮಬ್ರುವನ್ ॥

ಅನುವಾದ

ಆಗ ಮುನಿಗಳ ಹಿಂದೆ-ಹಿಂದೆಯೇ ಸೀತೆಯು ಕೈಮುಗಿದುಕೊಂಡು ನಡೆದಳು. ಸೀತೆಯೊಡನೆ ಮಹರ್ಷಿಗಳು ಬರುವುದನ್ನು ನೋಡಿ ಮುನಿಪತ್ನಿಗಳು ಆಕೆಯ ಬಳಿಗೆ ಬಂದು ಸಂತೋಷದಿಂದ ಹೀಗೆ ಹೇಳಿದ.॥18॥

ಮೂಲಮ್ - 19

ಸ್ವಾಗತಂ ತೇ ಮುನಿಶ್ರೇಷ್ಠ ಚಿರಸ್ಯಾಗಮನಂ ಚ ತೇ ।
ಅಭಿವಾದಯಾಮಸ್ತ್ವಾಂ ಸರ್ವಾ ಉಚ್ಯತಾಂ ಕಿಂ ಚ ಕುರ್ಮಹೇ ॥

ಅನುವಾದ

ಮುನಿಶ್ರೇಷ್ಠರೇ! ತಮಗೆ ಸ್ವಾಗತವಿದೆ. ಬಹಳ ದಿನಗಳ ಬಳಿಕ ಇಲ್ಲಿಗೆ ತಮ್ಮ ಶುಭಾಗಮನವಾಯಿತು. ನಾವೆಲ್ಲರೂ ನಿಮಗೆ ಅಭಿವಾದನ ಮಾಡುತ್ತೇವೆ, ಯಾವ ಸೇವೆ ನಿಮಗೆ ಮಾಡಲೀ ತಿಳಿಸಿರಿ.॥19॥

ಮೂಲಮ್ - 20

ತಾಸಾಂ ತದ್ವತನಂ ಶ್ರುತ್ವಾ ವಾಲ್ಮೀಕಿರಿದಮಬ್ರವೀತ್ ।
ಸೀತೇಯಂ ಸಮನುಪ್ರಾಪ್ತಾ ಪತ್ನೀ ರಾಮಸ್ಯ ಧೀಮತಃ ॥

ಅನುವಾದ

ಅವರ ಈ ಮಾತನ್ನು ಕೇಳಿ ವಾಲ್ಮೀಕಿಗಳು ಹೇಳಿದರು- ಇವಳು ಪರಮ ಧೀಮಂತ ಶ್ರೀರಾಮನ ಧರ್ಮಪತ್ನೀ ಸೀತೆಯಾಗಿದ್ದು, ಇಲ್ಲಿಗೆ ಬಂದಿರುವಳು.॥20॥

ಮೂಲಮ್ - 21

ಸ್ನುಷಾ ದಶರಥಸ್ಯೈಷಾ ಜನಕಸ್ಯ ಸುತಾ ಸತೀ ।
ಅಪಾಪಾ ಪತಿನಾ ತ್ಯಕ್ತಾ ಪರಿಪಾಲ್ಯಾ ಮಯಾ ಸದಾ ॥

ಅನುವಾದ

ಸತೀ ಸೀತೆಯು ದಶರಥರಾಜನ ಸೊಸೆಯೂ, ಜನಕನ ಪುತ್ರಿಯೂ ಆಗಿದ್ದಾಳೆ. ಪಾಪರಹಿತಳಾಗಿದ್ದರೂ ಪತಿಯು ಈಕೆಯನ್ನು ತ್ಯಜಿಸಿರುವನು. ಆದ್ದರಿಂದ ಇವಳನ್ನು ನಾನೇ ಪಾಲಿಸಬೇಕಾಗಿದೆ.॥21॥

ಮೂಲಮ್ - 22

ಇಮಾಂ ಭವತ್ಯಃಪಶ್ಯಂತು ಸ್ನೇಹೇನ ಪರಮೇಣ ಹಿ ।
ಗೌರವಾನ್ಮಮ ವಾಕ್ಯಾಚ್ಚ ಪೂಜ್ಯಾ ವೋಽಸ್ತು ವಿಶೇಷತಃ ॥

ಅನುವಾದ

ಆದ್ದರಿಂದ ನೀವೆಲ್ಲರೂ ಇವಳ ಮೇಲೆ ಸ್ನೇಹದಿಂದ ನೋಡಿರಿ. ನಾನು ಹೇಳಿದ್ದರಿಂದ ಮತ್ತು ತನ್ನದೇ ಆದ ಗೌರವದಿಂದಲೂ ಈಗೆ ನಿಮಗೆ ವಿಶೇಷ ಆದರಣೀಯಳಾಗಿದ್ದಾಳೆ.॥22॥

ಮೂಲಮ್ - 23

ಮುಹುರ್ಮುಹುಶ್ಚ ವೈದೇಹೀಂ ಪರಿದಾಯ ಮಹಾಯಶಾಃ ।
ಸ್ವಮಾಶ್ರಮಂ ಶಿಷ್ಯವೃತಃ ಪುನರಾಯಾನ್ಮಹಾತಪಾಃ ॥

ಅನುವಾದ

ಹೀಗೆ ಸೀತೆಯನ್ನು ಮುನಿಪತ್ನಿಯರ ಕೈಗೆ ಒಪ್ಪಿಸಿ, ಮಹಾಯಶಸ್ವಿ ಹಾಗೂ ಮಹಾತಪಸ್ವೀ ವಾಲ್ಮೀಕಿಯವರು ಶಿಷ್ಯರೊಂದಿಗೆ ತಮ್ಮ ಆಶ್ರಮಕ್ಕೆ ಮರಳಿದರು.॥23॥

ಮೂಲಮ್ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ನಲವತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥49॥

ಅನುವಾದ